ಅಭ್ಯಂಗಸ್ನಾನ (ಮಂಗಲ ಸ್ನಾನ)

Article also available in :


ವ್ಯಾಖ್ಯೆ

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ.

ವರ್ಷದಲ್ಲಿ ಅಭ್ಯಂಗಸ್ನಾನವನ್ನು ಮಾಡುವ ದಿನಗಳು

೧. ಸಂವತ್ಸರಾರಂಭ (ಯುಗಾದಿ)
೨. ವಸಂತೋತ್ಸವವು ಪ್ರಾರಂಭವಾಗುವ ದಿನ ಅಂದರೆ ಫಾಲ್ಗುಣ ಕೃಷ್ಣ ಪ್ರತಿಪದಾ
೩. ದೀಪಾವಳಿಯ ಮೂರು ದಿನಗಳು, ಅಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಆಶ್ವಯುಜ ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ

ಲಾಭಗಳು

೧. ಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ; ಇದರ ಪರಿಣಾಮವು ನಿತ್ಯದ ಸ್ನಾನದಿಂದ ಮೂರು ಗಂಟೆ ಉಳಿದರೆ ಅಭ್ಯಂಗಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆ ಉಳಿಯುತ್ತದೆ.

೨.  ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕಾಗುತ್ತದೆ, ಆದುದರಿಂದ ಎಣ್ಣೆಯನ್ನು ಹಚ್ಚುತ್ತಾರೆ.

೩. ಬಿಸಿನೀರು ಮಂಗಲಕಾರಕ ಮತ್ತು ಶರೀರಕ್ಕೆ ಸುಖದಾಯಕವಾಗಿರುತ್ತದೆ; ಆದುದರಿಂದ ಬಿಸಿನೀರಿನಿಂದ ಸ್ನಾನವನ್ನು ಮಾಡುತ್ತಾರೆ. ಎಣ್ಣೆಯನ್ನು ಹಚ್ಚಿದ ನಂತರ ಸ್ನಾನವನ್ನು ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆಯು ಉಳಿಯುತ್ತದೆ. ಆದುದರಿಂದ ಸ್ನಾನಕ್ಕೆ ಮೊದಲು ಎಣ್ಣೆಯನ್ನು ಹಚ್ಚುವುದು ಆವಶ್ಯಕವಾಗಿದೆ. ಸ್ನಾನದ ನಂತರ ಎಣ್ಣೆಯನ್ನು ಹಚ್ಚುವುದು ಯೋಗ್ಯವಲ್ಲ.

ಅಭ್ಯಂಗಸ್ನಾನದ ಮಹತ್ವ

ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆಯಲ್ಲಿ ಶೇ.೬ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ. ಸುಗಂಧಯುಕ್ತ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿಕೊಂಡು ಶರೀರಕ್ಕೆ ಮಾಲಿಶ ಮಾಡಿ ಅಭ್ಯಂಗಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಸಾತ್ತ್ವಿಕತೆ ಮತ್ತು ತೇಜವು ಹೆಚ್ಚಾಗುತ್ತದೆ.

ಉಟಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡುವುದರಿಂದ ಕಫ ಮತ್ತು ಕೊಬ್ಬು ಕಡಿಮೆಯಾಗುವುದು

ಉದ್ವರ್ತನಂ ಕಫಹರಂ ಮೇದಸಃ ಪ್ರವಿಲಾಯನಮ್|
ಸ್ಥಿರೀಕರಣಮಂಗಾನಾಂ ತ್ವಕ್ಪ್ರಸಾದಕರಂ ಪರಮ್||
– ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೨, ಶ್ಲೋಕ ೧೪

ಅರ್ಥ: ಶರೀರಕ್ಕೆ ಉಟಣೆಯನ್ನು ಹಚ್ಚಿಕೊಳ್ಳುವುದರಿಂದ ಕಫ ಮತ್ತು ಕೊಬ್ಬು ದೂರವಾಗಿ ಶರೀರವು ಸುದೃಢವಾಗುತ್ತದೆ ಮತ್ತು ಚರ್ಮವು ಸ್ವಚ್ಛವಾಗುತ್ತದೆ.
(ಉಟಣೆ ಎಂದರೆ ಆಯುರ್ವೇದೀಯವಾದ ನೈಸರ್ಗಿಕ ಘಟಕಗಳಿಂದ ತಯಾರಿಸಿದ ಚೂರ್ಣ)

ಸುವಾಸನೆ ಎಣ್ಣೆ ಮತ್ತು ಉಟಣೆ ಇವು ಸಾತ್ತ್ವಿಕವಾಗಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಆವರಣವು ನಾಶವಾಗಿ ಶರೀರವು ಶುದ್ಧ ಮತ್ತು ಸಾತ್ತ್ವಿಕವಾಗಲು ಸಹಾಯವಾಗುತ್ತದೆ : ಸುವಾಸನೆ ಎಣ್ಣೆ ಮತ್ತು ಉಟಣೆಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿರುತ್ತದೆ ಮತ್ತು ಅವು ಸಾತ್ತ್ವಿಕವಾಗಿರುತ್ತವೆ. ಅವುಗಳ ಸುವಾಸನೆಯೂ ಸಾತ್ತ್ವಿಕವಾಗಿರುತ್ತದೆ. ಅವುಗಳಲ್ಲಿ ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸಿಕೊಳ್ಳುವ ಕ್ಷಮತೆಯಿರುತ್ತದೆ. ಸುವಾಸನೆ ಎಣ್ಣೆ ಅಥವಾ ಉಟಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಶರೀರದಲ್ಲಿನ ರಜ-ತಮ ಲಹರಿಗಳು ಕಡಿಮೆಯಾಗುತ್ತವೆ. ಹಾಗೆಯೇ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಶಕ್ತಿಯ ಆವರಣವು ನಾಶವಾಗಿ ಶರೀರವು ಶುದ್ಧ ಹಾಗೂ ಸಾತ್ತ್ವಿಕವಾಗಲು ಸಹಾಯವಾಗುತ್ತದೆ.

ಶರೀರಕ್ಕೆ ಉಟಣೆ ಹಚ್ಚುವ ಪದ್ಧತಿ

ಉಟಣೆಯು ರಜೋಗುಣ ಮತ್ತು ತೇಜತತ್ತ್ವಕ್ಕೆ ಸಂಬಂಧಿಸಿದೆ. ಶರೀರದ ಮೇಲೆ ದಕ್ಷಿಣಾವರ್ತ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿನಂತೆ ಉಟಣೆಯನ್ನು ಹಚ್ಚಿಕೊಳ್ಳಬೇಕು. ಕೈ ಬೆರಳುಗಳ ತುದಿಯು ಶರೀರವನ್ನು ಸ್ಪರ್ಷಿಸುವಂತೆ ಮತ್ತು ಶರೀರದ ಮೇಲೆ ಸ್ವಲ್ಪ ಒತ್ತಡ ಬರುವಂತೆ ನೋಡಬೇಕು.

೧. ಹಣೆ: ತರ್ಜನಿ, ಮಧ್ಯಮಾ ಮತ್ತು ಅನಾಮಿಕಾ ಈ ಬೆರಳುಗಳಿಂದ ಹಣೆ ಮೇಲೆ ತಮ್ಮ ಎಡದಿಂದ ಬಲಕ್ಕೆ ಭಸ್ಮದಂತೆ ಉಟಣೆ ಹಚ್ಚಿಕೊಳ್ಳಬೇಕು. ಉಟಣೆ ಹಚ್ಚಿಕೊಳ್ಳುವಾಗ ಬಲದಿಂದ ಎಡಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಬಾರದು.

೨. ಹಣೆಯ ಎರಡೂ ಕಡೆಗೆ ಮತ್ತು ಹುಬ್ಬುಗಳ ಹೊರಭಾಗಕ್ಕೆ ಬೆರಳುಗಳ ಅಗ್ರಭಾಗವನ್ನಿಟ್ಟು ಅವುಗಳನ್ನು ಹಿಂದೆ ಮುಂದೆ ಸರಿಸಬೇಕು.

೩. ಕಣ್ಣು ರೆಪ್ಪೆ : ಮೂಗಿನಿಂದ ಕಿವಿಯೆಡೆಗೆ ಕೈಯನ್ನು ತಿರುಗಿಸುತ್ತಾ ಕಣ್ಣು ರೆಪ್ಪೆಯ ಮೇಲೆ ಉಟಣೆ ಯನ್ನು ಹಚ್ಚಬೇಕು.

೪. ಮೂಗು : ಬಲಗೈಯ ಹೆಬ್ಬೆರಳು ಮತ್ತು ತರ್ಜನಿಯಿಂದ ಮೂಗಿನ ಎರಡೂ ಬದಿಗೆ ಮೇಲಿನಿಂದ ಕೆಳಗೆ ಉಟಣೆಯನ್ನು ಹಚ್ಚಬೇಕು ಮತ್ತು ಅದನ್ನು ಆಘ್ರಾಣಿಸಬೇಕು.

೫. ಮುಖದ ನಾಲ್ಕೂ ಬದಿಗೆ : ಮೂಗಿನ ಕೆಳಗಿನಿಂದ ನಮ್ಮ ಬಲಬದಿಗೆ ಗದ್ದದ ತುದಿಯ ವರೆಗೆ ಹಚ್ಚಬೇಕು. ನಂತರ ಗದ್ದದ ತುದಿಯಿಂದ ನಮ್ಮ ಎಡಬದಿಗೆ ಹೋಗಿ ಮುಖದ ಸುತ್ತಲೂ ಗೋಲವನ್ನು ಪೂರ್ಣಗೊಳಿಸಿ ಉಟಣೆ ಹಚ್ಚಿಕೊಳ್ಳಬೇಕು.

೬. ಕೆನ್ನೆ : ಎರಡೂ ಕೆನ್ನೆಯ ಮಧ್ಯದಿಂದ ಆರಂಭಿಸಿ ನಮ್ಮ ಬೆರಳುಗಳನ್ನು ಕಣ್ಣು, ಕಿವಿ ಮತ್ತು ಕೊನೆಗೆ ಕೆಳಗಿನ ದಿಕ್ಕಿನಲ್ಲಿ ವರ್ತುಲಾಕಾರದಲ್ಲಿ ತಿರುಗಿಸುತ್ತಾ ಕೆನ್ನೆಯ ಮೇಲೆ ಉಟಣೆಯನ್ನು ಹಚ್ಚಿಕೊಳ್ಳಬೇಕು.

೭. ಕಿವಿಯ ಕೆಳ ತುದಿ : ಎರಡೂ ಕಿವಿಯ ಕೆಳ ತುದಿಯ ಮೇಲೆ ಹೆಬ್ಬೆರಳು ಮತ್ತು ತರ್ಜನಿಯಿಂದ ಉಟಣೆಯನ್ನು ಹಚ್ಚಬೇಕು.

೮. ಕಿವಿ : ಹೆಬ್ಬೆರಳು ಮತ್ತು ತರ್ಜನಿಯಿಂದ ಎರಡೂ ಕಿವಿಗಳನ್ನು ಹಿಂದಿನಿಂದ ಹಿಡಿದು ಕೆಳಗಿನಿಂದ ಮೇಲಿನ ದಿಕ್ಕಿನತ್ತ ತಿರುಗಿಸಬೇಕು.

೯. ಕುತ್ತಿಗೆ : ಕುತ್ತಿಗೆ ಹಿಂದೆ ಮಧ್ಯಭಾಗದಲ್ಲಿ ಬೆರಳುಗಳನ್ನಿಟ್ಟು ಎರಡೂ ಬದಿಯಿಂದ ಮುಂದೆ ಕುತ್ತಿಗೆಯ ಕೆಳ ಭಾಗದ ತನಕ

೧೦. ಎದೆ ಮತ್ತು ಹೊಟ್ಟೆಯ ಮಧ್ಯಭಾಗ : ಎರಡೂ ಕೈಗಳ ಬೆರಳುಗಳನ್ನು ಎದೆಯ ಮಧ್ಯಭಾಗದಲ್ಲಿ ಬರುವಂತೆ ಇಟ್ಟು ಮೇಲಿನಿಂದ ಕೆಳಗೆ ಕೈಯಾಡಿಸಿ ಉಟಣೆಯನ್ನು ಹಚ್ಚಬೇಕು.

೧೧. ಕಂಕುಳಿಂದ ಸೊಂಟದವರೆಗೆ : ಪಕ್ಕೆಗಳತ್ತ ಮುಂಬದಿಗೆ ಹೆಬ್ಬೆರಳು ಮತ್ತು ಹಿಂಬದಿ ಉಳಿದ ಬೆರಳು ಬರುವಂತೆ ಮೇಲಿನಿಂದ ಕೆಳದಿಕ್ಕಿನತ್ತ ಹಚ್ಚಬೇಕು.

೧೨. ಕೈ-ಕಾಲು: ಕೈಗಳಿಗೆ ಮೇಲಿನಿಂದ ಕೆಳಗೆ ಉಟಣೆ ಹಚ್ಚಬೇಕು. ಅದೇ ರೀತಿ ಕಾಲುಗಳಿಗೆ ಕೈಬೆರಳುಗಳಿಂದ ಮೇಲಿನಿಂದ ಕೆಳಗೆ ಉಟಣೆಯನ್ನು ಹಚ್ಚಬೇಕು.

೧೩. ಕಾಲುಗಳ ಸಂದುಗಳು ಅಂದರೆ ಆಂಕಲ್ಸ್: ಕಾಲು ಮತ್ತು ಕಾಲುಗಳ ಸಂದು ಅಂದರೆ Ankle joints ನ ಮೇಲೆ ಹೆಬ್ಬೆರಳು ಮತ್ತು ತರ್ಜನಿಯಿಂದ ವರ್ತುಲದಂತೆ ತಿಕ್ಕಬೇಕು.

ಉಟಣೆಯನ್ನು ಹಚ್ಚಿದ ನಂತರ ಕೊನೆಗೆ ತಲೆಯ ಮಧ್ಯಭಾಗದಲ್ಲಿ ಎಣ್ಣೆಯನ್ನು ಹಾಕಿ ಬಲಗೈಯ ಬೆರಳುಗಳಿಂದ ದಕ್ಷಿಣಾವರ್ತ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ತಿರುಗಿಸುತ್ತಾ ಹಚ್ಚಬೇಕು.

ದೀಪಾವಳಿಯಂದು ಉಟಣೆ ಹಚ್ಚಿಕೊಳ್ಳುವುದರ ಅಧ್ಯಾತ್ಮಶಾಸ್ತ್ರೀಯ ಮಹತ್ವ

ದೀಪಾವಳಿಯ ಕಾಲಾವಧಿಯು ಉಟಣೆಯ ಉಪಯೋಗಕ್ಕೆ ಹೆಚ್ಚು ಪೂರಕವಾಗಿದೆ. ಉಟಣೆಯನ್ನು ಉಪಯೋಗಿಸುವ ಮುಂಚೆ ಅದರಲ್ಲಿ ಸುಗಂಧಿತ ಎಣ್ಣೆಯನ್ನು ಸೇರಿಸಲಾಗುತ್ತದೆ. ದೀಪಾವಳಿಯ ಕಾಲಾವಧಿಯಲ್ಲಿ ಬ್ರಹ್ಮಾಂಡದಿಂದ ಆಪ, ತೇಜ ಮತ್ತು ವಾಯುಯುಕ್ತ ಚೈತನ್ಯ ಪ್ರವಾಹವು ಪೃಥ್ವಿಯ ಮೇಲೆ ಆಗಮಿಸುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ವಾತಾವರಣದಲ್ಲಿ ದೇವತೆಗಳ ತತ್ತ್ವದ ಪ್ರಮಾಣವೂ ಹೆಚ್ಚಿರುತ್ತದೆ. ಈ ಕಾಲಾವಧಿಯಲ್ಲಿ ಶರೀರಕ್ಕೆ ಉಟಣೆಯನ್ನು ಹಚ್ಚಿಕೊಳ್ಳುವುದರಿಂದ ಅದರಲ್ಲಿರುವ ಘಟಕಗಳಿಂದ ಶರೀರಕ್ಕೆ ಚೈತನ್ಯವನ್ನು ಗ್ರಹಿಸುವ ಕ್ಷಮತೆಯು ಹೆಚ್ಚಾಗುತ್ತದೆ. ಆದುದರಿಂದ ದೇವತೆಗಳ ತತ್ತ್ವದ ಚೈತನ್ಯಪ್ರವಾಹವು ವ್ಯಕ್ತಿಯ ಶರೀರದಲ್ಲಿ ಹರಡುತ್ತದೆ. ಇದರಿಂದ ವ್ಯಕ್ತಿಗೆ ಹೆಚ್ಚು ಪ್ರಮಾಣದಲ್ಲಿ ಚೈತನ್ಯವು ಲಭಿಸುತ್ತದೆ.

ಅಭ್ಯಂಗಸ್ನಾನದ ಬಗ್ಗೆ ಸೂಕ್ಷ್ಮಸ್ತರದ ಜ್ಞಾನ

ಅ. ಅರ್ಥ

೧. ಅಭ್ಯಂಗಸ್ನಾನ ಎಂದರೆ ಬೆಳಗಿನ ಸಮಯದಲ್ಲಿ ಎದ್ದು, ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು.

೨. ಪಿಂಡದ ಉತ್ಕರ್ಷಕ್ಕಾಗಿ ಮಾಡಿದ ಸ್ನಾನವೆಂದರೆ ಅಭ್ಯಂಗಸ್ನಾನ.

ಆ. ಅಭ್ಯಂಗಸ್ನಾನಕ್ಕಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದರ ಮಹತ್ವ: ಅಭ್ಯಂಗದಿಂದ, ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಪಿಂಡದಲ್ಲಿನ ಚೇತನದ ಪ್ರವಾಹಕ್ಕೆ ಅಭಂಗತ್ವ, ಅಂದರೆ ಅಖಂಡತೆಯು ಪ್ರಾಪ್ತವಾಗುತ್ತದೆ. ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅಣುರೇಣು, ಸ್ನಾಯು ಮತ್ತು ದೇಹದಲ್ಲಿರುವ ಟೊಳ್ಳುಗಳು ಜಾಗೃತವಾಗಿ ಪಂಚಪ್ರಾಣಗಳನ್ನು ಕಾರ್ಯನಿರತಗೊಳಿಸುತ್ತವೆ. ಜಾಗೃತಗೊಂಡ ಪಂಚಪ್ರಾಣಗಳಿಂದಾಗಿ ದೇಹದಲ್ಲಿರುವ ನಿರುಪಯುಕ್ತ ವಾಯುವು ತೇಗು, ಆಕಳಿಕೆ ಮುಂತಾದ ವುಗಳ ಮೂಲಕ ಹೊರಬೀಳುತ್ತದೆ. ಇದರಿಂದ ದೇಹದಲ್ಲಿರುವ ಅಣುರೇಣು, ಸ್ನಾಯು ಮತ್ತು ಆಂತರಿಕ ಟೊಳ್ಳುಗಳು ಚೈತನ್ಯವನ್ನು ಗ್ರಹಿಸಲು ಸಂವೇದನಾಶೀಲವಾಗುತ್ತವೆ. ಈ ನಿರುಪಯುಕ್ತ ವಾಯು ಅಥವಾ ದೇಹದಲ್ಲಿ ಘನೀಕೃತವಾಗಿರುವ ಉಷ್ಣ ನಿರುಪಯುಕ್ತ ಶಕ್ತಿಯು ಕೆಲವೊಮ್ಮೆ ಲಹರಿಗಳ ರೂಪದಲ್ಲಿ ತಲೆ, ಮೂಗು, ಕಿವಿ ಮತ್ತು ಚರ್ಮದ ರಂಧ್ರಗಳಿಂದ ಹೊರಬೀಳುತ್ತದೆ. ಆದುದರಿಂದ ದೇಹಕ್ಕೆ ಎಣ್ಣೆಯನ್ನು ಹಚ್ಚಿದ ನಂತರ ಕೆಲವೊಮ್ಮೆ ಮುಖ ಮತ್ತು ಕಣ್ಣುಗಳು ಕೆಂಪಾಗುತ್ತವೆ. – ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೨.೯.೨೦೦೭, ಮಧ್ಯಾಹ್ನ ೨.೦೮)

(ಆಧಾರಗ್ರಂಥ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

Leave a Comment