ಪತ್ರಿಕೆಗಳಲ್ಲಿನ ರಾಶಿ ಭವಿಷ್ಯದ ನಿಖರತೆಯೆಷ್ಟು ?

ಈಗಿನ ಯಾವುದೇ ಪತ್ರಿಕೆ ತೆಗೆದು ನೋಡಿದರೂ ರಾಶಿ ಭವಿಷ್ಯವನ್ನು/ವಾರ ಭವಿಷ್ಯವನ್ನು ಪ್ರಕಟಿಸದ ಪತ್ರಿಕೆಯೇ ಇಲ್ಲ ಎನಿಸುತ್ತದೆ. ಇಂತಹ ರಾಶಿಫಲವು ಎಷ್ಟರ ಮಟ್ಟಿಗೆ ಒಂದೇ ರಾಶಿಗೆ ಸೇರಿದ ಎಲ್ಲ ವ್ಯಕ್ತಿಗಳಿಗೆ ಸರಿಯಾಗಬಹುದು ಎಂಬ ಪ್ರಶ್ನೆಯು ನಮಗೆದುರಾಗುತ್ತದೆ. ಅಂತೆಯೇ ಒಂದೊಂದು ಟಿ.ವಿ ವಾಹಿನಿಯಲ್ಲೂ ಒಬ್ಬೊಬ್ಬ ಜ್ಯೋತಿಷಿಯು ವಿಲಕ್ಷಣ ವೇಷಭೂಷಣಗಳನ್ನು ತೊಟ್ಟುಕೊಂಡು, ಲ್ಯಾಪ್‌ಟಾಪ್ ಎದುರಿಟ್ಟುಕೊಂಡು ಶ್ರೋತೃಗಳನ್ನು ಆಕರ್ಷಕ ಶಬ್ದಗಳಿಂದ ರಂಜಿಸುತ್ತಾ ಭವಿಷ್ಯ ಹೇಳುತ್ತಾರೆ. ಕೇವಲ ಜನ್ಮದಿನಾಂಕ, ಹುಟ್ಟಿದ ಸಮಯ ಹೇಳಿದರೆ ಸಾಕು- ಹುಟ್ಟಿದ ಜಾಗದ ಹೆಸರು ಹೇಳದಿದ್ದರೂ ಪರವಾಗಿಲ್ಲ – ಸುಲಲಿತವಾಗಿ ಶ್ರೋತೃವಿನ ಮನಸ್ಸಿಗೊಪ್ಪುವಂತೆ ಪ್ರಶ್ನೆಗಳಿಗೆ ಸಿದ್ಧರೂಪದ ಉತ್ತರ ಸಿಗುತ್ತದೆ. ಪರಿಹಾರವೂ ಸಿದ್ಧೌಷದದಂತೆ ಕೂಡಲೇ ದೊರೆಯುತ್ತದೆ. ಜ್ಯೋತಿಷ್ಯವೆಂದರೆ ಇಷ್ಟು ಸುಲಭದ ಶಾಸ್ತ್ರವೇ? ಈ ಜ್ಯೋತಿಷಿಗಳು ಇಷ್ಟೂ ಪ್ರವೀಣರೇ? ಎಂಬ ಪ್ರಶ್ನೆಯು ಮನಸ್ಸಿನಲ್ಲಿ ಉದ್ಭವಿಸುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೂ ಮನಸ್ಸು ಮತ್ತು ಬುದ್ಧಿ ಇದೆ. ನಮ್ಮ ಸೃಷ್ಟಿಕರ್ತನಾದ ಪರಮಾತ್ಮನದು ವಿಶ್ವಮನ ಮತ್ತು ವಿಶ್ವ ಬುದ್ಧಿ. ಅದು ಹುಲುಮಾನವನ ಮನಸ್ಸು ಮತ್ತು ಬುದ್ಧಿಗೆ ನೇರ ಸಂಪರ್ಕವಿರುವ ಕೇಂದ್ರವಾಗಿದೆ. ಮಾನವನಾಗಿರುವ ಜ್ಯೋತಿಷಿಯು ಶಾಸ್ತ್ರಪಾರಂಗತನಾಗಿ ದಿನಾಲೂ ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಪರಮಾತ್ಮನಿಗೆ ಪ್ರಾರ್ಥನೆ ಕೃತಜ್ಞತೆ ಸಲ್ಲಿಸುತ್ತಾ ಸದಾಚರಣೆಯಲಿದ್ದು ವಿಶ್ವಮನ, ವಿಶ್ವಬುದ್ಧಿಯೊಂದಿಗೆ ಅನುಸಂಧಾನ ಹೊಂದಬಲ್ಲವನಾಗಿದ್ದರೆ ಮಾತ್ರ ಆತನು ಹೇಳುವ ಜ್ಯೋತಿಷ್ಯ ಫಲವು ವಿಶ್ವಮನ ವಿಶ್ವಬುದ್ಧಿಯಿಂದ ಬರುವ ವಿಚಾರಗಳಿಗನುಸಾರವಾಗಿ ಹೆಚ್ಚು ಕಡಿಮೆ ಸರಿಯಾಗಿರುತ್ತದೆ. ಇಂತಹ ಜ್ಯೋತಿಷಿಗಳು ಕೆಲವೇ ಮಂದಿ ಇರಬಹುದು. ಇಲ್ಲದಿದ್ದರೆ ಅದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ನಮ್ಮ ರೇಡಿಯೋ ಅಥವಾ ದೂರದರ್ಶನವೂ ನಮಗೆ ಬೇಕಾದ ರೇಡಿಯೋ ನಿಲಯ ಅಥವಾ ದೂರದರ್ಶನ ಕೇಂದ್ರದೊಂದಿಗೆ ನೇರ ಸಂಪರ್ಕ ಹೊಂದಿದ್ದರೆ ಮಾತ್ರ ಇಚ್ಛಿತ ಕಾರ್ಯಕ್ರಮವನ್ನು ಕೇಳಬಹುದು/ವೀಕ್ಷಿಸಬಹುದು. ಕೆಲವೊಮ್ಮೆ ಒಂದೇ ಪ್ರಶ್ನೆಯನ್ನು ಬೇರೆ ಬೇರೆ ಮಟ್ಟದ ಜ್ಯೋತಿಷಿಗಳ ಮುಂದಿಟ್ಟರೆ ಬೇರೆ ಬೇರೆ ಉತ್ತರಗಳು ಸಿಗುತ್ತಿರುವುದು ಸಾಮಾನ್ಯ. ಅದರಿಂದ ಜ್ಯೋತಿಷ್ಯ ಶಾಸ್ತ್ರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಜ್ಯೋತಿಷ್ಯ ಶಾಸ್ತ್ರವೆಂಬುದು ಸುಳ್ಳಲ್ಲ. ಅದು ಕೇವಲ ಬೊಗಳೆಯಲ್ಲ. ಅಂತೆ ಕಂತೆಗಳ ಬೊಂತೆಯಲ್ಲ. ಆದರೆ ಫಲನಿರೂಪಣೆಯ ನಿಖರತೆಯು ಜ್ಯೋತಿಷಿಯ ಸಾಧನೆಯ ಬಲವನ್ನೂ ಕೇಳುಗನ ಪ್ರಾರಬ್ಧವನ್ನೂ ಅವಲಂಬಿಸಿರುತ್ತದೆ ಎಂಬುದು ಸತ್ಯ. ಕೆಲವೊಮ್ಮೆ ಎಷ್ಟೇ ತಜ್ಞ ವೈದ್ಯನಲ್ಲಿಗೆ ಹೋದರೂ ರೋಗಿಯ ಪ್ರಾರಬ್ಧದಿಂದ ಆತನ ಕಾಯಿಲೆಯ ಗುರುತೇ ತಜ್ಞ ವೈದ್ಯನಿಗೂ ಹತ್ತದೇ ಹೋಗಬಹುದು. ಇದೂ ಹಾಗೆಯೇ ಇದೆ.

ಪತ್ರಿಕೆಗಳಲ್ಲಿ ಬರುವ ರಾಶಿ ಭವಿಷ್ಯ, ವಾರ ಭವಿಷ್ಯದ ನಿಖರತೆಯೆಷ್ಟು?

ಈ ಜಗತ್ತಿನಲ್ಲಿ ೭೦೦ ಕೋಟಿಗೂ ಮಿಕ್ಕಿ ಜನರಿದ್ದಾರೆ. ಆದರೆ ಅವಳಿ ಜವಳಿಗಳಾಗಿ ಹುಟ್ಟಿದವರೂ ಸೇರಿದಂತೆ ಯಾರೇ ಇಬ್ಬರು ವ್ಯಕ್ತಿಗಳು ಎಲ್ಲಾ ವಿಷಯಗಳಲ್ಲಿ ಪರಸ್ಪರ ಸರಿಸಮಾನರಾಗಿರುವುದಿಲ್ಲ. ಆದುದರಿಂದ ಅಧ್ಯಾತ್ಮ ಶಾಸ್ತ್ರದಲ್ಲಿ ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು ಎಂಬ ಸಿದ್ಧಾಂತವಿದೆ. ಅದರಂತೆಯೇ ಪ್ರತಿಯೊಬ್ಬ ವ್ಯಕ್ತಿಯ ಶರೀರದ ರಚನೆ, ಮನಸ್ಸು, ಇಷ್ಟಾನಿಷ್ಟ(ಬೇಕುಬೇಡ)ಗಳು, ಗುಣದೋಷಗಳು, ಆಸೆ ಆಕಾಂಕ್ಷೆಗಳು- ಇವೆಲ್ಲವು ಬೇರೆ ಬೇರೆಯಾಗಿವೆ. ಹಾಗೆಯೇ ಪ್ರತಿಯೊಬ್ಬನ ಬೌದ್ಧಿಕ ಮಟ್ಟ, ಯೋಚನಾ ಲಹರಿಗಳು, ಜನ್ಮಜನ್ಮಾಂತರಗಳಲ್ಲಿ ಮಾಡಿದ ಸತ್ಕರ್ಮ, ದುಷ್ಕರ್ಮಗಳಿಂದಗಳಿಸಿದ ಕರ್ಮಫಲಗಳ ಮೊತ್ತ (ಸಂಚಿತ), ಅದರ ಪೈಕಿ ಒಂದೊಂದು ಜನ್ಮದಲ್ಲಿ ಆತನು ಅನುಭವಿಸಬೇಕಾದ ಕರ್ಮಫಲದ ಒಂದು ಭಾಗ (ಪ್ರಾರಬ್ಧ)- ಇವು ಬೇರೆ ಬೇರೆಯೇ ಆಗಿವೆ. ಅಲ್ಲದೆ ಮಾನವ ಶರೀರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಂಚಮಹಾಭೂತಗಳಾದ ಪೃಥ್ವಿ (ಭೂಮಿ), ಆಪ್ (ಜಲ), ತೇಜ (ಬೆಳಕು ಅಥವಾ ಅಗ್ನಿ), ವಾಯು (ಗಾಳಿ) ಮತ್ತು ಆಕಾಶ (ಖಾಲಿ ಇರುವ ಜಾಗ) – ಈ ತತ್ತ್ವಗಳ ಸಂಯೋಜನೆಯ ಪ್ರಮಾಣವೂ (ಅನುಪಾತವೂ) ಬೇರೆ ಬೇರೆಯಾಗಿದೆ. ಇವಿಷ್ಟೂ ಸಾಲದೆಂಬಂತೆ ತ್ರಿಗುಣಗಳಾದ ಸತ್ತ್ವ, ರಜ, ತಮೋ ಗುಣಗಳ ಪ್ರಮಾಣವೂ ಬೇರೆ ಬೇರೆಯಾಗಿದೆ. ಕೇವಲ ಇಬ್ಬರು ವ್ಯಕ್ತಿಗಳು ಪರಸ್ಪರ ಸರಿ ಸಮಾನರಲ್ಲದಿರುವಾಗ ಜಗತ್ತಿನಲ್ಲಿ ಒಂದೊಂದು ರಾಶಿಗೆ ಸೇರಿರುವ ಸರಾಸರಿ ೫೦ಕೋಟಿಗೂ ಮಿಕ್ಕಿದವರು(೭೦೦ಕೋಟಿಗೆ ೧೨ ರಾಶಿಗಳಿಂದ ಭಾಗಿಸಿದಾಗ ಸಿಗುವ ಸಂಖ್ಯೆಯಷ್ಟು ಮಂದಿ) ಅವರ ರಾಶಿ ಭವಿಷ್ಯವು ಒಂದೇ ತೆರನಾಗಿರಲು ಹೇಗೆ ಸಾಧ್ಯ? ಇಂತಹ ರಾಶಿ ಭವಿಷ್ಯಗಳು ಪತ್ರಿಕೆಯನ್ನೋದುವ ಓದುಗರಿಗೆ, ಟೀವಿ ನೋಡುವ ಶ್ರೋತೃಗಳಿಗೆ ಒಂದು ಆಕರ್ಷಣೆಯಷ್ಟೇ. ಪತ್ರಿಕೆಗಳಿಗೆ ತಮ್ಮ ಪುಟಗಳನ್ನು ತುಂಬುವ ಒಂದು ಸದಾವಕಾಶ, ಟೀವಿಗಳಿಗೆ ಸಮಯವನ್ನು ದಿನಪೂರ್ತಿ ವಿನಿಯೋಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಕಾಶ ಮತ್ತು ಜ್ಯೋತಿಷಿಗಳಿಗೆ ಹೇರಳ ಸಂಪಾದನೆ ಮಾಡುವ ಹಾದಿ ಅಷ್ಟೆ.

ಜ್ಯೋತಿಷ್ಯ ಶಾಸ್ತ್ರ, ಆಯುರ್ವೇದ ಇತ್ಯಾದಿಗಳಲ್ಲಿನ ಶ್ಲೋಕಗಳು ಹೆಚ್ಚು ಕಡಿಮೆ ರಾಜ ಮಹಾರಾಜರುಗಳಿಗೆ, ಶ್ರೀಮಂತರಿಗೆ ಅನ್ವಯಿಸುವಂತಿವೆ ಎಂದು ಕಂಡು ಬರುತ್ತದೆ. ಇಂತಹ ಶ್ಲೋಕಗಳ ಆಧಾರದ ಮೇಲೆ ರಾಜ ಮಹಾರಾಜರುಗಳಿಗೆ, ಶ್ರೀಮಂತರುಗಳಿಗೆ ಸಿಗಬಹುದಾದ ಸುಂದರ ಅರಮನೆಗಳು, ಭವ್ಯ ಭವನಗಳು, ಬೃಹತ್ ಬಂಗಲೆಗಳು, ಫಲಭರಿತ ಉದ್ಯಾನಗಳು ಇತ್ಯಾದಿಗಳು ಹಣೆಬರಹ ಸರಿಯಿಲ್ಲದ ಬಡವನ ಪಾಲಿಗೆ ಒಂದು ಸ್ವಂತ ಜೋಪಡಿಯೂ ಆಗಬಹುದು, ಒಂದು ತೆಂಗಿನಮರ ಅಥವಾ ಮಾವಿನಮರ, ಒಂದೆರಡು ಗೇರುಮರ ಇರುವ ಹಿತ್ತಿಲು ಫಲಭರಿತ ಉದ್ಯಾನವೂ ಆಗಬಹುದು. ಜ್ಯೋತಿಷ್ಯ ಫಲವನ್ನು ನಿಖರವಾಗಿ ಹೇಳುವುದು ಅರ್ಥನಿರೂಪಕನ ಸಾಧನೆ, ಕೌಶಲ್ಯ, ಜಾಣ್ಮೆಯನ್ನು ಅವಲಂಬಿಸಿದ್ದರೆ ಪರ‍್ಯಾಯವಾಗಿ ಜ್ಯೋತಿಷ್ಯಫಲವನ್ನು ಕೇಳಿಸಿಕೊಳ್ಳುವ ವ್ಯಕ್ತಿಯ ಪ್ರಾರಬ್ಧಾನುಸಾರವೂ ಆಗಬಹುದು. ಆದುದರಿಂದ ಜ್ಯೋತಿಷಿಗಳು ಇಂತಹ ಶ್ಲೋಕಗಳನ್ನು ಹೇಳಿ ನಮ್ಮ ಮನರಂಜಿಸಿದರೆ ಅದಕ್ಕಾಗಿ ಹಿಗ್ಗದೆ ಅಥವಾ ನಮ್ಮ ಪ್ರಾರಬ್ಧಕ್ಕೆ ಕುಗ್ಗದೆ ನಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾ ಹೋದರೆ ಒಂದು ದಿನ ನಮಗೆ ನಿಶ್ಚಯವಾಗಿಯೂ ಗುರುಪ್ರಾಪ್ತಿಯಾಗಿ ನಮ್ಮ ಜನ್ಮಕುಂಡಲಿಯ ಎಲ್ಲಾ ಮನೆಗಳಲ್ಲೂ ಗುರುಗ್ರಹವೇ ಅಧಿಷ್ಟಾನವನ್ನು ಪಡೆದು ಗುರುಗಳು ನಮ್ಮ ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣಗಳಿಂದ ನಮ್ಮನ್ನು ಬಿಡಿಸಿ ಮೋಕ್ಷದತ್ತ ಕರೆದೊಯ್ಯುವರು.

ಲೇಖಕರು –  ಬಿ. ರಾಮಭಟ್ ಪಟ್ವರ್ಧನ್
ನಿವೃತ್ತ ಉಪತಹಶೀಲ್ದಾರರು, ಸುಳ್ಯ, ದ.ಕ.
ಮೊ: ೯೪೮೧೭೫೬೦೨೮

Leave a Comment