ಮನುಷ್ಯ ಜನ್ಮದ ಧ್ಯೇಯ – ಧರ್ಮಗ್ರಂಥಗಳಲ್ಲಿ ಹೇಳಿರುವಂತೆ

Article also available in :

ಮನುಷ್ಯನ ಜನ್ಮವು ದುರ್ಲಭವಾಗಿದೆ. ಭಗವಂತನು ವಿವಿಧ ರೂಪಗಳಲ್ಲಿ ಬಂದು ‘ಈಶ್ವರಪ್ರಾಪ್ತಿ ಮಾಡಿಕೊಳ್ಳುವದೇ ಮನುಷ್ಯ ಜನ್ಮದ ಧ್ಯೇಯವಾಗಿದೆ’ ಎಂದು ಹೇಳುತ್ತಿರುತ್ತಾನೆ. ಮನುಷ್ಯನ ದೇಹವು ಒಂದು ಯಂತ್ರವಾಗಿದೆ. ‘ನಾನು ಜೀವಂತವಾಗಿದ್ದೇನೆ’ ಎಂಬ ಅರಿವಿನೊಂದಿಗೆ ಜೀವನವನ್ನು ನಡೆಸಬೇಕು. ಈಶ್ವರಪ್ರಾಪ್ತಿ ಮಾಡಿಕೊಳ್ಳಲಿಕ್ಕೆಂದೇ ಭಗವಂತನು ಈ ಮನುಷ್ಯಜನ್ಮವನ್ನು ನಮಗೆ ನೀಡಿದ್ದಾನೆ, ಅದಕ್ಕಾಗಿಯೇ ಈ ಸೃಷ್ಟಿಯನ್ನು ನಿರ್ಮಿಸಿದ್ದಾನೆ. ಈ ಸೃಷ್ಟಿಯಲ್ಲಿರುವ ಭಗವಂತನ ಚೈತನ್ಯವನ್ನು ಅನುಭವಿಸಿ ಜೀವನವನ್ನು ಸಾರ್ಥಕಗೊಳಿಸಲು, ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಕಲಿತು, ಅದರಂತೆ ಕರ್ಮಗಳನ್ನು ಮಾಡಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಶ್ರೀಮದ್ಭಾಗವತ, ವೇದಗಳು, ಶ್ರೀಮದ್ಭಗವದ್ಗೀತೆ, ಉಪನಿಷತ್ತು ಇತ್ಯಾದಿ ಧರ್ಮಗ್ರಂಥಗಳಲ್ಲಿ ಅನೇಕ ಶ್ಲೋಕಗಳಿವೆ. ಅವುಗಳಲ್ಲಿ ಕೆಲವನ್ನು ಮುಂದೆ ಕೊಡಲಾಗಿದೆ.

ಅನೇಕ ಜನ್ಮಗಳ ನಂತರ ಮನುಷ್ಯ ದೇಹ ದೊರೆತಿದ್ದು, ಜೀವಂತ ಇರುವವರೆಗೆ ಈಶ್ವರನನ್ನು ಪಡೆಯಲು ಸಾಧ್ಯವಿದೆ

ಲಬ್ಧ್ವಾ ಸುದುರ್ಲಭಮಿದಂ ಬಹುಸಮ್ಭವಾನ್ತೇ ಮಾನುಷ್ಯಮರ್ಥದಮನಿತ್ಯಮಪೀಹ ಧೀರಃ ।
ತೂರ್ಣಂ ಯತೇತ ನ ಪತೇದನುಮೃತ್ಯು ಯಾವನ್ನಿಃಶ್ರೇಯಸಾಯ ವಿಷಯಃ ಖಲು ಸರ್ವತಃ ಸ್ಯಾತ್ ।। – ಶ್ರೀಮದ್ಭಾಗವತ, ಸ್ಕಂದ ೧೧, ಅಧ್ಯಾಯ ೯, ಶ್ಲೋಕ ೨೯

ಭಾವಾರ್ಥ : ಅತ್ಯಂತ ಅಪರೂಪವಾಗಿರುವ ಈ ಮನುಷ್ಯ ದೇಹವು ಅನೇಕ ಜನ್ಮಗಳ ನಂತರ ದೊರೆತಿದೆ. ಬದುಕಿರುವವರೆಗೆ ಈ ಶರೀರದಿಂದಲೇ ಪರಮ ಪುರುಷಾರ್ಥವನ್ನು ಸಾಧಿಸಬಹುದು, ಇದು ಅಷ್ಟು ಶ್ರೇಷ್ಠವಾಗಿದೆ. ಮೂಲತಃ ‘ಈ ದೇಹವು ನಶ್ವರವಾಗಿದೆ’ ಎಂಬುದನ್ನು ತಿಳಿದುಕೊಂಡು, ಮೃತ್ಯುವಿನ ದವಡೆಗೆ ಸಿಲುಕುವ ಮುನ್ನವೇ, ಬುದ್ಧಿವಂತನು ತಕ್ಷಣ ತನ್ನ ಪರಮ ಕಲ್ಯಾಣಕ್ಕಾಗಿ ಪ್ರಯತ್ನಿಸಬೇಕು, ಏಕೆಂದರೆ ವಿಷಯಭೋಗಗಳು ಎಲ್ಲ ಯೋನಿಗಳಲ್ಲಿಯೂ ಪ್ರಾಪ್ತವಾಗಲಿವೆ.

ಮನುಷ್ಯಜನ್ಮದಲ್ಲಿಯೇ ಪರಮತತ್ತ್ವವನ್ನು ತಿಳಿದುಕೊಳ್ಳುವ ಜಿಜ್ಞಾಸೆಯನ್ನು ಇಟ್ಟುಕೊಳ್ಳಬೇಕು

ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾಽಽತ್ಮನಃ ।
ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ ಸರ್ವತ್ರ ಸರ್ವದಾ ।। – ಶ್ರೀಮದ್ಭಾಗವತ, ಸ್ಕಂದ ೨, ಅಧ್ಯಾಯ ೯, ಶ್ಲೋಕ ೩೫

ಅರ್ಥ : ಯಾವುದು ಎಲ್ಲೆಡೆ, ಎಲ್ಲಾ ಕಾಲದಲ್ಲಿಯೂ ಇರುವುದೋ, ಅದನ್ನೇ (ಅಂದರೆ ಆ ಆತ್ಮತತ್ತ್ವವನ್ನೇ) ಜಿಜ್ಞಾಸು ಮನುಷ್ಯನು ಅನ್ವಯ-ವ್ಯತಿರೇಕ (ಒಟ್ಟಿರುವಿಕೆ ಮತ್ತು ಬೇರ್ಪಡುವಿಕೆ) ದಿಂದ ಪರೀಕ್ಷಿಸಿ ಅರಿಯಬೇಕು.

‘ಮನುಷ್ಯ ಜನ್ಮದಲ್ಲಿಯೇ ಪರಮತತ್ತ್ವವನ್ನು ತಿಳಿದುಕೊಳ್ಳುವ ಜಿಜ್ಞಾಸೆಯನ್ನು ಬೆಳೆಸಬೇಕು.’ – ‘ಸಾಪ್ತಾಹಿಕ ಪ್ರಾಜಕ್ತಾ’, ಧರ್ಮಯಜ್ಞ, ಮಾರ್ಚ್ ೨೦೧೮, ಸ್ವಾನುಭವ

ಗುರುಗಳ ಮಾಧ್ಯಮದಿಂದ ಪರಮೇಶ್ವರನನ್ನು ತಿಳಿದುಕೊಳ್ಳುವುದು, ಅವನನ್ನು ಪಡೆಯುವುದು ಇದುವೇ ಜೀವನದ ಗುರಿಯಾಗಿದೆ

ಇದನ್ನರಿತು, ಅದರಂತೆ ಸಾಧನೆಯನ್ನು ಮಾಡಿದರೆ, ಜೀವನದಲ್ಲಿ ‘ಈಶ್ವರಪ್ರಾಪ್ತಿ’ ಎಂಬ ಧ್ಯೇಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ |
ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ಕವಯೋ ವದನ್ತಿ || – ಕಠೋಪನಿಷತ್, ಅಧ್ಯಾಯ ೧, ವಲ್ಲಿ ೩, ವಾಕ್ಯ ೧೪

ಅರ್ಥ : ಎದ್ದೇಳಿ, ಎಚ್ಚರಗೊಳ್ಳಿ, ಶ್ರೇಷ್ಠ ಪುರುಷರ (ಗುರುಗಳ) ಸತ್ಸಂಗದಿಂದ ಪರಮಾತ್ಮನ ಸ್ವರೂಪವನ್ನು ತಿಳಿದುಕೊಳ್ಳಿ. ಏಕೆಂದರೆ ‘ಪರಮೇಶ್ವರನನ್ನು ತಿಳಿದುಕೊಳ್ಳುವ’ ಈ ಮಾರ್ಗವು ಹರಿತವಾದ ಚೂರಿಯ ಅಂಚಿನ ಮೇಲೆ ನಡೆಯುವಷ್ಟು ಕಠಿಣವಾಗಿದೆ ಎಂದು ಬುದ್ಧಿವಂತರು ಹೇಳುತ್ತಾರೆ.

ವಿವರಣೆ : ಈ ಶ್ಲೋಕದಿಂದ ಪರಮೇಶ್ವರನನ್ನು ತಿಳಿದುಕೊಳ್ಳುವುದು ಮತ್ತು ಅವನನ್ನು ಪಡೆದುಕೊಳ್ಳುವುದು, ಇದುವೇ ಜೀವನದ ಗುರಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕಾಗಿ ಗುರುಗಳ ಮೂಲಕ ಇದನ್ನು ಅರಿತು, ಅವರ ಮಾರ್ಗದರ್ಶನದಂತೆ ಸಾಧನೆಯನ್ನು ಮಾಡಿದರೆ ‘ಈಶ್ವರಪ್ರಾಪ್ತಿ’ಯ ಧ್ಯೇಯವನ್ನು ಸಾಧಿಸಲು ಸಾಧ್ಯವಿದೆ.

ಯಮರಾಜನು ನಚಿಕೇತನಿಗೆ ‘ಸಚ್ಚಿದಾನಂದಘನ ಪರಮಾತ್ಮನನ್ನು ಪ್ರಾಪ್ತಮಾಡಿಕೊಳ್ಳುವುದೇ ಮಾನವನ ಧ್ಯೇಯವಾಗಿದೆ’ ಎಂದು ಹೇಳುವುದು

ಏತಚ್ಛ್ರುತ್ವಾ ಸಮ್ಪರಿಗೃಹ್ಯ ಮರ್ತ್ಯಃ ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ |
ಸ ಮೋದತೇ ಮೋದನೀಯಂ ಹಿ ಲಬ್ಧ್ವಾ ವಿವೃತಂ ಸದ್ಮ ನಚಿಕೇತಸಂ ಮನ್ಯೇ ।। – ಕಠೋಪನಿಷತ್, ಅಧ್ಯಾಯ ೧, ವಲ್ಲಿ ೨, ವಾಕ್ಯ ೧೩

ಅರ್ಥ : ಮರ್ತ್ಯನಾದ ಮನುಷ್ಯನು ಈ ಧರ್ಮ-ತತ್ತ್ವವನ್ನು ಕೇಳಿ, ಅದನ್ನು ಯೋಗ್ಯ ರೀತಿಯಲ್ಲಿ ಗ್ರಹಿಸಿ, ವಿಚಾರಪೂರ್ವಕವಾಗಿ ಈ ಸೂಕ್ಷ್ಮ ಆತ್ಮತತ್ತ್ವವನ್ನು ತಿಳಿದುಕೊಂಡಾಗ, ಅವನು ಆನಂದ ಸ್ವರೂಪನಾದ ಪರಮಾತ್ಮನನ್ನು ಪಡೆದು ಆನಂದಮಗ್ನನಾಗುತ್ತಾನೆ. ಅದಕ್ಕಾಗಿಯೇ ಹೇ ನಚಿಕೇತಾ, ನಿನಗಾಗಿ ಪರಮಧಾಮದ ಬಾಗಿಲು ತೆರೆದಿದೆ ಎಂದು ನಾನು ನಂಬುತ್ತೇನೆ.

ವಿವರಣೆ : ನಚಿಕೇತನು (ಜಗತ್ತಿನ ಮೊದಲ ಜಿಜ್ಞಾಸು) ಯಮರಾಜನ ಬಳಿ ಹೋದಾಗ, ಅವನು ಸಹ ನಚಿಕೇತನಿಗೆ ‘ಸಚ್ಚಿದಾನಂದಘನ (ಟಿಪ್ಪಣಿ) ಪರಮಾತ್ಮನನ್ನು ಪಡೆಯುವುದೇ ಮಾನವನ ಗುರಿಯಾಗಿದೆ’, ಎಂದು ಹೇಳುತ್ತಾನೆ, ಏಕೆಂದರೆ ಪರಮೇಶ್ವರನಿದ್ದಲ್ಲಿ ಆನಂದವಿದೆ. ಅವನು ಆನಂದಮಯನಾಗಿದ್ದಾನೆ. ಹಾಗೆಯೇ, ಪ್ರತಿಯೊಂದು ಜೀವದಲ್ಲಿಯೂ ಅವನ ಅಸ್ತಿತ್ವವಿದೆ; ಅದಕ್ಕಾಗಿಯೇ ಮಾನವನಿಗೆ ‘ಆನಂದವನ್ನು ಪಡೆಯಬೇಕು’ ಎಂದು ಅನಿಸುತ್ತದೆ, ಆದರೆ ಭ್ರಮೆಯಿಂದ ಪ್ರತಿಯೊಬ್ಬ ಮನುಷ್ಯನಿಗೂ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಗುರುಗಳ ಆವಶ್ಯಕತೆ ಇದೆ. ಅವರೇ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ.

ಟಿಪ್ಪಣಿ – ಸಚ್ಚಿದಾನಂದಘನ : ೧. ಸತ್ ಅಂದರೆ ಸತ್ಯ, ಚಿತ್ ಅಂದರೆ ಚೈತನ್ಯ ಮತ್ತು ಘನ ಅಂದರೆ ವ್ಯಾಪಿಸಿರುವ ಅಥವಾ ವ್ಯಾಪ್ತ. ಸಚ್ಚಿದಾನಂದಘನ ಅಂದರೆ ಯಾವುದು ಸತ್ಯ, ಚೈತನ್ಯ ಮತ್ತು ಆನಂದದಿಂದ ವ್ಯಾಪಿಸಿದೆಯೋ ಅದು, ಅಂದರೆ ಈಶ್ವರ.

೨. ಸಂಸ್ಕೃತದಲ್ಲಿ ‘ಚಿತ್‌’ಗೆ ಇನ್ನೊಂದು ಅರ್ಥವಿದೆ. ಅದೆಂದರೆ ‘ಜ್ಞಾನ’ ಮತ್ತು ‘ಘನ’ ಶಬ್ದದ ಇನ್ನೊಂದು ಅರ್ಥವಿದೆ. ಅದೆಂದರೆ ‘ಮೇಘ’ ಅಥವಾ ‘ಮೋಡ’. ಈ ಅರ್ಥದಿಂದ ‘ಸಚ್ಚಿದಾನಂದಘನ’ ಎಂದರೆ ಸತ್ಯ, ಜ್ಞಾನ ಮತ್ತು ಆನಂದದ ಮೇಘವಾಗಿರುವವನು. ಈ ಅರ್ಥವನ್ನು ತೆಗೆದುಕೊಂಡರೆ, ಈ ವಿಶೇಷಣವನ್ನು ಯಾರಾದರೊಬ್ಬ ಸತ್ಪುರುಷರಿಗೆ ಬಳಸಬಹುದು.

ಸಾಧನೆಯನ್ನು ಮಾಡಿ ಪರಮಾತ್ಮನಲ್ಲಿ ಲೀನವಾಗಲು ಮನುಷ್ಯನ ಜನ್ಮವಾಗಿರುವುದು

ಮನಸಸ್ಪತ ಇಮಂ ನೋ ದಿವಿ ದೇವೇಷು ಯಜ್ಞಮ್ ।
ಸ್ವಾಹಾ ದಿವಿ ಸ್ವಾಹಾ ಪೃಥಿವ್ಯಾಂ ಸ್ವಾಹಾನ್ತರಿಕ್ಷೇ ಸ್ವಾಹಾ ವಾತೇ ಧಾಂ ಸ್ವಾಹಾ ।। – ಅಥರ್ವವೇದ, ಕಾಂಡ ೭, ಸೂಕ್ತ ೯೭, ಋಚಾ ೮

ಅರ್ಥ : ಹೇ ಮನನಶೀಲ ಆತ್ಮ ಮತ್ತು ಚಿತ್ತದ ಒಡೆಯನಾದ ಪರಮಾತ್ಮನೇ, ನಾನು ಭಗವಂತನಿಗೆ, ಅಂದರೆ ಇಂದ್ರಿಯಗಣಗಳ ವ್ಯಾಪಕ ಯಜ್ಞಸ್ವರೂಪವಾದ ಆತ್ಮವನ್ನು ಮೋಕ್ಷ ಪದದಲ್ಲಿ ಅರ್ಪಿಸಿದ್ದೇನೆ. ಇದನ್ನು ಪರಮ ತೇಜೋಮಯನಾದ ಬ್ರಹ್ಮನಲ್ಲಿ ಒಳ್ಳೆಯ ರೀತಿಯಲ್ಲಿ ಅರ್ಪಿಸಿ ಅದರಲ್ಲಿ ಲೀನವಾಗಲಿ, ಆ ಸರ್ವಾಧಾರ ಮಹಾನ ಬ್ರಹ್ಮನಲ್ಲಿ ಆ ಆತ್ಮವು ತಾನಾಗಿಯೇ ಲೀನವಾಗಲಿ, ಸರ್ವಾಂತರ್ಯಾಮಿ, ಸರ್ವವ್ಯಾಪಿ ಪರಬ್ರಹ್ಮನಲ್ಲಿಯೂ ಅದು ಲೀನವಾಗಿ ಪ್ರಾಣರೂಪದ ಸರ್ವಾಧಾರನಾಗಿರುವ ಈಶ್ವರನಲ್ಲಿ ಆ ಆತ್ಮವು ಲೀನವಾಗಲಿ.

ಮೇಲಿನ ವಿವರಣೆಯಿಂದ, ‘ಮನುಷ್ಯನ ಜನ್ಮವು ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಗಾಗಿಯೇ ಆಗಿದೆ, ಹಾಗೆಯೇ ಈಶ್ವರನಿಂದ ನಿರ್ಮಿತ ಮಾನವ ಜೀವವು ಸಾಧನೆಯನ್ನು ಮಾಡಿ ಅವನಲ್ಲಿ ಲೀನವಾಗಲೆಂದೇ ಆಗಿದೆ’, ಎಂಬುದು ಸ್ಪಷ್ಟವಾಗುತ್ತದೆ.

ಯೋಗಿಯು ಈ ಜನ್ಮದಲ್ಲಿಯೇ ಎಲ್ಲ ಪಾಪಗಳಿಂದ ಮುಕ್ತನಾಗಿ ಪರಮ ಗತಿಯನ್ನು ಸಾಧಿಸುವನು

ಪ್ರಯತ್ನಾದ್ಯತಮಾನಸ್ತು ಯೋಗಿ ಸಂಶುದ್ಧಕಿಲ್ಬಿಷಃ |
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್‌ || – ಶ್ರೀಮದ್ಭಗವದ್ಗೀತೆ, ಅಧ್ಯಾಯ ೬, ಶ್ಲೋಕ ೪೫

ಅರ್ಥ : ಪ್ರಯತ್ನಪೂರ್ವಕ ಅಧ್ಯಯನ ಮಾಡುವ ಯೋಗಿಯು, ಹಿಂದಿನ ಅನೇಕ ಜನ್ಮಗಳ ಸಂಸ್ಕಾರಗಳ ಬಲದಲ್ಲಿ ಇದೇ ಜನ್ಮದಲ್ಲಿ ಸಂಪೂರ್ಣ ಸಿದ್ಧಿಯನ್ನು ಪಡೆದು, ಎಲ್ಲ ಪಾಪಗಳಿಂದ ಮುಕ್ತನಾಗಿ, ಕೂಡಲೇ ಪರಮ ಗತಿಯನ್ನು (ಮೋಕ್ಷ) ಸಾಧಿಸುತ್ತಾನೆ.

ಪರಮ ಪದವನ್ನು ಹೊಂದುವುದೇ ಜೀವನದ ಗುರಿ

ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬನ್ಧವಿನಿರ್ಮುಕ್ತಾಃ ಪದಂ ಗಚ್ಛನ್ತ್ಯನಾಮಯಮ್ ।। – ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೫೧

ಅರ್ಥ : ಬುದ್ಧಿವಂತರು (ಜ್ಞಾನಿಗಳು) ಕರ್ಮದಿಂದ ಉತ್ಪನ್ನವಾಗುವ ಫಲವನ್ನು ತ್ಯಜಿಸಿ, ಜನ್ಮರೂಪ (ಜನನ-ಮರಣ) ಬಂಧನದಿಂದ ಮುಕ್ತರಾಗಿ, ನಿರ್ವಿಕಾರ ‘ಪರಮ ಪದ’ವನ್ನು (ಮೋಕ್ಷ) ಹೊಂದುತ್ತಾರೆ. ಇದರಿಂದ ‘ಪರಮ ಪದವನ್ನು ಹೊಂದುವುದು’ ಜೀವನದ ಗುರಿಯಾಗಿದೆ, ಎಂಬುದು ಸ್ಪಷ್ಟವಾಗುತ್ತದೆ.

ಆತ್ಮನನ್ನು ಭಗವಂತನೊಂದಿಗೆ ಜೋಡಿಸಿದರೆ, ಅವನು ಭಗವತ್ಪರಾಯಣನಾಗಿ ಭಗವಂತನಿಗೇ ಪ್ರಾಪ್ತವಾಗುತ್ತಾನೆ

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ।। – ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೪

ಅರ್ಥ : (ಹೇ ಅರ್ಜುನಾ!) ನನ್ನ ಭಕ್ತನಾಗು. ನಿನ್ನ ಮನಸ್ಸನ್ನು ನನ್ನ ಮೇಲೆ ಕೇಂದ್ರೀಕರಿಸು. ನನ್ನ ಧ್ಯಾನ ಮಾಡು ಮತ್ತು ನನಗೆ ನಮಸ್ಕಾರ ಮಾಡು. ಈ ರೀತಿ ನಿನ್ನನ್ನು ನನಗೆ ಸಮರ್ಪಿಸಿ ನನ್ನ ಸ್ವಾಧೀನಪಡಿಸಿದರೆ ನೀನು ನಿಃಸಂದೇಹವಾಗಿ ನನ್ನನ್ನು ಪ್ರಾಪ್ತಮಾಡಿಕೊಳ್ಳುವೆ.

ಅ. ವಿವೇಚನೆ ಮತ್ತು ವಿಶ್ಲೇಷಣೆ

ಅ ೧. ಸ್ಥೂಲ ಶರೀರ ಮತ್ತು ಅವ್ಯಕ್ತ ಸೂಕ್ಷ್ಮಾತಿಸೂಕ್ಷ್ಮ ಆತ್ಮವನ್ನು ಜೋಡಿಸುವ ಮನಸ್ಸು ಕೂಡ ಸೂಕ್ಷ್ಮವಾಗಿದೆ : ಇಲ್ಲಿ ಭಗವಂತನೇ ಸ್ವತಃ ನಿಂತು, ‘ನನ್ನ (ಈಶ್ವರಪ್ರಾಪ್ತಿ) ಪ್ರಾಪ್ತಿಮಾಡಿಕೊಳ್ಳಲು ಸಾಧನೆ ಮಾಡು’, ಎಂದು ಹೇಳುತ್ತಾನೆ. ಇದಕ್ಕಾಗಿ ಭಗವಂತನು ದೇಹ ರಕ್ಷಣೆಗಾಗಿ ಬಾಹ್ಯಾಂಗಗಳಾದ ಪಂಚಕರ್ಮೇಂದ್ರಿಯಗಳು ಮತ್ತು ಪಂಚಜ್ಞಾನೇಂದ್ರಿಯಗಳನ್ನು ನೀಡಿದ್ದಾನೆ. ದೇಹದ ರಕ್ಷಣೆಗೆ ಆವಶ್ಯಕವಾಗಿರುವ ಕ್ಷಮತೆಯನ್ನು ಆ ಇಂದ್ರಿಯಗಳಿಗೆ ನೀಡಿದ್ದಾನೆ. ಅಂದರೆ, ಅವುಗಳ ಕಾರ್ಯ ಸೀಮಿತವಾಗಿದೆ. ಅದೇ ಒಳಗಿರುವ ಇಂದ್ರಿಯಗಳಾದ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ನಾಲ್ಕು ಇಂದ್ರಿಯಗಳಿಗೆ ಮಾಡಲು ಆಂತರಿಕ ಕಾರ್ಯಗಳನ್ನು ನೀಡಿದ್ದಾನೆ. ಮನಸ್ಸು ಈ ಎರಡನ್ನೂ ಜೋಡಿಸುತ್ತದೆ. ಮನಸ್ಸಿನ ಸಾಮರ್ಥ್ಯ ಎಲ್ಲಕ್ಕಿಂತ ಹೆಚ್ಚಿದೆ. ಮನಸ್ಸು ಸ್ಥೂಲ ದೇಹ ಮತ್ತು ಅವ್ಯಕ್ತ ಆತ್ಮನನ್ನು ಜೋಡಿಸುವುದರಿಂದ ಅದು ಸೂಕ್ಷ್ಮವಾಗಿದೆ, ಏಕೆಂದರೆ ಆತ್ಮವು ಸೂಕ್ಷ್ಮಾತೀಸೂಕ್ಷ್ಮವಾಗಿದೆ.

ಅ ೨. ಆತ್ಮದೊಂದಿಗೆ ಭಾವಪೂರ್ಣ ಅನುಸಂಧಾನ ಸಾಧಿಸಿ ಕರ್ಮಗಳನ್ನು ಮಾಡಿದರೆ ಮನುಷ್ಯನ ‘ಈಶ್ವರಪ್ರಾಪ್ತಿ’ ಎಂಬ ಧ್ಯೇಯವು ಸಾಧ್ಯವಾಗಿ ಅವನಿಗೆ ಆನಂದಪ್ರಾಪ್ತಿಯಾಗುವುದು : ಮನಸ್ಸು ಕೂಡ ಆತ್ಮ ಮತ್ತು ಶರೀರದೊಂದಿಗೆ ಜೋಡಿಸಲ್ಷಟ್ಟಿದೆ; ಉದಾಹರಣೆಗೆ, ಮನಸ್ಸು + ಕಿವಿ = ಕೇಳುವುದು, ಮನಸ್ಸು +ಕಣ್ಣು = ನೋಡುವುದು. ಒಂದು ವೇಳೆ ಒಬ್ಬನ ಮನಸ್ಸು ಆತ್ಮದೊಂದಿಗೆ ಜೋಡಿಸಲ್ಪಡದೇ, ಭೌತಿಕ ಸುಖಗಳ ಕಡೆಗೆ ತಿರುಗಿ ಬಾಹ್ಯ ಇಂದ್ರಿಯಗಳ ಮೂಲಕ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿದರೆ, ಅವನು ಮಾಯೆಯಲ್ಲಿ ಬದ್ಧನಾಗುತ್ತಾನೆ ಮತ್ತು ಆತ್ಮದಿಂದ ದೂರವಾಗುತ್ತಾನೆ. ಅದರಿಂದ ಮಾನವನ ‘ಈಶ್ವರಪ್ರಾಪ್ತಿ’ ಎಂಬ ಜೀವನದ ಧ್ಯೇಯವು ಅವನಿಗೆ ಪ್ರಾಪ್ತವಾಗುವುದಿಲ್ಲ. ಅವನು ಜೀವನದಲ್ಲಿ ಆನಂದ ಸಿಗದೇ ದುಃಖವನ್ನೇ ಅನುಭವಿಸಬೇಕಾಗುತ್ತದೆ. ಅದೇ ಕರ್ಮಗಳನ್ನು ಆತ್ಮದೊಂದಿಗೆ ಭಾವಪೂರ್ಣವಾಗಿ ಅನುಸಂಧಾನ ಸಾಧಿಸಿ ಮಾಡಿದರೆ, ‘ಈಶ್ವರಪ್ರಾಪ್ತಿ’ ಎಂಬ ಧ್ಯೇಯವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವನಿಗೆ ಆನಂದಪ್ರಾಪ್ತಿ ಆಗುತ್ತದೆ; ಅದಕ್ಕಾಗಿಯೇ ಪ್ರತಿಯೊಬ್ಬರಿಗೂ ‘ಆನಂದ ಸಿಗಬೇಕು’ ಎಂದು ಅನಿಸುತ್ತದೆ, ಅದರ ಕಾರಣ ಇಲ್ಲಿ ಸ್ಪಷ್ಟವಾಗುತ್ತದೆ.

ಅ ೩. ಮನಸ್ಸೇ ಮಾನವನ ಬಂಧನ ಮತ್ತು ಮೋಕ್ಷಕ್ಕೆ ಕಾರಣವಾಗಿರುವುದು : ಭಗವಂತನು ಹೇಳುತ್ತಾನೆ, ‘ಇದಕ್ಕಾಗಿ ಹೇ ಮಾನವ, ನಿನ್ನ ಮನಸ್ಸನ್ನು ನನ್ನ (ಆತ್ಮ ಸ್ವರೂಪದೊಂದಿಗೆ) ಅನುಸಂಧಾನದಲ್ಲಿರಿಸು. ನಾನು ನಿನ್ನ ದೇಹದ ಯಂತ್ರವನ್ನು ನಡೆಸುತ್ತಿರುವುದರಿಂದ, ನಾನೇ ಕರ್ತೃ, ತಾಯಿ, ತಂದೆ, ಗುರು, ಇತ್ಯಾದಿ ಎಲ್ಲವೂ ಆಗಿರುವುದರಿಂದ, ನೀನು ನನ್ನ ಭಕ್ತನಾಗು. ನನ್ನನ್ನು ಪೂಜಿಸು’. ಅಂದರೆ, ‘ಪ್ರತಿಯೊಂದು ಕರ್ಮವನ್ನು ಮಾಡುವಾಗ ಅದರಲ್ಲಿ ಈಶ್ವರನಿದ್ದಾನೆ’ ಎಂದು ಭಾವಿಸಿ ಭಾವಪೂರ್ಣವಾಗಿ ಪೂಜೆಯಂತೆ ಪೂಜ್ಯ (ಪವಿತ್ರ) ಭಾವದಿಂದ ಕರ್ಮಗಳನ್ನು ಮಾಡುವುದು! ನನಗೆ ಶರಣಾಗು, ಅಂದರೆ ಅಹಂರಹಿತನಾಗಿ ‘ಇದನ್ನು ನಾನು ಮಾಡಿಲ್ಲ’ (ಇದಂ ನ ಮಮ’) ಎಂಬ ಭಾವದಿಂದ ಎಲ್ಲವನ್ನೂ ಅರ್ಪಿಸುವುದು! ಹೀಗೆ ಮಾಡುವುದರಿಂದ ಸತತವಾಗಿ ಆತ್ಮಸಂಬಂಧ ಜೋಡಿಸಲ್ಪಟ್ಟು ನಿನ್ನ ಮೇಲಿರುವ ರಜ-ತಮದ ಆವರಣ, ಅಂದರೆ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾಗಿ ನಿನ್ನ ಚಿತ್ತವು ಶುದ್ಧವಾಗುತ್ತದೆ. ಅದರಿಂದ ಆತ್ಮಪ್ರಕಾಶವು ಪ್ರಕಟವಾಗಿ ನಿನಗೆ ಆನಂದ ಸಿಗುತ್ತದೆ ಮತ್ತು ಪರಮೇಶ್ವರನ ಪ್ರಾಪ್ತಿಯಾಗುತ್ತದೆ.’ ಅದಕ್ಕಾಗಿಯೇ ‘ಮನ ಏವ ಮನುಷ್ಯಾಣಾಂ ಕಾರಣಂ ಬನ್ಧಮೋಕ್ಷಯೋಃ ।’ ಅಂದರೆ ಮನಸ್ಸೇ ಮಾನವನ ಬಂಧನಕ್ಕೆ ಮತ್ತು ಮೋಕ್ಷಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮನುಷ್ಯನ ಜನ್ಮವು ಈಶ್ವರಪ್ರಾಪ್ತಿಗಾಗಿಯೇ ಇರುತ್ತದೆ. ಆ ದೃಷ್ಟಿಯಿಂದ ಶಿಷ್ಯರು ಗುರುಗಳಿಂದ ಕಲಿತಿದ್ದರೆ, ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ. ಸಾಧನೆಯ ಮೂಲಕ ಆತ್ಮಬಲವನ್ನು ಹೆಚ್ಚಿಸಿ ಮಾನವನು ಜೀವನದ ಅಂತಿಮ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಿದ್ದರೆ ಅವನ ಕಲ್ಯಾಣವಾಗಬಹುದಿತ್ತು. ವಾತಾವರಣದಲ್ಲಿ ಹೆಚ್ಚಿದ ರಜ-ತಮದ ಆವರಣ ಉಳಿಯುತ್ತಿರಲಿಲ್ಲ ಮತ್ತು ಮಾನವರ ಮನಸ್ಸು ವಿಕೃತವಾಗುತ್ತಿರಲಿಲ್ಲ

ಸಚ್ಚಿದಾನಂದಘನ ಬ್ರಹ್ಮನಲ್ಲಿ ಏಕರೂಪಗೊಳ್ಳಲು ಅರ್ಹನಾದ ಪುರುಷನ ಲಕ್ಷಣಗಳು

ಬುದ್ಧ್ಯಾ ವಿಶುದ್ಧ್ಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ।।

ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ ।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ।।

ಅಹಙ್ಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾನ್ತೋ ಬ್ರಹ್ಮಭೂಯಾಯ ಕಲ್ಪತೇ ।। – ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೮, ಶ್ಲೋಕ ೫೧-೫೩

ಅರ್ಥ : ನಿರ್ಮಲ ಬುದ್ಧಿಯುಳ್ಳ; ಹಗುರವಾದ, ಸಾತ್ತ್ವಿಕ ಮತ್ತು ನಿಯಮಿತ ಆಹಾರವನ್ನು ಸೇವಿಸುವ; ಶಬ್ದಾದಿ ವಿಷಯಗಳನ್ನು ತ್ಯಜಿಸಿ ಏಕಾಂತದಲ್ಲಿ ಶುದ್ಧ ಸ್ಥಳದಲ್ಲಿ ವಾಸಿಸುವ; ಸಾತ್ತ್ವಿಕ ಧಾರಣಾಶಕ್ತಿಯಿಂದ ಅಂತಃಕರಣ ಮತ್ತು ಇಂದ್ರಿಯಗಳನ್ನು ನಿಗ್ರಹಿಸುವ ಮೂಲಕ ಮನಸ್ಸು, ಮಾತು ಮತ್ತು ದೇಹವನ್ನು ನಿಯಂತ್ರಿಸುವ; ರಾಗ-ದ್ವೇಷವನ್ನು ಸಂಪೂರ್ಣ ತೊಡೆದು ಹಾಕಿ ದೃಢ ವೈರಾಗ್ಯವನ್ನು ಆಶ್ರಯಿಸುವ; ಅಹಂಕಾರ, ಬಲ, ಗರ್ವ, ಬಯಕೆ, ಕೋಪ, ಸಂಗ್ರಹ ಪ್ರವೃತ್ತಿಯನ್ನು ತ್ಯಜಿಸಿ, ಯಾವಾಗಲೂ ಧ್ಯಾನ ಯೋಗದಲ್ಲಿ ತಲ್ಲೀನನಾಗಿರುವ; ಮೋಹದಿಂದ ಮುಕ್ತ ಮತ್ತು ಶಾಂತಿಯುಕ್ತನಾದ ಪುರುಷನು ‘ಸಚ್ಚಿದಾನಂದಘನ ಬ್ರಹ್ಮನಲ್ಲಿ’ ವಿಲೀನಗೊಳ್ಳಲು ಅರ್ಹನಾಗಿರುತ್ತಾನೆ.

ಅ. ವಿವೇಚನೆ ಮತ್ತು ವಿಶ್ಲೇಷಣೆ

ಅ ೧. ಸಾಧನೆಯನ್ನು ಮಾಡಿದ ನಂತರ ಗುರುಗಳ ಕೃಪೆಯಿಂದ ಬುದ್ಧಿಯು ‘ಪ್ರಜ್ಞೆ’ಯಲ್ಲಿ ರೂಪಾಂತರಗೊಂಡು ‘ಮೇಧಾ’ ಅಂದರೆ ಈಶ್ವರೇಚ್ಛೆಯು ಸಿದ್ಧವಾಗಿ ಮನುಷ್ಯನು ‘ಸಚ್ಚಿದಾನಂದಘನ ಬ್ರಹ್ಮ’ನತ್ತ ಹೋಗುವುದು : ಯಾವಾಗ ಮನಸ್ಸು ವಿಕಲ್ಪರಹಿತವಾಗಿ ಕಾರ್ಯ ಮಾಡುತ್ತದೆಯೋ, ಆಗ, ಬುದ್ಧಿಯು ಶುದ್ಧವಾಗಿ ‘ವಿವೇಕ’ (ತಿಳುವಳಿಕೆ) ನಿರ್ಮಾಣವಾಗುತ್ತದೆ. ಸಾಧನೆಯ ಮೂಲಕ ಗುರುಗಳ ಕೃಪೆಯಿಂದ ಮುಂದೆ ಬುದ್ಧಿಯು ಪ್ರಜ್ಞೆಯಾಗಿ ‘ಮೇಧಾ’ ಸಿದ್ಧಿಯಾಗುತ್ತದೆ. ‘ಮೇಧಾ’ ಅಂದರೆ ಈಶ್ವರೇಚ್ಛೆಯೇ ಆಗಿರುತ್ತದೆ. ಮನುಷ್ಯನು ಈ ರೀತಿ ಈಶ್ವರೇಚ್ಛೆಗನುಸಾರ ವರ್ತಿಸಲು ಪ್ರಾರಂಭಿಸಿದಾಗ ಮತ್ತು ಹಗುರ, ಸಾತ್ತ್ವಿಕ ಮತ್ತು ನಿಯಮಿತ ಆಹಾರವನ್ನು ಸೇವಿಸಿದಾಗ, ಹಾಗೆಯೇ ಶಬ್ದಾದಿ ವಿಷಯಗಳನ್ನು ತ್ಯಜಿಸಿದಾಗ, ಅವನು ಏಕಾಂತದಲ್ಲಿ ಇರತೊಡಗಿದಾಗ ಅವನ ಸಚ್ಚಿದಾನಂದಘನ ಬ್ರಹ್ಮನ ಕಡೆಗೆ ಪ್ರಯಾಣ ಆರಂಭವಾಗುತ್ತದೆ. ಅಂತಹ ಅವಸ್ಥೆ ಅವನಿಗೆ ಪ್ರಾಪ್ತವಾಗುತ್ತದೆ.

ಅ ೨. ಮಾಯೆಯ ಅಂತ್ಯ ಅಂದರೆ ಬ್ರಹ್ಮಸ್ವರೂಪದಲ್ಲಿ ಲೀನವಾಗುವುದು ಮತ್ತು ಇದುವೇ ಈಶ್ವರಪ್ರಾಪ್ತಿಯಾಗಿರುವುದು : ಏಕಾಂತ ಅಂದರೆ ಏಕ + ಅಂತ. ಶೂನ್ಯದಿಂದ ಬೇರ್ಪಟ್ಟುದನ್ನು ‘ಒಂದು’ (ಏಕ) ಎಂದು ಕರೆಯುತ್ತಾರೆ (ಏಕನಾಥಿ ಭಾಗವತ). ಇಲ್ಲಿ ‘ಶೂನ್ಯ’ ಎಂದರೆ ‘ಬ್ರಹ್ಮ’ ಮತ್ತು ‘ಬೇರ್ಪಡುವಿಕೆ’ ಎಂದರೆ ‘ಮಾಯೆ’. ಮಾಯೆಯು ಕಾರ್ಯಕಾರಣ ಭಾವವನ್ನು ತೋರಿಸುತ್ತದೆ. ಇದರ ಮೂಲಕ ಸಾಧನೆ ಮಾಡುವಾಗ ಯಾವಾಗಲೂ ಏಕಾಗ್ರತೆಯಿಂದ (ಏಕ + ಅಗ್ರ) ಯಾವಾಗಲೂ ಬ್ರಹ್ಮನತ್ತ, ಅಂದರೆ ಶೂನ್ಯದತ್ತ ಗಮನವಿಡಬೇಕು. ಹೀಗೆ ಮಾಡಿದ ಕಾರ್ಯವನ್ನು ಸಹ ದೇವರಿಗೆ ಅರ್ಪಿಸುವುದು ಅಂದರೆ ‘ಮಾಯೆಯನ್ನು ಅಂತ್ಯಗೊಳಿಸುವುದು’, ಎಂದಾಗಿದೆ. ಹೀಗಾದಾಗ ಅವನು ಬ್ರಹ್ಮ ಸ್ವರೂಪದಲ್ಲಿ ಲೀನನಾಗುತ್ತಾನೆ. ಇದೇ ಈಶ್ವರಪ್ರಾಪ್ತಿಯಾಗಿದೆ! ಏಕೆಂದರೆ ಸಮಸ್ತ ಸೃಷ್ಟಿಯು ಚೈತನ್ಯದ ಮೂಲಕವೇ ಆಗಿರುವುದರಿಂದ ಚೈತನ್ಯವಿಲ್ಲದೇ ಏನೂ ಇಲ್ಲ. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದಾಗಲೇ ಇದು ಅನುಭವಕ್ಕೆ ಬರುತ್ತದೆ.

ಧರ್ಮಗ್ರಂಥಗಳಲ್ಲಿ ನೀಡಿರುವ ಈ ಉದಾಹರಣೆಗಳಿಂದ ಮನುಷ್ಯನ ಜನ್ಮವು ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಮಾಡಿಕೊಳ್ಳಲೆಂದೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿದ ‘ಗುರುಕೃಪಾಯೋಗಾ’ನುಸಾರ ಸಾಧನೆಯ ಮಾಧ್ಯಮದಿಂದ ಅವರು ಇದನ್ನೇ ಹೇಳಲು ಬಯಸುತ್ತಾರೆ. ಈ ಮಾರ್ಗದಿಂದ ಮಾಡಿದ ಸಾಧನೆಯಿಂದ, ಶೀಘ್ರವಾಗಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಬಹುದು.

– (ಪರಾತ್ಪರ ಗುರು) ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ, ಪನವೇಲ. (ಎಪ್ರಿಲ್‌ ೨೦೧೮)

Leave a Comment