ನಾಮಕರಣ ಮಾಡುವಾಗ ಹೆಸರನ್ನು ಧರ್ಮಶಾಸ್ತ್ರಕ್ಕನುಸಾರ ಇಡುವ ಮಹತ್ವ

ಹಿಂದೂ ಧರ್ಮದಲ್ಲಿ ಹೇಳಿದ ಹದಿನಾರು ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರವು ೫ ನೇ ಸಂಸ್ಕಾರವಾಗಿದೆ. ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ. ‘ಮಗುವಿನಲ್ಲಿರುವ ಬೀಜದೋಷ ಮತ್ತು ಜನ್ಮದಿಂದ ಬಂದಿರುವ ದೋಷಗಳು ನಾಶವಾಗಬೇಕು, ಮಗುವಿನ ಆಯುಷ್ಯ ಹೆಚ್ಚಾಗಬೇಕು ಮತ್ತು ಮಗುವಿಗೆ ಜಗತ್ತಿನಲ್ಲಿ ವ್ಯವಹಾರ ಮಾಡಲು ಸುಲಭವಾಗಬೇಕು’, ಎಂದು ನಾಮಕರಣ ಸಂಸ್ಕಾರವನ್ನು ಮಾಡಲಾಗುತ್ತದೆ. ಧರ್ಮಶಾಸ್ತ್ರದಲ್ಲಿ ಹೇಳಿದ ನವಜಾತ ಶಿಶುವಿಗೆ ಹೆಸರನ್ನಿಡುವ ವಿಧ (ಪ್ರಕಾರ) ಮತ್ತು ಅದರ ಮಹತ್ವವನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

(ನಾಮಕರಣ  ಸಂಸ್ಕಾರದ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

೧. ನವಜಾತ ಶಿಶುವಿಗೆ ಹೆಸರಿಡುವ ವಿಧಗಳು

ಧರ್ಮಶಾಸ್ತ್ರದಲ್ಲಿ ನವಜಾತ ಶಿಶುವಿಗೆ ಹೆಸರನ್ನಿಡುವ ೪ ವಿಧಗಳನ್ನು ಹೇಳಲಾಗಿದೆ. ದೇವತೆ, ಮಾಸ (ತಿಂಗಳುಗಳು), ನಕ್ಷತ್ರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಎಂಬ ೪ ವಿಧಗಳಿವೆ. ಅವುಗಳ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

೧ ಅ. ದೇವತೆಗಳಿಗೆ ಸಂಬಂಧಿಸಿದ ಹೆಸರು

ಈ ಹೆಸರನ್ನಿಡುವಾಗ ಮನೆತನದ (ಕುಟುಂಬದ) ಕುಲದೇವರ ಹೆಸರಿನ ಮುಂದೆ ದಾಸ, ಶರಣ ಇತ್ಯಾದಿ ಉಪಪದವಿಗಳನ್ನು ಜೋಡಿಸಿ ಆ ದೇವತೆಯ ಹೆಸರನ್ನಿಡುತ್ತಾರೆ, ಉದಾ. ದುರ್ಗಾದಾಸ, ಅಂಬಾದಾಸ ಇತ್ಯಾದಿ.

೧ ಆ. ಮಾಸಗಳಿಗೆ ಸಂಬಂಧಿಸಿದ ಹೆಸರು

ಯಾವ ಚಂದ್ರಮಾಸದಲ್ಲಿ ಶಿಶುವಿನ ಜನ್ಮವಾಗುತ್ತದೆಯೋ, ಆ ಮಾಸಕ್ಕೆ (ತಿಂಗಳಿಗೆ) ಸಂಬಂಧಿಸಿದ ಹೆಸರುಗಳನ್ನು ಇಡಲಾಗುತ್ತದೆ. ಚೈತ್ರಾದಿ ೧೨ ಮಾಸಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹುಡುಗರ ಮತ್ತು ಹುಡುಗಿಯರ ಹೆಸರುಗಳನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ –

ಮಾಸ ಹಡುಗನ ಹೆಸರು ಹುಡುಗಿಯ ಹೆಸರು
೧. ಚೈತ್ರ ವೈಕುಂಠ ವೈಕುಂಠಿ
೨. ವೈಶಾಖ ಜನಾರ್ದನ ಜನಾರ್ದನಾ
೩. ಜ್ಯೇಷ್ಠ ಉಪೇಂದ್ರ ಉಪೇಂದ್ರಾ
೪. ಆಷಾಢ ಯಜ್ಞಪುರುಷ ಯಜ್ಞಪುರುಷಾ
೫. ಶ್ರಾವಣ ವಾಸುದೇವ ವಾಸುದೇವಾ
೬. ಭಾದ್ರಪದ ಹರಿ ಹರಿ
೭. ಆಶ್ವಯುಜ ಯೋಗೀಶ ಯೋಗೀಶಾ
೮. ಕಾರ್ತಿಕ ಪುಂಡರೀಕಾಕ್ಷ ಪುಂಡರೀಕಾಕ್ಷಾ
೯. ಮಾರ್ಗಶಿರ ಕೃಷ್ಣ ಕೃಷ್ಣಾ
೧೦. ಪುಷ್ಯ ಅನಂತ ಅನಂತಾ
೧೧. ಮಾಘ ಅಚ್ಯುತ ಅಚ್ಯುತಾ
೧೨. ಫಾಲ್ಗುಣ ಚಕ್ರೀ ಸುಚಕ್ರಿಣಿ

೧ ಇ. ನಕ್ಷತ್ರಗಳಿಗೆ ಸಂಬಂಧಿಸಿದ ಹೆಸರುಗಳು

ಯಾವ ನಕ್ಷತ್ರದಲ್ಲಿ ಶಿಶುವಿನ ಜನ್ಮವಾಗಿರುತ್ತದೆಯೋ, ಆ ನಕ್ಷತ್ರಕ್ಕೆ ಸಂಬಂಧಿಸಿದ ಹೆಸರನ್ನು ಇಡಲಾಗುತ್ತದೆ. ನಕ್ಷತ್ರಗಳ ಆಧಾರದಲ್ಲಿ ಹೆಸರುಗಳನ್ನು ಇಡುವ ೨ ವಿಧಗಳು ಮುಂದಿನಂತಿವೆ –

೧ ಇ ೧. ನಕ್ಷತ್ರದ ಹೆಸರಿಗೆ ಪ್ರತ್ಯಯವನ್ನು ಸೇರಿಸಿ ಹೆಸರಿಡುವುದು : ನಕ್ಷತ್ರದ ಹೆಸರಿಗೆ ಸಂಸ್ಕೃತ ಭಾಷೆಗನುಸಾರ ‘ಜಾತಃ (ಜನಿಸಿದ)’ ಎಂಬ ಅರ್ಥದಲ್ಲಿ ತದ್ಧಿತ ಪ್ರತ್ಯಯವನ್ನು ಸೇರಿಸಿ ನಕ್ಷತ್ರನಾಮವನ್ನು ಇಡಲಾಗುತ್ತದೆ, ಉದಾ. ಕೃತ್ತಿಕಾದಿಂದ ಕಾರ್ತಿಕ, ರೋಹಿಣಿಯಿಂದ ರೌಹಿಣ ಇತ್ಯಾದಿ. ಮಗಳ ನಕ್ಷತ್ರನಾಮವನ್ನು ಇಡುವಾಗ ನಕ್ಷತ್ರದ ಹೆಸರು ಹೇಗೆ ಇರುತ್ತದೆಯೋ, ಹಾಗೆಯೇ ಇಡುತ್ತಾರೆ. ಉದಾ. ಕೃತ್ತಿಕಾ, ರೋಹಿಣಿ ಇತ್ಯಾದಿ.

೧ ಇ ೨. ನಕ್ಷತ್ರದ ಚರಣಾಕ್ಷರದಿಂದ ಹೆಸರಿಡುವುದು : ಪ್ರತಿಯೊಂದು ನಕ್ಷತ್ರಕ್ಕೆ ೪ ಪಾದ ಅಂದರೆ ೪ ಚರಣಗಳಿವೆ. ನಕ್ಷತ್ರದ ಪ್ರತಿಯೊಂದು ಚರಣಕ್ಕೆ ಒಂದು ವಿಶಿಷ್ಟ ಅಕ್ಷರವನ್ನು ಕೊಡಲಾಗಿದೆ, ಉದಾ. ಅಶ್ವಿನಿ ನಕ್ಷತ್ರದ ೪ ಚರಣಗಳಿಗೆ ಕ್ರಮವಾಗಿ ‘ಚೂ, ಚೆ, ಚೋ, ಲಾ’ ಈ ಅಕ್ಷರಗಳಿವೆ. ಮಗುವಿನ ಜನ್ಮವು ನಕ್ಷತ್ರದ ಯಾವ ಚರಣದಲ್ಲಿ ಆಗಿರುತ್ತದೆಯೋ, ಆ ಚರಣದ ಅಕ್ಷರದ ಮೇಲಿನಿಂದ ನಕ್ಷತ್ರನಾಮವನ್ನು ಇಡಲಾಗುತ್ತದೆ, ಉದಾ. ಅಶ್ವಿನಿ ನಕ್ಷತ್ರದ ಮೊದಲು ಚರಣದ ಮೇಲೆ ಜನ್ಮವಾಗಿದ್ದರೆ ‘ಚೂ’ ಅಕ್ಷರದಿಂದ ಚೂಡೇಶ್ವರ, ಚೂಡಾಮಣಿ ಇತ್ಯಾದಿ ಹೆಸರುಗಳನ್ನು ಇಡಲಾಗುತ್ತದೆ.

೧ ಈ. ಲೌಕಿಕ ಹೆಸರುಗಳು

ಈ ಹೆಸರುಗಳನ್ನು ವ್ಯವಹಾರದಲ್ಲಿ ಉಪಯೋಗಿಸಲು ಇಡಲಾಗುತ್ತದೆ. ಈ ಕುರಿತು ಶಾಸ್ತ್ರವು ಮುಂದಿನ ನಿಯಮಗಳನ್ನು ಹೇಳಿದೆ – ಲೌಕಿಕ ಹೆಸರುಗಳಲ್ಲಿ ಕವರ್ಗ, ಚವರ್ಗ, ಟವರ್ಗ, ತವರ್ಗ ಮತ್ತು ಪವರ್ಗ ಇವುಗಳಲ್ಲಿನ ಮೂರನೇಯ, ನಾಲ್ಕನೇಯ ಮತ್ತು ಐದನೇ ವರ್ಣ (ಗ, ಘ, ಙ, ಜ, ಝ, ಞ, ಡ, ಢ, ಣ, ದ, ಧ, ನ, ಬ, ಭ, ಮ) ಮತ್ತು ಹ ಇವುಗಳಲ್ಲಿ ಯಾವುದೇ ವರ್ಣವು ಹೆಸರಿನ ಮೊದಲ ಅಕ್ಷರವಿರಬೇಕು. ಹೆಸರಿನ ಮಧ್ಯಭಾಗದಲ್ಲಿ ಅಂತಸ್ಥ ವ್ಯಂಜನ (ಯ, ರ, ಲ ಅಥವಾ ವ) ಇರಬೇಕು. ಪುತ್ರನ ಹೆಸರಿನಲ್ಲಿ ಅಕ್ಷರಗಳ ಸಂಖ್ಯೆಗಳು ಸಮ (೨, ೪ ಇತ್ಯಾದಿ) ಇರಬೇಕು ಮತ್ತು ಹೆಸರು ಅಕಾರಾಂತವಾಗಿರಬೇಕು, ಉದಾ. ಜಯ, ನೀಲಕಂಠ, ದೇವವ್ರತ, ಭಾಲಚಂದ್ರ, ಗಿರಿಧರ ಇತ್ಯಾದಿ. ಪುತ್ರಿಯ ಹೆಸರಿನಲ್ಲಿ ಅಕ್ಷರಗಳ ಸಂಖ್ಯೆಗಳು ಬೆಸ (೩, ೫ ಇತ್ಯಾದಿ) ಇರಬೇಕು ಮತ್ತು ಹೆಸರು ಆಕಾರಾಂತ ಅಥವಾ ಈಕಾರಾಂತವಾಗಿರಬೇಕು, ಉದಾ. ಗಾಯತ್ರಿ, ನಳಿನಿ, ಜಾಹ್ನವಿ, ದೇವಶ್ರೀ ಇತ್ಯಾದಿ.
(ಆಧಾರ : ಧರ್ಮಸಿಂಧು)

೧ ಈ ೧. ವ್ಯವಹಾರಕ್ಕೆ ಸಂಬಂಧಿಸಿದ ಹೆಸರುಗಳನ್ನಿಡಲು ಹೇಳಿದ ನಿಯಮಗಳ ಹಿಂದಿನ ಶಾಸ್ತ್ರ : ‘ಕವರ್ಗ, ಚವರ್ಗ, ಟವರ್ಗ, ತವರ್ಗ ಮತ್ತು ಪವರ್ಗ ಇವುಗಳಲ್ಲಿನ ಮೊದಲನೇಯ ಮತ್ತು ಎರಡನೇ ವ್ಯಂಜನಗಳು (ಕ, ಖ, ಚ, ಛ, ಟ, ಠ, ತ, ಥ, ಪ, ಫ) ಇವು ಪೃಥ್ವಿ, ಹಾಗೆಯೇ ಆಪ ತತ್ತ್ವಪ್ರಧಾನವಾಗಿರುವುದರಿಂದ ತಮೋಗುಣಿಯಾಗಿವೆ. ಆದ್ದರಿಂದ ಈ ವರ್ಣಗಳು ಹೆಸರಿನ ಮೊದಲು ಇರಬಾರದು. ಪುತ್ರನ ಹೆಸರು ಸಮ ಮತ್ತು ಕನ್ಯೆಯ ಹೆಸರು ವಿಷಮ ಅಕ್ಷರಸಂಖ್ಯೆಯಲ್ಲಿರಬೇಕು; ಏಕೆಂದರೆ ಸಮ ಸಂಖ್ಯೆಯು ಶಿವಪ್ರಧಾನ ಮತ್ತು ವಿಷಮ ಸಂಖ್ಯೆಯು ಶಕ್ತಿಪ್ರಧಾನವಾಗಿದೆ.

(ಹೆಸರಿಡುವ ಹಿಂದಿನ ನಿಯಮಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ)

(ಆಧಾರ : ಸನಾತನದ ಗ್ರಂಥ ಹದಿನಾರು ಸಂಸ್ಕಾರಗಳು)

೨. ಹೆಸರುಗಳು ಅರ್ಥಪೂರ್ಣ ಮತ್ತು ಸಾತ್ತ್ವಿಕವಾಗಿರಬೇಕು

ವ್ಯವಹಾರಿಕ ಹೆಸರನ್ನಿಡುವಾಗ ಅದು ಅರ್ಥಪೂರ್ಣ, ಸಾತ್ತ್ವಿಕ ಮತ್ತು ಉಚ್ಚರಿಸಲು ಸುಲಭವಾಗಿರಬೇಕು. ದೇವತೆಗಳು, ಪೌರಾಣಿಕ ವ್ಯಕ್ತಿಗಳು, ಧರ್ಮಪರಾಯಣ ರಾಜರ, ನಕ್ಷತ್ರ, ನಿಸರ್ಗ, ವಿದ್ಯಾ, ಬುದ್ಧಿ, ತೇಜ, ಸೌಂದರ್ಯ, ಬಲ, ವೃದ್ಧಿ ಇತ್ಯಾದಿಗಳಿಗೆ ಸಂಬಂಧಿಸಿದ ಹೆಸರುಗಳನ್ನಿಡಬೇಕು, ಉದಾ. ನಾರಾಯಣ, ಸತ್ಯವಾನ, ದಶರಥ, ದಯಾನಂದ, ಜ್ಞಾನೇಶ್ವರ, ಅಶ್ವಿನಿ, ಉತ್ತರಾ, ಗಿರಿಜಾ, ಮಂಜಿರಿ, ಮೈಥಿಲಿ ಇತ್ಯಾದಿ. ಅರ್ಥಹೀನ ಹೆಸರುಗಳನ್ನು (ಉದಾ. ಬಂಡು, ಪಿಂಟು, ಮೋನು ಇತ್ಯಾದಿ) ಮತ್ತು ವಿದೇಶಿ ಭಾಷೆಯಲ್ಲಿನ ಹೆಸರುಗಳನ್ನು (ಪಿಂಕಿ, ಬೇಬಿ, ಡಾಲಿ ಇತ್ಯಾದಿ) ಇಡಬಾರದು. ಸಂಸ್ಕೃತವು ದೇವವಾಣಿ ಆಗಿರುವುದರಿಂದ ಸಾತ್ತ್ವಿಕತೆಯ ಲಾಭವಾಗಲು ಸಂಸ್ಕೃತ ಹೆಸರುಗಳನ್ನಿಡಬೇಕು.

೩. ಧರ್ಮಶಾಸ್ತ್ರದಲ್ಲಿ ಹೇಳಿದ ಹೆಸರುಗಳನ್ನೇಕೆ ಇಡಬೇಕು ?

ಧರ್ಮವು ಮನುಷ್ಯನ ಸರ್ವತೋಮುಖ, ಅಂದರೆ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಚಾರವನ್ನು ಮಾಡಿ ಅವನಿಗೆ ಒಂದು ಜೀವನಪದ್ಧತಿಯನ್ನು ನೀಡಿದೆ. ತದ್ವಿರುದ್ಧ ಆಧುನಿಕ ವಿಜ್ಞಾನವು ಕೇವಲ ಆಧಿಭೌತಿಕ ಬದಿಯ ವಿಚಾರವನ್ನು ಮಾಡುತ್ತದೆ. ವ್ಯಕ್ತಿಗೆ ಇಟ್ಟಿರುವ ಹೆಸರಿನ ಉಪಯೋಗವು ಕೇವಲ ವ್ಯವಹಾರವನ್ನು ಮಾಡಲು ಸುಲಭವಾಗಬೇಕು ಇಷ್ಟಕ್ಕೇ ಸೀಮಿತವಾಗಿಲ್ಲ. ಪ್ರತಿಯೊಂದು ಅಕ್ಷರದಲ್ಲಿ ವಿಶಿಷ್ಟ ಶಕ್ತಿ ಬೀಜರೂಪದಲ್ಲಿರುತ್ತದೆ. ವ್ಯಕ್ತಿಯ ಹೆಸರಿನಿಂದ ಅವನ ಮೇಲೆ ಆಧಿದೈವಿಕ ಸ್ತರದಲ್ಲಿ (ಸೂಕ್ಷ್ಮ-ಊರ್ಜೆಯ ಸ್ತರದಲ್ಲಿ) ಮತ್ತು ಆಧ್ಯಾತ್ಮಿಕ ಸ್ತರದಲ್ಲಿ (ಜೀವಾತ್ಮದ ಸ್ತರದಲ್ಲಿ) ಪರಿಣಾಮವಾಗುತ್ತದೆ. ಆದ್ದರಿಂದ ಯಾವ ಅಕ್ಷರ ಹೆಸರಿನ ಆರಂಭದಲ್ಲಿರಬೇಕು, ಮಧ್ಯದಲ್ಲಿರಬೇಕು ಅಥವಾ ಯಾವ ಅಕ್ಷರಗಳು ಹೆಸರಿನಲ್ಲಿ ಇರಬಾರದು, ಸ್ತ್ರೀಯರ ಮತ್ತು ಪುರುಷರ ಹೆಸರಿನಲ್ಲಿ ಎಷ್ಟು ಅಕ್ಷರಗಳಿರಬೇಕು, ಇವುಗಳ ಆಳವಾದ ವಿಚಾರವನ್ನು ಧರ್ಮಶಾಸ್ತ್ರದಲ್ಲಿ ಮಾಡಲಾಗಿದೆ. ಇದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಹೆತ್ತವರು ತಮ್ಮ ಮಕ್ಕಳ ಹೆಸರುಗಳನ್ನು ಧರ್ಮಶಾಸ್ತ್ರಕ್ಕನುಸಾರ ಇಡಲು ಪ್ರಯತ್ನಿಸಬೇಕು.

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೧೦.೨೦೨೨)

Leave a Comment