ಶ್ರೀ ಗಣೇಶ ಮೂರ್ತಿಯನ್ನು ನೀರಿನ ಟ್ಯಾಂಕಿಯಲ್ಲಿ ವಿಸರ್ಜಿಸಬೇಡಿ!
ಇತ್ತೀಚೆಗೆ ಶ್ರೀ ಗಣೇಶ ಮೂರ್ತಿಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀಗಣೇಶ ಮೂರ್ತಿಯನ್ನು ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಮಾಲಿನ್ಯ, ನೀರಿನ ಕೊರತೆ ಇತ್ಯಾದಿಗಳಿಂದಾಗಿ ಕೆಲವು ಜನರು ಮೂರ್ತಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯುತ್ತಾರೆ. ಇದಕ್ಕೆ ಉಪಾಯವೆಂದು ರಾಜ್ಯ ಸರಕಾರವು ನೀರಿನ ಟ್ಯಾಂಕ್‌ವುಳ್ಳ ಲಾರಿಯನ್ನು ಮೂರ್ತಿ ವಿಸರ್ಜನೆಗೆ ಒದಗಿಸಿತ್ತು. ಇದು ಅಶಾಸ್ತ್ರೀಯ ಹಾಗೂ ಅಯೋಗ್ಯವಾಗಿದೆ. ಏಕೆಂದರೆ ಮೂರ್ತಿಯನ್ನು ಜಲಾಶಯದಲ್ಲಿಯೇ ವಿಸರ್ಜನೆ ಮಾಡಬೇಕು.
೧. ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂರ್ತಿಯು ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ!: ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂರ್ತಿ ಶಾಸ್ತ್ರಕ್ಕನುಸಾರ ಶ್ರೀಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣಗಳನ್ನು ಹಚ್ಚಿದ್ದಿರಬೇಕು. ಅದು ಪರಿಸರ ಸ್ನೇಹಿಯಾಗಿರುತ್ತದೆ.
೨. ಇಂತಹ ಮೂರ್ತಿ ವಿಸರ್ಜನೆಯಿಂದ ಜಲಮಾಲಿನ್ಯವಾಗದೇ ಆಧ್ಯಾತ್ಮಿಕ ಲಾಭವಾಗುವುದು: ಮೂರ್ತಿಯಲ್ಲಿರುವ ಚೈತನ್ಯದಿಂದ ಅದನ್ನು ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಇದರಿಂದ ಅನೇಕರಿಗೆ ಅದರ ಲಾಭ ವಾಗುತ್ತದೆ. ಈ ನೀರಿನ ಬಾಷ್ಪೀಭವನ ಆಗುವುದರಿಂದ ವಾತಾವರಣ ಸಾತ್ತ್ವಿಕವಾಗುತ್ತದೆ.
ಆಪತ್ಕಾಲದಲ್ಲಿ ಗಣೇಶನ ಮೂರ್ತಿಯನ್ನು ಹೇಗೆ ವಿಸರ್ಜಿಸಬೇಕು?
ಕೆಲವೊಂದು ಸ್ಥಳಗಳಲ್ಲಿ ಜಲಾಶಯಗಳಲ್ಲಿ (ಬಾವಿ, ಕೆರೆ, ನದಿ ಇತ್ಯಾದಿಗಳಲ್ಲಿ) ಗಣೇಶ ಮೂರ್ತಿಯ ವಿಸರ್ಜನೆಗೆ ಬೇಕಾಗುವಷ್ಟು ನೀರು ಇರುವುದಿಲ್ಲ ಅಥವಾ ಕಲುಷಿತವಾಗಿರುತ್ತದೆ. ಆಗ ಮುಂದಿನ ಉಪಾಯ ಮಾಡಬೇಕು.
೧. ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡದೇ ಅಡಿಕೆಯನ್ನು ಇಟ್ಟು ಪೂಜೆ ಮಾಡಬೇಕು. ಅಡಿಕೆಯನ್ನು ಸ್ವಲ್ಪ ನೀರಿರುವ ಬಾವಿ ಅಥವಾ ಹಳ್ಳದಲ್ಲಿ ವಿಸರ್ಜಿಸಬಹುದು.
೨. ಶ್ರೀ ಗಣೇಶ ಚತುರ್ಥಿಗಾಗಿ ಧಾತುವಿನ (ಲೋಹದ) ಒಂದು ಹೊಸ ಮೂರ್ತಿಯನ್ನು ತಂದು ಅದಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು. ವಿಸರ್ಜನೆ ಸಮಯದಲ್ಲಿ ಇಂತಹ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆ ಇರುವುದಿಲ್ಲ, ಉತ್ತರ ಪೂಜೆಯಾದ ನಂತರ ಗಣಪತಿಯ ಕೈಯ ಮೇಲೆ ಅಕ್ಷತೆಯನ್ನು ಹಾಕಿ ಮೂರ್ತಿಯನ್ನು ಬಲಗೈಯಿಂದ ಆ ಸ್ಥಳದಿಂದ ಸ್ವಲ್ಪ ಸರಿಸಬೇಕು. ಅನಂತರ ಮೂರ್ತಿಯನ್ನು ಮನೆಯಲ್ಲಿನ ಯಾವುದಾದರೊಂದು ಪವಿತ್ರ ಸ್ಥಳದಲ್ಲಿ ಇಡಬೇಕು. ಉತ್ತರಪೂಜೆಯ ನಂತರ ಆ ಮೂರ್ತಿಯ ಲ್ಲಿನ ದೈವತ್ವವೂ ವಿಸರ್ಜಿಸಲ್ಪಡುತ್ತದೆ. ಆದುದರಿಂದ ಇಂತಹ ಮೂರ್ತಿಯ ಪೂಜೆ ಯನ್ನು ಪ್ರತಿದಿನ ಮಾಡಬೇಕಾಗಿಲ್ಲ. ಮುಂದಿನ ವರ್ಷ ಮತ್ತೆ ಈ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ಪೂಜಿಸಬಹುದು.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಗಣಪತಿ’)
ಬರಪೀಡಿತ ಪ್ರದೇಶಗಳಲ್ಲಿ ಶ್ರೀ ಗಣೇಶಮೂರ್ತಿಯನ್ನು ವಿಸರ್ಜಿಸುವ ಬಗೆಗಿನ ಪರ್ಯಾಯಗಳು.
ಅನೇಕ ಸ್ಥಳಗಳಲ್ಲಿ ಮಳೆಯಾಗದಿರುವುದರಿಂದ ನದಿ ಹಾಗೂ ಸರೋವರಗಳು ಬತ್ತಿ ಹೋಗುತ್ತವೆ. ಆದ್ದರಿಂದ ಶ್ರೀ ಗಣೇಶಮೂರ್ತಿಗಳನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡಲು ಅಡಚಣೆಯುಂಟಾಗಬಹುದು. ಆಪತ್ಕಾಲ ನಡೆಯುತ್ತಿರುವುದರಿಂದ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದಲ್ಲಿನ ತತ್ತ್ವಕ್ಕನುಸಾರ ಮಾಡಿದರೆ ಧರ್ಮಶಾಸ್ತ್ರ ಸಮ್ಮತವಾಗುತ್ತದೆ. ಆದ್ದರಿಂದ ಸದ್ಯದ ಬರಗಾಲದಲ್ಲಿ ಶ್ರೀ ಗಣೇಶಮೂರ್ತಿಯ ವಿಸರ್ಜನೆಗಾಗಿ ಈ ಮುಂದಿನ ಪರ್ಯಾಯಗಳನ್ನು ಅವಲಂಬಿಸಬಹುದು.
೧. ಸಣ್ಣ ಮೂರ್ತಿಯನ್ನು ಸ್ಥಾಪಿಸುವುದು
ಅ. ಪ್ರತಿವರ್ಷ ದೊಡ್ಡ ಮೂರ್ತಿಯನ್ನು ಸ್ಥಾಪಿಸುವ ಪರಂಪರೆಯಿದ್ದರೂ, ಬರಗಾಲದ ಪರಿಸ್ಥಿತಿಯಲ್ಲಿ ವಿಸರ್ಜನೆಗೆ ಸುಲಭವಾಗಬೇಕೆಂದು ಸಣ್ಣ (೬-೭ ಇಂಚು) ಮೂರ್ತಿಯನ್ನು ಪೂಜಿಸಬೇಕು.
ಆ. ಉತ್ತರಪೂಜೆಯ ನಂತರ ಈ ಮೂರ್ತಿಯನ್ನು ಮನೆಯ ಹೊರಗೆ ತುಳಸಿ ವೃಂದಾವನದ ಸಮೀಪ ಅಥವಾ ಅಂಗಳದಲ್ಲಿ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ವಿಸರ್ಜಿಸಬಹುದು. ಪಟ್ಟಣದ ಫ್ಲಾಟ್’ಗಳಲ್ಲಿ ವಾಸಿಸುವವರಿಗೆ ಈ ಮೇಲಿನ ಅನುಕೂಲಗಳಿಲ್ಲದಿರುವುದರಿಂದ ಅವರು ಮನೆಯ ಒಳಗೇ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸಬಹುದು.
ಇ. ಮೂರ್ತಿಯು ನೀರಿನಲ್ಲಿ ಸಂಪೂರ್ಣ ಕರಗಿದ ನಂತರ ಆ ನೀರು ಮತ್ತು ಮಣ್ಣು ಕಾಲಿನಡಿ ಬರದಂತೆ ಮಂದಾರ, ಆಲದ ಮರ, ಅರಳಿಮರ ಇತ್ಯಾದಿ ಸಾತ್ತ್ವಿಕ ಮರಗಳ ಬುಡಕ್ಕೆ ಹಾಕಬೇಕು.
೨. ಸಣ್ಣ ಮೂರ್ತಿಯನ್ನು ಉಪಯೋಗಿಸುವ ಪರ್ಯಾಯ ಸಾಧ್ಯವಿಲ್ಲದಿದ್ದರೆ, ದೊಡ್ಡ ಮೂರ್ತಿಯ ಉತ್ತರಪೂಜೆ ಮಾಡಿ ಅದನ್ನು ಮನೆಯಲ್ಲಿಯೇ ಸಾತ್ತ್ವಿಕ ಸ್ಥಳದಲ್ಲಿ (ಉದಾ. ದೇವರಕೋಣೆಯ ಹತ್ತಿರ) ಇಡಬೇಕು. ಈ ಮೂರ್ತಿಗೆ ಪೂಜೆ ಮಾಡುವ ಅವಶ್ಯಕತೆಯಿಲ್ಲ. ಧೂಳು ಆವರಿಸಬಾರದೆಂದು ಅದನ್ನು ಒಂದು ಪೆಟ್ಟಿಗೆಯಲ್ಲಿ ಮುಚ್ಚಿಡಬೇಕು. ಮುಂದೆ ನೈಸರ್ಗಿಕ ಜಲಮೂಲಗಳಲ್ಲಿ ನೀರು ಉಪಲಬ್ಧವಾದಾಗ ಅದನ್ನು ವಿಸರ್ಜಿಸಬೇಕು.
ಆಪತ್ಕಾಲದಲ್ಲಿ ನಿರ್ಮಾಲ್ಯ ಹೀಗೆ ವಿಸರ್ಜಿಸಿ !
ಶ್ರೀ ಗಣೇಶಮೂರ್ತಿಯೊಂದಿಗೆ ನಿರ್ಮಾಲ್ಯವನ್ನು ವಿಸರ್ಜನೆ ಮಾಡಬೇಕು. ನಿರ್ಮಾಲ್ಯದ ಚೈತನ್ಯ ನೀರಿನಲ್ಲಿ ವಿಸರ್ಜನೆಯಾದುದರಿಂದ ನೀರಿನಿಂದ ಆ ಚೈತನ್ಯ ಸಮಷ್ಟಿ ಸ್ತರದಲ್ಲಿ ಲಾಭವಾಗುತ್ತದೆ. ಆದರೆ ಆಪತ್ಕಾಲದಲ್ಲಿ ನಿರ್ಮಾಲ್ಯ ನೀರಿನಲ್ಲಿ ವಿಸರ್ಜಿಸದೆ ನೀರಿನಲ್ಲಿ ಮುಳುಗಿಸಿ ತೆಗೆಯಬೇಕು ಮತ್ತು ಆ ನೀರನ್ನು ಸ್ನಾನಕ್ಕಾಗಿ ಉಪಯೋಗಿಸಬೇಕು. ನೀರನ್ನು ಹೂವಿನ ಗಿಡಗಳಿಗೆ ಕೂಡ ಹಾಕಬೇಕು. ನಂತರ ನಿರ್ಮಾಲ್ಯವನ್ನು ಗೊಬ್ಬರ ಮಾಡಲು ಉಪಯೋಗಿಸಬಹುದು.
(ಕೆಲವೊಮ್ಮೆ ಗಣೇಶಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಸಂಚಾರ ದಟ್ಟಣೆ, ಬಿರುಗಾಳಿಯಂತಹ ಆಪತ್ಕಾಲದ ಸ್ಥಿತಿಬರಬಹುದು. ಕೆಲವೊಮ್ಮೆ ವಿಸರ್ಜನೆಯ ಸಮಯದಲ್ಲಿ ಆಕಸ್ಮಿಕವಾಗಿ ಎಲ್ಲ ಜಲಮೂಲಗಳು ಮಲಿನವಾಗುವುದರಿಂದ ಆ ನೀರು ಮೂರ್ತಿ ವಿಸರ್ಜನೆಗೆ ಅಯೋಗ್ಯವಾಗಿರುವ ಸಾಧ್ಯತೆಯೂ ಬರಬಹುದು. ಇಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿಯೂ ಈ ಮೇಲೆ ಹೇಳಿದಂತೆ ಮಾಡಬೇಕು.)
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ)
– ಶ್ರೀ. ದಾಮೋದರ ವಝೆ ಗುರೂಜಿ, ಸಂಚಾಲಕರು, ಸನಾತನ ಸಂಸ್ಥೆಯ ಸಾಧಕ-ಪುರೋಹಿತ ಪಾಠಶಾಲೆ.

ಮೂರ್ತಿ ವಿಸರ್ಜನೆಯ ಪೂಜೆ ಹೇಗೆ ಮಾಡಬೇಕು?