ಸಾಧನೆ ಮತ್ತು ಧರ್ಮಾಚರಣೆ ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ವಟಸಾವಿತ್ರಿ ವ್ರತವನ್ನಾಚರಿಸಿ!

ಭಗಿನಿಯರೇ, ಪತಿವ್ರತೆ ಸಾವಿತ್ರಿಯನ್ನು ಆದರ್ಶವಾಗಿಟ್ಟುಕೊಂಡ ಸಾಧನೆ ಮತ್ತು ಧರ್ಮಾಚರಣೆ ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ವಟಸಾವಿತ್ರಿ ವ್ರತವನ್ನಾಚರಿಸಿ!

ಸೌ. ಸಮೃದ್ಧಿ ಸಂತೋಷ ಗರುಡ

ಜ್ಯೇಷ್ಠ ಮಾಸದ (ತಿಂಗಳಿನ) ಹುಣ್ಣಿಮೆಯ ದಿನವನ್ನು ‘ವಟಪೂರ್ಣಿಮೆ’ (ವಟಸಾವಿತ್ರಿ ವ್ರತ) ಎಂದು ಆಚರಿಸಲಾಗುತ್ತದೆ. ‘ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿಯ ಅನುಬಂಧವನ್ನು ಬಲಪಡಿಸುವ ಮೂಲಕ ಜೀವಗಳಿಗೆ ಆತ್ಮಜ್ಞಾನವನ್ನು ಪ್ರದಾನಿಸುವುದೇ’ ವಟಸಾವಿತ್ರಿ ವ್ರತದ ಉದ್ದೇಶ. ಗಂಡನ ಪ್ರಾಣವನ್ನು ಮರಳಿ ಪಡೆಯಲು ಸಾವಿತ್ರಿ ಮೂರು ದಿನಗಳ ಕಾಲ ಬ್ರಹ್ಮನನ್ನು ಪೂಜಿಸಿ, ನಂತರ ತನ್ನ ಭಕ್ತಿಯಿಂದ ಯಮದೇವನ ಮನಗೆದ್ದು ಗಂಡನ ಪ್ರಾಣವನ್ನು ಮರಳಿ ಪಡೆದಳು.

ಆಪತ್ಕಾಲದ ವಟಪೂರ್ಣಿಮೆ (ಆಲದ ಮರದ ಪೂಜೆ) ಹೇಗೆ ಆಚರಿಸಬೇಕು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

ಸಾವಿತ್ರಿಯ ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ. ಸಾವಿತ್ರಿಯ ಕಥೆಯನ್ನು ಅಜ್ಞಾತವಾಸದಲ್ಲಿದ್ದ ಪಾಂಡವರಿಗೆ ಹೇಳಿದ್ದು ಮಾರ್ಕಂಡೇಯ ಋಷಿಗಳು.

ಮಾರ್ಕಂಡೇಯ ಋಷಿಗಳು ಹೇಳಿದ ಕಥೆ

ಅ. ಸಾವಿತ್ರಿಯ ಪಾತಿವ್ರತ್ಯದ ತೇಜದಿಂದ ಯಮದೂತರು ಹೆದರುವುದು, ಸತ್ಯವಾನನ ಪ್ರಾಣ ಹರಣಕ್ಕೆ ಸಾಕ್ಷಾತ ಯಮ ಬರುವುದು 

ಸತ್ಯವಾನನ ಜೀವನದ ಪಯಣ ಕೊನೆಗೊಂಡಾಗ, ಅವನ ಪ್ರಾಣವನ್ನು ಕೊಂಡೊಯ್ಯಲು ಯಮದೂತರು ಅಲ್ಲಿಗೆ ಬಂದರು. ಆದರೆ ಆ ಸಮಯದಲ್ಲಿ ಸತ್ಯವಾನನು ಸಾವಿತ್ರಿಯ ಮಡಿಲಲ್ಲಿ ಮಲಗಿದ್ದನು. ಯಮದೂತರಿಗೋ, ಸಾವಿತ್ರಿಯ ಪಾತಿವ್ರತ್ಯದ ತೇಜದ ಮುಂದೆ ನಿಲ್ಲುವುದು ಸಹ ಕಷ್ಟಕರವಾಗಿತ್ತು. ಆದ್ದರಿಂದ ಸಾಕ್ಷಾತ ಯಮದೇವನೇ ಸತ್ಯವಾನನ ಪ್ರಾಣ ಹರಣಕ್ಕೆ ಬರಬೇಕಾಯಿತು. ಯಮನು ತನ್ನ ಸಾಮರ್ಥ್ಯದಿಂದ ಸತ್ಯವಾನನ ಜೀವವನ್ನು ಅವನ ದೇಹದಿಂದ ಹೊರತೆಗೆದನು.

ಆ. ಸತ್ಯವಾನನ ಆತ್ಮಕ್ಕೆ ಮುಂದಿನ ಗತಿ ಸಿಗಲೆಂದು ಶಾಸ್ತ್ರೋಕ್ತವಾಗಿ ಮರಣೋತ್ತರ ಕರ್ಮಗಳನ್ನು ನಡೆಸಲು ಯಮದೇವನು ಸಾವಿತ್ರಿಗೆ ಸೂಚಿಸುವುದು

ಯಮದೇವನು ಸತ್ಯವಾನನ ಪ್ರಾಣವನ್ನು ಕಸಿದುಕೊಂಡಿದ್ದನ್ನು ನೋಡಿ ಸಾವಿತ್ರಿ ಅವನನ್ನು ಹಿಂಬಾಲಿಸಲು ಪ್ರಾರಂಭಿಸಿದಳು. ಸಾವಿತ್ರಿಯನ್ನು ನೋಡುತ್ತಾ ಯಮದೇವನು, “ಸಾವಿತ್ರಿ, ನಿನ್ನ ಜೀವನ ರೇಖೆ ಇನ್ನೂ ಮುಗಿದಿಲ್ಲ. ಆದ್ದರಿಂದ ನೀನು ನನ್ನನ್ನು ಹಿಂಬಾಲಿಸಲು ಸಾಧ್ಯವಿಲ್ಲ. ನೀನು ಹಿಂತಿರುಗಿ ಹೋಗು” ಎಂದು ಹೇಳಿದನು. ಆಗ ಸಾವಿತ್ರಿ, “ಹೇ ಭಗವಂತಾ, ನಾನು ನಿನ್ನನ್ನು ಹಿಂಬಾಲಿಸುತ್ತಿಲ್ಲ. ನಾನು ನನ್ನ ಗಂಡನನ್ನು ಹಿಂಬಾಲಿಸುತ್ತಿದ್ದೇನೆ” ಎಂದು ಉತ್ತರಿಸಿದಳು. ಯಮದೇವನು, “ನಿನ್ನ ಪತಿಯು ಕಾಡಿನಲ್ಲಿ ಮೃತಪಟ್ಟಿದ್ದಾನೆ. ಅವನ ಆತ್ಮಕ್ಕೆ ಮುಂದಿನ ಗತಿ ಸಿಗಲೆಂದು ಶಾಸ್ತ್ರೋಕ್ತವಾಗಿ ಅವನ ಮರಣೋತ್ತರ ಕರ್ಮಗಳನ್ನು ಮಾಡುವುದೇ ನಿನ್ನ ಕರ್ತವ್ಯ. ಅದನ್ನು ಪಾಲಿಸು” ಎಂದು ತಿಳಿಹೇಳಿದನು.

ಇ. “‘ಪತ್ನಿಯು ಗಂಡನನ್ನು ಅನುಸರಿಸಬೇಕು’ ಎಂದು ಧರ್ಮಗ್ರಂಥಗಳು ಹೇಳುತ್ತವೆ” ಎಂದು ಸಾವಿತ್ರಿ ಹೇಳುವುದು

ಯಮದೇವನ ಈ ಮಾತಿಗೆ ಸಾವಿತ್ರಿಯು, “ಹೇ ಭಗವಂತಾ, ಕಾಡಿನಲ್ಲಿ ಸತ್ತು ಬಿದ್ದರುವ ದೇಹವೆಂದರೆ ನನ್ನ ಪತಿಯಲ್ಲ. ಅದು ನನ್ನ ಗಂಡನ ದೇಹ. ಆ ದೇಹವನ್ನು ಪಂಚಮಹಾಭೂತಗಳು ಸೃಷ್ಟಿಸಿವೆ. ನನ್ನ ಪತಿ ಅದರಲ್ಲಿ (ಆ ದೇಹದಲ್ಲಿ) ವಾಸಿಸುತ್ತಿದ್ದರು. ನೀವು ನನ್ನ ಗಂಡನನ್ನು ಕರೆದುಕೊಂಡು ಹೋಗುತ್ತಿದ್ದೀರಿ. ‘ಹೆಂಡತಿ ಯಾವಾಗಲೂ ತನ್ನ ಗಂಡನನ್ನು ಅನುಸರಿಸಬೇಕು’ ಎಂದು ಧರ್ಮಶಾಸ್ತ್ರವು ಹೇಳುತ್ತದೆ. ನಾನು ಧರ್ಮಾಚರಣೆ ಮಾಡುತ್ತಿದ್ದೇನೆ ಮತ್ತು ಆ ರೀತಿ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದಳು. ಸಾವಿತ್ರಿಯ ಉತ್ತರವು ಆತ್ಮನಾತ್ಮವಿವೇಕದ (ಆತ್ಮ ಮತ್ತು ಅನಾತ್ಮದ ಅರಿವಿರುವುದು) ಒಂದು ಉತ್ತಮ ಉದಾಹರಣೆಯಾಗಿದೆ.

ಈ. ಸಾವಿತ್ರಿ ತನ್ನ ಪತಿಯ ಪ್ರಾಣದ ಬದಲು ಅತ್ತೆ-ಮಾವನಿಗೆ ದೃಷ್ಟಿ ಪ್ರದಾನಿಸುವಂತೆ ವರ ಕೇಳುವುದು 

ಯಮದೇವನು ಸ್ವತಃ ಧರ್ಮರಾಜ. ಸ್ವಾಭಾವಿಕವಾಗಿ, ಅವನು ಯಾರನ್ನೂ ಧರ್ಮಾಚರಣೆಯಿಂದ ತಡೆಯಲು ಸಾಧ್ಯವಿಲ್ಲ. ಹೀಗೆ ಧರ್ಮಸಂಕಟದಲ್ಲಿ ಸಿಲುಕಿದ ಯಮದೇವನು ಸಾವಿತ್ರಿಗೆ, “ಈ ನಿನ್ನ ಉತ್ತರದಿಂದ ನನಗೆ ಸಂತಸವಾಗಿದೆ; ಆದರೆ ನನ್ನ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ. ಆದ್ದರಿಂದ ನಿನ್ನ ಗಂಡನ ಪ್ರಾಣದ ಬದಲಿಗೆ ಒಂದ ವರವನ್ನು ಕೇಳು” ಎಂದನು. ಸಾವಿತ್ರಿಯು, “ಹೇ ಭಗವಂತಾ, ನನ್ನ ಅತ್ತೆ ಮತ್ತು ಮಾವ ದೃಷ್ಟಿಹೀನರಾಗಿದ್ದಾರೆ. ಅವರಿಗೆ ದೃಷ್ಟಿ ಪ್ರದಾನಿಸಿ!”

ಉ. “ಧರ್ಮಾಚರಣೆ ಉತ್ತಮವಾಗಿ ಆಗಲು, ದೇಹವು ಆರೋಗ್ಯಕರವಾಗಿರಬೇಕು” ಎಂದು ಸಾವಿತ್ರಿ ಹೇಳಿದಾಗ ಪ್ರಸನ್ನನಾದ ಯಮರಾಜನು ಸಾವಿತ್ರಿಯ ಅತ್ತೆ-ಮಾವನಿಗೆ ದೃಷ್ಟಿ ಪ್ರದಾನಿಸುವುದು

ಸಾವಿತ್ರಿಯು ಕೇಳಿದ ವರವನ್ನು ಆಲಿಸಿದ ಯಮದೇವನು ಆಶ್ಚರ್ಯಚಕಿತನಾದನು. ಸಾವಿತ್ರಿಗೆ, “ನೀನು ಈಗಷ್ಟೇ ದೇಹದ ಬಗ್ಗೆ ಭಾಷ್ಯ ಮಾಡಿದ್ದೀಯ. ಆದರೆ ನಿನಗೆ ವರವನ್ನು ಕೇಳಲು ಹೇಳಿದಾಗ, ಅದೇ ನಶ್ವರ ದೇಹದ ದೃಷ್ಟಿಯನ್ನು ಮರಳಿ ನೀಡುವ ವರವನ್ನೇಕೆ ಕೇಳಿರುವೆ?” ಸಾವಿತ್ರಿಯು “ಹೇ ಭಗವಂತಾ, ಮನುಷ್ಯನಿಗೆ ಕಣ್ಣಿಲ್ಲ ಎಂದ ಮಾತ್ರಕ್ಕೆ ಅವನು ‘ಕುರುಡನಾಗಿದ್ದಾನೆ’ ಎಂದರ್ಥವಲ್ಲ. ಅವನಿಗೆ ಜ್ಞಾನದ ದೃಷ್ಟಿ ಇರುತ್ತದೆ; ಆದರೆ ಗೋಚರ ಜಗತ್ತಿನಲ್ಲಿ ಜೀವನ ಮತ್ತು ಕಾರ್ಯಗಳು ನಡೆಯುವವರೆಗೂ, ಧರ್ಮಾಚರಣೆ ಉತ್ತಮವಾಗಿ ಆಗಲು ದೇಹವು ಆರೋಗ್ಯಕರವಾಗಿರಬೇಕು. ಸೂಕ್ಷ್ಮ ಇಂದ್ರಿಯಗಳ ಜೊತೆಗೆ, ಸ್ಥೂಲ ಇಂದ್ರಿಯಗಳೂ ಸಮರ್ಥವಾಗಿರಬೇಕು”. ಈ ಉತ್ತರದಿಂದ ಯಮದೇವನು ಪ್ರಸನ್ನನಾದನು. ಸಾವಿತ್ರಿಯ ಅತ್ತೆ-ಮಾವನಿಗೆ ದೃಷ್ಟಿ ಪ್ರದಾನಿಸಿ ಸಾವಿತ್ರಿಗೆ ಹಿಂತಿರುಗಿ ಹೋಗಲು ಹೇಳಿದನು, ಆದರೆ ಸಾವಿತ್ರಿ ಮತ್ತೆ ಯಮದೇವನನ್ನು ಹಿಂಬಾಲಿಸಲು ಪ್ರಾರಂಭಿಸಿದಳು.

ಊ. ಅತ್ತೆ-ಮಾವನ ರಾಜ್ಯವನ್ನು ಮರಳಿ ಪಡೆಯುವಂತೆ, ಮತ್ತು ‘ಧರ್ಮವನ್ನು ಕಾಪಾಡಿಕೊಳ್ಳಬೇಕು’ ಈ ವರವನ್ನು ಸಾವಿತ್ರಿ ಕೇಳುವುದು

ಸಾವಿತ್ರಿ ಮತ್ತೆ ಹಿಂಬಾಲಿಸಿ ಬರುತ್ತಿರುವುದನ್ನು ನೋಡಿದ ಯಮದೇವನು ಅವಳಿಗೆ ಕಾರಣ ಕೇಳಿದಾಗ ಸಾವಿತ್ರಿಯು, “ಹೇ ಭಗವಂತಾ, ಧರ್ಮಶಾಸ್ತ್ರವು ‘ಸಂತರ ಅನುಗ್ರಹ, ಸತ್ಸಂಗ ಮತ್ತು ದೇವರ ದರ್ಶನ ಅದೃಷ್ಟಶಾಲಿಗಳಿಗೆ ಮಾತ್ರ ಲಭಿಸುತ್ತದೆ ಎಂದು ಹೇಳುತ್ತದೆ. ಅದನ್ನು ಪ್ರಾಪ್ತ ಮಾಡಿದ ನಂತರ, ಮನುಷ್ಯನು ಎಲ್ಲವನ್ನೂ ತ್ಯಜಿಸಬೇಕು ಮತ್ತು ಅವರ ಚರಣಗಳ ಸಹವಾಸದಲ್ಲಿಯೇ ಇರಬೇಕು. ಹಾಗಾದರೆ ನಾನು ನಿಮ್ಮ ಸತ್ಸಂಗವನ್ನು ಹೇಗೆ ಬಿಡಬಹುದು? ಧರ್ಮವನ್ನು ಪಾಲಿಸುವುದರಿಂದ ನನ್ನನ್ನ ತಡೆಯದಿರಿ”. ಈ ಉತ್ತರವನ್ನು ಕೇಳಿ ಧರ್ಮಸಂಕಟದಲ್ಲಿ ಸಿಲುಕಿದ ಧರ್ಮ (ಯಮರಾಜನು), ಸಾವಿತ್ರಿಗೆ ಇನ್ನೊಂದು ವರವನ್ನಿತ್ತನು. ಆಗ ಸಾವಿತ್ರಿಯು ಕಳೆದು ಹೋದ ಅತ್ತೆ-ಮಾವನ ರಾಜ್ಯವನ್ನು ಅವರು ಮರಳಿ ಪಡೆಯುವಂತೆ ಬೇಡಿದಳು.

ಸಾವಿತ್ರಿ ಬೇಡಿದ ವರವನ್ನು ಕೇಳಿದಾಗ ಯಮರಾಜನಿಗೆ ಮತ್ತೆ ಆಶ್ಚರ್ಯವಾಯಿತು. ಯಮನು, “ಸಾವಿತ್ರಿ, ನೀನು ಇದೀಗ ಸಂತರ ಅನುಗ್ರಹದ, ದೇವತೆಗಳ ದರ್ಶನದ ಮಹತ್ವ, ಎಲ್ಲವನ್ನು ತ್ಯಜಿಸುವ ಮಹತ್ವದ ಬಗ್ಗೆ ಹೇಳಿರುವೆ. ಮತ್ತೆ ವರವನ್ನು ಕೇಳುವಾಗ ರಾಜ್ಯವನ್ನು ಏಕೆ ಕೇಳುತ್ತಿರುವೆ?” ಸಾವಿತ್ರಿಯು “ಹೇ ಭಗವಂತಾ, ಧರ್ಮಶಾಸ್ತ್ರದಲ್ಲಿ ‘ಮನುಷ್ಯನು ಮೋಕ್ಷವನ್ನು ಬಯಸುತ್ತಿದ್ದರೆ, ಸ್ವತಃ ಧರ್ಮಾಚರಣೆ ಮಾಡುವುದರೊಂದಿಗೆ, ಇತರ ಜನರಿಂದಲೂ ಧರ್ಮಾಚರಣೆ ಮಾಡಿಸಿಕೊಳ್ಳಬೇಕು. ಇತರ ಜನರಿಗೆ ಧರ್ಮಾಚರಣೆ ಮಾಡುವಂತೆ ಪ್ರವೃತ್ತಗೊಳಿಸಲು ರಾಜಧರ್ಮ ಉತ್ತಮ ಮಾರ್ಗವಾಗಿದೆ. ರಾಜ್ಯದ ಚುಕ್ಕಾಣಿ ಹಿಡಿದರೆ ಜನರಿಂದಲೂ ಧರ್ಮಾಚರಣೆ ಮಾಡಿಸಿಕೊಳ್ಳಲು ಸುಲಭವಾಗುತ್ತದೆ.’ ಧರ್ಮವನ್ನು ಕಾಪಾಡಿಕೊಳ್ಳಲು ನಾನು ಈ ವರವನ್ನು ಕೇಳಿದ್ದೇನೆ” ಎಂದಳು. ಪ್ರಸನ್ನನಾದ ಯಮಧರ್ಮನು ಕೂಡಲೇ ಆ ವರವನ್ನಿತ್ತನು.

ಋ. ಸಾವಿತ್ರಿಯ ವಾಕ್ಚಾತುರ್ಯವನ್ನು ನೋಡಿದ ಯಮದೇವನು, ಅವಳಿಗೆ ಮತ್ತೊಂದು  ವರವನ್ನು ನೀಡುವುದು

ಸಾವಿತ್ರಿ ಮತ್ತೆ ಯಮರಾಜನನ್ನು ಹಿಂಬಾಲಿಸಲು ಪ್ರಾರಂಭಿಸಿದಳು. ಯಮರಾಜನು, “ನಿನಗೆ ಬೇಕಾದುದನ್ನು ನಾನು ಕೊಟ್ಟಿದ್ದೇನೆ. ಈಗ ನನ್ನನ್ನು ಏಕೆ ಹಿಂಬಾಲಿಸಿ ಬರುತ್ತಿದ್ದೀಯ?” ಎಂದು ಕೇಳಲು, ಸಾವಿತ್ರಿಯು, “ನೀವು ನನ್ನನ್ನು ದೊಡ್ಡ ಬಿಕ್ಕಟ್ಟಿಗೆ ಸಿಲುಕಿಸಿದ್ದೀರಿ. ‘ಅದರಿಂದ ಹೊರಬರುವುದು ಹೇಗೆ?’ ಎಂದು ನನಗೆ ಅರ್ಥವಾಗುತ್ತಿಲ್ಲ. ನೀವು ಸತ್ಯವಾನನ ಪ್ರಾಣಹರಣ ಮಾಡಿರುವುದರಿಂದ, ನನ್ನ ಅತ್ತೆ-ಮಾವನ ವೃದ್ಧಾಪ್ಯದಲ್ಲಿ ಅವರ ಸೇವೆ ಸಲ್ಲಿಸಬೇಕಾಗುತ್ತದೆ. ಮತ್ತೊಂದೆಡೆ, ನನ್ನ ತಂದೆಗೆ ಮಗನಿಲ್ಲದ ಕಾರಣ, ಅವರ ರಾಜ್ಯವನ್ನೂ ನೋಡಿಕೊಳ್ಳಬೇಕು. ಈ ಸಂಕಟದಿಂದ ನನ್ನನ್ನು ನೀವಲ್ಲದೇ ಯಾರು ತಾನೆ ಬಿಡಿಸಬಹುದು?” ಸಾವಿತ್ರಿಯ ವಾಕ್ಚಾತುರ್ಯವನ್ನು ನೋಡಿದ ಯಮದೇವನು ಅವಳ ತಂದೆಗೆ ಒಬ್ಬ ಮಗನು ಹುಟ್ಟುವಂತೆ ವರವನ್ನಿತ್ತು ಅವಳಿಗೆ ಹಿಂತಿರುಗಿ ಹೋಗಬೇಕೆಂದು ಹೇಳಿದನು. ಆದರೆ ಸಾವಿತ್ರಿ ಯಮದೇವನನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ.

ಎ. ಸಾವಿತ್ರಿ ಧರ್ಮದ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ನೂರು ಪುತ್ರರನ್ನು ಪಡೆಯುವ ವರನ್ನು ಕೇಳುವುದು, ಮತ್ತು ಆ ವರವು ಫಲಿಸಲು ಯಮನು ಸತ್ಯವಾನನಿಗೆ ಜೀವದಾನ ನೀಡಬೇಕಾಗುವುದು

ಆದರೆ ಈಗ ಸಾವಿತ್ರಿ ಮತ್ತೆ ಬರುತ್ತಿರುವುದನ್ನು ನೋಡಿದ ಯಮನಿ‌ಗೆ ಕೋಪ ಬಂತು. “ಸಾವಿತ್ರಿ, ನಿನಗೆ ಬೇಕಾದ ಎಲ್ಲವನ್ನೂ ನಾನು ಕೊಟ್ಟಿದ್ದೇನೆ. ಮತ್ತೆ ನನ್ನ ಹಿಂದೆ ಬರಬೇಡ. ಬಯಸಿದರೆ, ಇನ್ನೊಂದು ವರವನ್ನು ಕೇಳು; ಆದರೆ ಹಿಂಬಾಲಿಸುವುದನ್ನು ನಿಲ್ಲಿಸಬೇಕು” ಎಂದನು. ಸಾವಿತ್ರಿ, “ದೇವರೇ, ‘ದೇವರ ದರ್ಶನದಿಂದ ಮನುಷ್ಯನ ಸಂಕಟಗಳು ದೂರ ಹೋಗುತ್ತವೆ’ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ; ಆದರೆ ನನ್ನ ತೊಂದರೆಗಳು ಇನ್ನೂ ಮುಗಿದಿಲ್ಲ. ನಾನು ನಿಮಗೆ ಶರಣಾಗಿದ್ದೇನೆ. ದಯವಿಟ್ಟು ನನ್ನ ಮೇಲೆ ಕರುಣೆ ತೋರಿ ಮತ್ತು ನಮ್ಮ ಧರ್ಮದ ರಾಜ್ಯವು ನಮ್ಮ ನಂತರವೂ ಅಬಾಧಿತವಾಗಿರಲು ನೂರು ಪುತ್ರರನ್ನು ಪಡೆಯುವ ವರವನ್ನು ನೀಡಿ”. ಧರ್ಮರಾಜ್ಯವು ಅಬಾಧಿತವಾಗಿರಲು ವರವನ್ನು ಕೇಳಿದ ಸಾವಿತ್ರಿಯ ಮಾತನ್ನು ಕೇಳಿ ಪ್ರಸನ್ನನಾದ ಯಮಾನು ಅವಳಿಗೆ ನೂರು ಪುತ್ರರನ್ನು ಪಡೆಯುವ ವರವನ್ನಿತ್ತನು. ಸ್ವಾಭಾವಿಕವಾಗಿ, ಯಮರಾಜನು ಇದಕ್ಕಾಗಿ ಸತ್ಯವಾನನಿಗೆ ಜೀವದಾನ ನೀಡಬೇಕಾಯಿತು.

ಏ. ಗಂಡನನ್ನು ಆರಿಸುವಾಗ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ (ಆತ್ಮದ) ಸೌಂದರ್ಯವನ್ನು ಗೌರವಿಸುವ ಸಾವಿತ್ರಿ!

ಕೊನೆಗೆ ಯಮದೇವನು ಸಾವಿತ್ರಿಗೆ ಕೇಳೆದ ಪ್ರಶ್ನೆ, “ಸತ್ಯವಾನನಿಗೆ ಇನ್ನು ಕೇವಲ ಒಂದು ವರ್ಷ ಆಯಸ್ಸು ಮಾತ್ರ ಉಳಿದಿದೆ ಎಂಬ ಕಲ್ಪನೆಯನ್ನು ನಾರದಮುನಿಗಳು ನಿನಗೆ ನೀಡಿದ್ದರು. ನೀನು ರಾಜಕುಮಾರಿ, ಆದ್ದರಿಂದ ಸತ್ಯವಾನನಿಗಿಂತಲೂ ಸುಂದರ ಮತ್ತು ಪ್ರಬಲ ರಾಜಕುಮಾರನನ್ನು ನೀನು ವರಿಸಬಹುದಿತ್ತು, ನೀನು ಮಾತ್ರ ಸತ್ಯವಾನನನ್ನೇ ಆರಿಸಿದ್ದೇಕೆ?” ಸಾವಿತ್ರಿಯು ಯಮದೇವನಿಗೆ ಉತ್ತರವನ್ನು ನೀಡುವಾಗ “ನಾನು ಸತ್ಯವಾನನನ್ನು ವನದಲ್ಲಿ ಮೊದಲನೇ ಬಾರಿ ನೋಡಿದಾಗ, ದೃಷ್ಟಿ ಕಳೆದುಕೊಂಡಿರುವ ತನ್ನ ತಂದೆ-ತಾಯಿಯ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಿದ್ದುದನ್ನು ನಾ ಕಂಡೆ. ಆಗ ‘ಇಂತಹ ಕಷ್ಟದಲ್ಲಿಯೂ ಶಾಂತವಾಗಿ ಮತ್ತು ಸಂತೋಷದಿಂದ ತನ್ನ ಹೆತ್ತವರ ಸೇವೆ ಸಲ್ಲಿಸುವವನಲ್ಲಿ ಯಾವುದೋ ದಿವ್ಯ ಆತ್ಮವೇ ಇರಬೇಕು’ ಎಂಬ ವಿಚಾರ ನನಗೆ ಬಂತು. ಕೇವಲ ದೈಹಿಕ ಸೌಂದರ್ಯ ಮತ್ತು ಪರಾಕ್ರಮವು ಮನಸ್ಸಿಗೆ ಸಂತೋಷ ಮತ್ತು ಶಾಂತಿಯ ಅನುಭೂತಿಯನ್ನು ನೀಡಲು ಸಾಧ್ಯವಿಲ್ಲ; ಅದಕ್ಕಾಗಿಯೇ ತೇಜಸ್ವೀ ಆತ್ಮವನ್ನು ಹೊಂದಿರುವ ಸತ್ಯವಾನನನ್ನು ನನ್ನ ಗಂಡನಾಗಿ ಆರಿಸಿದೆ” ಎಂದಳು.

ವಟರ್ಪೂರ್ಣಿಮೆಯ ವ್ರತದ ಮೂಲಕ ಎಲ್ಲ ಸುಮಂಗಲೆಯರಿಗೆ ಧರ್ಮಾಚರಣೆಯನ್ನು ಮಾಡುವ ಸದ್ಬುದ್ಧಿ ಬರಲಿ ಮತ್ತು ಎಲ್ಲ ಮಹಿಳೆಯರು ಧರ್ಮಾಚರಣಿಗಳಾಗಲಿ’, ಎಂದು ಶ್ರೀಮನ್ನಾರಾಯಣ ಸ್ವರೂಪರಾದ ಪರಾತ್ಪರ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ!

ಆಪತ್ಕಾಲದ ವಟಪೂರ್ಣಿಮೆ (ಆಲದ ಮರದ ಪೂಜೆ) ಹೇಗೆ ಆಚರಿಸಬೇಕು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

– ಸೌ. ಸಮೃದ್ಧಿ ಸಂತೋಷ ಗರುಡ, ಪರ್ವರಿ, ಗೋವಾ. (22.6.2018)

Leave a Comment