ಆಪತ್ಕಾಲೀನ ಮಕರಸಂಕ್ರಾಂತಿಯನ್ನು ಹೇಗೆ ಆಚರಿಸಬೇಕು ?

ಶ್ರೀ. ಚೇತನ ರಾಜಹಂಸ

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಬ್ಬ-ಉತ್ಸವಗಳನ್ನು ಮತ್ತು ವ್ರತಗಳನ್ನು ಆಚರಿಸಲು ಸ್ವಲ್ಪ ಮಟ್ಟಿಗೆ ನಿರ್ಬಂಧ ಉಂಟಾಗಿದೆ. ಕೊರೋನಾದ ಪರಿಸ್ಥಿತಿಯು ಇನ್ನೂ ಪೂರ್ಣವಾಗಿ ದೂರವಾಗಿ ಜೀವನ ಪೂರ್ವಸ್ಥಿತಿಗೆ ಬರದೆ ನಿಧಾನವಾಗಿ ಮರಳುತ್ತಿದೆ. ಇಂತಹ ಸಮಯದಲ್ಲಿ ಹಬ್ಬಗಳನ್ನು ಆಚರಿಸುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

1. ಸಂಕ್ರಾಂತಿಯನ್ನು ಆಚರಿಸುವಾಗ ಎಲ್ಲ ಆಚಾರಗಳನ್ನು (ಉದಾ. ಅರಶಿಣಕುಂಕುಮ ಸಮಾರಂಭ, ಎಳ್ಳುಬೆಲ್ಲ ಹಂಚುವುದು ಇತ್ಯಾದಿ) ತಮ್ಮ ಸ್ಥಳೀಯ ಪರಿಸ್ಥಿತಿಯನ್ನು ನೋಡಿ ಕೊರೋನಾದ ವಿಷಯದಲ್ಲಿ ಆಡಳಿತವು ಹಾಕಿಕೊಟ್ಟ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಬೇಕು.

2. ಅರಶಿಣ-ಕುಂಕುಮ ಸಮಾರಂಭವನ್ನು ಆಯೋಜಿಸುವಾಗ ಒಂದೇ ಸಮಯದಲ್ಲಿ ಎಲ್ಲ ಮಹಿಳೆಯರನ್ನು ಆಮಂತ್ರಿಸದೇ 4-4 ಜನರ ಗುಂಪನ್ನು 15-20 ನಿಮಿಷಗಳ ಅಂತರ ಬಿಟ್ಟು ಆಮಂತ್ರಿಸಬೇಕು.

3. ಎಳ್ಳುಬೆಲ್ಲವನ್ನು ಪರಸ್ಪರ ಹಂಚುವಾಗ ನೇರವಾಗಿ ಹಂಚದೇ ಸಣ್ಣ ಸಣ್ಣ ಪಾಕೀಟುಗಳಲ್ಲಿ ಹಾಕಿ ಅದರ ಕೊಡುಕೊಳ್ಳುವಿಕೆಯನ್ನು ಮಾಡಬೇಕು.

4. ಪರಸ್ಪರರನ್ನು ಭೇಟಿಯಾಗುವಾಗ, ಮಾತನಾಡುವಾಗ ಮಾಸ್ಕ್ ಅನ್ನು ಉಪಯೋಗಿಸಬೇಕು.

5. ನಮ್ಮಲ್ಲಿರುವ ‘ಸತ್ತ್ವಗುಣವನ್ನು ವೃದ್ಧಿಸುವುದು’ ಯಾವುದೇ ಹಬ್ಬ ಅಥವಾ ಉತ್ಸವವನ್ನು ಆಚರಿಸುವ ಉದ್ದೇಶವಾಗಿರುತ್ತದೆ. ಹಾಗಾಗಿ ಆಪತ್ಕಾಲೀನ ಪರಿಸ್ಥಿತಿಯಿಂದ ರೂಢಿಗನುಸಾರ ಹಬ್ಬ-ಉತ್ಸವಗಳನ್ನು ಆಚರಿಸಲು ಮಿತಿ ಉಂಟಾಗಿದ್ದರೂ ಆಯಾ ಸಮಯದಲ್ಲಿ ಈಶ್ವರನ ಹೆಚ್ಚುಹೆಚ್ಚು ನಾಮಸ್ಮರಣೆ, ಉಪಾಸನೆ, ನಾಮಜಪ ಇತ್ಯಾದಿಗಳನ್ನು ಮಾಡಿ ಸತ್ತ್ವಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಆಗಲೇ ನಿಜವಾದ ಅರ್ಥದಿಂದ ಹಬ್ಬವನ್ನು ಆಚರಿಸಿದಂತಾಗುವುದು.

ಮಕರ ಸಂಕ್ರಾಂತಿಯ ವಿಷಯದ ಆಧ್ಯಾತ್ಮಿಕ ವಿವೇಚನೆ

ಹಬ್ಬ, ಉತ್ಸವ, ಮತ್ತು ವ್ರತಗಳು ಇವುಗಳಿಗೆ ಅಧ್ಯಾತ್ಮಶಾಸ್ತ್ರೀಯ ಆಧಾರ ಇರುವುದರಿಂದ ಅವುಗಳನ್ನು ಆಚರಿಸುವಾಗ ಅದರಿಂದ ಚೈತನ್ಯವು ಉತ್ಪನ್ನವಾಗುತ್ತದೆ ಮತ್ತು ಅದರ ಮೂಲಕ ಸಾಮಾನ್ಯ ಮನುಷ್ಯನಿಗೂ ಭಗವಂತನತ್ತ ಸಾಗಲು ಸಹಾಯವಾಗುತ್ತದೆ. ಇಂತಹ ಮಹತ್ವವಿರುವ ಹಬ್ಬವನ್ನು ಆಚರಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಅರಿತುಕೊಂಡು ಆಚರಿಸಿದರೆ ಅದರ ಫಲನಿಷ್ಪತ್ತಿ ಹೆಚ್ಚಾಗುತ್ತದೆ. ಇದಕ್ಕಾಗಿ ಇಲ್ಲಿ ಸಂಕ್ರಾಂತಿ ಮತ್ತು ಅದನ್ನು ಆಚರಿಸುವ ವಿವಿಧ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಇಲ್ಲಿ ನೀಡುತ್ತಿದ್ದೇವೆ.

1. ಉತ್ತರಾಯಣ ಮತ್ತು ದಕ್ಷಿಣಾಯನ : ಮಕರಸಂಕ್ರಾಂತಿಯಂದು ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. ಈ ದಿನ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

2. ಸಂಕ್ರಾಂತಿಯ ಮಹತ್ವ : ಈ ಕಾಲದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣ ಹೆಚ್ಚಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಕಾಲವು ಪೂರಕವಾಗಿರುತ್ತದೆ.

3. ಸಂಕ್ರಾಂತಿಯಲ್ಲಿ ಎಳ್ಳನ್ನು ಬಳಸುವುದರ ಮಹತ್ವ : ಸಂಕ್ರಾಂತಿಯಂದು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಎಳ್ಳನ್ನು ಉಪಯೋಗಿಸುತ್ತಾರೆ, ಉದಾ. ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳುಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವದೇವಸ್ಥಾನದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ) ಇತ್ಯಾದಿ. ಶ್ರಾದ್ಧದಲ್ಲಿ ಎಳ್ಳನ್ನು ಉಪಯೋಗಿಸುವುದರಿಂದ ಅಸುರರು ಶ್ರಾದ್ಧದಲ್ಲಿ ವಿಘ್ನಗಳನ್ನು ತರುವುದಿಲ್ಲ. ಆಯುರ್ವೇದಕ್ಕನುಸಾರ ಚಳಿಯಲ್ಲಿ ಬರುವ ಸಂಕ್ರಾಂತಿಯಂದು ಎಳ್ಳುಭಕ್ಷಣೆ ಮಾಡುವುದು ಲಾಭದಾಯಕವಾಗಿರುತ್ತದೆ. ಅಧ್ಯಾತ್ಮಕ್ಕನುಸಾರ ಎಳ್ಳಿನಲ್ಲಿ ಇತರ ಎಲ್ಲ ಎಣ್ಣೆಗಳಿಗಿಂತ ಸತ್ತ್ವಲಹರಿಗಳನ್ನು ಗ್ರಹಿಸಿಕೊಳ್ಳುವ ಕ್ಷಮತೆಯು ಹೆಚ್ಚು ಇರುವುದರಿಂದ ಸೂರ್ಯನ ಈ ಸಂಕ್ರಮಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗಲು ಎಳ್ಳು ಪೂರಕವಾಗಿರುತ್ತದೆ.
3 ಅ. ಎಳ್ಳುಬೆಲ್ಲದ ಮಹತ್ವ : ಎಳ್ಳಿನಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚು ಇರುವುದರಿಂದ ಎಳ್ಳುಬೆಲ್ಲ ಸೇವನೆಯಿಂದ ಅಂತರ್ಶುದ್ಧಿಯಾಗಿ ಉತ್ತಮವಾಗಿ ಸಾಧನೆಯಾಗಲು ಸಹಾಯವಾಗುತ್ತದೆ ಹಾಗೂ ಎಳ್ಳುಬೆಲ್ಲವನ್ನು ಪರಸ್ಪರರಿಗೆ ಹಂಚುವುದರಿಂದ ಸಾತ್ತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

4. ಪಂಚೋಪಚಾರ
4 ಅ. ಅರಶಿನ ಕುಂಕುಮ ಹಚ್ಚುವುದು : ಅರಶಿನ ಕುಂಕುಮ ಹಚ್ಚುವುದರಿಂದ ಮುತ್ತೈದೆಯಲ್ಲಿರುವ ಶ್ರೀದುರ್ಗಾದೇವಿಯ ಸುಪ್ತ ತತ್ತ್ವವು ಜಾಗೃತವಾಗಿ ಮುತ್ತೈದೆಯ ಕಲ್ಯಾಣವು ಆಗುತ್ತದೆ.
4 ಆ. ಅತ್ತರು ಹಚ್ಚುವುದು : ಅತ್ತರಿನಿಂದ ಪ್ರಕ್ಷೇಪಿತವಾಗುವ ಗಂಧಕಣಗಳಿಂದ ದೇವತೆಯ ತತ್ತ್ವವು ಪ್ರಸನ್ನವಾಗಿ ಆ ಮುತ್ತೈದೆಗಾಗಿ ಕಡಿಮೆ ಕಾಲಾವಧಿಯಲ್ಲಿ ಕಾರ್ಯ ಮಾಡುತ್ತದೆ. (ಆ ಮುತ್ತೈದೆಯ ಕಲ್ಯಾಣವಾಗುತ್ತದೆ)
4 ಇ. ಪನ್ನೀರನ್ನು ಸಿಂಪಡಿಸುವುದು : ಪನ್ನೀರಿನಿಂದ (ಗುಲಾಬ್ ಜಲ) ಪ್ರಕ್ಷೇಪಿಸುವ ಸುಗಂಧಿತ ಲಹರಿಗಳಿಂದ ದೇವತೆಯ ಲಹರಿಗಳು ಕಾರ್ಯನಿರತವಾಗಿ ವಾತಾವರಣವು ಶುದ್ಧವಾಗುತ್ತದೆ ಮತ್ತು ಉಪಚಾರ ಮಾಡುವ ಮುತ್ತೈದೆಗೆ ಕಾರ್ಯನಿರತ ದೇವತೆಯ ಸಗುಣ ತತ್ತ್ವದಿಂದ ಹೆಚ್ಚು ಲಾಭ ಸಿಗುತ್ತದೆ.
4 ಈ. ಉಡಿ ತುಂಬಿಸುವುದು : ಉಡಿ ತುಂಬಿಸುವುದು ಅಂದರೆ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯನ್ನು ಆಹ್ವಾನಿಸುವುದು. ಉಡಿ ತುಂಬಿಸುವ ಪ್ರಕ್ರಿಯೆಯಿಂದ ಬ್ರಹ್ಮಾಂಡದಲ್ಲಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯು ಕಾರ್ಯನಿರತವಾಗುವುದರಿಂದ ಶ್ರದ್ಧೆಯಿಂದ ಉಡಿ ತುಂಬಿಸುವ ಜೀವದ ಅಪೇಕ್ಷಿತ ಇಚ್ಛೆಯು ಪೂರ್ಣವಾಗುತ್ತದೆ.
4 ಉ. ಬಾಗಿನ ನೀಡುವುದು : ಬಾಗಿನ ನೀಡುವಾಗ ಯಾವಾಗಲೂ ಸೆರಗಿನ ತುದಿಯನ್ನು ಬಾಗಿನಕ್ಕೆ ಆಧಾರ ನೀಡಿ ನಂತರ ಅದನ್ನು ಕೊಡಲಾಗುತ್ತದೆ. ಬಾಗಿನ ನೀಡುವುದು ಅಂದರೆ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದ ತ್ಯಾಗದೊಂದಿಗೆ ಶರಣಾಗುವುದು. ಸೆರಗಿನ ತುದಿಯ ಆಧಾರ ನೀಡುವುದು ಅಂದರೆ ಶರೀರದ ಮೇಲಿರುವ ವಸ್ತ್ರದ ಆಸಕ್ತಿಯನ್ನು ಸಹ ತ್ಯಾಗ ಮಾಡಿ ದೇಹಬುದ್ಧಿಯನ್ನು ತ್ಯಾಗ ಮಾಡಲು ಕಲಿಯುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಗಳು ಬೇಗನೇ ಪ್ರಸನ್ನರಾಗಿ ಬಾಗಿನ ನೀಡುವ ಮುತ್ತೈದೆಗೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ
4 ಉ 1. ಬಾಗಿನವೆಂದು ಯಾವ ವಸ್ತುಗಳನ್ನು ನೀಡಬೇಕು ? :
ಸಾಬೂನು, ಪ್ಲಾಸ್ಟಿಕ್‌ನಂತಹ ಅಧಾರ್ಮಿಕ ವಸ್ತುಗಳನ್ನು ಬಾಗಿನವೆಂದು ನೀಡುವ ಬದಲು ಸೌಭಾಗ್ಯದ ಪ್ರತೀಕವಾಗಿರುವ ವಸ್ತುಗಳು, ಊದುಬತ್ತಿ, ಉಟಣೆ, ದೇವತೆಗಳ ಚಿತ್ರಗಳು, ಧಾರ್ಮಿಕ ಗ್ರಂಥಗಳು, ಅಧ್ಯಾತ್ಮ ವಿಷಯದ ಧ್ವನಿಚಿತ್ರ ಸುರುಳಿಗಳು ಮುಂತಾದ ಅಧ್ಯಾತ್ಮಕ್ಕೆ ಪೂರಕವಾದಂತಹ ವಸ್ತುಗಳನ್ನು ಬಾಗಿನವೆಂದು ನೀಡಬೇಕು

5. ಕಿಂಕ್ರಾಂತಿ : ಸಂಕ್ರಾಂತಿಯ ಮರುದಿನವನ್ನು ಕಿಂಕ್ರಾಂತ ಅಥವಾ ಕರಿದಿನ ಎನ್ನಲಾಗುತ್ತದೆ. ಈ ದಿನ ದೇವಿಯು ಕಿಂಕರಾಸುರನೆಂಬ ಅಸುರನನ್ನು ವಧಿಸಿದ್ದಳು.

6. ಸಂಕ್ರಾಂತಿಯ ದಿನದಂದು ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಣೆ ಮಾಡುವುದರ ಮಹತ್ವ

ಈ ದಿನ ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಣೆ ಮಾಡುವ ಅಥವಾ ಎಳ್ಳು-ಅಕ್ಕಿ ಮಿಶ್ರಿತ ಅರ್ಘ್ಯವನ್ನು ಅರ್ಪಣೆ ಮಾಡುತ್ತಾರೆ. ಪರ್ವದ ಈ ದಿನದಂದು ಎಳ್ಳಿಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಎಳ್ಳಿನ ಉಟಣೆ, ಎಳ್ಳುಮಿಶ್ರಿತ ನೀರಿನಿಂದ ಸ್ನಾನ, ಎಳ್ಳುಮಿಶ್ರಿತ ನೀರನ್ನು ಕುಡಿಯುವುದು, ಎಳ್ಳಿನಿಂದ ಹವನ ಮಾಡುವುದು, ಅಡುಗೆಯಲ್ಲಿ ಎಳ್ಳನ್ನು ಉಪಯೋಗಿಸುವುದು ಹಾಗೂ ಎಳ್ಳನ್ನು ದಾನ ಮಾಡುವುದು ಇವೆಲ್ಲ ಪಾಪನಾಶಕ ಕೃತಿಗಳಾಗಿವೆ. ಹಾಗಾಗಿ ಈ ದಿನದಂದು ಎಳ್ಳು, ಬೆಲ್ಲ ಹಾಗೂ ಸಕ್ಕರೆಮಿಶ್ರಿತ ಲಡ್ಡುಗಳನ್ನು ತಿನ್ನುವ ಹಾಗೂ ದಾನ ನೀಡುವುದಕ್ಕೆ ಬಹಳ ಮಹತ್ವವಿದೆ.

ಜೀವನದಲ್ಲಿ ಸಮ್ಯಕ್ ಕ್ರಾಂತಿಯನ್ನು (ಸಂಪೂರ್ಣ ಕ್ರಾಂತಿ) ತರುವುದೇ ಮಕರಸಂಕ್ರಾಂತಿಯ ಆಧ್ಯಾತ್ಮಿಕ ತಾತ್ಪರ್ಯವಾಗಿದೆ.

7. ಮಕರಸಂಕ್ರಾಂತಿಯಂದು ನೀಡಿದ ದಾನದ ಮಹತ್ವ

ಧರ್ಮಶಾಸ್ತ್ರಗಳಲ್ಲಿ ಈ ದಿನ ದಾನ, ಜಪ ಹಾಗೂ ಧಾರ್ಮಿಕ ಅನುಷ್ಠಾನಗಳನ್ನು ಮಾಡುವುದರ ಮಹತ್ವವನ್ನು ಹೇಳಲಾಗಿದೆ. ಈ ದಿನ ನೀಡಿದ ದಾನವು ಪುನರ್ಜನ್ಮವಾದ ನಂತರ 100 ಪಟ್ಟಿನಲ್ಲಿ ಸಿಗುತ್ತದೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

Leave a Comment