ಹಸುವಿನ ಸೆಗಣಿಯಿಂದ ಭಸ್ಮವನ್ನು ತಯಾರಿಸುವ ವಿಧಿ

ಶಿವನ ಪೂಜೆಯಲ್ಲಿ ಭಸ್ಮಧಾರಣೆಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಭಸ್ಮವನ್ನು ತಯಾರಿಸುವ ವಿಧಿಯನ್ನು ತಿಳಿದುಕೊಳ್ಳೋಣ

‘ದೇಶಿ ಹಸುವಿನ ಸೆಗಣಿಯನ್ನು ನೆಲದ ಮೇಲೆ ಬೀಳದಂತೆ ಮೇಲಿನಿಂದಲೇ ಹಿಡಿಯಬೇಕು. ಅದರಿಂದ ಬೆರಣಿಗಳನ್ನು ತಯಾರಿಸಬೇಕು. ಈ ಬೆರಣಿಗಳನ್ನು ದಹನ ಮಾಡಿದ ಮೇಲೆ ಯಾವ ಬೂದಿಯು ತಯಾರಾಗುತ್ತದೆಯೋ ಅದಕ್ಕೆ ಭಸ್ಮವೆನ್ನುತ್ತಾರೆ.

ಭಸ್ಮವನ್ನು ಯಾವ ಸ್ಥಳದಲ್ಲಿ ತಯಾರಿಸುವುದಿರುತ್ತದೆಯೋ ಆ ಸ್ಥಳವನ್ನು ಮೊದಲು ಸೆಗಣಿಯಿಂದ ಸಾರಿಸಿಕೊಳ್ಳಬೇಕು. ಗೋಮೂತ್ರ ಅಥವಾ ವಿಭೂತಿಯ ತೀರ್ಥವನ್ನು ಸಿಂಪಡಿಸಿ ಆ ಸ್ಥಳವನ್ನು ಶುದ್ಧಗೊಳಿಸಿ ರಂಗೋಲಿಯನ್ನು ಹಾಕಬೇಕು. ಅನಂತರ ಹವನದ ಪಾತ್ರೆಯಲ್ಲಿ ಅಥವಾ ಯಾವುದಾದರೊಂದು ವಿಶಾಲಪಾತ್ರೆಯಲ್ಲಿ ಬೆರಣಿಗಳನ್ನು ಸರಿಯಾಗಿ ರಚಿಸಿಕೊಳ್ಳಬೇಕು. ಬೆರಣಿಗಳ ಮೇಲೆ ದೇಶಿ ಹಸುವಿನ ತುಪ್ಪವನ್ನು ಹಾಕಬೇಕು. ಕುಲದೇವತೆ, ಇಷ್ಟದೇವತೆ ಮತ್ತು ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಿ ಕರ್ಪೂರದಿಂದ ಬೆರಣಿಗಳನ್ನು ಪ್ರಜ್ವಲಿಸಬೇಕು. ಬೆರಣಿಗಳು ಸುಡುತ್ತಿರುವಾಗ ಕುಲದೇವತೆ ಅಥವಾ ಇಷ್ಟದೇವತೆಯ ನಾಮಜಪ ಮಾಡಬೇಕು. ಭಸ್ಮವು ತಯಾರಾದ ನಂತರ ಅದನ್ನು ಒಂದು ಪಾತ್ರೆಯಲ್ಲಿ ತುಂಬಬೇಕು. ಅನಂತರ ಪಾತ್ರೆಯನ್ನು ಸಾಧ್ಯವಿದ್ದಲ್ಲಿ ದರ್ಭೆಯಿಂದ ಇಲ್ಲವಾದರೆ ಬಲಗೈಯಿಂದ ಸ್ಪರ್ಶಿಸಿ ಹತ್ತು ಬಾರಿ ಗಾಯತ್ರಿ ಮಂತ್ರವನ್ನು ಹೇಳಬೇಕು. ಹೀಗೆ ಮಾಡುವುದರಿಂದ ಭಸ್ಮವು ಅಭಿಮಂತ್ರಿತವಾಗುತ್ತದೆ. ಭಸ್ಮವನ್ನು ಅಭಿಮಂತ್ರಿತಗೊಳಿಸುವುದೆಂದರೆ ಭಸ್ಮದಲ್ಲಿ ದೇವತೆಯ ಚೈತನ್ಯವನ್ನು ತರುವುದು. ಗಾಯತ್ರಿ ಮಂತ್ರದ ಪುರಶ್ಚರಣ ಮಾಡಿದ ವ್ಯಕ್ತಿಯು ಭಸ್ಮವನ್ನು ಅಭಿಮಂತ್ರಿತಗೊಳಿಸಿದರೆ ಆ ಭಸ್ಮವನ್ನು ಉಪಯೋಗಿಸುವ ವ್ಯಕ್ತಿಗೆ ಹೆಚ್ಚು ಲಾಭವಾಗುತ್ತದೆ. ಭಸ್ಮವನ್ನು ಅಭಿಮಂತ್ರಿಸುವ ವ್ಯಕ್ತಿಯು ಗಾಯತ್ರಿಮಂತ್ರದ ಪುರಶ್ಚರಣವನ್ನು ಮಾಡದಿದ್ದಲ್ಲಿ ಅವನು ಭಾವಪೂರ್ಣವಾಗಿ ‘ಓಂ ನಮಃ ಶಿವಾಯ|’ ಎಂಬ ನಾಮಜಪವನ್ನು ಮಾಡಬೇಕು ಅಥವಾ ಶಿವನ ಯಾವುದಾದರೊಂದು ಸಿದ್ಧಗೊಳಿಸಿದ ಮಂತ್ರವನ್ನು ಪಠಿಸಬೇಕು.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’)

Leave a Comment