ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ

ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ 16 ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. 16 ಉಪಚಾರಗಳಲ್ಲಿ 9. ಗಂಧವನ್ನು ಹಚ್ಚುವುದು, 10. ಹೂವುಗಳನ್ನು ಅರ್ಪಿಸುವುದು, 11. ಧೂಪವನ್ನು ತೋರಿಸುವುದು, 12. ದೀಪವನ್ನು ಬೆಳಗುವುದು, 13. ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ.

ಹಿಂದೂ ಧರ್ಮದಲ್ಲಿನ ಸಗುಣ ಉಪಾಸನೆಯ ಅಡಿಪಾಯವೆಂದರೆ ‘ದೇವರ ಪೂಜೆ’. ಈಗಿನ ‘ಪ್ರತಿನಿತ್ಯದ ಗಡಿಬಿಡಿಯ ದಿನಗಳಲ್ಲಿ ದೇವರ ಪೂಜೆ ಯನ್ನು ಮಾಡಲು ಯಾರಿಗೆ ಸಮಯವಿದೆ ?’ ಈ ರೀತಿಯ ನಕಾರಾತ್ಮಕ ಮಾನಸಿಕತೆಯು ಇತ್ತೀಚಿಗೆ ಬಹಳಷ್ಟು ಜನರಲ್ಲಿ ಕಂಡುಬರುತ್ತಿದೆ. ಕೇವಲ ನಿತ್ಯದ ಒಂದು ಕರ್ಮವನ್ನು ಮಾಡಿ ಮುಗಿಸಬೇಕೆಂದು ದೇವರ ಮೇಲೆ ಸರಸರನೆ ನೀರು ಸುರಿದು ಗಂಧತಿಲಕವನ್ನು ಹಚ್ಚುವುದು ಮತ್ತು ಯಾವುದಾದರೊಂದು ಹೂವನ್ನು ಅರ್ಪಿಸಿ ಊದುಬತ್ತಿಯಿಂದ ಬೆಳಗುವುದು ಮತ್ತು ‘ದೇವರ ಪೂಜೆ’ಯಾಯಿತು ಎಂದು ತಿಳಿದುಕೊಳ್ಳುವುದು; ಈ ರೀತಿ ಇಂದು ಎಲ್ಲೆಡೆ ಕಾಣಿಸುತ್ತ್ತಿದೆ. ಎಲ್ಲರ ಪಾಲನೆ- ಪೋಷಣೆಯನ್ನು ಮಾಡುವ ಭಗವಂತನ ಪೂಜೆಯನ್ನು ಈ ರೀತಿ ಮಾಡಿ ಮುಗಿಸುವುದಕ್ಕೆ ದೇವರ ಪೂಜೆ ಎನ್ನಬಹುದೇನು ? ಹೀಗೆ ಮಾಡಿದರೆ ಭಗವಂತನು ನಮ್ಮ ಮೇಲೆ ಕೃಪೆಯನ್ನಾದರೂ ಏಕೆ ಮಾಡಬೇಕು ?

ದೇವರ ಪೂಜೆಯಲ್ಲಿ ಭಗವಂತನ ಬಗ್ಗೆ ಪ್ರೇಮ, ಭಾವವಿದ್ದರೆ ಮಾತ್ರ ಅದು ಭಗವಂತನಿಗೆ ತಲುಪುವುದು

ಹೇಗೆ ನಾವು ಮನೆಗೆ ಬರುವ ಅತಿಥಿಗಳನ್ನು ಆದರದಿಂದ ಸ್ವಾಗತಿಸುತ್ತೇವೆಯೋ ಅದೇ ರೀತಿ ದೇವರನ್ನೂ ಆದರಿಸಿದರೆ ಅಂದರೆ ದೇವರ ಪೂಜೆಯನ್ನು ಯಥಾ ಯೋಗ್ಯವಾಗಿ ಮಾಡಿದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ ಆಶೀರ್ವಾದವನ್ನು ಕೊಡುತ್ತಾನೆ. ತ್ರಿಕಾಲದರ್ಶಿಗಳಾದ ನಮ್ಮ ಋಷಿಮುನಿಗಳು ಧರ್ಮಶಾಸ್ತ್ರದಲ್ಲಿ ಹೇಳಿದಂತೆ ದೇವರ ಪೂಜೆಯನ್ನು ಮಾಡಿದರೆ ಮಾತ್ರ ನಮಗೆ ಅವರ ಸಂಕಲ್ಪಶಕ್ತಿಯ ಲಾಭವು ಸಿಗುತ್ತದೆ. ದೇವರ ಪೂಜೆಯನ್ನು ಧರ್ಮಶಾಸ್ತ್ರಕ್ಕನುಸಾರ ಮಾಡುವಾಗ ಭಕ್ತಿಭಾವಸಹಿತ ಮಾಡುವುದೂ ಅಷ್ಟೇ ಮಹತ್ವದ್ದಾಗಿದೆ. ದೇವರ ಪೂಜೆಯಲ್ಲಿ ಭಗವಂತನ ಬಗ್ಗೆ ಪ್ರೇಮ, ಭಾವವಿದ್ದರೆ ಮಾತ್ರ ಅದು ಭಗವಂತನಿಗೆ ತಲುಪುತ್ತದೆ, ಏಕೆಂದರೆ ಭಗವಂತನಿಗೆ ಭಾವವೇ ಬೇಕಾಗಿರುತ್ತದೆ. ಸಾಮಾನ್ಯ ಭಕ್ತರಲ್ಲಿ ಭಾವವು ತಾನಾಗಿಯೇ ನಿರ್ಮಾಣವಾಗುವುದಿಲ್ಲ; ದೇವರ ಪೂಜೆಯಲ್ಲಿನ ವಿವಿಧ ಕೃತಿಗಳ ಹಿಂದಿನ ಶಾಸ್ತ್ರವನ್ನು ಸರಿಯಾಗಿ ಅರಿತುಕೊಂಡು ಪೂಜೆಯನ್ನು ಮಾಡಿದರೆ, ಮೊದಲು ದೇವರ ಪೂಜೆಯ ಬಗ್ಗೆ, ಆಮೇಲೆ ದೇವರ ಬಗ್ಗೆ ಶ್ರದ್ಧೆಯು ನಿರ್ಮಾಣವಾಗಿ ಅದು ಭಾವದಲ್ಲಿ ರೂಪಾಂತರವಾಗುತ್ತದೆ. ಆದುದರಿಂದ ಈ ಲೇಖನಮಾಲಿಕೆಯಲ್ಲಿ ದೇವರ ಪೂಜೆಯಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ತಿಳಿಸಿ ಹೇಳಲು ಹೆಚ್ಚಿನ ಒತ್ತನ್ನು ನೀಡಲಾಗಿದೆ. ಷೋಡಶೋಪಚಾರಗಳನ್ನು ಮಾಡಲು ಆಗದಿದ್ದರೆ ಪಂಚೋಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಬಹಳಷ್ಟು ಜನರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಅವರಿಗೆ ಪಂಚೋಪಚಾರ ಪೂಜೆಯ ಮಾಹಿತಿಯನ್ನು ತಿಳಿದುಕೊಳ್ಳಲು ಸುಲಭವಾಗಬೇಕೆಂದು ಮೊದಲು ಪಂಚೋಪಚಾರ ಪೂಜೆಯ ಮಾಹಿತಿ, ಆಮೇಲೆ ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ.

ದೇವತೆಯ ಆವಾಹನೆಯನ್ನು ಮಾಡುವಾಗ ಮೂರ್ತಿಯ ಮೇಲೆ ಅಕ್ಷತೆ ಅಥವಾ ತುಳಸಿ ಎಲೆಯನ್ನು ಏಕೆ ಅರ್ಪಿಸಬೇಕು, ಅರ್ಘ್ಯವನ್ನು ನೀಡುವಾಗ ನೀರಿನೊಂದಿಗೆ ಗಂಧ, ಹೂವು ಮತ್ತು ಅಕ್ಷತೆಯನ್ನು ಏಕೆ ಅರ್ಪಿಸಬೇಕು, ದೇವತೆಗೆ ಅಭಿಷೇಕವನ್ನು ಮಾಡುವಾಗ ಸುಗಂಧದ್ರವ್ಯವನ್ನು ಏಕೆ ಉಪಯೋಗಿಸಬೇಕು, ದೇವತೆಗೆ ಮೊದಲು ಗಂಧವನ್ನು ಹಚ್ಚಿ ನಂತರ ಅರಶಿನ- ಕುಂಕುಮವನ್ನು ಏಕೆ ಅರ್ಪಿಸಬೇಕು, ಧೂಪ ವನ್ನು ತೋರಿಸುವಾಗ ಅದನ್ನು ಕೈಯಿಂದ ಏಕೆ ಹರಡಬಾರದು, ದೇವತೆಗೆ ನೈವೇದ್ಯ ವನ್ನು ಅರ್ಪಿಸುವ ಎಲೆಯನ್ನು ಯಾವ ರೀತಿ ಇಡಬೇಕು ಮುಂತಾದ ಅನೇಕ ವಿಷಯಗಳ ಬುದ್ಧಿಯ ಆಚೆಗಿನ ಶಾಸ್ತ್ರೀಯ ಮಾಹಿತಿಯನ್ನು ಈ ಲೇಖನಮಾಲಿಕೆಯಲ್ಲಿ ನೀಡಲಾಗಿದೆ. ಅದರೊಂದಿಗೆ ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು, ದೇವತೆಗೆ ಹೂವುಗಳನ್ನು ಅರ್ಪಿಸುವಾಗ ಅವುಗಳನ್ನು ವಿಶಿಷ್ಟ ಸಂಖ್ಯೆ ಯಲ್ಲಿ ಮತ್ತು ವಿಶಿಷ್ಟ ರಚನೆಯಲ್ಲಿ ಏಕೆ ಅರ್ಪಿಸಬೇಕು ಮತ್ತು ಅದರ ಹಿಂದಿನ ಶಾಸ್ತ್ರ ವೇನು, ದೇವತೆಗೆ ಎಷ್ಟು ಊದುಬತ್ತಿಗಳಿಂದ ಬೆಳಗಬೇಕು ಮುಂತಾದ ಹೊಸ ಜ್ಞಾನವನ್ನೂ ಈ ಲೇಖನಮಾಲಿಕೆಯಲ್ಲಿ ನೀಡಲಾಗುತ್ತದೆ.
ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಯಾವುದೇ ಪಂಥದಲ್ಲಿ ಧಾರ್ಮಿಕ ವಿಧಿಗಳ ಬಗ್ಗೆ ಇಷ್ಟು ಆಳವಾದ ಶಾಸ್ತ್ರೀಯ ಮಾಹಿತಿಯು ಉಪಲಬ್ಧವಿಲ್ಲ. ಇದರಿಂದಲೇ ಹಿಂದೂ ಧರ್ಮದ ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ.

ಎಲ್ಲ ಭಕ್ತರು ಈ ಲೇಖನಮಾಲಿಕೆಯಲ್ಲಿ ನೀಡಿರುವ ಶಾಸ್ತ್ರವನ್ನು ಅರಿತುಕೊಂಡು, ಅವರ ದೇವರ ಪೂಜೆಯು ಭಾವಪೂರ್ಣ ವಾಗಿ ಆಗಲಿ ಮತ್ತು ಅವರಿಗೆ ಆದಷ್ಟು ಹೆಚ್ಚು ಈಶ್ವರನ ಕೃಪಾಶೀರ್ವಾದವು ಲಭಿಸಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ.

(ಪಂಚೋಪಚಾರ ಮತ್ತು ಷೋಡಶೋ ಪಚಾರಗಳ ಕುರಿತಾದ ಈ ಲೇಖನಮಾಲಿಕೆಯಲ್ಲಿ ನೀಡಲಾಗುವ ಎಲ್ಲ ವಿಷಯಗಳನ್ನು ಸನಾತನ ಪ್ರಕಾಶಿಸಿರುವ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ವಾಚಕರು ಈ ಗ್ರಂಥದ ಲಾಭವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.)

3 thoughts on “ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ”

  1. ದೇವರ ಪೂಜೆಯಲ್ಲಿ ಅಕ್ಷತೆಯನ್ನು ಏಕೆ ಉಪಯೋಗಿಸುತ್ತೆವೇ?

    Reply
    • ನಮಸ್ಕಾರ
      ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ನಿಮ್ಮ ಪ್ರಶ್ನೆಯ ಉತ್ತರ ಹಾಗೆಯೇ ಪೂಜೆಯಲ್ಲಿ ಉಪಯೋಗಿಸುವ ಕೆಲವು ಪೂಜಾಸಾಮಗ್ರಿಗಳ ವಿಷಯದಲ್ಲಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ದಯವಿಟ್ಟು ಕ್ಲಿಕ್ ಮಾಡಿ – https://www.sanatan.org/kannada/91399.html

      Reply

Leave a Comment