ಮೃತ್ಯೋಪನಿಷದ – ಮೃತ್ಯುವಿನ ವಿಷಯದಲ್ಲಿ ಧರ್ಮಗ್ರಂಥಗಳಲ್ಲಿರುವ ವಿವೇಚನೆ

ಸದ್ಯ ಕೊರೋನಾದಿಂದಾಗಿ ಆನೇಕರು ಮೃತ್ಯುವಿಗೀಡಾಗುತ್ತಿದ್ದಾರೆ. ಮೃತ್ಯುವಿನ ಬಗ್ಗೆ ವಸ್ತುಸ್ಥಿತಿ ತಿಳಿಯಬೇಕೆಂದು; ಈ ಲೇಖನವನ್ನು ಕೊಡಲಾಗಿದೆ.

೧. ಜಗತ್ತಿನಲ್ಲಿ ಎಲ್ಲಕ್ಕಿಂತ ಆಶ್ಚರ್ಯದ ವಿಷಯ ಯಾವುದು ? ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ಕೊಟ್ಟ ಉತ್ತರ

ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಮ್ |
ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ ||

– ಮಹಾಭಾರತ, ಪರ್ವ ೩, ಅಧ್ಯಾಯ ೩೧೪, ಶ್ಲೋಕ ೧೧೮

ಅರ್ಥ : ಪ್ರತಿದಿನ ಜನರು ಯಮಲೋಕಕ್ಕೆ ಹೋಗುತ್ತಿದ್ದಾರೆ (ಮರಣ ಹೊಂದುತ್ತಿದ್ದಾರೆ), ಆದರೂ ಉಳಿದಿರುವ ಪ್ರತಿಯೊಬ್ಬನಿಗೆ ಶಾಶ್ವತವಾಗಿ ಜೀವಂತವಿರುವ ಇಚ್ಛೆ ಇರುತ್ತದೆ. ಇದಕ್ಕಿಂತ ದೊಡ್ಡ ಆಶ್ಚರ್ಯದ ವಿಷಯ ಯಾವುದಿದೆ ?

ಯುಧಿಷ್ಠಿರನು ಯಕ್ಷನಿಗೆ ನೀಡಿದ ಉತ್ತರದ ಗೂಢಾರ್ಥ ಹೀಗಿದೆ, ‘ಜಗತ್ತಿನಲ್ಲಿ ಪ್ರತಿಯೊಬ್ಬನು ತಾನು ಅಮರತ್ವವನ್ನು ಪಡೆದುಕೊಂಡು ಜನ್ಮಕ್ಕೆ ಬಂದಂತೆ ವರ್ತಿಸುತ್ತಿರುತ್ತಾನೆ’,  ಇದು ಬಹುದೊಡ್ಡ ಆಶ್ಚರ್ಯದ ವಿಷಯವಾಗಿದೆ.

೨. ‘ಮೃತ್ಯು ಜೀವನದ ಕೊನೆಯ ಭಾಗವಾಗಿದೆ’, ಎಂಬುದನ್ನು ಮರೆಯುವ ಮಾನವ

ಮನುಷ್ಯನಿಗೆ ಅಕಾಲಮೃತ್ಯು ಬಂದರೆ, ಅದರಿಂದಾಗುವ ದುಃಖ ಅತೀ ತೀವ್ರ ಮತ್ತು ಶಬ್ದಾತೀತವಾಗಿರುತ್ತದೆ; ಆದರೆ ‘ಮನುಷ್ಯನಿಗೆ ಅವನ ಮುಪ್ಪಿನಲ್ಲಿ ಮೃತ್ಯು ಬರುವುದು, ಅವನು ಅದನ್ನು ಆನಂದದಿಂದ ಎದುರಿಸುವುದು’, ಇದೊಂದು ನೈಸರ್ಗಿಕ ಪ್ರಕ್ರಿಯೆ ಆಗಬೇಕು. ಆದರೆ ಹುಲಿ ಎದುರಿಗೆ ಬಂದಾಗ ಜನರು ಹೇಗೆ ಭಯದಿಂದ ನಡುಗುತ್ತಾರೆಯೋ, ಹಾಗೆ ಮೃತ್ಯು ಎಂದಾಕ್ಷಣ ಬಹಳಷ್ಟು ಜನರು ಭಯದಿಂದ ನಡುಗುತ್ತಾರೆ.

‘ಜೀವನದ ಅಂತ್ಯವು ಒಳ್ಳೆಯದಾಗಬೇಕು’ ಎಂದು ನಾವು ಆಶಿಸುತ್ತೇವೆ. ‘ಜೀವನವು ಸುಖದಿಂದ ಕಳೆಯಬೇಕು’, ಎಂದೂ ಇಚ್ಛಿಸುತ್ತೇವೆ, ಆದರೆ ‘ಮೃತ್ಯುವು ಜೀವನದ (ಆಯುಷ್ಯದ) ಒಂದು ಕೊನೆಯ ಭಾಗವಾಗಿದೆ’, ಎಂಬುದನ್ನು ನಾವು ಮರೆಯುತ್ತೇವೆ.

೩. ‘ಮೃತ್ಯುವನ್ನು ಆನಂದದಿಂದ ಎದುರಿಸುವುದು’, ಇದು ಪ್ರತಿಯೊಬ್ಬರ ಪ್ರಕೃತಿಯನ್ನು ಅವಲಂಬಿಸಿರುತ್ತದೆ

‘ಮೃತ್ಯುವು ಒಂದಲ್ಲ ಒಂದು ದಿನ ಬಂದೇ ಬರಲಿದೆ’ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ; ಆದರೆ ಅದನ್ನು ಸ್ವೀಕರಿಸುವುದು ತುಂಬಾ ಕಠಿಣವಾಗಿರುತ್ತದೆ. ಮೃತ್ಯುವಿನ ಬಗ್ಗೆ ವಿಚಾರವನ್ನು ಏಕೆ ಮಾಡಬೇಕು ? ಅದು ಎಂದಾದರೊಂದು ದಿನ ಬಂದೇ ಬರಲಿದೆ. ಹೀಗಿರುವಾಗ ಅದರ ವಿಚಾರವನ್ನು ಈಗೇಕೆ ಮಾಡಬೇಕು ?’ ‘ಮೃತ್ಯುವು ಆನಂದದಾಯಕ ಮತ್ತು ಸುಖಕರ ಆಗಬಹುದೇ ?’ ಇದು ಪ್ರತಿಯೊಬ್ಬರ ಪ್ರಕೃತಿಯ ಮೇಲೆ ಅವಲಂಬಿಸಿರುತ್ತದೆ. ಮೃತ್ಯುವನ್ನು ಸ್ವಾಗತಿಸುವವರು ಮತ್ತು ಅದನ್ನು ಆನಂದದಿಂದ ಎದುರಿಸುವ ಜನರೂ ನಮ್ಮ ದೇಶದಲ್ಲಿ ಆಗಿ ಹೋಗಿದ್ದಾರೆ. ‘ಬದುಕು ಯಾತನೆಯನ್ನು ನೀಡಿತ್ತು, ಸಾವಿನಿಂದಾಗಿ ಅದರಿಂದ ಬಿಡುಗಡೆಯಾಯಿತು’, ಎಂದು ಕವಿ ಸುರೇಶ ಭಟ ಇವರು ಹೇಳಿದ್ದಾರೆ. ಹೋಗುವಾಗ ಮನುಷ್ಯನು ತನ್ನ ಜೀವನದ ಯಾತನೆಗಳಿಂದ ಬಿಡುಗಡೆಯಾಗುತ್ತಾನೆ, ಆದರೆ ಇತರರಿಗೆ ದುಃಖವನ್ನು ಕೊಡುತ್ತಾನೆ !

೪. ಭಗವಂತನ ನಾಮಸ್ಮರಣೆಯನ್ನು ಮಾಡುತ್ತ ಬರುವ ಮೃತ್ಯು ಅತ್ಯುತ್ತಮ ಮೃತ್ಯು !

ಜೀವನವು ಹೇಗಿರಬೇಕು ? ‘ವಿನಾ ದೈನ್ಯೇನ ಜೀವನಮ್ |’ ಅಂದರೆ ‘ಜೀವನವು ದೈನ್ಯವಿಲ್ಲದೇ (ಹೀನ ಸ್ಥಿತಿ ಬರದೇ) ಕಳೆಯಬೇಕು’. ಜೀವನದಲ್ಲಿ ದುಃಖ ಮತ್ತು ಅಸಹಾಯಕತೆ ಬರಬಾರದು. ಜೀವನದಲ್ಲಿ ಎಲ್ಲರಿಗೂ ಎಲ್ಲವೂ ಸಿಗುತ್ತವೆ ಎಂದೇನಿಲ್ಲ. ಅದಕ್ಕಾಗಿ ಕಷ್ಟ ಮತ್ತು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆದರೂ ಅವು ಸಂಪೂರ್ಣ ಸಿಗುತ್ತವೆ ಎಂದೇನಿರುವುದಿಲ್ಲ, ‘ಎಂತಹ ಮೃತ್ಯು ಬೇಕು ?’, ಎಂಬ ಪ್ರಶ್ನೆಯನ್ನು ಕೇಳಿದರೆ ಜನರು ಮೃತ್ಯು ‘ಬೇಡವೇಬೇಡ’, ಎಂದು ಉತ್ತರವನ್ನು ಕೊಡಬಹುದು; ಆದರೆ ‘ಬೇಡ’ ಎಂದರೆ ಮೃತ್ಯು ತಪ್ಪುವುದಿಲ್ಲ.

ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಮ್ |
ದೇಹಾನ್ತೆ ತವ ಸಾನ್ನಿಧ್ಯಂ ದೇಹಿ ಮೇ ಪರಮೇಶ್ವರ ||

ಅರ್ಥ : ‘ಹೇ ಭಗವಂತಾ, ನನಗೆ ಸಹಜವಾದ ಮೃತ್ಯು ಬರಲಿ, ನನ್ನ ಜೀವನ ದೈನ್ಯವಿಲ್ಲದೇ (ಕಷ್ಟವಿಲ್ಲದೇ) ಕಳೆಯಲಿ ಮತ್ತು ದೇಹಾಂತದ ಸಮಯದಲ್ಲಿ ನನಗೆ ನಿನ್ನ ಸಾನ್ನಿಧ್ಯ ಲಭಿಸಲಿ’, ಎಂದು ಹೇಳಲಾಗಿದೆ.

ತುಂಬಾ ಕಷ್ಟಗಳು ಬರದೇ, ಹಾಸಿಗೆಯ ಮೇಲೆ ನರಳುತ್ತ ಬೀಳದೇ, ಶರೀರವು ಅಂಗವೈಕಲ್ಯಕ್ಕೆ ತುತ್ತಾಗಿ, ಪರಾವಲಂಬಿಯಾಗದೇ ಮತ್ತು ಸಹಜವಾಗಿ ಬರುವ ಮೃತ್ಯುವಿಗೆ ಉತ್ತಮ ಮರಣವೆಂದು ಹೇಳಬಹುದು; ಆದರೆ ಎಲ್ಲರ ವಿಧಿ ಲಿಖಿತದಲ್ಲಿ (ಹಣೆಬರಹದಲ್ಲಿ) ಅದು ಹೀಗೆ ಇದ್ದೇ ಇರುತ್ತದೆ, ಎಂದೇನಿಲ್ಲ. ಭಗವಂತನ ನಾಮಸ್ಮರಣೆಯನ್ನು ಮಾಡುತ್ತ ಬರುವ ಮೃತ್ಯುವಿಗೆ ಅತ್ಯುತ್ತಮ ಮರಣವೆಂದು ಹೇಳಬಹುದು.

೫. ಜನ್ಮವು ಮೃತ್ಯುವಿನೊಂದಿಗೇ ಬರುತ್ತದೆ ಎಂದು ಅರಿತುಕೊಂಡರೆ ಮೃತ್ಯುವಿನ ಭಯ ತನ್ನಷ್ಟಕ್ಕೆ ಕಡಿಮೆಯಾಗುವುದು

‘ಜನ್ಮ’ ಮತ್ತು ‘ಮರಣ’ ಈ ಎರಡು ತುದಿಯ ಬಿಂದುಗಳ ನಡುವೆ ಮನುಷ್ಯನ ಆಯುಷ್ಯ ರೇಖೆ ಇರುತ್ತದೆ. ಜನ್ಮವು ಮೃತ್ಯುವನ್ನು ಜೊತೆಗೆ ಕರೆದುಕೊಂಡು ಬರುತ್ತದೆ ಎಂಬುದು ಅರಿತುಕೊಂಡರೆ, ಮೃತ್ಯುವಿನ ಬಗೆಗಿನ ಭಯ ತನ್ನಷ್ಟಕ್ಕೆ ಕಡಿಮೆಯಾಗುತ್ತದೆ. ಜನ್ಮವು ಎಷ್ಟು ನೈಸರ್ಗಿಕವಾಗಿದೆಯೋ, ಮರಣವೂ ಅಷ್ಟೇ ನೈಸರ್ಗಿಕವಾಗಿದೆ; ಆದರೆ ಇದನ್ನು ತಿಳಿದುಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ. ಗೌತಮ ಬುದ್ಧರ ಮಹಾನಿರ್ವಾಣ ಸಮೀಪ ಬಂದಿದೆ ಎಂದು ಅವರ ಶಿಷ್ಯ ಆನಂದನು ದುಃಖದಿಂದ ಅಳುತ್ತಿರುವಾಗ ಗೌತಮಬುದ್ಧರು ಅವನಿಗೆ, “ಆನಂದಾ, ಅಳಬೇಡ, ‘ಎಲ್ಲ ಪ್ರೀತಿಯ ವಸ್ತುಗಳಿಂದ ನಾವು ದೂರವಿರಬೇಕೆಂದು ನಾನು ನಿನಗೆ ಈ ಮೊದಲೇ ಹೇಳಿದ್ದೇನಲ್ಲವೇ ? ಯಾವುದು ಅರಳುತ್ತದೆಯೋ, ಅದು ಬಾಡುತ್ತದೆ. ಅರಳುವುದು ಯಾವುದರ ಧರ್ಮವಾಗಿದೆಯೋ ಅದು ಅರಳಬಾರದು ಎಂದರೆ ಹೇಗೆ ಆಗುವುದು ? ಹಾಗೆಯೇ ಹುಟ್ಟಿದ ಮನುಷ್ಯನು ಸಾಯಬಾರದು ಎಂದರೆ ಹೇಗಾಗುವುದು ?” ಎಂದು ಸಮಾಧಾನ ಪಡಿಸುತ್ತಾರೆ.

೬. ಮಹಾಮೃತ್ಯುಂಜಯ ಮಂತ್ರದಿಂದ ಮೃತ್ಯುವನ್ನು ತಡೆಗಟ್ಟಬಹುದು; ಆದರೆ ಅದರ ಮೇಲೆ ಜಯ ಸಾಧಿಸಲು ಸಾಧ್ಯವಿಲ್ಲ

ಜನರಲ್ಲಿ ‘ಮಹಾಮೃತ್ಯುಂಜಯ ಮಂತ್ರದಿಂದ ಮೃತ್ಯುವನ್ನು ತಡೆಗಟ್ಟಬಹುದು’, ಎಂಬ ತಿಳುವಳಿಕೆಯಿದೆ; ಆದರೆ ಅದರಿಂದ ಮೃತ್ಯುವಿನ ಮೇಲೆ ಜಯ ಸಾಧಿಸಲು ಸಾಧ್ಯವಿಲ್ಲ ; ಏಕೆಂದರೆ ಆ ಮಂತ್ರದಲ್ಲಿ ಮೃತ್ಯು ಯಾವಾಗ ಬರಬೇಕು ?, ಎಂಬುದನ್ನು ಹೇಳಲಾಗಿದೆ.

೭. ಸಮರ್ಥ ರಾಮದಾಸಸ್ವಾಮಿಗಳು ಮೃತ್ಯುವಿನ ಬಗ್ಗೆ ಮಾಡಿದ ವಿವೇಚನೆ

ಸಮರ್ಥ ರಾಮದಾಸಸ್ವಾಮಿಗಳು ಶ್ರೀ ದಾಸಬೋಧದಲ್ಲಿ ಮೃತ್ಯುವಿನ ಮೇಲೆ ಮಾರ್ಮಿಕ ಟಿಪ್ಪಣಿಯನ್ನು ಮಾಡಿದ್ದಾರೆ. ಅವರು ಹೇಳುತ್ತಾರೆ,

ಮೃತ್ಯುವು ‘ನಾನು ಭೂಪತಿಯಾಗಿದ್ದೇನೆ, ನಾನು ಚಕ್ರವರ್ತಿಯಾಗಿದ್ದೇನೆ, ನಾನು ತಂತ್ರ-ಮಂತ್ರಗಳ ಪ್ರಯೋಗವನ್ನು ಅರಿತಿರುವ ಚತುರನಾಗಿದ್ದೇನೆ’ ಎಂದು ಹೇಳುವುದಿಲ್ಲ. ಇದನ್ನು ಬುದ್ಧಿವಂತರು ತಿಳಿದುಕೊಳ್ಳಬೇಕು.

– ದಾಸಬೋಧ, ದಶಕ ೩, ಸಮಾಸ ೯, ಶ್ಲೋಕ ೧೧ (ಮರಾಠಿ)

ಮೃತ್ಯುವು ‘ನಾನು ಶಾಸ್ತ್ರಜ್ಞನಾಗಿದ್ದೇನೆ, ನಾನು ವೇದಜ್ಞನಾಗಿದ್ದೇನೆ, ನಾನು ಸರ್ವಜ್ಞನಾಗಿದ್ದೇನೆ, ನಾನು ಎಲ್ಲವನ್ನು ಅರಿತವನಾಗಿದ್ದೇನೆ’ ಎಂದೂ ಹೇಳುವುದಿಲ್ಲ.

– ದಾಸಬೋಧ, ದಶಕ ೩, ಸಮಾಸ ೯, ಶ್ಲೋಕ ೨೧ (ಮರಾಠಿ)

ಮೃತ್ಯುವು ‘ನಾನು ಬಹಳ ಶ್ರೇಷ್ಠನಾಗಿದ್ದೇನೆ’ ಎಂದೂ ಹೇಳುವುದಿಲ್ಲ, ‘ನಾನು ಹರಿಹರನಾಗಿದ್ದೇನೆ’ ಎಂದೂ ಹೇಳುವುದಿಲ್ಲ, ‘ನಾನು ಭಗವಂತನ ಅವತಾರನಾಗಿದ್ದೇನೆ’ ಎಂದೂ ಹೇಳುವುದಿಲ್ಲ. ಮನುಷ್ಯನು ಬಹಳ ಶ್ರೇಷ್ಠನಾಗಿದ್ದರೂ, ಪ್ರತ್ಯಕ್ಷ ಹರಿಹರನಾಗಿರಬಹುದು ಅಥವಾ ಭಗವಂತನ ಅವತಾರವನ್ನು ತಾಳಿದ್ದರೂ ಸಹ, ಮೃತ್ಯುವಿನಿಂದ ಅವನಿಗೆ ಬಿಡುಗಡೆ ಇಲ್ಲ.

– ದಾಸಬೋಧ, ದಶಕ ೩, ಸಮಾಸ ೯, ಶ್ಲೋಕ ೪೦ (ಮರಾಠಿ)

(ಸ.೨. ದ. ೩- ಮೂಲ ಆಧಾರ)

‘ಮೃತ್ಯು ಅಥವಾ ಕಾಲವು ಪರಮೇಶ್ವರನದ್ದೇ ಪ್ರತ್ಯಕ್ಷ ಸ್ವರೂಪವಾಗಿದೆ’, ಇದನ್ನು ನಾವು ಗಮನದಲ್ಲಿಡುವುದಿಲ್ಲ. ಭಗವಂತನು ಶ್ರೀಮದ್ ಭಗವದ್ಗೀತೆಯಲ್ಲಿ ಹೇಳುತ್ತಾನೆ,

ಮೃತ್ಯೂಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ |

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೩೪

ಅರ್ಥ : ಎಲ್ಲರ ನಾಶವನ್ನು ಮಾಡುವ ಮೃತ್ಯು ಮತ್ತು ಉತ್ಪನ್ನವಾಗುವವರ ಉತ್ಪತ್ತಿಗೆ ನಾನೇ ಕಾರಣನಾಗಿದ್ದೇನೆ.

ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ |

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೧, ಶ್ಲೋಕ ೩೨

ಅರ್ಥ : ನಾನು ಜನರನ್ನು ನಾಶ ಮಾಡುವ ಮಹಾಕಾಲನಾಗಿದ್ದೇನೆ. ‘ನಾನೇ ಎಲ್ಲವುಗಳ ಆಧಾರವಾಗಿದ್ದೇನೆ. ನಾನು ಕಾಲದ ಕಾಲನಾಗಿದ್ದೇನೆ. ಪರಮೇಶ್ವರನು ಚರಾಚರದಲ್ಲಿ ಮತ್ತು ಅಣುರೇಣುಗಳಲ್ಲಿ ತುಂಬಿಕೊಂಡಿದ್ದಾನೆ’, ಇದನ್ನು ನಾವು ನಂಬುತ್ತೇವೆ, ಹೀಗಿರುವಾಗ ಮೃತ್ಯುವು ಅಸ್ಪೃಶ್ಯವಾಗುವುದಾದರೂ ಹೇಗೆ ?

ಆಚಾರ್ಯ ರಜನೀಶ (ಓಶೋ) ಇವರ ಸಮಾಧಿಯ ಮೇಲೆ ಮುಂದಿನ ವಾಕ್ಯಗಳನ್ನು ಬರೆಯಲಾಗಿದೆ. .

Osho, Never born, Never died
He only visited this planet earth between Dec 11, 1931 – Jan 19, 1990

ಅರ್ಥ : ಓಶೋರವರು ಎಂದಿಗೂ ಜನ್ಮತಾಳಲಿಲ್ಲ ಮತ್ತು ಎಂದಿಗೂ ಅವರ ಮೃತ್ಯು ಆಗಲಿಲ್ಲ. ಅವರು ಕೇವಲ ೧೧.೧೨.೧೯೩೧ ರಿಂದ ೧೯.೧.೧೯೯೦ ರ ಕಾಲಾವಧಿಯಲ್ಲಿ ಪೃಥ್ವಿಗೆ ಭೇಟಿ ನೀಡಿದ್ದರು.

(ಆಧಾರ : ತ್ರೈಮಾಸಿಕ ‘ಪ್ರಜ್ಞಾಲೋಕ, ಜನವರಿ-ಮಾರ್ಚ್ ೨೦೨೧)

Leave a Comment