ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಮಾರೋಪ: ಭಾರತ ಸೇರಿದಂತೆ 23 ದೇಶಗಳ 30 ಸಾವಿರ ಹಿಂದೂಗಳ ಸಹಭಾಗ

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಅಗತ್ಯವಾದ ಹೆಜ್ಜೆಯನ್ನಿಡಬೇಕು ! – ತೆಲಂಗಾಣದ ಶಾಸಕ ಟಿ. ರಾಜಾಸಿಂಹ ಇವರಿಂದ ಕರೆ

ತೆಲಂಗಾಣದ ಶಾಸಕರಾದ ಟಿ. ರಾಜಾಸಿಂಹ

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ‘ಮುಂಬರುವ ಕಾಲವು ಯುದ್ಧದ ಕಾಲ. ಆ ಯುದ್ಧದಲ್ಲಿ ವಿಜಯ ಸಾಧಿಸಲು, ಆ ಯುದ್ಧವನ್ನು ಹೋರಾಡಲು ಪ್ರತಿಯೊಬ್ಬ ಹಿಂದೂವೂ ಸಿದ್ಧರಾಗಬೇಕು, ಎಂದು ಸಂತರು -ಗುರುಜನರು ಯಾವಾಗಲೂ ಹೇಳುತ್ತಿದ್ದರು. ಪಹಲ್ಗಾಮ್‌ನ ದಾಳಿಯಲ್ಲಿ ಧರ್ಮವನ್ನು ಕೇಳಿ ಜನರನ್ನು ಕೊಲ್ಲಲಾಯಿತು. ಇತಿಹಾಸದಲ್ಲಿಯೂ ಔರಂಗಜೇಬ ಆಗಲಿ, ಅಕ್ಬರ್ ಆಗಲಿ ಅಥವಾ ಇತರ ಅನೇಕ ಆಕ್ರಮಣಕಾರರು ಧರ್ಮವನ್ನು ಕೇಳಿಯೇ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದರು. ಯಾರು ಮತಾಂತರಗೊಳ್ಳಲಿಲ್ಲವೋ ಅವರನ್ನು ಕೊಲ್ಲಲಾಯಿತು. ಇಂದು ಅವರ ಅನುಯಾಯಿಗಳು ಅವರು ನಡೆದ ದಾರಿಯಲ್ಲೇ ನಡೆಯುತ್ತಿದ್ದಾರೆ. ಇಂತಹ ಪ್ರವೃತ್ತಿಯ ಜನರು ಕೇವಲ ಪಹಲ್ಗಾಮ್‌ನಲ್ಲಿ ಮಾತ್ರವಲ್ಲ, ಪ್ರತಿ ರಾಜ್ಯ, ಪ್ರತಿ ಜಿಲ್ಲೆಯಲ್ಲೂ ಅಡಗಿರಬಹುದು. ಆದ್ದರಿಂದ ಹಿಂದೂಗಳು ತಮ್ಮ ಮಕ್ಕಳಿಗೆ ಸ್ವಯಂರಕ್ಷಣೆಗಾಗಿ ತರಬೇತಿ ನೀಡಬೇಕು. ಯಾರು ಹೋರಾಡುತ್ತಾರೋ ಅವರು ಬದುಕುತ್ತಾರೆ. ಯಾರು ಹೋರಾಡುವುದಿಲ್ಲವೋ ಅವರಿಗೆ ಮುಂದಿನ ಕಾಲವು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಇಲ್ಲಿಂದ ಹೋಗುವ ಮೊದಲು ಎಲ್ಲಾ ಹಿಂದೂಗಳು ಒಂದು ಸಂಕಲ್ಪ ಮಾಡಬೇಕು, ಮುಂಬರುವ ದಿನಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಗತ್ಯವಾದ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತೇವೆ ಮತ್ತು ಸಂಘಟಿತರಾಗಿರುತ್ತೇವೆ ಎಂದು ತೆಲಂಗಾಣದ ಬಿಜೆಪಿಯ ಪ್ರಬಲ ಹಿಂದುತ್ವವಾದಿ ಶಾಸಕ ಶ್ರೀ. ಟಿ. ರಾಜಾಸಿಂಹ ಅವರು ಕರೆ ನೀಡಿದರು. ಅವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಾತನಾಡುತ್ತಿದ್ದರು.

ಗೋವಾದ ಪವಿತ್ರ ಭೂಮಿಯಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ’ಯಲ್ಲಿ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಭವ್ಯ ಮತ್ತು ಭಕ್ತಿಮಯವಾಗಿ ಸಮಾರೋಪಗೊಂಡಿತು. ಭಾರತ ಸೇರಿದಂತೆ ವಿಶ್ವದಾದ್ಯಂತ 23 ದೇಶಗಳಿಂದ ಆಗಮಿಸಿದ ಸುಮಾರು 30 ಸಾವಿರ ಹಿಂದೂ ಧರ್ಮಪ್ರೇಮಿಗಳು ಮತ್ತು ಸಾಧಕರು ಈ ಮಹೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಹಿಂದೂ ಏಕತೆಗೆ ಸಾಕ್ಷಿಯಾದರು. ಈ ಮಹೋತ್ಸವವು ಹಿಂದೂ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಮಹೋತ್ಸವದಲ್ಲಿ ವಿವಿಧ ಆಧ್ಯಾತ್ಮಿಕ, ರಾಷ್ಟ್ರಹಿತಕಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಖ್ಯವಾಗಿ ಭಾರತದ ವಿಜಯಕ್ಕಾಗಿ, ಹಾಗೆಯೇ ಭಾರತೀಯ ಸೇನೆ, ಸನಾತನ ಧರ್ಮಪ್ರೇಮಿಗಳು ಮತ್ತು ರಾಷ್ಟ್ರರಕ್ಷಣೆಗಾಗಿ ಆಯೋಜಿಸಲಾದ ‘ಶತಚಂಡಿ ಯಾಗ’ ಮತ್ತು ಸಮಸ್ತ ಸನಾತನ ಹಿಂದೂ ಧರ್ಮೀಯರಿಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ‘ಮಹಾಧನ್ವಂತರಿ ಯಾಗ’ವನ್ನು ಭಾವಪೂರ್ಣವಾಗಿ ನೆರವೇರಿಸಲಾಯಿತು. ಇದಕ್ಕಾಗಿ ತಮಿಳುನಾಡಿನಿಂದ 35 ಪುರೋಹಿತರು ಆಗಮಿಸಿದ್ದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಶುಭ ಹಸ್ತದಿಂದ ‘ಸನಾತನ ಧರ್ಮಧ್ವಜ’ವನ್ನು ಜಯಘೋಷಗಳೊಂದಿಗೆ ಏರಿಸಲಾಯಿತು. ಈ ಮಹೋತ್ಸವದಲ್ಲಿ ದೇಶಾದ್ಯಂತ ರಾಷ್ಟ್ರ ಮತ್ತು ಧರ್ಮ ಕಾರ್ಯಗಳನ್ನು ಮಾಡುತ್ತಿರುವ 25 ರಾಷ್ಟ್ರ ಮತ್ತು ಧರ್ಮ ನಿಷ್ಠ ವ್ಯಕ್ತಿಗಳನ್ನು ‘ಹಿಂದೂ ರಾಷ್ಟ್ರರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗಳನ್ನು ಇನ್ನು ಮುಂದೆ ಪ್ರತಿ ವರ್ಷ ನೀಡಲಾಗುವುದು.

ಈ ಮಹೋತ್ಸವದಲ್ಲಿ ಪ್ರಸಿದ್ಧ ಕೀರ್ತನಕಾರ ಶ್ರೀ ಚಾರುದತ್ತ ಆಫಳೆ ಅವರು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜೀವನ ಚರಿತ್ರೆಯನ್ನು ಕೀರ್ತನೆಯ ಮೂಲಕ ಭಾವಪೂರ್ಣವಾಗಿ ತೆರೆದಿಟ್ಟರು. ಇದರಿಂದ ರಾಷ್ಟ್ರಗುರುಗಳು ಹೇಗಿರುತ್ತಾರೆ, ಅವರ ಕಾರ್ಯ ಹೇಗಿರುತ್ತದೆ ಮತ್ತು ಅದರಿಂದ ಸಮಾಜವು ಧರ್ಮಪ್ರವಣವಾಗುವುದು ಹೇಗೆ ಎಂಬುದನ್ನು ಜನರ ಮುಂದೆ ಇಡಲಾಯಿತು. ಗೋವಾದ ಸಂಸ್ಕೃತಿಯ ಸಾಂಪ್ರದಾಯಿಕ ನೃತ್ಯ, ಗುರುವಂದನಾ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಧರ್ಮಶಿಕ್ಷಣ ಮತ್ತು ಸಾಧನಾ ಸಂವರ್ಧನೆಗಾಗಿ ಗ್ರಂಥ ಪ್ರದರ್ಶನಗಳ ಪ್ರಯೋಜನವನ್ನು ಸಾವಿರಾರು ಭಕ್ತರು ಪಡೆದರು.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಉಪಸ್ಥಿತ ಧರ್ಮಪ್ರೇಮಿ ಹಿಂದೂಗಳು

ಈ ಮಹೋತ್ಸವದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕೋಶಾಧ್ಯಕ್ಷ ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಪೂ. ಮಹಂತ ರವೀಂದ್ರ ಪುರಿಜಿ ಮಹಾರಾಜ, ಅಯೋಧ್ಯೆಯ ಹನುಮಾನಗಢಿಯ ಪೂ. ಮಹಂತ ರಾಜು ದಾಸ್, ಶ್ರೀಕ್ಷೇತ್ರ ತಪೋಭೂಮಿ (ಕುಂಡೈ, ಗೋವಾ) ಪೀಠಾಧೀಶ್ವರ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ, ‘ಸನಾತನ ಬೋರ್ಡ್’ನ ಪ್ರವರ್ತಕ ಪೂಜ್ಯ ಶ್ರೀ ದೇವಕೀನಂದನ ಠಾಕುರಜಿ ಮಹಾರಾಜ, ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀಪಾದಜಿ ನಾಯಕ್, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹುರ್ಕರ್ ಹಾಗೂ ಕಾಶಿ-ಮಥುರಾ ದೇವಾಲಯಗಳಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮುಂತಾದ ಅನೇಕ ಗಣ್ಯ ವಕ್ತಾರರು ಆಧ್ಯಾತ್ಮ, ರಾಷ್ಟ್ರ ಮತ್ತು ಧರ್ಮ ಮುಂತಾದ ವಿವಿಧ ವಿಷಯಗಳ ಕುರಿತು ಸಾವಿರಾರು ಹಿಂದೂಗಳಿಗೆ ಪ್ರಬೋಧನೆ ನೀಡಿದರು. ಒಟ್ಟಾರೆಯಾಗಿ ಈ ಮಹೋತ್ಸವದಿಂದ ಎಲ್ಲರಿಗೂ ರಾಷ್ಟ್ರಧರ್ಮದ ಕಾರ್ಯ ಮಾಡಲು ಆಧ್ಯಾತ್ಮಿಕ, ವೈಚಾರಿಕ ಮತ್ತು ದೈಹಿಕ ಬಲ ಸಿಕ್ಕಿದೆ.

Leave a Comment