ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಗಾಲ್ಯಾಂಡ್ ರಾಣಿ ಗೈಡಿನ್ಲು

ನಾಗಾಲ್ಯಾಂಡ್‌ನ ರಾಣಿ ಗೈಡಿನ್ಲು ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ದೇಶ ಸ್ವತಂತ್ರವಾದ ನಂತರ ಮಿಶನರಿಗಳ ಮತ್ತು ಭಾರತದಿಂದ ಸ್ವತಂತ್ರರಾಗಲು ಪ್ರಯತ್ನಿಸಿದ ನಾಗಾ ಬಂಡುಕೋರರ ಚಟುವಟಿಕೆಗಳ ವಿರುದ್ಧವೂ ಅವರು ಹೋರಾಡಿದರು. ಭಾರತೀಯ ಅಸ್ಮಿತೆ ಮತ್ತು ಸಂಸ್ಕೃತಿಯೊಂದಿಗೆ ತನ್ನ ಸಂಬಂಧವನ್ನು ಕಾಪಾಡಿಕೊಕೊಂಡು ಬಂದ ಈ ರಾಣಿಯ ಬಗ್ಗೆ ತಿಳಿದುಕೊಳ್ಳೋಣ.

ಗೈಡಿನ್ಲು ಅವರು ಜನವರಿ 26, 1915 ರಂದು ನಾಗಾಲ್ಯಾಂಡ್-ಮಣಿಪುರ ಗಡಿಯಲ್ಲಿರುವ ತಮ್‌ಗಾಂಗ್ಲಾಗ್ ಜಿಲ್ಲೆಯ ರುಗ್ಮಾಯಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣದ ಬಳಿಕ ಗೈಡಿನ್ಲು ತನ್ನ 13 ನೇ ವಯಸ್ಸಿನಲ್ಲಿ ಕ್ರಾಂತಿಕಾರಿ ಜಾದೋನಾಂಗ್ ರವರ ಸಂಪರ್ಕದಲ್ಲಿ ಬಂದಳು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಕ್ರಾಂತಿಕಾರಿಗಳಲ್ಲಿ ಈ ಜಾದೋನಾಂಗ್ ರವರನ್ನು ಎಣಿಸಲಾಗುತ್ತದೆ.

16 ವರ್ಷದ ಬಾಲಕಿ ಸ್ವಾತಂತ್ರ್ಯದ ವಿಚಾರದಿಂದ ಸ್ಫೂರ್ತಿ ಪಡೆದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುವುದು 

ಮಣಿಪುರ ಮತ್ತು ಅಸ್ಸಾಂನ ಕೆಲವು ಭಾಗಗಳಿಂದ ಬ್ರಿಟಿಷರನ್ನು ಹಿಂದೆ ಸರಿಸಬೇಕು ಎಂದು ಜಾದೋನಾಂಗ್ ಅವರ ಕ್ರಾಂತಿಕಾರಿಗಳ ಗುಂಪು ಸಕ್ರಿಯವಾಗಿತ್ತು. ಮಣಿಪುರ-ನಾಗಾಲ್ಯಾಂಡ್‌ನಲ್ಲಿ ಅವರು ಬ್ರಿಟಿಷರಿಗೆ ದೊಡ್ಡ ಸವಾಲನ್ನು ಒಡ್ಡಿದರು. ಕಂಡಕಂಡಲ್ಲಿ ಜನರು ದಂಗೆ ಎಬ್ಬಿಸಿದರು. ಬ್ರಿಟಿಷರು ಜಾದೋನಾಂಗ್ ರವರನ್ನು ಸೆರೆಹಿಡಿದು ಆಗಸ್ಟ್ 29, 1931 ರಂದು ಇಂಫಾಲ್‌ನಲ್ಲಿ ಗಲ್ಲಿಗೇರಿಸಿದರು. ಆಗ ಗೈಡಿನ್ಲುಗೆ ಕೇವಲ 16 ವರ್ಷ ವಯಸ್ಸು. ಈ ಘಟನೆಯಿಂದ ಸ್ವಾತಂತ್ರ್ಯದ ಪ್ರೇರಣೆ ಪಡೆದ ಅವಳು ಆಂಗ್ಲರ ಆಡಳಿತದ ವಿರುದ್ಧ ಅವರು ಭಾರತ ಬಿಟ್ಟು ತೊಲಗುವ ತನಕ ಹೋರಾಡುತ್ತಲೇ ಇದ್ದಳು.

ಸ್ವಾತಂತ್ರ್ಯಕ್ಕಾಗಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ತೀವ್ರವಾಗಿ ಹೋರಾಡಿ ಗೈಡಿನ್ಲು

ಗೈಡಿನ್ಲು ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಅಲ್ಲಲ್ಲಿ ಆಂದೋಲನಗಳನ್ನು ಮತ್ತು ಅಸಹಕಾರ ಚಳವಳಿಗಳನ್ನು ಪ್ರಾರಂಭಿಸಿಲಾಯಿತು. ಸಾರಿಗೆ ಮಾರ್ಗವಿಲ್ಲದ ಅತ್ಯಂತ ದುರ್ಗಮ ಪ್ರದೇಶಗಳು  ಅವು! ಕೆಲವೊಮ್ಮೆ ಕಾಲ್ನಡಿಗೆಯಲ್ಲಿ, ಮತ್ತೆ ಕೆಲವೊಮ್ಮೆ ಕೋಣನ ಹಾಗೆ ಕಾಣಿಸುವ ಸಾಕುಪ್ರಾಣಿಗಳ ಮೇಲೆ ಕುಳಿತು ಈ 16ರ ಯುವತಿ ಬ್ರಿಟಿಷರ ವಿರುದ್ದ ದೊಡ್ಡ ಹೋರಾಟವನ್ನು ನಡೆಸಿದಳು. ಅವಳ ವಿರುದ್ಧ ಬ್ರಿಟಿಷರು ವಾರಂಟ್ ಹೊರಡಿಸಿದ್ದರು. ಗೈಡಿನ್ಲು ಅಸ್ಸಾಂ ರೈಫಲ್ಸ್ ವಿರುದ್ಧ ನಾಗಾ ಸೈನಿಕರ ಸೈನ್ಯವನ್ನೇ ನಿಲ್ಲಿಸಿದಳು. ಭೂಗತವಾಗಿ ಈ ಹೋರಾಟ ನಡೆಸುತ್ತಿರುವಾಗಲೇ ಗೈಡಿನ್ಲು ಏಪ್ರಿಲ್ 17, 1935 ರಂದು ಸೆರೆ ಸಿಕ್ಕಿದಳು.

ಗೈಡಿನ್ಲು ಹೋರಾಟವನ್ನು ಬೆಂಬಲಿಸಿದ ನೆಹರೂ

ನೆಹರೂರವರು 1939 ರಲ್ಲಿ ಅಸ್ಸಾಂನ ಪ್ರವಾಸದಲ್ಲಿದ್ದಾಗ, ಅವರು ಶಿಲ್ಲಾಂಗ್ ಜೈಲಿಗೆ ಭೇಟಿ ನೀಡಿ ಈ ಯುವ ಹೋರಾಟಗಾರ್ತಿಯನ್ನು ಭೇಟಿಯಾದರು, ಅವಳನ್ನು ಹೊಗಳಿ ಪ್ರೋತ್ಸಾಹವನ್ನೂ ನೀಡಿದರು. ಅವಳಿಗೆ ‘ರಾಣಿ’ ಎಂದು ಸಂಬೋಧಿಸಿದ್ದು ನೆಹರೂರವರು. ದೆಹಲಿಗೆ ಹಿಂದಿರುಗಿದ ನಂತರ, ನೆಹರೂರವರು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ರಾಣಿಯ ಬಗ್ಗೆ ಮಾಹಿತಿ ನೀಡುವ ಮೂಲಕ ಅಲ್ಲಿನ ಹೋರಾಟವನ್ನು ಬೆಂಬಲಿಸಿದರು.

ಈ ರಣರಾಗಿಣಿಯನ್ನು ಬ್ರಿಟಿಷರು ಸುಮಾರು 13 ವರ್ಷಗಳ ಕಾಲ ಜೈಲಿನಲ್ಲಿರಿಸಿದರು

ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಹೆಚ್ಚಿನ ಭಾಗಗಳ ಕ್ರೈಸ್ತೀಕರಣವಾಗಿತ್ತು, ಆದುದರಿಂದ ಅಲ್ಲಿನ ಜನಸಾಮಾನ್ಯರಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಆಸಕ್ತಿಯಿರಲಿಲ್ಲ. ಬ್ರಿಟಿಷರು ಸಹ ಕ್ರೈಸ್ತರಾಗಿರುವುದರಿಂದ, ಸ್ವಾತಂತ್ರ್ಯ ಎಂದರೇನು? ಎಂಬುವುದರ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲವಿತ್ತು. ಅದಕ್ಕಾಗಿಯೇ ಅವರು ಈ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದಿದ್ದರು; ಆದರೆ ರಾಣಿ ಗೈಡಿನ್ಲು ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಿ ಬುಡಕಟ್ಟು ಜನರಿಂದ ಕೂಡ ದೊಡ್ಡ ಆಂದೋಲನವನ್ನು ನಡೆಸಿದರು. ಈ ವೀರಾಂಗನೆಯನ್ನು 4 ಗೋಡೆಗಳ ಒಳಗೆ ಬಂಧಿಸಿಟ್ಟರೂ, ಸ್ಥಳೀಯ ಮಟ್ಟದಲ್ಲಿ ಸ್ವಾತಂತ್ರ್ಯಕ್ಕಾಗಿ ಉಗ್ರ ಆಂದೋಲನ ಮುಂದುವರೆಯಿತು. ಈ ತೇಜಸ್ವಿ ರಣರಾಗಿಣಿಯನ್ನು ಬ್ರಿಟಿಷರು ಸುಮಾರು 13 ವರ್ಷಗಳ ಕಾಲ ಜೈಲಿನಲ್ಲಿರಿಸಿದರು. ಸ್ವಾತ್ಯಾಂತ್ರ್ಯ ವೀರ್ ಸಾವರ್ಕರ್ ಮತ್ತು ಅನೇಕ ಕ್ರಾಂತಿಕಾರಿಗಳನ್ನು ಭಾರತದ ವಿವಿಧ ಕಾರಾಗೃಹಗಳಲ್ಲಿ ಹೇಗೆ ದೀರ್ಘಕಾಲ ಬಂಧಿಸಿಡಲಾಯಿತೋ ಅದೇ ರೀತಿ ರಾಣಿ ಗೈಡಿನ್ಲುರವರನ್ನು ಬಂಧನದಲ್ಲಿಡಲಾಯಿತು.

ನಾಗಾಲ್ಯಾಂಡನ್ನು ಸ್ವತಂತ್ರ ದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದ ನಾಗಾ ನ್ಯಾಷನಲ್ ಕೌನ್ಸಿಲ್ ವಿರುದ್ಧ ರಾಣಿ ಗೈಡಿನ್ಲು ಅವರ ಆಂದೋಲನ

ಭಾರತ ಸ್ವಾತಂತ್ರ್ಯ ಪಡೆದ ಎರಡು ತಿಂಗಳ ನಂತರ 1947 ರ ಅಕ್ಟೋಬರ್ 17 ರಂದು ರಾಣಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ರಾಣಿಯನ್ನು ಸರ್ದಾರ್ ಪಟೇಲ್ ಅವರು ‘ಸ್ವಾತಂತ್ರ್ಯ ಹೋರಾಟಗಾರ್ತಿ’ ಎಂದು ಶ್ಲಾಘಿಸಿದರು. ನಂತರ ಅವರಿಗೆ ಭಾರತ ಸರಕಾರದ ವತಿಯಿಂದ ‘ಪದ್ಮಭೂಷಣ’ ನೀಡಿಯೂ ಗೌರವಿಸಲಾಯಿತು. ಆದರೆ ಅದೇ ಸಮಯದಲ್ಲಿ ‘ನಮ್ಮ ಸಂಸ್ಕೃತಿ, ಭಾಷೆ ವಿಭಿನ್ನವಾಗಿದೆ ಮತ್ತು ನಮಗೆ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ. ನಮಗೆ ಸ್ವಾತಂತ್ರ್ಯ ನೀಡುವ ಮೂಲಕ ನಾಗಾಲ್ಯಾಂಡ್ಅನ್ನು ಸ್ವತಂತ್ರ ದೇಶವೆಂದು ಘೋಷಿಸಬೇಕು’ ಎಂದು ನಾಗಾ ನ್ಯಾಷನಲ್ ಕೌನ್ಸಿಲ್ ಎಂಬ ಪ್ರತ್ಯೇಕತಾವಾದಿ ಗುಂಪು ಪಟ್ಟು ಹಿಡಿದಿತ್ತು. ಹಾಗಾಗಿ ಸ್ವಾತಂತ್ರ್ಯದ ನಂತರವೂ ರಾಣಿ ‘ನಾಗಾ ನ್ಯಾಷನಲ್ ಕೌನ್ಸಿಲ್’ ವಿರುದ್ಧ ಹೋರಾಟವನ್ನು ಮುಂದುವರೆಸಿದರು.

ಕ್ರೈಸ್ತರ ವಿವಿಧ ಚಟುವಟಿಕೆಗಳನ್ನು ವಿರೋಧಿಸಿದ್ದಕ್ಕಾಗಿ ರಾಣಿ ಗೈಡಿನ್ಲು ಅವರನ್ನು ಪ್ರತ್ಯೇಕತಾವಾದಿಗಳು ಬಲವಂತವಾಗಿ ದೂರದ ಜಿಲ್ಲೆಗೆ ಕಳುಹಿಸಿದರು

ಪ್ರತ್ಯೇಕತಾವಾದಿಗಳ ವರ್ಚಸ್ಸು ಎಷ್ಟಿದೆ ಎಂದರೆ, ಇಂದಿಗೂ ಈ ಗುಂಪು ನಾಗಾಲ್ಯಾಂಡ್‌ನಲ್ಲಿ ಅಲ್ಲಲ್ಲಿ ಹಿಂಸಾತ್ಮಕ ಆಂದೋಲನಗಳನ್ನು ಆಗಾಗ್ಗೆ ನಡೆಸುತ್ತಿದೆ. ಒಂದು ಕಾಲದಲ್ಲಿ ಅವರು ‘ಸಮಾನಾಂತರ ಸರ್ಕಾರ’ವನ್ನು ನಡೆಸುತ್ತಿದ್ದರು ಕೂಡ. 100% ಕ್ರೈಸ್ತರು ಇರುವ ನಾಗಾಲ್ಯಾಂಡ್‌ನ ಕೆಲವು ಜನಾಂಗಗಳಲ್ಲಿ, ಈ ಪ್ರತ್ಯೇಕತೆಯ ಭಾವನೆಯನ್ನು ಇಂದಿಗೂ ಕಾಣಬಹುದು. ಇದರ ಅಪಾಯವನ್ನರಿತ ರಾಣಿ ಗೈಡಿನ್ಲು ಮೊದಲಿನಿಂದಲೂ ಮಿಶನರಿಗಳ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದರು; ಆದ್ದರಿಂದ ಸ್ವಾತಂತ್ರ್ಯದ ನಂತರವೂ ಅವರನ್ನು ತನ್ನ ಸ್ವಂತ ಊರಿನಿಂದ ಬಲವಂತವಾಗಿ ನಾಗಾಲ್ಯಾಂಡ್‌ನ ದೂರದ ಟ್ಯೂನ್‌ಸಾಂಗ್ ಜಿಲ್ಲೆಗೆ ಸ್ಥಳಾಂತರಿಸಲಾಯಿತು.

‘ನಾಗಾ ಸಮುದಾಯದ ಭವಿಷ್ಯ ಮತ್ತು ಅವರ ಯೋಗಕ್ಷೇಮವು ಭಾರತದ ಮೇಲೆ ಅವಲಂಬಿಸಿದೆ’ ಎಂದು ರಾಣಿಯ ಬಲವಾದ ನಂಬಿಕೆ

ಝಿಲಿಯಾಂಗ್ ಬುಡಕಟ್ಟು ಜನಾಂಗದವರ ಉನ್ನತಿಗಾಗಿ ರಾಣಿ ಶ್ರಮಿಸಿದರು; ಅದಕ್ಕಾಗಿಯೇ ಇಂದು ಈ ಬುಡಕಟ್ಟು ಜನಾಂಗದಲ್ಲಿ ಮತಾಂತರಗಳಾಗಿಲ್ಲ. ರಾಣಿ ಅನಾದಿಕಾಲದಿಂದ ನಡೆದು ಬಂದಿರುವ ಸಂಸ್ಕೃತಿ, ನಂಬಿಕೆ ಮತ್ತು ಸಂಪ್ರದಾಯಗಳ ಬಗ್ಗೆ ಒತ್ತು ನೀಡಿದವರು. ಅವರು ಹಳ್ಳಿಯ ಸ್ತರದಲ್ಲಿ ವ್ಯವಹಾರಗಳನ್ನು ನಡೆಸುವ ಬಗ್ಗೆ ಒತ್ತಾಯಿಸಿದರು. ‘ನಾಗಾ ಸಮುದಾಯದ ಭವಿಷ್ಯ ಮತ್ತು ಅವರ ಯೋಗಕ್ಷೇಮವು ಭಾರತದ ಮೇಲೆ ಅವಲಂಬಿಸಿದೆ’ ಎಂದು ಅವರು ಬಲವಾಗಿ ನಂಬಿದ್ದರು.

ಕ್ರೈಸ್ತ ಬೋಧಕರು ಸ್ವತಂತ್ರ ನಾಗಾಲ್ಯಾಂಡ್ ಬೇಡಿಕೆಯನ್ನು ಕೈಬಿಡುವಂತೆ ಮಾಡಿದ ರಾಣಿ

‘ಭಾರತ ಒಂದೇ ದೇಶ, ನಾವೂ ಅದರ ಒಂದು ಭಾಗ’ ಎಂಬ ಭಾವನೆಯನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಹುಟ್ಟುಹಾಕುವಲ್ಲಿ ರಾಣಿ ಗೈಡಿನ್ಲು ಯಶಸ್ವಿಯಾದರು. ಅವರು ಭಾರತದಲ್ಲಿ ವಾಸಿಸುವ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಸತತವಾಗಿ ವಿರೋಧಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಪಡೆದರು. ಆದುದರಿಂದ ಕ್ರೈಸ್ತ ಪಾದ್ರಿಗಳು 1970 ರ ದಶಕದಲ್ಲಿ ಸ್ವತಂತ್ರ ನಾಗಾಲ್ಯಾಂಡ್ ನ ಬೇಡಿಕೆಯನ್ನು ತ್ಯಜಿಸಿ ಭಾರತೀಯ ಗಣರಾಜ್ಯದ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಇದರ ಶ್ರೇಯಸ್ಸು ರಾಣಿ ಗೈಡಿನ್ಲುರವರಿಗೆ ಸೇರುತ್ತದೆ.

– ಸುರೇಶ್ ಸಾಠೆ (ಆಧಾರ: ‘ಧರ್ಮಭಾಸ್ಕರ್’, ಏಪ್ರಿಲ್ 2015)

Leave a Comment