ಪಂಚೋಪಚಾರ ಪೂಜೆ

ಪಂಚೋಪಚಾರ ಪೂಜೆಯ ಕೃತಿ

ದೇವರ ಪೂಜೆಯ ಉಪಚಾರಗಳ ಸಂಖ್ಯೆಯ ಬಗ್ಗೆ ವಿವಿಧ ಗ್ರಂಥಗಳಲ್ಲಿ ವಿವಿಧ ಸಂಖ್ಯೆಗಳನ್ನು ಹೇಳಲಾಗಿದೆ. ತಂತ್ರಗ್ರಂಥದಲ್ಲಿ ದೇವರ ಪೂಜೆಗೆ ೩, ೫, ೭, ೧೦, ೧೨, ೧೬, ೧೮, ೩೬, ೩೮, ೬೪ ಇತ್ಯಾದಿ ಉಪಚಾರಗಳನ್ನು ಹೇಳಲಾಗಿದೆ. ಸನತ್ಕುಮಾರ ತಂತ್ರದಲ್ಲಿ ೫, ೧೦ ಮತ್ತು ೧೬ ಉಪಚಾರಗಳ ಪೂಜೆಯನ್ನು ಹೇಳಲಾಗಿದೆ.

೧.ದೇವತೆಗೆ ಗಂಧ (ಚಂದನ) ವನ್ನು ಹಚ್ಚುವುದು

ಮೊದಲು ದೇವತೆಗೆ (ಸ್ತ್ರೀ ಅಥವಾ ಪುರುಷ ದೇವರು) ಅನಾಮಿಕಾದಿಂದ ಗಂಧವನ್ನು ಹಚ್ಚಬೇಕು. ಅನಂತರ ಬಲಗೈಯ ಹೆಬ್ಬೆರಳು ಮತ್ತು ಅನಾಮಿಕೆಯ ಚಿಟಿಕೆಯಿಂದ, ಮೊದಲು ಅರಿಶಿನ ಬಳಿಕ ಕುಂಕುಮವನ್ನು ದೇವತೆಯ ಚರಣಗಳಿಗೆ ಅರ್ಪಿಸಬೇಕು.

೨.ದೇವತೆಗೆ ಎಲೆ (ಪತ್ರೆ) ಮತ್ತು ಹೂವುಗಳನ್ನು ಅರ್ಪಿಸುವುದು

ದೇವತೆಗೆ ಹೂವುಗಳನ್ನು ಅರ್ಪಿಸುವ ಮೊದಲು ಎಲೆಗಳನ್ನು ಅರ್ಪಿಸಬೇಕು.
ಅ.ಆಯಾಯ ದೇವತೆಯ ತತ್ತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿಸುವಂತಹ ಎಲೆ ಮತ್ತು ಹೂವುಗಳನ್ನು ಆಯಾಯ ದೇವತೆಗೆ ಅರ್ಪಿಸಬೇಕು. ಉದಾ. ಶಿವನಿಗೆ ಬಿಲ್ವ, ಶ್ರೀ ಗಣಪತಿಗೆ ಗರಿಕೆ ಮತ್ತು ಕೆಂಪು ಹೂವುಗಳು. ಗರಿಕೆಯನ್ನು ಅರ್ಪಿಸುವಾಗ ಶ್ರೀ ಗಣಪತಿಯ ಮುಖವನ್ನು ಹೊರತುಪಡಿಸಿ ಸಂಪೂರ್ಣ ಮೂರ್ತಿಯನ್ನು ಗರಿಕೆಗಳಿಂದ ಮುಚ್ಚಬೇಕು. ದಿನದಲ್ಲಿ ಮೂರು ಬಾರಿ ಗರಿಕೆಗಳನ್ನು ಬದಲಾಯಿಸಬೇಕು. ಇದಕ್ಕಾಗಿ ದಿನದಲ್ಲಿ ಮೂರು ಬಾರಿ ಪೂಜೆಯನ್ನು ಮಾಡಬೇಕು.
ಆ.ವಿಶಿಷ್ಟ ದೇವತೆಗೆ ವಿಶಿಷ್ಟ ಸಂಖ್ಯೆಯಲ್ಲಿ ಮತ್ತು ವಿಶಿಷ್ಟ ರಚನೆಯಲ್ಲಿ ಹೂವುಗಳನ್ನು ಅರ್ಪಿಸಬೇಕು. ಉದಾ. ಶ್ರೀ ಗಣಪತಿಗೆ ಟೊಳ್ಳು ಶಂಕರಪಾಳಿಯ ಆಕಾರದಲ್ಲಿ ಎಂಟು ಹೂವುಗಳನ್ನು ಮತ್ತು ಮಾರುತಿಗೆ ಟೊಳ್ಳು ಲಂಬಗೋಲಾಕಾರ ಆಕಾರದಲ್ಲಿ ಐದು ಹೂವುಗಳನ್ನು ಅರ್ಪಿಸಬೇಕು. ಹೂವುಗಳನ್ನು ಅಂಕುಡೊಂಕಾಗಿ ಅರ್ಪಿಸದೆ ಸರಿಯಾಗಿ ಅರ್ಪಿಸಬೇಕು.
ಇ.ಹೂವುಗಳನ್ನು ದೇವತೆಯ ತಲೆಯ ಮೇಲೆ ಅರ್ಪಿಸುವುದಕ್ಕಿಂತ ಚರಣಗಳಿಗೆ ಅರ್ಪಿಸಬೇಕು.
ಈ.ಹೂವುಗಳನ್ನು ಅರ್ಪಿಸುವಾಗ ಅವುಗಳ ತೊಟ್ಟು ದೇವತೆಯ ಕಡೆಗೆ ಮತ್ತು ಎಸಳುಗಳು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.

೩.ದೇವತೆಗೆ ಧೂಪವನ್ನು ತೋರಿಸುವುದು (ಅಥವಾ ಊದುಬತ್ತಿಯಿಂದ ಬೆಳಗುವುದು)

ಅ.ದೇವತೆಗೆ ಧೂಪವನ್ನು ತೋರಿಸುವಾಗ ಅದನ್ನು ಕೈಯಿಂದ ಹರಡಬಾರದು.
ಆ.ಧೂಪದ ನಂತರ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುವ ಪರಿಮಳದ ಊದುಬತ್ತಿಗಳಿಂದ ಆಯಾಯ ದೇವತೆಗಳಿಗೆ ಬೆಳಗಿಸಬೇಕು. ಉದಾ. ಶಿವನಿಗೆ ಹೀನಾ ಮತ್ತು ಶ್ರೀ ಲಕ್ಷ್ಮೀದೇವಿಗೆ ಗುಲಾಬಿ.
ಇ.ದೇವತೆಗಳಿಗೆ ಎಷ್ಟು ಊದುಬತ್ತಿಗಳಿಂದ ಬೆಳಗಬೇಕು: ಸಾಮಾನ್ಯವಾಗಿ ಪ್ರಾಥಮಿಕ ಅವಸ್ಥೆಯಲ್ಲಿನ ಶಕ್ತಿ-ಉಪಾಸಕರು ಐದು, ಕರ್ತವ್ಯವೆಂದು ಪೂಜೆಯನ್ನು ಮಾಡುವವರು ಎರಡು ಮತ್ತು ಭಕ್ತಿಭಾವದಿಂದ ಉಪಾಸನೆ ಮಾಡುವ ಸಾಧಕರು ಒಂದು ಊದುಬತ್ತಿಯಿಂದ ದೇವತೆಗಳಿಗೆ ಮೂರು ಬಾರಿ ಬೆಳಗಬೇಕು.

೪.ದೇವತೆಗೆ ದೀಪವನ್ನು ಬೆಳಗುವುದು

ಅ.ದೀಪವನ್ನು ಪ್ರಜ್ವಲಿಸುವಾಗ ಒಂದು ದೀಪದಿಂದ ಇನ್ನೊಂದು ದೀಪವನ್ನು ಅಥವಾ ಎಣ್ಣೆಯ ದೀಪದಿಂದ ತುಪ್ಪದ ದೀಪವನ್ನು ಹಚ್ಚಬಾರದು.
ಆ.ದೇವತೆಗಳಿಗೆ ನೀಲಾಂಜನದಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ನಿಧಾನವಾಗಿ ಮೂರು ಬಾರಿ ಬೆಳಗಬೇಕು ಮತ್ತು ನೀಲಾಂಜನದಿಂದ ಬೆಳಗುವಾಗ ಎಡಗೈಯಿಂದ ಗಂಟೆಯನ್ನು ಬಾರಿಸಬೇಕು.

೫.ದೇವರಿಗೆ ನೈವೇದ್ಯವನ್ನು ತೋರಿಸುವುದು (ಅರ್ಪಿಸುವುದು)

ಅ.ಖಾರ, ಉಪ್ಪು, ಎಣ್ಣೆ ಇತ್ಯಾದಿಗಳು ಕಡಿಮೆ ಮತ್ತು ತುಪ್ಪದಂತಹ ಸಾತ್ತ್ವಿಕ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಿ ನೈವೇದ್ಯದ ಪದಾರ್ಥಗಳನ್ನು ತಯಾರಿಸಬೇಕು.
ಆ.ನೈವೇದ್ಯವನ್ನು ತೋರಿಸಲು ಬಾಳೆಎಲೆಯನ್ನು ಉಪಯೋಗಿಸಬೇಕು.
ಇ.ನೈವೇದ್ಯಕ್ಕೆಂದು ತಯಾರಿಸಿದ ಎಲೆಯಲ್ಲಿ ಉಪ್ಪನ್ನು ಬಡಿಸಬಾರದು.
ಈ.ದೇವರಿಗೆ ನೈವೇದ್ಯವನ್ನು ತೋರಿಸುವ ಮೊದಲು ಆ ಆಹಾರವನ್ನು ಮುಚ್ಚಿಡಬೇಕು.
ಉ.ನೈವೇದ್ಯವನ್ನು ತೋರಿಸುವಾಗ ಮೊದಲು ಇಷ್ಟದೇವತೆಗೆ ಪ್ರಾರ್ಥನೆಯನ್ನು ಮಾಡಿ ದೇವರ ಎದುರು ನೆಲದ ಮೇಲೆ ನೀರಿನಿಂದ ಚೌಕೋನಾಕಾರದ ಮಂಡಲವನ್ನು ಹಾಕಿ ಅದರ ಮೇಲೆ ನೈವೇದ್ಯದ ಎಲೆಯನ್ನು ಅಥವಾ ತಟ್ಟೆಯನ್ನಿಡಬೇಕು. ನೈವೇದ್ಯದ ಎಲೆಯನ್ನಿಡುವಾಗ ಎಲೆಯ ಹಿಂದಿನ ಬದಿ (ದೇಟು) ದೇವರ ಕಡೆಗೆ ಮತ್ತು ಮುಂದಿನ ಬದಿಯು (ಎಲೆಯ ಅಗ್ರಭಾಗ) ನಮ್ಮ ಕಡೆಗೆ ಬರುವಂತಿಡಬೇಕು.
ಊ.ದೇವರಿಗೆ ನೈವೇದ್ಯ ತೋರಿಸುವಾಗ ತಟ್ಟೆಯ ಸುತ್ತಲೂ ಒಂದು ಸಲ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ನೀರನ್ನು ಸಿಂಪಡಿಸಬೇಕು (ನೀರಿನ ಮಂಡಲವನ್ನು ಹಾಕಬೇಕು). ವಿರುದ್ಧ ದಿಕ್ಕಿನಲ್ಲಿ ಮತ್ತೊಮ್ಮೆ ನೀರನ್ನು ಸಿಂಪಡಿಸಬಾರದು
ಎ.ದೇವರಿಗೆ ನೈವೇದ್ಯವನ್ನು ತೋರಿಸುವ ಕೃತಿ
ಎ೧.ಪದ್ಧತಿ ೧ – ಕರ್ಮಕಾಂಡದ ಸ್ತರದಲ್ಲಿನ ಕೃತಿ : ತುಳಸಿಯ ಎರಡು ದಳಗಳಿಂದ (ಎಲೆಗಳಿಂದ) ನೈವೇದ್ಯದ ಮೇಲೆ ನೀರನ್ನು ಸಿಂಪಡಿಸಿ ಒಂದು ದಳವನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದನ್ನು ದೇವರ ಚರಣಗಳಲ್ಲಿಡಬೇಕು. ಅನಂತರ ಎಡಗೈಯ ಹೆಬ್ಬೆರಳನ್ನು ಎಡಕಣ್ಣಿನ ಮೇಲೆ ಮತ್ತು ಎಡಗೈಯ ಅನಾಮಿಕೆಯನ್ನು ಬಲಕಣ್ಣಿನ ಮೇಲಿಟ್ಟು ಕಣ್ಣುಗಳನ್ನು ಮುಚ್ಚಿ ‘ಓಂ ಪ್ರಾಣಾಯ ಸ್ವಾಹಾ| ಓಂ ಅಪಾನಾಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ| ಓಂ ಸಮಾನಾಯ ಸ್ವಾಹಾ| ಓಂ ಬ್ರಹ್ಮಣೇ ಸ್ವಾಹಾ||’ ಎಂಬ ಪಂಚಪ್ರಾಣಗಳಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸುತ್ತಾ ಬಲಗೈಯ ಐದೂ ಬೆರಳುಗಳ ತುದಿಗಳಿಂದ ನೈವೇದ್ಯದ ಸುವಾಸನೆಯನ್ನು ದೇವರತ್ತ ಕೊಂಡೊಯ್ಯಬೇಕು.

(ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾದ ಪೂಜಾವಿಧಿಯ ಹಿಂದಿನ ಶಾಸ್ತ್ರ ಮತ್ತು ವಿವರವಾದ ಮಾಹಿತಿಯನ್ನು ಸನಾತನದ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ)

Leave a Comment