‘ರಥಸಪ್ತಮಿ’ ಹಬ್ಬವನ್ನು ಸೂರ್ಯದೇವರಿಗೆ ಕೃತಜ್ಞತೆ ವ್ಯಕ್ತಪಡಿಸಲು ಆಚರಿಸುತ್ತೇವೆ. ಭಾರತೀಯ ಸಂಸ್ಕೃತಿಯು ಚರಾಚರದಲ್ಲಿ ಭಗವಂತನನ್ನು ನೋಡಿ, ಆರಾಧಿಸಲು ಕಲಿಸುತ್ತದೆ. ಆದುದರಿಂದಲೇ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಉಚ್ಚ ದೇವತೆಗಳ ಉಪಾಸನೆ ಮತ್ತು ಅವರ ವಿವಿಧ ಹಬ್ಬ ಹಾಗೂ ಉತ್ಸವಗಳನ್ನು ಆಚರಿಸುವುದರೊಂದಿಗೆ ಸೂರ್ಯ, ಚಂದ್ರ, ಅಗ್ನಿ, ವಾಯು, ವರುಣ ಮತ್ತು ಇಂದ್ರ ಮುಂತಾದ ಕನಿಷ್ಠ ದೇವತೆಗಳ ಉಪಾಸನೆಯನ್ನೂ ಹೇಳಲಾಗಿದೆ.
ಮಾಘ ಮಾಸದ ಶುಕ್ಲ ಸಪ್ತಮಿಯಂದು ರಥಸಪ್ತಮಿಯನ್ನು ಆಚರಿಸುತ್ತೇವೆ. ಈ ದಿನದಿಂದ ಸೂರ್ಯನು ತನ್ನ ರಥದಲ್ಲಿ ಕುಳಿತು ಪ್ರಯಾಣಿಸುತ್ತಾನೆ. ಈ ರಥಕ್ಕೆ ಏಳು ಕುದುರೆಗಳು ಇರುತ್ತವೆ. ಯಾವ ಸೂರ್ಯನಿಂದ ಕತ್ತಲು ಇಲ್ಲವಾಗುತ್ತದೆಯೋ ಮತ್ತು ಚರಾಚರಗಳಿಗೆ ಹೊಸ ತೇಜಸ್ಸು, ನವ ಚೇತನ ದೊರೆಯುತ್ತವೆಯೋ, ಆ ಭಾಸ್ಕರನ ಪೂಜೆ ಇದಾಗಿದೆ. ಇದು ಪ್ರಕಾಶದ, ಅಂದರೆ ಸೂರ್ಯದೇವನ ಪೂಜೆಯಾಗಿದೆ. ಸಂಕ್ರಾಂತಿಯ ನಿಮಿತ್ತ ಸ್ತ್ರೀಯರು ಮಾಡುತ್ತಿರುವ ಅರಿಶಿನ-ಕುಂಕುಮ ಕಾರ್ಯಕ್ರಮದ ಕೊನೆಯ ದಿನವೆಂದು ರಥಸಪ್ತಮಿಯನ್ನು ಪರಿಗಣಿಸಲಾಗುತ್ತದೆ.
(ಆಧಾರ : ಶ್ರೀಧರ ಸಂದೇಶ, ಜನವರಿ ೨೦೧೪)


ರಥಸಪ್ತಮಿ ಮಹತ್ವ
ಸಂಖ್ಯೆಗಳಲ್ಲಿ ‘ಏಳು’ ಎಂಬ ಅಂಕಿಯ ಮಹತ್ವವು ವಿಶೇಷವಾಗಿದೆ. ‘ಏಳು’ ಎಂಬ ಅಂಕಿಯಲ್ಲಿ ತ್ರಿಗುಣಗಳ ಸಮತೋಲ ಪ್ರಮಾಣವಿರುವುದರೊಂದಿಗೆ ಸತ್ತ್ವಗುಣದ ವೃದ್ಧಿಗಾಗಿ ಆವಶ್ಯಕವಿರುವ ಚೈತನ್ಯ, ಆನಂದ ಇತ್ಯಾದಿ ಸೂಕ್ಷ್ಮ ಲಹರಿಗಳನ್ನು ಗ್ರಹಿಸುವ ವಿಶೇಷ ಕ್ಷಮತೆ ಇರುತ್ತದೆ.
ಸಪ್ತಮಿ ತಿಥಿಯಂದು ಶಕ್ತಿ ಮತ್ತು ಚೈತನ್ಯ ಇವುಗಳ ಸುಂದರ ಸಂಗಮವಾಗಿರುತ್ತದೆ. ಈ ದಿನದಂದು ವಿಶಿಷ್ಟ ದೇವತೆಯ ತತ್ತ್ವ ಮತ್ತು ಶಕ್ತಿ, ಆನಂದ ಮತ್ತು ಶಾಂತಿ ಇವುಗಳ ಲಹರಿಗಳು ಶೇ. ೨೦ ರಷ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ.
ರಥಸಪ್ತಮಿಯ ದಿನದಂದು ನಿರ್ಗುಣ ಸೂರ್ಯನ (ಅತಿಸೂಕ್ಷ್ಮ ಸೂರ್ಯತತ್ತ್ವದ) ಲಹರಿಗಳು ಇತರ ದಿನಗಳ ಹೋಲಿಕೆಯಲ್ಲಿ ಶೇ. ೩೦ ರಷ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ.
ಸೂರ್ಯದೇವನ ಜನ್ಮದಿನವಾಗಿರುವ ರಥಸಪ್ತಮಿ
‘ಮಹರ್ಷಿ ಕಶ್ಯಪ ಮತ್ತು ದೇವಮಾತೆ ಅದಿತಿ ಇವರ ಹೊಟ್ಟೆಯಲ್ಲಿ ಸೂರ್ಯದೇವನು ಜನ್ಮತಾಳಿದ ಆ ದಿನವೇ ಇದು! ಭಗವಾನ್ ಶ್ರೀವಿಷ್ಣುವಿನ ಒಂದು ರೂಪವೆಂದರೆ ಶ್ರೀ ಸೂರ್ಯನಾರಾಯಣನ. ಸಂಪೂರ್ಣ ವಿಶ್ವವನ್ನು ತನ್ನ ಮಹಾತೇಜಸ್ವಿ ಸ್ವರೂಪದಿಂದ ಪ್ರಕಾಶಮಯಗೊಳಿಸುವ ಸೂರ್ಯದೇವನಿಂದ ಭೂಮಿಯ ಮೇಲೆ ಜೀವನ ಅಸ್ತಿತ್ವದಲ್ಲಿದೆ.
ಉತ್ತರಾಯಣದಲ್ಲಿ ಮಾರ್ಗಕ್ರಮಣದ ದ್ಯೋತಕವಾಗಿರುವ ರಥಸಪ್ತಮಿ
ರಥಸಪ್ತಮಿ ಹಬ್ಬವು ಸೂರ್ಯನು ಉತ್ತರಾಯಣದಲ್ಲಿ ಮಾರ್ಗಕ್ರಮಣ ಮಾಡುತ್ತಿರುವುದರ ಸೂಚಕವಾಗಿದೆ. ಉತ್ತರಾಯಣ ಎಂದರೆ ಉತ್ತರ ದಿಕ್ಕಿನಿಂದ ಮಾರ್ಗಕ್ರಮಣ ಮಾಡುವುದು. ಉತ್ತರಾಯಣದಲ್ಲಿ ಸೂರ್ಯನು ಉತ್ತರ ದಿಕ್ಕಿಗೆ ವಾಲಿರುತ್ತಾನೆ. ‘ಶ್ರೀ ಸೂರ್ಯನಾರಾಯಣನು ತನ್ನ ರಥವನ್ನು ಉತ್ತರ ಗೋಲಾರ್ಧದಲ್ಲಿ ತಿರುಗಿಸುತ್ತಿದ್ದಾನೆ’, ಎಂಬ ಸ್ಥಿತಿಯಲ್ಲಿ ರಥಸಪ್ತಮಿಯನ್ನು ತೋರಿಸಲಾಗುತ್ತದೆ. ರಥಸಪ್ತಮಿ ಹಬ್ಬವು ರೈತರಿಗಾಗಿ ಸುಗ್ಗಿ ಕಾಲ ಬಂದಿರುವುದರ ಮತ್ತು ದಕ್ಷಿಣ ಭಾರತದಲ್ಲಿ ಮೆಲ್ಲಗೆ ಹೆಚ್ಚುತ್ತಿರುವ ತಾಪಮಾನದ ದರ್ಶಕವಾಗಿರುತ್ತದೆ, ಹಾಗೆಯೇ ವಸಂತ ಋತು ಹತ್ತಿರ ಬಂದಿರುವುದರ ಸೂಚಕವಾಗಿರುತ್ತದೆ.
ಕಠಿಣ ದಿನಗಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ನೆನಪಿವ ರಥಸಪ್ತಮಿ
ರಥಸಪ್ತಮಿಯ ದಿನದಂದು ಅಂಗಳದಲ್ಲಿರುವ ತುಳಸಿಯ ಎದುರು ಮಣ್ಣಿನ ಒಲೆಯ ಮೇಲೆ ಮಣ್ಣಿನ ಪಾತ್ರೆಯಲ್ಲಿ ಪಾಯಸವನ್ನು ತಯಾರಿಸುತ್ತಾರೆ ಮತ್ತು ಅದು ಉಕ್ಕಿ ಹರಿಯುವವರೆಗೆ ಕಾಯಿಸುತ್ತಾರೆ. ಅದರಲ್ಲಿ ಆ ಪಾಯಸವು ಸೀದು ಹೋಗುತ್ತದೆ. ಹೀಗೆ ಒಲೆಯ ಮೇಲೆ ಸೀದ ಪಾಯಸವನ್ನು ಪ್ರಸಾದದ ರೂಪದಲ್ಲಿ ತಿನ್ನುವ ಆನಂದವೇ ಬೇರೆಯದ್ದಾಗಿರುತ್ತದೆ. ವರ್ಷದ ಎಲ್ಲ ದಿನಗಳೂ ಒಂದೇ ರೀತಿಯ ಆನಂದವನ್ನು ನೀಡುವುದಿಲ್ಲ. ಕೆಲವು ದಿನಗಳಂದು ಸೀದ ಅನ್ನವನ್ನು ತಿಂದು ಕಳೆಯಬೇಕಾಗಿ ಬಂದರೆ, ಅದಕ್ಕಾಗಿ ಸಿದ್ಧತೆ ಇರಬೇಕು ಎಂದು ನೆನಪು ಮಾಡಿಕೊಡುವ ಹಬ್ಬವೇ ರಥಸಪ್ತಮಿ!
ಸೂರ್ಯೋಪಾಸನೆಯ ಮಹತ್ವ ಮತ್ತು ಇತರ ಮಾಹಿತಿ
ತನ್ನಲ್ಲಿರುವ ಸೂಕ್ಷ್ಮ ತೇಜತತ್ತ್ವವನ್ನು ಹೆಚ್ಚಿಸಿಕೊಳ್ಳುಲು ಸೂರ್ಯೋಪಾಸನೆ ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ ತೇಜತತ್ತ್ವದ ‘ಓಂ’ ಕಾರದ ಉಪಾಸನೆ ಮಾಡುವುದು ಉಪಯುಕ್ತ. ಅದೇ ರೀತಿ ಗಾಯತ್ರೀ ಮಂತ್ರ ಮತ್ತು ಸೂರ್ಯನ ವಿವಿಧ ಮಂತ್ರಗಳ ಪುರಶ್ಚರಣೆ (ಪಠಣ) ಮಾಡುವುದು ಫಲದಾಯಕವಾಗುತ್ತದೆ.
ಸೂರ್ಯೋಪಾಸನೆಯಿಂದ ಜೀವದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.
ಕಣ್ಣುಗಳು ತೇಜತತ್ತ್ವಕ್ಕೆ ಸಂಬಂಧಿಸಿರುವುದರಿಂದ, ಸೂರ್ಯೋಪಾಸನೆಯಿಂದ (ತೇಜತತ್ತ್ವದ ಉಪಾಸನೆಯಿಂದ) ಜೀವಕ್ಕೆ ದಿವ್ಯದೃಷ್ಟಿ ಪ್ರಾಪ್ತವಾಗುತ್ತದೆ.

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ತುಂಬಾ ಮಹತ್ವವಿದೆ. ಸೂರ್ಯನಿಗೆ ಪ್ರತಿದಿನ ಮುಂಜಾನೆ ಅರ್ಘ್ಯ ನೀಡುವುದರಿಂದ ಅಂಧಕಾರವನ್ನು ನಾಶ ಮಾಡಿ ಜಗತ್ತನ್ನು ಪ್ರಕಾಶಮಯಗೊಳಿಸಲು ಸೂರ್ಯನಿಗೆ ಬಲ ಪ್ರಾಪ್ತವಾಗುತ್ತದೆ. (ಪ್ರತಿದಿನ ಪೂಜೆ ಮಾಡುವುದರಿಂದ ದೇವರ ಮೂರ್ತಿ ಜಾಗೃತವಾಗುವಂತೆಯೇ ಇದಾಗಿದೆ.)
ಅ. ಸೂರ್ಯೋಪಾಸನೆಯಿಂದ ಜೀವದ ಚಂದ್ರನಾಡಿ ಮುಚ್ಚಿಹೋಗಿ ಸೂರ್ಯನಾಡಿ ಬೇಗನೆ ಜಾಗೃತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಮಾಡುವುದು ಹೆಚ್ಚು ಶ್ರೇಷ್ಠವಾಗಿದೆ.
ಆ. ಸೂರ್ಯನ ಉಪಾಸನೆಯಿಂದ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆ ಶೇ. ೩೦ ರಷ್ಟು ಮತ್ತು ಚೈತನ್ಯವನ್ನು ಗ್ರಹಿಸುವ ಕ್ಷಮತೆ ಶೇ. ೨೦ ರಷ್ಟು ಹೆಚ್ಚುತ್ತದೆ.
ಇ. ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡಿ ಕೇವಲ ದರ್ಶನ ಪಡೆದರೂ, ಅವನು ಪ್ರಸನ್ನನಾಗುತ್ತಾನೆ. ಅವನ ದರ್ಶನ ಪಡೆಯುವುದು, ಇದು ಅವನ ಉಪಾಸನೆಯ ಒಂದು ಅಂಗವೇ.
ಈ. ಉದಯಿಸುವ ಸೂರ್ಯನತ್ತ ನೋಡಿ ತ್ರಾಟಕ ಮಾಡುವುದರಿಂದ ಕಣ್ಣುಗಳ ಕ್ಷಮತೆ ಹೆಚ್ಚುತ್ತದೆ ಮತ್ತು ನೇತ್ರಜ್ಯೋತಿ (ದೃಷ್ಟಿ) ಹೆಚ್ಚು ಪ್ರಬಲವಾಗುತ್ತದೆ.
ಉ. ಪಂಚತತ್ತ್ವಗಳ ಉಪಾಸನೆಯಲ್ಲಿ ಸೂರ್ಯೋಪಾಸನೆ ಮಾಡುವುದು (ತೇಜತತ್ತ್ವದ ಉಪಾಸನೆ ಮಾಡುವುದು) ಮಹತ್ವದ ಹಂತವಾಗಿದೆ.
ಊ. ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಾಡುವುದು ಮಹತ್ವದ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಇದರಲ್ಲಿ ಶರೀರದಿಂದ ಸೂರ್ಯನಿಗೆ ನಮಸ್ಕಾರ ಹಾಕುತ್ತೇವೆ. ಕನಿಷ್ಠ ೨೦ ವರ್ಷಗಳ ಕಾಲ ನಿತ್ಯನಿಯಮದಿಂದ ಸೂರ್ಯನಮಸ್ಕಾರ ಮಾಡಿದರೆ ಸೂರ್ಯನು ಪ್ರಸನ್ನನಾಗುತ್ತಾನೆ. ಸೂರ್ಯನಮಸ್ಕಾರದಿಂದ ಶರೀರದಲ್ಲಿ ಅಡಗಿರುವ ಅನಿಷ್ಟ ಶಕ್ತಿಗಳ ಸ್ಥಾನಗಳು ನಾಶವಾಗಲು ತುಂಬಾ ಸಹಾಯವಾಗುತ್ತದೆ.
ಸೂರ್ಯಲೋಕ, ನಕ್ಷತ್ರಲೋಕ, ಗ್ರಹಲೋಕ, ಭುವಲೋಕ, ನಾಗಲೋಕ, ಸ್ವರ್ಗಲೋಕ ಮತ್ತು ಸ್ವರ್ಗಲೋಕದ ಹತ್ತಿರವಿರುವ ಶಿವಲೋಕ ಎಂಬ ಸಪ್ತ ಲೋಕಗಳಲ್ಲಿ ಭ್ರಮಿಸುವ ಸಾಮರ್ಥ್ಯ ಸೂರ್ಯನ ರಥಕ್ಕಿದೆ.
ರಥದ ಗತಿಯು ಆವಶ್ಯಕತೆಗನುಗುಣವಾಗಿ ಬದಲಾಗುತ್ತದೆ. ಸೂರ್ಯದೇವತೆಯ ಇಚ್ಛೆಯಂತೆ ರಥವು ವಾಯುಮಂಡಲದಲ್ಲಿ ವಿಹರಿಸುತ್ತದೆ. ರಥದ ಚಿನ್ನದ ಚಕ್ರಗಳ ಮೇಲೆ ಸಂಪೂರ್ಣ ಸೂರ್ಯನ ಚಿತ್ರವನ್ನು ನಾಜೂಕಾಗಿ ಕೆತ್ತಲಾಗಿದೆ. ಆ ಚಿತ್ರದಿಂದ ಸೂರ್ಯನ ತೇಜಸ್ಸು ಮತ್ತು ತೇಜತತ್ತ್ವವು ಅಕ್ಕಪಕ್ಕದಲ್ಲಿ ಶೇ. ೩೦ ರಷ್ಟು ಪ್ರಕ್ಷೇಪಿತವಾಗುತ್ತಿರುತ್ತದೆ.
ಶ್ರೀವಿಷ್ಣುವಿನ ಕೃಪಾಶೀರ್ವಾದದಿಂದ ಮತ್ತು ತೇಜತತ್ತ್ವದ ಪ್ರಕ್ಷೇಪಣೆಯಿಂದ ರಥದ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗಿರುತ್ತದೆ. ಇದರಿಂದ ಸೂರ್ಯದೇವತೆಯ ಕಾರ್ಯದಲ್ಲಿ ಕೆಟ್ಟ ಶಕ್ತಿಗಳು ಅಡಚಣೆಯನ್ನು ತರಲು ಸಾಧ್ಯವಾಗುವುದಿಲ್ಲ.
ಸೂರ್ಯನು ನಿರಂತರವಾಗಿ ಈ ರಥದಲ್ಲಿ ವಿರಾಜಮಾನವಾಗಿರುತ್ತಾನೆ. ದೇವರು ದೇವಸ್ಥಾನದಲ್ಲಿ ಇರುವುದರಿಂದ ದೇವಸ್ಥಾನಕ್ಕೆ ಮಹತ್ವ ಪ್ರಾಪ್ತವಾಗುತ್ತದೆ. ಅಂತಹುದೇ ಮಹತ್ವ ಸೂರ್ಯನ ರಥಕ್ಕಿದೆ. ಇದರಿಂದ ‘ರಥಸಪ್ತಮಿ’ಯಂದು ಸೂರ್ಯನ ಉಪಾಸನೆಯ ಜೊತೆಗೆ ಪ್ರತೀಕಾತ್ಮಕ ರಥದ ಪೂಜೆಯನ್ನೂ ಮಾಡಲಾಗುತ್ತದೆ.
ರಂಗೋಲಿ ಅಥವಾ ಗಂಧದಿಂದ ಮಣೆಯ ಮೇಲೆ ಏಳು ಕುದುರೆಗಳ ಸೂರ್ಯನಾರಾಯಣನ ರಥ, ಸಾರಥಿ ಅರುಣ ಮತ್ತು ರಥದಲ್ಲಿ ಸೂರ್ಯನಾರಾಯಣನನ್ನು ಬಿಡಿಸಬೇಕು. ಸೂರ್ಯನಾರಾಯಣನ ಪೂಜೆ ಮಾಡಬೇಕು. ಅಂಗಳದಲ್ಲಿ ಬೆರಣಿಗಳನ್ನು ಹೊತ್ತಿಸಿ ಅದರ ಮೇಲೆ ಒಂದು ಮಡಿಕೆಯಲ್ಲಿ ಹಾಲು ಉಕ್ಕಿ ಹರಿಯುವವರೆಗೆ ಕಾಯಿಸಬೇಕು ಅಂದರೆ ಅಗ್ನಿಗೆ ಸಮರ್ಪಣೆಯಾಗುವವರೆಗೆ ಇಡಬೇಕು. ತದನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡಬೇಕು.
ಅರುಣನು ಸೂರ್ಯನ ಸಾರಥಿಯಾಗಿದ್ದಾನೆ. ಅವನಲ್ಲಿ ಸೂರ್ಯನ ಶೇ. ೪೦ ರಷ್ಟು ಗುಣಗಳಿವೆ. ಅವನು ಕೇವಲ ಒಂದು ಕಣ್ಣಿನಿಂದ ನೋಡಬಲ್ಲನು. ‘ಏಕತ್ವದ ಕಡೆಗೆ ಹೋಗುವುದು ಮತ್ತು ಇರುವ ಪರಿಸ್ಥಿತಿಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ಮಾಡುವುದು’, ಎಂಬ ಗುಣಗಳನ್ನು ಅವನಿಂದ ನಾವು ಕಲಿಯಬೇಕು.
ಸ್ವರ್ಗಲೋಕದ ಬದಿಯಲ್ಲಿ ಸೂಕ್ಷ್ಮ ಸೂರ್ಯಲೋಕವಿದೆ. ಸೂಕ್ಷ್ಮ ಸೂರ್ಯಲೋಕದಲ್ಲಿ ಪಂಚಮಹಾಭೂತಗಳಲ್ಲಿನ ಸೂಕ್ಷ್ಮ ತೇಜತತ್ತ್ವದ ಪ್ರಮಾಣವು ಶೇ. ೫೦ ಕ್ಕಿಂತ ಹೆಚ್ಚಿರುತ್ತದೆ. ದಿವ್ಯ ಪ್ರಕಾಶ, ಅಗ್ನಿ ಮತ್ತು ಅಗ್ನಿಯ ಜ್ವಾಲೆಗಳು ಕಾಣಿಸುವುದು ಹಾಗೂ ಉಷ್ಣತೆಯ ಅರಿವಾಗುವುದು ತೇಜದ ಸ್ಥೂಲರೂಪವಾಗಿದೆ. ಅವುಗಳ ಅನುಭೂತಿ ಸೂರ್ಯಲೋಕದಲ್ಲಿಯೂ ಬರುತ್ತದೆ. ಅನೇಕ ಜೀವಿಗಳ ಮಟ್ಟ ಶೇ. ೫೦ ಕ್ಕಿಂತ ಕಡಿಮೆ ಇರುವುದರಿಂದ ಅವರಿಗೆ ಸೂರ್ಯಲೋಕದಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಮಟ್ಟ ಶೇ. ೫೦ ಕ್ಕಿಂತ ಕಡಿಮೆ ಇದ್ದರೆ ತೇಜತತ್ತ್ವದ ಉಪಾಸನೆ ಮಾಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ತೇಜತತ್ತ್ವದ ಸ್ಥೂಲರೂಪ, ಅಂದರೆ ದಿವ್ಯ ಪ್ರಕಾಶ, ಅಗ್ನಿ ಮತ್ತು ಉಷ್ಣತೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಸೂರ್ಯಲೋಕದಲ್ಲಿ ಸ್ಥಾನ ಸಿಗಲು ಸೂರ್ಯದೇವನ ಗುಣಗಳು ಶೇ. ೫೦ ಕ್ಕಿಂತ ಹೆಚ್ಚು ಮತ್ತು ಜೀವದ ಮಟ್ಟ ಕನಿಷ್ಠ ಶೇ. ೫೦ ರಷ್ಟು ಇರುವುದು ಅಪೇಕ್ಷಿತವಾಗಿದೆ.
– ಈಶ್ವರ (ಕು. ಮಧುರಾ ಭೋಸಲೆ ಇವರ ಮಾಧ್ಯಮದಿಂದ, ೧೧.೨.೨೦೦೫, ಸಾಯಂಕಾಲ ೭.೦೭ ರಿಂದ ೭.೪೦)
ಸೂರ್ಯನ ಗುಣಗಳು
ನಿತ್ಯೋಪಾಸನೆ
ಋಷಿಗಳಂತೆ ನಿರಂತರವಾಗಿ ನಾರಾಯಣನ ಉಪಾಸನೆಯಲ್ಲಿ ತೋಡಗಿರುತ್ತಾನೆ.
ಶಿಸ್ತು
ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾನೆ.
ತ್ಯಾಗ
ತನ್ನ ಹತ್ತಿರವಿರುವ ತೇಜಸ್ಸು, ಊರ್ಜೆ ಮತ್ತು ಚೈತನ್ಯವನ್ನು ತನಗಷ್ಟೇ ಸೀಮಿತವಾಗಿ ಇಟ್ಟುಕೊಳ್ಳದೇ ಇತರರಿಗೆ ನೀಡುತ್ತಾನೆ. ಇತರ ಕನಿಷ್ಠ ದೇವತೆಗಳನ್ನು ಹೋಲಿಸಿದರೆ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಎಲ್ಲಕ್ಕಿಂತ ಸೂರ್ಯನಲ್ಲಿ ಹೆಚ್ಚಿರುತ್ತದೆ.
ಸಮಷ್ಟಿ ಭಾವ
ತನ್ನಲ್ಲಿರುವ ತೇಜಸ್ಸು ಮತ್ತು ಊರ್ಜೆಯನ್ನು ತನ್ನ ಲೋಕಕ್ಕೆ ಮಾತ್ರ ಸೀಮಿತವಾಗಿ ಇಡದೇ ವಿವಿಧ ಲೋಕಗಳಲ್ಲಿರುವ ಜೀವಿಗಳಿಗೂ ಪ್ರಕ್ಷೇಪಿಸುತ್ತಾನೆ. ಅದಕ್ಕಾಗಿ ಅವನು ಸತತವಾಗಿ ಭ್ರಮಣೆ ಮಾಡುತ್ತಾನೆ. ಸಮಷ್ಟಿ ಭಾವ ಹೆಚ್ಚಿರುವುದರಿಂದ ಅವನಲ್ಲಿ ಉಚ್ಚ ದೇವತೆಗಳ ಶೇ. ೨೦ ರಷ್ಟು ಗುಣಗಳಿವೆ.
ಜ್ಞಾನದಾನ ಮತ್ತು ಸೂಕ್ಷ್ಮದಿಂದ ಮಾರ್ಗದರ್ಶನ
ಪ್ರಕಾಶವು ಜ್ಞಾನದ ಒಂದು ರೂಪವಾಗಿದೆ. ಸೂರ್ಯನು ಜ್ಞಾನಕ್ಕೆ ಸಂಬಂಧಿಸಿದ ಕಾರ್ಯ ಮಾಡುತ್ತಾನೆ. ಆದ್ದರಿಂದ ಅವನಿಂದ ಸೂಕ್ಷ್ಮವಾಗಿರುವ ಜ್ಞಾನಲಹರಿಗಳು ಮತ್ತು ಜ್ಞಾನಪ್ರಕಾಶಲಹರಿಗಳು ಪ್ರಕ್ಷೇಪಿತವಾಗುತ್ತವೆ. ಈ ಜ್ಞಾನಲಹರಿಗಳ ಮಾಧ್ಯಮದಿಂದ ಅವನು ಶೇ. ೩೦ ರಷ್ಟು ಜ್ಞಾನವನ್ನು ನೀಡಬಲ್ಲನು. ಕರ್ಣನಿಗೆ ಸೂರ್ಯದೇವನು ಪ್ರತಿದಿನ ದರ್ಶನ ನೀಡಿ ಸೂಕ್ಷ್ಮದಿಂದ ಮಾರ್ಗದರ್ಶನ ಮಾಡುತ್ತಿದ್ದನು.
ಉತ್ತಮ ಗುರು
ಸೂರ್ಯನು ಶಾಸ್ತ್ರ ಮತ್ತು ಶಸ್ತ್ರಕಲೆ ಈ ಎರಡರಲ್ಲಿಯೂ ನಿಪುಣನಾಗಿದ್ದಾನೆ. ಇವೆರಡೂ ಕಲೆಗಳನ್ನು ಕರಗತ ಮಾಡಿಕೊಳ್ಳಲು ರುದ್ರಾವತಾರ ಮಾರುತಿಯು ಸೂರ್ಯಲೋಕಕ್ಕೆ ಹೋಗಿದ್ದನು. ಆಗ ಅವನಿಗೆ ಸೂರ್ಯನು ‘ಗುರು’ವಾಗಿ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಿದನು. ಅವನು ಇತರರಿಗೆ ಜ್ಞಾನಪ್ರಕಾಶವನ್ನು ನೀಡಿ ಅವರ ಜೀವನದಲ್ಲಿನ ಸ್ಥೂಲ ಮತ್ತು ಸೂಕ್ಷ್ಮ ಅಹಂಕಾರರೂಪಿ ಕತ್ತಲನ್ನು ನಾಶ ಮಾಡುತ್ತಾನೆ.
ಉತ್ತಮ ತಂದೆ
ಸೂರ್ಯನು ತನ್ನ ಪುತ್ರ ಮತ್ತು ಪುತ್ರಿಯರಿಗಾಗಿ ಆವಶ್ಯಕವಿರುವ ಎಲ್ಲ ಕರ್ತವ್ಯಗಳನ್ನು ಕಾಲಕಾಲಕ್ಕೆ ಪೂರ್ಣಗೊಳಿಸಿದನು. ಬ್ರಹ್ಮಾಂಡದ ಎಲ್ಲ ಜೀವಿಗಳತ್ತ ಅವನು ತಂದೆಯ ದೃಷ್ಟಿಯಿಂದಲೇ ನೋಡುತ್ತಾನೆ ಮತ್ತು ಅವರಿಗೆ ಸಹಾಯ ಮಾಡುತ್ತಾನೆ.
ವ್ಯಾಪಕತೆ
ಬ್ರಹ್ಮಾಂಡದಲ್ಲಿರುವ ವಿವಿಧ ಜೀವಿಗಳಿಗೆ ಸೂರ್ಯನು ನಿರಪೇಕ್ಷವಾಗಿ ತೇಜಸ್ಸು, ಊರ್ಜೆ ಮತ್ತು ಚೈತನ್ಯವನ್ನು ನೀಡುತ್ತಾನೆ.
ಸಮಭಾವ
ಸೂರ್ಯನು ಎಲ್ಲ ಜೀವಿಗಳತ್ತ ಸಮದೃಷ್ಟಿಯಿಂದ ನೋಡುತ್ತಾನೆ. ಅವನು ಗುಣಗ್ರಾಹಿಯಾಗಿದ್ದಾನೆ. ಆದ್ದರಿಂದ ಅವನು ಯಾರ ಮೇಲೆಯೂ ಅನ್ಯಾಯ ಮಾಡುವುದಿಲ್ಲ. ಇದರ ಉದಾಹರಣೆಯೆಂದರೆ ಮಾರುತಿಯಲ್ಲಿ ಶನಿಯ ಹೋಲಿಕೆಯಲ್ಲಿ ಶಿಷ್ಯನ ಗುಣಗಳು ಹೆಚ್ಚು ಪ್ರಮಾಣದಲ್ಲಿರುವುದರಿಂದ ಸೂರ್ಯನು ಅವನನ್ನು ಶಿಷ್ಯನೆಂದು ಸ್ವೀಕರಿಸಿದನು ಹಾಗೂ ಜ್ಞಾನ ಮತ್ತು ವಿವಿಧ ವಿದ್ಯೆಗಳನ್ನು ನೀಡಿದನು.
ಕ್ಷಾತ್ರಭಾವ
ಇಂದ್ರನು ಎಲ್ಲ ಕನಿಷ್ಠ ದೇವತೆಗಳ ಪ್ರಮುಖನಾಗಿದ್ದಾನೆ. ಸೂರ್ಯದೇವನು ಇಂದ್ರನ ಅಧಿಪತ್ಯದ ಕೆಳಗೆ ಇದ್ದರೂ, ಇಂದ್ರನು ಅಯೋಗ್ಯ ನಿರ್ಣಯ ನೀಡಿದಾಗ ಅವನನ್ನು ವಿರೋಧಿಸಿ ಇಂದ್ರನ ಅಯೋಗ್ಯ ಆಜ್ಞೆಯನ್ನು ಪಾಲಿಸುವುವುದಿಲ್ಲ. ಕನಿಷ್ಠ ದೇವತೆಗಳಲ್ಲಿ ಸೂರ್ಯದೇವನಲ್ಲಿ ಎಲ್ಲಕ್ಕಿಂತ ಹೆಚ್ಚು ಸಾತ್ತ್ವಿಕತೆ, ವ್ಯಾಪಕತೆ, ತ್ಯಾಗ, ಸಮಷ್ಟಿ ಭಾವ ಮತ್ತು ಕ್ಷಾತ್ರಭಾವವಿರುತ್ತದೆ
– ಈಶ್ವರ (ಕು. ಮಧುರಾ ಭೋಸಲೆ ಇವರ ಮಾಧ್ಯಮದಿಂದ, ೧೧.೨.೨೦೦೫)
ರಾಮರಾಜ್ಯದ ಸ್ಥಾಪನೆ ಮತ್ತು ಸೂರ್ಯನ ಗುಣಗಳ ಮಹತ್ತ್ವ

ಸೂರ್ಯನ ಗುಣಗಳಿಂದಾಗಿ ಅವನ ರಾಜ್ಯದಲ್ಲಿ (ಲೋಕದಲ್ಲಿ) ಪಿತೃಶಾಹಿ ಇರುತ್ತದೆ. ಸೂರ್ಯೋಪಾಸಕನಲ್ಲಿ ಮೇಲಿನ ಗುಣಗಳಿದ್ದರೆ ಮಾತ್ರ ಅವನಿಗೆ ಸೂಕ್ಷ್ಮ ಸೂರ್ಯಲೋಕದಲ್ಲಿ ಸ್ಥಾನ ಸಿಗುತ್ತದೆ. ಸೂರ್ಯನ ಉಪಾಸನೆ ಮಾಡುವವರಿಗೆ ಮತ್ತು ಸೂರ್ಯನ ಗುಣಗಳನ್ನು ಮೈಗೂಡಿಸಿಕೊಂಡವರಿಗೆ ‘ಸೂರ್ಯವಂಶಿ’, ಎಂದು ಸಂಬೋಧಿಸಲಾಗುತ್ತದೆ. ಪ್ರಭು ಶ್ರೀರಾಮನು ಸೂರ್ಯವಂಶಿಯಾಗಿದ್ದನು. ಆದ್ದರಿಂದ ಅವನು ಆದರ್ಶ ಪಿತಾ ಮತ್ತು ಆದರ್ಶ ಪುತ್ರನಾಗಿರುವುದರೊಂದಿಗೆ ರಾಮರಾಜ್ಯದ (ಪಿತೃಶಾಹಿಯ) ಸ್ಥಾಪನೆ ಮಾಡಲು ಶಕ್ತನಾದನು.
– ಈಶ್ವರ (ಕು. ಮಧುರಾ ಭೋಸಲೆ ಇವರ ಮಾಧ್ಯಮದಿಂದ, ೧೦.೨.೨೦೦೫, ಬೆಳಗ್ಗೆ ೬.೨೦ ರಿಂದ ೯.೦೯)
‘ಭಾರತ’, ಇದು ಸೂರ್ಯನ ಒಂದು ಹೆಸರಾಗಿದೆ

ಸೂರ್ಯನು ದೇವತೆ, ಋಷಿಮುನಿಗಳು, ಮತ್ತು ಮಾನವರು, ಹೀಗೆ ಎಲ್ಲರಿಗೂ ಪೂಜನೀಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ವಿಶೇಷ ಮಹತ್ವವಿದೆ. ಭಾರತೀಯ ಪಂಚಾಂಗದಲ್ಲಿಯೂ ಚಂದ್ರನಿಗಿಂತ ಸೂರ್ಯನಿಗೆ ಹೆಚ್ಚು ಮಹತ್ವದ ಸ್ಥಾನ ನೀಡಲಾಗಿದೆ. ‘ಭಾರತ’, ಇದೂ ಸೂರ್ಯನ ಒಂದು ಹೆಸರಾಗಿದೆ.
– ಈಶ್ವರ (ಕು. ಮಧುರಾ ಭೋಸಲೆ ಇವರ ಮಾಧ್ಯಮದಿಂದ, ೧೦.೨.೨೦೦೫, ಬೆಳಗ್ಗೆ ೬.೨೦ ರಿಂದ ೯.೦೯)

ಇದೇ ರೀತಿ ಹಬ್ಬ ಹರಿದಿನಗಳ ಮಹತ್ತ್ವವನ್ನು ತಿಳಿದುಕೊಂಡು ಆಚರಿಸಿದರೆ ಅದರಿಂದ ಹೆಚ್ಚಿನ ಲಾಭವಾಗುತ್ತದೆ. ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು…
ಸನಾತನದ ಉಚಿತ ಆನ್‌ಲೈನ್ ಸತ್ಸಂಗಗಳಲ್ಲಿ ಭಾಗವಹಿಸಿ…
ಸೂರ್ಯನ ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಕುರಿತಾದ ಮಾಹಿತಿ
| ಸ್ಥೂಲ | ಸೂಕ್ಷ್ಮ | |
| ಉತ್ಪತ್ತಿ | ಸೂರ್ಯದೇವನಿಂದ ಯಮ ಮತ್ತು ಶನಿ ಈ ದೇವತೆಗಳ ಪುತ್ರರೂಪದಲ್ಲಿಯೂ, ಪುತ್ರಿರೂಪದಲ್ಲಿ ತಪಿ ಮತ್ತು ಯಮಿ ಈ ದೇವಿಯರ ನಿರ್ಮಿತಿಯಾಯಿತು. ಯಮಿಯಿಂದ ಯಮುನಾ ನದಿಯ ನಿರ್ಮಿತಿಯಾದರೆ, ತಪಿಯಿಂದ ತಾಪಿ ನದಿಯ ನಿರ್ಮಿತಿಯಾಯಿತು. | ಅ. ಸೂರ್ಯಮಂಡಲದಲ್ಲಿರುವ ಗ್ರಹ ಮತ್ತು ನಕ್ಷತ್ರಲೋಕ, ಶನಿಲೋಕ ಮತ್ತು ಗ್ರಹಲೋಕ ಈ ಎಲ್ಲ ಉಪಲೋಕಗಳ ನಿರ್ಮಿತಿಯು ಸೂರ್ಯನಿಂದಲೇ ಆಗಿದೆ. ಆ. ತೇಜಸ್ಸು, ತೇಜಯುಕ್ತ ಚೈತನ್ಯ ಮತ್ತು ಕೇವಲ ಮೊದಲನೇ ಸ್ತರದ ಚೈತನ್ಯದಲ್ಲಿ ಶೇ. ೩೦ ರಷ್ಟು ಚೈತನ್ಯವು ಸೂರ್ಯನಿಂದ ನಿರ್ಮಾಣವಾಗಿದೆ. ಇ. ಸುದರ್ಶನಚಕ್ರ, ಸೂರ್ಯಾಸ್ತ್ರ, ತೇಜತತ್ತ್ವಕ್ಕೆ ಸಂಬಂಧಿಸಿದ ಬಾಣ ಮತ್ತು ಅಸ್ತ್ರಗಳ ನಿರ್ಮಿತಿಯು ಸೂಕ್ಷ್ಮ ಸೂರ್ಯನಿಂದ ಆಗಿವೆ. ಈ. ದೇವತೆಗಳ ವಿವಿಧ ಶಸ್ತ್ರ ಮತ್ತು ಅಸ್ತ್ರಗಳಿಗೆ ಸೂರ್ಯನು ತನ್ನ ತೇಜಸ್ಸನ್ನು ನೀಡಿದ್ದಾನೆ. ಇದರಿಂದ ಈ ಶಸ್ತ್ರಾಸ್ತ್ರಗಳು ದಿವ್ಯ ಮತ್ತು ತೇಜಸ್ವಿಯಾಗಿ ಕಾಣುತ್ತವೆ. |
| ಸ್ಥಿತಿ | ಸೂರ್ಯದೇವನು ಪ್ರತಿದಿನ ಸ್ಥೂಲ ಸೂರ್ಯನ ರೂಪದಲ್ಲಿ ಬಂದು ಬ್ರಹ್ಮಾಂಡದ ವಿವಿಧ ಗ್ರಹಗಳಿಗೆ ಮತ್ತು ಜೀವಿಗಳಿಗೆ ಊರ್ಜೆ ಮತ್ತು ಪ್ರಕಾಶವನ್ನು ನೀಡಿ ಅವರ ಪಾಲನೆ ಪೋಷಣೆಯನ್ನೇ ಮಾಡುತ್ತಾನೆ. | ಸೂರ್ಯದೇವನಿಂದ ಸ್ಥೂಲದಿಂದ ಪ್ರಕ್ಷೇಪಿತವಾಗುವ ಪ್ರಕಾಶ ಮತ್ತು ಊರ್ಜೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಚೈತನ್ಯವೂ ಪ್ರಕ್ಷೇಪಿತವಾಗುತ್ತಿರುತ್ತದೆ. ಆ ಚೈತನ್ಯದಿಂದ ಅನೇಕ ಜೀವಿಗಳಿಗೆ ಸಾಧನೆ ಮಾಡಲು ಶಕ್ತಿ ದೊರೆಯುತ್ತದೆ. ಹಾಗೆಯೇ ಅವರ ಮನಸ್ಸು ಮತ್ತು ಬುದ್ಧಿಯ ಮೇಲಿನ ಅನಿಷ್ಟ ಶಕ್ತಿಯ ಆವರಣ ಕಡಿಮೆಯಾಗಿ ಅವರ ಬುದ್ಧಿಮತ್ತೆ ಪ್ರಗಲ್ಭವಾಗುತ್ತದೆ. |
| ಲಯ | ಸೂರ್ಯನ ಉಷ್ಣತೆಯಿಂದ ಸರೋವರಗಳು ಮತ್ತು ನದಿಗಳಲ್ಲಿನ ನೀರು ಆವಿಯಾಗುತ್ತದೆ. ಇದರಿಂದ ಅನೇಕ ಬಾರಿ ನದಿಗಳು ಮತ್ತು ಸರೋವರಗಳು ಬತ್ತಿಹೋಗುತ್ತವೆ. ಅತಿ ಉಷ್ಣತೆಯಿಂದ ಅನೇಕ ವನಸ್ಪತಿಗಳು ಸುಟ್ಟುಹೋಗುತ್ತವೆ, ಹಾಗೆಯೇ ಜೀವಿಗಳಿಗೂ ತೊಂದರೆಯಾಗುತ್ತದೆ ಮತ್ತು ಕೆಲವರು ಮರಣ ಹೊಂದುತ್ತಾರೆ. | ಸೂರ್ಯನ ಪ್ರಕಾಶ ಮತ್ತು ಉಷ್ಣತೆ ಇವುಗಳಿಂದ ಸೂರ್ಯನ ಸೂಕ್ಷ್ಮ ತೇಜಸ್ಸು ಪ್ರಕ್ಷೇಪಿತವಾಗುತ್ತಿರುತ್ತದೆ. ಈ ಸೂಕ್ಷ್ಮ ತೇಜಸ್ಸಿನಿಂದ ಸೂಕ್ಷ್ಮಜಂತುಗಳು ಮತ್ತು ರಜ-ತಮಾತ್ಮಕ ಸೂಕ್ಷ್ಮ ಜೀವಿಗಳ ನಾಶವಾಗುತ್ತದೆ. ಇದರಿಂದ ವಾಯುಮಂಡಲದಲ್ಲಿನ ರಜ-ತಮದ ಪ್ರಮಾಣ ಕಡಿಮೆಯಾಗಿ ಸಾತ್ತ್ವಿಕತೆ ಹೆಚ್ಚುತ್ತದೆ ಮತ್ತು ತ್ರಿಗುಣಗಳ ಸಮತೋಲನವನ್ನು ಕಾಪಾಡಲಾಗುತ್ತದೆ. |
ಶರೀರಬಲ, ಮನೋಬಲ ಮತ್ತು ಆತ್ಮಬಲ ಹೆಚ್ಚಿಸುವ ಸೂರ್ಯನಮಸ್ಕಾರ
ರಥಸಪ್ತಮಿ ಹಬ್ಬದಲ್ಲಿ ಸೂರ್ಯದೇವರ ಪೂಜೆಯನ್ನು ಹೇಳಲಾಗಿದೆ. ಆರೋಗ್ಯಂ ಭಾಸ್ಕರಾತ್ ಇಚ್ಛೇತ್ | ಅಂದರೆ ಸೂರ್ಯನಿಂದ ಆರೋಗ್ಯವನ್ನು ಬೇಡಿಕೊಳ್ಳಬೇಕು ಎಂಬ ಶಾಸ್ತ್ರವಚನವಿದೆ. ಸೂರ್ಯನ ತೇಜಸ್ಸು ನಮ್ಮ ಮೈಗೂಡಬೇಕು ಎಂದು ಸೂರ್ಯೋಪಾಸನೆ ಹೇಳಲಾಗಿದೆ. ಸಮರ್ಥ ರಾಮದಾಸಸ್ವಾಮಿಗಳು ಹೇಳಿದ ಸಾಷ್ಟಾಂಗ ಸೂರ್ಯನಮಸ್ಕಾರವನ್ನು ಮಕ್ಕಳು ನಿಯಮಿತವಾಗಿ ಮಾಡಿದರೆ, ಕಿಡಿಗೇಡಿಗಳಿಗೆ ಆಕ್ರಮಣ ಮಾಡುವ ಧೈರ್ಯ ಎಲ್ಲಿಂದ ತಾನೆ ಬರಬೇಕು? ಶರೀರಬಲ ಮತ್ತು ಮನೋಬಲ ಹೆಚ್ಚಿಸುವ ಸಾಮರ್ಥ್ಯ ಈ ನಮಸ್ಕಾರಗಳಲ್ಲಿದೆ. ಇವುಗಳನ್ನು ಮಂತ್ರಸಹಿತವಾಗಿ ಮಾಡಿದರೆ, ಆತ್ಮಬಲವೂ ಹೆಚ್ಚುತ್ತದೆ.
– ವೈದ್ಯ ಸುವಿನಯ ದಾಮಲೆ, ಕುಡಾಳ, ಸಿಂಧುದುರ್ಗ.
ತಾವೂ ಇಂದಿನಿಂದಲೇ ಮಂತ್ರ ಸಹಿತ ಸೂರ್ಯನಮಸ್ಕಾರಗಳನ್ನು ಮಾಡಲು ಪ್ರಾರಂಭಿಸಿ. ಇಲ್ಲಿ ಕ್ಲಿಕ್ ಮಾಡಿ!
ಮೂಲ ಸ್ರೋತವಾಗಿರುವ ಸೂರ್ಯ !
ಸೂರ್ಯನು ಜೀವನದ ಮೂಲ ಸ್ರೋತವಾಗಿದ್ದಾನೆ. ಸೂರ್ಯಕಿರಣಗಳಿಂದ ಶರೀರಕ್ಕೆ ಆವಶ್ಯಕವಿರುವ ‘ಡಿ’ ಜೀವಸತ್ವ ದೊರೆಯುತ್ತದೆ. ಕಾಲದ ಎಣಿಕೆಯು ಸೂರ್ಯನನ್ನೇ ಅವಲಂಬಿಸಿದೆ. ಸೂರ್ಯನು ಗ್ರಹಗಳ ರಾಜನಾಗಿದ್ದು ಅವನ ಸ್ಥಾನ ನವಗ್ರಹಗಳಲ್ಲಿದೆ. ಇತರ ಎಲ್ಲ ಗ್ರಹಗಳು ಅವನ ಸುತ್ತಲೂ ಪ್ರದಕ್ಷಿಣೆ ಹಾಕುತ್ತವೆ. ಸೂರ್ಯನು ಸ್ವಯಂಪ್ರಕಾಶಿಯಾಗಿದ್ದು ಇತರ ಗ್ರಹಗಳು ಅವನ ಪ್ರಕಾಶವನ್ನು ಪಡೆಯುತ್ತವೆ.
ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಸೂರ್ಯನ ಮಹತ್ವ
ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ರವಿ (ಅಂದರೆ ಸೂರ್ಯ) ಆತ್ಮಕಾರಕನಾಗಿದ್ದಾನೆ. ‘ಮಾನವನ ಶರೀರದಲ್ಲಿನ ಪ್ರಾಣ, ಆತ್ಮಿಕ ಬಲ ಮತ್ತು ಚೈತನ್ಯಶಕ್ತಿಯ ಬೋಧನೆಯು ರವಿಯಿಂದ ಆಗುತ್ತದೆ’, ಎಂಬುದು ಅದರ ಅರ್ಥವಾಗಿದೆ. ವ್ಯಕ್ತಿಯ ಜಾತಕದಲ್ಲಿ ರವಿಯು ಎಷ್ಟು ಬಲಶಾಲಿಯಾಗಿರುತ್ತಾನೆಯೋ, ಅಷ್ಟು ಆ ವ್ಯಕ್ತಿಯ ಜೀವನಶಕ್ತಿ ಮತ್ತು ರೋಗಪ್ರತಿಕಾರಕ ಶಕ್ತಿ ಉತ್ತಮವಾಗಿರುತ್ತದೆ. ರಾಜ, ಪ್ರಮುಖ, ಸತ್ತೆ, ಅಧಿಕಾರ, ಕಠೋರತೆ, ತತ್ತ್ವನಿಷ್ಠೆ, ಕರ್ತೃತ್ವ, ಸನ್ಮಾನ, ಕೀರ್ತಿ, ಆರೋಗ್ಯ, ವೈದ್ಯಕೀಯಶಾಸ್ತ್ರ ಇತ್ಯಾದಿಗಳ ಕಾರಕನೂ ರವಿಯಾಗಿದ್ದಾನೆ. ಸೂರ್ಯದೇವನ ರಥಕ್ಕೆ ಇರುವ ಸಪ್ತ ಅಶ್ವಗಳು ಸಪ್ತಾಹದ ಏಳು ವಾರಗಳನ್ನು ತೋರಿಸುತ್ತವೆ. ರಥಕ್ಕೆ ಇರುವ ಹನ್ನೆರಡು ಚಕ್ರಗಳು ಹನ್ನೆರಡು ರಾಶಿಗಳನ್ನು ತೋರಿಸುತ್ತವೆ. – ಶ್ರೀ. ರಾಜ ಧನಂಜಯ ಕರ್ವೆ (ಜ್ಯೋತಿಷಿ), ಫೋಂಡಾ, ಗೋವಾ. (೨೫.೧.೨೦೧೭)
ರಥಸಪ್ತಮಿಯ ಕುರಿತು ಸಿಕ್ಕಿದ ಸೂಕ್ಷ್ಮ ಜ್ಞಾನ
ಆಧಾರ
ಇಲ್ಲಿರುವ ಮಾಹಿತಿಯನ್ನು ಸನಾತನದ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’ ಎಂಬ ಗ್ರಂಥದಿಂದ ಆರಿಸಿ ನೀಡಲಾಗಿದೆ. ಇಂತಹ ಇತರ ಹಬ್ಬ-ಉತ್ಸವಗಳ ಮಾಹಿತಿಯನ್ನು ತಿಳಿದುಕೊಳ್ಳಲು ಈ ಗ್ರಂಥವನ್ನು ಓದಿ…

ರಥಸಪ್ತಮಿಯಂದು ಮಾಡಬೇಕಾದ ಸೂರ್ಯದೇವನ ಪೂಜಾವಿಧಿ ನೋಡಿ !
‘ರಥಸಪ್ತಮಿಯಂದು ವ್ಯಕ್ತಿಯು ಅರುಣೋದಯ ಕಾಲದಲ್ಲಿ ಸ್ನಾನ ಮಾಡಬೇಕು. ಸೂರ್ಯದೇವನ ೧೨ ಹೆಸರುಗಳನ್ನು ಹೇಳಿಕೊಂಡು ಕನಿಷ್ಠ ೧೨ ಸೂರ್ಯನಮಸ್ಕಾರಗಳನ್ನು ಮಾಡಬೇಕು. ಮಣೆಯ ಮೇಲೆ ರಥದಲ್ಲಿ ಕುಳಿತಿರುವ ಸೂರ್ಯನಾರಾಯಣನ ಆಕೃತಿಯನ್ನು ಬಿಡಿಸಿ ಅವನ ಪೂಜೆ ಮಾಡಬೇಕು. ಅವನಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಸೂರ್ಯನಿಗೆ ಪ್ರಾರ್ಥನೆ ಮಾಡಿ ಆದಿತ್ಯಹೃದಯಸ್ತೋತ್ರಮ್, ಸೂರ್ಯಾಷ್ಟಕಮ್ ಮತ್ತು ಸೂರ್ಯಕವಚಮ್, ಇವುಗಳಲ್ಲಿ ಯಾವುದಾದರೂ ಸ್ತೋತ್ರವನ್ನು ಭಕ್ತಿಭಾವದಿಂದ ಹೇಳಬೇಕು ಅಥವಾ ಕೇಳಬೇಕು. ರಥಸಪ್ತಮಿಯ ದಿನದಂದು ಯಾವುದೇ ವ್ಯಸನಕ್ಕೆ ದಾರಿ ಮಾಡಿಕೂಡದು. ರಥಸಪ್ತಮಿಯ ಮಾರನೇ ದಿನದಿಂದ ಪ್ರತಿದಿನ ಸೂರ್ಯನಿಗೆ ಪ್ರಾರ್ಥನೆ ಮಾಡಬೇಕು ಮತ್ತು ಸೂರ್ಯನಮಸ್ಕಾರ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಪ್ರಾಪ್ತವಾಗುತ್ತದೆ.
ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
ರಕ್ಷಾಬಂಧನ (ರಾಖಿ ಹುಣ್ಣಿಮೆ) Raksha bandhan 2025
ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ
ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ (2025)
ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ಸಂಪೂರ್ಣ ಶ್ರೀ ಗಣೇಶ ಪೂಜೆ
Sir best advice by sanatan sansthe and very much useful words for all human beings and truth. Now any many time in my 71age experience really good job of hindhu rastra we need it now jaytu jayatu hindurashtra
Ratha saptami god sun surya festival day 🙏
ಹರಿ ಓಂ.
ಸನಾತನ ವಿಚಾರ ಬಗ್ಗೆ ಇದೇ ರೀತಿ ಮುಂದುವರೆಯಲಿ.
surya naraya bless all with good thoughts 🙏
Surya Narayana bless all with good thoughts 🙏