ಭಕ್ತಿ-ಭಾವ ಹೆಚ್ಚಿಸಲು ನವವಿಧ ಭಕ್ತಿ

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ ।
ಅರ್ಚನಂ ವನ್ದನಂ ದಾಸ್ಯಂ ಸಖ್ಯಮ್ ಆತ್ಮನಿವೇದನಮ್ ॥

ಅರ್ಥ : ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ ಇವು ಭಕ್ತಿಯ ೯ ಪ್ರಕಾರಗಳಾಗಿವೆ.

ಶ್ರವಣ

ಭಗವಂತನನಲ್ಲಿರುವ ಗುಣಗಳನ್ನೂ, ಯಶಸ್ಸನ್ನೂ, ಮಹಾತ್ಮೆಯನ್ನೂ ಶ್ರದ್ಧಾಯುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳುವುದೆಂದರೆ ಶ್ರವಣಭಕ್ತಿ.

ಶಿಷ್ಯನಿಗೆ – ಗುರುಗಳು ಹೇಳುವುದನ್ನು ಕೇಳಿಸಿಕೊಳ್ಳುವುದು ಶ್ರವಣಭಕ್ತಿ.

ಕೀರ್ತನೆ

ಭಗವಂತನ ಗುಣಗಳನ್ನು ಹಾಡಿ ಹೊಗಳುವುದೆಂದರೆ ಕೀರ್ತನಭಕ್ತಿ.

ಶಿಷ್ಯನಿಗೆ – ಪ್ರಸಂಗಗಳು ಬಂದಾಗಲೆಲ್ಲ ಗುರುಗಳಿಂದ ಪಡೆದ ಜ್ಞಾನವನ್ನು ಎಲ್ಲರಿಗೂ ಹೇಳುವುದು ಹಾಗೂ ಅವರನ್ನು ಗುರುಗಳಿಗೆ ಅಪೇಕ್ಷಿತವಾಗಿರುವಂತಹ ಕೃತಿಯನ್ನು ಮಾಡಲು ಉದ್ಯುಕ್ತರನ್ನಾಗಿಸುವುದು ಶ್ರವಣಭಕ್ತಿ.

ಸ್ಮರಣೆ

ಭಗವಂತನ ನಾಮ-ಗುಣ-ಲೀಲೆಗಳನ್ನು ಸದಾ ಧ್ಯಾನಿಸುವುದು ಹಾಗೂ ಅದರಲ್ಲಿಯೇ ಮಗ್ನರಾಗಿರುವುದು ಎಂದರೆ ಸ್ಮರಣ ಭಕ್ತಿ.

ಶಿಷ್ಯನಿಗೆ – ಗುರುಗಳು ಅಥವಾ ಈಶ್ವರನ ಸ್ಥೂಲ ರೂಪವನ್ನು (ಮೂರ್ತಿ/ಚಿತ್ರ) ಮತ್ತು ನಾಮಜಪದ ಮೂಲಕ ಸೂಕ್ಷ್ಮ ರೂಪವನ್ನು ಸತತ ಸ್ಮರಿಸುವುದೇ ಸ್ಮರಣ ಭಕ್ತಿ.

ಪಾದಸೇವನೆ

ಭಗವಂತನ ಚರಣಕಮಲಗಳ ಪ್ರತ್ಯಕ್ಷ ಸೇವೆ ಎಂದರೆ ಪಾದ ಸೇವನ ಭಕ್ತಿ.

ಶಿಷ್ಯನಿಗೆ – ಗುರುಗಳ ಸ್ಥೂಲ ದೇಹಕ್ಕಿಂತ ಸೂಕ್ಷ್ಮ ಅರ್ಥಾತ್ ಗುರುತತ್ತ್ವದ ಸೇವೆ ಮಾಡುವ ಶಿಷ್ಯನು ಗುರುಗಳಿಗೆ ಹೆಚ್ಚು ಪ್ರಿಯನಾಗಿರುತ್ತಾನೆ. ಗುರು ಕಾರ್ಯವನ್ನು ಉತ್ತಮವಾಗಿ ಮಾಡುವುದೇ ಚರಣಸೇವೆ.

ಅರ್ಚನೆ

ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವುದೆಂದರೆ ಅರ್ಚನ ಭಕ್ತಿ.

ಶಿಷ್ಯನಿಗೆ – ಮನಸ್ಸಿನ ಆಸನದ ಮೇಲೆ ಗುರುಗಳ ಮೂರ್ತಿಯನ್ನು ಸ್ಥಾಪಿಸುವುದು ಹಾಗೂ ಗುರುಗಳ ಮಾನಸಪೂಜೆಯನ್ನು ಮಾಡುವುದೇ ಅರ್ಚನಭಕ್ತಿ.

ವಂದನೆ

ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಸ್ವೀಕರಿಸಿ ಹೃದಯದಲ್ಲಿ ಆತನ ಧ್ಯಾನ ಮಾಡುವುದೆಂದರೆ ವಂದನಭಕ್ತಿ. ತನ್ನ ಮೊರೆ ಈಶ್ವರನವರೆಗೆ ತಲುಪಬೇಕೆಂದು ಮಾಡಲಾಗುವ ಭಾವಪೂರ್ಣ ಪ್ರಾರ್ಥನೆಯು ಈ ವಿಧದಲ್ಲಿಯೇ ಬರುತ್ತದೆ.

ದಾಸ್ಯ

ಭಗವಂತನು ನನ್ನ ತಂದೆ-ತಾಯಿ ಹಾಗೂ ಸರ್ವಸ್ವ ಮತ್ತು ನಾನು ಆತನ ಪುತ್ರ, ಸೇವಕನಾಗಿದ್ದೇನೆ ಎಂಬ ಭಾವನೆಯಿಂದ ಭಕ್ತಿ ಮಾಡುವುದನ್ನು ದಾಸ್ಯ ಭಕ್ತಿ ಎನ್ನುತ್ತಾರೆ. ಮಾರುತಿಯು ದಾಸ್ಯ ಭಕ್ತಿಯ ಉತ್ತಮ ಉದಾಹರಣೆ.

ಸಖ್ಯ

ಭಗವಂತನು ನನ್ನ ಸಖನು (ಮಿತ್ರ) ಅಥವಾ ಬಂಧು ಆಗಿದ್ದು ನನ್ನ ಸುಖ-ದುಃಖಗಳಲ್ಲಿ ಸಹಭಾಗಿಯಾಗಿದ್ದಾನೆ ಎನ್ನುವ ಭಾವನೆಯಿಂದ ಭಕ್ತಿ ಮಾಡುವುದನ್ನು ಸಖ್ಯಭಕ್ತಿ ಎನ್ನುತ್ತಾರೆ. ಶ್ರೀಕೃಷ್ಣನ ಮೇಲೆ ಅರ್ಜುನನಿಗಿದ್ದ ಭಕ್ತಿಯು ಸಖ್ಯಭಕ್ತಿಯ ಅನುಪಮ ಉದಾಹರಣೆಯಾಗಿದೆ.

ಆತ್ಮನಿವೇದನೆ

ಎಲ್ಲವನ್ನೂ ಭಗವಂತನಲ್ಲಿ ಮುಕ್ತವಾಗಿ ಮಂಡಿಸುವುದು ಹಾಗೂ ತನ್ನ ಎಲ್ಲ ಭಾರವನ್ನೂ ಭಗವಂತನಿಗೆ ಒಪ್ಪಿಸುವುದೇ ಆತ್ಮನಿವೇದನಭಕ್ತಿ.

ಶಿಷ್ಯನಿಗೆ – ತಾನು ಮಾಡುವ ಎಲ್ಲ ಕೃತಿಗಳನ್ನೂ, ಸಾಧನೆಯಲ್ಲಿ ಬರುವ ಅಡಚಣೆಗಳನ್ನೂ, ತನ್ನ ಮನಸ್ಸಿನಲ್ಲಿ ಬರುವ ವಿಕಲ್ಪಗಳನ್ನೂ ಗುರುಗಳಿಗೆ ಹೇಳಿಕೊಳ್ಳಬೇಕು.

1 thought on “ಭಕ್ತಿ-ಭಾವ ಹೆಚ್ಚಿಸಲು ನವವಿಧ ಭಕ್ತಿ”

Leave a Comment