ಗುರುಪೂರ್ಣಿಮೆಯ ನಿಮಿತ್ತ ಪರಮಪೂಜ್ಯ ದೇವಬಾಬಾ ಇವರ ಸಂದೇಶ (2021)

ನಶ್ವರದಿಂದ ಶಾಶ್ವತದೆಡೆಗೆ

ಸನಾತನ ಧರ್ಮದಲ್ಲಿ, ಶಿಷ್ಯರಿಗೆ ಕಣ್ಣಿಗೆ ಕಾಣುವ ದೇವರೇ ದೀಕ್ಷಾಗುರುಗಳು. ಅದರಲ್ಲೂ ಗುರುಗಳೊಂದಿಗೆ ವಾಸಿಸಿ ಹನ್ನೆರಡು ವರ್ಷಗಳಿಗಿಂತ ಜಾಸ್ತಿಯೇ ಕಾಲ ಗುರುಸೇವೆ, ಆಶ್ರಮದ ಸೇವೆ ಮಾಡುತ್ತಾ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಶಿಷ್ಯರು ಮುಂದೆ ಅಸಾಧಾರಣ ಜ್ಞಾನಿಗಳಾಗಿ ಮುಗಿಲೆತ್ತರಕ್ಕೆ ಏರುತ್ತಾರೆ. ಅಂತಹ ಗುರುಗಳು ಶಿವನ ಕಾಲದಿಂದ ಇಂದಿನ ತನಕವೂ ಜೀವಂತವಾಗಿದ್ದಾರೆ. ಜಗತ್ತಿಗಾಗಿ ಶಿಷ್ಯರ ನಿರ್ಮಾಣವು ನಡೆಯುತ್ತಲೇ ಇದೆ. ಇಂದಿನ ಈ ಕಲಿಯುಗದಲ್ಲೂ ಅಂತಹ ಗುರುಗಳನ್ನೂ, ಶಿಷ್ಯರನ್ನೂ ನಾವು ಕಾಣಬಹುದು.

ಇದರಲ್ಲಿ ವಿಶೇಷತೆಯೆಂದರೆ ಗುರುಗಳು ದೇಹಧಾರಿಯಾಗಿರುವಾಗ ಶಿಷ್ಯನ ಪ್ರಗತಿ ಸಾಗುತ್ತಲೇ ಗುರುವಿನ ಕಾಲಾನಂತರ ಶಿಷ್ಯನು ಪ್ರಚಂಡವಾಗಿ ಬೆಳೆದು ಗುರುವಿಗೂ ಮಿಗಿಲಾದ ಶಿಷ್ಯನೆಂದು ಹೆಸರುಗಳಿಸುತ್ತಾನೆ. ಗುರುವಿಗೆ ಮಿಗಿಲಾದ ಶಿಷ್ಯರೇ ಆದಿ ಶಂಕರಾಚಾರ್ಯರು. ಕಳೆದ ಶತಮಾನಗಳಲ್ಲಿ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರಿಗಿಂತ ಮಿಗಿಲೆಂದು ಇಡೀ ಜಗತ್ತೇ ಸಾರಿತು. ಮಾನ್ಯ ಗುರುಗಳಾದ ಭಗವಾನ್ ಗಂಗೂಲಿಯವರ ಶಿಷ್ಯರಾದ ಪರಮಪೂಜ್ಯ ಲೋಕೇನಾಥ್ ಬಾಬಾರವರು ೧೪೦ ವರ್ಷ ಬದುಕಿ ಜಗತ್ತಿಗೆ ಅಸಾಮಾನ್ಯ ಎನಿಸಿದ ಶಿವ ಸ್ವರೂಪಿಗಳಾಗಿದ್ದರು. ಇದರಿಂದ ನಮಗೆ ಕಂಡುಬರುವುದೇನೆಂದರೆ ಸನಾತನ ಧರ್ಮದ ಹಾದಿಯಲ್ಲಿರುವ ಹಿಮಾಲಯದ ಪರಂಪರೆಯಲ್ಲಿ ಶಿಷ್ಯರು ಎತ್ತರಕ್ಕೆ ಏರುತ್ತಲೇ ಇದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಸತ್ಯ ಧರ್ಮಕ್ಕೆ ಮೀಸಲಾಗಿರಿಸಿದ ಪ್ರೇಮದ ಹೋರಾಟ.

ಪರಾತ್ಪರ ಗುರು ಡಾ. ಅಠವಲೆಯವರ ಸನಾತನ ಸಂಸ್ಥೆಯು ಇದಕ್ಕೆ ಉದಾಹರಣೆಯಾಗಿದೆ. ಅವರ ಗುರುಗಳಾದ ಪರಮ ಪೂಜ್ಯ ಭಕ್ತರಾಜ ಮಹಾರಾಜರು ಶ್ರದ್ಧಾಸ್ಥಾನವಾಗಿರುವ ಈ ಸಂಸ್ಥೆಯನ್ನು ಮುಗಿಲೆತ್ತರಕ್ಕೆ ಏರಿಸಿದ ಕೀರ್ತಿ ಇವರದ್ದಾಗಿದೆ. ಆಧ್ಯಾತ್ಮವನ್ನು ವೈಜ್ಞಾನಿಕ ಸಂಶೋಧನೆಯ ಮುಖಾಂತರ ನಾಮಜಪದಿಂದ ಶಕ್ತಿಯ ಉತ್ಪಾದನೆ, ಜಪದಿಂದ ರೋಗಗಳ ನಿವಾರಣೆ ಮೊದಲಾದವುಗಳ ಸಂಶೋಧನಾ ಕಾರ್ಯವು ಪರಮ ಪೂಜ್ಯ ಅಠವಲೆಯವರಿಂದಲೇ ಪ್ರಾರಂಭವಾಯಿತು. ಸಂಗೀತ, ನೃತ್ಯ, ಹಾಡುಗಾರಿಕೆ, ತಾಳವಾದ್ಯ, ಚಿತ್ರಕಲೆ ಮುಂತಾದವುಗಳ ಮೂಲಕ ಒಬ್ಬ ಸಾಧಕ ಸಂತನಾಗಬಹುದೆಂದು ಸಂಶೋಧನೆ ಮಾಡಿ ಸಿದ್ಧಪಡಿಸಿದ ಜಗತ್ತಿನ ಮೊದಲ ಸಂತ ಎಂದು ಹೇಳಬಹುದು. ಇದೇ ವೇಳೆಯಲ್ಲಿ ಒಬ್ಬ ಶಿಸ್ತಿನ ಹಿಂದೂ ಧರ್ಮಪಾಲಕನಾಗಿ, ಆಧ್ಯಾತ್ಮಿಕ ಸೈನಿಕನಾಗಿ, ಗುರು ಹಾಗೂ ಗೋವಿಂದರ ಪೂರ್ಣ ಶರಣಾಗತಿಯ ಉದಾಹರಣೆಯಾಗಿ ಜೀವಿಸುತ್ತಿರುವ ಈ ಶತಮಾನದ ಅತ್ಯಂತ ಶ್ರೇಷ್ಠ ಸಂತರಿವರು ಎಂದು ತಿಳಿಸುವಾಗ ಹೃದಯ ತುಂಬಿ ಬರುತ್ತದೆ. ಸತ್ಯದ ಹೋರಾಟದಲ್ಲಿ ಮುನ್ನಡೆಯುವ ಇವರಿಗೆ ಬಂದ ಏಟುಗಳು ಒಂದೆರಡಲ್ಲ, ಹಲವು ಸಹಸ್ರಗಳು. ಯಾವುದೂ ನನಗಲ್ಲ, ಎಲ್ಲವನ್ನೂ ಕೃಷ್ಣನ ಪದಕಮಲಗಳಿಗೆ ಅರ್ಪಿಸಿದ್ದೇನೆ ಎಂದು ನಗುನಗುತ್ತಾ ತಮಗೆ ಬಂದ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಮಹಾನ್ ಸಂತರಿಗೆ ಎಂದೆಂದೂ ಜಯ ಸಿಗಲಿ ಎಂದು ಬೇಡಿಕೊಳ್ಳುತ್ತೇವೆ.

– ಪರಮಪೂಜ್ಯ ದೇವಬಾಬಾ, ಶ್ರೀ ಶಕ್ತಿದರ್ಶನ ಯೋಗಾಶ್ರಮ, ಕಿನ್ನಿಗೋಳಿ.

Leave a Comment