ಮಾಘಸ್ನಾನ : ಮಹತ್ವ, ಕಾಲಾವಧಿ ಮತ್ತು ದಾನ ನೀಡಲು ಯೋಗ್ಯ ವಸ್ತುಗಳು

ಮಾಘಸ್ನಾನ ಮಾಡುವ ಮಹತ್ವ, ಅದರ ಕಾಲಾವಧಿ ಮತ್ತು ಪರ್ವಕಾಲದಲ್ಲಿ ದಾನ ನೀಡಲು ಯೋಗ್ಯ ವಸ್ತು ಇತ್ಯಾದಿಗಳ ಧರ್ಮಶಾಸ್ತ್ರವನ್ನು ಪ್ರಸ್ತುತ ಲೇಖನದಿಂದ ಅರಿತುಕೊಳ್ಳೋಣ.

೧. ಮಾಘಸ್ನಾನ

ಮಾಘಸ್ನಾನವೆಂದರೆ ಮಾಘ ಮಾಸದಲ್ಲಿ ಪವಿತ್ರ ತೀರ್ಥಕ್ಷೇತ್ರಗಳಲ್ಲಿರುವ ಜಲಮೂಲಗಳಲ್ಲಿ ಮಾಡುವ ಸ್ನಾನ. ಬ್ರಹ್ಮಾ, ವಿಷ್ಣು, ಮಹೇಶ, ಆದಿತ್ಯ ಮತ್ತು ಇತರ ಎಲ್ಲ ದೇವತೆಗಳು ಮಾಘ ಮಾಸದಲ್ಲಿ ವಿವಿಧ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುತ್ತಾರೆ. ಆದ್ದರಿಂದ ಈ ಕಾಲದಲ್ಲಿ ಮಾಘ ಸ್ನಾನ ಮಾಡಲು ಹೇಳಲಾಗಿದೆ.

ಗಂಗಾ ಆದಿ ಪವಿತ್ರರನದಿಗಳಲ್ಲಿ ಸ್ನಾನ, ತೀರ್ಥಸ್ನಾನ

೨. ಮಾಘಸ್ನಾನದ ಕಾಲಾವಧಿ

ಪದ್ಮಪುರಾಣ ಮತ್ತು ಬ್ರಹ್ಮಪುರಾಣಕ್ಕನುಸಾರ ಮಾಘಸ್ನಾನದ ಆರಂಭ ಭಾರತೀಯ ಕಾಲಗಣನೆಯ ಶಾಲಿವಾಹನ ಶಕೆ ಸಂವತ್ಸರಕ್ಕನುಸಾರ ಪುಷ್ಯ ಶುಕ್ಲ ಪಕ್ಷ ಏಕಾದಶಿಯಂದು ಆಗುತ್ತದೆ ಮತ್ತು ಅದು ಮಾಘ ಶುಕ್ಲ ಪಕ್ಷ ದ್ವಾದಶಿಯಂದು ಕೊನೆಗೊಳ್ಳುತ್ತದೆ.

ಈಗಿನ ರೂಢಿಗನುಸಾರ ಮಾಘಸ್ನಾನವು ಪುಷ್ಯ ಹುಣ್ಣಿಮೆಗೆ ಆರಂಭವಾಗಿ ಅದು ಮಾಘ ಹುಣ್ಣಿಮೆಗೆ ಮುಕ್ತಾಯವಾಗುತ್ತದೆ. ಆಂಗ್ಲ ಕಾಲಗಣನೆಗನುಸಾರ ಮಾಘಸ್ನಾನವು ಸಾಮಾನ್ಯವಾಗಿ ಜನವರಿ-ಫೆಬ್ರವರಿಯ ಮಧ್ಯದಲ್ಲಿ ಬರುತ್ತದೆ. ಈ ವರ್ಷ ಜನವರಿ 25 ರಿಂದ 24 ಫೆಬ್ರವರಿ 2024 ಈ ಅವಧಿಯಲ್ಲಿ ಮಾಘಸ್ನಾನದ ಕಾಲಾವಧಿಯಾಗಿದೆ.

೩. ಮಾಘಸ್ನಾನದ ಮಹತ್ವ

೩ ಅ. ಮಾಘಸ್ನಾನದಿಂದ ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ ಮತ್ತು ಶರೀರವು ಅರೋಗ್ಯವಂತವಾಗುತ್ತದೆ ! : ಮಾಘ ಮಾಸದಲ್ಲಿ ಪವಿತ್ರ ಜಲಮೂಲಗಳಲ್ಲಿ ಸ್ನಾನಮಾಡುವವರಿಗೆ ಒಂದು ವಿಶೇಷ ಆಧ್ಯಾತ್ಮಿಕ ಶಕ್ತಿ ಪ್ರಾಪ್ತವಾಗುತ್ತದೆ. ‘ಮಾಘಸ್ನಾನವು ಮಾನವನ ಶರೀರದ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ರೋಗಾಣುಗಳನ್ನು ನಾಶ ಮಾಡುತ್ತದೆ ಎಂದು ಮಾಘಸ್ನಾನ ಮಾಡುವ ಭಕ್ತರ ಶ್ರದ್ಧೆ ಇರುತ್ತದೆ.

೩ ಆ. ಮಾಘಸ್ನಾನದಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ! : ಭೌಗೋಲಿಕ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಯಾಗದಲ್ಲಿ ಗಂಗಾ ಮತ್ತು ಯಮುನಾ ಹಾಗೂ ಗುಪ್ತರೂಪದಲ್ಲಿ ಸರಸ್ವತಿ ಈ ಪವಿತ್ರ ನದಿಗಳ ಸಂಗಮವಿದೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ‘ಮಾಘ ಮಾಸದಲ್ಲಿ ಯಾರು ಪ್ರಯಾಗ ಸಂಗಮದಲ್ಲಿ ಅಥವಾ ಗೋದಾವರಿ, ಕಾವೇರಿ ಇವುಗಳಂತಹ ಇತರ ಪವಿತ್ರ ನದಿಗಳಲ್ಲಿ ಭಕ್ತಿಭಾವದಿಂದ ಸ್ನಾನ ಮಾಡುತ್ತಾರೋ, ಅವರು ಪಾಪಗಳಿಂದ ಮುಕ್ತರಾಗುತ್ತಾರೆ’ ಎಂದು ಹೇಳಲಾಗಿದೆ.

೩ ಇ. ಮಾಘಸ್ನಾನದಿಂದ ಸಾಂಸಾರಿಕ ಇಚ್ಛೆಗಳು ಪೂರ್ಣವಾಗುತ್ತದೆ ಮತ್ತು ಮೋಕ್ಷಪ್ರಾಪ್ತಿಯಾಗುತ್ತದೆ ! : ವ್ರತ, ದಾನ ಮತ್ತು ತಪಸ್ಸು ಇವುಗಳಿಗಿಂತ ಮಾಘ ಮಾಸದಲ್ಲಿ ಮಾಡುವ ಸ್ನಾನದಿಂದ ಭಗವಾನ ಶ್ರೀಹರಿಯು ಪ್ರಸನ್ನನಾಗುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಮಾಘಸ್ನಾನ ಮಾಡುವ ವ್ಯಕ್ತಿಯ ಮೇಲೆ ಭಗವಾನ ಶ್ರೀವಿಷ್ಣುವು ಪ್ರಸನ್ನನಾಗುತ್ತಾನೆ. ಶ್ರೀವಿಷ್ಣು ಅವರಿಗೆ ಸುಖ, ಸೌಭಾಗ್ಯ, ಧನ, ಸಂತಾನ ಮತ್ತು ಮೋಕ್ಷವನ್ನು ಪ್ರಧಾನಿಸುತ್ತಾನೆ. ಸಕಾಮಭಾವದಿಂದ ಅಂದರೆ ಸಾಂಸಾರಿಕ ಇಚ್ಛೆಗಳನ್ನು ಪೂರ್ತಿಗೊಳಿಸುವ ಉದ್ದೇಶದಿಂದ ಮಾಘ ಸ್ನಾನ ಮಾಡಿದರೆ, ಆಯಾ ವ್ಯಕ್ತಿಯ ಇಚ್ಛೆಗನುಸಾರ ಫಲ ಪ್ರಾಪ್ತಿಯಾಗುತ್ತದೆ ಮತ್ತು ನಿಷ್ಕಾಮಭಾವದಿಂದ ಅಂದರೆ ಕೇವಲ ಭಗವಂತನ ಪ್ರಾಪ್ತಿಗಾಗಿ ಸ್ನಾನ ಮುಂತಾದವುಗಳನ್ನು ಮಾಡಿದರೆ ಅದು ಮೋಕ್ಷವನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಪ್ರಯಾಗ ತೀರ್ಥಕ್ಷೇತ್ರದಲ್ಲಿ ಮೂರು ಬಾರಿ ಸ್ನಾನ ಮಾಡುವುದರಿಂದ ಸಿಗುವ ಫಲ ಹತ್ತು ಸಾವಿರ ಅಶ್ವಮೇಧ ಯಜ್ಞವನ್ನು ಮಾಡಿದ ಫಲಕ್ಕಿಂತಲೂ ಹೆಚ್ಚಿದೆ.

೪. ಮಾಘಸ್ನಾನಕ್ಕಾಗಿ ಪವಿತ್ರ ಜಲಮೂಲಗಳು

ಮಾಘ ಮಾಸದಲ್ಲಿ ಪ್ರಯಾಗ, ವಾರಣಾಸಿ, ನೈಮಿಷಾರಣ್ಯ, ಹರಿದ್ವಾರ ಮತ್ತು ನಾಸಿಕ ಮುಂತಾದ ಪವಿತ್ರ ತೀರ್ಥಕ್ಷೇತ್ರಗಳಲ್ಲಿರುವ ಜಲಮೂಲಗಳಲ್ಲಿ ಸ್ನಾನವನ್ನು ಮಾಡಲಾಗುತ್ತದೆ. ಕನ್ಯಾಕುಮಾರಿ ಮತ್ತು ರಾಮೇಶ್ವರಮ್ ಈ ತೀರ್ಥಕ್ಷೇತ್ರಗಳಲ್ಲಿ ಮಾಡಲಾಗುವ ಸ್ನಾನವೂ ಧರ್ಮಶಾಸ್ತ್ರಕ್ಕನುಸಾರ ಉಚ್ಚಕೋಟಿಯದೆಂಬ ನಂಬಿಕೆ ಇದೆ. ಕರ್ನಾಟಕದ ಕಾವೇರಿ, ತುಂಗಭದ್ರಾ, ಕೃಷ್ಣಾ ಇತ್ಯಾದಿ ನದಿಗಳಲ್ಲಿಯೂ ಈ ಸ್ನಾನವನ್ನು ಶ್ರದ್ಧಾಭಾವದಿಂದ ಮಾಡುತ್ತಾರೆ. ಇದರೊಂದಿಗೆ ರಾಜಸ್ಥಾನದ ಪುಷ್ಕರ ಸರೋವರದಲ್ಲಿ ಮಾಡಿದ ಸ್ನಾನವೂ ಪವಿತ್ರವಾಗಿದೆ.

೫. ಮಾಘಸ್ನಾನಕ್ಕಾಗಿ ಯೋಗ್ಯ ದಿನ

ಸಂಪೂರ್ಣ ಮಾಘ ಮಾಸದಲ್ಲಿ ಪವಿತ್ರ ಜಲಮೂಲಗಳಲ್ಲಿ ಸ್ನಾನ ಮಾಡಬೇಕು, ಎಂದು ಹೇಳಲಾಗಿದೆ. ಆದರೆ ಹೀಗೆ ಮಾಡಲು ಅಗದಿದ್ದರೆ, ಮಾಘ ಮಾಸದಲ್ಲಿ ಯಾವುದೇ ಮೂರು ದಿನ ಮಾಘಸ್ನಾನ ಮಾಡಬಹುದು. ಮೂರು ದಿನ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮಾಘ ಮಾಸದ ಯಾವುದೇ ಒಂದು ದಿನ ಮಾಘಸ್ನಾನ ಅವಶ್ಯವಾಗಿ ಮಾಡಬೇಕು. ಕೆಲವು ವಿಶಿಷ್ಟ ತಿಥಿಗಳಂದು ಮಾಡಲಾಗುವ ಮಾಘಸ್ನಾನವು ವಿಶೇಷ ಫಲ ನೀಡುತ್ತದೆ. ಆ ತಿಥಿಗಳು (ಮತ್ತು 2024 ರಲ್ಲಿ ಅವುಗಳ ದಿನಾಂಕಗಳು) ಹೀಗಿವೆ : ಮಕರ ಸಂಕ್ರಾಂತಿ (15 ಜನವರಿ 2024) ಪುಷ್ಯ ಹುಣ್ಣಿಮೆ (25 ಜನವರಿ 2024), ಪುಷ್ಯ ಅಮಾವಾಸ್ಯೆ ಅಂದರೆ ಮೌನಿ ಅಮಾವಾಸ್ಯೆ (9 ಫೆಬ್ರವರಿ 2024), ಮಾಘ ಶುಕ್ಲ ಪಕ್ಷ ಪಂಚಮಿ ಅಂದರೆ ವಸಂತ ಪಂಚಮಿ (14 ಜನವರಿ 2024), ಮಾಘ ಹುಣ್ಣಿಮೆ (24 ಫೆಬ್ರವರಿ 2024) ಮತ್ತು ಮಹಾಶಿವರಾತ್ರಿ (8 ಮಾರ್ಚ 2024)

ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಅಂಶವೆಂದರೆ, ಮಕರಸಂಕ್ರಾಂತಿ ಹಬ್ಬವು ಪ್ರತಿವರ್ಷ ಮಾಘಸ್ನಾನದ ಕಾಲಾವಧಿಯಲ್ಲಿ ಬಂದೇಬರುತ್ತದೆ ಎಂದೇನಿಲ್ಲ ಮತ್ತು ಮಹಾಶಿವರಾತ್ರಿಯೂ ಮಾಘ ಹುಣ್ಣಿಮೆಯ ನಂತರ ಬರುತ್ತದೆ; ಆದರೆ ಈ ಎರಡೂ ದಿನಗಳಲ್ಲಿ ಮಾಡಿದ ಸ್ನಾನವನ್ನು ಮಾಘಸ್ನಾನದಲ್ಲಿಯೇ ಸೇರಿಸಲಾಗಿದೆ ಮತ್ತು ಅಷ್ಟೇ ಉಪಯುಕ್ತ ಮತ್ತು ಪವಿತ್ರವೆಂದೂ ನಂಬಲಾಗುತ್ತದೆ.

೬. ಮಾಘಸ್ನಾನಕ್ಕಾಗಿ ಯೋಗ್ಯ ಸಮಯ

ಸೂರ್ಯೋದಯದ ಮೊದಲಿನ ಸಮಯವನ್ನು ಸ್ನಾನಕ್ಕೆ ಉತ್ತಮವೆಂದು ತಿಳಿಯಲಾಗುತ್ತದೆ. ನಾರದ ಪುರಾಣಕ್ಕನುಸಾರ, ಮಾಘ ಮಾಸದಲ್ಲಿ ಬ್ರಾಹ್ಮಿಮುಹೂರ್ತದಲ್ಲಿ ಅಂದರೆ ನಸುಕಿನ ೩.೩೦ ರಿಂದ ೪ ರ ವರೆಗೆ ಸ್ನಾನ ಮಾಡುವುದರಿಂದ ಎಲ್ಲ ಮಹಾಪಾಪಗಳು ದೂರವಾಗುತ್ತವೆ ಮತ್ತು ಪ್ರಾಜಾಪತ್ಯ ಯಜ್ಞದ ಫಲ ಪ್ರಾಪ್ತವಾಗುತ್ತದೆ. ಸೂರ್ಯೋದಯದ ನಂತರ ಮಾಡಲಾಗುವ ಸ್ನಾನವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಕಡಿಮೆ ಲಾಭಕಾರಿ ಅಥವಾ ಕನಿಷ್ಟವೆಂದು ತಿಳಿಯಲಾಗುತ್ತದೆ.

೭. ಮಾಘ ಮಾಸದ ನಂತರ ಸೂರ್ಯನಿಗೆ ಅರ್ಘ್ಯ ನೀಡುವ ಮಹತ್ವ

ಅರ್ಘ್ಯ ನೀಡುವುದು, ಸೂರ್ಯನಿಗೆ, ಪವಿತ್ರ ನದಿಗಳಿಗೆ

ಶಾಸ್ತ್ರಗಳಲ್ಲಿ ಮಾಘ ಸ್ನಾನದ ನಂತರ ಸೂರ್ಯದೇವರಿಗೆ ಅರ್ಘ್ಯ ನೀಡುವ ಬಗ್ಗೆ ಹೇಳಲಾಗಿದೆ. ಅರ್ಘ್ಯ ನೀಡುವುದೆಂದರೆ ನಮ್ಮ ಅಂಗೈಗಳಲ್ಲಿ ನೀರು ತೆಗೆದುಕೊಂಡು ಸೂರ್ಯದೇವರಿಗೆ ಅರ್ಪಿಸುವುದು. ಪದ್ಮಪುರಾಣಕ್ಕನುಸಾರ ಮಾಘ ಮಾಸದಲ್ಲಿ ನಸುಕಿನಲ್ಲಿ ಸ್ನಾನ ಮಾಡಿ ಇಡೀ ಜಗತ್ತಿಗೆ ಪ್ರಕಾಶವನ್ನು ನೀಡುವ ಭಗವಾನ ಸೂರ್ಯದೇವರಿಗೆ ಅರ್ಘ್ಯವನ್ನು ನೀಡುವುದಕ್ಕೆ ಅಸಾಧಾರಣ ಮಹತ್ವವಿದೆ. ಆದುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಪಡೆಯಲು ಮತ್ತು ಪರಮ ದಯಾವಂತ ಜಗದೀಶ್ವರನ ಕೃಪೆಯನ್ನು ಸಂಪಾದಿಸಲು ಪ್ರತಿಯೊಬ್ಬ ಮನುಷ್ಯನು ಮಾಘಸ್ನಾನ ಮಾಡಿ ಸೂರ್ಯಮಂತ್ರವನ್ನು ಉಚ್ಚರಿಸುತ್ತಾ ಸೂರ್ಯನಿಗೆ ಅರ್ಘ್ಯವನ್ನು ಅವಶ್ಯವಾಗಿ ಅರ್ಪಿಸಬೇಕು. ಈ ಸೂರ್ಯಮಂತ್ರ ಹೀಗಿದೆ,

ಭಾಸ್ಕರಾಯ ವಿದ್ಮಹೆ | ಮಹದ್‌ದ್ಯುತಿಕರಾಯ ಧೀಮಹಿ |
ತನ್ನೋ ಆದಿತ್ಯ ಪ್ರಚೋದಯಾತ ||

ಅರ್ಥ : ತೇಜದ ಆಗರವಾಗಿರುವ ಸೂರ್ಯನನ್ನು ನಾವು ತಿಳಿದಿದ್ದೇವೆ. ಅತ್ಯಂತ ತೇಜಸ್ವಿ ಮತ್ತು ಎಲ್ಲವನ್ನೂ ಪ್ರಕಾಶಮಯಗೊಳಿಸುವ ಸೂರ್ಯನನ್ನು ನಾವು ಧ್ಯಾನಿಸುತ್ತೇವೆ. ಆ ಆದಿತ್ಯನು ನಮ್ಮ ಬುದ್ಧಿಗೆ ಸತ್ಪ್ರೇರಣೆಯನ್ನು ನೀಡಲಿ.

೮. ಮಾಘ ಮಾಸದಲ್ಲಿ ದಾನದ ಮಹತ್ವ ಮತ್ತು ದಾನ ನೀಡಲು ಯೋಗ್ಯ ವಸ್ತುಗಳು

ಮಾಘ ಮಾಸದಲ್ಲಿ ಯಾರು ಬ್ರಾಹ್ಮಣರಿಗೆ ಎಳ್ಳಿನ ದಾನವನ್ನು ನೀಡುತ್ತಾರೋ, ಅವರಿಗೆ ಎಲ್ಲ ಜಂತುಗಳಿಂದ ತುಂಬಿದ ನರಕ ದರ್ಶನವಾಗುವುದಿಲ್ಲ. – ಮಹಾಭಾರತ, ಅನುಶಾಸನ ಪರ್ವ

ಮಾಘ ಮಾಸದಲ್ಲಿ ಯಥಾಶಕ್ತಿ ಬೆಲ್ಲ, ಉಣ್ಣೆಯ ಬಟ್ಟೆ, ರಗ್ಗು, ಚಪ್ಪಲಿ ಇಂತಹ ಚಳಿಯಿಂದ ರಕ್ಷಿಸುವ ಇತರ ವಸ್ತುಗಳ ದಾನ ಮಾಡಿ ‘ಮಾಧವಃ ಪ್ರಿಯತಾಮ್| ಈ ವಾಕ್ಯವನ್ನು ಹೇಳಬೇಕು. ‘ಮಾಧವಃ ಪ್ರೀಯತಾಮ್| ಅಂದರೆ ‘ಭಗವಾನ ಶ್ರೀವಿಷ್ಣುವಿನ ಪ್ರೀತಿ ಮತ್ತು ಕೃಪೆಯನ್ನು ಪಡೆಯಲು ದಾನ ಮಾಡುತ್ತೇನೆ.

೯. ತೀರ್ಥಕ್ಷೇತ್ರಕ್ಕೆ ತೆರಳಿ ಮಾಘಸ್ನಾನ ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ?

ಮಾಘ ಮಾಸದ ಒಂದು ವೈಶಿಷ್ಟ್ಯವೆಂದರೆ, ಈ ಅವಧಿಯಲ್ಲಿ ಪ್ರತಿಯೊಂದು ಪ್ರಾಕೃತಿಕ ಜಲಮೂಲ ಗಂಗೆಯಂತೆ ಪವಿತ್ರವಾಗುತ್ತದೆ. ಮಾಘಸ್ನಾನಕ್ಕಾಗಿ ಪ್ರಯಾಗ, ವಾರಣಾಸಿ ಮುಂತಾದ ಸ್ಥಾನಗಳು ಪವಿತ್ರವೆಂದು ಪರಿಗಣಿಸಲಾಗಿವೆ; ಆದರೆ ಅಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ತಮಗೆ ಸಮೀಪವಿರುವಂತಹ ನದಿ, ಸರೋವರ, ಬಾವಿ ಮುಂತಾದ ಯಾವುದೇ ಪ್ರಾಕೃತಿಕ ಜಲಮೂಲದಲ್ಲಿ ಅವಶ್ಯವಾಗಿ ಸ್ನಾನ ಮಾಡಬೇಕು.

೧೦. ಮನೆಯಲ್ಲಿ ಮಾಘಸ್ನಾನವನ್ನು ಹೇಗೆ ಮಾಡಬೇಕು ?

ಗಂಗೇ ಚ ಯಮುನೇ ಚೈವ, ಸ್ನಾನ

ಅ. ಪವಿತ್ರ ಜಲಮೂಲಗಳಲ್ಲಿ ಮಾಘಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮಾಘಸ್ನಾನಕ್ಕಾಗಿ ರಾತ್ರಿ ಮನೆಯ ಮೇಲ್ಛಾವಣಿಯಲ್ಲಿ ಮಣ್ಣಿನ ಕೊಡದಲ್ಲಿ ತುಂಬಿಟ್ಟ ಅಥವಾ ಅಥವಾ ದಿನವಿಡಿ ಸೂರ್ಯನ ಕಿರಣಗಳಿಂದ ಬಿಸಿಯಾದ ನೀರಿನಿಂದ ಸ್ನಾನ ಮಾಡಬೇಕು.

ಆ. ಮನೆಯಲ್ಲಿ ಮಾಘಸ್ನಾನ ಮಾಡುವ ಉದ್ದೇಶದಿಂದ ಬೆಳಗ್ಗೆ ಬೇಗ ಎದ್ದು ಗಂಗಾ, ಯಮುನಾ, ಸರಸ್ವತಿ… ಮುಂತಾದ ಪವಿತ್ರ ನದಿಗಳ ಸ್ಮರಣೆ ಮಾಡಿ ಸ್ನಾನದ ಜಲದಲ್ಲಿ ಆವಾಹನೆಯನ್ನು ಮಾಡಬೇಕು. ತದನಂತರ ಆ ಜಲದಿಂದ ಸ್ನಾನ ಮಾಡಬೇಕು.

ಇ. ನಂತರ ಭಗವಾನ ಶ್ರೀವಿಷ್ಣುವನ್ನು ಸ್ಮರಿಸಿ ಅವರ ಪಂಚೋಪಚಾರ ಪೂಜೆ ಮಾಡಬೇಕು.

ಈ. ಅನಂತರ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು.

ಉ. ಸಾಧ್ಯವಿದ್ದಲ್ಲಿ ಈ ದಿನ ಉಪವಾಸ ಮಾಡಬೇಕು.

ಊ. ಇದರೊಂದಿಗೆ ತಮ್ಮ ಕ್ಷಮತೆಗನುಸಾರ ಮೊದಲು ಹೇಳಿದ ವಸ್ತುಗಳನ್ನು ಯಥಾಶಕ್ತಿ ದಾನ ಮಾಡಬೇಕು.

೧೧. ಮಾಘ ಮಾಸದಲ್ಲಿ ಕಲ್ಪವಾಸದ ಮಹತ್ವ

‘ಕಲ್ಪವೆಂದರೆ ವೇದಾಧ್ಯಯನ, ಮಂತ್ರಪಠಣ ಮತ್ತು ಯಜ್ಞ ಮುಂತಾದ ಕರ್ಮಗಳು. ಮಾಘ ಮಾಸದಲ್ಲಿ ಪವಿತ್ರ ನದಿಗಳ ಸಂಗಮದ ತೀರದಲ್ಲಿ ನಿವಾಸ ಮಾಡಿ, ಈ ಧಾರ್ಮಿಕ ಕರ್ಮಗಳನ್ನು ಮಾಡುವುದಕ್ಕೆ ಪುರಾಣಗಳಲ್ಲಿ ‘ಕಲ್ಪವಾಸ’ವೆಂದು ಕರೆಯಲಾಗುತ್ತದೆ. ಭಕ್ತಿಭಾವದಿಂದ ಕಲ್ಪವಾಸ ಮಾಡುವವರಿಗೆ ಸದ್ಗತಿ ಪ್ರಾಪ್ತವಾಗುತ್ತದೆಯೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಒಂದು ತಿಂಗಳು ನಡೆಯುವ ಪವಿತ್ರ ಮಾಘಸ್ನಾನ ಮೇಳವು ಉತ್ತರ ಪ್ರದೇಶದ ಪ್ರಯಾಗದಲ್ಲಿ ಪ್ರತಿವರ್ಷ ಆಯೋಜಿಸಲ್ಪಡುತ್ತದೆ. ಈ ಮೇಳಕ್ಕೆ ‘ಕಲ್ಪವಾಸ’ವೆಂದೂ ಕರೆಯುತ್ತಾರೆ.

ಕಲ್ಪವಾಸದಲ್ಲಿ ಪ್ರತಿದಿನ ಬೆಳಗ್ಗೆ ಸ್ನಾನ, ಅರ್ಘ್ಯ, ಯಜ್ಞ ಮುಂತಾದವುಗಳನ್ನು ಮಾಡಿದ ನಂತರ ಬ್ರಾಹ್ಮಣರಿಗೆ ಭೋಜನ ನೀಡುತ್ತಾರೆ. ವಿವಿಧ ಧಾರ್ಮಿಕ ಕಥೆ-ಪ್ರವಚನಗಳನ್ನು ಕೇಳಿ ಸಂಪೂರ್ಣ ದಿನವನ್ನು ಸತ್ಸಂಗದಲ್ಲಿ ಕಳೆಯುತ್ತಾರೆ. ಈ ಸಮಯದಲ್ಲಿ ವ್ಯಕ್ತಿಯು ತನ್ನ ಎಲ್ಲ ಭೌತಿಕ ಸುಖಗಳಿಂದ ದೂರವಿರುತ್ತಾನೆ. ಗುಡಿಸಿಲಿನಲ್ಲಿದ್ದು ಭೂಮಿಯ ಮೇಲೆ ಗೋಧಿಯ ಸಿಪ್ಪೆಯನ್ನು ಹರಡಿ ಅದರ ಮೇಲೆ ಒಂದು ಚಾಪೆಯನ್ನು ಹಾಸಿ ಮಲಗುತ್ತಾರೆ.

೧೨. ಮಾಘ ಮಾಸದ ಬಗ್ಗೆ ಕಿರುಚಿತ್ರ ವೀಕ್ಷಿಸಿ

2 thoughts on “ಮಾಘಸ್ನಾನ : ಮಹತ್ವ, ಕಾಲಾವಧಿ ಮತ್ತು ದಾನ ನೀಡಲು ಯೋಗ್ಯ ವಸ್ತುಗಳು”

  1. Artha vaguvante tilisidiri aadare prati varsha dharmastalake bheti needuvadu, illave kaveriyalli mindu baruvadu, Tumba tumba dhanyavadgalu

    Reply
    • ನಮಸ್ಕಾರ
      ಯಾವುದೇ ಕೃತಿಗೆ ಅನೇಕ ಪರ್ಯಾಯಗಳನ್ನು ನೀಡುವುದು ಹಿಂದೂ ಧರ್ಮದ ವೈಶಿಷ್ಟ್ಯ. ಇಲ್ಲಿಯೂ ಕೂಡ, ಮಾಘಸ್ನಾನಕ್ಕಾಗಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಅದರ ಲಾಭವನ್ನು ಪಡೆದುಕೊಳ್ಳಲು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ಸ್ನಾನ ಮಾಡಬಹುದು.

      Reply

Leave a Comment