ಆನ್‌ಲೈನ್ ಸತ್ಸಂಗ (26)

ಗುಣಸಂವರ್ಧನೆ

ಇಂದಿನ ವರೆಗಿನ ಲೇಖನಗಳಲ್ಲಿ ನಾವು ನಮ್ಮಲ್ಲಿರುವ ಸ್ವಭಾದೋಷಗಳನ್ನು ದೂರಗೊಳಿಸಲು ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಹೇಗೆ ನಡೆಸುವುದು, ವಿವಿಧ ಪ್ರಸಂಗಗಳಲ್ಲಿ ಯಾವ ಸ್ವಯಂಸೂಚನಾ ಪದ್ಧತಿಗಳನ್ನು ಬಳಸುವುದು ಎಂಬುದನ್ನು ತಿಳಿದುಕೊಂಡೆವು. ನಮ್ಮಲ್ಲಿರುವ ಸ್ವಭಾವದೋಷಗಳಿಂದಾಗಿ ಕೇವಲ ಸಾಧನೆಯಲ್ಲಿ ಹಾನಿಯಾಗದೇ, ಕೌಟುಂಬಿಕ ಮತ್ತು ವ್ಯಾವಹಾರಿಕ ಜೀವನದಲ್ಲಿಯೂ ಹಾನಿಯಾಗುತ್ತದೆ. ಆದುದರಿಂದಲೇ ನಮ್ಮಲ್ಲಿರುವ ಸ್ವಭಾವದೋಷಗಳನ್ನು ದೂರಗೊಳಿಸುವುದು ಆವಶ್ಯಕವಾಗಿದೆ. ಈ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಗೆ ಗುಣಸಂವರ್ಧನೆಯ ಜೊತೆ ನೀಡಿದರೆ ನಮ್ಮಲ್ಲಿ ಶೀಘ್ರಗತಿಯಲ್ಲಿ ಬದಲಾವಣೆಗಳಾಗುತ್ತವೆ. ನಮ್ಮ ವ್ಯಕ್ತಿತ್ವವು ಆದರ್ಶವಾಗುವುದು. ಉದಾಹರಣೆಗೆ ಯಾವುದೇ ವ್ಯಕ್ತಿಯಲ್ಲಿ ಆಲಸ್ಯದ ಸ್ವಭಾವದೋಷವಿದ್ದರೆ ಅದಕ್ಕೆ ಸ್ವಯಂಸೂಚನೆಯನ್ನು ನೀಡುವುದರೊಂದಿಗೆ ಆಲಸ್ಯದ ವಿರುದ್ಧವಾಗಿರುವ ‘ತತ್ಪರತೆ’ಯ ಗುಣವನ್ನು ನಮ್ಮಲ್ಲಿ ತರಲು ಪ್ರಯತ್ನಿಸಿದರೆ, ಅಂದರೆ ಯಾವುದೇ ಕೆಲಸವನ್ನು ನಂತರ ಮಾಡುತ್ತೇನೆ ಎಂದು ಹೇಳದೇ ಉತ್ಸಾಹದಿಂದ ತಕ್ಷಣ ಆರಂಭಿಸಿದರೆ ನಮ್ಮಲ್ಲಿ ಶೀಘ್ರವಾಗಿ ಒಳ್ಳೆಯ ಪರಿವರ್ತನೆಗಳಾಗುತ್ತವೆ. ಗುಣಗಳ ವಿಕಾಸವಾಗಿರುವ ವ್ಯಕ್ತಿಯು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮಾನಸಿಕ ದೃಷ್ಟಿಯಿಂದ ಸ್ಥಿರ ಹಾಗೂ ಆನಂದಿಯಾಗಿರಬಹುದು. ಗುಣಗಳಿಂದ ವ್ಯಕ್ತಿಯ ಫಲನಿಷ್ಪತ್ತಿಯು ಹೆಚ್ಚುತ್ತದೆ. ಆದುದರಿಂದ ಈಗ ನಾವು ಗುಣಸಂವರ್ಧನೆಯನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಸರ್ವಗುಣಸಂಪನ್ನನಾದ ಈಶ್ವರನೊಂದಿಗೆ ಏಕರೂಪವಾಗಲು ಗುಣಸಂವರ್ಧನೆಯು ಆವಶ್ಯಕವಾಗಿದೆ !

ಅ. ಗುಣಸಂವರ್ಧನೆ ಅಂದರೆ ಏನು?

ಗುಣಸಂವರ್ಧನೆ ಅಂದರೆ ನಮ್ಮಲ್ಲಿರುವ ಗುಣಗಳನ್ನು ವೃದ್ಧಿಸುವುದು! ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜನ್ಮದಿಂದಲೇ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಕೆಲವು ಗುಣಗಳಿರುತ್ತವೆ. ಉದಾಹರಣೆಗೆ ಕೆಲವರಲ್ಲಿ ಮಿತವ್ಯಯದ ಗುಣವಿರುತ್ತದೆ, ಕೆಲವರಲ್ಲಿ ಸಮಯಪಾಲನೆ, ಪ್ರಾಮಾಣಿಕತೆ, ವ್ಯವಸ್ಥಿತತೆ, ಪ್ರೇಮಭಾವ ಇಂತಹ ಅನೇಕ ಗುಣಗಳಿರುತ್ತವೆ.

ಬಹಳಷ್ಟು ಬಾರಿ ನಾವು ಕೇವಲ ನಮ್ಮಿಂದ ಆಗುವ ತಪ್ಪುಗಳ ಅಥವಾ ಸ್ವಭಾವದೋಷಗಳ ವಿಚಾರ ಮಾಡುತ್ತೇವೆ; ಆದರೆ ಅದರೊಂದಿಗೆ ನಮ್ಮಲ್ಲಿರುವ ಗುಣಗಳ ಬಗ್ಗೆಯೂ ವಿಚಾರ ಮಾಡುವುದು ಆವಶ್ಯಕವಾಗಿದೆ. ಈಶ್ವರನು ಸರ್ವಗುಣಸಂಪನ್ನನಾಗಿದ್ದಾನೆ. ಆದುದರಿಂದ ನಮಗೆ ಈಶ್ವರನೊಂದಿಗೆ ಏಕರೂಪವಾಗಬೇಕಿದ್ದರೆ ಅಂದರೆ ಮೋಕ್ಷಪ್ರಾಪ್ತಿ ಮಾಡಿಕೊಳ್ಳಬೇಕಿದ್ದರೆ ನಮ್ಮಲ್ಲಿರುವ ಗುಣಗಳ ವೃದ್ಧಿಗಾಗಿ ಪ್ರಯತ್ನಗಳನ್ನು ಮಾಡಬೇಕು. ಹೀಗೆ ಮಾಡಿದರೆ ನಮ್ಮ ದೈನಂದಿನ ಜೀವನವೂ ಒತ್ತಡರಹಿತ, ಆನಂದಮಯ ಹಾಗೂ ಉನ್ನತವಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ !

ಆ. ಸಾಧನೆಯ ದೃಷ್ಟಿಯಿಂದ ಮತ್ತು ದೈನಂದಿನ ಜೀವನವು ಆನಂದಿಯಾಗಲು ಯಾವ ಗುಣಗಳ ಸಂವರ್ಧನೆ ಮಾಡಬೇಕು?

ನಿಜವಾಗಿಯೂ ನಮ್ಮಲ್ಲಿ ಎಲ್ಲ ಗುಣಗಳೂ ಬಂದರೆ ಸಾಧನೆಯು ಪರಿಪೂರ್ಣವಾಗುತ್ತದೆ. ಆದುದರಿಂದ ಎಲ್ಲ ಗುಣಗಳು ಮಹತ್ವದ್ದಾಗಿವೆ. ಆದರೆ ಸಾಧನೆಯ ದೃಷ್ಟಿಯಿಂದ ಮತ್ತು ಒಟ್ಟಿನಲ್ಲಿ ನಮ್ಮ ದೈನಂದಿನ ಜೀವನವು ಹೆಚ್ಚು ಉತ್ತಮ, ಆನಂದಿ, ಸಕಾರಾತ್ಮಕವಾಗುವ ದೃಷ್ಟಿಯಿಂದ ವಿಚಾರ ಮಾಡಿದರೆ, ತಳಮಳ, ಆಜ್ಞಾಪಾಲನೆ, ಜಿಜ್ಞಾಸೆ, ಕೃತಿಶೀಲತೆ, ಇತರರ ವಿಚಾರ, ಆಯೋಜನಾ ಕೌಶಲ್ಯ, ಹಾಗೆಯೇ ಶ್ರದ್ಧೆಯಂತಹ ಗುಣಗಳ ನಮ್ಮಲ್ಲಿ ಇರಲೇಬೇಕು.

೧. ಆಜ್ಞಾಪಾಲನೆ : ಈ ಗುಣಕ್ಕೆ ಗುಣಗಳ ರಾಜನೆಂದು ಹೇಳಲಾಗುತ್ತದೆ. ಆಜ್ಞಾಪಾಲನೆಯನ್ನು ಮಾಡುವುದರಿಂದ ನಮ್ಮ ಮನಸ್ಸು, ಬುದ್ಧಿ ಹಾಗೂ ಅಹಂನ ಲಯವಾಗುತ್ತದೆ. ಲಯದ ನಂತರ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಆಜ್ಞಾಪಾಲನೆಯಿಂದ ಏನಾಗುತ್ತದೆ ಎಂಬುದರ ಒಂದು ಉತ್ತಮ ಉದಾಹರಣೆಯಿದೆ.

ಒಮ್ಮೆ ಅಂಬುವಿಗೆ ಆತನ ಗುರುಗಳು ನಾಮಜಪ ಮಾಡಲು ಹೇಳಿ ‘ನಾಮವನ್ನು ಬಿಡಬೇಡ’ ಎಂದು ಹೇಳಿದರು. ಆ ಕ್ಷಣದಿಂದ ಅಂಬುವು ದಿನರಾತ್ರಿ ನಾಮಜಪ ಮಾಡಲು ಆರಂಭಿಸಿದನು. ನಿದ್ರೆ ಬರಬಾರದು ಎಂದು ಅಂಬುವು ತನ್ನ ಜುಟ್ಟನ್ನು ಒಂದು ಗೂಟಕ್ಕೆ ಸಿಕ್ಕಿಸಿ ನಿಂತುಕೊಂಡು ನಾಮಜಪ ಮಾಡಿದನು. ಈ ರೀತಿಯಲ್ಲಿ ಅಖಂಡವಾಗಿ ನಾಮಸ್ಮರಣೆಯನ್ನು ಮಾಡಿದ ನಂತರ ೮ ದಿನಗಳಲ್ಲಿ ಅಂಬು ಅಂಬೂ ಮಹಾರಾಜರಾದರು. ಅಂದರೆ ಸಂತಪದವಿಯ ಅಧಿಕಾರಿಯಾದರು. ಇದು ಆಜ್ಞಾಪಾಲನೆಯ ಮಹತ್ವವಾಗಿದೆ. ಗುರುಗಳು ಹೇಳಿದ ಕ್ಷಣದಿಂದಲೇ ಪ್ರತ್ಯಕ್ಷ ಕೃತಿಗೆ ತಂದರೆ ಗುರುಗಳ ಸಂಕಲ್ಪವು ಕಾರ್ಯನಿರತವಾಗುತ್ತದೆ. ಈಗ ಈ ಲೇಖನಮಾಲಿಕೆಯ ಮಾಧ್ಯಮದಿಂದ ಗುರುತತ್ತ್ವವು ನಮಗೆ ಮಾರ್ಗದರ್ಶನ ಮಾಡುತ್ತಿದೆ. ಗುರುಗಳು ದೇಹದಿಂದ ಬೇರೆ ಬೇರೆಯಾಗಿ ಕಾಣಿಸಿದರೂ ತತ್ತ್ವರೂಪದಲ್ಲಿ ಗುರುತತ್ತ್ವವು ಒಂದೇ ಆಗಿದೆ. ಆದುದರಿಂದ ನಾವು ಭಾವಪೂರ್ಣವಾಗಿ ಹಾಗೂ ಕ್ಷಮತೆಮೀರಿ ಸಾಧನೆಯ ಪ್ರಯತ್ನಗಳನ್ನು ಮಾಡೋಣ.

೨. ತಳಮಳ : ಸಾಧನೆಯನ್ನು ಪೂರ್ಣತ್ವಕ್ಕೆ ಕೊಂಡೊಯ್ಯಲು ತಳಮಳಕ್ಕೆ ಬಹಳ ಮಹತ್ವವಿದೆ. ಓರ್ವ ವ್ಯಕ್ತಿಯಲ್ಲಿ ತಳಮಳವಿದ್ದರೆ ಆ ತಳಮಳದಿಂದಾಗಿ ಅವನಲ್ಲಿ ಇತರ ಆವಶ್ಯಕ ಗುಣಗಳ ಸಂವರ್ಧನೆಯಾಗುತ್ತದೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ತಳಮಳ ಈ ಗುಣದ ಸಂದರ್ಭದಲ್ಲಿ ‘ಯಾವುದೇ ವಿಷಯದಲ್ಲಿ ಜಿಜಿಜ್ಞಾಸೆಯಿದ್ದರೆ ಮಾತ್ರ ನಾವು ಅದರ ಬಗ್ಗೆ ತಿಳಿಯಲು ಪ್ರಯತ್ನಿಸುತ್ತೇವೆ. ಅದರಿಂದಲೇ ತಳಮಳ ನಿರ್ಮಾಣವಾಗುತ್ತದೆ. ಆತ್ಮಜ್ಞಾನದ ಸಂದರ್ಭದಲ್ಲಿ ತಳಮಳವಿದ್ದರೆ ಸಾಧಕರಿಂದ ಸಾಧನೆಗಾಗಿ ತೀವೃ ಪ್ರಯತ್ನಗಳಾಗುತ್ತವೆ ಮತ್ತು ಕೊನೆಯಲ್ಲಿ ಅವನಿಗೆ ಆತ್ಮಜ್ಞಾನವಾಗುತ್ತದೆ’ ಎಂದು ಹೇಳಿದ್ದಾರೆ.

ನಮಗೆ ನಮ್ಮಲ್ಲಿ ಬದಲಾವಣೆಗಳನ್ನು ಮಾಡಲು ಎಷ್ಟೇ ಅಡಚಣೆಗಳು ಬಂದರೂ ನಾಮಜಪ, ಸ್ವಯಂಸೂಚನಾ ಸತ್ರಗಳನ್ನು ಪೂರ್ಣಗೊಳಿಸಬೇಕು ಎಂಬ ತಳಮಳವನ್ನು ಜಾಗೃತಗೊಳಿಸಿದರೆ ನಮ್ಮ ಪ್ರಯತ್ನಗಳಲ್ಲಿ ಗಾಂಭೀರ್ಯ ನಿರ್ಮಾಣವಾಗುತ್ತದೆ. ಅಡಚಣೆಗಳ ಮೇಲೆ ಯಾವ ಉಪಾಯಯೋಜನೆಯನ್ನು ಮಾಡಬಹುದು ಎಂಬುದು ಹೊಳೆಯುತ್ತದೆ; ಆದರೆ ‘ಸಾಧ್ಯವಾದರೆ ನಾಮಜಪ ಮಾಡುತ್ತೇನೆ’, ‘ಸಾಧ್ಯವಾದರೆ ಸಾಧನೆ ಮಾಡುತ್ತೇನೆ’ ಎಂದು ಹೇಳಿದರೆ ನಮ್ಮ ಸಾಧನೆಯ ಪ್ರಯತ್ನಗಳ ವೇಗವು ತನ್ನಷ್ಟಕ್ಕೇ ಮಂದವಾಗುತ್ತದೆ; ಆದುದರಿಂದ ನಾವು ತಳಮಳದಿಂದ ಸಾಧನೆಯನ್ನು ಮಾಡಲು ಪ್ರಯತ್ನಿಸೋಣ.

೩. ಜಿಜ್ಞಾಸೆ : ಆಧ್ಯಾತ್ಮದಲ್ಲಿ ಜಿಜ್ಞಾಸುವೃತ್ತಿಗೆ ಮಹತ್ವವಿದೆ. ‘ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿದ್ದಾನೆ’ ಎಂದು ಹೇಳಲಾಗಿದೆ. ಜಿಜ್ಞಾಸೆ ಇದ್ದರೆ ಜ್ಞಾನ ದೊರೆಯುತ್ತದೆ. ಆದುದರಿಂದ ಸಾಧನೆಯಲ್ಲಿ ಜಿಜ್ಞಾಸೆಯಿರುವುದು ಆವಶ್ಯಕವಾಗಿದೆ. ಜಿಜ್ಞಾಸೆಯಿಂದ ಅನೇಕ ವಿಷಯಗಳನ್ನು ಕಲಿಯಲು ಸಿಗುತ್ತದೆ ಹಾಗೂ ಕಲಿಯುವುದರಿಂದ ಆನಂದ ಸಿಗುತ್ತದೆ. ಜಿಜ್ಞಾಸೆ ಅಂದರೆ ಏನು ? ನಮಗೆ ಬರುವ ಚಿಕ್ಕ ಚಿಕ್ಕ ಪ್ರಶ್ನೆಗಳನ್ನು ಕೇಳಿಕೊಳ್ಳುವುದು. ಸಾಧನೆಯನ್ನು ಮಾಡುತ್ತಿರುವಾಗ ನಮಗೆ ಏನಾದರೂ ಪ್ರಶ್ನೆಗಳಿದ್ದರೆ ಅಥವಾ ಅನುಭವಗಳಿದ್ದಲ್ಲಿ ಅವುಗಳನ್ನು ಹೇಳುವುದು ಹಾಗೂ ಕೇಳಿಕೊಳ್ಳುವುದು ಮಹತ್ವದ್ದಾಗಿದೆ. ಏಕೆಂದರೆ ಅದರಿಂದ ಶಾಸ್ತ್ರ ತಿಳಿದು ಅಜ್ಞಾನವು ದೂರವಾಗುತ್ತದೆ.

೪. ಕೃತಿಯಲ್ಲಿ ತರುವುದು : ಸಾಧನೆಗಾಗಿ ಹೇಳಿದ್ದನ್ನು ಕೃತಿಯಲ್ಲಿ ತರುವ ಗುಣವು ಆವಶ್ಯಕವಾಗಿದೆ! ಆಧ್ಯಾತ್ಮದಲ್ಲಿ ತಾತ್ತ್ವಿಕ ವಿಷಯಕ್ಕೆ ಶೇ. ೨ರಷ್ಟು ಹಾಗೂ ಕೃತಿ ಮಾಡುವುದಕ್ಕೆ ಶೇ. ೯೮ರಷ್ಟು ಮಹತ್ವವಿದೆ. ಒಬ್ಬರಿಗೆ ನಾಮಜಪದ ಮಹತ್ವವು ಬಹಳ ಒಳ್ಳೆಯ ರೀತಿಯಲ್ಲಿ ತಿಳಿದಿದ್ದರೂ ಅವರು ನಾಮಜಪ ಮಾಡದಿರುವಾಗ ಆ ಜ್ಞಾನದ ಉಪಯೋಗವಾದರೂ ಏನು ? ಆದುದರಿಂದ ಆಧ್ಯಾತ್ಮದಲ್ಲಿ ನಮಗೆ ಎಷ್ಟು ತಿಳಿಯುತ್ತದೆ, ಅಷ್ಟನ್ನಾದರೂ ಕೃತಿಯಲ್ಲಿ ತರುವುದು ಮಹತ್ತ್ವದ್ದಾಗಿದೆ.

೫. ಇತರರ ವಿಚಾರ ಮಾಡುವುದು : ಇತರರ ವಿಚಾರ ಮಾಡುವುದು ಒಂದು ಮಹತ್ವದ ಗುಣವಾಗಿದೆ. ಇತರರ ವಿಚಾರ ಮಾಡುವುದರಿಂದ ನಮ್ಮಲ್ಲಿ ಯೋಗ್ಯ ವೃತ್ತಿಯ ನಿರ್ಮಾಣವಾಗುತ್ತದೆ ಹಾಗೂ ಇತರರ ಬಗ್ಗೆ ಇರುವ ಭೇದಭಾವಗಳೂ ಕಡಿಮೆಯಾಗುತ್ತವೆ. ಬಹಳಷ್ಟು ಬಾರಿ ನಾವು ಎದುರಿನ ವ್ಯಕ್ತಿಯ ವರ್ತಮಾನದಿಂದ ನಿಷ್ಕರ್ಷಕ್ಕೆ ಬರುತ್ತೇವೆ. ಇದರಿಂದ ಎದುರಿನ ವ್ಯಕ್ತಿಯ ಬಗ್ಗೆ ನಮ್ಮ ಮನಸ್ಸು ಕಲುಷಿತವಾಗುತ್ತದೆ. ಇದರ ಬದಲು ಇತರರನ್ನು ಅರಿತುಕೊಂಡರೆ, ಇತರರ ವಿಚಾರ ಮಾಡಿದರೆ ನಮ್ಮ ಅಪೇಕ್ಷೆಗಳು ಎಷ್ಟು ಕಡಿಮೆ ಆಗುತ್ತವೆ ಎಂಬುದು ಬಹಳಷ್ಟು ಪ್ರಸಂಗಗಳಿಂದ ಗಮನಕ್ಕೆ ಬರುತ್ತದೆ. ಇತರರ ವಿಚಾರ ಮಾಡುವುದು, ಪ್ರೇಮಭಾವ, ಇತರರನ್ನು ಅರಿತುಕೊಳ್ಳುವುದು, ಈ ಗುಣಗಳನ್ನು ಬೆಳೆಸಿಕೊಳ್ಳಲು ಮೊದಲಿಗೆ ಎದುರಿನ ವ್ಯಕ್ತಿಯೊಂದಿಗೆ ಅನೌಪಚಾರಿಕವಾಗಿ ಪ್ರೀತಿಯಿಂದ ಮಾತನಾಡಬೇಕು. ಇತರರ ವಿಚಾರವನ್ನು ಮಾಡುವುದರಿಂದ ‘ಸ್ವಂತ’ದ ವಿಚಾರಗಳು ಕಡಿಮೆಯಾಗಿ ವ್ಯಾಪಕತ್ವವು ನಿರ್ಮಾಣವಾಗುತ್ತದೆ. ವ್ಯಾಪಕತ್ವದಲ್ಲಿ ಆನಂದವಿದೆ.

೬. ಶ್ರದ್ಧೆ : ಅನೇಕ ಜನರಲ್ಲಿ ಚಿಂತೆ ಮಾಡುವ ಸ್ವಭಾವದೋಷವಿದೆ. ಅನೇಕರಿಗೆ ಭವಿಷ್ಯದ ಕಾಳಜಿಯಿರುತ್ತದೆ, ಇನ್ನೂ ಕೆಲವರಿಗೆ ಭೂತಕಾಲದಲ್ಲಿ ಆಗಿ ಹೋದ ಪ್ರಸಂಗಗಳ ಚಿಂತೆ ಇರುತ್ತದೆ. ಆಧ್ಯಾತ್ಮವನ್ನು ಜೀವಿಸುವಾಗ ಎಲ್ಲ ಚಿಂತೆ, ನಮ್ಮ ಸಂಪೂರ್ಣ ಭಾರವನ್ನು ಭಗವಂತನ ಚರಣಗಳಲ್ಲಿ ಅರ್ಪಿಸುವುದು ಮಹತ್ವದ್ದಾಗಿದೆ. ಆಧ್ಯಾತ್ಮದಲ್ಲಿ ಶ್ರದ್ಧೆಯೇ ಚಲಾವಣೆಯಲ್ಲಿರುವ ನಾಣ್ಯವಾಗಿದೆ. ನಮ್ಮಲ್ಲಿ ಕರ್ತೃತ್ವ ಅಥವಾ ‘ನಾನೇ ಎಲ್ಲವನ್ನೂ ಮಾಡುತ್ತೇನೆ’ ಎಂಬ ಅಹಂಕಾರದ ವಿಚಾರ ಇರುವುದರಿಂದ ನಮ್ಮ ಶ್ರದ್ಧೆಯು ಕಡಿಮೆಯಾಗುತ್ತದೆ. ತಾಯಿಯ ಗರ್ಭದಲ್ಲಿರುವಾಗ ನಮ್ಮ ಕಾಳಜಿಯನ್ನು ಯಾರು ವಹಿಸುತ್ತಿದ್ದರು ? ೬ ತಿಂಗಳಿನ ಮಗುವಾಗಿರುವಾಗ ಹಾಲು ಸಿಗುವುದೇ ಎಂಬ ಚಿಂತೆಯಾಗುತ್ತಿತ್ತೇ ? ಹಾಗಿರುವಾಗ ಈಗೇಕೆ ಚಿಂತೆ ? ಇಲ್ಲಿಯವರೆಗಿನ ಆಯುಷ್ಯವು ಹೋಯಿತು. ಹೀಗಿರುವಾಗ ಮುಂದಿನ ೧೦ ವರ್ಷದ ಕಾಳಜಿ ಏಕೆ ? ಯಾವುದೇ ರೀತಿಯ ಕಾಳಜಿಯನ್ನು ಮಾಡುವುದೆಂದರೆ ದೇವರ ಮೇಲಿನ ಅಶ್ರದ್ಧೆಯೇ ಆಗಿದೆ. ಕಾಳಜಿ ಹಾಗೂ ಚಿಂತೆಯು ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ಇದರಿಂದ ಶಾರೀರಿಕ ಹಾಗೂ ಮಾನಸಿಕ ರೋಗಗಳು ನಿರ್ಮಾಣವಾಗುತ್ತವೆ. ಇಲ್ಲಿಯವರೆಗೆ ಎಷ್ಟೊಂದು ದುಃಖ ಮತ್ತು ಆಪತ್ತುಗಳ ಪ್ರಸಂಗಗಳಲ್ಲಿ ಭಗವಂತನು ನಮ್ಮನ್ನು ಸಂಭಾಳಿಸಿ ಜೀವಂತವಾಗಿಟ್ಟಿದ್ದಾನೆ; ಇಂತಹ ಭಗವಂತನು ಭವಿಷ್ಯದಲ್ಲಿ ನಮ್ಮೊಂದಿಗೆ ಇರುವುದಿಲ್ಲವೇ ? ಏನೆಲ್ಲ ಘಟಿಸಿದೆ, ಏನು ನಡೆಯುತ್ತಿದೆ ಮತ್ತು ಏನೆಲ್ಲ ನಡೆಯಲಿದೆ ಇವೆಲ್ಲವೂ ನಮ್ಮ ಒಳಿತಿಗಾಗಿಯೇ ಇದೆ, ಎಂಬ ವಿಚಾರ ಮಾಡಿ ಸಕಾರಾತ್ಮಕವಾಗಿದ್ದರೆ, ಸಿಕ್ಕಿರುವ ಪರಿಸ್ಥಿತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದರೆ, ಚಿಂತೆ ಮಾಡುವಲ್ಲಿ ಮನಸ್ಸಿನ ಶಕ್ತಿಯು ವ್ಯರ್ಥವಾಗುವುದಿಲ್ಲ. ಮೇಲು ಮೇಲಿನಿಂದ ಒಂದು ಘಟನೆಯ ಬಗ್ಗೆ ‘ಹೀಗೇಕೆ ಘಟಿಸಿತು?’ ಅಥವಾ ‘ಹೀಗೇಕೆ ಆಯಿತು?’ ಎಂದು ನಮಗೆ ಅನಿಸಿರಬಹುದು ಆದರೆ ಅದರ ಹಿಂದಿನ ಕಾರ್ಯಕಾರಣಭಾವ ನಮಗೆ ತಿಳಿದಿರುವುದಿಲ್ಲ. ಭಗವಂತನು ಪರಮಕೃಪಾಳುವಾಗಿದ್ದಾನೆ. ಅವನು ಎಂದಿಗೂ ಯಾರ ಮೇಲೆಯೂ ಅನ್ಯಾಯ ಮಾಡುವುದಿಲ್ಲ. ನಡೆಯುವುದೆಲ್ಲವೂ ಪ್ರಾರಬ್ಧದಿಂದಾಗಿ ಇರುತ್ತದೆ.

ನಾವು ಒಂದು ಮಗುವನ್ನು ಮೇಲೆಕ್ಕೆತ್ತಿ ಗಾಳಿಯಲ್ಲಿ ಹಾರಿಸಿದಾಗ ಆ ಮಗುವು ಮೇಲೆ ಹೋದಾಗಲೂ ನಗುತ್ತಲೇ ಇರುತ್ತದೆ ಅಲ್ಲವೇ ? ಅದಕ್ಕೆ ಕೆಳಗೆ ಯಾರಾದರೂ ಹಿಡಿಯುತ್ತಾರೆಯೇ ಎಂಬ ಚಿಂತೆಯೇ ಇರುವುದಿಲ್ಲ, ನಾವು ಅದನ್ನು ಹಿಡಿಯುತ್ತೇವೆ ಎಂಬ ಖಾತರಿಯಿರುತ್ತದೆ. ನಾವೂ ಕೂಡ ನಮ್ಮ ಪ್ರಾರಬ್ದಾನುಸಾರ ಏನು ಘಟಿಸಲಿಕ್ಕಿದೆ ಅದೇ ಘಟಿಸುವುದು, ನಾನು ನನ್ನ ಸಾಧನೆಯನ್ನು ಮಾಡುವೆನು, ದೇವರನ್ನು ಕರೆಯುವೆನು, ನಾಮಸ್ಮರಣೆ ಮಾಡುವೆನು… ಹೀಗೆ ಪ್ರಯತ್ನಗಳನ್ನು ಮಾಡಿದರೆ ನಮ್ಮ ಒತ್ತಡವು ಕಡಿಮೆಯಾಗಿ ನಮಗೆ ಆನಂದ ಸಿಗುವುದು. ಆದುದರಿಂದ ಚಿಂತೆ ಮಾಡುವುದನ್ನು ಬಿಟ್ಟು ದೇವರ ಮೇಲೆ ಶ್ರದ್ಧೆಯನ್ನಿಟ್ಟು ವರ್ತಮಾನ ಕಾಲದಲ್ಲಿರಲು ಪ್ರಯತ್ನಿಸೋಣ.

ನಾವು ನಮ್ಮ ದೃಷ್ಟಿಯಿಂದ ಚಿಂತನೆ ಮಾಡಿ ನಮ್ಮಲ್ಲಿರುವ ಗುಣಗಳನ್ನು ವೃದ್ಧಿಸಲು ಪ್ರತ್ಯಕ್ಷ ಕೃತಿಯ ಸ್ತರದಲ್ಲಿ ಪ್ರಯತ್ನಿಸೋಣ. ನಾವು ಸ್ವಭಾವದೋಷ ನಿರ್ಮೂಲನೆಗಾಗಿ ಯಾವ ದೋಷವನ್ನು ಆಯ್ಕೆ ಮಾಡಿದ್ದೇವೆ, ಅದರ ವಿರುದ್ಧ ಗುಣವನ್ನು ಗುಣಸಂವರ್ಧನೆಗಾಗಿ ಆಯ್ಕೆ ಮಾಡಬಹುದು. ಹೀಗೆ ಮಾಡುವುದರಿಂದ ನಮ್ಮಲ್ಲಿ ಅಂತರ್ಬಾಹ್ಯ ಬದಲಾವಣೆಯಾಗುವುದು ಮತ್ತು ಅದೇ ನಿಜವಾದ ವ್ಯಕ್ತಿತ್ವ ವಿಕಸನವಾಗಿದೆ. ತಾವು ಗುಣ ಹೆಚ್ಚಿಸಲು ಪ್ರಯತ್ನಿಸುವಿರಲ್ಲವೇ ?

Leave a Comment