ಅಗ್ನಿಶಮನದ ಮಾಧ್ಯಮಗಳು

ನೀರು

ಕಡಿಮೆ ಮೌಲ್ಯದ, ಹಾಗೆಯೇ ಎಲ್ಲೆಡೆ ಮತ್ತು ಸಹಜವಾಗಿ ಸಿಗುವ ನೀರು ಅಗ್ನಿಶಮನದ ಪ್ರಭಾವಿ ಮಾಧ್ಯಮವಾಗಿದೆ. ಉರಿಯುವ ಕಟ್ಟಿಗೆ, ಕಾಗದ ದಂತಹ ಕಾರ್ಬನ್‌ಯುಕ್ತ ಪದಾರ್ಥ ಗಳ ಮೇಲೆ (‘ಎ ವಿಧದ ಬೆಂಕಿ) ಅಥವಾ ಲೋಹಗಳ ಮೇಲೆ (‘ಡಿ ವಿಧದ ಬೆಂಕಿ) ನೀರನ್ನು ಸತತವಾಗಿ ಸಿಂಪಡಿಸಿದರೆ ನೀರು ಸುಡುವ ಪದಾರ್ಥಗಳಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಉಷ್ಣತೆಯನ್ನು ಹೀರಿಕೊಳ್ಳುವ ವೇಗವು ಉಷ್ಣತೆನಿರ್ಮಿತಿಯ ವೇಗಕ್ಕಿಂತ ಹೆಚ್ಚಿದ್ದಲ್ಲಿ ಬೆಂಕಿ ಆರುತ್ತದೆ. ಹಾಗೆಯೇ ಸುಡುವ ಪದಾರ್ಥದ ಮೇಲೆ ನೀರು ಬೀಳುತ್ತಲೇ ಕೆಲವೊಂದು ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. ಈ ಹೊಗೆಯ ಮೋಡವು ಸುಡುವ ಪದಾರ್ಥಗಳ ಮೇಲೆ ನಿರ್ಮಾಣವಾಗುತ್ತದೆ. ಈ ಮೋಡವು ಆಮ್ಲಜನಕವನ್ನು ಕಡಿಮೆ ಮಾಡಿ ಬೆಂಕಿಯನ್ನು ಆರಿಸಲು ಸಹಾಯ ಮಾಡುತ್ತದೆ.

ಒಣ ರಾಸಾಯನಿಕ ಪುಡಿ (ಡ್ರೈ ಕೆಮಿಕಲ್ ಪೌಡರ್)

‘ಸೋಡಿಯಮ್ ಬೈ ಕಾರ್ಬೋನೇಟ್’ ‘ಪೊಟ್ಯಾಶಿಯಂ ಬೈ ಕಾರ್ಬೋನೇಟ್’ ಎಂಬ ರಾಸಾಯನಿಕ ಪುಡಿಗಳನ್ನು ‘ಒಣ ಪುಡಿ’ ಎಂದು ಗುರುತಿಸಲಾಗುತ್ತದೆ. ಅವು ಬೆಳ್ಳಗಿರುತ್ತವೆ. ದ್ರವ ಕಾರ್ಬನ್ ಡೈಆಕ್ಸೈಡ್ ವಾಯುವನ್ನು ಉಪಯೋಗಿಸಿ ಒತ್ತಡದಡಿ ಈ ಪುಡಿಯನ್ನು ಬೆಂಕಿಯ ಮೇಲೆ ಸಿಂಪಡಿಸುವುದರಿಂದ ಈ ಪುಡಿಯ ಕಣಗಳಿಂದ ಬೆಂಕಿಯ ಮೇಲೆ ಮೋಡ ನಿರ್ಮಾಣವಾಗುತ್ತದೆ. ಈ ಮೋಡದಿಂದಾಗಿ ಗಾಳಿಯೊಂದಿಗಿನ ಬೆಂಕಿಯ ಸಂಪರ್ಕ ಕಡಿತವಾಗುತ್ತದೆ ಮತ್ತು ಆಮ್ಲಜನಕ ಸಿಗದೇ ಇರುವುದರಿಂದ, ಹಾಗೆಯೇ ಜ್ವಲನದ ಸರಪಳಿ ಕ್ರಿಯೆಯು ಕಡಿತವಾಗುವುದರಿಂದ ಬೆಂಕಿ ಆರಿ ಹೋಗುತ್ತದೆ. ವಿದ್ಯುತ್ ಉಪಕರಣಗಳು ಸುಡುತ್ತಿದ್ದರೆ ಒಣ ಚೂರ್ಣದ ಉಪಯೋಗವು ಲಾಭದಾಯಕವಾಗಿರುತ್ತದೆ.

ಕಾರ್ಬನ್ ಡೈಆಕ್ಸೈಡ್

ವಾತಾವರಣದಲ್ಲಿ ರುವ ಅನೇಕ ಸುಡದೇ ಇರುವ ಮತ್ತು ಸುಡಲು ಸಹಾಯ ಮಾಡದಿರುವ ವಾಯುಗಳಲ್ಲಿ ಕಾರ್ಬನ್ ಡೈಆಕ್ಸೈಡ್‌ಒಂದಾಗಿದೆ. ಇತರ ಸುಡದೇ ಇರುವ ವಾಯುಗಳಿಗಿಂತ ಕಾರ್ಬನ್ ಡೈಆಕ್ಸೈಡ್‌ನ ವ್ಯಾವಹಾರಿಕ ನಿರ್ಮಿತಿ ಮತ್ತು ಸಂಗ್ರಹವು ಸುಲಭವಾಗಿರುವುದರಿಂದ ಅಗ್ನಿಶಮನಕ್ಕೆ ಅದನ್ನು ಎಲ್ಲೆಡೆ ಉಪಯೋಗಿಸುತ್ತಾರೆ. ಈ ವಾಯುವನ್ನು ಅತ್ಯುಚ್ಚ ಒತ್ತಡದಡಿಯಲ್ಲಿ, ದ್ರವರೂಪದಲ್ಲಿ ವಿಶಿಷ್ಟ ಪದ್ಧತಿಯಿಂದ ತಯಾರಿಸಿದ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ವಾಯುವನ್ನು ಬೆಂಕಿಯ ಮೇಲೆ ಸಿಂಪಡಿಸುವುದರಿಂದ ಅದು ಗಾಳಿಗಿಂತ ಐದುಪಟ್ಟು ಹೆಚ್ಚು ಜಡವಾಗಿರುವುದರಿಂದ ಸುಡುವ ಪದಾರ್ಥದ ಮೇಲೆ ಅದರ ಪದರ ನಿರ್ಮಾಣವಾಗುತ್ತದೆ. ಈ ರೀತಿ ಬೆಂಕಿಯ ಸಂಪರ್ಕವು ಗಾಳಿಯೊಂದಿಗೆ, ಅಂದರೆ ಆಮ್ಲಜನಕದೊಂದಿಗೆ ಕಡಿತವಾದಾಗ ಬೆಂಕಿ ಆರುತ್ತದೆ. ಕಾರ್ಬನ್ ಡೈಆಕ್ಸೈಡ್‌ನ್ನು ಮುಖ್ಯವಾಗಿ ವಿದ್ಯುತ್ ಉಪಕರಣಗಳಿಗೆ ಬೆಂಕಿ ತಗಲಿದಾಗ ಉಪಯೋಗಿಸುತ್ತಾರೆ. ಒಂದು ವೇಳೆ ಬೆಂಕಿ ತಗಲಿದ ಸ್ಥಳದಲ್ಲಿ ಗಾಳಿ ಬೀಸುತ್ತಿದ್ದರೆ, ಹಾಗೆಯೇ ಬೆಂಕಿ ಬಯಲಿನಲ್ಲಿದ್ದರೆ ಕಾರ್ಬನ್ ಡೈಆಕ್ಸೈಡ್ ಗಾಳಿಯೊಂದಿಗೆ ಹರಿದು ಹೋಗುತ್ತದೆ. ಆದುದರಿಂದ ಅದರ ಬಳಕೆ ಇಂತಹ ಸ್ಥಳಗಳಲ್ಲಿ ಪರಿಣಾಮಕಾರಿಯಾಗುವುದಿಲ್ಲ.

ನೊರೆ (ಫೋಮ್)

ವಾಯುವಿನಿಂದ ತುಂಬಿದ ನೀರಿನ ಗುಳ್ಳೆಗಳೆಂದರೆ ನೊರೆ. ಕೇವಲ ನೀರಿನ ಗುಳ್ಳೆಗಳು ಸಹಜವಾಗಿ ಒಡೆಯುವುದರಿಂದ ನೀರಿನಲ್ಲಿ ಸಾಬೂನಿನಂತಹ ರಾಸಾಯನಿಕವನ್ನು ಬೆರೆಸಿ ಈ ನೊರೆಯನ್ನು ತಯಾರಿಸಲಾಗುತ್ತದೆ. ದ್ರವರೂಪ ಪದಾರ್ಥಗಳಿಗೆ ತಗಲಿದ ಬೆಂಕಿಯನ್ನು (‘ಬಿ ವಿಧದ ಬೆಂಕಿ) ಆರಿಸಲು ಇದು ಅತ್ಯಂತ ಉಪಯುಕ್ತವಾಗಿದೆ. ನೊರೆಯು ಅತ್ಯಂತ ಹಗುರವಾಗಿರುವುದರಿಂದ ಅದು ಯಾವುದೇ ದ್ರವಪದಾರ್ಥದ ಮೇಲೆ ತೇಲುತ್ತದೆ. ಹಾಗೆಯೇ ಹರಡುವ ಕ್ಷಮತೆಯಿಂದ ಅದು ದ್ರವಪದಾರ್ಥದ ಮೇಲಿನ ಭಾಗವನ್ನು ವ್ಯಾಪಿಸುತ್ತದೆ. ಈ ರೀತಿ ವಾತಾವರಣ ಮತ್ತು ಸುಡುವ ಪದಾರ್ಥ ಇವುಗಳಲ್ಲಿ ನೊರೆಯ ಪದರು ನಿರ್ಮಾಣವಾಗುವುದರಿಂದ ದಹನಶೀಲ ಪದಾರ್ಥಕ್ಕೆ ಗಾಳಿಯ (ಆಮ್ಲಜನಕದ) ಪೂರೈಕೆ ನಿಂತು ಬೆಂಕಿ ಆರಿ ಹೋಗುತ್ತದೆ. ನೊರೆಯನ್ನು ಇಂಧನಗಳನ್ನು ಸಂಗ್ರಹಿಸುವ ಟ್ಯಾಂಕಿಗಳು, ಬಾಣಲೆಯಂತಹ ನಾಲ್ಕೂ ಬದಿಗಳಿಂದ ಮುಚ್ಚಿದ ಸ್ಥಳಗಳಲ್ಲಿ ತಗಲಿದ ಬೆಂಕಿಯನ್ನು ಆರಿಸಲು ಉಪಯೋಗಿಸುತ್ತಾರೆ.

ಹಬೆ

ಯಾವಾಗ ಹಬೆಯು ಹೆಚ್ಚಿನ ಪ್ರಮಾಣದಲ್ಲಿ ಉಪಲಬ್ಧವಿರುತ್ತದೆಯೋ, ಆಗ ಅದನ್ನು ಅಗ್ನಿಶಮನದ ಮಾಧ್ಯಮವೆಂದು ಉಪಯೋಗಿಸಬಹುದು. ಹಬೆಯು ಗಾಳಿಯ ಪೂರೈಕೆ ಅಥವಾ ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸಿ ಬೆಂಕಿಯನ್ನು ಆರಿಸುತ್ತದೆ, ಉದಾ. ಬಾಯ್ಲರ್‌ನ ವಾಯುಕಕ್ಷೆಯಲ್ಲಿ ಎಣ್ಣೆಯ ಸೋರುವಿಕೆಯಿಂದ ಬೆಂಕಿ ತಗಲಿದರೆ ಅದನ್ನು ಬಾಯ್ಲರ್‌ನ ಹಬೆಯನ್ನು ಉಪಯೋಗಿಸಿ ಆರಿಸಬಹುದು.

ವಿಶಿಷ್ಟ ರಾಸಾಯನಿಕಗಳು

ಕೆಲವು ರಾಸಾಯನಿಕಗಳು ದಹನದ ಸರಪಳಿ ಕ್ರಿಯೆಯನ್ನು ತುಂಡರಿಸಿ ಬೆಂಕಿಯನ್ನು ಆರಿಸಲು ಸಹಾಯ ಮಾಡುತ್ತವೆ. ಇಂತಹ ರಾಸಾಯನಿಕಗಳನ್ನು ಅಗ್ನಿಶಮನಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

ಅಸ್‌ಬೆಸ್ಟಾಸ್ ಬಟ್ಟೆ

ಅಸ್‌ಬೆಸ್ಟಾಸ್‌ನ ಬಟ್ಟೆ ಸುಡುವುದಿಲ್ಲ, ಹಾಗೆಯೇ ಅದು ಉಷ್ಣತಾವಾಹಕವೂ ಆಗಿಲ್ಲ. ಆದ್ದರಿಂದ ಚಿಕ್ಕ ಬೆಂಕಿಗಳನ್ನು ಆರಿಸಲು ಈ ಬಟ್ಟೆಯನ್ನು ಉಪಯೋಗಿಸಬಹುದು. ದೊಡ್ಡ ದೊಡ್ಡ ಉಪಹಾರಗೃಹಗಳು, ಖಾನಾವಳಿಗಳು ಇತ್ಯಾದಿಗಳ ಅಡುಗೆ ಕೋಣೆಗಳಲ್ಲಿ ಈ ಬಟ್ಟೆಯನ್ನಿಡುವುದು ಅನಿವಾರ್ಯವಾಗಿರುತ್ತದೆ. ಬೆಂಕಿ ತಗಲಿದ ಕೂಡಲೆ ಈ ಬಟ್ಟೆಯನ್ನು ಸುಡುವ ವಸ್ತುವಿನ ಮೇಲೆ ಹಾಕಿ ಅದನ್ನು ಸಂಪೂರ್ಣ ಮುಚ್ಚುವುದರಿಂದ ಗಾಳಿಯೊಂದಿಗಿನ ಸಂಪರ್ಕ ಕಡಿತವಾಗಿ ಬೆಂಕಿ ಆರುತ್ತದೆ.

ಮರಳು

ಬೆಂಕಿ ಚಿಕ್ಕದಾಗಿದ್ದರೆ ಮತ್ತು ಇತರ ಯಾವುದೇ ಮಾಧ್ಯಮ ಉಪಲಬ್ಧವಿಲ್ಲದಿದ್ದರೆ ಮರಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಮರಳು ಸಿಗದೇ ಇದ್ದಾಗ ಮೃದು ಮಣ್ಣನ್ನು ಉಪಯೋಗಿಸಿದರೂ ನಡೆಯುತ್ತದೆ.

Leave a Comment