ಅಧ್ಯಾತ್ಮಶಾಸ್ತ್ರ : ಒಂದು ಪರಿಪೂರ್ಣ ಶಾಸ್ತ್ರ

Article also available in :

ಅಧ್ಯಾತ್ಮ

‘ಸುಖ ಸಾಸಿವೆಯಷ್ಟು, ದುಃಖವು ಬೆಟ್ಟದಷ್ಟು – ಇದರ ಅನುಭವವು ಹೆಚ್ಚಿನವರಿಗಿರುತ್ತದೆ. ಕಲಿಯುಗದಲ್ಲಿ ಸಾಧಾರಣವಾಗಿ ಮನುಷ್ಯನ ಜೀವನದಲ್ಲಿ ಸುಖವು ಸರಾಸರಿ ಶೇ. ೨೫ ಮತ್ತು ದುಃಖವು ಶೇ. ೭೫ ಇರುತ್ತದೆ. ಮನುಷ್ಯನಷ್ಟೇ ಅಲ್ಲದೆ, ಇತರ ಪ್ರಾಣಿಗಳೂ ಹೆಚ್ಚಿನ ಸುಖಕ್ಕಾಗಿ ಹಪಹಪಿಸುತ್ತವೆ.

ಇದಕ್ಕಾಗಿ ಪ್ರತಿಯೊಬ್ಬರೂ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಮಾಧ್ಯಮದಿಂದ ವಿಷಯಸುಖವನ್ನು ಅನುಭವಿಸಲು ಪ್ರಯತ್ನಿಸುತ್ತಾರೆ; ಆದರೆ ವಿಷಯಸುಖವು ತಾತ್ಕಾಲಿಕ ಮತ್ತು ನಿಕೃಷ್ಟ ಮಟ್ಟದ್ದಾಗಿರುತ್ತದೆ, ಆದರೆ ಆತ್ಮಸುಖ ಅಂದರೆ ಆನಂದವು ಚಿರಂತನ ಹಾಗೂ ಸರ್ವೋಚ್ಚ ಮಟ್ಟದ್ದಾಗಿರುತ್ತದೆ. ಆತ್ಮಸುಖವನ್ನು ಪ್ರಾಪ್ತ ಮಾಡಿಕೊಡುವ ವಿಷಯವೆಂದರೆ ಅಧ್ಯಾತ್ಮ.

ಅಧ್ಯಾತ್ಮ ಎಂಬ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ: ಅಧ್ಯಾತ್ಮ ಎಂಬ ಪದ ‘ಅಧಿ + ಆತ್ಮನ್’ ಎಂಬ ಎರಡು ಪದಗಳಿಂದ ಬಂದಿದೆ. ‘ಅಧಿ’ ಎಂದರೆ ಅದರ ಬಗ್ಗೆ; ‘ಆತ್ಮನ್’ ಅಂದರೆ ಆತ್ಮ. ಆದ್ದರಿಂದ ಅಧ್ಯಾತ್ಮ ಎಂದರೆ ಆತ್ಮನ ಬಗ್ಗೆ. ಆತ್ಮದ ಸ್ವರೂಪ, ನಿಜವಾದ ‘ನಾನು’ ಅಂದರೆ ಯಾರು, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುವೆ ಇತ್ಯಾದಿಗಳ ಬಗ್ಗೆ ಇರುವ ಜ್ಞಾನವೇ ಅಧ್ಯಾತ್ಮ. ಆದ್ದರಿಂದಲೇ ‘ಸುಖಂ ಚ ನ ವಿನಾ ಧರ್ಮಾತ್, ತಸ್ಮಾತ್ ಧರ್ಮಪರೋ ಭವೇತ್ |’ ಅಂದರೆ ‘ನಿಜವಾದ ಸುಖ (ಆನಂದ) ಧರ್ಮಾಚರಣೆ ಮಾಡದೆ ಸಿಗುವುದಿಲ್ಲ; ಆದ್ದರಿಂದ ಯಾವಾಗಲೂ ಧರ್ಮಾಚರಣೆ ಮಾಡಬೇಕು’ ಎಂದು ಹೇಳಲಾಗಿದೆ.

ಅಧ್ಯಾತ್ಮದ ಹಾದಿ ಹಿಡಿದು, ಅಂದರೆ ಸಾಧನೆಯನ್ನು ಮಾಡಿ ಆತ್ಮಸುಖ ಪಡೆಯಲು ಪ್ರಯತ್ನಿಸಿದರೆ ಲೌಕಿಕ ಮತ್ತು ಪಾರಲೌಕಿಕ ಸುಖ ಎಂಬ ಆನುಷಂಗಿಕ ಫಲಗಳೂ ಪ್ರಾಪ್ತವಾಗುತ್ತವೆ. ಹಿಂದೂ ಧರ್ಮವು ಮಾನವಜಾತಿಗೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ಅಧ್ಯಾತ್ಮ; ಅಧ್ಯಾತ್ಮಶಾಸ್ತ್ರಕ್ಕೆ ಇಷ್ಟೊಂದು ಮಹತ್ವವಿದ್ದರೂ ದೂಃಖದ ವಿಷಯವೆಂದರೆ ಹೆಚ್ಚಿನವರಿಗೆ ಅಧ್ಯಾತ್ಮ ಎಂಬ ಶಬ್ದದ ಅರ್ಥವೂ ತಿಳಿದಿರುವುದಿಲ್ಲ. ಇದರಿಂದ ಅಧ್ಯಾತ್ಮದಂತಹ ಸರ್ವೋಚ್ಚ ಆನಂದ ಮತ್ತು ಸರ್ವಜ್ಞತೆಯನ್ನು ನೀಡುವ ವಿಷಯದತ್ತ ಬಹಳ ಕಡಿಮೆ ಜನರು ತಿರುಗುತ್ತಾರೆ. ವಿಷಯಸುಖಕ್ಕಿಂತ ಅನಂತ ಪಟ್ಟು ಆನಂದ ಇರುತ್ತದೆ ಎಂದು ತಿಳಿದರೆ, ವಿಷಯಸುಖಕ್ಕಿಂತ ಆನಂದದ ಪ್ರಾಪ್ತಿಗಾಗಿ ಯಾರಾದರೂ ಪ್ರಯತ್ನ ಮಾಡಿಯೇ ಮಾಡುತ್ತಾರೆ.

ವಿಜ್ಞಾನ ಮತ್ತು ಅಧ್ಯಾತ್ಮಶಾಸ್ತ್ರ

ವಿಜ್ಞಾನವು ಅಧ್ಯಾತ್ಮದ ಒಂದು ಶಾಖೆ! ‘ವಿಜ್ಞಾನ’ ಎಂದಾಗ ಸ್ಥೂಲವಾಗಿ ‘ಆಧುನಿಕ ವಿಜ್ಞಾನ’ ಎಂದು ನಮ್ಮ ಕಣ್ಣುಗಳ ಮುಂದೆ ಬರುತ್ತದೆ. ಬುದ್ಧಿಜೀವಿಗಳಿಗೆ ಹಾಗೆಯೇ ಸರ್ವಸಾಮಾನ್ಯ ವ್ಯಕ್ತಿಗಳಿಗೂ ಕೂಡ ‘ವಿಜ್ಞಾನ’ ಮತ್ತು ‘ಅಧ್ಯಾತ್ಮ’ ಇವೆರಡೂ ಬೇರೆ ಬೇರೆ ವಿಷಯಗಳೆಂದು ಅನಿಸುತ್ತದೆ. ಅಧ್ಯಾತ್ಮ ಎಂದರೆ ಅನಂತದ, ಸರ್ವ ವಿಷಯಗಳ ಜ್ಞಾನ! ಅಂದಮೇಲೆ ಅಧ್ಯಾತ್ಮದಲ್ಲಿ ವಿಜ್ಞಾನವೂ ಬರುವುದಿಲ್ಲವೇ? ವಿಜ್ಞಾನವು ಅಧ್ಯಾತ್ಮದ ಒಂದು ಶಾಖೆಯಾಗಿದೆ ಎಂದು ಹೇಳಬಹುದು.

ಅಧ್ಯಾತ್ಮ: ಮಹತ್ವ

ಅ. ಅಧ್ಯಾತ್ಮ: ಚಿರಂತನ ಮತ್ತು ಸರ್ವೋಚ್ಚ ಆನಂದ ನೀಡುವ ವಿಷಯ

ವಿದೇಶದ ಒಬ್ಬರು ಧರ್ಮಗುರುಗಳಿಗೆ ಅಧ್ಯಾತ್ಮದ ಮಹತ್ವವನ್ನು ತಿಳಿಸುವಾಗ ಸನಾತನದ ಶ್ರದ್ಧಾಸ್ಥಾನ ಪರಾತ್ಪರ ಗುರು ಭಕ್ತರಾಜ ಮಹಾರಾಜರು (ಬಾಬಾ) ಈ ಕೆಳಗಿನಂತೆ ಉತ್ತರ ನೀಡಿದರು:

ಧರ್ಮಗುರು: ಅಮೇರಿಕಾದ ಜನತೆಗಾಗಿ ನಿಮ್ಮದೇನಾದರೂ ವಿಶೇಷ ಸಂದೇಶವಿದೆಯೇ?

ಬಾಬಾ: ಜಗತ್ತಿನ ಎಲ್ಲಾ ಜನರಿಗಾಗಿ ನನ್ನದೊಂದು ಸಂದೇಶವಿದೆ. ಮನುಷ್ಯನು ಸುಖ, ಶಾಂತಿ ಮತ್ತು ಸಮಾಧಾನದ ಶೋಧವನ್ನು ಬಾಹ್ಯ ಜಗತ್ತಿನಲ್ಲಿ ಮಾಡುವುದನ್ನು ಬಿಡಬೇಕು; ಏಕೆಂದರೆ ಇವು ಬೇರೆಲ್ಲೂ ಇರದೆ ಅವನ ಆಂತರ್ಯದಲ್ಲೇ ಇವೆ. ನಾವು ದಿನವಿಡೀ ಎಷ್ಟೇ ಸುಖವನ್ನು ಸಂಪಾದಿಸಿದರೂ ಅಥವಾ ಎಷ್ಟೇ ಭೋಗಗಳನ್ನು ಅನುಭವಿಸಿದರೂ, ದಿನದ ಅಂತ್ಯಕ್ಕೆ ನಮಗೆ ಸುಸ್ತೇ ಸಿಗುತ್ತದೆ. ಕೃತಕರ್ಮರಾದಂತೆ ಯಾವುದೂ ಅನಿಸುವುದಿಲ್ಲ. ಆಗ ಆ ಸುಸ್ತನ್ನು ಹೋಗಲಾಡಿಸಲು ನಾವು ದಿನವಿಡೀ ಸಂಪಾದಿಸಿದ ಎಲ್ಲವನ್ನೂ ತ್ಯಜಿಸಿ ನಿದ್ರೆಯ ಆಶ್ರಯ ಪಡೆಯುತ್ತೇವೆ. ಮನುಷ್ಯನಿಗೆ ಬೇಕಾದ ನಿದ್ರೆಯ ಆವಶ್ಯಕತೆಯೇ ಇದನ್ನು ಸಿದ್ಧಪಡಿಸುತ್ತದೆ ಎಂದರೆ, ಬಾಹ್ಯ ವಿಷಯಗಳ ಪ್ರಾಪ್ತಿಗಾಗಿ ಹಪಹಪಿಸುವುದಕ್ಕಿಂತ ಅಂತರ್ಮುಖವಾಗುವುದರಿಂದಲೇ ಮನುಷ್ಯನಿಗೆ ಎಷ್ಟೋ ಪಟ್ಟು ಹೆಚ್ಚು ಶಾಂತಿ ಮತ್ತು ಸಮಾಧಾನ ಪ್ರಾಪ್ತವಾಗುತ್ತದೆ. ಧ್ಯಾನದ (ಸಾಧನೆಯ) ಮೂಲಕ ಅಂತರ್ಮುಖವಾಗುವುದರಿಂದ ಮನುಷ್ಯನಿಗೆ ಪ್ರತ್ಯಕ್ಷವಾಗಿ ಅವನ ಹೃದಯದಲ್ಲಿ ವಾಸಿಸುತ್ತಿರುವ ಆತ್ಮಪ್ರಭೆಯ, ಪರಮೇಶ್ವರೀಯ ಶಕ್ತಿಯ ಶೋಧವುಂಟಾಗುತ್ತದೆ.

ಈ ಸಂದರ್ಭದಲ್ಲಿ ಕೆಳಗಿನ ಸುವಚನವು ಪ್ರಸಿದ್ಧವಾಗಿದೆ:

ಅಧ್ಯಾತ್ಮವಿದ್ಯಾ ವಿದ್ಯಾನಾಮ್ | – ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೩೨

ಅರ್ಥ : (ಎಲ್ಲಾ) ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯು (ಶ್ರೇಷ್ಠವಾಗಿದೆ).

ಆ. ಅಧ್ಯಾತ್ಮ: ಸರ್ವಜ್ಞತೆ ನೀಡುವ ವಿಷಯ

ವಿಶ್ವದಲ್ಲಿ ಅನಂತ ವಿಷಯಗಳಿರುವುದರಿಂದ ಎಲ್ಲದರ ಅಧ್ಯಯನ ಮಾಡಿ, ಎಲ್ಲ ವಿಷಯಗಳಲ್ಲಿ ನೈಪುಣ್ಯ ಪಡೆಯುವುದು ಜನ್ಮಜನ್ಮಾಂತರಗಳಲ್ಲಿ ಸಾಧ್ಯವಿಲ್ಲ. ಸರ್ವಜ್ಞನಾದ ಈಶ್ವರನೊಂದಿಗೆ ಏಕರೂಪವಾಗಬೇಕಿದ್ದರೆ ಸರ್ವಜ್ಞತೆ ಇರಲೇಬೇಕು. ಅದಕ್ಕಾಗಿ ಪರಮೇಶ್ವರನು ಅಧ್ಯಾತ್ಮ ಎಂಬ ವಿಷಯದ ವ್ಯವಸ್ಥೆ ಮಾಡಿದ್ದಾನೆ. ಅಧ್ಯಾತ್ಮವು ಒಂದೇ ವಿಷಯವಾಗಿದ್ದು ಅದರಲ್ಲಿ ಸರ್ವಜ್ಞತೆ ಬಂತು ಎಂದರೆ, ಎಲ್ಲಾ ವಿಷಯಗಳಲ್ಲಿಯೂ ಸರ್ವಜ್ಞತೆ ಬರುತ್ತದೆ. ಅಧ್ಯಾತ್ಮದಿಂದಲೇ ಎಲ್ಲ ವಿಷಯಗಳ ನಿರ್ಮಿತಿಯಾಗಿರುವದೇ ಇದಕ್ಕೆ ಕಾರಣ.

ಇ. ಅಧ್ಯಾತ್ಮ: ಪ್ರತಿಯೊಬ್ಬರಿಗೂ ಉಪಯುಕ್ತ

ಸಂಸಾರದಲ್ಲಿ ನಿಶ್ಚಿತತೆ ಇಲ್ಲ, ಪದೇ ಪದೇ ಸಂಕಟಗಳಿವೆ. ಇದಕ್ಕೆ ವಿರುದ್ಧವಾಗಿ ಪರಮಾರ್ಥದಲ್ಲಿ ಆನಂದ ಸಿಗುವ ನಿಶ್ಚಿತತೆ ಇದೆ. ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು ಹೇಳುತ್ತಾರೆ, ‘ನಿನ್ನ ಇಡೀ ಪರಮಾರ್ಥವು ಕೇವಲ ದೇಹಕ್ಕಾಗಿಯೇ – ದೇಹವು ಸುಖವಾಗಿರಲಿ, ದೇಹಕ್ಕೆ ರೋಗ ಇರದಿರಲಿ – ಎಂದು ಇದ್ದರೆ, ಅದು ತನ್ನ ಕಾಮಧೇನುವನ್ನು ಕೊಟ್ಟು ಕತ್ತೆಯನ್ನು ಕೊಂಡುಕೊಂಡಂತೆ’. ಸಕಾಮ (ಅಪೇಕ್ಷೆ ಇಟ್ಟು ಮಾಡಿದ) ಸಾಧನೆಯಿಂದ ಇವರಿಗೆ ಸುಖ ಸಿಗುತ್ತದೆ, ಹಾಗೆಯೇ ಇವರ ದುಃಖವೂ ಕಡಿಮೆಯಾಗುತ್ತದೆ, ಆದರೆ ನಿಷ್ಕಾಮ (ನಿರಪೇಕ್ಷ) ಸಾಧನೆಯಿಂದ ಆನಂದದ ಅವಸ್ಥೆ ಬರುತ್ತದೆ. ಅಂದರೆ ಐಹಿಕ ಮತ್ತು ಪಾರಮಾರ್ಥಿಕ ಎರಡೂ ವಿಷಯಗಳ ಆಸಕ್ತಿ ಇರುವ ವ್ಯಕ್ತಿಗಾಗಿ, ಅಂದರೆ ಪ್ರತಿಯೊಬ್ಬರಿಗೂ ಅಧ್ಯಾತ್ಮ ಎಂಬ ವಿಷಯವು ಉಪಯುಕ್ತವಾಗಿದೆ.

ಮೇಲಿನ ವಿವೇಚನೆಯಿಂದ ಪ್ರತಿಯೊಬ್ಬರೂ ಅಧ್ಯಾತ್ಮದಂತಹ ಪರಿಪೂರ್ಣ ಶಾಸ್ತ್ರದ ಹಾದಿ ಹಿಡಿದು ನಾಳೆಯಲ್ಲ ಇಂದು, ಇಂದಲ್ಲ ಈ ಕ್ಷಣದಿಂದಲೇ ಸಾಧನೆಗೆ ಆರಂಭಿಸಬೇಕು. ಸಾಧನೆಯಿಂದ ಬರುವ ಆಧ್ಯಾತ್ಮಿಕ ಅನುಭೂತಿ ಮತ್ತು ಸಿಗುವ ಆನಂದವು ಅವರ್ಣನೀಯ ಹಾಗೂ ಶಬ್ದಗಳ ಆಚೆಗಿನದ್ದಾಗಿದ್ದು ಪ್ರತಿಯೊಬ್ಬರೂ ಅದನ್ನು ಸ್ವತಃ ಅನುಭವಿಸಲೇಬೇಕು. ಸಾಧನೆಯಿಂದ ಆಂತರ್ಯದಲ್ಲಿ ಆನಂದದ ಹರಿವು ಬೇಗನೆ ನಿರ್ಮಾಣವಾಗುವುದು ಎಂಬ ಖಾತ್ರಿ ಇಟ್ಟುಕೊಳ್ಳಿ!

ಅಧ್ಯಾತ್ಮಶಾಸ್ತ್ರದ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆಂದು ತಿಳಿದುಕೊಳ್ಳಲು ಸನಾತನದ ಆನ್ಲೈನ್ ಸತ್ಸಂಗಗಳಲ್ಲಿ ಭಾಗವಹಿಸಿ – events.sanatan.org

ವಿಜ್ಞಾನದ ಅಪೂರ್ಣತೆ ಮತ್ತು ಅಧ್ಯಾತ್ಮದ ಪೂರ್ಣತೆ
ಮಾಯೆಯಲ್ಲಿ ಮುಂದೆ ಹೋದಂತೆ ಅನೇಕ ಶೋಧಗಳು ನಡೆಯುತ್ತಾ ಹೋಗುತ್ತವೆ; ಏಕೆಂದರೆ ಮಾಯೆಯು ಅನಂತವಾಗಿದೆ ಮತ್ತು ವಿಜ್ಞಾನವು ಅಪೂರ್ಣವಾಗಿದೆ. ಇದಕ್ಕೆ ವಿರುದ್ಧವಾಗಿ ಅಧ್ಯಾತ್ಮದಲ್ಲಿ ಹೊಸ ಶೋಧಗಳು ನಡೆಯುವುದಿಲ್ಲ; ಏಕೆಂದರೆ ಈಶ್ವರನು ಒಬ್ಬನೇ ಆಗಿದ್ದಾನೆ ಮತ್ತು ಈಶ್ವರಪ್ರಾಪ್ತಿಯ ಎಲ್ಲಾ ಮಾರ್ಗಗಳು ಪರಿಪೂರ್ಣವಾಗಿರುವುದರಿಂದ ಯಾವುದೇ ಶೋಧ ಮಾಡಲು ಉಳಿದಿಲ್ಲ. – (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೧೪.೧.೨೦೧೫)

Leave a Comment