ದೀಪಜ್ಯೋತಿ ನಮೋಸ್ತುತೆ !

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಮ್ಪದಾಮ್ |
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿ ನಮೋಸ್ತುತೆ ||

ಚಿಕ್ಕಂದಿನಲ್ಲಿ ನಾವೆಲ್ಲರೂ ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದಾಗ ‘ಶುಭಂಕರೋತಿ ಕಲ್ಯಾಣಮ್…..’ ಈ ಶ್ಲೋಕವನ್ನು ಹೇಳುತ್ತಿದ್ದೆವು. ಇಂದೂ ಸಾಯಂಕಾಲದ ಸಮಯದಲ್ಲಿ ಯಾವುದೇ ದೀಪವನ್ನು ಹಚ್ಚಿದರೂ ಬಹಳಷ್ಟು ಜನರು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾರೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ದೀಪವನ್ನು ಹಚ್ಚಿದಾಗ ಬಸ್ಸಿನಲ್ಲಿನ ಎಲ್ಲ ಪ್ರಯಾಣಿಕರು ಕೈಜೋಡಿಸಿ ನಮಸ್ಕಾರ ಮಾಡುತ್ತಾರೆ. ಇದು ದೀಪಗಳ ಮೇಲಿನ ನಮ್ಮ ಶ್ರದ್ಧೆಯಾಗಿದೆ. ದೀಪಾವಳಿ ಅಂದರೆ ದೀಪಗಳ ಉತ್ಸವ. ಪುರಾತನ ಕಾಲದಿಂದಲೂ ಎಲ್ಲೆಡೆ ದೀಪಕ್ಕೆ ಗೌರವದ ಹಾಗೂ ಶ್ರದ್ಧೆಯ ಮಹತ್ವದ ಅಸಾಧಾರಣ ಸ್ಥಾನವಿದೆ. ಇಂದು ವಿದ್ಯುತ್ತಿನ ಅತ್ಯಾಧುನಿಕ ಉಪಕರಣಗಳ ಮೂಲಕ ದೀಪಗಳು ಮಿನುಗುವುದು ಚೆನ್ನಾಗಿ ಕಾಣಿಸುತ್ತದೆ; ಆದರೆ ಯಾವ ತೇಜವು ದೀಪದಲ್ಲಿ ಕಾಣಿಸುತ್ತದೆಯೋ, ಅದು ಈ ಮಿನುಗುವ ವಿದ್ಯುತ್‌ದೀಪಗಳಲ್ಲಿ ಕಾಣಿಸುವುದಿಲ್ಲ. ಸಾಯಂಕಾಲದಿಂದ ಮುಂಜಾನೆಯ ವರೆಗಿನ ಮಾನವನ ಜೀವನವೆಂದರೆ ಒಂದು ದೀಪವಿಶ್ವವೇ ಆಗಿರುತ್ತದೆ. ದೀಪವು ‘ಪ್ರಕಾಶವನ್ನು ನೀಡುವ ಒಂದು ಸಾಧನ, ಎಂಬುದು ಅದರ ಸರ್ವಸಾಮಾನ್ಯ ಅರ್ಥವಾಗಿದ್ದರೂ, ಅದರ ಕಾರ್ಯ ಹಾಗೂ ಮಹತ್ವ ಮಾತ್ರ ಅಸಾಧಾರಣ ಹಾಗೂ ಅಸಾಮಾನ್ಯವಾಗಿದೆ. ಪ್ರಸ್ತುತ ಸಂಕಲನ ಮಾಡಿದ ಲೇಖನದಲ್ಲಿ ನಾವು ದೀಪಗಳ ಮಹತ್ವ, ಅವುಗಳ ಇತಿಹಾಸ, ವಿಧ ಹಾಗೂ ಪರಂಪರೆ ಇವುಗಳ ಬಗ್ಗೆ ತಿಳಿದುಕೊಳ್ಳೋಣ.

೧. ದೀಪಗಳ ಅಸಾಧಾರಣ ಮಹತ್ವ !

ಸೂರ್ಯ ಹಾಗೂ ಚಂದ್ರ ಇವೆರಡೂ ದೀಪಗಳೇ ಆಗಿವೆ. ಸೂರ್ಯನು ಎಲ್ಲ ಸಮಯದಲ್ಲಿಯೂ ಪ್ರಕಾಶಮಾನವಾಗಿದ್ದರೂ, ಪೃಥ್ವಿಯು ಭ್ರಮಣದಿಂದಾಗಿ ಒಂದು ಭಾಗದಲ್ಲಿ ಅವನ ಪ್ರಕಾಶ ಸಿಗುವ ಕಾಲ ಮಾತ್ರ ಸೀಮಿತವಾಗಿರುತ್ತದೆ, ಅದೇ ರೀತಿ ಚಂದ್ರನ ಪ್ರಕಾಶವು ಕೂಡ ಸ್ವಲ್ಪ ರಾತ್ರಿಗಾಗಿ ಪೂರ್ಣ ಹಾಗೂ ನಂತರ ಕ್ಷೀಣವಾಗುತ್ತಾ ಹೋಗುತ್ತದೆ. ಈ ವಿಶ್ವದೀಪಗಳು ಸೀಮಿತ ಕಾಲದ ವರೆಗೆ ಪ್ರಕಾಶವನ್ನು ನೀಡುತ್ತವೆ. ಆದುದರಿಂದ ಉಳಿದ ಸಮಯದಲ್ಲಿ ಎಲ್ಲೆಡೆ ಅಂಧಃಕಾರ ಹರಡುತ್ತದೆ. ಈ ಕತ್ತಲಿನ ಸಮಯದಲ್ಲಿ ಪ್ರಕಾಶ ನೀಡುವ ಕೆಲಸವನ್ನು ಮಾಡುವ ಸಾಧನವೆಂದರೆ ದೀಪ ! ಆದುದರಿಂದಲೇ ಅದರ ಸ್ಥಾನ ದೃಢವಾಗಿದೆ. ಆಕಾಶದಲ್ಲಿ ರಾತ್ರಿ ಮಿನುಗುವ ಅಸಂಖ್ಯಾತ ನಕ್ಷತ್ರಗಳು ಮನಸ್ಸಿಗೆ ಆನಂದವನ್ನು ನೀಡುತ್ತದೆ ನಿಜ, ಆದರೆ ಕತ್ತಲನ್ನು ಹೋಗಲಾಡಿಸಿ ವ್ಯವಹಾರ ಮಾಡುವಷ್ಟು ತೇಜೋಮಯತೆ ಅವುಗಳಲ್ಲಿ ಇರುವುದಿಲ್ಲ. ಏಕೆಂದರೆ ಅವು ಆಕಾಶದಲ್ಲಿ ತುಂಬಾ ದೂರದಲ್ಲಿರುತ್ತವೆ. ಇದರಿಂದ ಮಾನವನು ನಿರ್ಮಿಸಿದ ದೀಪಗಳು ಅತ್ಯಾವಶ್ಯಕವಾಗಿವೆ. ರಾತ್ರಿಯ ಸಮಯದಲ್ಲಿ ಅಂದರೆ, ಸಾಯಂಕಾಲದಿಂದ ಮುಂಜಾನೆಯ ವರೆಗಿನ ಕಾಲಾವಧಿಯಲ್ಲಿನ ಈ ದೀಪಗಳು ಆವಶ್ಯಕವಾಗಿರುತ್ತವೆ. ಅವು ಕೆಲವು ವ್ಯವಹಾರಗಳಲ್ಲಿ ದಿನದಲ್ಲಿಯೂ ಪ್ರಕಾಶಮಾನವಾಗಿರುತ್ತವೆ. ಈ ದೀಪವಿಶ್ವವು ತುಂಬ ಭಿನ್ನವಾಗಿದೆ.

೨. ದೀಪಗಳ ವಿಧಗಳು

ಮಾನವನು ಅನೇಕ ಶತಮಾನಗಳಿಂದ ಹಲವಾರು ರೀತಿಯ ದೀಪಗಳನ್ನು ನಿರ್ಮಿಸಿದನು ಮತ್ತು ಇಂದಿಗೂ ನಿರ್ಮಿಸುತ್ತಿದ್ದಾನೆ. ಅವು ಪ್ರಮುಖವಾಗಿ ಈ ೩ ವಿಧಗಳಲ್ಲಿ ಬರುತ್ತವೆ. ಎಣ್ಣೆಯ ದೀಪಗಳು, ಗ್ಯಾಸಿನ ದೀಪಗಳು ಹಾಗೂ ವಿದ್ಯುತ್ ದೀಪಗಳು. ಇವುಗಳಲ್ಲದೇ ಸೌರ ಶಕ್ತಿಯ ದೀಪಗಳಿದ್ದರೂ ಅವು ‘ವಿದ್ಯುತ್ ದೀಪ’ ಈ ವಿಧದಲ್ಲಿಯೇ ಬರುತ್ತವೆ.

೩. ಪ್ರಾಚೀನ ಕಾಲದಲ್ಲಿನ ದೀಪಗಳು

೧. ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿನ ಚಿಪ್ಪು ಅಥವಾ ತಗ್ಗುಗಳು ಬಿದ್ದಿರುವ ಕಲ್ಲುಗಳನ್ನು ಉಪಯೋಗಿಸಿ ತಯಾರಿಸಿದ ದೀಪಗಳನ್ನು ಬಳಸುವ ರೂಢಿಯಿತ್ತು. ದೀಪಗಳನ್ನು ತಯಾರಿಸಲು ಕೆಲವು ವನಸ್ಪತಿಗಳ ಬತ್ತಿಗಳನ್ನು ಬಳಸುತ್ತಿದ್ದರು. ಪುರಾತನ ಕಾಲದಲ್ಲಿ ಜನರು ತಗ್ಗುಗಳನ್ನು ಮಾಡಿದ ಕಲ್ಲು ಬಳಸುತ್ತಿದ್ದರು. ಅದರಲ್ಲಿ ಹತ್ತಿಯ ಬತ್ತಿ ಹಾಗೂ ಎಣ್ಣೆಯಿರುತ್ತಿತ್ತು.

೨. ಪ್ರಾಚೀನ ಗ್ರೀಕರು ಹಾಗೂ ರೋಮನ್ನರು ಮಾತ್ರ ದೀಪಗಳನ್ನು ತಯಾರಿಸಲು ಪಂಚಧಾತು, ಹಿತ್ತಾಳೆ ಅಥವಾ ಚೀನಿ ಮಣ್ಣನ್ನು ಬಳಸುತ್ತಿದ್ದರು. ಆ ದೀಪಗಳು ತಟ್ಟೆಯಂತೆ ಅಗಲವಾಗಿರುತ್ತಿದ್ದವು. ಅವುಗಳಲ್ಲಿ ಗಿಡಮೂಲಿಕೆಗಳ ಎಣ್ಣೆಯನ್ನು ಬಳಸುತ್ತಿದ್ದರು. ಆಗ ಬತ್ತಿಯು ಎಣ್ಣೆಯ ಮೇಲೆ ತೇಲುತ್ತಿತ್ತು. ಗ್ರೀಕ್ ಪದ್ಧತಿಯ ದೀಪಗಳಲ್ಲಿ ತಟ್ಟೆಯ ಗಡಿಯಲ್ಲಿ ಒಂದು ಕಚ್ಚಿರುತ್ತಿತ್ತು ಹಾಗೂ ಅದರಲ್ಲಿ ಬತ್ತಿ ಕೂರುತ್ತಿತ್ತು. ಕೆಲವು ರೋಮನ್ನರ ದೀಪಗಳು ಚಹಾದ ಕಿಟ್ಲಿಗಳಂತೆ ಇರುತ್ತಿದ್ದವು. ಅವುಗಳಲ್ಲಿ ಎಣ್ಣೆ ಹಾಗೂ ಕೊಕ್ಕಿನಲ್ಲಿ ಬತ್ತಿ ಇರುತ್ತಿತ್ತು.

೩. ಮುಂದೆ ಕೆಲವು ಜನರು ಬತ್ತಿ ಹೋಗುವಂತೆ ಒಂದು ಟೊಳ್ಳಾದ ಪೈಪನ್ನು ತಯಾರಿಸಿ ಅದರ ಮೇಲೆ ಗಾಜು ಕುಳಿತುಕೊಳ್ಳುವಂತೆ ದೀಪವನ್ನು ತಯಾರಿಸಿದರು. ಇದರಿಂದ ಚಿಮಣಿಯ ಎಣ್ಣೆ ದೀಪದ ಶೋಧವಾಯಿತು.

೪. ಕಾಲಾಂತರದಲ್ಲಿ ಗ್ಯಾಸಿನ ದೀಪಗಳನ್ನು ಕಂಡುಹಿಡಿಯಲಾಯಿತು.

೫. ಅನಂತರ ೧೯ ನೇ ಶತಕದಲ್ಲಿ ವಿದ್ಯುತ್‌ ದೀಪಗಳ ಶೋಧವಾಯಿತು. ಇದರಿಂದ ಮೇಲಿನ ದೀಪಗಳ ಬಳಕೆ ಕ್ಷೀಣಿಸಿತು.

೪. ಇಂದಿಗೂ ಎಣ್ಣೆ ಹಾಗೂ ಹತ್ತಿಯ ಬತ್ತಿಯಿರುವ ಹಣತೆಗಳ ಸ್ಥಾನ ಸ್ಥಿರವಾಗಿದೆ !

ದೀಪಾವಳಿ ಹಾಗೂ ಇತರ ಧಾರ್ಮಿಕ ಹಬ್ಬ ಹಾಗೂ ಸಮಾರಂಭಗಳಲ್ಲಿ ನೀಲಾಂಜನ ಹಾಗೂ ಕಾಲು ದೀಪಗಳ ಸ್ಥಾನಕ್ಕೆ ಅಸಾಧಾರಣ ಮಹತ್ವವಿದೆ. ಮಣ್ಣಿನ ಎಣ್ಣೆ ಬತ್ತಿಗಳ ಹಣತೆಗಳ ಸ್ಥಾನವೂ ಸ್ಥಿರವಾಗಿದೆ. ವಿದ್ಯುತ್ಕಡಿತವಾದಾಗ ವಿದ್ಯುತ್ ದೀಪಗಳು ಬಳಕೆ ಇಲ್ಲದಂತಾಗುತ್ತದೆ. ಆಗ ಮನೆಮನೆಗಳಲ್ಲಿ ಮೇಣದ ಬತ್ತಿ, ಸೀಮೆ ಎಣ್ಣೆಯ ಚಿಮಣಿ, ಕಂದೀಲು ಇತ್ಯಾದಿ ಸಾಧನಗಳನ್ನು ಪ್ರಮುಖವಾಗಿ ಬಳಸಲಾಗುತ್ತಿತ್ತು.

೫. ಪಂಜು ಎಂದರೆ ಐತಿಹಾಸಿಕ ಪ್ರಕಾಶದೀಪವೇ !

ಪಂಜು ಅಥವಾ ದೀವಟಿಗೆಗಳೂ ಪ್ರಕಾಶ ದೀಪಗಳೇ ಆಗಿವೆ. ಪೇಶ್ವೆಗಳ ಕಾಲದಲ್ಲಿ ಕೆಲವು ವಿದ್ವಾಂಸರನ್ನು ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಹೋಗುವಾಗ ಹಗಲಿನಲ್ಲಿಯೂ ಪಂಜುಗಳನ್ನು ಹಚ್ಚಿಕೊಂಡು ಹೋಗಿ, ಅವರ ವಿದ್ವತ್ತನ್ನು ಗೌರವಿಸಲಾಗುತ್ತಿತ್ತು. ಹಿಂದೆ ಪಂಜುಗಳನ್ನು ಅಥವಾ ದೀವಟಿಗೆಗಳನ್ನು ಹಚ್ಚಿಕೊಂಡು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗುತ್ತಿದ್ದರು. ಹಿಂದೆ ಕೋಟೆಗಳಲ್ಲಿ ರಾತ್ರಿಯ ಸಮಯದಲ್ಲಿ ಕಾವಲನ್ನು ಕಾಯುವ ಸೈನಿಕರಿಗೆ ಇದೇ ಪಂಜುಗಳ ಆಧಾರವಿತ್ತು. ಹಿಂದೆ ಸಭೆಗಳು, ಹಾಗೆಯೇ ದೇವಸ್ಥಾನಗಳಲ್ಲಿ ಪ್ರವಚನಗಳ ಸಮಯದಲ್ಲಿಯೂ ಪಂಜುಗಳನ್ನು ಅಥವಾ ದೀವಟಿಗೆಗಳನ್ನು ಬಳಸಲಾಗುತ್ತಿತ್ತು.

೬. ನಯನಮನೋಹರ ದೀಪೋತ್ಸವ !

ಅನೇಕ ದೇವಾಲಯಗಳ ಪ್ರಾಂಗಣಗಳಲ್ಲಿ ಇಂದಿಗೂ ದೀಪಮಾಲೆ ಅಸ್ತಿತ್ವದಲ್ಲಿದೆ. ಹಬ್ಬ ಅಥವಾ ಉತ್ಸವಗಳ ದಿನ ಈ ದೀಪಗಳನ್ನು ಪ್ರಜ್ವಲಿಸಲಾಗುತ್ತದೆ. ಆಗ ಕಾಣಿಸುವ ನಯನಮನೋಹರ ರೂಪವು ಶಬ್ದಾತೀತವಾಗಿರುತ್ತದೆ. ದೇವಸ್ಥಾನಗಳ ಕೆಳಗಿನ ಮೆಟ್ಟಿಲಿನಿಂದ ಕಳಸದ ತನಕ ಮಾಡಲಾಗುವ ದೀಪಗಳ ಅಲಂಕಾರ ಮತ್ತು ಆಕರ್ಷಕ ಜೋಡಣೆಯು ಎಲ್ಲರಿಗೂ ತಿಳಿದಿದೆ. ಹರಿದ್ವಾರದಲ್ಲಿ ಗಂಗಾನದಿಯ ತೀರದಲ್ಲಿ ಇಂತಹ ಅಸಂಖ್ಯಾತ ದೀಪಗಳನ್ನು ನೀರಿನಲ್ಲಿ ಬಿಡಲಾಗುತ್ತದೆ. ನೀರಿನೊಂದಿಗೆ ಹರಿಯುತ್ತ ಹೋಗುವ ಈ ದೀಪಗಳು ಹಾಗೂ ಅವುಗಳ ನೀರಿನಲ್ಲಿನ ಪ್ರತಿಬಿಂಬಗಳ ನಯನಮನೋಹರ ದೃಶ್ಯವು ಮನಸ್ಸಿನಲ್ಲಿ ಮನೆ ಮಾಡುತ್ತದೆ.

೭. ನೈಸರ್ಗಿಕ ದೀಪಗಳಾಗಿ ಹೊಳೆಯುವ ಅಸಂಖ್ಯಾತ ಮಿಂಚುಹುಳಗಳು !

ಮಿಂಚುಹುಳಗಳು ಕೂಡ ಪ್ರಕಾಶ ದೀಪಗಳೇ ಆಗಿವೆ. ಕರಾವಳಿ ಭಾಗದಲ್ಲಿ ಮಳೆಗಾಲದ ಮೊದಲು ಅಸಂಖ್ಯಾತ ಮಿಂಚು ಹುಳಗಳು ಮಿಂಚುತ್ತಾ ಹಾರುಡುತ್ತಿರುತ್ತವೆ. ಸಂಪೂರ್ಣ ಗಿಡವೇ ಅವುಗಳ ಪ್ರಕಾಶದಿಂದ ಮಿಂಚುತ್ತಿರುತ್ತದೆ. ಈ ಅಲಂಕಾರವು ಸಂಪೂರ್ಣ ನೈಸರ್ಗಿಕವಾಗಿದೆ ! ಈ ಆಕರ್ಷಕ ಹೊಳೆಯುವಿಕೆಯನ್ನು ಸತತ ನೋಡುತ್ತಲೇ ಇರಬೇಕು ಎಂದು ಅನಿಸುತ್ತದೆ. ಮಳೆಗಾಲ ಪ್ರಾರಂಭವಾದ ಕೂಡಲೇ ಈ ಹಾರಾಡುವ ದೀಪಗಳು ಎಲ್ಲಿ ಹಾರಿ ಹೋಗುತ್ತವೆ ಎಂಬುದು ತಿಳಿಯುವುದೇ ಇಲ್ಲ. ಅವು ಒಂದು ವರ್ಷದ ನಂತರ ಮುಂದಿನ ಮಳೆಗಾಲದ ಮೊದಲು ಪುನಃ ಕಾಣಿಸುತ್ತವೆ. ಅವು ಒಂದು ರೀತಿಯಲ್ಲಿ ಮಳೆಗಾಲದ ಸೂಚನೆಯನ್ನು ನೀಡುವ ನಿಸರ್ಗದೀಪಗಳೇ ಆಗಿವೆ.

೮. ಭಾವಭಕ್ತಿಯನ್ನು ಹೆಚ್ಚಿಸುವ ಮನೆಗಳಲ್ಲಿನ ಸಾಯಂಕಾಲದ ಸಮಯದಲ್ಲಿ ಹಚ್ಚುವ ದೀಪ !

ದೀಪದೊಂದಿಗೆ ಮಾಂಗಲ್ಯದ, ಪಾವಿತ್ರ್ಯದ ಹಾಗೂ ಅದರಲ್ಲಿ ದೇವತ್ವವಿರುವುದರ ಭಾವನೆಯು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ಮೂಡಿದೆ. ಆದ್ದರಿಂದ ದೀಪ ಹಚ್ಚುವ ಸಮಯದಲ್ಲಿ ನಮ್ಮ ಕರಗಳು ತನ್ನಷ್ಟಕ್ಕೆ ಜೋಡಿಸಲ್ಪಡುತ್ತವೆ. ದೇವರಕೋಣೆ ಹಾಗೂ ತುಳಸಿ ವೃಂದಾವನಗಳಲ್ಲಿ ನೀಲಾಂಜನ ಅಥವಾ ಹಣತೆಯನ್ನು ಹಚ್ಚುವುದು ನಮ್ಮ ಪ್ರಾಚೀನ ಪರಂಪರೆಯಾಗಿದೆ. ಇತ್ತೀಚೆಗೆ ‘ಫ್ಲ್ಯಾಟ್ ಸಂಸ್ಕೃತಿ’ಗಳ ಯುಗದಲ್ಲಿ ತುಳಸೀ ವೃಂದಾವನ ಇತ್ಯಾದಿಗಳು ಕಾಣಿಸುವುದೇ ಇಲ್ಲ; ಆದರೆ ಹಳ್ಳಿಗಳಲ್ಲಿ ಅದೇ ರೀತಿ ದೇವಸ್ಥಾನಗಳಲ್ಲಿ ಮತ್ತು ಆಶ್ರಮಗಳಲ್ಲಿ ಮಾತ್ರ ಈ ಮಂಗಳ ಆಚರಣೆ ಈಗಲೂ ಕಾಣಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸುವ ‘ತಮಸೋ ಮಾ ಜ್ಯೋತಿರ್ಗಮಯ’ವನ್ನು ಹೇಳುವ ಹಾಗೂ ‘ಶುಭಂ ಕರೋತಿ ಕಲ್ಯಾಣಂ’ನಂತಹ ಮಂಗಲಮಯ ಸ್ತೋತ್ರಗಳನ್ನು ಹೇಳುವ ಭಾಗ್ಯ ಈಗ ಎಷ್ಟು ಮನೆಗಳಲ್ಲಿದೆ ? ದೀಪವು ಅಂಧಃಕಾರವನ್ನು ದೂರಗೊಳಿಸುವುದಾಗಿದ್ದರೂ, ಅದು ಯಾವ ಅಂಧಃಕಾರವನ್ನು ದೂರಗೊಳಿಸಬೇಕು ಎಂಬುದಕ್ಕೂ ಬೇರೆ ಬೇರೆ ನಂಬಿಕೆಗಳಿವೆ. ಅಂಧಃಕಾರವು ಕೇವಲ ಪ್ರಾಕೃತಿಕವಷ್ಟೇ ಆಗಿರುತ್ತದೆ ಎಂದೇನಿಲ್ಲ, ಬದಲಾಗಿ ಮಾನವನ ಜೀವನದಲ್ಲಿ ಅನೇಕ ವಿಧದ ನೆರಳು ಅಥವಾ ಕತ್ತಲೆಗಳು ಬರುತ್ತವೆ ಹಾಗೂ ಜೀವನವನ್ನು ಕಪ್ಪಾಗಿಸುತ್ತವೆ. ಆದ್ದರಿಂದ ಈ ಕತ್ತಲೆಯನ್ನು ದೂರ ಮಾಡಲು ದೀಪವು ಉಪಯೋಗವಾಗುತ್ತದೆ.

೯. ತಿಮಿರನಾಶಕ ಜ್ಞಾನದೀಪವಾಗಿರುವ ಗುರುಗಳು !

ಜ್ಞಾನದೀಪಗಳು ಅಜ್ಞಾನದ ತಿಮಿರನಾಶಕವಾಗಿರುತ್ತವೆ. ನಿಜವಾದ ಜ್ಞಾನವು ಗುರುಗಳಿಂದಲೇ ಸಿಗುತ್ತದೆ. ಜ್ಞಾನ ಸಿಗುತ್ತಾ ಹೋದಂತೆ ಅಜ್ಞಾನವು ನಾಶವಾಗುತ್ತಾ ಹೋಗುತ್ತದೆ. ಇದು ಜ್ಯೋತಿಯಿಂದ ಜ್ಯೋತಿಯನ್ನು ಹಚ್ಚುವುದರ ಹಾಗಿರುತ್ತದೆ. ಗುರುಪರಂಪರೆಯು ಇದರ ಒಂದು ಉತ್ತಮ ಉದಾಹರಣೆಯಾಗಿದೆ. ಈ ಜ್ಞಾನದೀಪವನ್ನು ನಾವೇ ಬೆಳಗಿಸುತ್ತಿರಬೇಕು. ನಮ್ಮ ನಿಷ್ಠೆಯು ಅದನ್ನು ಉರಿಸಿಡಲು ಸಾಧ್ಯವಿದೆ. ಹೇಗೆ ನಾವು ಜ್ಞಾನವನ್ನು ಪಡೆಯುತ್ತಾ ಹೋಗುತ್ತೇವೆಯೋ, ಹಾಗೆ, ಈ ದೀಪವು ಇನ್ನೂ ಪ್ರಖರವಾಗಿ ಉರಿಯುತ್ತಾ ಹೋಗುತ್ತದೆ. ಈ ಪ್ರಖರ ಜ್ಞಾನದೀಪಗಳೆಂದರೆ ಆಯುಷ್ಯವನ್ನು ಸಮಿಧೆಯನ್ನಾಗಿ ಮಾಡಿ ಜ್ಞಾನಾರ್ಜನೆ ಮಾಡಿದ ಮತ್ತು ಆ ಜ್ಞಾನವನ್ನು ಅಷ್ಟೇ ತಳಮಳದಿಂದ ಸಮಾಜಕ್ಕೆ ನೀಡುವ ಸಂತರು. ಅವರು ಅಖಂಡ ವಿದ್ಯಾರ್ಥಿಗಳಾಗಿರುತ್ತಾರೆ. ಭಗವಾನ್ ಶ್ರೀಕೃಷ್ಣ, ಶ್ರೀರಾಮ, ಸಂತ ಜ್ಞಾನೇಶ್ವರ ಮಹಾರಾಜರು, ಸಂತ ತುಕಾರಾಮ ಮಹಾರಾಜರು ಹೀಗೆ ಅನೇಕ ಹೆಸರುಗಳನ್ನು ಹೇಳಬಹುದು. ಅವರ ಕಾರ್ಯವು ಉತ್ತುಂಗವಾಗಿರುವುದರಿಂದಲೇ ಅವರ ಗ್ರಂಥಗಳು ಇಂದು ಅವರ ಅಸ್ತಿತ್ವದ ದೀಪಗಳಾಗಿವೆ. ಯಾವುವು ಅಜರಾಮರವಾಗುತ್ತವೆಯೋ, ಅವು ಜ್ಞಾನ ದೀಪಗಳಾಗಿರುತ್ತವೆ. ಅವರ ಪ್ರಾಣಜ್ಯೋತಿ ಆರಿ ಹೋದರೂ, ಜ್ಞಾನಜ್ಯೋತಿಯು ಅಕ್ಷಯವಾಗಿರುತ್ತದೆ. ಅವರ ಕಾರ್ಯವು ಕೀರ್ತಿಯ ದೀಪವನ್ನು ಹಚ್ಚಿ ಹೋಗುತ್ತದೆ. ಆ ದೀಪಗಳನ್ನು ಕಾಲಕ್ಕೂ ಆರಿಸಲು ಸಾಧ್ಯವಾಗುವುದಿಲ್ಲ. ಗ್ರಂಥಗಳ ರೂಪದಲ್ಲಿನ ಈ ದೀಪಗಳನ್ನು ಮನೆಮನೆಗಳಲ್ಲಿ ಪವಿತ್ರ ಭಾವನೆಯಿಂದ ಇಡಲಾಗುತ್ತದೆ. ಅವುಗಳನ್ನು ಪೂಜಿಸಲಾಗುತ್ತದೆ, ಅವುಗಳ ಪಠಣ ಮತ್ತು ಆರತಿಯನ್ನೂ ಮಾಡಲಾಗುತ್ತದೆ. ವೇದಗಳಂತೂ ಸರ್ವಶ್ರೇಷ್ಠ ಹಾಗೂ ಆದಿ ಜ್ಞಾನದೀಪಗಳಾಗಿವೆ. ಇಂತಹ ಮಹಾನ ಗ್ರಂಥಗಳು ನಮ್ಮ ಆಯುಷ್ಯದಲ್ಲಿನ ಜ್ಞಾನದೀಪಗಳ ಭಂಡಾರವಾಗಿವೆ. ಇವು ಸರಸ್ವತಿಯ ದೀಪಗಳಾಗಿವೆ. ಅವುಗಳ ಪ್ರಕಾಶವನ್ನು ಬುದ್ಧಿಯಿಂದ ತಿಳಿದುಕೊಳ್ಳಬೇಕಾಗುತ್ತದೆ ಹಾಗೂ ಕೃತಿಗಳ ಮೂಲಕ ಮನಸ್ಸಿನ ಅಂತರಂಗವನ್ನು ಬೆಳಗಿಸುವುದಿರುತ್ತದೆ. ಚರ್ಮಚಕ್ಷುಗಳಿಂದ ಓದುವುದು ಹಾಗೂ ಕರ್ಣೇಂದ್ರಿಯಗಳಿಂದ ಧ್ವನಿರೂಪದಲ್ಲಿ ಗ್ರಹಿಸಬೇಕಾಗುತ್ತದೆ. ಹಿಂದೆ ಜ್ಞಾನಿ ಪುರುಷರಿಗೆ ‘ದಶಗ್ರಂಥಿ’ಎಂಬ ಬಹುಮಾನವಿರುತ್ತಿತ್ತು. ಈ ಜ್ಞಾನದೀಪಗಳಿಗೆ ಎಣ್ಣೆ, ತುಪ್ಪ ಅಥವಾ ಇತರ ಮಾಧ್ಯಮಗಳೇನೂ ಬೇಕಾಗುವುದಿಲ್ಲ ಅಥವಾ ಅವು ಕಪ್ಪಾಗುವುದಿಲ್ಲ. ಕೇವಲ ಹೇಗೆ ನಮ್ಮ ಭಾವನೆ, ಹಾಗೆ ಅವುಗಳ ಸ್ಥಾನ. ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ, ಎಂಬುದು ಈ ಸಾತ್ತ್ವಿಕ ಜ್ಞಾನದೀಪಗಳಿಗೆ ಅನ್ವಯಿಸುತ್ತದೆ.

– ಆಚಾರ್ಯ ವಸಂತ ಗೋಡಬೋಲೆ (ಆಧಾರ : ಸಾಪ್ತಾಹಿಕ ಲೋಕಪ್ರಭಾ, ೧೭.೧೦.೨೦೧೪)

Leave a Comment