ಸಂಸಾರಿಗಳಿಗೆ ಸಾಕ್ಷಾತ್ಕಾರ ಹೇಗೆ ಸಾಧ್ಯ?

ಗೋಂದಾವಲಿ ಕ್ಷೇತ್ರದಲ್ಲಿ ವಾಸವಾಗಿದ್ದ ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಒಂದು ದಿನ ಸಂಸಾರಿಗಳಾದ ಭಕ್ತಜನರು ಒಂದು ಪ್ರಶ್ನೆಯನ್ನು ಕೇಳಿದರಂತೆ: “ನಾವು ಸಂಸಾರಿಕರು. ನಮಗೆ ಹೆಂಡತಿ ಮಕ್ಕಳು, ಹೊಲಮನೆ, ದನಕರುಗಳು – ಮುಂತಾಗಿ ಅನೇಕ ಉಪಾಧಿಗಳಿವೆ. ತಾವು ಹೇಳುವಂತೆ ಶ್ರೀರಾಮನಾಮಸ್ಮರಣೆಯನ್ನು ಸತತವಾಗಿ ಮಾಡುವುದಾಗಲೀ, ಶ್ರೀರಾಮನನ್ನು ಏಕಾಗ್ರತೆಯಿಂದ ಧ್ಯಾನಿಸುವುದಾಗಲಿ ಕೊನೆಗೆ ಸ್ವಲ್ಪಕಾಲ ಒಂದೇ ಚಿತ್ತದಿಂದ ಜಪ ಮಾಡುವುದಾಗಲೀ ನಮಗೆ ಸಾಧ್ಯವಿಲ್ಲವಾಗಿದೆ. ಇಂಥ ಸ್ಥಿತಿಯಲ್ಲಿ ನಾವು ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದು ಹೇಗೆ? ನಮ್ಮಂಥವರಿಗೆ ಪರಮಾರ್ಥ ಪ್ರಾಪ್ತಿಗೆ ಮಾರ್ಗವಾವುದು? ದಯವಿಟ್ಟು ತಿಳಿಸಿಕೊಡಿ.”

ಅದಕ್ಕೆ ಶ್ರೀ ಮಹಾರಾಜರು ಉತ್ತರಿಸಿದರು : “ನೀವು ಹೆಂಡತಿ ಮಕ್ಕಳನ್ನು ಕಂಡಾಗ ಶ್ರೀರಾಮನು ಈ ಹೆಂಡತಿ ಮಕ್ಕಳನ್ನು ನನಗೆ ಪಾಲನೆ ಮಾಡುವುದಕ್ಕಾಗಿ ಕೊಟ್ಟಿದ್ದಾನೆ. ನಾನು ಅವರ ಬಗ್ಗೆ ಏನೇನು ಮಾಡಬೇಕಾದ ಕರ್ತವ್ಯವಿದೆಯೋ ಅದೆಲ್ಲವನ್ನೂ ಮಾಡಿ ಶ್ರೀರಾಮನಿಗೆ ಒಪ್ಪಿಸಬೇಕು. “ಈ ಬಗ್ಗೆ ಏನು ಮಾಡಿದಿರಿ?” ಎಂದು ಪರಮಾತ್ಮನು ಕೇಳುತ್ತಾನೆ. ನಾನವನಿಗೆ ಉತ್ತರ ಹೇಳಬೇಕು – ಎಂಬುದನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಳ್ಳಿ. ಹೀಗೆಯೇ ಮನೆ ಹೊಲ ದನಗಳೇ – ಮುಂತಾದ ಎಲ್ಲದರ ಬಗ್ಗೆಯೂ ನಾನು ಶ್ರೀರಾಮನಿಗೆ ಉತ್ತರ ಹೇಳಬೇಕು ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಇದರಿಂದ ನಿಮಗೆ ನಿಮ್ಮ ಸಂಸಾರದ ಯಾವುದೇ ವಸ್ತುವನ್ನು ನೋಡಿದಾಗ “ಇದು ಶ್ರೀರಾಮನದು, ನನಗೆ ಅವನು ಇದನ್ನು ನೋಡಿಕೊಳ್ಳಲು ಕೊಟ್ಟಿದ್ದನೆ. ನಾನು ನನ್ನ ಕರ್ತವ್ಯವನ್ನು ಆ ಬಗ್ಗೆ ಮಾಡಿ ಅವನಿಗೆ ಒಪ್ಪಿಸಬೇಕು” ಎಂಬ ಭಾವವು ಹುಟ್ಟುವುದು. ಕೆಲವು ದಿನ ಪ್ರಯತ್ನಪೂರ್ವಕವಾಗಿ ಈ ಭಾವನೆಯನ್ನು ರೂಢಿಸಿಕೊಂಡರೆ, ಕಾಲಾಂತರದಲ್ಲಿ ಅದು ರೂಢಿಯಾಗಿ, ಮುಂದೆ ಸಹಜವಾಗಿಯೇ ಆ ಭಾವನೆಯು ನಿಮ್ಮ ಅಂತಃಕರಣದಲ್ಲಿ ಮೂಡುವುದು. ಇದರಿಂದ ಮುಂದೆ ‘ನನ್ನದು’ ಎಂಬ ಅಭಿಮಾನವು ಹೊರಟು ಹೋಗಿ, ಒಳಗೂ ಹೊರಗೂ ರಾಮಭಾವನೆಯು ವ್ಯಾಪಿಸಿಬಿಡುವುದು. ಈ ಸಾಧನೆಯನ್ನು ಬಿಡದೆ ಆರು ತಿಂಗಳ ಕಾಲ ಮಾಡಿ ನೋಡಿರಿ. ಶ್ರೀರಾಮನ ಸಾಕ್ಷಾತ್ಕಾರವಾಗದಿದ್ದಲ್ಲಿ ಆಗ ನನ್ನಲ್ಲಿ ಬಂದು ಕೇಳಿರಿ” ಎಂದರಂತೆ.

ಪ್ರಾರ್ಥನೆ ಬಲವಾದಂತೆ ಸಂಸಾರದ ಬಂಧನಗಳೂ ಸಡಿಲವಾಗಿ, ದೇವರ ಕಡೆಗೆ ಓಟ ತೀವ್ರವಾಗುತ್ತದೆ. ದೇವರು ನೋಡುವುದು ಭಕ್ತನ ಮನಸ್ಸು ಹೃದಯಗಳನ್ನೇ ಹೊರತು ಆತ ಸಂನ್ಯಾಸಿಯೋ, ಸಂಸಾರಿಯೋ ಎಂಬುದನ್ನಲ್ಲ.

Leave a Comment