ಪ.ಪೂ. ಭಕ್ತರಾಜ ಮಹಾರಾಜರ ಗುರುಭಕ್ತಿ

ಪ.ಪೂ ಭಕ್ತರಾಜ ಮಹಾರಾಜ

ಗುರುಕೃಪೆಯನ್ನು ಸಂಪಾದಿಸಲು ಓರ್ವ ಸಾಧಕನಲ್ಲಿರಬೇಕಾದ ಮಹತ್ವದ ಗುಣಗಳೆಂದರೆ ಗುರುಗಳ ಬಗ್ಗೆ ಭಕ್ತಿ ಮತ್ತು ಶ್ರದ್ಧೆ. ಈ ಗುಣಗಳಿದ್ದರೆ ಮಾತ್ರ ಸಾಧಕನು ತನ್ನ ಸಾಧನೆಯಲ್ಲಿ ಮುಂದುಮುಂದಿನ ಪ್ರಗತಿಯನ್ನು ಶೀಘ್ರವಾಗಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪ್ರೇರಣಾಸ್ಥಾನರಾದ ಪ.ಪೂ. ಭಕ್ತರಾಜ ಮಹಾರಾಜರಿಗೆ (ಬಾಬಾ) ತಮ್ಮ ವೈಯಕ್ತಿಕ ಜೀವನ, ಸೇವೆ ಮುಂತಾದ ಪ್ರಸಂಗಗಳಲ್ಲಿ ಗುರುಗಳ ಮೇಲೆ ಎಷ್ಟು ಶ್ರದ್ಧೆ ಹಾಗೂ ಭಕ್ತಿ ಇತ್ತು ಎಂಬುದು ಮುಂದಿನ ಪ್ರಸಂಗಗಳಿಂದ ಸ್ಪಷ್ಟವಾಗುತ್ತದೆ.

ಬಾಬಾರಿಗೆ ಗುರುಗಳ ಮೇಲಿದ್ದ ಭಾವ

೧. ಒಮ್ಮೆ ಶ್ರೀ ಅನಂತಾನಂದ ಸಾಯೀಶರು (ಬಾಬಾರವರ ಗುರುಗಳು) ಒಂದು ಸ್ಥಳಕ್ಕೆ ಟಾಂಗಾದಲ್ಲಿ ಹೋಗುವವರಿದ್ದರು. ಆಗ ಅವರು ದಿನೂನಿಗೆ (ಬಾಬಾರವರ ಪೂರ್ವಾಶ್ರಮದ ಹೆಸರು) ಟಾಂಗಾದಲ್ಲಿ ಕುಳಿತುಕೊಳ್ಳಲು ಹೇಳಿದರು. ‘ಗುರುಗಳ ಪಕ್ಕದಲ್ಲಿ ಹೇಗೆ ಕುಳಿತುಕೊಳ್ಳುವುದು ?’ ಎಂಬ ವಿಚಾರದಿಂದ ದಿನೂ ಟಾಂಗಾದಲ್ಲಿ ಕುಳಿತುಕೊಳ್ಳಲಿಲ್ಲ. ಟಾಂಗಾದ ಹಿಂದೆ ಬರಿಗಾಲುಗಳಿಂದ ಓಡುತ್ತಿದ್ದನು. ಕಲ್ಲು ಮುಳ್ಳುಗಳಿದ್ದ ದಾರಿ ಅದು. ದಿನೂ ಕಾಲಿಗೆ ಏನೂ ತಾಗಬಾರದೆಂದು ಗುರುಗಳು ಅವನಿಗೆ ಅವರ ಚಪ್ಪಲಿಗಳನ್ನು ಕೊಟ್ಟರು. ‘ಗುರುಗಳ ಚಪ್ಪಲಿಗಳನ್ನು ತಾನು ಹೇಗೆ ಹಾಕಿಕೊಳ್ಳುವುದು ?’ ಎಂಬ ವಿಚಾರದಿಂದ ದಿನೂ ಚಪ್ಪಲಿಗಳನ್ನು ಹಾಕಿಕೊಳ್ಳಲಿಲ್ಲ. ಅವುಗಳನ್ನು ಗೌರವದಿಂದ ಎದೆಗವಚಿ ಟಾಂಗಾದ ಹಿಂದೆ ಓಡಿದನು!

೨. ಒಮ್ಮೆ ಬಾಬಾರವರು ತಮ್ಮ ಮಗಳಾದ ಮೀನಾಳನ್ನು ಕರೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ‘ಮಗಳನ್ನು ಜೋಪಾಸನೆ ಮಾಡುವವನು ನಾನು ಯಾರು ? ಗುರುಗಳು ಸಮರ್ಥರಿದ್ದಾರೆ’ ಎಂಬ ವಿಚಾರ ಬಂದಿತು ಮತ್ತು ಅವರು ಮೀನಾಳನ್ನು ರಸ್ತೆಯಲ್ಲಿ ಬಿಟ್ಟು ಹೊರಟು ಹೋದರು. ಅವಳು ಸಂಜೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿದಳು.

೩. ಒಮ್ಮೆ ಎಲ್ಲರ ಒತ್ತಾಯದ ಮೇರೆಗೆ ಅನಂತಾನಂದ ಸಾಯೀಶರು ಬಾಬಾರವರಿಗೆ ‘ಸತ್ಯನಾರಾಯಣ ಪೂಜೆ’ಯನ್ನು ಮಾಡಲು ಹೇಳಿದರು. ಆಗ ಬಾಬಾರವರು ಸತ್ಯನಾರಾಯಣ ಪೂಜೆಯನ್ನು ಮಾಡಿ ಅದರ ನೈವೇದ್ಯವನ್ನು ಗುರುಗಳಿಗೇ ತೋರಿಸಿದರು.

೪. ಒಮ್ಮೆ ಸೌ. ಸುಶೀಲಾರವರು (ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ) ಅನಾರೋಗ್ಯಪೀಡಿತರಾಗಿದ್ದರು. ಗುರುಗಳು ಬಂದ ನಂತರ ಸುಶೀಲಾರನ್ನು ಕಂಡು ‘ಸುಶೀಲಾಗೆ ಅನಾರೋಗ್ಯವಿದೆಯೇ’ ಎಂದು ಬಾಬಾರಲ್ಲಿ ವಿಚಾರಿಸಿದರು. ಆಗ ಬಾಬಾರವರು ‘ಹೌದು’ ಎಂದರು. ಆದರೆ ಅವರು ಅಡುಗೆಯನ್ನು ತಯಾರಿಸಲಿಲ್ಲ. ಅದರ ಬಗ್ಗೆ ಗುರುಗಳು ಕೇಳಿದಾಗ ಬಾಬಾರವರು ‘ಸಂಸಾರವನ್ನು ನಿಮಗೆ ಅರ್ಪಿಸಿದ್ದೇನೆ. ಆದುದರಿಂದ ನಾನೇಕೆ ಚಿಂತಿಸಲಿ ?’ ಎಂದು ಹೇಳಿದರು. ಅನಂತರ ಸ್ವತಃ ಗುರುಗಳು ಅಡುಗೆಯನ್ನು ತಯಾರಿಸಿ ದಿನಕರ (ಬಾಬಾ) ಹಾಗೂ ಸುಶೀಲಾರಿಗೆ ಊಟ ಬಡಿಸಿದರು.

೫. ಒಮ್ಮೆ ಗುರುಗಳು ‘ನಾನು ದೀನೂ(ಬಾಬಾರವರ ಪೂರ್ವಾಶ್ರಮದ ಹೆಸರು)ಗೆ ಎಲ್ಲವನ್ನೂ ನೀಡಿದ್ದೇನೆ’ ಎಂದು ಹೇಳಿದರು. ಮುಂದೆ ಮೊರಟಕ್ಕಾ ಎಂಬ ಆಶ್ರಮದ ಹರಾಜಿನ ಬಗ್ಗೆ ನೋಟಿಸು ಬಂದಾಗ ಬಾಬಾರವರು ‘ಎಲ್ಲ’ ಎಂಬುದರಲ್ಲಿ ಇದು ಸಹ ಬಂದಿತು ಎಂದರು. ಈ ಪ್ರಸಂಗದಲ್ಲಿಯೂ ಗುರುಗಳ ಮೇಲಿನ ಅವರ ಶ್ರದ್ಧೆ ಕಿಂಚಿತ್ತೂ ವಿಚಲಿತವಾಗಲಿಲ್ಲ.

೬. ಗುರುಗಳ ಊಟವಾದ ನಂತರ ಅವರ ಎಂಜಲನ್ನು ಬಾಬಾ ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಬಾಬಾರವರು ದಿನನಿತ್ಯ ಬೆಳಗ್ಗೆ ಗುರುಗಳ ಕಾಲನ್ನು ತೊಳೆದು ಆ ನೀರನ್ನು ‘ತೀರ್ಥ’ವೆಂದು ಸೇವಿಸುತ್ತಿದ್ದರು. ಒಮ್ಮೆ ಕೆಸರಿರುವ ರಸ್ತೆಯಿಂದ ಶ್ರೀ ಸಾಯೀಶರು ಹೋಗುತ್ತಿರುವಾಗ ಶ್ರೀ ಸಾಯೀಶರ ಕಾಲುಗಳ ಸ್ಪರ್ಶವಾದ ಗುಂಡಿಯಲ್ಲಿನ ಕೆಸರು ಮಿಶ್ರಿತ ನೀರನ್ನು ತೀರ್ಥವೆಂದು ಕುಡಿದರು ! ಗುರುಗಳ ಬಟ್ಟೆಯನ್ನು ತೊಳೆದ ನಂತರ ಉಳಿದ ಸಾಬೂನಿನ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದರು.

ಪ.ಪೂ. ಭಕ್ತರಾಜ ಮಹಾರಾಜರಿಗೆ ತಮ್ಮ ಗುರುಗಳಾದ ಶ್ರೀ ಅನಂತಾನಂದ ಸಾಯೀಶರ ಬಗೆಗಿನ ಶ್ರದ್ಧೆ ಹಾಗೂ ಭಕ್ತಿ ಎಷ್ಟು ಉಚ್ಚ ಮಟ್ಟದ್ದಾಗಿತ್ತು ಎಂದು ಸಾಧಕರು ಕಲ್ಪನೆಯನ್ನೂ ಮಾಡಲಾರರು.

Leave a Comment