ಆನ್‌ಲೈನ್ ಸತ್ಸಂಗ (6)

ನಾಮಜಪದಿಂದ ವ್ಯಕ್ತಿಯ ಶಕ್ತಿ ಮತ್ತು ಸಕಾರಾತ್ಮಕತೆಯು ಹೆಚ್ಚಾಗುವುದು

ಎಲ್ಲ ಸಂತರೂ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ. ನಿಮ್ಮ ಪೈಕಿ ಹಲವರು ನಾಮಸ್ಮರಣೆಯಿಂದ ಮನಸ್ಸು ಶಾಂತ ಹಾಗೂ ಸ್ಥಿರವಾಯಿತು ಎಂಬುದನ್ನು ಅನುಭವಿಸಿರಬಹುದು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ. ಆಠವಲೆ ಇವರು ಸರ್ವೇಸಾಮಾನ್ಯರಿಗೆ ತಿಳಿಯುವಂತೆ ಸರಳ ಸುಲಭ ಭಾಷೆಯಲ್ಲಿ ಅಮೂಲ್ಯ ಜ್ಞಾನವನ್ನು ಕೊಟ್ಟಿದ್ದಾರೆ. ನಾಮಸ್ಮರಣೆಯಿಂದ ವ್ಯಕ್ತಿಗೆ ಏಕೆ ಉತ್ಸಾಹವೆನಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ವ್ಯಕ್ತಿಯಲ್ಲಿ ಒಟ್ಟು ಶೇ. ೧೦೦ ಶಕ್ತಿಯಿದೆ ಎಂದು ಭಾವಿಸಿದರೆ ಅದರಲ್ಲಿನ ಶೇ ೭೦ ರಷ್ಟು ಶಕ್ತಿಯು ಶರೀರ ಮತ್ತು ಲಿಂಗದೇಹದ ಕ್ರಿಯಗಳಿಗೆ ವ್ಯಯವಾಗುತ್ತದೆ, ಶೇ. ೩೦ ರಷ್ಟು ಕುಂಡಲಿನಿ ಶಕ್ತಿಯಾಗಿರುತ್ತದೆ. ಶೇ. ೭೦ ರ ಪೈಕಿ ಸ್ಥೂಲದೇಹದಿಂದ ಆಗುವ ಐಚ್ಛಿಕ ಹಾಗೂ ಅನೈಚ್ಛಿಕ ಕ್ರಿಯೆಗಳಿಗೆ ಶೇ. ೨೦ ಶಕ್ತಿಯ ಉಪಯೋಗವಾಗುತ್ತದೆ, ಮನಸ್ಸು-ಚಿತ್ತ-ಬುದ್ಧಿ ಮತ್ತು ಅಹಂ ಈ ಲಿಂಗದೇಹದ ವ್ಯವಹಾರಗಳಿಗೆ ಶೇ. ೫೦ ಶಕ್ತಿ ಉಪಯೋಗವಾಗುತ್ತದೆ. ಸಂಕ್ಷಿಪ್ತವಾಗಿ ವ್ಯಕ್ತಿಯ ಒಟ್ಟು ಶೇ ೧೦೦ ಶಕ್ತಿಯಲ್ಲಿನ ಶೇ. ೨೦ ಶಕ್ತಿಯು ಶಾರೀರಿಕ ಸಂಗತಿಗಳಿಗಾಗಿ ಮತ್ತು ಶೇ. ೫೦ ಶಕ್ತಿ ಮಾನಸಿಕ ಸಂಗತಿಗಳಿಗಾಗಿ ಉಪಯೋಗವಾಗುತ್ತದೆ, ಶೇ. ೩೦ ರಷ್ಟಿರುವ ಕುಂಡಲಿನಿ ಶಕ್ತಿಯು ಸುಪ್ತವಾಗಿರುತ್ತದೆ. ನಾಮಸ್ಮರಣೆಯಿಂದ ವ್ಯಕ್ತಿಯ ಮನಸ್ಸಿನಲ್ಲಿನ ಅನಾವಶ್ಯಕ, ನಕಾರಾತ್ಮಕ, ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಇದರಿಂದ ವಿಚಾರಗಳಲ್ಲಿ ವ್ಯಯವಾಗುವ ಶಕ್ತಿಯು ಉಳಿಯುತ್ತದೆ ಹಾಗೂ ನಾಮಜಪದಿಂದ ಕುಂಡಲಿನಿ ಜಾಗೃತವಾಗುವ ದಿಶೆಯಲ್ಲಿ ಪ್ರಯಾಣವಾಗುವುದರಿಂದ ಸುಪ್ತಾವಸ್ಥೆಯಲ್ಲಿರುವ ಶಕ್ತಿಯೂ ಜಾಗೃತವಾಗತೊಡಗುತ್ತದೆ. ಹೀಗಾಗಿ ನಾಮಸ್ಮರಣೆ ಮಾಡುವುದರಿಂದ ಉತ್ಸಾಹ, ಸಕಾರಾತ್ಮಕ, ಸ್ಥಿರ, ಶಾಂತ ಎನಿಸುವುದು ಈ ವಿಧದ ಅನುಭೂತಿಗಳು ಬರುತ್ತವೆ.

ಈಗ ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗುವುದಕ್ಕಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

ಅ. ಪ್ರಾರ್ಥನೆ ಮಾಡುವುದು

ನಾಮಜಪ ಅಥವಾ ಯಾವುದೇ ಸತ್ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ಒಂದು ಮಹತ್ವದ ಅಂಶವೆಂದರೆ ದೇವರಲ್ಲಿ ಪ್ರಾರ್ಥನೆ ಮಾಡುವುದು ! ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿ ಯಾಚಕವೃತ್ತಿ ನಿರ್ಮಾಣವಾಗಿ ನಮ್ಮ ಅಹಂಕಾರ ಕಡಿಮೆಯಾಗಲು ಸಹಾಯವಾಗುತ್ತದೆ. ನಾಮಜಪವನ್ನು ಮಾಡುವ ಮೊದಲು ನಮ್ಮ ಉಪಾಸ್ಯದೇವತೆಯಲ್ಲಿ – ‘ಹೇ ಪ್ರಭು, ನಾನು ನಾಮಜಪ ಮಾಡಲು ಆರಂಭಿಸುತ್ತಿದ್ದೇನೆ. ನೀವೇ ನನ್ನಿಂದ ಈ ನಾಮಜಪವನ್ನು ಮಾಡಿಸಿಕೊಳ್ಳಿ. ಈ ನಾಮಜಪವು ನನ್ನಿಂದ ಒಳ್ಳೆಯ ರೀತಿಯಲ್ಲಿ ಆಗಲಿ, ಇದರಲ್ಲಿ ಯಾವುದೇ ವಿಘ್ನ ಬಾರದಿರಲಿ’ ಎಂದು ಪ್ರಾರ್ಥನೆ ಮಾಡಬೇಕು. ದೇವರಲ್ಲಿ ಶರಣಾಗತ ಭಾವದಿಂದ ಪ್ರಾರ್ಥನೆ ಮಾಡಿದ ನಂತರ ನಾಮಜಪವು ಆಗುವುದರಲ್ಲಿನ ವಿಘ್ನಗಳು ದೂರವಾಗಿ ನಾಮಜಪವು ಒಳ್ಳೆಯ ರೀತಿಯಲ್ಲಿ ಆಗಲು ಸಹಾಯವಾಗುತ್ತದೆ.

ಆ. ನಾಮವನ್ನು ಶ್ವಾಸಕ್ಕೆ ಜೋಡಿಸುವುದು

ನಾಮಜಪವು ಏಕಾಗ್ರತೆಯಿಂದ ಆಗಲು ಅದನ್ನು ನಮ್ಮ ಶ್ವಾಸದ ವೇಗದೊಂದಿಗೆ ಜೋಡಿಸಲು ಪ್ರಯತ್ನ ಮಾಡಬಹುದು. ನಾವು ಶ್ವಾಸದಿಂದಲೇ ಜೀವಂತರಾಗಿರುತ್ತೇವೆ; ಆದ್ದರಿಂದ ಶ್ವಾಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಪ್ರಾರಂಭದಲ್ಲಿ ಶಾಂತವಾಗಿ ಕುಳಿತು ನಮ್ಮ ಶ್ವಾಸದ ಮೇಲೆ ಗಮನವನ್ನು ಏಕಾಗ್ರಗೊಳಿಸಬೇಕು ಮತ್ತು ನಂತರ ನಾಮಜಪವನ್ನು ಶ್ವಾಸಕ್ಕೆ ಜೋಡಿಸಲು ಪ್ರಯತ್ನಿಸಬೇಕು. ಉದಾಹರಣೆಗೆ, ಶ್ರೀ ಗುರುದೇವ ದತ್ತ | ಎಂದು ನಾಮಜಪವನ್ನು ಮಾಡುತ್ತಿದ್ದರೆ ಶ್ವಾಸವನ್ನು ಒಳಗೆ ತೆಗೆದುಕೊಳ್ಳುವಾಗ ‘ಶ್ರೀ ಗುರುದೇವ’ ಎಂದು ಹೇಳಿ ಶ್ವಾಸವನ್ನು ಹೊರಬಿಡುವಾಗ ‘ದತ್ತ’ ಎಂದು ಹೇಳಬಹುದು. ನಾವು ನಮ್ಮ ಶ್ವಾಸದ ವೇಗಕ್ಕನುಸಾರವಾಗಿ ನಾಮಜಪವನ್ನು ಮಾಡಲು ಪ್ರಯತ್ನಿಸಬಹುದು. ಯಾರ ನಾಮಜಪವು ತಂತಾನೇ ಆಗುತ್ತಿದೆಯೋ ಅವರು ಶ್ವಾಸಕ್ಕೆ ಜೋಡಿಸುವ ಆವಶ್ಯಕತೆಯಿಲ್ಲ. ನಮ್ಮ ಶರೀರದಲ್ಲಿ ನಡೆಯುತ್ತಿರುವ ಶ್ವಾಸವೇ ಆಖಂಡವಾಗಿ ನಡೆಯುತ್ತಿರುವುದರ ಅರಿವು ಆಗುತ್ತಿರುವುದರಿಂದ ನಮ್ಮ ನಾಮಜಪವೂ ಅಖಂಡವಾಗಿ ಆಗಬೇಕೆಂಬುವುದಕ್ಕಾಗಿ ಅದನ್ನು ಶ್ವಾಸೋಚ್ಛ್ವಾಸದ ಕ್ರಿಯೆಗೆ ಜೋಡಿಸಲು ಪ್ರಯತ್ನ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ವಾಸದ ವೇಗಕ್ಕೆ ನಾಮಜಪವನ್ನು ಜೋಡಿಸಬೇಕು. ನಾಮಜಪಕ್ಕನುಸಾರ ಶ್ವಾಸದ ವೇಗವನ್ನು ಹೆಚ್ಚು-ಕಡಿಮೆ ಮಾಡಬಾರದು.

ಇ. ವೇಗವಾಗಿ ನಾಮಜಪಿಸುವುದು

ನಾಮಜಪವನ್ನು ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಬರುತ್ತಿದ್ದಲ್ಲಿ ನಾಮಜಪವನ್ನು ವೇಗವಾಗಿ ಮಾಡಬಹುದು. ಜಪವನ್ನು ವೇಗವಾಗಿ ಮಾಡಿದರೆ ಗಮನವು ಅದರ ಮೇಲೆ ಕೇಂದ್ರೀಕೃತವಾಗಲು ಸಹಾಯವಾಗುತ್ತದೆ. ಮುಂದೆ ಮನಸ್ಸು ಜಪದ ಮೇಲೆ ಕೇಂದ್ರಿತಗೊಳ್ಳತೊಡಗಿತೆಂದರೆ ಹಂತಹಂತವಾಗಿ ಜಪದ ವೇಗವನ್ನು ಕಡಿಮೆ ಮಾಡಬೇಕು. ಕೊನೆಗೆ ಶ್ವಾಸೋಚ್ಛ್ವಾಸದ ವೇಗಕ್ಕೆ ಜಪದ ವೇಗವನ್ನು ಜೋಡಿಸಬೇಕು. ಜಪದ ವೇಗವು ಶ್ವಾಸದ ವೇಗಕ್ಕಿಂತಲೂ ಕಡಿಮೆಯಾದರೆ ಅದು ಒಳ್ಳೆಯದೇ. ಜಪಕ್ಕೆ ಒಂದು ಲಯ/ತಾಳಬದ್ಧತೆ ಬಂತೆಂದರೆ ಅದು ಇನ್ನೂ ಚೆನ್ನಾಗಿ ಆಗಬಹುದು.

ಈ. ದಶಾಪರಾಧವಿರಹಿತ ನಾಮಜಪವನ್ನು ಮಾಡುವುದು

ನಾಮಜಪವನ್ನು ಮಾಡುವಾಗ ನಮ್ಮ ನಡೆ-ನುಡಿಗಳೆಡೆ ಗಮನ ಕೊಡುವುದೂ ಆವಶ್ಯಕವಿದೆ. ನಾವು ಒಂದೆಡೆ ನಾಮಜಪವನ್ನು ಮಾಡುತ್ತಿದ್ದೇವೆ ಮತ್ತು ಇನ್ನೊಂದೆಡೆ ಜನರ ಜೊತೆ ದುರಹಂಕಾರದಿಂದ ವರ್ತಿಸುತ್ತಿದ್ದೇವೆ, ಇತರರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡುತ್ತಿದ್ದೇವೆ ಎಂದಾದರೆ ನಾಮಜಪದಿಂದ ಏನಾದರೂ ಲಾಭವಾಗುವುದೇ ? ಆದ್ದರಿಂದಲೇ ನಾಮಜಪವು ದಶಾಪರಾಧವಿರಹಿತವಾಗಿರಬೇಕು ಎಂದು ಹೇಳಲಾಗಿದೆ. ಅಂದರೆ ನಾಮಜಪವನ್ನು ಮಾಡುವಾಗ ನಮ್ಮ ವರ್ತನೆಯು ಸದ್ವರ್ತನೆಯಾಗಿರಬೇಕು. ಸಾಧುನಿಂದನೆ ಮಾಡುವುದು, ಗುರುಜನರ ಅವಮಾನ ಮಾಡುವುದು, ವೇದ-ಶಾಸ್ತ್ರ-ಪುರಾಣಗಳ ನಿಂದನೆ ಮಾಡುವುದು, ನಾಮದ ಬಲದ ಮೇಲೆ ಪಾಪಾಚರಣೆ ಮಾಡುವುದು ಇವು ದಶಾಪರಾಧಗಳ ಪೈಕಿ ಕೆಲವು ಅಪರಾಧಗಳಾಗಿವೆ.

ನಾಮಧಾರಕನು (ನಾಮ ಜಪಿಸುವವನು) ಅಪರಾಧಗಳ ಈ ಕುಪಥ್ಯಗಳಿಂದ ದೂರವಿರಬೇಕು. ಇಲ್ಲದಿದ್ದರೆ ಆ ಅಪರಾಧಗಳ ಪರಿಮಾರ್ಜನೆಯಲ್ಲಿ ಎಲ್ಲ ಸಾಧನೆಯು ವ್ಯರ್ಥವಾಗಿ ಹೋಗುತ್ತದೆ ಮತ್ತು ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಉದಾಹರಣೆಗೆ, ಒಂದು ಕೆಟ್ಟು ಮಾತು ಬೈದರೆ ಮೂವತ್ತು ಮಾಲೆ ಜಪ, ಲಂಚ ತೆಗೆದುಕೊಂಡರೆ ಐನೂರು ಮಾಲೆ ಜಪ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಸಾಧನೆ ಮಾಡುವಾಗ ಕೇವಲ ನಾಮಸಾಧನೆ ಮಾಡಿದರೆ ಸಾಲದು, ನಮ್ಮ ಅಯೋಗ್ಯ ಅಭ್ಯಾಸಗಳನ್ನು, ಸ್ವಭಾವದ ದೋಷಗಳನ್ನು ಮತ್ತು ಅಹಂಕಾರವನ್ನು ಹೋಗಲಾಡಿಸಲು ಪ್ರಯತ್ನ ಮಾಡುವುದೂ ಮಹತ್ವದ್ದಾಗಿದೆ.

ಉ. ಆದಷ್ಟು ಹೆಚ್ಚು  ನಾಮಜಪ ಮಾಡುವುದು

ನಾಮಜಪದ ಸಂಸ್ಕಾರವು ಮನಸ್ಸಿನಲ್ಲಿ ಮೂಡಬೇಕೆಂಬುವುದಕ್ಕಾಗಿ ನಾವು ಅದನ್ನು ನಮ್ಮ ದೈನಂದಿನ ಕೃತಿಗಳಿಗೆ ಜೋಡಿಸಿಕೊಂಡು ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಉದಾ: ಗೃಹಿಣಿಯರು ಅಡುಗೆ ಮಾಡುವಾಗ ನಾಮಜಪವನ್ನು ಮಾಡಬಹುದು. ನಾಮಜಪವನ್ನು ಮಾಡುತ್ತ ಆಡುಗೆ ಮಾಡಿದರೆ ಅದರಲ್ಲಿ ಸಾತ್ತ್ವಿಕತೆಯು ನಿರ್ಮಾಣವಾಗಿ ಅದನ್ನು ಗ್ರಹಿಸುವವರಿಗೂ ಅದರ ಲಾಭವಾಗಬಹುದು. ಸ್ನಾನ ಮಾಡುವಾಗ, ವೈಯಕ್ತಿಕ ಕಾರ್ಯಗಳನ್ನು ಮಾಡುವಾಗ, ಮೊಬೈಲ್ ಅಥವಾ ಟಿ.ವಿ. ನೋಡುವಾಗ ನಾಮಜಪ ಮಾಡಬಹುದು. ಯಾರಾದರೂ ನೌಕರಿಗೆಂದು ಹೊರಹೋಗುತ್ತಿದ್ದರೆ ಪ್ರಯಾಣ ಮಾಡುವಾಗ, ತರಕಾರಿ ತರಲು ಹೋದಾಗ ನಾಮಜಪವನ್ನು ಮಾಡಬಹುದು. ಪ್ರತಿದಿನ ರಾತ್ರಿ ಮಲಗುವ ಮೊದಲು ೫ ನಿಮಿಷ ನಾಮಜಪ ಮಾಡಬಹುದು.

ಅನ್ಯ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಸುಲಭ ಉತ್ತರ ಎಂದರೆ ಪ್ರತ್ಯಕ್ಷ ಮಾಡಿ ನೋಡುವುದು. ವ್ಯವಹಾರದಲ್ಲಿಯೂ ನಾವು ೩-೪ ಕೆಲಸಗಳನ್ನು ಕುಶಲತೆಯಿಂದ ಒಟ್ಟಿಗೆ ಮಾಡಬಹುದು ಮತ್ತು ಕೆಲವೊಮ್ಮೆ ಮಾಡುತ್ತಿರುತ್ತೇವೆ. ನಾವು ರಸ್ತೆಯಲ್ಲಿ ನಡೆಯುತ್ತಿದ್ದೇವೆ ಎಂದು ತಿಳಿದುಕೊಳ್ಳೋಣ, ಆಗ ನಾವು ಅಕ್ಕ-ಪಕ್ಕ ನೋಡುತ್ತಿರುತ್ತೇವೆ, ಹಾರ್ನ್ ಶಬ್ದ ಕೇಳಿಸಿದರೆ ಅದನ್ನು ಕೇಳಿ ಪಕ್ಕಕ್ಕೆ ಸರಿಯುತ್ತೇವೆ, ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿರುವ ಅಂಗಡಿಗಳ ಕಡೆಯೂ ನಮ್ಮ ಗಮನವಿರುತ್ತದೆ, ನಾವು ಯಾರೊಂದಿಗಾದರೂ ಮಾತನಾಡುತ್ತಿರುತ್ತೇವೆ ಅಥವಾ ಮನೆಗೆ ಹೋದ ನಂತರ ಏನು ಮಾಡುವುದಿದೆ ಎಂಬುದರ ಬಗ್ಗೆ ಮನಸ್ಸಿನಲ್ಲಿ ನಿರ್ಧರಿಸುತ್ತಿರುತ್ತೇವೆ. ಇದೆಲ್ಲವನ್ನೂ ಒಂದೇ ಸಮಯದಲ್ಲಿ ನಾವು ಮಾಡಬಲ್ಲೆವು ಎಂದರೆ ದೈನಂದಿನ ಕೃತಿಗಳಿಗೆ ಜೋಡಿಸಿ ನಾಮಜಪವನ್ನೂ ಮಾಡುವುದು ಸಾಧ್ಯವಾಗುವುದು. ಆರಂಭದಲ್ಲಿ ನಾವು ಈ ನಾಮಜಪವನ್ನು ಪ್ರಯತ್ನಪೂರ್ವಕವಾಗಿಯೂ ನಿಗ್ರಹದಿಂದಲೂ ಮಾಡಬೇಕಾಗುವುದು. ಒಮ್ಮೆ ನಾಮಜಪದ ಸಂಸ್ಕಾರವಾಯಿತೆಂದರೆ ನಾಮಜಪವು ಸಹಜವಾಗಿಯೂ ಅಖಂಡವಾಗಿಯೂ ನಡೆಯುವುದು ಸಾಧ್ಯವಿದೆ.ಸ

Leave a Comment