‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ? ನಾಮದೇವ್ ಜಾಧವ್‌ಗೆ ನ್ಯಾಯ ಯಾವಾಗ ? – ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥ

27 ವರ್ಷಗಳಿಂದ ಬಾಕಿ ಉಳಿದಿದ್ದ ಮೊಕದ್ದಮೆಯಿಂದ ಪುಣೆ ನ್ಯಾಯಾಲಯದಲ್ಲಿ ಆತ್ಮಹತ್ಯೆ

ದೇಶದಾದ್ಯಂತದ 5 ಕೋಟಿ ಪ್ರಕರಣಗಳು, ನ್ಯಾಯಕ್ಕಾಗಿ 324 ವರ್ಷಗಳ ಪ್ರತಿಕ್ಷೆ

ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥೆ

‘ತಾರೀಖಿನ ಮೇಲೆ ತಾರೀಖು’ ಎಂಬ ದುಷ್ಚಕ್ರದಲ್ಲಿ 27 ವರ್ಷಗಳ ಕಾಲ ಸಿಲುಕಿ, ನ್ಯಾಯಕ್ಕಾಗಿ ಕಾಯುತ್ತಾ ಹತಾಶರಾದ ಶ್ರೀ. ನಾಮದೇವ್ ಜಾಧವ್ ಅವರು ಪುಣೆ ನ್ಯಾಯಾಲಯದ ಕಟ್ಟಡದಿಂದ ಹಾರಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಇದು ಆತ್ಮಹತ್ಯೆಯಲ್ಲ, ಬದಲಿಗೆ ವಿಳಂಬ ಮತ್ತು ಉದಾಸೀನತೆಯಿಂದ ಕೂಡಿದ ವ್ಯವಸ್ಥೆಯಿಂದಾದ ಕೊಲೆ ಎಂದು ಹೇಳಬಹುದು. ದೇಶದ ನ್ಯಾಯಾಲಯಗಳಲ್ಲಿ ಈಗಲೂ 5 ಕೋಟಿಗೂ ಹೆಚ್ಚು ಮೊಕದ್ದಮೆಗಳು ಬಾಕಿ ಉಳಿದಿದ್ದು, ನೀತಿ ಆಯೋಗದ ಪ್ರಕಾರ ಇವುಗಳನ್ನು ಇತ್ಯರ್ಥಪಡಿಸಲು 324 ವರ್ಷಗಳು ಬೇಕಾಗುತ್ತವೆ. ಅಂದರೆ, ಅನೇಕ ತಲೆಮಾರುಗಳು ಮತ್ತು ಕೋಟ್ಯಂತರ ಜನರಿಗೆ ನ್ಯಾಯ ದೊರೆಯುವುದೇ ಇಲ್ಲ. ಕೊನೆಗೂ ‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ನಡೆಯುತ್ತದೆ, ನಾಮದೇವ್ ಜಾಧವ್‌ಗೆ ನ್ಯಾಯ ಯಾವಾಗ ಸಿಗುತ್ತದೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ್ ವರ್ತಕ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಶ್ರೀ. ವರ್ತಕ್ ಅವರು ಮುಂದುವರೆದು ಮಾತನಾಡುತ್ತಾ, ಶ್ರೀ. ಜಾಧವ್ ಅವರ ಸಾವು ಕೇವಲ ಹಿಮಗಡ್ಡೆಯ ತುದಿಯಷ್ಟೇ. ಇಂದಿನ ದಿನಾಂಕಕ್ಕೆ, ದೇಶದಾದ್ಯಂತದ ನ್ಯಾಯಾಲಯಗಳಲ್ಲಿ 5.3 ಕೋಟಿಗೂ ಹೆಚ್ಚು ಮೊಕದ್ದಮೆಗಳ ಬೆಟ್ಟವೇ ನಿಂತಿದೆ. ಇವುಗಳಲ್ಲಿ ಅತಿ ಹೆಚ್ಚು ಅಂದರೆ 4.7 ಕೋಟಿ ಪ್ರಕರಣಗಳು ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಪೈಕಿ 1.8 ಲಕ್ಷಕ್ಕೂ ಹೆಚ್ಚು ಮೊಕದ್ದಮೆಗಳು 30 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮತ್ತು ಕೆಲವು 50 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿವೆ.

ಈ ನ್ಯಾಯಾಂಗ ವಿಳಂಬಕ್ಕೆ ಆಡಳಿತದ ಉದಾಸೀನತೆ ಮೂಲ ಕಾರಣವಾಗಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ 15 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕಾದಲ್ಲಿ ಇದೇ ಅನುಪಾತ 150 ಮತ್ತು ಯುರೋಪ್‌ನಲ್ಲಿ 220 ಆಗಿದೆ. ಕಾನೂನು ಆಯೋಗವು ದಶಕಗಳ ಹಿಂದೆಯೇ ಪ್ರತಿ ಹತ್ತು ಲಕ್ಷಕ್ಕೆ 50 ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿತ್ತು; ಆದರೆ ನಾವು ಆ ಗುರಿಯನ್ನು ಸಹ ಸಾಧಿಸಲು ಸಾಧ್ಯವಾಗಿಲ್ಲ.

ಅಕ್ಟೋಬರ್ 2025ರ ವೇಳೆಗೆ, ದೇಶದಾದ್ಯಂತದ 25 ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಶೇ. 26 ರಷ್ಟು ಹುದ್ದೆಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ 5,200ಕ್ಕೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳು ವರ್ಷಗಳಿಂದ ಖಾಲಿ ಇವೆ. ಖಾಲಿ ಹುದ್ದೆಗಳಿಂದಾಗಿ ಕಾರ್ಯನಿರತ ನ್ಯಾಯಾಧೀಶರ ಮೇಲೆ ಕೆಲಸದ ಭಾರ ಹೆಚ್ಚುತ್ತದೆ, ಇದರಿಂದ ಮೊಕದ್ದಮೆಗಳನ್ನು ಇತ್ಯರ್ಥಪಡಿಸುವ ವೇಗ ಕಡಿಮೆಯಾಗಿ ನ್ಯಾಯ ದೊರೆಯಲು ವಿಳಂಬವಾಗುತ್ತಿದೆ. ನ್ಯಾಯಾಂಗದ ಮೇಲಿನ ವೆಚ್ಚವು ದೇಶದ ಒಟ್ಟು ಜಿಡಿಪಿಯ ಕೇವಲ 0.08% ಮಾತ್ರ, ಇದು ಮೂಲಸೌಕರ್ಯದ ಕೊರತೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ನಾಗರಿಕರಿಗೆ ನ್ಯಾಯದ ಮೇಲಿನ ನಂಬಿಕೆ ಕಳೆದುಹೋಗದಿರಲು, ಸರ್ಕಾರವು ಈ ಸಮಸ್ಯೆಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಪ್ರತಿ ಮೊಕದ್ದಮೆಯನ್ನು ಒಂದು ನಿರ್ದಿಷ್ಟ ಸಮಯ-ಮಿತಿಯೊಳಗೆ ಇತ್ಯರ್ಥಪಡಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ನ್ಯಾಯಾಧೀಶರ ಸಂಖ್ಯೆಯನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚಿಸುವುದು, ನ್ಯಾಯಾಧೀಶರು ಮತ್ತು ಇತರ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ನ್ಯಾಯಾಂಗದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು. ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡುವುದು.
ಈ ಅಂಶಗಳನ್ನು ಒಟ್ಟುಗೂಡಿಸಿ ಪ್ರಯತ್ನಿಸಿದರೆ, ‘ಎಲ್ಲರಿಗೂ ಸಮಯಕ್ಕೆ ಸರಿಯಾದ ನ್ಯಾಯ’ ಎಂಬ ನೀತಿಯನ್ನು ಸಾಧಿಸಬಹುದು, ಎಂದು ಶ್ರೀ. ವರ್ತಕ್ ಅವರು ಹೇಳಿದರು.

Leave a Comment