ಆನ್‌ಲೈನ್ ಸತ್ಸಂಗ (1)

ಸಾಧನೆಯ ಮಹತ್ವದ ಸಿದ್ಧಾಂತ : ವ್ಯಕ್ತಿಯಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗಗಳು!

ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಹೀಗೆ ಸಾಧನೆಗಾಗಿ ಅನೇಕ ಯೋಗಮಾರ್ಗಗಳಿವೆ. ಪ್ರತಿಯೊಬ್ಬರ ಪ್ರಕೃತಿಗನುಸಾರ (ಸ್ವಭಾವ) ಅವನ ಮೋಕ್ಷಪ್ರಾಪ್ತಿಯ ಮಾರ್ಗ ಸಹ ಬೇರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಅಥವಾ ಒಂದೇ ಮಾರ್ಗದಿಂದ ಉಪಾಸನೆ ಮಾಡುವ ಆಗ್ರಹವು ಅಯೋಗ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಒಂದೇ ಕುಟುಂಬದಲ್ಲಿ ಸಹ ಎಲ್ಲರೂ ಬೇರೆಬೇರೆ ಪ್ರಕೃತಿಯವರು ಅಂದರೆ ಬೇರೆ ಬೇರೆ ಮಾರ್ಗಗಳಿಂದ ಸಾಧನೆಯನ್ನು ಮಾಡುವವರಿರಬಹುದು. ಉದಾಹರಣೆಗಾಗಿ ನನಗೆ ದೇವರ ಮೇಲೆ ಬಹಳ ಶ್ರದ್ಧೆಯಿದೆ ಮತ್ತು ನನಗೆ ಭಗವಂತನ ಬಗ್ಗೆ ಅಪಾರ ಸೆಳೆತವಿದೆ ಎಂದಾದರೆ ನಾನು ಭಕ್ತಿಮಾರ್ಗಿಯಾಗಿದ್ದೇನೆ. ನನ್ನ ತಂದೆಯವರು ಭಗವದ್ಗೀತೆಯ ಅಧ್ಯಯನ ಮಾಡಿದ್ದಾರೆ. ಅವರಿಗೆ ಧಾರ್ಮಿಕ ಗ್ರಂಥಗಳ ವಾಚನದ ಮತ್ತು ಚಿಂತನ-ಮನನ ಮಾಡುವ ಆಸಕ್ತಿಯಿದೆ ಅಂದರೆ ಅವರು ಜ್ಞಾನಮಾರ್ಗಿಯಾಗಿದ್ದಾರೆ. ನನ್ನ ಪತಿ / ಪತ್ನಿಗೆ ಸಹಜವಾಗಿ ಧ್ಯಾನ ತಗಲುತ್ತದೆ ಅಂದರೆ ಅವರು ಧ್ಯಾನಮಾರ್ಗಿಗಳಾದರು. ಅಂದರೆ ಪ್ರತಿಯೊಬ್ಬನ ಪ್ರಕೃತಿ ಮತ್ತು ಸಾಧನಾಮಾರ್ಗವು ಬೇರೆಯಾಗಿದೆ. ಇಂತಹ ಸಂದರ್ಭದಲ್ಲಿ ನಾನು ‘ಜ್ಞಾನಮಾರ್ಗವನ್ನು ಅನುಸರಿಸುವ ತಂದೆಯವರನ್ನು ನೀವು ‘ಫೀಲ್ಡ್’ (ಕ್ಷೇತ್ರಕ್ಕಿಳಿದು) ಅಂದರೆ ಪ್ರತ್ಯಕ್ಷ ರಸ್ತೆಗಿಳಿದು ಹಿಂದುತ್ವದ ಕಾರ್ಯವನ್ನು ಮಾಡಿರಿ’ ಎಂದು ಹೇಳಿದರೆ ಅವರಿಗೆ ಅದನ್ನು ಮಾಡಲು ಸಾಧ್ಯವಿದೆಯೇ? ಅಥವಾ ಕರ್ಮಮಾರ್ಗದ ಮಗನಿಗೆ ನೀನು ಪ್ರತಿದಿನ ಧ್ಯಾನ ಮಾಡು ಎಂದು ಹೇಳಿದರೆ ಅದು ಅವನಿಂದ ಸಾಧ್ಯವಾದೀತೇ ? ಆದರೆ ಪ್ರತಿಯೊಬ್ಬರೂ ತನ್ನ ಪ್ರಕೃತಿಯಂತೆ ಸಾಧನೆಯನ್ನು ಮಾಡಿದರೆ ಅವರ ಸಾಧನೆಯು ಮನಃಪೂರ್ವಕವಾಗಿ ಆಗುವುದು; ಆದ್ದರಿಂದ ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟು ಸಾಧನಾಮರ್ಗಗಳು ಎಂದು ಹೇಳಲಾಗಿದೆ.

ಪ್ರತಿಯೊಬ್ಬನ ಮಾರ್ಗವು ಬೇರೆಯಾಗಿದ್ದರೂ ಪ್ರಕೃತಿಗನುಗುಣವಾಗಿರುವ ಸಾಧನಾ ಮಾರ್ಗದ ಜೊತೆಯಲ್ಲಿಯೇ ಎಲ್ಲಾ ಸಾಧನಾ ಮಾರ್ಗಗಳಲ್ಲಿರುವ ಸರ್ವಸಮಾವೇಶಕ ಯೋಗ್ಯ ಸಾಧನೆಯನ್ನು ಮಾಡಿದರೆ ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಉನ್ನತಿ ಆಗುವುದು. ಅಂತೆಯೇ ಯಾವ ಮಾರ್ಗದಿಂದ ಸಾಧನೆ ಮಾಡಿದರೂ ಗುರುಕೃಪೆಯಿದ್ದರೆ ಮಾತ್ರ ಉನ್ನತಿಯಾಗುತ್ತದೆ. ಇದಕ್ಕಾಗಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ಕೊಡುವ ಸರ್ವಸಮಾವೇಶಕ ಗುರುಕೃಪಾಯೋಗವನ್ನು ಹೇಳಿದ್ದಾರೆ. ಗುರುಕೃಪಾಯೋಗ ಎಂಬುದು ಸಾಂಪ್ರದಾಯಿಕ ಪದವಲ್ಲ. ಅಧ್ಯಾತ್ಮದಲ್ಲಿ ಪ್ರಗತಿ ಹೊಂದಬೇಕಾದರೆ ಗುರುಕೃಪೆಯೇ ಆಗಬೇಕು. ‘ಗುರುಕೃಪಾ’ ಎಂಬ ಪದವು ಈ ದೃಷ್ಟಿಯಿಂದ ಇದೆ. ಗುರುಕೃಪಾಯೋಗದಲ್ಲಿ ಜ್ಞಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸೊಗಸಾದ ಸಂಗಮವಿದೆ.

‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟು ಸಾಧನಾಮಾರ್ಗಗಳು’ ಎಂಬ ಸಿದ್ಧಾಂತವನ್ನು ತಿಳಿದುಕೊಂಡ ನಂತರ ಈಗ ನಾವು ಗುರುಕೃಪಾಯೋಗದ ಪ್ರಮುಖ ತತ್ತ್ವಗಳು ಯಾವುವು, ಪ್ರತ್ಯಕ್ಷ ಸಾಧನೆಯನ್ನು ಪ್ರಾರಂಭಿಸುವಾಗ ಯಾವ ಸಂಗತಿಗಳನ್ನು ಗಮನಿಸಬೇಕು ಎಂದು ತಿಳಿದುಕೊಳ್ಳೋಣ. ಹೆಚ್ಚಿನ ಜನರಿಗೆ ಸಾಧನೆಯ ತತ್ತ್ವಗಳು ತಿಳಿದಿಲ್ಲ. ಹಾಗಾಗಿ ಅಯೋಗ್ಯ ಸಾಧನೆಯನ್ನು ಮಾಡುವುದರಲ್ಲಿ ಜೀವನದ ಸಮಯವು ವ್ಯರ್ಥವಾಗುವ ಸಾಧ್ಯತೆಯಿರುತ್ತದೆ. ಸಾಧನೆಯನ್ನು ಮಾಡಿ ಅವರಿಗೆ ತಮ್ಮಲ್ಲಿ ನಿರೀಕ್ಷಿತ ಪರಿವರ್ತನೆ ಕಂಡುಬರದ ಕಾರಣ ಅವರು ಸಾಧನೆಯನ್ನು ಮಧ್ಯದಲ್ಲಿಯೇ ಬಿಟ್ಟು ಬಿಡುವ ಸಾಧ್ಯತೆಯೂ ಇರುತ್ತದೆ. ‘ನಾನು ದೇವರದ್ದು ಇಷ್ಟೊಂದು ಮಾಡಿದೆ, ಆದರೂ ಇಂತಹ ಒಂದು ಪ್ರಸಂಗ ನನ್ನ ಜೀವನದಲ್ಲಿ ಏಕೆ ಘಟಿಸಿತು?’ ಎಂಬಂತಹ ಅಯೋಗ್ಯ ವಿಚಾರಪ್ರಕಿಯೆ ನಡೆಯುವ ಅಪಾಯವೂ ಇರುತ್ತದೆ. ಹೀಗಾಗಬಾರದೆಂದು ನಾವು ಸಾಧನೆಯ ಕೆಲವು ಮೂಲಭೂತ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಳ್ಳುವುದು ಆವಶ್ಯಕವಿದೆ.

ಸಾಧನೆಯ ತತ್ವಗಳು

ಆಸಕ್ತಿ ಮತ್ತು ಕ್ಷಮತೆಗನುಸಾರ ಸಾಧನೆ

ಸಾಧನೆಯ ಮೊದಲನೆಯ ತತ್ತ್ವವೆಂದರೆ ಆಸಕ್ತಿ ಮತ್ತು ಕ್ಷಮತೆಗನುಸಾರ ಸಾಧನೆ. ಈ ಜಗತ್ತಿನಲ್ಲಿ ಯಾವುದೇ ಇಬ್ಬರು ವ್ಯಕ್ತಿಗಳು ಸಮಾನರಾಗಿರುವುದಿಲ್ಲ (ಒಂದೇ ರೀತಿಯಿರುವುದಿಲ್ಲ). ಪ್ರತಿಯೊಬ್ಬನ ಶರೀರ, ಮನಸ್ಸು, ಬುದ್ಧಿ, ಇಷ್ಟ-ಅನಿಷ್ಟಗಳು, ಗುಣ-ದೋಷಗಳು, ಆಸೆ-ಆಕಾಂಕ್ಷೆಗಳು, ವಾಸನೆಗಳು, ಸಂಚಿತ-ಪ್ರಾರಬ್ಧ ಎಲ್ಲವೂ ಬೇರೆ ಬೇರೆಯಾಗಿರುತ್ತದೆ. ಮನುಷ್ಯನ ದೇಹವು ಯಾವ ಪಂಚತತ್ತ್ವಗಳಿಂದ ರೂಪುಗೊಂಡಿದೆಯೋ ಆ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವುಗಳೂ ಪ್ರತಿಯೊಬ್ಬನಲ್ಲಿ ಬೇರೆಬೇರೆಯಾಗಿವೆ. ಸಂಕ್ಷಿಪ್ತವಾಗಿ, ಪ್ರತಿಯೊಬ್ಬರೂ ಬೇರೆ ಬೇರೆ ಪ್ರಕೃತಿ ಹಾಗೂ ಕ್ಷಮತೆಯವರಾಗಿರುವ ಕಾರಣ ಸಾಧನಾಮಾರ್ಗಗಳೂ ಬೇರೆ ಬೇರೆಯಾಗಿವೆ.

ಆಸಕ್ತಿ ಮತ್ತು ಕ್ಷಮತೆಗನುಸಾರ ಸಾಧನೆಯೆಂದರೆ ನಾವು ಏನು ಮಾಡಬಲ್ಲೆವೋ ಅದನ್ನು ಈಶ್ವರನ ಚರಣಗಳಲ್ಲಿ ಅರ್ಪಿಸುವುದು, ಅಂದರೆ ಆ ಮಾಧ್ಯಮದಿಂದ ಸಾಧನೆ ಮಾಡುವುದು. ನಮ್ಮ ಪ್ರಕೃತಿ ಮತ್ತು ಕ್ಷಮತೆಗನುಗುಣವಾಗಿ ಸಾಧನೆ ಮಾಡಿದರೆ ಬೇಗನೆ ಈಶ್ವರಪ್ರಾಪ್ತಿಯಾಗಲು ಸಹಾಯವಾಗುತ್ತದೆ. ಉದಾಹರಣೆಗೆ ಯಾರಾದರೊಬ್ಬರ ಧ್ವನಿಯು ಉತ್ತಮವಾಗಿದ್ದರೆ, ಅವರಿಗೆ ಹಾಡಲು ಆಸಕ್ತಿಯಿದ್ದರೆ ಅವರಿಗೆ ಶ್ರೀಕೃಷ್ಣನ ಚಿತ್ರವನ್ನು ಬಿಡಿಸು ಎಂದು ಹೇಳಿದರೆ ಅವರಿಂದ ಅದು ಸಾಧ್ಯವಾಗುವುದೇ? ಅದರ ಬದಲಿಗೆ ‘ಶ್ರೀಕೃಷ್ಣನ ಕುರಿತು ಹಾಡನ್ನು ಹಾಡು’ ಅಥವಾ ‘ಹಾಡುಗಾರಿಕೆಯ ಮಾಧ್ಯಮದಿಂದ ಕೃಷ್ಣನನ್ನು ಓಲೈಸು / ಪ್ರಾರ್ಥಿಸು’ ಎಂದು ಹೇಳಿದರೆ ಅವರು ಅದನ್ನು ಹೆಚ್ಚು ಮನಃಪೂರ್ವಕವಾಗಿ ಮಾಡಬಲ್ಲರು. ಒಬ್ಬನಲ್ಲಿ ತಂತ್ರಜ್ಞಾನದ ಕೌಶಲ್ಯವಿದ್ದರೆ ಆತನು ‘ಫೇಸ್ ಬುಕ್’, ‘ಟ್ವಿಟರ್’, ‘ಈ ಮೇಲ್’ ಇವುಗಳನ್ನು ಉತ್ತಮವಾಗಿ ಬಳಸಬಲ್ಲನು. ಇಂತಹ ವ್ಯಕ್ತಿಗೆ ಆತನ ಕೌಶಲ್ಯಕ್ಕನುಗುಣವಾದ ಸಾಧನೆಯನ್ನು ಹೇಳಿದರೆ, ಉದಾ.’ಸೋಶಿಯಲ್ ಮೀಡಿಯ’ದಂತಹ ಮಾಧ್ಯಮದಿಂದ ಸಮಾಜದಲ್ಲಿ ಅಧ್ಯಾತ್ಮ ಪ್ರಸಾರವನ್ನು ಮಾಡಲು ಹೇಳಿದರೆ, ಆತನು ಅದನ್ನು ಹೆಚ್ಚು ಮನಃಪೂರ್ವಕವಾಗಿ ಮಾಡುವನೋ ಅಥವಾ ಅಧ್ಯಾತ್ಮದ ಗ್ರಂಥಗಳ ಅಧ್ಯಯನ ಮಾಡಲು ಹೇಳಿದರೆ ಅದನ್ನು ಇಷ್ಟಪಟ್ಟು ಮಾಡುವನೋ? ಇದಕ್ಕೆ ಉತ್ತರ? ಸಹಜವಾಗಿಯೇ ಆತನು ‘ಸೋಶಿಯಲ್ ಮೀಡಿಯಾ’ ಮಾಧ್ಯಮದಿಂದ ಅಧ್ಯಾತ್ಮ ಪ್ರಸಾರ ಎಂದೇ ಇರುವುದು. ಸಂಕ್ಷಿಪ್ತವಾಗಿ ವ್ಯಕ್ತಿಯ ಆಸಕ್ತಿ ಮತ್ತು ಕ್ಷಮತೆಗನುಸಾರ ಸಾಧನೆ ಮಾಡಿದರೆ ಆಧ್ಯಾತ್ಮಿಕ ಪ್ರಗತಿಯು ಬೇಗನೇ ಆಗುತ್ತದೆ.

‘ಅನೇಕದಿಂದ ಏಕ’ಕ್ಕೆ ಹೋಗುವುದು

ಸಾಧನೆಯ ಎರಡನೆಯ ತತ್ತ್ವವೆಂದರೆ ಅನೇಕದಿಂದ ಏಕಕ್ಕೆ ಹೋಗುವುದು. ಪರಮೇಶ್ವರನು ಒಬ್ಬನೇ, ಮತ್ತು ಈ ಜಗತ್ತಿನಲ್ಲಿರುವುದೆಲ್ಲವೂ ಅನೇಕ-ಅನೇಕವಿದೆ. ಈ ಎಲ್ಲವುಗಳಿಂದ, ಅರ್ಥಾತ್ ಅನೇಕಗಳಿಂದ ನಾವು ಒಬ್ಬ ಪರಮೇಶ್ವರನೆಡೆ ಹೋಗಬೇಕಾಗಿದೆ. ಇದನ್ನು ಸತತವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

1. ದೇವತೆಗಳ ಉಪಾಸನೆ

ಯಾವ ಕುಲದ ಕುಲದೇವತೆಯು, ಎಂದರೆ ಕುಲದೇವ ಅಥವಾ ಕುಲದೇವಿಯು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಅತ್ಯಂತ ಉಪಯುಕ್ತವಾಗಿರುತ್ತಾಳೆಯೋ ಅಂತಹ ಕುಲದಲ್ಲಿಯೇ ಭಗವಂತನು ನಮ್ಮನ್ನು ಜನ್ಮಕ್ಕೆ ಹಾಕಿದ್ದಾನೆ. ಆದ್ದರಿಂದ ಹಲವು ದೇವತೆಗಳ ಉಪಾಸನೆ ಮಾಡುವುದಕ್ಕಿಂತ ಒಬ್ಬ ಕುಲದೇವತೆಯ ಉಪಾಸನೆ ಮಾಡುವುದು ಹೆಚ್ಚು ಶ್ರೇಯಸ್ಕರವಾಗಿದೆ. ಒಬ್ಬ ವ್ಯಕ್ತಿಯು ಅನೇಕ ದೇವತೆಗಳ ಉಪಾಸನೆಯನ್ನು ಮಾಡುತ್ತಿರುತ್ತಾನೆ. ಉದಾಹರಣೆಗೆ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗುತ್ತಾನೆ, ಗುರುವಾರ ಗುರುಚರಿತ್ರೆಯ ಪಾರಾಯಣ ಮಾಡುತ್ತಾನೆ, ಶುಕ್ರವಾರ ಮಹಾಲಕ್ಷ್ಮಿಯ ವ್ರತವನ್ನು ಮಾಡುತ್ತಾನೆ, ಸೋಮವಾರ ಉಪವಾಸ ಮಾಡುತ್ತಾನೆ. ಗುರುಗೀತೆಯನ್ನು ಓದುತ್ತಾನೆ, ಭಗವದ್ಗೀತೆಯ ಪಾರಾಯಣ ಮಾಡುತ್ತಾನೆ. ದೇವತೆಗಳ ಉಪಾಸನೆಯನ್ನು ಮಾಡುವುದು ಒಳ್ಳೆಯದೇ ಆಗಿದೆ; ಆದರೆ ಅದಕ್ಕಿಂತ ಹೆಚ್ಚು ಒಳ್ಳೆಯದು ಯಾವುದು? ಅದು ಒಬ್ಬ ಕುಲದೇವತೆ ಅಥವಾ ಇಷ್ಟದೇವತೆಯ ಉಪಾಸನೆ ಮಾಡುವುದು. ಇದಕ್ಕೆ ಕಾರಣವೇನೆಂದರೆ ಅಧ್ಯಾತ್ಮದಲ್ಲಿ ಏಕನಿಷ್ಠೆ ಇರಬೇಕು. ಇದು ‘ಅನೇಕದಿಂದ ಏಕಕ್ಕೆ’ ಎಂಬ ತತ್ತ್ವಕ್ಕೆ ಹೊಂದುತ್ತದೆ.

ಎರಡನೆಯ ವಿಷಯವೆಂದರೆ ಅಧ್ಯಾತ್ಮದಲ್ಲಿ ನಮ್ಮ ಇಷ್ಟ-ಕಷ್ಟಗಳಿಗೆ ಮಹತ್ವವಿಲ್ಲ. ಒಂದು ವೇಳೆ ಕ್ಷಯರೋಗವಾಗಿರುವ ವ್ಯಕ್ತಿಯೊಬ್ಬನು ‘ನನಗೆ ಸಲ್ಫಾ’ ಮಾತ್ರೆಯನ್ನು ಕಂಡರೆ ಇಷ್ಟ, ಪೆನಿಸಿಲಿನ್ ಇಂಜೆಕ್ಷನ್ ಇಷ್ಟ ಎಂದು ಅದನ್ನು ತೆಗೆದುಕೊಳ್ಳುತ್ತೇನೆ ಎಂದರೆ ಅದರಿಂದ ಅವನಿಗೆ ಏನೂ ಲಾಭವಾಗುವಾಗುವುದಿಲ್ಲ. ಏಕೆಂದರೆ ಅವುಗಳಿಂದ ಕ್ಷಯರೋಗದ ಕ್ರಿಮಿಗಳು ಸಾಯುವುದಿಲ್ಲ. ಅದಕ್ಕೆ ‘ಆಯ್ಸೊನೆಕ್ಸ್’ ಎಂಬ ಔಷಧಿಯನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೂಡ ಹಾಗೆಯೇ. ‘ನನಗೆ ಗಣಪತಿ ಇಷ್ಟ ಅಥವಾ ಸಾಯಿಬಾಬಾ ಇಷ್ಟ’ ಇವುಗಳಂತಹ ಇಷ್ಟಾನಿಷ್ಟಗಳಿಂದ ಅಧ್ಯಾತ್ಮದಲ್ಲಿ ವಿಶೇಷ ಲಾಭ ಸಿಗುವುದಿಲ್ಲ. ಇಷ್ಟಾನಿಷ್ಟಗಳನ್ನು ಮೀರಿ ಶಾಸ್ತ್ರಕ್ಕನುಸಾರ ಸಾಧನೆ ಮಾಡಿದರೆ ಮಾತ್ರ ಬೇಗನೇ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

2. ದೇವರ ಕೋಣೆ

ಅನೇಕದಿಂದ ಏಕಕ್ಕೆ ಎಂಬ ತತ್ತ್ವವು ದೇವರ ಕೋಣೆಗೂ ಅನ್ವಯಿಸುತ್ತದೆ. ಬಹಳಷ್ಟು ಕಡೆ ನಾವು ನೋಡುವುದೇನೆಂದರೆ ದೇವರ ಕೋಣೆಯಲ್ಲಿ 8-10 ಅಥವಾ ಅದಕ್ಕಿಂತಲೂ ಹೆಚ್ಚು ದೇವತೆಗಳ ಮೂರ್ತಿಗಳಿರುತ್ತವೆ. ಕೆಲವೊಮ್ಮೆ ಒಂದೇ ದೇವತೆಯ ಒಂದಕ್ಕಿಂತ ಹೆಚ್ಚು ಮೂರ್ತಿಗಳೂ ಇರುತ್ತವೆ, ಉದಾಹರಣೆಗೆ, ಕೊಳಲನ್ನೂದುವ ಮುರಲೀಧರ ಶ್ರೀಕೃಷ್ಣನ ಮೂರ್ತಿಯಿರುತ್ತದೆ ಮತ್ತು ಆಶೀರ್ವಾದ ಮುದ್ರೆಯಲ್ಲಿರುವ ಶ್ರೀಕೃಷ್ಣನ ಮೂರ್ತಿಯಿರುತ್ತದೆ ಅಥವಾ ಬಾಲಕೃಷ್ಣನ ಮೂರ್ತಿಯಿರುತ್ತದೆ. ಅಥವಾ ಶಿವಲಿಂಗವಿರುತ್ತದೆ ಮತ್ತು ಶಂಕರನ ಯಾವುದಾದರೊಂದು ಚಿತ್ರವೂ ಇರುತ್ತದೆ. ಬಹಳಷ್ಟು ಬಾರಿ ಯಾವುದಾದರೊಂದು ತೀರ್ಥಕ್ಷೇತ್ರಕ್ಕೆ ಅಥವಾ ಧಾರ್ಮಿಕ ಸ್ಥಳಕ್ಕೆ ಹೋಗಿ ಬಂದಾಗ ಅಲ್ಲಿಂದ ದೇವತೆಯ ಮೂರ್ತಿಯನ್ನು ತಂದು ದೇವರ ಕೋಣೆಯಲ್ಲಿ ಇಡಲಾಗುತ್ತದೆ. ಇದರಿಂದ ದೇವರ ಕೋಣೆಯಲ್ಲಿ ದೇವತೆಗಳ ಮೂರ್ತಿಗಳ ಅಥವಾ ಪ್ರತಿಮೆಗಳ ಸಂಖ್ಯೆಯು ಹೆಚ್ಚು ಇರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇವತೆಯ ಒಂದು ಮೂರ್ತಿಯಿಂದ ಯಾವ ತತ್ತ್ವವು ಸಿಗುತ್ತದೆಯೋ ಅದೇ ತತ್ತ್ವವು ಎರಡನೆಯ ಮೂರ್ತಿಯಿಂದಲೂ ಸಿಗುತ್ತದೆ. ದೇವತೆಗಳ ಸಂಖ್ಯೆ ಹೆಚ್ಚು ಇದ್ದರೆ ದೇವತೆಯ ತತ್ತ್ವವು ಹೆಚ್ಚು ಸಿಗುತ್ತದೆ ಎಂಬುದಿಲ್ಲ. ಇದನ್ನು ಗಮನದಲ್ಲಿಡಬೇಕು.

ಶಾಸ್ತ್ರಕ್ಕನುಸಾರ ದೇವರ ಕೋಣೆಯಲ್ಲಿ ಶ್ರೀ ಗಣಪತಿ, ಕುಲದೇವತೆ, ಕುಲಾಚಾರಕ್ಕನುಸಾರವಾದ ಬಾಲಕೃಷ್ಣ, ಹನುಮಂತ ಮತ್ತು ಅನ್ನಪೂರ್ಣಾದೇವಿ ಈ ದೇವತೆಗಳು ಮತ್ತು ಶಿವ, ಶ್ರೀದುರ್ಗಾ  ದೇವಿ ಇಂತಹ ಯಾವುದಾದರೊಂದು ದೇವತೆಯ ಉಪಾಸನೆಯನ್ನು ಮಾಡುತ್ತಿದ್ದರೆ ಆ ದೇವತೆಯ ಪ್ರತಿಮೆ ಇಷ್ಟು ಮಾತ್ರ ಇರಬೇಕು.

ದೇವರಕೋಣೆಯ ರಚನೆ ಹೇಗಿರಬೇಕು? ದೇವರ ಕೋಣೆಯ ಮಧ್ಯಭಾಗದಲ್ಲಿ ಗಣಪತಿಯ ಚಿತ್ರ ಅಥವಾ ಮೂರ್ತಿಯನ್ನು ಇಡಬೇಕು. ನಾವು ಮನುಷ್ಯರು ಮಾತನಾಡುವುದು ಎಲ್ಲವೂ ಶಬ್ದಗಳಲ್ಲಿರುತ್ತದೆ. ಅದು ನಾದಭಾಷೆಯಾಗಿದೆ, ಆದರೆ ದೇವತೆಗಳದ್ದು ಪ್ರಕಾಶಭಾಷೆ ಅಗಿರುತ್ತದೆ. ನಮ್ಮ ನಾದಭಾಷೆಯನ್ನು ದೇವತೆಗಳ ಪ್ರಕಾಶಭಾಷೆಗೆ ಮತ್ತು ದೇವತೆಗಳ ಪ್ರಕಾಶಭಾಷೆಯನ್ನು ನಮ್ಮ ನಾದಭಾಷೆಗೆ ತರ್ಜುಮೆ ಮಾಡುವ ಕಾರ್ಯವನ್ನು ಗಣಪತಿಯು ಮಾಡುತ್ತಾನೆ. ದೇವರ ಕೋಣೆಯಲ್ಲಿ ನಮ್ಮ ಬಲಬದಿಗೆ ಸ್ತ್ರೀದೇವತೆಗಳ, ಉದಾಹರಣೆಗೆ ಅನ್ನಪೂರ್ಣೆ, ಕುಲದೇವಿ ಇವುಗಳ ಚಿತ್ರಗಳನ್ನು ಅಥವಾ ಮೂರ್ತಿಗಳನ್ನು ಒಂದರ ಹಿಂದೆ ಒಂದು ಹೀಗೆ ಇಡಬೇಕು ಮತ್ತು ನಮ್ಮ ಎಡಬದಿಗೆ ಪುರುಷ ದೇವತೆಗಳ ಉದಾಹರಣೆಗೆ ಬಾಲಕೃಷ್ಣ, ಮಾರುತಿ ಇವರ ಚಿತ್ರಗಳನ್ನು ಅಥವಾ ಮೂರ್ತಿಗಳನ್ನು ಒಂದರ ಹಿಂದೆ ಒಂದು ಇಡಬೇಕು. ಈ ರಚನೆಯು ‘ಕೋನ್’ ನಂತಿರಬೇಕು.

ಈಗ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಬರಬಹುದು – ದೇವರ ಕೋಣೆಯಲ್ಲಿ ಈಗಾಗಲೇ ಹೆಚ್ಚು ಮೂರ್ತಿಗಳು / ಪ್ರತಿಮೆಗಳಿದ್ದರೆ ಅವುಗಳನ್ನು ಏನು ಮಾಡಬೇಕು? ಹೆಚ್ಚುವರಿಯಾಗಿರುವ ಮೂರ್ತಿಗಳು ಕಲ್ಲಿನದ್ದು ಅಥವಾ ಹಿತ್ತಾಳೆಯದ್ದಾಗಿದ್ದಲ್ಲಿ ಅವುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಮೂರ್ತಿಗಳು ಮರದ್ದಾಗಿದ್ದಲ್ಲಿ ಅವುಗಳನ್ನು ಅಗ್ನಿಯಲ್ಲಿ ವಿಸರ್ಜನೆ / ಸಮರ್ಪಣೆ ಮಾಡಬೇಕು.

ದೇವರ ಕೋಣೆಯಲ್ಲಿ ದೇವತೆಗಳ ರಚನೆಯ ಬಗ್ಗೆ ಸನಾತನ ಸಂಸ್ಥೆಯು ‘ದೇವರಕೋಣೆ ಮತ್ತು ಪೂಜೆಯ ಉಪಕರಣಗಳು’ ಎಂಬ ಗ್ರಂಥವನ್ನು ಪ್ರಕಾಶಿಸಿದೆ. ಈ ಗ್ರಂಥದಲ್ಲಿ ದೇವರ ಕೋಣೆ ಮತ್ತು ಪೂಜೆಯಲ್ಲಿನ ಸಾಮಗ್ರಿಗಳ ಶಾಸ್ತ್ರೀಯ ಮಾಹಿತಿಯನ್ನು ಸವಿಸ್ತಾರವಾಗಿ ಕೊಡಲಾಗಿದೆ. ಈ ಗ್ರಂಥವು www.sanatanshop.com ಈ ಜಾಲತಾಣದಲ್ಲಿ ಮಾರಾಟಕ್ಕೆ ಉಪಲಬ್ಧವಿದೆ.

ಸ್ಥೂಲಕ್ಕಿಂತ ಸೂಕ್ಷ್ಮವು ಸಾಮರ್ಥ್ಯಶಾಲಿ !

ಸ್ಥೂಲದಿಂದ ಸೂಕ್ಷ್ಮದೆಡೆಗೆ ಹೋಗುವುದು : ಅಧ್ಯಾತ್ಮದಲ್ಲಿ ಸ್ಥೂಲದ ಆಗುಹೋಗುಗಳಿಗಿಂತ ಸೂಕ್ಷ್ಮದಲ್ಲಿನ ಕೃತಿಗಳೆಡೆ ಹೋಗುವುದಕ್ಕೆ ಮಹತ್ವವಿದೆ. ಇದನ್ನು ತಿಳಿದುಕೊಳ್ಳಲು ನಾವು ಸ್ಥೂಲ ಮತ್ತು ಸೂಕ್ಷ್ಮ ಎಂದರೆ ಏನು ಎಂಬುದನ್ನು ನೋಡೋಣ. ಸ್ಥೂಲ ಎಂದರೆ ನಮ್ಮ ಪಂಚಜ್ಞಾನೇಂದ್ರಿಯಗಳಿಗೆ ಅಂದರೆ ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿ ಇವುಗಳಿಗೆ ಅರಿವಾಗುವಂತಹದ್ದು ಮತ್ತು ಸೂಕ್ಷ್ಮ ಎಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳಿಗೆ ಮೀರಿರುವ ಸಂವೇದನೆ! ಸ್ಥೂಲಕ್ಕಿಂತ ಸೂಕ್ಷ್ಮವು ಶ್ರೇಷ್ಠ ಎಂಬುವುದು ಅಧ್ಯಾತ್ಮದಲ್ಲಿನ ಒಂದು ಮಹತ್ತ್ವದ ತತ್ತ್ವವಾಗಿದೆ. ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಸಾಧಾರಣ ಬಾಂಬ್‌ಗಿಂತ ಅಣುಬಾಂಬ್ ಮತ್ತು ಅಣುಬಾಂಬ್ ಗಿಂತ ಪರಮಾಣುಬಾಂಬ್ ಹೆಚ್ಚು ಶಕ್ತಿಶಾಲಿಯಾಗಿರುವಂತೆ ಸ್ಥೂಲಕ್ಕಿಂತ ಸೂಕ್ಷ್ಮದಲ್ಲಿ ಹೆಚ್ಚು ಶಕ್ತಿಯಿರುತ್ತದೆ. ನಾವು ಮಹಾಭಾರತ, ರಾಮಾಯಣ ಈ ಗ್ರಂಥಗಳಲ್ಲಿ ಅಥವಾ ಈ ಗ್ರಂಥಗಳನ್ನಾಧಾರಿಸಿರುವ ಧಾರಾವಾಹಿಗಳಲ್ಲಿ ನೋಡಿದ್ದೇವೆ – ಸಾಮಾನ್ಯ ಬಾಣಗಳು ನಿರುಪಯುಕ್ತವಾದಾಗ ಮಂತ್ರವನ್ನು ಹೇಳಿ ಅಥವಾ ದೇವತೆಯ ಸ್ಮರಣೆ ಮಾಡಿ ಬಾಣವನ್ನು ಬಿಡುತ್ತಿದ್ದರು. ಇಂತಹ ಬಾಣವು ಹೆಚ್ಚು ಪ್ರಭಾವಶಾಲಿಯಾಗಿರುತ್ತಿತ್ತು. ಅಧ್ಯಾತ್ಮದ ಸಂದರ್ಭದಲ್ಲಿ ವಿಚಾರ ಮಾಡಿದರೆ ಈಶ್ವರನು ಅಥವಾ ಈಶ್ವರನ ತತ್ತ್ವವು ಸೂಕ್ಷ್ಮತಮವಾದುದು ಎಂದರೆ ಅತಿ ಹೆಚ್ಚು ಸೂಕ್ಷ್ಮವಾದುದಾಗಿದೆ; ಹೀಗಿರುವಾಗ ನಾವು ಜೀವನವಿಡೀ ಸ್ಥೂಲ ಮೂರ್ತಿಯ ಅಥವಾ ಚಿತ್ರದ ಪೂಜೆಯನ್ನೇ ಮಾಡುತ್ತಿದ್ದರೆ ಆ ಸೂಕ್ಷ್ಮತಮ ಈಶ್ವರೀ ತತ್ತ್ವವನ್ನು ಹೇಗೆ ತಲುಪುವೆವು ? ಸ್ಥೂಲದಿಂದ ಸೂಕ್ಷ್ಮದೆಡೆ ಪ್ರಯಾಣ ಮಾಡುವುದಕ್ಕಾಗಿ ಜಿಜ್ಞಾಸುಗಳು ಸ್ಥೂಲ ಪೂಜೆಯ ಜೊತೆಗೆ ಮಾನಸಪೂಜೆಯನ್ನು ಮಾಡಬೇಕು. ದೇಹದಿಂದ ದೇವಸ್ಥಾನಕ್ಕೆ ಅಥವಾ ತೀರ್ಥಯಾತ್ರೆಗೆ ಹೋಗುವುದಕ್ಕಿಂತ ಮನಸ್ಸಿನಿಂದ ಹೋಗಲು ಪ್ರಯತ್ನಿಸಬೇಕು. ಹೀಗೆ ಸೂಕ್ಷ್ಮದ ಸಾಧನೆಯನ್ನು ಮಾಡುವ ಅಭ್ಯಾಸವಾದರೆ ಒಂದು ದಿನ ನಾವು ಸೂಕ್ಷ್ಮತಮ ತತ್ತ್ವದವರೆಗೂ ಖಂಡಿತ ತಲುಪುವೆವು.

Leave a Comment