ಸಂತ ಭಕ್ತರಾಜ ಮಹಾರಾಜರ ತ್ರಿಸೂತ್ರಗಳು – ಭಜನೆ, ಭ್ರಮಣ (ಪ್ರಯಾಣ) ಮತ್ತು ಭಂಡಾರ (ಅನ್ನಸಂತರ್ಪಣೆ) !

ಸಂತ ಭಕ್ತರಾಜ ಮಹಾರಾಜರ ಬೋಧನೆಯ ಸಾರವಿರುವ ಮತ್ತು ಭಕ್ತರ ಮೇಲೆ ಚೈತನ್ಯದ ಕೃಪೆ ತೋರುವ – ತ್ರಿಸೂತ್ರಗಳು ಭಜನೆ, ಭ್ರಮಣ (ಪ್ರಯಾಣ) ಮತ್ತು ಭಂಡಾರ (ಅನ್ನಸಂತರ್ಪಣೆ) !

ಭಜನೆಗಳೆಂದರೆ ಪ.ಪೂ. ಬಾಬಾರವರ ಅತ್ಯಂತ ಪ್ರೀತಿಯ ವಿಶ್ರಾಂತಿಸ್ಥಾನ. ಬಾಬಾ ಅಂದರೆ ಭಜನೆ ಮತ್ತು ಭಜನೆ ಅಂದರೆ ಬಾಬಾ. ಪ.ಪೂ. ಬಾಬಾ ಅಂದರೆ ಭಜನೆಯ ಸಾಕಾರ ರೂಪ ! ಬಡವರ ಗುಡಿಸಲಿನಿಂದ ಹಿಡಿದು ಇಂದೂರ, ದೇವಾಸ, ಬಡೋದಾ, ಕೊಲ್ಲಾಪುರದ ಮಹಾರಾಜರು; ಮಧ್ಯಪ್ರದೇಶದ ಅಂದಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು; ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮುಂತಾದ ಎಲ್ಲರಲ್ಲಿಯೂ ಭಕ್ತರಾಜ ಮಹಾರಾಜರ ಭಜನೆಗಳಾಗಿವೆ. ಕರ್ನಲ್ ಇಥಾಪೆ ಇವರು ಒಮ್ಮೆ ಕೊಲ್ಲಾಪುರದ ಮಹಾರಾಜರಿಗೆ, ‘ಮೈದಾನದಲ್ಲಿ ನೋಡಬೇಕು ಜಟ್ಟಿಗಳನ್ನು ಮತ್ತು ಭಜನೆಯಲ್ಲಿ ನೋಡಬೇಕು ಭಕ್ತರಾಜರನ್ನು !‘ ಎಂದು ಹೇಳಿದ್ದರು. ತಳಮಳ, ಮಾರ್ಗ ತೋಚದಿರುವುದು, ಪ್ರಾರ್ಥನೆ, ಅನುಭೂತಿ ಇತ್ಯಾದಿ ಎಲ್ಲ ವಿಷಯಗಳು ಬಾಬಾರ ಭಜನೆಯಲ್ಲಿರುವುದರಿಂದ ಅವರವರ ಮಟ್ಟಕ್ಕನುಸಾರ ಪ್ರತಿಯೊಬ್ಬರಿಗೂ, ‘ನಮ್ಮದೇ ಭಾವ ಭಜನೆಯಲ್ಲಿ ವ್ಯಕ್ತವಾಗಿದೆ’ ಎಂದು ಅನಿಸುತ್ತಿತ್ತು. ಹಾಗಾಗಿ ಪ್ರತಿಯೊಬ್ಬರಿಗೂ ಭಜನೆಗಳು ತಮ್ಮದೆಂದೆನಿಸುತ್ತದೆ. ಶಿಷ್ಯಾವಸ್ಥೆಯಲ್ಲಿ ಭಜನೆಗಳು ಇವು ಬಾಬಾರವರ ಸಾಧನೆ ಮತ್ತು ಸೇವೆಗಳಾಗಿದ್ದವು. ಗುರುಗಳ ಎದುರಿಗೆ ನಿಂತು ಬಾಬಾರವರು ಗಂಟೆಗಟ್ಟಲೆ ಭಜನೆಗಳನ್ನು ಹಾಡುತ್ತಿದ್ದರು. ಗುರುಪದವಿಗೆ ತಲುಪಿದ ನಂತರ ಭಜನೆಗಳು ಇವು ಬಾಬಾರವರ ಶಿಷ್ಯರಿಗೆ ಉಪದೇಶ ನೀಡುವ ಮತ್ತು ಚೈತನ್ಯದೊಂದಿಗೆ ಏಕರೂಪರಾಗಿ ಮಾರ್ಗದರ್ಶನ ನೀಡುವ ಒಂದು ಮಾಧ್ಯಮಗಳಾಗಿದ್ದವು.

ಬಾಬಾರವರ ಗುರುಗಳು ಒಮ್ಮೆ ಅವರಿಗೆ, ‘ಖುದ್‌ಕೆ ಲಿಯೆ ಲಿಖಾ, ಅಬ್ ದೂಸರೋಂಕೆ ಲಿಯೇ ಲಿಖ್’ (ತನಗಾಗಿ ಬರೆದೆ ಈಗ ಬೇರೆಯವರಿಗಾಗಿ ಬರಿ) ಎಂದು ಹೇಳಿದ್ದರು. ಅನಂತರ ಬಾಬಾರವರು ಉಪದೇಶದ ಭಜನೆಗಳನ್ನೂ ಬರೆದರು. ಆ ಮೊದಲಿನ ಭಜನೆಗಳು ಸಾಧಕಾವಸ್ಥೆಯಲ್ಲಿನ ತಳಮಳ, ಅಡಚಣೆ, ಅನುಭೂತಿ ಮುಂತಾದವುಗಳ ಬಗ್ಗೆ ಇದ್ದವು. ಬಾಬಾರವರಿಗೆ ಶಬ್ದಗಳಿಂದ ಏನನ್ನು ಕಲಿಸಬೇಕಾಗಿತ್ತೋ, ಅದನ್ನು ಅವರು ಪ್ರಮುಖವಾಗಿ ಭಜನೆಗಳಿಂದ ಕಲಿಸಿದರು. ಭಜನೆಗಳ ಮೂಲಕ ಕಲಿಸುವಾಗ ಬಾಬಾ ತಮ್ಮ ರಾಗದಿಂದಲೇ ಅಪ್ರತಿಮವಾಗಿ ಭಜನೆಗಳನ್ನು ಹಾಡುತ್ತಿದ್ದರಿಂದ ಅದರಲ್ಲಿ ನಾದಶಕ್ತಿಯೊಂದಿಗೆ ಚೈತನ್ಯವೂ ಇದೆ; ಆದುದರಿಂದಲೇ ಭಜನೆಗಳನ್ನು ಕೇಳುವವರಿಗೆ ಶಬ್ದಜನ್ಯ ಮತ್ತು ಶಬ್ದಾತೀತ ಹೀಗೆ ಎರಡೂ ವಿಧದ ಬೋಧನೆಯು ಸಿಗುತ್ತದೆ. ಆದ್ದರಿಂದಲೇ ಬಾಬಾರವರು ವ್ಯಾಖ್ಯಾನ, ಪ್ರವಚನ ಮುಂತಾದ ಮಾಧ್ಯಮಗಳಿಂದ ಅಧ್ಯಾತ್ಮವನ್ನು ಕಲಿಸದೇ, ಅದನ್ನು ಭಜನೆಗಳ ಮಾಧ್ಯಮದಿಂದ ಕಲಿಸಿದರು. ಭಜನೆಯಿಂದ ಆತ್ಮಸ್ವರೂಪದ ಅರಿವಾಗಿ ತನ್ನಲ್ಲಿಯೇ ದೇವರೂಪ ಕಂಡು ಈಶ್ವರನ ಇಚ್ಛೆಯೊಂದಿಗೆ ಏಕರೂಪವಾಗಲು ಬರುತ್ತದೆ. ಪ.ಪೂ. ಬಾಬಾರವರು ಭಜನೆಗಳ ಮೂಲಕ ನೀಡಿದ ಬೋಧನೆಯ ಕೆಲವು ಉದಾಹರಣೆಗಳು.

ದೇಹಬುದ್ಧಿಯನ್ನು ಮರೆಯುವುದರ ಮಹತ್ವ

(ಪರಾತ್ಪರ ಗುರು) ಡಾ. ಜಯಂತ ಆಠವಲೆ : ಜ್ಞಾನೇಶ್ವರ ಮಹಾರಾಜರು ಹೀಗೆ ಹೇಳುತ್ತಾರೆ, ‘ದೇವರ ದ್ವಾರದಲ್ಲಿ ಒಂದು ಕ್ಷಣ ನಿಂತೆ ಮತ್ತು ನಾಲ್ಕೂ ಮುಕ್ತಿಗಳು ಲಭಿಸಿದವು’. ಹಾಗಿರುವಾಗ ಈ ಅನುಭವವು ನನಗೆ ಏಕೆ ಬರುವುದಿಲ್ಲ ? (ಶಿಷ್ಯಾವಸ್ಥೆಯಲ್ಲಿರುವಾಗ ನಡೆದ ಸಂವಾದ)
ಪ.ಪೂ. ಬಾಬಾ : ಈ ಅಭಂಗದಲ್ಲಿನ ‘ಒಂದು ಕ್ಷಣ’ ಅಂದರೆ, ಸಂಪೂರ್ಣ ದೇಹಬುದ್ಧಿಯನ್ನು ಮರೆತು ನಿಲ್ಲುವುದು. ಅಂತಹವನಿಗೇ ನಾಲ್ಕೂ ಮುಕ್ತಿಗಳ ಲಾಭವಾಗುತ್ತದೆ. (ಸಲೋಕ, ಸಮೀಪ, ಸರೂಪ ಮತ್ತು ಸಾಯುಜ್ಯ ಈ ನಾಲ್ಕು ಮುಕ್ತಿಗಳಾಗಿವೆ.)

ಆಸಕ್ತಿ, ಸಂದೇಹ ಮತ್ತು ವಿವೇಕ

ಪ್ರಕೃತಿಯ ಬಗ್ಗೆ ಆಸಕ್ತಿ, ಅದರ ಮೂಲಕ ಆಗುವ ಮೋಹ ಮತ್ತು ಆ ಅಂಧಃಕಾರದಲ್ಲಿ ಸತ್ಯದ ಅರಿವಿನ ಸಂದೇಹಾಸ್ಪದ ಸ್ಥಿತಿಯ ನಿರ್ಮಾಣ, ಇದು ಸಹಜವಲ್ಲವೇ ? ಇದೇ ಪ್ರಾರಬ್ಧಭೋಗದ ಪ್ರಾಕೃತಿಕ ದುಃಖ. ಬಾಕಿ ‘ಅವನು’ ಎಲ್ಲದರ ಕರ್ತನಾಗಿದ್ದಾನೆ ಎಂಬ ಪೂರ್ಣ ವಿಶ್ವಾಸವಿದೆ.
ಆದುದರಿಂದಲೇ ಪ್ರತಿಯೊಂದು ಸಂದೇಹವು ಮೋಹದೆಶೆಯಲ್ಲಿ ಉತ್ಪನ್ನವಾಗುತ್ತಿರುತ್ತದೆ, ಅಲ್ಲವೇ ? ವಿವೇಕದಿಂದ ಅದು ನಾಶವಾಗಿ ಕೇವಲ ಒಂದೇ ಒಂದು ಶೇಷ ಉಳಿಯುತ್ತದೆ. (ಬಾಬಾರವರು ಶ್ರೀ. ದಾದಾ ದಳವಿಯವರಿಗೆ ಬರೆದ ಪತ್ರದಿಂದ ಆಯ್ದ ಭಾಗ)

ಪ್ರೇಮ ಮತ್ತು ಪ್ರೀತಿ

ಅ. ನಿಮ್ಮ ಪ್ರೇಮ ಮತ್ತು ಸಂತರ ಪ್ರೇಮದಲ್ಲಿ ಆಕಾಶ-ಪಾತಾಳದಷ್ಟು ವ್ಯತ್ಯಾಸವಿರುತ್ತದೆ. ನೀವು ಯಾರಾದರೂ ನಿಮ್ಮ ಮನಸ್ಸಿನಂತೆ ವರ್ತಿಸುವ ತನಕ ಅವರನ್ನು ಪ್ರೀತಿಸುತ್ತೀರಿ. ನಿಮ್ಮ ಮನಸ್ಸಿನ ವಿರುದ್ಧ ಏನಾದರೂ ಘಟಿಸಿದರೆ ನಿಮ್ಮ ಪ್ರೇಮ ಕಡಿಮೆಯಾಗುತ್ತದೆ. ತದ್ವಿರುದ್ಧ ಸಂತರು ಉದ್ದೇಶರಹಿತರಾಗಿ ಪ್ರೇಮಿಸುವುದರಿಂದ (ಪ್ರೀತಿ) ಅವರ ಪ್ರೇಮವು ಎಂದಿಗೂ ಇತರರ ಮೇಲೆ ಅವಲಂಬಿಸಿರುವುದಿಲ್ಲ. ನೀವು ಹೇಗೆ ವರ್ತಿಸಿದರೂ ಸಂತರು ನಿಮ್ಮನ್ನು ಕೇವಲ ಪ್ರೇಮ (ಪ್ರೀತಿ) ಇರುತ್ತದೆ.
೨. ಪ್ರೇಮವು ಶಾರೀರಿಕ, ಮಾನಸಿಕ, ಲೈಂಗಿಕ ಮೊದಲಾದ ಸ್ವರೂಪದಲ್ಲಿರುತ್ತದೆ, ಅಂದರೆ ಪ್ರಕೃತಿಯದ್ದಾಗಿರುತ್ತದೆ. ಪ್ರೀತಿಯೆಂದರೆ ಪುರುಷನ ಅಥವಾ ಆತ್ಮದ ಸೆಳೆತ.

ಶಿಷ್ಯರಿಗೆ ಸತ್ಸಂಗ ನೀಡುವ ಭ್ರಮಣ

ಪ.ಪೂ ಭಕ್ತರಾಜ ಮಹಾರಾಜರು ಪ್ರಯಾಣಕ್ಕಾಗಿ ಉಪಯೋಗಿಸಿದ ವಾಹನ ! ಈ ವಾಹನ ಈಗ ಕಾಂದಳಿಯಲ್ಲಿನ ಪ.ಪೂ. ಬಾಬಾರವರ ಮೂಲ ಮನೆಯಲ್ಲಿ ಇಡಲಾಗಿದೆ

ಬಾಬಾರವರಂತೆ ಲಕ್ಷಗಟ್ಟಲೆ ಕಿಲೋಮೀಟರ್ ಪ್ರಯಾಣ ಮಾಡಿದ ಬೇರೆ ಯಾರಾದರು ಸಂತರು ಇದ್ದಾರೆಯೋ, ಇಲ್ಲವೋ, ಎಂಬುದು ಸಂಶಯವೇ ಆಗಿದೆ. ಬಾಬಾ ಪ್ರತಿ ಎರಡು-ಮೂರು ದಿನಗಳಲ್ಲಿ ಯಾವುದಾದರೊಂದು ಹೊಸ ಊರಿನಲ್ಲಿ ಇರುತ್ತಿದ್ದರು. ಬಿಸಿಲು-ಮಳೆ, ಹಾಳಾದ ರಸ್ತೆಗಳು, ನಿದ್ದೆ, ಊಟ, ತಮ್ಮ ಆರೋಗ್ಯ ಯಾವುದನ್ನೂ ಲೆಕ್ಕಿಸದೇ ಬಾಬಾರವರು ಹಗಲು-ರಾತ್ರಿ ಪ್ರಯಾಣ ಮಾಡುತ್ತಿದ್ದರು. ಆರ್ಥಿಕ ಅಡಚಣೆಗಳಿಂದಾಗಿ ವಾಹನಗಳು ಹಳೆಯದೇ ಇರುತ್ತಿದ್ದವು. ಆದುದರಿಂದ ಪ್ರಯಾಣದಲ್ಲಿ ಕೆಲವೊಮ್ಮೆ ಟೈರ್ ಪಂಕ್ಚರ್ ಆದರೆ ಕೆಲವೊಮ್ಮೆ ಪೆಟ್ರೋಲ್ ಮುಗಿದಾಗ, ಹೀಗೆ ಅನೇಕ ಕಾರಣಗಳಿಂದ ಬಾಬಾರವರಿಗೆ ರಸ್ತೆಯಲ್ಲಿಯೇ ಉಳಿಯಬೇಕಾಗುತ್ತಿತ್ತು. ಆದ್ದರಿಂದಲೇ ಊಟದ ಎಲ್ಲ ಸಾಮಾನುಗಳನ್ನು ಬಾಬಾ ಜೊತೆಗೆ ತೆಗೆದುಕೊಳ್ಳುತ್ತಿದ್ದರು. ಮುಂದೆ ವಾಹನ ರಿಪೇರಿಯಾಗುವ ತನಕ ಭಜನೆ ಮತ್ತು ಭೋಜನ ನಡೆಯುತ್ತಿತ್ತು. ಬಾಬಾರವರು ಹಳೆಯ ವಾಹನಗಳನ್ನು ಖರೀದಿಸುವುದರಿಂದ ಅವುಗಳ ರಿಪೇರಿಗೆ ತುಂಬಾ ಹಣ ಖರ್ಚು ಮಾಡಬೇಕಾಗುತ್ತಿತ್ತು. ನಂತರ ಕೆಲವು ತಿಂಗಳ ನಂತರ ಬಾಬಾ ಅದನ್ನು ಮಾರಾಟ ಮಾಡಿ ಬೇರೊಂದು ಹಳೆಯ ವಾಹನ ತೆಗೆದುಕೊಳ್ಳುತ್ತಿದ್ದರು, ಬಳಿಕ ಅದರ ರಿಪೇರಿ ಮಾಡುವುದು, ಹೀಗೆ ಸತತ ೨೫ ವರ್ಷಗಳ ತನಕ ನಡೆಯುತ್ತಿತ್ತು. ಇಷ್ಟೆಲ್ಲ ಶ್ರಮಪಡುವುದಕ್ಕಿಂತ ಹೊಸ ವಾಹನ ಖರೀದಿಸಿದ್ದರೇ ಒಳ್ಳೆಯದು ಎಂದು ಕೆಲವೊಮ್ಮೆ ಅನಿಸುತ್ತಿತ್ತು !

ಪ.ಪೂ. ಬಾಬಾರವರ ಪ್ರಯಾಣದ ಉದ್ದೇಶ

ಸಾಧನೆಯ ದೃಷ್ಟಿಯಿಂದ ಸತ್ಸಂಗವು ಎಲ್ಲಕ್ಕಿಂತ ಮಹತ್ವದ್ದಾಗಿರುತ್ತದೆ. ಶಿಷ್ಯರಿಗೆ ಸತ್ಸಂಗ ದೊರೆಯಬೇಕು, ಎಂದು ಪ.ಪೂ. ಬಾಬಾರವರು ಮುಂದಿನ ಕಾರಣಗಳಿಂದಾಗಿ ಸ್ವತಃ ಸತತವಾಗಿ ಪ್ರಯಾಣವನ್ನು ಮಾಡುತ್ತಿದ್ದರು.

೧. ಈ ಪ್ರಯಾಣದ ಮುಖ್ಯ ಉದ್ದೇಶವು ಮುಂದಿನಂತ್ತಿತ್ತು. ಶಿಷ್ಯರ ಪ್ರಗತಿಯಾಗಬೇಕಾದರೆ, ಗುರು-ಶಿಷ್ಯರ ಸಂಪರ್ಕ ಆದಷ್ಟು ಹೆಚ್ಚಿರಬೇಕು.
ಶಿಷ್ಯರಿಗೆ ಸಾಂಸಾರಿಕ ಅಡಚಣೆಗಳಿದ್ದುದರಿಂದ ಅವರಿಗೆ ಆಗಾಗ ಬಾಬಾರವರ ಕಡೆಗೆ ಹೋಗಲು ಸಾಧ್ಯವಿರಲಿಲ್ಲ, ಆದುದರಿಂದ ಬಾಬಾರವರು ಸ್ವತಃ ಅವರಲ್ಲಿಗೆ ಹೋಗುತ್ತಿದ್ದರು.
೨. ಇದರ ಹಿಂದೆ ಇನ್ನೂ ಒಂದು ಉದ್ದೇಶವಿತ್ತು. ಧುಳೆ, ಜಳಗಾಂವ, ನಾಶಿಕ, ಪುಣೆ, ಮುಂಬೈ ಮೊದಲಾದ ಬೇರೆ ಬೇರೆ ನಗರಗಳಲ್ಲಿನ ಶಿಷ್ಯರು ಹಣ ಮತ್ತು ಸಮಯವನ್ನು ವೆಚ್ಚ (ಖರ್ಚು) ಮಾಡಿ ಬಾಬಾರವರ ಕಡೆ ಹೋಗುವುದಕ್ಕಿಂತ ಬಾಬಾ ಸ್ವತಃ ಯಾವುದಾದರೊಂದು ನಗರಕ್ಕೆ ಹೋದರೆ, ಅಲ್ಲಿನ ಎಲ್ಲ ಶಿಷ್ಯರಿಗೆ ತಾನಾಗಿಯೇ ಗುರುದರ್ಶನ, ಗುರು ಸಹವಾಸ ಮತ್ತು ಗುರುಸೇವೆಯ ಲಾಭವಾಗುತ್ತಿತ್ತು.
೩. ಶಿಷ್ಯರಿಗೆ ಪ.ಪೂ. ಬಾಬಾರವರ ಮತ್ತು ಇತರ ಸಂತರ ಭೇಟಿಯಾಗುತ್ತಿತ್ತು, ಆಗ ಅವರ ನಡೆ-ನುಡಿಗಳಿಂದಾಗಿ ಶಿಷ್ಯರಿಗೆ ಅನೇಕ ಹೊಸ ವಿಷಯಗಳು ಕಲಿಯಲು ಸಿಗುತ್ತಿತ್ತು.

ಪ.ಪೂ. ಬಾಬಾರವರೊಂದಿಗೆ ಪ್ರಯಾಣ ಮಾಡುವುದರಿಂದ ಭಕ್ತರಿಗಾಗುವ ಲಾಭ

೧೯೯೫ ರಲ್ಲಿ ಪ.ಪೂ. ಬಾಬಾರವರ ಅಮೃತಮಹೋತ್ಸವವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಭಜನೆ, ಭ್ರಮಣ ಮತ್ತು ಭಂಡಾರ ಈ ತ್ರಿಸೂತ್ರಗಳ ಪ್ರವೇಶದ್ವಾರಗಳನ್ನು ಮಾಡಲಾಯಿತು. ಇದು ಒಂದು ಸಭಾಂಗಣದ ಪ್ರವೇಶದ್ವಾರವಾಗಿತ್ತು.

೧. ದೇಹಬುದ್ಧಿ ನಾಶವಾಗುವುದು

ಅನೇಕ ಬಾರಿ ಅಕಸ್ಮಾತಾಗಿ, ಅಂದರೆ ಬಾಬಾರವರೊಂದಿಗೆ ಪ್ರಯಾಣಕ್ಕೆ ಹೋಗುವ ಯಾವುದೇ ಕಲ್ಪನೆ ಇಲ್ಲದಿರುವಾಗ, ಪ್ರಯಾಣಕ್ಕೆ ಹೋಗಲು ಯಾವುದೇ ಸಿದ್ಧತೆ ಇಲ್ಲದಿರುವಾಗ, ಬಾಬಾರವರ ದರ್ಶನಕ್ಕೆ ಹೋದ ಯಾರಾದರೊಬ್ಬ ಭಕ್ತನಿಗೆ ಬಾಬಾರವರು, ‘ವಾಹನದಲ್ಲಿ ಕುಳಿತುಕೊ’ ಎಂದು ಹೇಳುತ್ತಿದ್ದರು ಆಗ ಟವೆಲ್, ದಂತಮಂಜನ, ಬಟ್ಟೆ, ಹಣ ಇತ್ಯಾದಿಗಳೇನೂ ಇಲ್ಲದಿರುವಾಗ ಅವನಿಗೆ ಕೇವಲ ಮೈಮೇಲಿನ ಬಟ್ಟೆಯೊಂದಿಗೆ ವಾಹನದಲ್ಲಿ ಕುಳಿತುಕೊಳ್ಳಬೇಕಾಗುತಿತ್ತು. ಹಣವಿಲ್ಲದ್ದರಿಂದ ಯಾರಾದರೂ ವಾಹನದಲ್ಲಿನ ಇತರರಿಂದ ಅಥವಾ ವಾಸ್ತವ್ಯಕ್ಕೆ ತಲುಪಿದ ನಂತರ ಆ ಶಿಷ್ಯನಿಂದ ಹಣವನ್ನು ಪಡೆದು ಟವೆಲ್, ಬಟ್ಟೆಗಳನ್ನು ಖರೀದಿಸಿದರೆ, ಬಾಬಾರವರು ಕೆಲವೊಮ್ಮೆ ಅವನನ್ನು ಅಲ್ಲಿಂದಲೇ ಮನೆಗೆ ಕಳುಹಿಸುತ್ತಿದ್ದರು. ಪ್ರಯಾಣ ಮುಂದುವರಿದಂತೆ ಮೂತ್ರ, ಶೌಚ, ತಿನ್ನುವುದು ಮುಂತಾದವುಗಳ ಬಗ್ಗೆ ಚಿಂತೆಯೇ ಉಳಿಯುತ್ತಿರಲಿಲ್ಲ; ಮುಂದೆ ಸ್ನಾನ ಮಾಡದಿರುವುದು, ಬಟ್ಟೆಗಳನ್ನು ಬದಲಿಸದಿರುವುದು ಹೀಗೆ ಮೂರು-ನಾಲ್ಕು ದಿನಗಳಾದ ಬಳಿಕ ಅವನಿಗೆ, ಈಗ ಅವನ ಮೈಗೆ ಬೆವರಿನ ವಾಸನೆ ಬರುವುದಿಲ್ಲ ಅಥವಾ ಈ ವಿಷಯದ ಬಗ್ಗೆ ಅವನಿಗೆ ಈಗ ಏನೂ ಅನಿಸುವುದಿಲ್ಲ ಎಂಬುದು ಗಮನಕ್ಕೆ ಬರುತ್ತಿತ್ತು. ಅಂದರೆ ಅವನ ದೇಹಬುದ್ಧಿ ಕಡಿಮೆಯಾಗಲಾರಂಭಿಸುತ್ತಿತ್ತು. ಆಗ ಬಾಬಾರವರೇ ಅವನಿಗೆ ಹೊಸ ಬಟ್ಟೆ ಕೊಡುತ್ತಿದ್ದರು. ರಾತ್ರಿ ಮಲಗುವಾಗ ಬಾಬಾ ಯಾವುದಾದರೂ ಪೆಟ್ರೋಲ್ ಬಂಕ್, ಅಡವಿ, ಗದ್ದೆ ಅಥವಾ ಕಾಲುದಾರಿಯಲ್ಲಿ ರಾತ್ರಿಯ ವಾಸ್ತವ್ಯ ಮಾಡಿ ಅಳಿದುಳಿದ ದೇಹಬುದ್ಧಿಯನ್ನೂ ಹೋಗಲಾಡಿಸುತ್ತಿದ್ದರು. ಈ ರೀತಿ ಎಷ್ಟು ಓದಿದರೂ ಅಥವಾ ಕೀಳುವುದರಿಂದ ಕಡಿಮೆಯಾಗದ ದೇಹಬುದ್ಧಿ ಬಾಬಾರೊಂದಿಗಿನ ೩-೪ ದಿನಗಳಲ್ಲಿ ಕಡಿಮೆಯಾಗುತ್ತಿತ್ತು.

೨. ಸತತ ವರ್ತಮಾನಕಾಲದಲ್ಲಿರುವುದು

ಯಾವಾಗ ಹೊರಡುವುದು, ಎಲ್ಲಿ ಮತ್ತು ಯಾವಾಗ ತಲುಪುವುದು, ದಾರಿಯಲ್ಲಿ ಎಲ್ಲಿ ಊಟ ಮಾಡುವುದು, ತಿನ್ನುವುದು ಇತ್ಯಾದಿ ಎಲ್ಲವನ್ನು ಕೇವಲ ಬಾಬಾರವರೇ ನಿರ್ಧರಿಸುತ್ತಿದ್ದುದರಿಂದ ಮತ್ತು ಅದರಲ್ಲಿ ಪದೇಪದೇ ಪರಿವರ್ತನೆ (ಬದಲು) ಮಾಡುತ್ತಿರುವುದರಿಂದ ಸಾಧಕನು ಸತತ ವರ್ತಮಾನಕಾಲದಲ್ಲಿರಲು ಕಲಿಯುತ್ತಿದ್ದನು.

೩. ಇತರರ ಮನೆಯಲ್ಲಿ ತಮ್ಮ ಮನೆಯಂತೆ ಕೆಲಸ ಮಾಡುವುದು

ಯಾರಾದರೊಬ್ಬರ ಮನೆಗೆ ನಿವಾಸಕ್ಕಾಗಿ ಹೋದಾಗ ಅತಿಥಿಯಂತೆ ಕುಳಿತುಕೊಳ್ಳದೇ, ಅವರಿಗೆ ಅಡುಗೆ ಮನೆಯವರೆಗೆ ಹೋಗಿ ಸಹಾಯ ಮಾಡುವುದು, ಅಂದರೆ ‘ಬಾಬಾ ನಮ್ಮ ಮನೆಗೇ ಬಂದಿದ್ದಾರೆ’ ಎಂದು ತಿಳಿದು ಎಲ್ಲವನ್ನೂ ಮಾಡುವುದು, ಇಂತಹ ಭಿನ್ನ ವಿಷಯವನ್ನು ಸಾಧಕನು ಕಲಿಯುತ್ತಿದ್ದನು. ಇದರಿಂದ ‘ಎಲ್ಲ ಮನೆಗಳೂ ನನ್ನ ಮನೆಗಳೇ ಆಗಿವೆ’ ಎಂಬ ಭಾವವು ಕ್ರಮೇಣ ನಿರ್ಮಾಣವಾಗುತ್ತಿತ್ತು. ಇದರಿಂದಲೇ ಮುಂದೆ ‘ಈ ವಿಶ್ವವೇ ನನ್ನ ಮನೆ’ ಎಂಬ ಭಾವವು ಯಾವಾಗಲಾದರೂ ನಿರ್ಮಾಣವಾಗುತ್ತಿತ್ತು.

೪. ಮಾನ-ಅಪಮಾನದ ಆಚೆಗೆ ಹೋಗುವುದು

ಕೆಲವರ ಮನೆಗಳಲ್ಲಿ ಬಾಬಾರವರೊಂದಿಗೆ ಬಂದವರನ್ನು ಸಂಪೂರ್ಣ ನಿರ್ಲಕ್ಷಿಸುವುದು ಅನುಭವಕ್ಕೆ ಬರುತ್ತಿತ್ತು. ಇಷ್ಟೇ ಅಲ್ಲ, ‘ಬಾಬಾರವರು ಇತರರನ್ನು ಏಕೆ ಕರೆದುಕೊಂಡು ಬರುತ್ತಾರೆ ! ‘ಎಂಬ ಭಾವನೆಯೂ ಅನುಭವಿಸಲು ಸಿಗುತ್ತಿತ್ತು. ಕೆಲವೊಮ್ಮೆ ಇಂತಹ ಮಾತುಗಳೂ ಕೇಳಬೇಕಾಗುತ್ತಿತ್ತು. ಅವುಗಳನ್ನು ನಿರ್ಲಕ್ಷಿಸಲೂ ಸಾಧಕನು ಕಲಿಯುತ್ತಿದ್ದನು; ಆದ್ದರಿಂದಲೇ ಬಾಬಾರವರೊಂದಿಗೆ ಪ್ರಯಾಣವನ್ನು ಮಾಡುವಾಗ ಬಾಹ್ಯತಃ ಯಾವ ಕೆಲಸವೂ ಇಲ್ಲವೆಂದು ಅನಿಸಿದರೂ, ಪ್ರತ್ಯಕ್ಷ ಶಿಷ್ಯನು ಸತತವಾಗಿ ಏನಾದರೊಂದನ್ನು ಕಲಿಯುತ್ತಿದ್ದನು.

ಭಂಡಾರ (ಅನ್ನಸಂತರ್ಪಣೆ)

ಅನ್ನದಾನ ಇದೊಂದು ಶ್ರೇಷ್ಠವಾದ ದಾನವಾಗಿರುವುದರಿಂದ ಬಾಬಾರವರು ಸಾವಿರಾರು ಸ್ಥಳಗಳಲ್ಲಿ ಭಂಡಾರ ಮಾಡಿದರು. ಭಂಡಾರದಿಂದ ಶಿಷ್ಯರ ಪರಸ್ಪರರಲ್ಲಿ ಆತ್ಮೀಯತೆ ಬೆಳೆಯಲು ಸಹಾಯವಾಗುತ್ತದೆ. ಭಂಡಾರಕ್ಕೆ ಸಂಬಂಧಪಟ್ಟ ಸವಿಸ್ತಾರ ವಿವರಣೆ ಬಾಬಾರವರ ಜೀವನಚರಿತ್ರೆಯಲ್ಲಿ ಕೊಟ್ಟಿದೆ. ಭಂಡಾರಕ್ಕೆ (ಅನ್ನಸಂತರ್ಪಣೆ) ಮೊದಲ ಬಾರಿಗೆ ಬಂದವರಿಗೆ ಬಾಹ್ಯತಃ, ಕೆಲವರು ಅಡುಗೆ ಮಾಡುತ್ತಿದ್ದಾರೆ, ಕೆಲವರು ಊಟವನ್ನು ಬಡಿಸುತ್ತಿದ್ದಾರೆ, ಕೆಲವರು ಪಾತ್ರೆಗಳನ್ನು ತೊಳೆಯುತ್ತಿದ್ದರೆ, ಕೆಲವರು ಹರಟೆ ಹೊಡೆಯುತ್ತಿದ್ದಾರೆ ಇತ್ಯಾದಿಗಳು ಕಾಣಿಸುತ್ತವೆ. ದೊಡ್ಡ ಶಿಬಿರಗಳಿಗೆ ಹೋದಾಗ ಸ್ಕೌಟ್, ಗೈಡ್ ಅಥವಾ ಎನ್.ಸಿ.ಸಿ.ಯ ವಿದ್ಯಾರ್ಥಿಗಳು ಮಾಡುವಂತೆ ಎಲ್ಲವೂ ಅನಿಸುತ್ತದೆ. ‘ಭಂಡಾರದಲ್ಲಿ ಏನಾದರು ಅಧ್ಯಾತ್ಮವಿದೆ’, ಎಂದೆನಿಸುವುದಿಲ್ಲ; ಆದರೆ ಭಂಡಾರಗಳನ್ನು ಮಾಡುವುದರ ಹಿಂದಿನ ಮುಂದಿನ ಉದ್ದೇಶಗಳನ್ನು ಗಮನದಲ್ಲಿಟ್ಟರೆ ‘ಎಲ್ಲವೂ ಕಾಣಿಸಿದಂತೆ ಇರುವುದಿಲ್ಲ’ ಎಂಬುದು ಅವರ ಗಮನಕ್ಕೆ ಬರುತ್ತಿತ್ತು.

ಭಜನೆ, ಭ್ರಮಣ ಮತ್ತು ಭಂಡಾರ ಈ ಮೂರು ‘ಭ’ಕಾರಗಳಿಂದ ಬಾಬಾರವರು ಈಶ್ವರಪ್ರಾಪ್ತಿಯ ಸುಲಭ ಮಾರ್ಗವನ್ನು ಉಪಲಬ್ಧ ಮಾಡಿಕೊಟ್ಟರು.

ಅನ್ನದಾನ

ಜ್ಞಾನದಾನ ಎಲ್ಲಕ್ಕಿಂತ ಶ್ರೇಷ್ಠ ದಾನವಾಗಿದ್ದರೂ, ಅದು ಸೂಕ್ಷ್ಮವಾಗಿದ್ದರಿಂದ ಅದರ ಮಹತ್ವ ಅನೇಕರಿಗೆ ತಿಳಿಯುವುದಿಲ್ಲ. ಅದಕ್ಕಿಂತ ಹಸಿದವನಿಗೆ ಅನ್ನ ಕೊಟ್ಟರೆ ಅದು ಸ್ಥೂಲ ಚಕ್ಷುಗಳಿಗೆ ಕಾಣಿಸುವುದರಿಂದ ಅದರ ಮಹತ್ವವು ಅನೇಕರಿಗೆ ತಿಳಿಯುತ್ತದೆ.

ಭಂಡಾರ

ಪ.ಪೂ. ಬಾಬಾರವರ ಮೊರಟಕ್ಕಾ (ಖಮಡವಾ, ಮಧ್ಯಪ್ರದೇಶ)ದ ‘ಶ್ರೀ ಸದ್ಗುರು ಸೇವಾ ಸದನ ಈ ಆಶ್ರಮದಲ್ಲಿ ಭಂಡಾರಾದ ಸಮಯದಲ್ಲಿ ಭಕ್ತರಿಗೆ ಊಟ ಬಡಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ (ವರ್ಷ ೧೯೯೨)

 

೧೯೯೫ ರಲ್ಲಿ ಪ.ಪೂ. ಬಾಬಾರವರ ಅಮೃತ ಮಹೋತ್ಸವ ಆಚರಿಸಲಾಯಿತು. ಆಗ ಭಜನೆ, ಭ್ರಮಣ ಮತ್ತು ಭಂಡಾರಾ ಈ ತ್ರಿಸೂತ್ರಗಳ ಪ್ರತೀಕಗಳನ್ನು ಪ್ರವೇಶದ್ವಾರದಲ್ಲಿ ಹಾಕಲಾಗಿತ್ತು. ಆ ಚಿತ್ರದಲ್ಲಿನ ಪ್ರವೇಶದ್ವಾರವು ಭೋಜನ ಮಂಟಪದ್ದಾಗಿದೆ

ಸೇವೆ

ಭಂಡಾರದ (ಅನ್ನಸಂತರ್ಪಣೆ) ಸಿದ್ಧತೆಯನ್ನು ಮಾಡುವುದು, ಊಟವನ್ನು ಬಡಿಸುವುದು, ಪಾತ್ರೆಗಳನ್ನು ತೊಳೆಯುವುದು ಮೊದಲಾದ ವಿಭಿನ್ನ ರೀತಿಯ ಸೇವೆಗಳನ್ನು ಮಾಡುವ ಅವಕಾಶವು ಸಾಧಕರಿಗೆ ಸಿಗುತ್ತದೆ. ಸ್ವತಃ ಊಟ ಮಾಡುವುದಕ್ಕಿಂತ ಇತರರಿಗೆ ಊಟ ಬಡಿಸುವುದು, ಅವರು ತೃಪ್ತರಾಗಿರುವುದನ್ನು ನೋಡಿ ಸಮಾಧಾನವೆನಿಸುವುದು, ಈ ಅನುಭವವನ್ನು ಅವರವರೇ ಪಡೆದುಕೊಳ್ಳಬೇಕು.

ತ್ಯಾಗ

ಭಂಡಾರದಲ್ಲಿನ ಸೇವೆಗಳಿಂದ ತನುವಿನ ತ್ಯಾಗವಾಗುತ್ತದೆ ಮತ್ತು ಭಂಡಾರಗಳಿಗೆ ಆಹಾರಧಾನ್ಯಗಳನ್ನು ತರಲು ಹಣವನ್ನು ಅರ್ಪಿಸುವುದು ಅಥವಾ ವಸ್ತುಗಳನ್ನು ಕೊಡುವುದರಿಂದ ಧನದ ತ್ಯಾಗವಾಗುತ್ತದೆ. ‘ಭಂಡಾರದ ಕಾರ್ಯವು ಸರಿಯಾಗಿ ನೆರವೇರಬೇಕು’, ಎಂಬ ಒಂದೇ ವಿಚಾರವು ಸೇವೆ ಮಾಡುವವರ ಮನಸ್ಸಿನಲ್ಲಿರುವುದರಿಂದ ಅವನ ಮನಸ್ಸಿನ ತ್ಯಾಗವೂ ಆಗುತ್ತದೆ.

ಇತರರ ಬಗ್ಗೆ ಪ್ರೇಮವೆನಿಸುವುದು

ನಮ್ಮೊಂದಿಗೆ ಭಂಡಾರದ ಕಾರ್ಯದಲ್ಲಿ ಸೇವೆ ಮಾಡುವ ಸಾಧಕರ ಬಗ್ಗೆ ಬಂಧುಭಾವವು ನಿರ್ಮಾಣವಾಗುತ್ತದೆ.

ಅಹಂಭಾವ ಕಡಿಮೆಯಾಗುವುದು

ವೈಯಕ್ತಿಕ ಜೀವನದಲ್ಲಿ ನಾವು ಯಾರೇ ಆಗಿದ್ದರೂ, ಭಂಡಾರದಲ್ಲಿ ‘ನಾವು ಸೇವಕರಾಗಿದ್ದೇವೆ’ ಎಂಬ ವಿಚಾರದಿಂದಾಗಿ ಅಹಂಭಾವ ಕಡಿಮೆಯಾಗಲು ಸಹಾಯವಾಗುತ್ತದೆ.

ಸತ್ಸಂಗ

ಸಂತರ ಅಥವಾ ಸಾಧಕರ ಭಂಡಾರವಿದ್ದರೆ, ಅಲ್ಲಿ ಸತ್ಸಂಗ ಆಗುತ್ತದೆ.

ದೇವರು

೧. ದೇವರಿಗೆ ಭಕ್ತಿ ಭಾವದ ಹಸಿವಿರುತ್ತದೆ ಎಂದು ಕಲಿಸುವುದು : ಮೊದಲು ನನಗೆ ಭಂಡಾರದ ವಾತಾವರಣವನ್ನು ನೋಡಿ ವಿಚಿತ್ರ ವೆನಿಸುತ್ತಿತ್ತು. ಕೆಲವರು ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದರು; ಆದರೆ ಅವರಿಗೆ ಬೈಗುಳ ಸಿಗುತ್ತಿದ್ದವು, ಕೆಲವರು ಆಕಡೆ-ಈ ಕಡೆ ತಿರುಗಾಡುತ್ತಿದ್ದರು; ಆದರೆ ಬಾಬಾ ಅವರನ್ನು ಹತ್ತಿರದಲ್ಲಿ ಕುಳ್ಳಿರಿಸಿಕೊಳ್ಳುತ್ತಿದ್ದರು. ‘ಊಟದ ತಟ್ಟೆಯಲ್ಲಿನ ಯಾವುದಾದರೊಂದು ಪದಾರ್ಥವು ಬಹಳ ಒಳ್ಳೆಯದಿರಬೇಕು’ ಎಂದು ಅನಿಸಿದಾಗ, ಬಾಬಾ ಎಲೆಯ ಕಡೆಗೆ ನೋಡಿ ಆ ಪದಾರ್ಥವನ್ನು ತೆಗೆದಿಡುತ್ತಿದ್ದರು. ಇದೆಲ್ಲ ಏನು ನಡೆದಿದೆ, ಎಂಬುದು ತಿಳಿಯುತ್ತಿರಲಿಲ್ಲ. ನಿಧಾನವಾಗಿ ಮಾತನಾಡದೇ (ನಾನೂ ಬಾಬಾರವರಿಗೆ ಏನೂ ಕೇಳುತ್ತಿರಲಿಲ್ಲ) ಬಾಬಾರವರು ಎಲ್ಲವನ್ನು ತಿಳಿಸುತ್ತಾ ಹೋದರು. ದೇವರಿಗೆ ಭಕ್ತಿ ಭಾವದ ಹಸಿವಿರುತ್ತದೆ; ‘ಯಾರು ಎಷ್ಟು ಪ್ರೇಮದಿಂದ ತಯಾರಿಸಿದ್ದಾರೆ’, ಎಂಬುದಕ್ಕೆ ಮಹತ್ವವಿದ್ದು ‘ಯಾರು ಎಷ್ಟು ಒಳ್ಳೆಯದನ್ನು ಮಾಡಿದ್ದಾರೆ’, ಎಂಬುದು ಗೌಣವಾಗಿದೆ.

೨. ಕರ್ಮಕಾಂಡದಿಂದ ಮುಂದೆ ಕರೆದುಕೊಂಡು ಹೋಗುವುದು : ಬಾಬಾರವರು ಮಹಾಶಿವರಾತ್ರಿ, ಏಕಾದಶಿ, ಸಂಕಷ್ಟಿ ಚತುರ್ಥಿ ಮುಂತಾದ ದಿನಗಳಲ್ಲಿ ಈರುಳ್ಳಿ ಬಜ್ಜಿ, ಕಚೋರಿಗಳನ್ನು ತಿನ್ನಲು ಹೇಳಿ ಅಥವಾ ನಿತ್ಯದ ಊಟ ಮಾಡಲು ಹೇಳಿ ಅನೇಕ ಶಿಷ್ಯರು ಮತ್ತು ಕೆಲವು ಸಂತರನ್ನೂ ಉಪವಾಸದ ಕರ್ಮಕಾಂಡದಿಂದ ಹೊರತೆಗೆದರು.

Leave a Comment