ಚಿಂತೆಯನ್ನು ದೂರ ಮಾಡಲು, ಮನೋಬಲವನ್ನು ಹೆಚ್ಚಿಸಲು ಸ್ವಯಂಸೂಚನೆಗಳು !

ಎಲ್ಲೆಡೆ ಹರಡುತ್ತಿರುವ ಕೊರೋನಾ ಸೋಂಕಿನಿಂದ ಹೆದರದೇ 
ಮುಂದಿನ ಸ್ವಯಂಸೂಚನೆಯನ್ನು ನೀಡಿ ಆತ್ಮಬಲವನ್ನು ಹೆಚ್ಚಿಸಿರಿ !

ಇಂದು ಭಾರತವಲ್ಲದೇ, ಇತರ ರಾಷ್ಟ್ರಗಳಲ್ಲಿಯೂ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಇದರಿಂದ ಎಲ್ಲೆಡೆಯ ಜನಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುತ್ತದೆ, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯೆನಿಸುವುದು, ಈ ರೀತಿಯ ಸ್ವಭಾವದೋಷಗಳ ಪ್ರಕಟೀಕರಣವಾಗುವ ಸಾಧ್ಯತೆಯಿರುತ್ತದೆ. ಇಂತಹ ಪ್ರಸಂಗಗಳಲ್ಲಿ ಯೋಗ್ಯ ಸ್ವಯಂಸೂಚನೆಯನ್ನು ನೀಡಿದರೆ, ಸದ್ಯದ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗುತ್ತದೆ. ಈ ದೃಷ್ಟಿಯಿಂದ ಮನೋಬಲ ಹೆಚ್ಚಾಗಿ ಸ್ಥಿರವಾಗಿರಲು ‘ಅಂತರ್ಮನಸ್ಸಿಗೆ ಯಾವ ಸ್ವಯಂಸೂಚನೆಯನ್ನು ನೀಡಬಹುದು ?’, ಎನ್ನುವುದನ್ನು ಮುಂದೆ ನೀಡಲಾಗಿದೆ.

‘ಚಿಂತೆ, ಒತ್ತಡ ಮುಂತಾದ ಕಾರಣಗಳಿಂದ ಮನಸ್ಸು ವಿಚಲಿತವಾದರೆ’ ಮನಸ್ಸಿಗೆ ಕೊಡುವ ಸ್ವಯಂಸೂಚನೆಗಳನ್ನು ಕೆಳಗೆ ನೀಡಲಾಗಿದೆ, ಅವಶ್ಯ ಓದಿ !

೧. ಪ್ರಸಂಗ : ‘ನನಗೆ ಕೊರೋನಾ ಸೋಂಕು ತಗುಲಬಹುದು’, ಎನ್ನುವ ವಿಚಾರದಿಂದ ಭಯವೆನಿಸುವುದು.

೧ ಅ. ಸ್ವಯಂಸೂಚನೆ : ಯಾವ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ಸೋಂಕು ತಗಲಬಹುದು’, ಎನ್ನುವ ವಿಚಾರದಿಂದ ಭಯವಾಗುವುದೋ, ಆಗ ‘ನಾನು ಅಗತ್ಯವಿರುವ ಎಲ್ಲ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸುತ್ತಿದ್ದೇನೆ’, ಎಂದು ನೆನಪಿಸಿಕೊಳ್ಳುತ್ತೇನೆ ಮತ್ತು ದಿನವಿಡಿ ಸಾಧ್ಯವಾದಷ್ಟು ಹೆಚ್ಚು ಸಮಯ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಿ ಸತ್‌ನಲ್ಲಿ ಇರುತ್ತೇನೆ.

೨. ಪ್ರಸಂಗ : ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯುತ್ತೇನೆ’, ಎಂದು ಹೆದರಿಕೆಯಾಗುವುದು.

೨ ಅ. ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯುತ್ತೇನೆ’, ಎಂದು ವಿಚಾರ ಬರುವುದೋ, ಆಗ ‘ಈ ರೋಗಾಣುವಿನ ಸೋಂಕು ತಗುಲಿರುವ ಶೇ. ೮೦ ರಷ್ಟು ರೋಗಿಗಳ ರೋಗದ ಸ್ವರೂಪವು ಸೌಮ್ಯವಾಗಿರುತ್ತದೆ’, ಎನ್ನುವುದು ನನಗೆ ಗಮನಕ್ಕೆ ಬಂದು ನಾನು ಸಕಾರಾತ್ಮಕವಾಗಿರುತ್ತೇನೆ  ಮತ್ತು ಕುಟುಂಬದವರು, ಹಿತಚಿಂತಕರು ಹಾಗೂ ಸರಕಾರಿ ಇಲಾಖೆಗಳು ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುತ್ತೇನೆ.

೩. ಪ್ರಸಂಗ : ಔಷಧೋಪಚಾರವನ್ನು ಮಾಡಿಯೂ ಮಗಳ ನೆಗಡಿ/ಜ್ವರ ಕಡಿಮೆಯಾಗದ ಕಾರಣದಿಂದ ಅವಳ ಬಗ್ಗೆ ಚಿಂತೆಯೆನಿಸುವುದು.

೩ ಅ. ಸ್ವಯಂಸೂಚನೆ : ಯಾವಾಗ ಮಗಳಿಗೆ ಬಹಳಷ್ಟು ದಿನಗಳಿಂದ ನೆಗಡಿ / ಜ್ವರ ಇದ್ದಾಗ ‘ಪ್ರತಿಯೊಂದು ನೆಗಡಿ/ಜ್ವರ ಕೊರೋನಾ ರೋಗಾಣುವಿನ ಸೋಂಕಿನಿಂದ ಆಗಿರುವುದಿಲ್ಲ’, ಎಂದು ನನ್ನ ಮನಸ್ಸಿಗೆ ಅರಿವಾಗುವುದು ಮತ್ತು ದೇವರ ಮೇಲೆ ಶ್ರದ್ಧೆಯಿಟ್ಟು ನಾನು ಆಧುನಿಕ ವೈದ್ಯರು ತಿಳಿಸಿದಂತೆ ಅವಳಿಗೆ ಔಷಧಿಗಳನ್ನು ನೀಡುತ್ತೇನೆ ಮತ್ತು ಅವಳ ಸ್ಥಿತಿಯನ್ನು ಆಯಾಯ ಸಮಯದಲ್ಲಿ ವೈದ್ಯರಿಗೆ ತಿಳಿಸುತ್ತೇನೆ.

೪. ಪ್ರಸಂಗ : ‘ಕೊರೋನಾ ರೋಗಾಣುವಿನ ಸಾಂಕ್ರಾಮಿಕತೆಯಿಂದ ನನ್ನ ಕುಟುಂಬದವರು ನನ್ನನ್ನು ಭೇಟಿಯಾಗಲು ಪ್ರಯಾಣ ಮಾಡಲಾಗುತ್ತಿಲ್ಲ’, ಎಂದು ಚಿಂತೆಯಾಗುವುದು.

೪ ಅ. ಸ್ವಯಂಸೂಚನೆ : ಯಾವಾಗ ‘ನನ್ನನ್ನು ಭೇಟಿಯಾಗಲು ನನ್ನ ಕುಟುಂಬದವರಿಗೆ ಪ್ರಯಾಣ ಮಾಡಲಾಗುವುದಿಲ್ಲ’, ಎಂಬ ವಿಚಾರದಿಂದ ಚಿಂತೆಯೆನಿಸುವುದೋ ಆಗ ‘ಸಾಂಕ್ರಾಮಿಕತೆಯ ಕಾಲದಲ್ಲಿ ಎಲ್ಲರ ಸುರಕ್ಷತೆಗಾಗಿ ಪ್ರಯಾಣವನ್ನು ಮಾಡದಿರುವುದೇ ಒಳ್ಳೆಯದಿದೆ ಮತ್ತು ಇದು ತಾತ್ಕಾಲಿಕ ಸ್ಥಿತಿಯಾಗಿದೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ‘ನನ್ನ ಮತ್ತು ಕುಟುಂಬದವರಿಗೆ ಕೊರೋನಾ ರೋಗಾಣುವಿನ ಸೋಂಕು ತಗಲಬಾರದು’, ಎಂದು ಸರಕಾರವು ಸುರಕ್ಷತೆಯ ದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಕಾಳಜಿಯನ್ನು ವಹಿಸಿಕೊಳ್ಳುತ್ತೇನೆ.

೫. ಪ್ರಸಂಗ : ಸದ್ಯ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಎಲ್ಲೆಡೆ ಜೀವನಾವಶ್ಯಕ ಸಾಮಾಗ್ರಿಗಳ (ಹಾಲು, ಆಹಾರಧಾನ್ಯ, ಔಷಧಿಗಳು ಇತ್ಯಾದಿ) ಕೊರತೆ ಭಾಸವಾಗುತ್ತಿರುವುದರಿಂದ ‘ನನಗೆ ಅವುಗಳು ದೊರೆಯುವುದೇ ?’ ಎಂದು ಚಿಂತೆಯಾಗುವುದು.

೫ ಅ. ಸ್ವಯಂಸೂಚನೆ : ಯಾವಾಗ ನನಗೆ ‘ಸದ್ಯ ಜೀವನಾವಶ್ಯಕ ಸಾಮಾಗ್ರಿಗಳ ಕೊರತೆ ಭಾಸವಾಗುತ್ತಿರುವುದರಿಂದ ನನಗೆ ಆ ಸಾಮಾಗ್ರಿಗಳು ದೊರೆಯುವುದೇ ?’, ಎಂದು ಚಿಂತೆಯಾಗುವುದೋ, ಆಗ ‘ಭಾರತ ಸರಕಾರವು ಎಲ್ಲ ನಾಗರಿಕರಿಗೆ ಈ ಸಾಮಾಗ್ರಿಗಳು ದೊರಕಬೇಕು’, ಎಂದು ಅವುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ’, ಎಂದು ನನಗೆ ಅರಿವಾಗುವುದು. ಆದುದರಿಂದ ನಾನು ನಿಶ್ಚಿಂತವಾಗಿದ್ದು, ನಾಮಜಪ ಮತ್ತು ಪ್ರಾರ್ಥನೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇನೆ.

ಸದ್ಯದ ಪರಿಸ್ಥಿತಿಯಲ್ಲಿ ಸಾಧಕರ ಮನಸ್ಸಿನಲ್ಲಿ ಬರುವ ವಿಚಾರಗಳ ಬಗ್ಗೆ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ 

೧. ಅಯೋಗ್ಯ ವಿಚಾರ : ಸದ್ಯದ ಪ್ರತಿಕೂಲ ಪರಿಸ್ಥಿತಿಯನ್ನು ನೋಡಿ ಮನಸ್ಸು ಅಸ್ವಸ್ಥಗೊಂಡು ದುಃಖವೆನಿಸುವುದು (ಪರಿಸ್ಥಿತಿಯನ್ನು ಸ್ವೀಕರಿಸಲು ಆಗದಿರುವುದು)

ಸ್ವಯಂಸೂಚನೆ : ಯಾವಾಗ ‘ಕೊರೋನಾ’ದಿಂದ ನಿರ್ಮಾಣವಾಗಿರುವ ಪ್ರತಿಕೂಲತೆಯನ್ನು ನೋಡಿ ನಾನು ದುಃಖಿತನಾಗುವೆನೋ, ಆಗ ‘ಇವೆಲ್ಲವೂ ಈಶ್ವರನ ಇಚ್ಛೆಯಿಂದ ನಡೆಯುತ್ತಿದ್ದು, ಮುಂಬರುವ ಆಪತ್ಕಾಲವನ್ನು ಎದುರಿಸಲು ಭಗವಂತನು ಎಲ್ಲರ ಮನಸ್ಸಿನ ಸಿದ್ಧತೆಯನ್ನು ಮಾಡಿಸಿಕೊಳ್ಳುತ್ತಿದ್ದಾನೆ’, ಎಂದು ಅರಿವಾಗಿ ‘ದೇವರು ನನಗೆ ಇದರಿಂದ ಏನು ಕಲಿಸುತ್ತಿದ್ದಾನೆ ?’, ಎಂದು ನಾನು ಚಿಂತನೆಯನ್ನು ಮಾಡುತ್ತೇನೆ.

೨. ಅಯೋಗ್ಯ ವಿಚಾರ : ‘ಆಪತ್ಕಾಲದ ಪರಿಸ್ಥಿತಿಯಲ್ಲಿ ಸಾಧನೆಯ ಪ್ರಯತ್ನ ಮಾಡುವುದು ಕಠಿಣವಾಗಿದೆ’, ಎಂದೆನಿಸುವುದು.

ಸ್ವಯಂಸೂಚನೆ : ಯಾವಾಗ ‘ಆಪತ್ಕಾಲದ ಪರಿಸ್ಥಿತಿಯಲ್ಲಿ ಸಾಧನೆಯ ಪ್ರಯತ್ನ ಮಾಡುವುದು ಕಠಿಣವಾಗಿದೆ’, ಎಂದು ನನಗೆ ಅನಿಸುತ್ತದೆಯೋ, ಆಗ ‘ಸದ್ಯದ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಸ್ತರದ ಸಾಧನೆಯ ಎಲ್ಲ ಪ್ರಯತ್ನಗಳನ್ನು (ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ, ಭಾವವೃದ್ಧಿಯ ಪ್ರಯತ್ನ ಇತ್ಯಾದಿ) ನಾನು ಸಹಜವಾಗಿ ಮಾಡಬಲ್ಲೆನು’, ಎಂದು ನನಗೆ ಅರಿವಾಗುವುದು ಮತ್ತು ಸಂಪತ್ಕಾಲಕ್ಕಿಂತ ಆಪತ್ಕಾಲದಲ್ಲಿ ಸಮಯದ ಮಹತ್ವವು ಅನೇಕ ಪಟ್ಟು ಹೆಚ್ಚಿದೆ ಮತ್ತು ಮಾಡಿದ ಪ್ರಯತ್ನದ ಫಲವೂ ಅನೇಕ ಪಟ್ಟು ಹೆಚ್ಚು ಸಿಗುವುದು; ಆದ್ದರಿಂದ ನಾನು ಸಕಾರಾತ್ಮಕವಾಗಿದ್ದು ಪ್ರಯತ್ನಿಸುತ್ತೇನೆ.

೩. ಅಯೋಗ್ಯ ವಿಚಾರ : ‘ನಾನು ಜೀವನದ ಇಷ್ಟು ಮಹತ್ವದ ದಿನಗಳನ್ನು ಮನೆಯಲ್ಲಿದ್ದು ವ್ಯರ್ಥ ಮಾಡುತ್ತಿದ್ದೇನೆ’, ಎಂಬ ವಿಚಾರ ಬರುವುದು.

ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನಾನು ಜೀವನದ ಇಷ್ಟು ಮಹತ್ವದ ದಿನಗಳನ್ನು ಮನೆಯಲ್ಲಿದ್ದು ವ್ಯರ್ಥ ಮಾಡುತ್ತಿದ್ದೇನೆ’, ಎಂಬ ವಿಚಾರ ಬರುವುದೋ, ಆಗ ‘ಸದ್ಯದ ಸ್ಥಿತಿಯಲ್ಲಿ ಕೊರೋನಾದಿಂದ ‘ನಾಗರಿಕರಿಗೆ ಮನೆಯಲ್ಲಿ ಇರಬೇಕು’, ಎಂದು ಸರ್ಕಾರ ಆದೇಶಿಸಿರುವುದರಿಂದ ಅದನ್ನು ಚಾಚೂ ತಪ್ಪದೇ ಪಾಲಿಸುವುದು ನನ್ನ ಸಾಧನೆಯಾಗಿದೆ’, ಎಂದು ನನಗೆ ಅರಿವಾಗುವುದು ಮತ್ತು ‘ನಾನು ಮನೆಯಲ್ಲಿದ್ದು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಏನೆಲ್ಲ ಪ್ರಯತ್ನಗಳನ್ನು ಮಾಡಬಹುದು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳುತ್ತೇನೆ.

೪. ಅಯೋಗ್ಯ ವಿಚಾರ : ‘ನನಗೆ ಮನೆಯಲ್ಲಿ ಕುಳಿತು ಬಹಳ ಬೇಸರವಾಗುತ್ತಿದೆ’, ಎಂದು ವಿಚಾರ ಬರುವುದು.

ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ಮನೆಯಲ್ಲಿದ್ದು ನನಗೆ ಬಹಳ ಬೇಸರವಾಗುತ್ತಿದೆ’, ಎಂಬ ವಿಚಾರ ಬರುವುದೋ, ಆಗ ‘ನಾನು ಮನೆಯ ಕೆಲಸಗಳನ್ನು ಸೇವೆಯೆಂದು ಮಾಡಿದರೆ, ನನ್ನ ಸಾಧನೆಯಾಗಲಿದೆ, ಅಲ್ಲದೇ ನಾನು ಮನೆಯಲ್ಲಿದ್ದು ವ್ಯಷ್ಟಿ ಸಾಧನೆ (ಸ್ವಭಾವದೋಷ-ಅಹಂ ನಿರ್ಮೂಲನೆ, ಭಾವವೃದ್ಧಿಯ ಪ್ರಯತ್ನ ಮತ್ತು ಆಧ್ಯಾತ್ಮಿಕ ಉಪಾಯ) ಹಾಗೂ ಸಾಧ್ಯವಿರುವ ಸಮಷ್ಟಿ ಸೇವೆಯನ್ನು ಮಾಡುವುದು ಶ್ರೀ ಗುರುಗಳಿಗೆ ಅಪೇಕ್ಷಿತವಿದೆ’, ಎಂದು ಅರಿವಾಗಿ ನಾನು ಅದಕ್ಕಾಗಿ ಪ್ರಯತ್ನಿಸುವೆನು.

೫. ಅಯೋಗ್ಯ ವಿಚಾರ : ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯಬಹುದು’, ಎಂದು ಹೆದರಿಕೆಯಾಗುವುದು.

ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯಬಹುದು’, ಎಂಬ ವಿಚಾರ ಬರುವುದೋ, ಆಗ ‘ಭಗವಂತನು ಪ್ರತಿಯೊಬ್ಬರ ಮೃತ್ಯುವಿನ ಸಮಯವನ್ನು ನಿಶ್ಚಯಿಸಿರುತ್ತಾನೆ. ಆದುದರಿಂದ ಕೊರೋನಾದಿಂದಲೇ ಎಂದಲ್ಲ, ಮನುಷ್ಯನಿಗೆ ಯಾವುದಾದರೂ ಕಾರಣದಿಂದ ಯಾವುದೇ ಸಮಯದಲ್ಲಿಯೂ ಮರಣ ಬರಬಹುದು’, ಎಂದು ನನಗೆ ಅರಿವಾಗಿ ನಾನು ಮನುಷ್ಯ ಜನ್ಮ ಸಾರ್ಥಕವಾಗಲು ಸಾಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇನೆ.

೬. ಅಯೋಗ್ಯ ವಿಚಾರ : ‘ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಿರುವ ಮನೋಬಲ ನನ್ನಲ್ಲಿ ಇಲ್ಲ’, ಎಂದೆನಿಸಿ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುವುದು.

ಸ್ವಯಂಸೂಚನೆ : ಯಾವಾಗ ‘ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಿರುವ ಮನೋಬಲ ನನ್ನಲ್ಲಿ ಇಲ್ಲ’, ಎಂದೆನಿಸಿ ನನಗೆ ಒತ್ತಡವಾಗುವುದೋ, ಆಗ ‘ಕರುಣಾಮಯಿ ಭಗವಂತನು ಒಳ್ಳೆಯ ಮತ್ತು ಕೆಟ್ಟ ಎರಡೂ ಪರಿಸ್ಥಿತಿಗಳಲ್ಲಿ ನನ್ನೊಂದಿಗೆ ಇದ್ದಾನೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ನಾನು ಏನು ಮಾಡುವುದು ಆವಶ್ಯಕವಿದೆ ?’, ಎಂಬುದನ್ನು ಅವನೇ ನನಗೆ ಸೂಚಿಸಿ ನನ್ನ ಮನೋಬಲವನ್ನು ಹೆಚ್ಚಿಸುವವನಿದ್ದಾನೆ’, ಎಂದು ನನಗೆ ಅರಿವಾಗಿ ನಾನು ಭಗವಂತನ ಮೇಲೆ ದೃಢ ಶ್ರದ್ಧೆಯನ್ನು ಇಡುತ್ತೇನೆ.

ಸ್ವಯಂಸೂಚನೆಯನ್ನು ನೀಡುವ ಪದ್ಧತಿ

ನಮ್ಮ ಮನಸ್ಸಿನಲ್ಲಿ ಮೇಲಿನಂತೆ ಯಾವ ಅಯೋಗ್ಯ ವಿಚಾರಗಳ ಒತ್ತಡ ಅಥವಾ ಚಿಂತೆಯಾಗುತ್ತದೆಯೋ, ಆ ವಿಚಾರಗಳ ಮೇಲೆ ೧೫ ದಿನಗಳ ಅಥವಾ ವಿಚಾರ ಕಡಿಮೆಯಾಗುವ ವರೆಗೆ ಸಂಬಂಧಪಟ್ಟ ಸ್ವಯಂಸೂಚನೆಯನ್ನು ನೀಡಬೇಕು. ಈ ಸ್ವಯಂಸೂಚನೆಯನ್ನು ದಿನದಲ್ಲಿ ೫ ಬಾರಿ ನೀಡಬೇಕು. ಒಂದು ಸ್ವಯಂಸೂಚನೆಯ ಸತ್ರದಲ್ಲಿ ಒಂದು ಸ್ವಯಂಸೂಚನೆಯನ್ನು ೫ ಸಲ ಅಂತರ್ಮನಸ್ಸಿಗೆ ನೀಡಬೇಕು.

ಮೇಲಿನಂತೆ ಬೇರೆ ಯಾವ ವಿಚಾರಗಳಿಂದ ಒತ್ತಡ, ಚಿಂತೆ, ಕಾಳಜಿ ಇತ್ಯಾದಿ ನಿರ್ಮಾಣವಾಗುತ್ತಿದ್ದರೆ, ಅದಕ್ಕೂ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬಹುದು.

ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರವನ್ನು ಮಾಡಿರಿ ಮತ್ತು ಕಡಿಮೆ ಸಮಯದಲ್ಲಿ ಮನಸ್ಸಿನಲ್ಲಿರುವ ಚಿಂತೆಯ ವಿಚಾರಗಳು ಕಡಿಮೆಯಾಗುವುದನ್ನು ಅನುಭವಿಸಿರಿ !

ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಿದರೆ ಅಂತರ್ಮನದಲ್ಲಿ ಸೂಚನೆಗಳ ಸಂಸ್ಕಾರವಾಗಿ ‘ಮನಸ್ಸಿನಲ್ಲಿರುವ ಒತ್ತಡ ಅಥವಾ ಚಿಂತೆಯ ವಿಚಾರಗಳು ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತದೆ’, ಎಂದು ಅನೇಕ ಜನರು ಅನುಭವಿಸಿದ್ದಾರೆ. ಇದರಿಂದ ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರವನ್ನು ಮಾಡಬೇಕು. ಮನಸ್ಸಿನಲ್ಲಿ ಬರುವ ನಿರರ್ಥಕ ವಿಚಾರಗಳಿಂದ ಸ್ವಯಂಸೂಚನೆಯ ಸತ್ರಗಳನ್ನು ಏಕಾಗ್ರತೆಯಿಂದ ಕೊಡಲು ಆಗದಿದ್ದರೆ ಸ್ವಲ್ಪ ದೊಡ್ಡ ಸ್ವರದಲ್ಲಿ (ಗುಣುಗುಣಿಸುತ್ತ) ಸ್ವಯಂಸೂಚನೆಯ ಸತ್ರವನ್ನು ನೀಡಬಹುದು ಅಥವಾ ಕಾಗದದ ಮೇಲೆ ಬರೆದಿರುವ ಸ್ವಯಂಸೂಚನೆಯನ್ನು ಓದಬಹುದು. ಇದರಿಂದ ಬೇರೆ ವಿಚಾರಗಳೆಡೆಗೆ ಗಮನ ಹೋಗದೆ ಅದು ತನ್ನಿಂತಾನೇ ಕಡಿಮೆಯಾಗುತ್ತದೆ ಮತ್ತು ಸ್ವಯಂಸೂಚನೆ ಸತ್ರ ಪರಿಣಾಮಕಾರಿಯಾಗುತ್ತದೆ. ದೊಡ್ಡ ಧ್ವನಿಯಲ್ಲಿ ಸೂಚನೆಯ ಸತ್ರವನ್ನು ನೀಡುವಾಗ ‘ಇತರರಿಗೆ ತೊಂದರೆ’ಯಾಗದಂತೆ ಎಚ್ಚರ ವಹಿಸಬೇಕು.

ಚಿಂತೆ, ಒತ್ತಡ ಮುಂತಾದ ಕಾರಣಗಳಿಂದ ಮನಸ್ಸು ವಿಚಲಿತವಾದರೆ ಮುಂದಿನ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಿ !

ಅ. ಸ್ವಯಂಸೂಚನೆಯನ್ನು ತೆಗೆದುಕೊಳ್ಳಲು ಮನಸ್ಸಿಗೆ ನೆನಪು ಮಾಡಿಕೊಡುವ ಸೂಚನೆ

ಯಾವಾಗ ಸದ್ಯದ ಪರಿಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಚಲಿತವಾಗುವುದೋ / ನನಗೆ ಚಿಂತೆಯಾಗುವುದೋ, ಆ ಸಮಯದಲ್ಲಿ ‘ನಾನು ಇದರ ಬಗ್ಗೆ ಯೋಗ್ಯ ಸ್ವಯಂಸೂಚನೆಯನ್ನು ತೆಗೆದುಕೊಂಡರೆ ನನಗೆ ಬೇಗನೆ ಆ ವಿಚಾರಗಳನ್ನು ನಿಯಂತ್ರಿಸಲು ಸಾಧ್ಯವಾಗುವುದು’ ಎಂಬುವುದರ ಅರಿವಾಗುವುದು ಮತ್ತು ನಾನು ಅದರಿಂದ ಸಮಾಧಾನಗೊಂಡು ಮನಸ್ಸಿಗೆ ಯೋಗ್ಯ ಸ್ವಯಂಸೂಚನೆಯನ್ನು ನೀಡುವೆನು.

ಆ. ಮನಸ್ಸಿನ ಉತ್ಸಾಹ ಹಾಗೂ ಸಕಾರಾತ್ಮಕತೆಯನ್ನು ಹೆಚ್ಚಿಸಲು ಮುಂದಿನ ಸೂಚನೆಯನ್ನು ತೆಗೆದುಕೊಳ್ಳಬಹುದು !

‘ಪರಾತ್ಪರ ಗುರುದೇವರು ಅನೇಕ ವರ್ಷಗಳ ಹಿಂದೆಯೇ ಮುಂದೆ ಬರಬಹುದಾದ ಆಪತ್ಕಾಲದ ಬಗ್ಗೆ ಎಲ್ಲರನ್ನೂ ಎಚ್ಚರಿಸಿ ಉಪಾಯಗಳನ್ನು ಕೂಡ ತಿಳಿಸಿದ್ದಾರೆ. ಇಂತಹ ದಾರ್ಶನಿಕ ಮತ್ತು ಸರ್ವಜ್ಞ ಗುರುದೇವರ ಮಾರ್ಗದರ್ಶನ ನನಗೆ ಲಭಿಸುತ್ತಿರುವುದರಿಂದ ನಾನು ಅತ್ಯಂತ ಭಾಗ್ಯಶಾಲಿಯಾಗಿದ್ದೇನೆ. ಗುರುಗಳಿಗೆ ಅಪೇಕ್ಷಿತವಿರುವಂತಹ ಸಾಧನೆಯನ್ನು ಮಾಡಲು ನಾನು ತಳಮಳದಿಂದ ಪ್ರಯತ್ನವನ್ನು ಮಾಡುವೆನು’.

ಈ ಸೂಚನೆಯನ್ನು ತೆಗೆದುಕೊಳ್ಳುವುದರಿಂದ ಗುರುಗಳ ಬಗ್ಗೆ ಕೃತಜ್ಞತೆಯು ನಿರ್ಮಾಣವಾಗಿ ಇನ್ನಷ್ಟು ಉತ್ಸಾಹದಿಂದ ಸಾಧನೆಯ ಪ್ರಯತ್ನಗಳು ಮಾಡುವಂತಾಗುತ್ತದೆ.

ಮನಸ್ಸು ವಿಚಲಿತವಾಗಿರುವುದರಿಂದ ಬೇರೆ ಪ್ರಯತ್ನಗಳನ್ನು ಮಾಡಲು ಸಾಧ್ಯವಾಗದಿದ್ದರೆ ಮೇಲೆ ಸೂಚನೆಗಳನ್ನು ಪ್ರತಿಯೊಂದನ್ನು ೫-೫ ಬಾರಿ ನೀಡಬೇಕು.

ಇ. ದೇವರ ಮೇಲೆ ಶ್ರದ್ಧೆ ಹೆಚ್ಚಾಗಲು ಮುಂದಿನ ಸೂಚನೆಗಳನ್ನು ನೀಡಿ !

ಭಗವಂತನ ಮೇಲೆ ಶ್ರದ್ಧೆ ಇದ್ದರೆ ಯಾವುದೇ ಸಂಕಟ ಎದುರಾದರೂ ಅದನ್ನು ಪಾರು ಮಾಡಲು ಶಕ್ತಿ ಸಿಗುತ್ತದೆ. ಶ್ರದ್ಧೆಯನ್ನು ಹೆಚ್ಚಿಸಲು ಮುಂದೆ ನೀಡಿರುವ ಸೂಚನೆಗಳಲ್ಲಿ ಯಾವುದು ಮನಸ್ಸಿಗೆ ನಾಟುತ್ತದೆ ಆ ಸೂಚನೆಯನ್ನು ದಿನದಲ್ಲಿ ೩ ಸಲ ಓದಬೇಕು. ಮುಂದೆ ನೀಡಿದ ಎಲ್ಲ ಸೂಚನೆಗಳು ಮನಸ್ಸಿಗೆ ನಾಟಿದರೆ ಯಾವುದಾದರೂ ೨ ಸೂಚನೆಗಳನ್ನು ದಿನದಲ್ಲಿ ೩ ಬಾರಿ ಓದಬೇಕು.

ಇ ೧. ಆಪತ್ಕಾಲದಲ್ಲಿ ಸಂಕಟದಿಂದ ಪಾರಾಗಲು ಒಂದೇ ಒಂದು ಉಪಾಯವೆಂದರೆ ‘ದೇವರ ಮೇಲೆ ಶ್ರದ್ಧೆಯಿಡುವುದು’ ! ಶ್ರದ್ಧೆಯಿಂದ ನಮ್ಮ ಸುತ್ತಲೂ ಭಗವಂತನ ಅಭೇದ್ಯ ಸುರಕ್ಷಾ ಕವಚ ನಿರ್ಮಾಣವಾಗುತ್ತದೆ.

ಇ ೨. ‘ಆಗುವುದೆಲ್ಲ ಒಳ್ಳೆಯದಕ್ಕೆ’ ಎಂಬ ದೇವರ ವಾಕ್ಯದ ಮೇಲೆ ನನಗೆ ಸಂಪೂರ್ಣ ಶ್ರದ್ಧೆಯಿದೆ.

ಇ ೩. ಗುರುಗಳು ಒಂದು ಸಲ ಶಿಷ್ಯನನ್ನು ಹತ್ತಿರ ಮಾಡಿಕೊಂಡರೆ ಮತ್ತೆಂದೂ ಯಾವುದೇ ಜನ್ಮದಲ್ಲಿ ಅವನನ್ನು ದೂರಮಾಡುವುದಿಲ್ಲ. ಗುರುಗಳ ಮಹಾತ್ಮೆ ಇದು. ಹೀಗಿರುವಾಗ ಪರಾತ್ಪರ ಗುರುಗಳ ಮಾರ್ಗದರ್ಶನದಲ್ಲಿ ನನಗೆ ಸಾಧನೆಯನ್ನು ಮಾಡುವ ಅವಕಾಶ ಲಭಿಸಿದೆ. ಆದುದರಿಂದ ನಾನು ನಿರಾಳವಾಗಿ ಸಾಧನೆಯನ್ನು ಮಾಡಬೇಕು.

ಇ ೪. ನಾನು ಸಾಧನೆಯನ್ನು ಮಾಡುತ್ತಿರುವುದರಿಂದ ಇಂದಿನವರೆಗೆ ಶ್ರೀ ಗುರುಗಳು ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಬಂದೆರಗಿದೆ ಎಲ್ಲ ಸಂಕಟಗಳಿಂದ ಪಾರು ಮಾಡಿರುವ ಅನುಭೂತಿಯನ್ನು ನಾನು ಪಡೆದಿದ್ದೇನೆ.

ಇ ೫. ಸನಾತನದ ಎಲ್ಲ ಸಾಧಕರು ಶ್ರೀ ಗುರುಗಳ ಛತ್ರಛಾಯೆಯಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಸಂಪೂರ್ಣ ಬ್ರಹ್ಮಾಂಡದಲ್ಲಿಯೇ ಇದು ಅತ್ಯಂತ ಸುರಕ್ಷಿತವಾದ ತಾಣ. ಪ್ರತಿಯೊಬ್ಬರ ಸುತ್ತಲೂ ಗುರುದೇವರ ಕೃಪೆಯ / ಚೈತನ್ಯದ ಸುರಕ್ಷಾಕವಚವಿದೆ. ಆದುದರಿಂದ ಸೂಕ್ಷ್ಮಾತಿಸೂಕ್ಷ್ಮ ವಿಷಾಣುಗಳೂ ಸಾಧಕರನ್ನು ಸ್ಪರ್ಶಿಸಲೂ ಸಾಧ್ಯವಿಲ್ಲ.

ಇ ೬. ಭಕ್ತ ಪ್ರಹ್ಲಾದನಂತೆ ಅಚಲವಾದ ಶ್ರದ್ಧೆ ನನ್ನಲ್ಲಿ ನಿರ್ಮಾಣವಾದರೆ ಹೊರಗಿನ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ನನ್ನ ಅಂತರ್ಮಸ್ಸಿನ ಮೇಲೆ ಯಾವುದೇ ರೀತಿಯಲ್ಲಿ ಅದರ ಪರಿಣಾಮವಾಗಲಾರದು. ನನ್ನ ಮನಸ್ಸು ಆನಂದಿ, ಸ್ಥಿರ ಮತ್ತು ಭಗವಂತನ ಅನುಸಂಧಾನದಲ್ಲಿರುವುದು.

(ಮನಸ್ಸಿನ ಸಮಸ್ಯೆಯನ್ನು ದೂರವಾಗಲು ‘ಮನಸ್ಸಿಗೆ ಯೋಗ್ಯ ಸ್ವಯಂಸೂಚನೆಯನ್ನು ನೀಡುವುದು’, ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ಒಂದು ಭಾಗವಾಗಿದೆ. ಸಂಪೂರ್ಣ ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ವಿಷಯದ ಮಾಹಿತಿಯನ್ನು ಸನಾತನದ ಗ್ರಂಥಮಾಲಿಕೆ ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ (ಖಂಡ ೭)’ ಈ ಗ್ರಂಥದಲ್ಲಿ ನೀಡಲಾಗಿದೆ.

‘ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇವರೇ ನಮ್ಮನ್ನು  ರಕ್ಷಿಸುವವನಿದ್ದಾನೆ ‘, ಎಂದು ಶ್ರದ್ಧೆಯನ್ನಿಟ್ಟು, ಸಾಧನೆಯನ್ನು ಹೆಚ್ಚಿಸಿರಿ !

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೩.೨೦೨೦)

ಸೂಚನೆ : ರಾಜ್ಯ ಮತ್ತು ಕೇಂದ್ರ ಸರಕಾರಗಳು, ತಜ್ಞ ವೈದ್ಯರು ಕೊರೋನಾ ರೋಗಾಣು ಸೋಂಕು ಹರಡುವುದನ್ನು ತಡೆಯಲು ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಕೊರೋನಾ ರೋಗಾಣುಗಳ ವಿರುದ್ಧ ತಮ್ಮಲ್ಲಿ ನಿರೋಧಕ ಕ್ಷಮತೆಯು ನಿರ್ಮಾಣವಾಗಲು ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆದು ಅವುಗಳನ್ನು ಪಾಲಿಸಿ. ಕೇವಲ ಆಧ್ಯಾತ್ಮಿಕ ಬಲ ಹಾಗು ಮನೋಬಲ ಹೆಚ್ಚಾಗಲೆಂದು ಇಲ್ಲಿ ಸ್ವಯಂಸೂಚನೆಗಳನ್ನು ನೀಡಿದ್ದೇವೆ ಎಂದು ಗಮನಿಸಿ.

Leave a Comment