…ಆದರೆ ನಾವು ಎರಡನೇ ಭಾಗದ ವಿರುದ್ಧ ದೇಶಾದ್ಯಂತ ಬೀದಿಗಿಳಿಯಬೇಕಾಗುತ್ತದೆ! – ಶ್ರೀ. ಅಭಯ್ ವರ್ತಕ (ರಾಷ್ಟ್ರೀಯ ವಕ್ತಾರರು)

ಮುಂಬಯಿ – ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಚಲನಚಿತ್ರದ ಕೆಲವು ದೃಶ್ಯಗಳಲ್ಲಿ, ‘ಬರಹಗಾರನ ಸ್ವಾತಂತ್ರ್ಯ’ ಎಂಬ ನೆಪದಲ್ಲಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಮೂಲ ಕಥೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ಇಂದು ದೇಶದಲ್ಲಿ ರಾಮಭಕ್ತ ಪ್ರಧಾನಿ ಮತ್ತು ರಾಮನನ್ನು ಆದರ್ಶವಾಗಿ ಸ್ವೀಕರಿಸುವ ಸರಕಾರವಿರುವಾಗ ಇಂತಹ ಕಲಾಕೃತಿಗಳ ಮೂಲಕ ಇತಿಹಾಸವನ್ನು ತಿರುಚುತ್ತಿರುವುದು ದುರದೃಷ್ಟಕರ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ್ ವರ್ತಕ ಅಭಿಪ್ರಾಯಪಟ್ಟರು.
17 ನವೆಂಬರ್ ರಂದು ‘ಮುಂಬಯಿ ಮರಾಠಿ ಪತ್ರಕರ್ತರ ಸಂಘ’ದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ರಾಜ್ಯ ಸಂಘಟಕರಾದ ಶ್ರೀ. ಸುನಿಲ ಘನವಟ್ ಹಾಗೂ ಮುಂಬಯಿ ವಕ್ತಾರ ಶ್ರೀ. ಸತೀಶ ಕೊಚರೇಕರ್ ಉಪಸ್ಥಿತರಿದ್ದರು.
ಚಲನಚಿತ್ರದ ಮೇಲಿನ ಪ್ರಮುಖ ಆಕ್ಷೇಪಗಳು!
ರಾವಣನು ‘ಶೋಷಿತರ ರಕ್ಷಕ’ನೇ?
ಋಷಿಮುನಿಗಳ ಆಶ್ರಮಗಳನ್ನು ನಾಶಪಡಿಸಿದ ಪಾಪಿ ರಾವಣನನ್ನು ಚಲನಚಿತ್ರದಲ್ಲಿ ಬಡವರಿಗೆ ಚಿನ್ನದ ಮನೆಗಳನ್ನು ನೀಡುವ ‘ಶೋಷಿತರ ರಕ್ಷಕ’ ಎಂದು ಬಿಂಬಿಸಲಾಗಿದೆ. ರಾವಣನು ರಾಕ್ಷಸರ ರಾಜನಾಗಿದ್ದನು. ರಾಕ್ಷಸರು ಶೋಷಿತರಲ್ಲ, ಬದಲಾಗಿ ದಬ್ಬಾಳಿಕೆ ಮಾಡುವವರಾಗಿದ್ದರು. ಈ ಚಲನಚಿತ್ರದಲ್ಲಿ ಶೋಷಿತ ಸಮಾಜಕ್ಕೆ ನ್ಯಾಯ ಒದಗಿಸುವ, ಅಂದರೆ ಕಮ್ಯುನಿಸ್ಟ್ ಸಿದ್ಧಾಂತದ ಆಧಾರದ ಮೇಲೆ ರಾವಣನನ್ನು ತೋರಿಸಲಾಗಿದೆ.
ರಾವಣ ‘ಮಹಿಳೆಯರ ರಕ್ಷಕ’ನೇ?
ಅನೇಕ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದರಿಂದ, ಪರಸ್ತ್ರೀಯನ್ನು ಮುಟ್ಟಿದರೆ ಭಸ್ಮವಾಗುವ ಶಾಪವನ್ನು ರಾವಣ ಹೊಂದಿದ್ದನು. ದಾಸಿಯೊಬ್ಬಳನ್ನು ಚುಡಾಯಿಸಿದ್ದಕ್ಕಾಗಿ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವಾನನ್ನು ಕೊಲ್ಲುವ ಮೂಲಕ ರಾವಣನನ್ನು ‘ಮಹಿಳೆಯರ ವಿನಯದ ರಕ್ಷಕ’ನೆಂದು ತೋರಿಸಲಾಗಿದೆ. ಇದು ಕೂಡ ಕಮ್ಯುನಿಸ್ಟ್ ನೀತಿಯೇ ಆಗಿದೆ.
ಸ್ತ್ರೀವಾದಿ ವಿಚಾರಗಳಿಗೆ ಪ್ರೋತ್ಸಾಹ!
ಶೂರ್ಪನಖಿಯು ರಾಮನ ಬಳಿಗೆ ಕೇವಲ ಮದುವೆಯ ಪ್ರಸ್ತಾಪವನ್ನು ತಂದಿದ್ದಳು ಮತ್ತು ಅದಕ್ಕಾಗಿ ಲಕ್ಷ್ಮಣನು ಅವಳ ಮೂಗನ್ನು ಕತ್ತರಿಸಿದನು ಎಂದು ತೋರಿಸಲಾಗಿದೆ. ಇದಕ್ಕಿಂತಲೂ ಕೆರಳಿಸುವ ಸಂಗತಿಯೆಂದರೆ, ಈ ಘಟನೆಯ ನಂತರ ಚಲನಚಿತ್ರದಲ್ಲಿ ಮಾತೆ ಸೀತೆಯು ಲಕ್ಷ್ಮಣನಿಗೆ ‘ಮಹಿಳೆಯ ಸೌಂದರ್ಯವನ್ನು ಭಂಗಗೊಳಿಸುವ ಹಕ್ಕು ನಿಮಗಿಲ್ಲ’ ಎಂದು ಗದರುತ್ತಾಳೆ. ರಾಮಾಯಣದಲ್ಲಿ ನಡೆಯದ ಸಂಗತಿಯನ್ನು, ಕೇವಲ ಸ್ತ್ರೀವಾದಿ ಚಳುವಳಿಯ ನಿಲುವನ್ನು ಪ್ರಚಾರ ಮಾಡಲು ತುರುಕಲಾಗಿದೆ.
ಶ್ರೀ ರಾಮನಿಗೆ ಅವಮಾನ!
ಖರ-ದೂಷಣ ಮತ್ತು ಅವರ 14 ಸಾವಿರ ರಾಕ್ಷಸರು, ಹಾಗೂ ತಾಟಕಿಯೊಂದಿಗೆ ಯುದ್ಧ ಮಾಡುವಾಗ, ಶ್ರೀ ರಾಮ ಮತ್ತು ಲಕ್ಷ್ಮಣ ರಾಕ್ಷಸರ ಸೈನ್ಯದಿಂದ ಓಡಿಹೋಗುವಂತೆ ತೋರಿಸಲಾಗಿದೆ. ವಿಷ್ಣುವಿನ ಅವತಾರವಾದ ರಾಮ ಮತ್ತು ಲಕ್ಷ್ಮಣ ಇಬ್ಬರೂ ಅಜೇಯ ಯೋಧರಾಗಿದ್ದರು. ಇದರಿಂದ ರಾವಣನ ವೈಭವೀಕರಣ ಮತ್ತು ರಾಮನಿಗೆ ಅವಮಾನ ಮಾಡಲಾಗಿದೆ.
ತ್ಯಾಗ ಮತ್ತು ನಿಷ್ಠೆಯ ಮೂರ್ತರೂಪವಾದ ಲಕ್ಷ್ಮಣನಿಗೆ ಘೋರ ಅವಮಾನ!
ಚಲನಚಿತ್ರದಲ್ಲಿ ಲಕ್ಷ್ಮಣನನ್ನು ನಿರಂತರವಾಗಿ ದುರಹಂಕಾರಿ, ಕೋಪಿಷ್ಟ ಮತ್ತು ವಿದೂಷಕನಂತೆ ಸಂಭಾಷಣೆ ನಡೆಸುವಾಗ ತೋರಿಸಲಾಗಿದೆ. ಅತ್ಯಂತ ವಿನಮ್ರ ಮತ್ತು ನಿಷ್ಠಾವಂತನಾಗಿದ್ದ ಲಕ್ಷ್ಮಣನು ಶ್ರೀ ರಾಮ, ಭಗವಾನ್ ಪರಶುರಾಮ ಮತ್ತು ಇತರ ಪೂಜ್ಯ ಋಷಿಗಳೊಂದಿಗೆ ವ್ಯಂಗ್ಯವಾಗಿ ಮಾತನಾಡುವಂತೆ ತೋರಿಸಲಾಗಿದೆ. ತ್ಯಾಗ ಮತ್ತು ನಿಷ್ಠೆಯ ಮೂರ್ತರೂಪವಾದ ಲಕ್ಷ್ಮಣನನ್ನು ಹೀಗೆ ತೋರಿಸುವುದು, ಧರ್ಮಗ್ರಂಥಗಳಲ್ಲಿ ನೀಡಲಾದ ವಿಷಯವನ್ನು ತಿರುಚಿರುವ ಹುನ್ನಾರವೇ.
ಮಾತೆ ಸೀತೆಯ ಬಗ್ಗೆ ವಿರೋಧಾಭಾಸ!
ಮಾತೆ ಸೀತೆಯನ್ನು ಇತರ ರಾಕ್ಷಸರೊಂದಿಗೆ ಹೋರಾಡುವಂತೆ ತೋರಿಸಲಾಗಿದೆ; ಆದರೆ ರಾವಣನು ಅವಳನ್ನು ಅಪಹರಿಸಿದಾಗ, ಅವಳು ಯಾವುದೇ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಇದು ವಿರೋಧಾಭಾಸವಲ್ಲವೇ? ವಾಲ್ಮೀಕಿ ರಾಮಾಯಣದಲ್ಲಿ ಮಾತೆ ಸೀತೆ ಯುದ್ಧ ಮಾಡಿದ್ದಳು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.
…ಎರಡನೇ ಭಾಗದ ವಿರುದ್ಧ ದೇಶಾದ್ಯಂತ ಬೀದಿಗಿಳಿಯಬೇಕಾಗುತ್ತದೆ – ಸನಾತನ ಸಂಸ್ಥೆ
ಈ ಚಲನಚಿತ್ರದಂತೆ, ಅದರ ಎರಡನೇ ಭಾಗದಲ್ಲಿಯೂ ಇತಿಹಾಸವನ್ನು ತಿರುಚಿರುವುದು ಕಂಡುಬಂದರೆ, ನಾವು ದೇಶಾದ್ಯಂತ ಬೀದಿಗಿಳಿದು ಈ ಚಲನಚಿತ್ರವನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ನಾವು ನಿರ್ಮಾಪಕರು, ನಿರ್ದೇಶಕರು ಮತ್ತು ಸೆನ್ಸಾರ್ ಮಂಡಳಿಗೆ ಹೇಳಲು ಬಯಸುತ್ತೇವೆ. ಎರಡನೇ ಭಾಗ ಬಿಡುಗಡೆಯಾಗುವ ಮುನ್ನ, ಹಿಂದೂ ಸಂತರು ಮತ್ತು ‘ರಾಮಾಯಣ’ದ ವಿದ್ವಾಂಸರಿಗೆ ಚಿತ್ರವನ್ನು ತೋರಿಸಿ ಬಿಡುಗಡೆ ಮಾಡಬೇಕು ಎಂದು ಶ್ರೀ. ಅಭಯ ವರ್ತಕ್ ಈ ಸಂದರ್ಭದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಪರವಾಗಿ ಮನವಿ ಮಾಡಿದರು. ‘ರಾಮಭಕ್ತ ಸರಕಾರವೂ ರಾಮನನ್ನು ದೂಷಿಸುವ ಚಲನಚಿತ್ರದ ಬಗ್ಗೆ ನಿಲುವು ತಳೆಯಬೇಕು’ ಎಂದು ಸರಕಾರಕ್ಕೂ ಮನವಿ ಮಾಡಲಾಗಿದೆ.
ಆನಂದಮಯ ಜೀವನಕ್ಕಾಗಿ ಸನಾತನ ಸಂಸ್ಥೆಯಿಂದ ಕುದೂರಿನಲ್ಲಿ ಸಾರ್ವಜನಿಕ ಸಾಧನಾ ಪ್ರವಚನ !