ದೇವಸ್ಥಾನದಲ್ಲಿ ದರ್ಶನ ಪಡೆಯುವ ಪದ್ಧತಿ

Article also available in :

ಆಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ಪದ್ಧತಿಯಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದರೆ, ಈಶ್ವರನಿಂದ ಪ್ರಕ್ಷೇಪಿತವಾಗುವ ಚೈತನ್ಯದ ಮತ್ತು ಆತನ ಕೃಪಾಪ್ರಸಾದದ ಪರಿಪೂರ್ಣ ಲಾಭವು ನಮಗೆ ದೊರೆಯುತ್ತದೆ. ಆ ದೃಷ್ಟಿಯಿಂದ ದೇವಸ್ಥಾನದಲ್ಲಿ ದರ್ಶನ ಪಡೆಯುವ ಹಂತಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Contents

೧. ದೇವಸ್ಥಾನಕ್ಕೆ ಹೊರಡುವ ಮೊದಲು ಮನೆಯಲ್ಲಿ ಮಾಡಬೇಕಾದ ಪ್ರಾರ್ಥನೆ

‘ಹೇ ….. (ದೇವತೆಯ ಹೆಸರನ್ನು ಹೇಳಬೇಕು), ನೀನು ನೀಡಿದ ಪ್ರೇರಣೆಯಿಂದಲೇ ನಾನು ನಿನ್ನ ದರ್ಶನಕ್ಕೆ ಬರಲು ಸಾಧ್ಯವಾಗುತ್ತಿದೆ. ನನಗೆ ನಿನ್ನ ಭಾವಪೂರ್ಣ ದರ್ಶನವಾಗಲಿ.’

೨. ದೇವಸ್ಥಾನದ ಹತ್ತಿರ ತಲುಪಿದ ಮೇಲೆ ವ್ಯಕ್ತಪಡಿಸಬೇಕಾದ ಕೃತಜ್ಞತೆ

‘ಹೇ ….. (ದೇವತೆಯ ಹೆಸರನ್ನು ಹೇಳಬೇಕು), ನೀನೇ ನನಗೆ ನಿನ್ನ ದರ್ಶನದ ಅನುವು ಮಾಡಿ ಕೊಟ್ಟಿದ್ದೀಯೆ, ಇದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.’

೩. ದೇವಸ್ಥಾನ ಪ್ರವೇಶಿಸುವ ಮೊದಲು ಮಾಡಬೇಕಾದ ಕೃತಿಗಳು

೩ ಅ. ತಮ್ಮ ಹತ್ತಿರವಿರುವ ಚರ್ಮದ ವಸ್ತುಗಳನ್ನು ತೆಗೆದಿಡಬೇಕು (ದೇವಸ್ಥಾನದೊಳಗೆ ತೆಗೆದುಕೊಂಡು ಹೋಗಬಾರದು).

೩ ಆ. ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಅಥವಾ ಮೆಟ್ಟುಗಳನ್ನು ಧರಿಸಿ ಹೋಗಬಾರದು; ಅವುಗಳನ್ನು ದೇವಸ್ಥಾನದ ಕ್ಷೇತ್ರದಿಂದ ಹೊರಗೆ ಕಳಚಿಡಬೇಕು.

೩ ಇ. ಕಾಲು ತೊಳೆಯುವ ಸೌಲಭ್ಯವಿದ್ದರೆ ಕಾಲು ತೊಳೆಯಬೇಕು.

೩ ಈ. ಕಾಲು ತೊಳೆದ ಮೇಲೆ ಕೈಯಲ್ಲಿ ನೀರು ತೆಗೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’, ಈ ಶ್ಲೋಕ ಬರುವವರು ಅದನ್ನು ಮೂರು ಬಾರಿ ಹೇಳಿ ಅಥವಾ ‘ಶ್ರೀ ಪುಂಡರೀಕಾಕ್ಷಾಯ ನಮ:’ ಎಂದು ಮೂರು ಬಾರಿ ಉಚ್ಚರಿಸಿ ಸ್ವಂತ ಶರೀರದ ಮೇಲೆ ಮೂರು ಬಾರಿ ನೀರನ್ನು ಚಿಮುಕಿಸಿಕೊಳ್ಳಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.

೩ ಉ. ಕುತ್ತಿಗೆಯ ಸುತ್ತ ಯಾವುದೇ ವಸ್ತ್ರವನ್ನು ಸುತ್ತಿಕೊಳ್ಳಬಾರದು.

೩ ಊ. ಯಾವುದಾದರೊಂದು ದೇವಸ್ಥಾನ ಪ್ರವೇಶಿಸುವ ಮೊದಲು ಪುರುಷರು ಅಂಗಿ ಅಥವಾ ಶರ್ಟ್ ತೆಗೆದಿಡುವ ಪದ್ಧತಿ ಇದ್ದರೆ, ಆ ಪದ್ಧತಿಯನ್ನು ಪಾಲಿಸಬೇಕು. (ದೇವಸ್ಥಾನದ ಸಾತ್ತ್ವಿಕತೆಯನ್ನು ಕಾಪಾಡಲು ಇಂತಹ ಪದ್ಧತಿ ಏಕಿದೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ)

೩ ಋ. ದೇವಸ್ಥಾನಕ್ಕೆ ಹೋಗುವಾಗ ಪುರುಷ ಭಕ್ತರು ತಲೆಯ ಮೇಲೆ ಟೋಪಿ ಧರಿಸಬೇಕು ಅಥವಾ ತಲೆಗೆ ವಸ್ತ್ರವನ್ನು ಕಟ್ಟಿಕೊಳ್ಳಬೇಕು; ಸ್ತ್ರೀ ಭಕ್ತರು ತಲೆಯ ಮೇಲಿಂದ ಸೆರಗನ್ನು ಹಾಕಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಪ್ರದಾಯಗಳನ್ನು ಪಾಲಿಸಬೇಕು.

೩ ಎ. ದೇವಸ್ಥಾನದ ಪ್ರವೇಶದ್ವಾರ ಮತ್ತು ಗರುಡಧ್ವಜ ಅಥವಾ ಅಲ್ಲಿ ಸ್ಥಾಪಿಸಲಾದ ದೇವತೆಗೆ ನಮಸ್ಕರಿಸಬೇಕು.

೩ ಏ. ದೇವಸ್ಥಾನವನ್ನು ಪ್ರವೇಶಿಸುವಾಗ ಮಾಡಬೇಕಾದ ಪ್ರಾರ್ಥನೆಗಳು

೧. ದೇವಸ್ಥಾನವನ್ನು ಪ್ರವೇಶಿಸುವಾಗ, ‘ಹೇ ….. (ದೇವತೆಯ ಹೆಸರನ್ನು ಹೇಳಬೇಕು), ನನ್ನ ಲಕ್ಷ್ಯವು ಅತ್ತಿತ್ತ ಹೋಗದೇ ನಾಮಜಪದ ಕಡೆಯೇ ಇರಲಿ. ನಿನ್ನ ಕೃಪೆಯಿಂದ ನನಗೆ ಇಲ್ಲಿನ ಸಾತ್ತ್ವಿಕತೆಯು ಹೆಚ್ಹೆಚ್ಚು ಸಿಗುವಂತಾಗಲಿ’ ಎಂದು ಪ್ರಾರ್ಥಿಸಬೇಕು.

೨. ‘ಹೇ …. (ದೇವತೆಯ ಹೆಸರನ್ನು ಹೇಳಬೇಕು), ನಿನ್ನ ಕೃಪೆಯಿಂದ ನಾನು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದೇನೆ. ನಿನ್ನ ದರ್ಶನದ ಲಾಭವು ನನಗೆ ದೊರೆಯಲಿ. ದೇವಸ್ಥಾನದಲ್ಲಿ ನನ್ನ ನಾಮಸ್ಮರಣೆಯು ಹೆಚ್ಚಾಗಲಿ. ಇಲ್ಲಿನ ಸಾತ್ತ್ವಿಕತೆಯು ನನಗೆ ದೊರೆಯಲಿ’ ಎಂದು ಪ್ರಾರ್ಥಿಸಬೇಕು.

೪. ದೇವಸ್ಥಾನದ ಕಲಶದ ದರ್ಶನ

ದೇವಸ್ಥಾನದ ಆವರಣಕ್ಕೆ ಬಂದ ಮೇಲೆ ಅಲ್ಲಿಂದ ದೇವಸ್ಥಾನದ ಕಲಶದ ದರ್ಶನ ಪಡೆಯಬೇಕು ಮತ್ತು ಕಲಶವನ್ನು ನಮಸ್ಕರಿಸಬೇಕು.

೫. ಸರತಿಯ ಸಾಲಿನಲ್ಲಿ ನಿಂತಿರುವಾಗ ನಾಮ ಜಪಿಸಿ

ದೇವಸ್ಥಾನದಲ್ಲಿ ಜನದಟ್ಟಣೆ ಇದ್ದರೆ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು. ದೇವತೆಯ ದರ್ಶನಕ್ಕಾಗಿ ಹೋಗುವಾಗ ನಾಮಜಪ ಮಾಡುತ್ತಿರಬೇಕು. ಇದರಿಂದ ಸತ್ತ್ವಗುಣವು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಸಾಲಿನಲ್ಲಿ ನಿಂತಿರುವಾಗ ಹಿಂದೆ-ಮುಂದೆ ಇರುವ ಜನರೊಂದಿಗೆ ಹರಟೆ ಹೊಡೆಯುವುದನ್ನು ತಪ್ಪಿಸಬೇಕು.

೬. ದೇವಸ್ಥಾನದ ಆವರಣದಿಂದ ಸಭಾಮಂಟಪದತ್ತ ಹೋಗುವುದು

೬ ಅ. ಆವರಣದಿಂದ ಸಭಾಮಂಟಪದತ್ತ ಹೋಗುವಾಗ ಕೈಗಳನ್ನು ನಮಸ್ಕಾರದ ಮುದ್ರೆಯಲ್ಲಿ ಇಟ್ಟುಕೊಳ್ಳಬೇಕು. (ಎರಡು ಕೈಗಳನ್ನು ಜೋಡಿಸಿ ಅವುಗಳನ್ನು ಅನಾಹತ ಚಕ್ರದ ಹತ್ತಿರ ಶರೀರದಿಂದ ಸ್ವಲ್ಪ ದೂರದಲ್ಲಿ ಇಟ್ಟುಕೊಳ್ಳಬೇಕು.)

೬ ಆ. ‘ಸಾಕ್ಷಾತ ದೇವತೆಯನ್ನು ಭೇಟಿಯಾಗಲು ಹೋಗುತ್ತಿದ್ದೇವೆ’ ಎಂಬ ಭಾವ ಇಟ್ಟುಕೊಳ್ಳಬೇಕು. ‘ಆ ದೇವತೆಯು ನಮ್ಮತ್ತ ನೋಡುತ್ತಿದ್ದಾರೆ’ ಎಂಬ ಭಾವವನ್ನೂ ಇಟ್ಟುಕೊಳ್ಳಬೇಕು.

೭. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವುದು

ದೇವಸ್ಥಾನದ ಮೊದಲ ಮೆಟ್ಟಿಲಿಗೆ ಎರಡೂ ಕೈಗಳನ್ನು ಹಚ್ಚಬೇಕು ಮತ್ತು ನಂತರ ಆ ಕೈಗಳನ್ನು ತಲೆಯ ಮೇಲಿಂದ ಸವರಿಸಿಕೊಳ್ಳಬೇಕು. ವಯಸ್ಸಾದ ಕಾರಣದಿಂದ ಅಥವಾ ಅನಾರೋಗ್ಯದಿಂದ ಮೆಟ್ಟಿಲಿಗೆ ಎರಡೂ ಕೈ ಹಚ್ಚಿ ನಮಸ್ಕರಿಸಲು ಸಾಧ್ಯವಿಲ್ಲದಿದ್ದರೆ, ಅಂತಹವರು ದೇವತೆಯ ಕ್ಷಮೆಯಾಚಿಸಿ ಭಾವಪೂರ್ಣವಾಗಿ ಮೆಟ್ಟಿಲುಗಳನ್ನು ಹತ್ತಿದರೂ ಅವರಿಗೆ ಆವಶ್ಯಕ ಪ್ರಮಾಣದಲ್ಲಿ ಚೈತನ್ಯದ ಲಾಭವಾಗುತ್ತದೆ.

೮. ಸಭಾಮಂಟಪವನ್ನು ಪ್ರವೇಶಿಸುವುದು

೮ ಅ. ಸಭಾಮಂಟಪವನ್ನು ಪ್ರವೇಶಿಸುವ ಮೊದಲು ದೂರದಿಂದ ಸಭಾಮಂಟಪದ ದ್ವಾರಕ್ಕೆ ನಮಸ್ಕರಿಸಬೇಕು.

೮ ಆ. ಸಭಾಮಂಟಪದ ಮೊದಲ ಮೆಟ್ಟಿಲಿಗೆ ಎರಡೂ ಕೈಗಳನ್ನು ಹಚ್ಚಬೇಕು ಮತ್ತು ನಂತರ ಆ ಕೈಗಳನ್ನು ತಲೆಯ ಮೇಲಿಂದ ಸವರಿಸಿಕೊಳ್ಳಬೇಕು.

೮ ಇ. ಸಭಾಮಂಟಪದಲ್ಲಿ ಹೆಜ್ಜೆ ಇಡುವಾಗ ‘ಹೇ ದೇವತೆ, ನಿನ್ನ ವಿಗ್ರಹದಿಂದ ಪ್ರಕ್ಷೇಪಿತವಾಗುವ ಚೈತನ್ಯದ ಪೂರ್ಣ ಲಾಭವು ನನಗೆ ದೊರೆಯಲಿ’ ಎಂದು ಪ್ರಾರ್ಥಿಸಬೇಕು.

೯. ಸಭಾಮಂಟಪದಿಂದ ಗರ್ಭಗುಡಿಯತ್ತ ಹೋಗುವುದು

ಸಭಾಮಂಟಪದ ಎಡಭಾಗದಿಂದ ನಡೆಯುತ್ತಾ ಗರ್ಭಗುಡಿಯವರೆಗೆ ಹೋಗಬೇಕು. ದೇವರ ದರ್ಶನವಾದ ನಂತರ ಸಭಾಮಂಟಪದ ಬಲಭಾಗದಿಂದ ಹೊರಗೆ ಬರಬೇಕು. (ದೇವಸ್ಥಾನದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪ್ರವೇಶಿಸುವ-ನಿರ್ಗಮಿಸುವ ನಿಯಮಗಳಿದ್ದರೆ ಅವುಗಳನ್ನು ಪಾಲಿಸಬೇಕು.) ಗಮನವೆಲ್ಲ ನಾಮಜಪದ ಮೇಲಿರಬೇಕು.

೧೦. ದೇವತೆಯ ದರ್ಶನ ಪಡೆಯುವ ಮೊದಲು ಮಾಡಬೇಕಾದ ಕೃತಿಗಳು

೧೦ ಅ. ದೇವಸ್ಥಾನದ ಗಂಟೆಯನ್ನು ಬಾರಿಸುವಾಗ ಅತ್ಯಂತ ಮಂಜುಳ ನಾದದಲ್ಲಿ ಬಾರಿಸಬೇಕು. ಆ ಸಮಯದಲ್ಲಿ ‘ಗಂಟಾನಾದದಿಂದ ದೇವತೆಗಳ ಆಹ್ವಾನ ಮತ್ತು ಅನಿಷ್ಟ ಶಕ್ತಿಗಳ ನಿವಾರಣೆಯಾಗುತ್ತಿದೆ’ ಎಂಬ ಭಾವ ಇಟ್ಟುಕೊಳ್ಳಬೇಕು.

೧೦ ಆ. ಶಿವನ ದೇವಸ್ಥಾನದಲ್ಲಿ ಶಿವಲಿಂಗದ ದರ್ಶನ ಪಡೆಯುವ ಮೊದಲು ನಂದಿಯ ಎರಡು ಕೊಂಬುಗಳಿಗೆ ಕೈ ಹಚ್ಚಿ ನಂದಿಯ ದರ್ಶನ ಪಡೆಯಬೇಕು. ಇದನ್ನು ‘ಶೃಂಗದರ್ಶನ’ ಎಂದು ಕರೆಯುತ್ತಾರೆ.

ಶೃಂಗದರ್ಶನದ ಪದ್ಧತಿ

ನಂದಿಯ ಬಲಭಾಗದಲ್ಲಿ ಕುಳಿತು ಅಥವಾ ನಿಂತು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು. ಬಲಗೈಯ ತೋರುಬೆರಳು ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು. ಎರಡು ಕೊಂಬುಗಳು ಮತ್ತು ಅವುಗಳ ಮೇಲಿಟ್ಟಿರುವ ಬೆರಳುಗಳ ನಡುವಿನ ಖಾಲಿ ಜಾಗದಿಂದ (ಟೊಳ್ಳಿನಿಂದ) ಶಿವಲಿಂಗವನ್ನು ನೋಡಬೇಕು.

೧೧. ದೇವತೆಯ ವಿಗ್ರಹದ ದರ್ಶನ ಪಡೆಯುವಾಗ ಮಾಡಬೇಕಾದ ಕೃತಿಗಳು

೧೧ ಅ. ದರ್ಶನ ಪಡೆಯಲು ದೇವತೆಯ ವಿಗ್ರಹ ಮತ್ತು ಅದರ ಮುಂದಿರುವ ಆಮೆಯ ಪ್ರತಿಕೃತಿಯ ನಡುವೆ, ಹಾಗೆಯೇ ಶಿವನ ದೇವಸ್ಥಾನದಲ್ಲಿ ಶಿವಲಿಂಗ ಮತ್ತು ಅದರ ಮುಂದಿರುವ ನಂದಿಯ ಪ್ರತಿಕೃತಿಯ ನಡುವೆ ನಿಲ್ಲದೆ ಅಥವಾ ಕುಳಿತುಕೊಳ್ಳದೆ, ಅವುಗಳನ್ನು ಜೋಡಿಸುವ ರೇಖೆಯ ಪಕ್ಕದಲ್ಲಿ ನಿಲ್ಲಬೇಕು.

೧೧ ಆ. ದರ್ಶನ ಪಡೆಯುವ ಮೊದಲ ಹಂತದಲ್ಲಿ ದೇವತೆಯ ಚರಣಗಳತ್ತ ದೃಷ್ಟಿಯನ್ನಿಟ್ಟು, ನತಮಸ್ತಕನಾಗಿ ‘ಅಹಂ ಲಯವಾಗಲಿ’ ಎಂದು ದೇವತೆಗೆ ಪ್ರಾರ್ಥನೆ ಸಲ್ಲಿಸಬೇಕು. ಎರಡನೇ ಹಂತದಲ್ಲಿ ದೇವತೆಯ ಎದೆಯ ಹತ್ತಿರ, ಅಂದರೆ ಅನಾಹತ ಚಕ್ರದ ಹತ್ತಿರ ಮನಸ್ಸನ್ನು ಏಕಾಗ್ರಗೊಳಿಸಿ ದೇವತೆಯನ್ನು ಪ್ರಾರ್ಥನೆ ಸಲ್ಲಿಸಬೇಕು. ದರ್ಶನದ ಮೂರನೇ ಹಾಗೂ ಕೊನೆಯ ಹಂತದಲ್ಲಿ ದೇವತೆಯ ಕಣ್ಣುಗಳನ್ನು ನೋಡಬೇಕು ಮತ್ತು ದೇವತೆಯ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು.

೧೧ ಇ. ‘ದೇವತೆಯ ಚರಣಗಳಲ್ಲಿ ಲೀನವಾಗುತ್ತಿದ್ದೇವೆ’ ಎಂಬ ಭಾವದಿಂದ ದೇವತೆಗೆ ನಮಸ್ಕಾರ ಸಲ್ಲಿಸಬೇಕು. ನಮಸ್ಕರಿಸುವಾಗ ಪುರುಷರು ತಲೆ ಮುಚ್ಚಿರಬಾರದು (ಟೋಪಿ ತೆಗೆಯಬೇಕು); ಆದರೆ ಸ್ತ್ರೀಯರು ತಲೆ ಮುಚ್ಚಿಕೊಳ್ಳಬೇಕು.

೧೨. ದೇವತೆಯ ದರ್ಶನವಾದ ನಂತರ ಮಾಡಬೇಕಾದ ಕೃತಿಗಳು

ದೇವಸ್ಥಾನಕ್ಕೆ ಹೋದಾಗ ಹೆಚ್ಹೆಚ್ಚು ಈಶ್ವರೀ ತತ್ತ್ವ ಗ್ರಹಿಸುವಂತಾಗಬೇಕು ಎಂದು ಪ್ರಾಚೀನ ದೇವಸ್ಥಾನಗಳ ರಚನೆಯು ಆದರ್ಶವಾಗಿರುತ್ತಿತ್ತು. ಇಂತಹ ಆದರ್ಶ ಪದ್ಧತಿಯ ದೇವಸ್ಥಾನಗಳಲ್ಲಿ ಸಭಾಮಂಟಪ ಮತ್ತು ಗರ್ಭಗುಡಿಯನ್ನು ಜೋಡಿಸುವ ‘ಗರ್ಭಾಗಾರ’, ಹಾಗೆಯೇ ಗರ್ಭಗುಡಿಯ ಬಲಭಾಗದಲ್ಲಿ ‘ಯಜ್ಞಕುಂಡ’ ಮತ್ತು ಎಡಭಾಗದಲ್ಲಿ ‘ಸೂರ್ಯನಾರಾಯಣನ ದೇವಸ್ಥಾನ’ ಇರುತ್ತಿತ್ತು. ಕೆಲವು ರಾಜ್ಯಗಳಲ್ಲಿ ಇಂದಿಗೂ ಇಂತಹ ದೇವಸ್ಥಾನಗಳನ್ನು ನೋಡಬಹುದು.

೧೨ ಅ. ಗರ್ಭಾಗಾರದಲ್ಲಿರುವ ತಮ್ಮ ಬಲಗೈ ಕಡೆಯ ದ್ವಾರದಿಂದ ಹೊರಬಂದು ಅಗ್ನಿದೇವತೆಯ, ಅಂದರೆ ಯಜ್ಞಕುಂಡವನ್ನು ಸ್ಥಾಪಿಸಿದ ಮಂಟಪದ (ಇದ್ದರೆ) ದರ್ಶನ ಪಡೆಯಬೇಕು.

೧೨ ಆ. ಪುನಃ ಗರ್ಭಾಗಾರಕ್ಕೆ ಬಂದು ತಮ್ಮ ಎಡಗೈ ಕಡೆಯ ದ್ವಾರದಿಂದ ಹೊರಬಂದು ಸೂರ್ಯನಾರಾಯಣನ ವಿಗ್ರಹದ (ಇದ್ದರೆ) ದರ್ಶನ ಪಡೆಯಬೇಕು.

೧೨ ಇ. ನಂತರ ಗರ್ಭಾಗಾರಕ್ಕೆ ಬಂದು ಪುನಃ ದೇವತೆಯ ದರ್ಶನ ಪಡೆದು ಗರ್ಭಾಗಾರದ ಮುಖ್ಯ ದ್ವಾರದಿಂದ ಹೊರಬರಬೇಕು.

೧೩. ದೇವತೆಗೆ ಪ್ರದಕ್ಷಿಣೆ ಹಾಕುವುದು

೧೩ ಅ. ಪ್ರದಕ್ಷಿಣೆ ಹಾಕುವ ಮೊದಲು ಗರ್ಭಗುಡಿಯ ಹೊರಭಾಗದ ಎಡಭಾಗದಲ್ಲಿ ನಿಲ್ಲಬೇಕು ಮತ್ತು ನಂತರ ಪ್ರದಕ್ಷಿಣೆಯನ್ನು ಆರಂಭಿಸಬೇಕು. (ಪ್ರದಕ್ಷಿಣೆ ಮುಗಿದ ನಂತರ ಬಲಭಾಗದಲ್ಲಿ ನಿಂತು ದೇವತೆಯ ದರ್ಶನ ಪಡೆಯಬೇಕು.)

೧೩ ಆ. ಪ್ರದಕ್ಷಿಣೆ ಹಾಕುವ ಮೊದಲು ‘ಹೇ ….. (ದೇವತೆಯ ಹೆಸರನ್ನು ಉಚ್ಚರಿಸಬೇಕು), ನಿನ್ನ ಕೃಪೆಯಿಂದ ಪ್ರದಕ್ಷಿಣೆ ಹಾಕುವಾಗ ಬೀಳುವ ನನ್ನ ಪ್ರತಿಯೊಂದು ಹೆಜ್ಜೆಯೊಂದಿಗೆ ನನ್ನ ಪೂರ್ವಜನ್ಮದ ಪಾಪಗಳು ಸುಟ್ಟು ಹೋಗಲಿ ಮತ್ತು ನಿನ್ನಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಹೆಚ್ಚು ಗ್ರಹಣವಾಗಲಿ’ ಎಂದು ಪ್ರಾರ್ಥಿಸಬೇಕು.

೧೩ ಇ. ಕೈ ಮುಗಿದು ನಾಮಜಪ ಮಾಡುತ್ತಾ ಮಧ್ಯಮ ವೇಗದಲ್ಲಿ ಪ್ರದಕ್ಷಿಣೆ ಹಾಕಬೇಕು.

೧೩ ಈ. ಪ್ರದಕ್ಷಿಣೆ ಹಾಕುವಾಗ ಗರ್ಭಗುಡಿಯ ಹೊರಭಾಗವನ್ನು ಸ್ಪರ್ಶಿಸಬಾರದು.

೧೩ ಉ. ಪ್ರದಕ್ಷಿಣೆ ಹಾಕುವಾಗ ದೇವತೆಯ ಹಿಂಭಾಗದಲ್ಲಿ ನಿಂತು ನಮಸ್ಕರಿಸಬೇಕು.

೧೩ ಊ. ಸಾಮಾನ್ಯವಾಗಿ ಪುರುಷ ದೇವತೆಗಳಿಗೆ ಸಮ ಸಂಖ್ಯೆಯಲ್ಲಿ (ಉದಾ. ೨, ೪, ೬, ೮) ಮತ್ತು ದೇವಿಗಳಿಗೆ ಬೆಸ ಸಂಖ್ಯೆಯಲ್ಲಿ (ಉದಾ. ೧, ೩, ೫, ೭) ಪ್ರದಕ್ಷಿಣೆ ಹಾಕಬೇಕು.

೧೩ ಋ. ಪ್ರತಿ ಪ್ರದಕ್ಷಿಣೆಯ ನಂತರ ದೇವತೆಯ ಮುಂದೆ ನಿಂತು ನಮಸ್ಕರಿಸಿಯೇ ಮುಂದಿನ ಪ್ರದಕ್ಷಿಣೆ ಹಾಕಬೇಕು.

೧೪. ದೇವತೆಗೆ ಹಣ, ತೆಂಗಿನಕಾಯಿ ಇತ್ಯಾದಿ ದಾನ ಮಾಡುವುದು

ದೇವತೆಗೆ ಅರ್ಪಿಸುವ ವಸ್ತುವನ್ನು ವಿಗ್ರಹದ ಮೈ ಮೇಲೆ ಹಾಕದೆ ವಿಗ್ರಹದ ಚರಣಗಳಲ್ಲಿ ಅರ್ಪಿಸಬೇಕು. ವಿಗ್ರಹ ದೂರವಿದ್ದರೆ, ‘ವಿಗ್ರಹದ ಚರಣಗಳಲ್ಲಿ ಅರ್ಪಿಸುತ್ತಿದ್ದೇವೆ’ ಎಂಬ ಭಾವವಿಟ್ಟು ಗರ್ಭಗುಡಿಯ ಮುಂದಿಟ್ಟಿರುವ ತಟ್ಟೆಯಲ್ಲಿ ಇಡಬೇಕು.

೧೫. ತೀರ್ಥ ಮತ್ತು ಪ್ರಸಾದ ಪಡೆಯುವುದು

೧೫ ಅ. ತೀರ್ಥ

ಪ್ರದಕ್ಷಿಣೆಯ ನಂತರ ಬಲಗೈ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಕುಡಿದ ಮೇಲೆ, ಕೈಯ ಮಧ್ಯದ ಬೆರಳು ಮತ್ತು ಅನಾಮಿಕಾ ಬೆರಳುಗಳ ತುದಿಗಳನ್ನು ಮುಂಗೈಗೆ ತಾಕಿಸಿ ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ಹಚ್ಚಿಕೊಳ್ಳಬೇಕು. ನಂತರ ಆ ಬೆರಳುಗಳನ್ನು ಹೊಸೆಯುತ್ತಾ ತಲೆಯಿಂದ ಮೇಲ್ಮುಖವಾಗಿ ಬ್ರಹ್ಮರಂಧ್ರದವರೆಗೆ ಹಚ್ಚಬೇಕು.

೧೫ ಆ. ಪ್ರಸಾದಗ್ರ

ಪ್ರಸಾದವನ್ನು ಯಾವಾಗಲೂ ಬಲಗೈಯಲ್ಲೇ ಪಡೆಯಬೇಕು.

ಪ್ರಸಾದ ಪಡೆಯಲು ನಮ್ರತೆಯಿಂದ ಬಗ್ಗಬೇಕು.

ಪ್ರಸಾದದ ಕಡೆಗೆ ನೋಡುತ್ತಾ ತಮ್ಮ ಉಪಾಸ್ಯ ದೇವತೆ ಅಥವಾ ಮುಂದಿರುವ ದೇವತೆಯನ್ನು ಸ್ಮರಿಸಬೇಕು.

ದೇವಸ್ಥಾನದಲ್ಲೇ ಕುಳಿತು ಮೊದಲು ಸ್ವಲ್ಪ ಸಮಯ ನಾಮಜಪ ಮಾಡಬೇಕು ಮತ್ತು ನಂತರ ಪ್ರಸಾದವನ್ನು ಸಾಧ್ಯವಿದ್ದಷ್ಟು ದೇವಸ್ಥಾನದಲ್ಲೇ ಕುಳಿತು ಸ್ವೀಕರಿಸಬೇಕು.

ಪ್ರಸಾದ ಪಡೆದ ತಕ್ಷಣ ನೇರವಾಗಿ ನಿಂತುಕೊಳ್ಳದೆ ನಿಧಾನವಾಗಿ ನೇರವಾಗಬೇಕು. ಇದರಿಂದ ಪ್ರಸಾದ ಪಡೆಯುವಾಗ ನಿರ್ಮಾಣವಾದ ಸಾತ್ತ್ವಿಕತೆಯು ಶರೀರದಲ್ಲಿ ಹೆಚ್ಚು ಕಾಲ ಉಳಿಯುತ್ತದೆ.

೧೬. ದೇವಸ್ಥಾನದಿಂದ ಹೊರಡುವಾಗ ಮಾಡಬೇಕಾದ ಕೃತಿಗಳು

೧೬ ಅ. ದೇವಸ್ಥಾನದಿಂದ ಹೊರಡುವಾಗ ದೇವತೆಗೆ ಇನ್ನೊಮ್ಮೆ ಕೈಮುಗಿದು ‘ನನ್ನ ಮೇಲೆ ಸದಾ ನಿನ್ನ ಕೃಪಾದೃಷ್ಟಿಯಿರಲಿ’ ಎಂದು ಪ್ರಾರ್ಥಿಸಬೇಕು.

೧೬ ಆ. ದೇವಸ್ಥಾನದಲ್ಲಿ ದರ್ಶನ ಪಡೆದು ಹಿಂದಿರುಗುವಾಗ ದೇವರಿಗೆ ಬೆನ್ನು ತೋರಿಸದೆ ಏಳು ಹೆಜ್ಜೆಗಳಷ್ಟು ಹಿಂದೆ ಬರಬೇಕು.

೧೬ ಇ. ದೇವಸ್ಥಾನದಿಂದ ಹೊರಗೆ ಬಂದ ಮೇಲೆ ಆವರಣದಿಂದ ಇನ್ನೊಮ್ಮೆ ಕಲಶವನ್ನು ನೋಡಿ ನಮಸ್ಕರಿಸಿ ನಂತರವೇ ಹೊರಡಬೇಕು.

Leave a Comment