ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !

೨೦ ನೇ ಶತಮಾನದ ಪ್ರಾರಂಭದಲ್ಲಿ ಓರ್ವ ನರೇಂದ್ರನು (ಸ್ವಾಮಿ ವಿವೇಕಾನಂದರು) ಅಮೇರಿಕಾದಲ್ಲಿ ನಡೆದ ಸರ್ವಧರ್ಮ ಪರಿಷತ್ತಿನಲ್ಲಿ ಭಾಗವಹಿಸಿ ಭಾರತೀಯ ತತ್ತ್ವಜ್ಞಾನ ಮತ್ತು ಅಧ್ಯಾತ್ಮದ ಭವ್ಯ-ದಿವ್ಯ ಪತಾಕೆಯನ್ನು ಹಾರಿಸಿ ಭಾರತದ ಗೌರವಶಾಲಿ ಹಾಗೂ ವೈಭವಶಾಲಿ ಸಂಸ್ಕೃತಿಯ ನಿಜವಾದ ಪರಿಚಯವನ್ನು ಸಂಪೂರ್ಣ ಜಗತ್ತಿಗೆ ಮಾಡಿಸಿದರು.

ಅದೇ ರೀತಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂಯುಕ್ತ ರಾಷ್ಟ್ರದಲ್ಲಿ ಯೋಗಶಾಸ್ತ್ರದ ಮಹತ್ವವನ್ನು ಜಗತ್ತಿನಾದ್ಯಂತದ ಇತರ ದೇಶಗಳಿಗೆ ಮನವರಿಕೆ ಮಾಡಿ, ಸಂಯುಕ್ತ ರಾಷ್ಟ್ರಗಳು ‘ಜೂನ್ ೨೧’ ಇದನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವೆಂದು ಘೋಷಣೆ ಮಾಡಿದವು. ಇದರ ಮೂಲಕ ಸಂಪೂರ್ಣ ವಿಶ್ವದಲ್ಲಿ ಭಾರತೀಯ ಯೋಗವಿದ್ಯೆಯ ಗೌರವಶಾಲಿ ಪತಾಕೆಯು ಮತ್ತೊಮ್ಮೆ ಸ್ವಾಭಿಮಾನದಿಂದ ಹಾರಾಡಿತು.

೨೧.೬.೨೦೧೫ ರಂದು ದೆಹಲಿಯಲ್ಲಿ ರಾಜಪಥದಲ್ಲಿ ಆಯೋಜಿಸಲಾಗಿದ್ದ ಮೊದಲನೇ ‘ಅಂತಾರಾಷ್ಟ್ರೀಯ ಯೋಗದಿನ’ದ ಯೋಗ ಪ್ರಾತ್ಯಕ್ಷಿಕೆಗಳ ಮಹಾಮೇಳದಲ್ಲಿ ೮೪ ದೇಶಗಳ ನಾಗರಿಕರು ಸೇರಿ ೩೫ ಸಾವಿರ ಯೋಗಸಾಧಕರು ಭಾಗವಹಿಸಿದ್ದರು. ಆ ಸಮಯದಲ್ಲಿ ಮಾರ್ಗದರ್ಶನ ಮಾಡುವಾಗ ಮೋದಿಯವರು ಹೇಳಿದ್ದೇನೆಂದರೆ, ‘ಯೋಗ’ವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ಜಗತ್ತನ್ನು ಒತ್ತಡ ಮತ್ತು ವ್ಯಾಧಿಗಳಿಂದ ಮುಕ್ತಗೊಳಿಸಿ ಮಾನವತೆಯ ಕಲ್ಯಾಣ ಮಾಡುವುದೇ ಈ ಯೋಗದಿನದ ಮುಖ್ಯ ಉದ್ದೇಶವಾಗಿದೆ.

ಜಗತ್ತಿಗೆ ಮನಶಾಂತಿ ಮತ್ತು ವ್ಯಾಧಿಮುಕ್ತ ಜೀವನವನ್ನು ನೀಡುವ ಯೋಗವಿದ್ಯೆ !

ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೆ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಸಂಪೂರ್ಣ ಮಾನವಜಾತಿಯ ಕಲ್ಯಾಣವನ್ನು ಇಚ್ಛಿಸುವ ಒಂದು ಈಶ್ವರೀ ವರದಾನವಾಗಿದೆ. ಸಂಸಾರರೂಪಿ ಒಲೆಯಲ್ಲಿ ಬೆಂದುಹೋಗಿರುವವರಿಗೆ ಮನಃಶಾಂತಿಯನ್ನು ನೀಡುವ, ವ್ಯಾಧಿಗ್ರಸ್ತರನ್ನು ಶಾರೀರಿಕ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ, ಯೋಗಸಾಧಕರ ಜೀವವನ್ನು ಶಿವನೊಂದಿಗೆ ಜೋಡಿಸುವ, ಮಾನವನ ಮೋಕ್ಷಪ್ರಾಪ್ತಿಯ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸುವ ಯೋಗ ವಿದ್ಯೆ ಇದಾಗಿದೆ.

ನಮ್ಮ ಪರೋಪಕಾರಿ ಪೂರ್ವಜರು ಜಗತ್ತಿನ ಕಲ್ಯಾಣಕ್ಕಾಗಿ ಜೋಪಾನ ಮಾಡಿಟ್ಟಿರುವ ಅಮೂಲ್ಯವಾದ ಖಜಾನೆ ಇದಾಗಿದೆ. ಇಂತಹ ಅಮೂಲ್ಯವಾದ ಬೊಕ್ಕಸದ ವಾರಸುದಾರರು ನಾವಾಗಿದ್ದು ಈ ಯೋಗಭೂಮಿಯಲ್ಲಿ ನಾವು ಜನ್ಮ ಪಡೆದಿರುವುದು ನಮ್ಮ ಸೌಭಾಗ್ಯವಾಗಿದೆ; ಆದರೂ ಬಹಳಷ್ಟು ಭಾರತೀಯರು ಇಂದು ಕೂಡ ಯೋಗವಿದ್ಯೆಯಿಂದ ದೂರವಿದ್ದಾರೆ, ಅದು ಅವರ ದುರ್ದೈವವಾಗಿದೆ. ಜಗತ್ತಿನ ಇತರ ಅನೇಕ ರಾಷ್ಟ್ರಗಳು ಮಾತ್ರ ಯೋಗದ ಬೊಕ್ಕಸದಿಂದ ಸಾಕಷ್ಟು ಲಾಭ ಪಡೆದುಕೊಂಡಿವೆ ಹಾಗೂ ತೆಗೆದುಕೊಳ್ಳುತ್ತಿವೆ. ಭೋಗವಾದ, ಭೌತಿಕವಾದ ಹಾಗೂ ಅನೇಕ ಪ್ರಕಾರದ ವ್ಯಾಧಿಗಳಿಂದ ನರಳುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಜನರಿಗೆ ಮನಃಶಾಂತಿ ಮತ್ತು ನಿರೋಗಿ ಜೀವನ ಬೇಕಾಗಿದೆ. ಅದಕ್ಕಾಗಿ ಸಂಪೂರ್ಣ ಜಗತ್ತು ಭಾರತದ ಕಡೆಗೆ ಆಶೆಯಿಂದ ನೋಡುತ್ತಿದೆ; ಏಕೆಂದರೆ ಯೋಗವಿದ್ಯೆಯ ಹಾಗೆ ರಾಮಬಾಣ ಔಷಧವಿರುವ ಭಾರತದ ಹೊರತು ಇತರ ಯಾವುದೇ ದೇಶವು ಜಗತ್ತಿಗೆ ಮನಃಶಾಂತಿ ಮತ್ತು ವ್ಯಾಧಿಮುಕ್ತ ಜೀವನವನ್ನು ನೀಡಲು ಸಾಧ್ಯವಿಲ್ಲ. ಭಾರತೀಯ ಯೋಗವಿದ್ಯೆಯಲ್ಲಿ ಇಷ್ಟು ದೊಡ್ಡ ದಿವ್ಯ ಸಾಮರ್ಥ್ಯ ಹಾಗೂ ಕ್ಷಮತೆಯಿದೆ, ಎಂಬುದನ್ನು ವಿದೇಶದ ಪಂಡಿತರು ಪ್ರತ್ಯಕ್ಷ ಅನೂಭೂತಿ ಮತ್ತು ಅನುಭವವನ್ನು ಪಡೆದಿದ್ದಾರೆ.

ದುರ್ಬಲವಾದ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಯೋಗದಲ್ಲಿದೆ ರಾಸಾಯನಿಕ ವಿಷಯುಕ್ತ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆಸಿದ ದವಸ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಇತ್ಯಾದಿ ತಿಂದು ಕ್ರಮೇಣ ನಮ್ಮ ಶರೀರವು ವ್ಯಾಧಿಗೊಳಗಾಗುತ್ತಿದೆ. ಆದ್ದರಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ದರ್ಬಲತೆಯೂ ಹೆಚ್ಚಾಗಿದೆ, ಎಂಬುದು ಹೆಚ್ಚಿನ ಜನರಿಗೆ ತಿಳಿಯುವುದಿಲ್ಲ. ಹೀಗಿರುವಾಗ ಈ ಯೋಗವಿದ್ಯೆಯು ತುಂಬಾ ಉಪಯುಕ್ತವೆನಿಸುತ್ತದೆ. ವಿಷಯುಕ್ತ ದ್ರವ್ಯಗಳನ್ನು ಹೊರಗೆ ಹಾಕಿ ದುರ್ಬಲ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಯೋಗಾಭ್ಯಾಸದಲ್ಲಿದೆ.

ಶರೀರವೆಂದರೆ ಒಂದು ಪವಿತ್ರವಾದ `ಯಜ್ಞಕುಂಡ’ವಾಗಿದೆ, ಅದರ ಪಾವಿತ್ರ್ಯವನ್ನು ಕಾಪಾಡಲೇಬೇಕು

ನಮ್ಮ ಶರೀರವೊಂದು ಪವಿತ್ರವಾದ ‘ಯಜ್ಞಕುಂಡವಾಗಿದೆ’ ಈ ಯಜ್ಞದಲ್ಲಿನ ಜಠರಾಗ್ನಿಯಲ್ಲಿ ಚಿಕನ್, ಸರಾಯಿ, ತಂಬಾಕು, ಫಾಸ್ಟ್ ಫುಡ್ ಇತ್ಯಾದಿಗಳನ್ನು ತುಂಬಿಸಿ ಈ ಪವಿತ್ರವಾದ ಯಜ್ಞವನ್ನು ಯಾರೂ ಭ್ರಷ್ಟಗೊಳಿಸಬಾರದು. ಹಾಗೆ ಮಾಡುವವರು ಯೋಗಸಾಧನೆ ಮಾಡಿದರೆ ಅದರಲ್ಲಿ ಯಶಸ್ವಿಯಾಗುವುದಿಲ್ಲ. ‘ಮೋಕ್ಷಪ್ರಾಪ್ತಿ’ಯು ಮಾನವನ ಅಂತಿಮ ಧ್ಯೇಯವಾಗಿದೆ. ಪರಮಾತ್ಮನ ಕೃಪಾದೃಷ್ಟಿಯನ್ನು ಸಂಪಾದಿಸಲು ಮೋಕ್ಷಪದವಿಯ ಅಧಿಕಾರಿಯಾಗಲು ಯೋಗಸಾಧಕನು ತನ್ನ ಆಚಾರ, ವಿಚಾರ ಮತ್ತು ಉಚ್ಚಾರ ಇವುಗಳಿಂದ ಈ ಪವಿತ್ರ ಯಜ್ಞಕುಂಡದ ಪಾವಿತ್ರ್ಯವನ್ನು ಕಾಪಾಡಬೇಕು.

ಯೋಗಿಯಾಗಿ ಪರೋಪಕಾರಿ ಹಾಗೂ ಪಾರಮಾರ್ಥಿಕ ಜೀವನವನ್ನು ನಡೆಸುವುದೇ ನರಜನ್ಮದ ಸಾರ್ಥಕವಾಗಿದೆ

‘ಯೋಗ’ ಶಬ್ದದ ಭಾವಾರ್ಥವು ‘ನಮ್ಮ ಒಳಗೆ ಇರುವ ಜೀವಾತ್ಮವು ಚರಾಚರದಲ್ಲಿರುವ ಪರಮಾತ್ಮನನ್ನು ಭೇಟಿಯಾಗುವುದು, ಏಕರೂಪವಾಗುವುದು ಅಥವಾ ಸಮರಸವಾಗುವುದು’, ಎಂದಾಗುತ್ತದೆ. ಈ ಸೃಷ್ಟಿಯಲ್ಲಿನ ೮೪ ಲಕ್ಷ ಯೋನಿಗಳಿಗೆ ಸೃಷ್ಟಿಕರ್ತ ಪರಮೇಶ್ವರನಿಂದ ಇಂಧನವನ್ನು ಪೂರೈಸಲಾಗುತ್ತದೆ. ಅದರಿಂದಲೇ ನಾವೆಲ್ಲರೂ ಈಗ ಈ ಕ್ಷಣದವರೆಗೆ ಜೀವಂತವಾಗಿದ್ದೇವೆ. ಈ ಇಂಧನಕ್ಕೆ ‘ಜೀವಾತ್ಮ-ಅಂಶಾತ್ಮ’ ಎಂದು ಹೇಳುತ್ತಾರೆ. ನಮ್ಮ ಭೋಗವಾದಿ ವೃತ್ತಿಯಿಂದಾಗಿ, ‘ನಾನು’ ಎನ್ನುವ ಅಹಂಕಾರದಿಂದ, ಭಕ್ತಿಭಾವದ ಅಭಾವದಿಂದ ನಮ್ಮ ಶರೀರದಲ್ಲಿ ನೆಲೆಸಿರುವ ಈ ದಿವ್ಯ ಶಕ್ತಿಯ ಬಗ್ಗೆ, ನಮ್ಮ ದೇಹ ಚಾಲಕನ ಬಗ್ಗೆ ನಮಗೆ ವಿಸ್ಮರಣೆಯಾಗಿದೆ.

ಯೋಗವಿದ್ಯೆಯ ಮೂಲಕ ಯೋಗಸಾಧಕನಿಗೆ ‘ತಾನು ಪರಮೇಶ್ವರನ ಅಂಶವಾಗಿದ್ದೇನೆ’, ಎಂಬುದರ ಸ್ಮರಣೆಯಾಗುತ್ತದೆ. ಸ್ವತಃ ಪ್ರಕಾಶಮಯವಾಗಿ ಬೇರೆಯವರನ್ನೂ ಪ್ರಕಾಶಮಯಗೊಳಿಸುವ ದೈವೀ ಸಾಮರ್ಥ್ಯವು ಈ ಯೋಗಸಾಧನೆಯಲ್ಲಿದೆ. ಭೋಗಿಯಾಗಿ ಯೋಗೀ ಜೀವನವನ್ನು ನಡೆಸುವ ಬದಲು, ಯೋಗಿಯಾಗಿ ಪರೋಪಕಾರಿ ಹಾಗೂ ಪಾರಮಾರ್ಥಿಕ ಜೀವನವನ್ನು ನಡೆಸುವುದರಲ್ಲಿಯೇ ಮಾನವಜನ್ಮದ ಸಾರ್ಥಕವಿದೆ. ಇವೆಲ್ಲವನ್ನೂ ಸಾಧ್ಯಗೊಳಿಸಲು ಯೋಗಸಾಧಕನು ಸ್ವಾನುಭವವಿರುವ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗಸಾಧನೆಯನ್ನು ಮಾಡಬೇಕು.

‘ಯೋಗ’ ಸಾಧನೆಯಿಂದಲೇ ಆಧ್ಯಾತ್ಮಿಕ ದೃಷ್ಟಿ ಹಾಗೂ ರಾಷ್ಟ್ರಭಕ್ತಿಯುಕ್ತ ಭೂಮಿಪುತ್ರರು ನಿರ್ಮಾಣವಾಗುತ್ತಾರೆ

‘ಗೌರವಶಾಲಿ, ವೈಭವಶಾಲಿ, ಸುಸಂಸ್ಕಾರಯುಕ್ತ, ವ್ಯಾಧಿಮುಕ್ತ, ಆತ್ಮನಿರ್ಭರ, ಸ್ವಾವಲಂಬಿ ಹಾಗೂ ಜಗದ್ಗುರುಪದವಿಯ ಅರ್ಹತೆಯುಳ್ಳ ಭಾರತವನ್ನು ನಿರ್ಮಾಣ ಮಾಡಲಿಕ್ಕಿದ್ದರೆ, ಅದಕ್ಕಾಗಿ ಬೇಕಾಗುವ ಸದ್ಗುಣ, ತೇಜಸ್ಚಿ ವಿಚಾರಧಾರೆ, ದೇವರು-ಧರ್ಮ, ದೇಶ, ಸಂಸ್ಕೃತಿ, ಪ್ರೀತಿ, ಆಧ್ಯಾತ್ಮಿಕ ದೃಷ್ಟಿ ಹಾಗೂ ರಾಷ್ಟ್ರಭಕ್ತಿಯು ತುಂಬಿತುಳುಕುವ ಭೂಮಿಪುತ್ರರು ಈ ‘ಯೋಗ’ ಸಾಧನೆಯಿಂದಲೇ ನಿರ್ಮಾಣವಾಗಲಿಕ್ಕಿದ್ದಾರೆ’, ಎಂದು ಯೋಗಋಷಿ ರಾಮದೇವ ಬಾಬಾ ಇವರು ಹೇಳುತ್ತಾರೆ.

ಇಂತಹ ಶಾರೀರಿಕ ಹಾಗೂ ಮಾನಸಿಕ ವ್ಯಾಧಿಯಿಂದ ಮುಕ್ತಗೊಳಿಸುವ, ಕೊರೋನಾದಂತಹ ವೈರಾಣುವಿಗೆ ಯಶಸ್ವಿಯಾಗಿ ಪ್ರತಿಕಾರ ಮಾಡಲು ಸಾಧ್ಯವಿರುವ, ಮೋಕ್ಷಪ್ರಾಪ್ತಿಯ ಧ್ಯೇಯವನ್ನು ಸಾಧ್ಯಗೊಳಿಸಿ ಜೀವವನ್ನು ಶಿವನೊಂದಿಗೆ ಭೇಟಿ ಮಾಡಿಸುವ, ಜಗದ್ಗುರುಪದವಿಯ ಇಚ್ಛೆಯನ್ನು ಪೂರ್ಣಗೊಳಿಸಲು ಸಾಧ್ಯವಿರುವ ಈ ಸರ್ವಗುಣಸಂಪನ್ನ ಯೋಗವಿದ್ಯೆಯನ್ನು ದೇಶ-ವಿದೇಶಗಳಲ್ಲಿ ನಿಷ್ಕಾಮ ವೃತ್ತಿಯಿಂದ ಪ್ರಸಾರ-ಪ್ರಚಾರ ಮಾಡುವ ಎಲ್ಲ ಭಾರತೀಯ ಸಂಸ್ಥೆಗಳು, ಯೋಗಾಚಾರ್ಯರು, ಯೋಗಸಾಧಕರು, ಮತ್ತು ಯೋಗಕಾರ್ಯದಲ್ಲಿ ತನು-ಮನ-ಧನದಿಂದ ಸಹಕರಿಸುವ ಹಿತಚಿಂತಕರಿಗೆ ಅಭಿನಂದನೆಗಳು !

ಲೇಖಕರು – ಶ್ರೀ. ಲಕ್ಷ್ಮಣ ಬೋರ್ಕರ್, ಕೆಪೆ, ಗೋವಾ.

1 thought on “ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !”

Leave a Comment