ಕಾಲಾನುಸಾರ ಆವಶ್ಯಕವಾಗಿರುವ ಸಪ್ತದೇವತೆಗಳ ನಾಮಜಪಗಳು

ಸುಶ್ರೀ ತೇಜಲ ಪಾತ್ರಿಕರ
ಸುಶ್ರೀ ತೇಜಲ ಪಾತ್ರಿಕರ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಈಗಿನ ಕಾಲಕ್ಕನುಸಾರ ಯಾವ ನಾಮಜಪವನ್ನು ಮಾಡಬೇಕು ?’ ಎಂಬುವುದರ ಬಗ್ಗೆ ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ವಿವಿಧ ನಾಮಜಪಗಳನ್ನು ಧ್ವನಿಮುದ್ರಣ ಮಾಡಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಸಂಗೀತ ಸಮನ್ವಯಕರಾದ ಸುಶ್ರೀ ತೇಜಲ ಪಾತ್ರಿಕರ (ಸಂಗೀತ ವಿಶಾರದೆ) ಇವರು ಪರಾತ್ಪರ ಗುರು ಡಾ. ಜಯಂತ ಅಠವಲೆ ಅವರ ಮಾರ್ಗದರ್ಶನದಲ್ಲಿ ನಾಮಜಪಗಳ ಧ್ವನಿಮುದ್ರಣ ಮಾಡಿದ್ದು ಅದನ್ನು ಈ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ ಆ್ಯಪ್‌ನಲ್ಲಿ ಎಲ್ಲರಿಗೂ ಲಭ್ಯ ಮಾಡಿಕೊಡಲಾಗಿದೆ. ಅವುಗಳಲ್ಲಿ ‘ಶ್ರೀ ಗಣೇಶಾಯ ನಮಃ |’, ‘ಓಂ ಗಂ ಗಣಪತಯೇ ನಮಃ |’, ‘ಓಂ ನಮೋ ಭಗವತೇ ವಾಸುದೇವಾಯ |’, ‘ಓಂ ನಮಃ ಶಿವಾಯ |’, ‘ಶ್ರೀ ಗುರುದೇವ ದತ್ತ |’, ‘ಶ್ರೀ ಹನುಮತೇ ನಮಃ |’, ‘ಶ್ರೀ ದುರ್ಗಾದೇವ್ಯೆ ನಮಃ |’, ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ |’ ಈ ಸಪ್ತದೇವತೆಗಳ ನಾಮಜಪ, ಹಾಗೆಯೇ ಯಾರಿಗೆ ಕುಲದೇವತೆ ತಿಳಿದಿಲ್ಲವೋ, ಅವರಿಗಾಗಿ ‘ಶ್ರೀ ಕುಲದೇವತಾಯೈ ನಮಃ |’ ಈ ನಾಮಜಪವನ್ನು ಸಹ ಸೇರಿಸಲಾಗಿದೆ. ಈ ನಾಮಜಪಗಳ ಮಹತ್ವ, ವೈಶಿಷ್ಟ್ಯಗಳು, ನಾಮಜಪವನ್ನು ಮಾಡುವ ಪದ್ಧತಿ ಮತ್ತು ದೇವತೆಯ ಜಪವು ಆಧ್ಯಾತ್ಮಿಕ ದೃಷ್ಟಿಯಲ್ಲಿ ಏಕೆ ಯೋಗ್ಯವಾಗಿರಬೇಕು? ಇವುಗಳ ಬಗ್ಗೆ ನಾವು ಇಲ್ಲಿ ಕೊಡುತ್ತಿದ್ದೇವೆ.

೧. ದೇವರ ನಾಮಜಪಿಸುವಾಗ ಉಚ್ಚಾರಣೆ ಅಧ್ಯಾತ್ಮಶಾಸ್ತ್ರದ ದೃಷ್ಟಿಯಲ್ಲಿ ಯೋಗ್ಯವಾಗಿರುವುದು ಏಕೆ ಆವಶ್ಯಕ ?

ಕಲಿಯುಗದಲ್ಲಿ ವಿವಿಧ ಉಪಾಸನಾಪದ್ಧತಿಗಳಲ್ಲಿ ಎಲ್ಲಕ್ಕಿಂತ ಸುಲಭವಾದ ಉಪಾಸನೆಯೆಂದರೆ ‘ದೇವರ ನಾಮಜಪ ಮಾಡುವುದು’. ದೇವತೆಗಳ ಬಗ್ಗೆ ಮನಸ್ಸಿನಲ್ಲಿ ಬಹಳಷ್ಟು ಭಾವ ನಿರ್ಮಾಣವಾದ ನಂತರ ದೇವತೆಯ ನಾಮಜಪ ಹೇಗೆ ಮಾಡಿದರೂ ಅದು ನಡೆಯುತ್ತದೆ; ಆದರೆ ಸಾಮಾನ್ಯ ಸಾಧಕನಿಗೆ ಅಂತಹ ಭಾವ ಇರುವುದಿಲ್ಲ. ಇದಕ್ಕಾಗಿ ದೇವತೆಯ ನಾಮಜಪದಿಂದ ದೇವತೆಯ ತತ್ವದ ಹೆಚ್ಚಿನ ಲಾಭವಾಗಲು ಆ ನಾಮಜಪದ ಉಚ್ಚಾರವು ಆಧ್ಯಾತ್ಮಿಕದೃಷ್ಟಿಯಲ್ಲಿ ಯೋಗ್ಯವಾಗಿರುವುದು ಆವಶ್ಯಕವಾಗಿರುತ್ತದೆ.

೨. ದೇವತೆಯ ನಾಮಜಪದ ಮಹತ್ವ

ಭಾವಪೂರ್ಣವಾಗಿ ಮತ್ತು ತಳಮಳದಿಂದ ನಾಮಜಪ ಮಾಡುವುದರಿಂದ ವ್ಯಕ್ತಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯು ನಿವಾರಣೆಯಾಗಬಹುದು. ಅನೇಕರಿಗೆ ಇದು ತಿಳಿಯದಿರುವುದರಿಂದ ಅವರು ಕೆಟ್ಟ ಶಕ್ತಿಗಳಿಂದಾಗುವ ತೊಂದರೆಯ ನಿವಾರಣೆಗಾಗಿ ತಾಂತ್ರಿಕರಲ್ಲಿ ಮೊರೆ ಹೋಗುತ್ತಾರೆ. ತಾಂತ್ರಿಕರು ಮಾಡಿದ ಉಪಾಯಯೋಜನೆಗಳು ತಾತ್ಕಾಲಿಕವಾಗಿರುತ್ತವೆ; ಹಾಗಾಗಿ ಸ್ವಲ್ಪ ಸಮಯದ ನಂತರ ಕೆಟ್ಟ ಶಕ್ತಿಗಳು ಪುನಃ ಆ ವ್ಯಕ್ತಿಗೆ ತೊಂದರೆ ನೀಡಲಾರಂಭಿಸುತ್ತವೆ, ಮಾತ್ರವಲ್ಲ ತಾಂತ್ರಿಕನಿಂದ ಮೋಸ ಹೋಗುವ ಅಪಾಯವೂ ಇರುತ್ತದೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಯನ್ನು ಜಯಿಸಲು ನಾಮಜಪ ಉಪಯುಕ್ತವಾಗಿದೆ.

೩. ‘ಸಪ್ತದೇವತೆಗಳ ನಾಮಜಪ’ಗಳ ಮಹತ್ವ

೩ ಅ. ಕಾಲಾನುಸಾರ ನಾಮಜಪಗಳ ನಿರ್ಮಿತಿ

ಕಾಲಾನುಸಾರವಾಗಿ ಯಾವುದೇ ಕೃತಿಯನ್ನು ಮಾಡಿದರೂ ಅದು ಹೆಚ್ಚು ಲಾಭದಾಯಕವಾಗಿರುತ್ತದೆ. ‘ಕಾಲಾನುಸಾರ ಜಪ ಮಾಡುವುದರಿಂದ ದೇವತೆಗಳ ತತ್ವವು ಹೇಗೆ ಹೆಚ್ಚು ಪ್ರಾಪ್ತವಾಗುತ್ತದೆ ?’ ಎಂದು ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿ ಈ ನಾಮಜಪಗಳ ಧ್ವನಿಮುದ್ರಣ ಮಾಡಲಾಗಿದೆ. ಇದಕ್ಕಾಗಿ ಸುಶ್ರೀ (ಕುಮಾರಿ) ತೇಜಲ ಪಾತ್ರೀಕರ ಅವರು ಪರಾತ್ಪರ ಗುರು ಡಾ. ಜಯಂತ ಅಠವಲೆ ಅವರ ಮಾರ್ಗದರ್ಶನದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ಅದರಿಂದ ಈ ನಾಮಜಪಗಳನ್ನು ಸಿದ್ಧಪಡಿಸಲಾಗಿದೆ. ಆದುದರಿಂದ ಈ ಜಪವನ್ನು ಮಾಡಿದರೆ ಪ್ರತಿಯೊಬ್ಬರಿಗೂ ಅವರ ಭಾವಕ್ಕನುಸಾರ ಕಾಲಾನುಸಾರ ಆವಶ್ಯಕವಿರುವ ಆಯಾ ದೇವತೆಯ ತತ್ವವನ್ನು ಪಡೆಯಲು ಸಹಾಯವಾಗುತ್ತದೆ.

೩ ಆ. ಕಾಲಾನುಸಾರ ಹೆಚ್ಚುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಎದುರಿಸಲು ಉಪಯುಕ್ತವಾದ ನಾಮಜಪ

೨೦೨೫ ನೇ ಇಸವಿಯಲ್ಲಿ ಸಾತ್ವಿಕ ಮತ್ತು ಆದರ್ಶವಾದ ‘ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯ) ಸ್ಥಾಪನೆಯಾಗಲಿದೆ. ‘ಹಾಗೆ ಆಗಬಾರದು’, ಎಂಬುದಕ್ಕಾಗಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ತಮ್ಮೆಲ್ಲ ಶಕ್ತಿಗಳನ್ನು ಒಗ್ಗೂಡಿಸಿ ಹೋರಾಡುತ್ತಿವೆ. ಇದರಿಂದ ಸಾಧಕರ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ತೊಂದರೆಗಳು ತುಂಬಾ ಹೆಚ್ಚಾಗುತ್ತಿವೆ. ಈ ನಾಮಜಪವು ಕಾಲಾನುಸಾರ ಪರಿಣಾಮಕಾರಿಯಾಗಿರುವುದರಿಂದ, ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಗಳಿಗೆ ಈ ನಾಮಜಪಗಳಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಉಪಾಯದ (ಉಪಚಾರದ) ದೃಷ್ಟಿಯಿಂದ ಉತ್ತಮ ಲಾಭವಾಗಬಹುದು.

೩ ಇ. ತೀವ್ರ ಅನಾರೋಗ್ಯವಿರುವವರಿಗೆ ಮತ್ತು ವಾಸ್ತುಶುದ್ಧಿಗಾಗಿಯೂ ನಾಮಜಪ ಲಾಭದಾಯಕ

ತೀವ್ರ ಅನಾರೋಗ್ಯವಿರುವ ವ್ಯಕ್ತಿಗಳು ತಾವಾಗಿಯೇ ನಾಮಜಪ ಮಾಡಲು ಸಾಧ್ಯವಾಗದಿದ್ದರೆ ಈ ನಾಮಜಪವನ್ನು ಕೇಳಿದರೂ ಅವರಿಗೆ ಲಾಭವಾಗುವುದು. ಪ್ರಸ್ತುತ ಕೆಟ್ಟ ಶಕ್ತಿಗಳ ಹೆಚ್ಚುತ್ತಿರುವ ಹಲ್ಲೆಯಿಂದಾಗಿ ವಾಸ್ತುವಿನ ಮೇಲೆಯೂ ಪರಿಣಾಮವಾಗಿ ಅದು ರಜ-ತಮದಿಂದ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಮಜಪವನ್ನು ಮನೆಯಲ್ಲಿ ದಿನವಿಡೀ ಹಾಕಿಟ್ಟರೆ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣದಲ್ಲಿಯೂ ಪ್ರಸನ್ನತೆ ಮೂಡಲು ಸಹಾಯವಾಗುತ್ತದೆ.

೩ ಈ. ಕುಲದೇವತೆಯು ತಿಳಿಯದವರಿಗೆ ‘ಶ್ರೀ ಕುಲದೇವತಾಯೈ ನಮಃ’ ಎಂಬ ನಾಮಜಪ ಲಭ್ಯ !

ಕುಲದೇವತೆಯು ಕುಲದ ತಾಯಿಯಾಗಿದ್ದಾಳೆ. ಸಾಧಕನ ಸಾಧನೆಯು ಕುಲದೇವತೆಯ ಉಪಾಸನೆಯಿಂದ ಪ್ರಾರಂಭವಾಗುತ್ತದೆ. ಅವಳ ಉಪಾಸನೆಯ ಮೂಲಕ ಮಾತ್ರ ಸಾಧಕನು ಸಾಧನೆ ಮಾಡುತ್ತಾ ಶ್ರೀ ಗುರುಗಳ ತನಕ ತಲುಪಬಹುದು. ಸನಾತನ ಸಂಸ್ಥೆಯಲ್ಲಿ ಪ್ರಾರಂಭದಲ್ಲಿ ಪ್ರತಿಯೊಬ್ಬರಿಗೂ ಅವರವರ ಕುಲದೇವತೆಯ ನಾಮಜಪ ಮಾಡುವ ಸಾಧನೆಯನ್ನು ಹೇಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರಿಗೆ ತಮ್ಮ ಕುಲದೇವತೆ ತಿಳಿದಿಲ್ಲ ಅಥವಾ ಅವರಿಗೆ ಹೇಳಲು ಕುಟುಂಬದಲ್ಲಿ ಹಿರಿಯರು ಯಾರೂ ಇಲ್ಲ. ಅಂತಹ ಸಮಯದಲ್ಲಿ ‘ಏನು ಮಾಡಬೇಕು ?’ ಎಂಬ ಪ್ರಶ್ನೆ ಅವರಿಗೆ ಎದುರಾಗಬಹುದು. ಆದುದರಿಂದ ಕುಲದೇವತೆಯು ತಿಳಿಯದವರಿಗೆ ‘ಶ್ರೀ ಕುಲದೇವತಾಯೈ ನಮಃ’ ಎಂಬ ನಾಮಜಪ ಲಭ್ಯವಿದೆ.

೩ ಉ. ನಾಮಜಪದ ಹಿಂದಿರುವ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ

‘ಜಗತ್ತಿನಾದ್ಯಂತ ಇರುವ ಸಾಧಕರ ಅಧ್ಯಾತ್ಮಿಕ ತೊಂದರೆಗಳು ಶೀಘ್ರದಲ್ಲಿ ದೂರವಾಗಬೇಕು. ಅದೇ ರೀತಿ ಅವರಿಗೆ ದೇವತೆಗಳ ತತ್ವದಿಂದ ಹೆಚ್ಚು ಹೆಚ್ಚು ಲಾಭವಾಗಬೇಕು’ ಎಂಬುದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ನಾಮಜಪಗಳ ನಿರ್ಮಿತಿಯನ್ನು ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರ ಪರೋಕ್ಷ ಸಂಕಲ್ಪ ಕಾರ್ಯನಿರತವಾಗಿರುವುದರಿಂದ ಸಾಧಕರು ಈ ನಾಮಜಪಕ್ಕನುಸಾರ ನಾಪಜಪವನ್ನು ಮಾಡಿದರೆ ಅವರ ತೊಂದರೆಗಳು ದೂರವಾಗಲು ಮತ್ತು ಅವರಿಗೆ ದೇವತೆಗಳ ತತ್ವದ ಲಾಭವಾಗಲು ಖಂಡಿತವಾಗಿಯೂ ಸಹಾಯವಾಗುತ್ತದೆ.

೪. ನಾಮಜಪವನ್ನು ಕೇಳುವ ಅಥವಾ ಮಾಡುವ ಪದ್ಧತಿ

ಅ. ಮೇಲೆ ಉಲ್ಲೇಖಿಸಿದ ಸಪ್ತ ದೇವತೆಗಳ ನಾಮಜಪವನ್ನು ಆರಂಭದಲ್ಲಿ, ಪ್ರತಿಯೊಂದನ್ನು ಅರ್ಧ ಗಂಟೆಗಳ ಕಾಲ ಕೇಳಬೇಕು ಅಥವಾ ಮಾಡಬೇಕು. ಆಧ್ಯಾತ್ಮಿಕ ಸಮಸ್ಯೆಗಳಿರುವವರಿಗೆ ಈ ಜಪಗಳ ಪೈಕಿ ಯಾವ ನಾಮಜಪವನ್ನು ಕೇಳಿದಾಗ ಹೆಚ್ಚು ತೊಂದರೆಯ ಅರಿವಾಗುತ್ತದೆಯೋ ಅವರು ಆಧ್ಯಾತ್ಮಿಕ ಮಟ್ಟದಲ್ಲಿ ಉಪಚಾರವೆಂದು ಉಪಾಯದ ಸಮಯದಲ್ಲಿ ಅಂತಹ ನಾಮಜಪವನ್ನು ಕೇಳಬೇಕು ಅಥವಾ ಮಾಡಬೇಕು.

ಆ. ಆಧ್ಯಾತ್ಮಿಕವಾಗಿ ತೊಂದರೆ ಇಲ್ಲದವರಿಗೆ, ಈ ನಾಮಜಪಗಳ ಪೈಕಿ ಯಾವುದನ್ನು ಕೇಳುವಾಗ ಅವರಿಗೆ ಹೆಚ್ಚು ಒಳ್ಳೆಯದೆನಿಸುತ್ತದೆಯೋ, ಅವರು ಸಾಧನೆಯೆಂದು ಆ ನಾಮಜಪವನ್ನು ಕೇಳಬೇಕು ಅಥವಾ ಮಾಡಬೇಕು.

೫. ನಾಮಜಪವನ್ನು ಹೇಳುವ ವೇಗ ಮತ್ತು ಎರಡು ಜಪಗಳ ನಡುವಿನ ಅಂತರ

‘ನಾಮಜಪ ಮಾಡುವಾಗ ಪ್ರತಿಯೊಂದು ಪದವನ್ನು ಉಚ್ಚರಿಸುವುದು ಹೇಗೆ ? ಅದರ ಅವಧಿ ಎಷ್ಟಿರಬೇಕು ಮತ್ತು ಹೇಳುವ ಪದ್ಧತಿ ಹೇಗಿರಬೇಕು ?’ ಈ ದೃಷ್ಟಿಯಿಂದ ಮತ್ತು ಭಾವಸಹಿತ ಹೇಳಿದ ಈ ನಾಮಜವನ್ನು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಧ್ವನಿಮುದ್ರಣ ಮಾಡಲಾಗಿದೆ. ಈ ನಾಮಜಪಗಳು ಪ್ರಾತಿನಿಧಿಕವಾಗಿವೆ. ನಾಮಜಪದ ವೇಗ ಮತ್ತು ಎರಡು ನಾಮಜಪಗಳ ನಡುವಿನ ಅಂತರವು ವ್ಯಕ್ತಿಗನುಸಾರ ಬದಲಾಗಬಹುದು.

೫ ಅ. ನಾಮಜಪ ಹೇಳುವ ವೇಗ

ಮನುಷ್ಯನ ನಾಮಜಪದ ವೇಗವು ಅವನ ಪ್ರಕೃತಿಗನುಸಾರ ಇರುತ್ತದೆ. ನಾವು ರಚಿಸಿದ ಎಲ್ಲಾ ನಾಮಜಪಗಳು ಮಧ್ಯಮ ವೇಗದ್ದಾಗಿವೆ. ವೇಗವಾಗಿ ಜಪ ಮಾಡಬಯಸುವವರು ಜಪ ಮಾಡುವ ವಿಧಾನದಲ್ಲಿ ವೇಗವಾಗಿ ಜಪಿಸಬೇಕು; ಆದರೆ ಜಪ ಮಾಡುವ ಪದ್ಧತಿ ಮಾತ್ರ ಬದಲಾಗಬಾರದು. ‘ವ್ಯಕ್ತಿಗಳೆಷ್ಟೊ ಅಷ್ಟೇ ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗಗಳು’, ಇದು ಸಾಧನೆಯ ಸಿದ್ಧಾಂತವಾಗಿರುವುದರಿಂದ ನೀವು ಯಾವ ವೇಗದಿಂದ ಜಪಿಸಿದಾಗ ಭಾವವು ಹೆಚ್ಚು ಜಾಗೃತವಾಗುತ್ತದೆಯೋ ಆ ವೇಗದಿಂದ ನಾಮಜಪ ಮಾಡಬೇಕು.

೫ ಆ. ಎರಡು ನಾಮಜಪಗಳ ನಡುವಿನ ಅಂತರ

‘ಒಂದು ನಾಮಜಪದ ನಂತರ ಅದೇ ನಾಮಜಪವನ್ನು ಕೇಳುವ ಮೊದಲು ಆ ನಡುವಿನಲ್ಲಿ ಎಷ್ಟು ಅಂತರವಿರಬೇಕು ?’ ಈ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಮಾರ್ಗದರ್ಶನ ಮಾಡುತ್ತಾ, “ವ್ಯಕ್ತಿಯ ಪ್ರಕೃತಿಗನುಸಾರ ಎರಡು ಜಪಗಳ ನಡುವಿನ ಅಂತರ ಹೆಚ್ಚು-ಕಡಿಮೆ ಇರಬಹುದು. ಆದ್ದರಿಂದ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ನಾಮಜಪವನ್ನು ಹೇಳುವಾಗ ಅಂತರವನ್ನು ಬದಲಾಯಿಸಬಹುದು”, ಎಂದಿದ್ದಾರೆ. ಧ್ವನಿಮುದ್ರಣ ಮಾಡಿದ ನಾಮಜಪದಲ್ಲಿ ಸರ್ವಸಾಮಾನ್ಯ ಅಂತರವನ್ನು ಇಡಲಾಗಿದೆ.

ಸನಾತನ ಸಂಸ್ಥೆಯಲ್ಲಿಯೂ ಈ ರೀತಿಯಾಗಿ ಸೂಕ್ಷ್ಮದ ಕಡೆಗೆ ಒಯ್ಯುವಂತಹ ಅಧ್ಯಯನವನ್ನು ಕಲಿಸಲಾಗುತ್ತದೆ. ಆದ್ದರಿಂದಲೇ ಸನಾತನದ ಸಾಧಕರು ಇತರ ಸಂಪ್ರದಾಯಗಳ ತುಲನೆಯಲ್ಲಿ ಶೀಘ್ರವಾಗಿ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ.

– ಸುಶ್ರೀ ತೇಜಲ ಪಾತ್ರೀಕರ (ಸಂಗೀತ ವಿಶಾರದೆ), ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧೨.೨೦೨೧)

೧. ನಾಮಜಪಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ !

೨. ‘ಸನಾತನ ಚೈತನ್ಯವಾಣಿ’ ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ !

 

Leave a Comment