ಆನ್‌ಲೈನ್ ಸತ್ಸಂಗ (25)

ಆಪತ್ಕಾಲ ಮತ್ತು ಸಾಧನೆ 

ಹೇಗೆ ಒಳ್ಳೆಯದು ಹಾಗೂ ಕೆಟ್ಟದು ಹೀಗೆ ಎರಡು ಭಾಗಗಳಿರುತ್ತವೆಯೋ ಹಾಗೆಯೇ ಕಾಲದಲ್ಲಿಯೂ ಎರಡು ವಿಧಗಳಿರುತ್ತವೆ. ಒಂದು ಅನುಕೂಲ ಕಾಲ, ಮತ್ತೊಂದು ಪ್ರತಿಕೂಲ ಕಾಲ. ಅನುಕೂಲ ಕಾಲ ಎಂದರೆ ಸಂಪತ್ಕಾಲ ಮತ್ತು ಪ್ರತಿಕೂಲ ಕಾಲವೆಂದರೆ ಆಪತ್ಕಾಲ ಅಥವಾ ಸಂಕಟದ ಕಾಲ.

2020 ರಲ್ಲಿ ನಾವು ವರ್ಷವಿಡೀ ಕೊರೋನಾ ಮಹಾಮಾರಿಯನ್ನು ಎದುರಿಸಿದೆವು. ಒಂದು ಸೂಕ್ಷ್ಮ ವಿಷಾಣುವು ಇಡೀ ಜಗತ್ತಿನಲ್ಲಿ ಸಂಚಾರವನ್ನು ಹೇಗೆ ನಿಲ್ಲಿಸಿಬಿಟ್ಟಿತು ಎಂಬುದನ್ನು ನಾವು ಅನುಭವಿಸಿದೆವು. ಕೊರೋನಾದ ತೀವ್ರತೆಯು ಕಡಿಮೆಯಂತೂ ಆಗಿಲ್ಲ, ಅದರ ಬದಲಿಗೆ ಅದು ಹೆಚ್ಚುತ್ತಲೇ ಹೋಯಿತು. 2020 ವರ್ಷದ ಇದೇ ಸಮಯದಲ್ಲಿ ಮಿಡತೆಗಳ ಕಾಟ, ಚಂಡಮಾರುತ, ಹಕ್ಕಿ ಜ್ವರ (ಬರ್ಡ್ ಫ್ಲು) ಇವೇ ಮುಂತಾದ ಸಂಕಟಗಳೂ ಎದುರಾದವು. ಪ್ರಸ್ತುತ ನಾವು ಹವಾಮಾನದಲ್ಲಿನ ಏರಿಳಿತಗಳನ್ನು ಅನುಭವಿಸುತ್ತೆದ್ದೇವೆ.

 

ಹವಾಮಾನ ಖಾತೆಯು, ಮುಂದಿನ 3 ತಿಂಗಳುಗಳಲ್ಲಿ ತೀವ್ರ ಉಷ್ಣತೆಯ ತೊಂದರೆಯಾಗಲಿದೆ ಎಂದು ಹೇಳಿದೆ. ಇದರ ನಡುವೆ ಮೂರನೆಯ ಮಹಾಯುಧ್ಧದ ಕತ್ತಿಯೂ ನಮ್ಮ ತಲೆಯ ಮೇಲೆ ತೂಗುತ್ತಿದೆ. ಚೀನಾ ಯಾವ ಘಳಿಗೆಯಲ್ಲಿ ಯುಧ್ದದ ಕಿಡಿ ಬೀಳಿಸುವುದೋ ತಿಳಿಯದು. ಕೆಲವು ಜ್ಯೋತಿಷ್ಯ ಶಾಸ್ತ್ರದ ತಜ್ಜರು ಹೇಳಿರುವುದೇನೆಂದರೆ ಭಾರತವೂ ಸೇರಿದಂತೆ ಇಡೀ ಜಗತ್ತಿನಲ್ಲಿ ಯುದ್ಧ್ದ ಸ್ಥಿತಿಯು ನಿರ್ಮಾಣವಾಗುವ ಸಾಧ್ಯತೆಯಿದೆ. ಇವೆಲ್ಲವುಗಳ ಪರಿಣಾಮ ಆರ್ಥಿಕ ವ್ಯವಸ್ಥೆಯ ಮೇಲೆಯೂ ಆಗಲಿದೆ. ಇಂದು ಬ್ಯಾಂಕುಗಳ ಸ್ಥಿತಿಯು ಹೇಗಿದೆ ಎಂಬುದನ್ನು ನಾವು ಈಗಾಗಲೇ ನೊಡುತ್ತಿದ್ದೇವೆ. ಇವೆಲ್ಲ ಘಟನೆಗಳು ಆಪತ್ಕಾಲದ ಚಿತ್ರವನ್ನೇ ತೋರಿಸುತ್ತಿವೆ.

ಅ. ಸಂಕಟಕಾಲದ ಕಾರಣ

ಇಂತಹ ಸ್ಥಿತಿಯು ನಿರ್ಮಾಣವಾಗಲು ಕಾರಣ ಮತ್ತು ಅದಕ್ಕೆ ಪರಿಹಾರ ಇವೆರಡೂ ವಿಷಯಗಳನ್ನು ಹಿಂದೂ ಧರ್ಮಶಾಸ್ತ್ರಗಳು ಮೊದಲೇ ಹೇಳಿಟ್ಟಿವೆ. ಹಿಂದೂ ಧರ್ಮಶಾಸ್ತ್ರವು ಹೇಳುವುದೇನೆಂದರೆ ‘ಧರ್ಮದ ಅವನತಿಯಾಗಿ ಅಧರ್ಮವು ಬಲಶಾಲಿಯಾದಾಗ ಪೃಥ್ವಿಯಲ್ಲಿ ಸಂಕಟಗಳು ಬರುತ್ತವೆ’. ಧರ್ಮಾಚರಣೆಯು ಯಾವ ಮಟ್ಟಕ್ಕೆ ಅವನತಿ ಹೊಂದಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಲಿದ್ದೇವೆ. ಹಲವಾರು ಮನೆಗಳಲ್ಲಿ ಪ್ರತಿನಿತ್ಯ ಪೂಜೆ ಕೂಡ ಮಾಡುವುದಿಲ್ಲ. ಇಂದು ಪ್ರಗತಿಯ ಹೆಸರಿನಲ್ಲಿ ನಮ್ಮ ಬಹಳಷ್ಟು ಪ್ರಾಚೀನ ಪರಂಪರೆಗಳನ್ನು ಬಿಟ್ಟು ಬಿಡುತ್ತಿದ್ದೇವೆ. ನಮ್ಮ ಆಚಾರ-ವಿಚಾರಗಳು, ವೇಷಭೂಷಣ, ಕೇಶವಿನ್ಯಾಸಗಳು, ಭಾಷೆ ಇವೆಲ್ಲವುಗಳ ಮೇಲೆಯೂ ಪಾಶ್ಚಾತ್ಯ ವಿಕೃತಿಯ ಬಿಗಿಯಾದ ಹಿಡಿತ ಉಂಟಾಗಿದೆ. ಇದರಿಂದಲೇ ಸಂಕಟಗಳ ಸರಣಿ ಪ್ರಾರಂಭಗೊಂಡಿದೆ. ಆದರೆ ಸಂಕಟಕಾಲದಲ್ಲಿ ಭೌತಿಕ ಸಾಧನಾಸಾಮಗ್ರಿ, ವೈಜ್ಞಾನಿಕ ಪ್ರಗತಿ, ಹಣಕಾಸು ಇವುಗಳ ಬಲ ಉಪಯೋಗಕ್ಕೆ ಬಾರದು, ಸಾಧನೆಯ ಬಲವೇ ನಮ್ಮ ಸಹಾಯಕ್ಕೆ ಬರುವುದು.

ಆ. ಆಪತ್ಕಾಲದ ಮುನ್ಸೂಚನೆ

ಇದೆಲ್ಲವೂ ಅಕಸ್ಮಾತಾಗಿ ಹೇಗೆ ಆಯಿತು ಎಂಬ ಪ್ರಶ್ನೆ ನಮ್ಮ ಮನಸ್ಸಿಗೆ ಬರಬಹುದು. ಆದರೆ ಇದರಲ್ಲಿ ಯಾವುದೂ ಅಕಸ್ಮಾತ್ತಾಗಿ ಬಂದಿಲ್ಲ. ಹಲವಾರು ಸಂತರು, ದ್ರಷ್ಟಾರರು ಈ ಮೊದಲೇ ಆಪತ್ಕಾಲದ ಬಗ್ಗೆ ಹೆಳಿ ಇಟ್ಟಿದ್ದಾರೆ.

1. ನಾಸ್ಟ್ರಾಡಾಮಸ್ : ಸುಮಾರು 400 ವರ್ಷಗಳ ಹಿಂದೆಯೇ ಫ್ರಾನ್ಸ್ ನ ದ್ರಷ್ಟಾರನು ಬಹಳಷ್ಟು ಸಂಗತಿಗಳ ಮುನ್ಸೂಚನೆ ನೀಡಿದ್ದಾನೆ. ಅವುಗಳು ನಿಖರವಾಗಿ ಹಾಗೆಯೇ ನಡೆದಿವೆ. ಅವನು ಮೂರನೆಯ ಮಹಾಯುದ್ಧದ ಬಗ್ಗೆಯೂ ಹೇಳಿದ್ದಾನೆ – ‘ಈ ಯುದ್ಧವು ಎಷ್ಟು ಭಯಂಕರವಾಗಿರಲಿದೆ ಎಂದರೆ ಅದರೆದುರು ಮೊದಲಿನ ಎರಡು ಮಹಾಯುದ್ದಗಳು ನಿಮಗೆ ಮಕ್ಕಳಾಟದಂತೆ ಕಾಣುವವು !’

2. ಪರಾತ್ಪರ ಗುರು ಡಾ. ಆಠವಲೆ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರು ಕೂಡ 30 ವರ್ಷಗಳ ಹಿಂದೆಯೇ ಆಪತ್ಕಾಲದ ಬಗ್ಗೆ ಹೇಳಿ ಇಟ್ಟಿದ್ದರು. ಅವರು ಹೀಗೆ ಹೇಳಿದಾರೆ – ಮೂರನೆಯ ಮಹಾಭಯಂಕರ ಯುದ್ಧದಲ್ಲಿ ಭಾರತವು ತೊಡಗಿಸಿಕೊಳ್ಳುವಂತಾಗಲಿದೆ. ಊರೂರುಗಳು ನಾಶವಾಗಿ ಹೋಗಲಿವೆ. ಅಣುಬಾಂಬುಗಳ ಸಹಾಯದಿಂದ ಸಂಹಾರವಾಗುವುದು. 2021 ನೆಯ ಇಸವಿಯಿಂದ ಆಪತ್ಕಾಲದ ತೀವ್ರತೆಯು ಬಹಳ ಹೆಚ್ಚಾಗುವುದು. 2023 ಇಸವಿಯ ತನಕ, ಅಂದರೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಾಗುವ ತನಕ ಆಪತ್ಕಾಲವು ಇರಲಿದೆ. ಅದರಿಂದ ಪಾರಾಗುವುದಿದ್ದರೆ ಸಾಧನೆಯ ಆವಶ್ಯಕತೆಯಿದೆ.

ಸಂತರ ಮಾತುಗಳ ಮೇಲೆ ವಿಶ್ವಾಸವನ್ನಿಟ್ಟು ನಾವು ಕೃತಿ ಮಾಡಿದರೆ, ದೇವರ ಭಕ್ತಿ ಮಾಡಿದರೆ ದೇವರೇ ನಮ್ಮನ್ನು ರಕ್ಷಿಸುವರು.

ಇ. ಆಪತ್ಕಾಲ ಸಾಧನೆ ಮಾಡುವವರಿಗೆ ಸಂಧಿಕಾಲ

ಮೇಲ್ನೋಟಕ್ಕೆ ಸದ್ಯದ ಒಟ್ಟಾರೆ ಪರಿಸ್ಥಿತಿಗಳು ಭೌತಿಕ, ರಾಜಕೀಯ ಅಥವಾ ಪರಿಸರಕ್ಕೆ ಸಂಬಂಧಪಟ್ಟವುಗಳಾಗಿವೆ ಎಂದೆನಿಸಿದರೂ ಇದು ನಿಜವಾಗಿಯೂ ಕಾಲಚಕ್ರದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಬೇಕು. ಕಾಲಚಕ್ರಕ್ಕನುಸಾರ ಕಲಿಯುಗಾಂತರ್ಗತ ಕಲಿಯುಗವು ಸಮಾಪ್ತವಾಗಿ ಕಲಿಯುಗಾಂತರ್ಗತ ಸತ್ಯಯುಗವು ಪ್ರಾರಂಭವಾಗುವ ಕಾಲವಾಗಿದೆ. ಇದನ್ನು ಸಂಧಿಕಾಲ ಎಂದೂ ಕರೆಯುತ್ತಾರೆ.

ಸಂಧಿಕಾಲದಲ್ಲಿ ಸಾಧನೆ ಮಾಡುವವರ ಸಾಧನೆಯು ಅತ್ಯಂತ ವೇಗದಿಂದ ಆಗುತ್ತಿರುತ್ತದೆ. ಬೇರೆ (ಅನ್ಯ) ಕಾಲದಲ್ಲಿ 1 ಸಾವಿರ ವರ್ಷಗಳ ಕಾಲ ಸಾಧನೆಯನ್ನು ಮಾಡುವುದರಿಂದ ಯಾವ ಫಲ ಲಭಿಸುತ್ತದೆಯೋ ಅದು ಸಂಧಿಕಾಲದಲ್ಲಿ ಅಲ್ಪ ಕಾಲದಲ್ಲಿ ಲಭಿಸುತ್ತದೆ. ಆದ್ದರಿಂದಲೇ ಈ ಆಪತ್ಕಾಲವು ಸಾಧನೆಗೆ ಸುವರ್ಣಸಂಧಿಕಾಲವಾಗಿದೆ. ನಾವೆಲ್ಲರೂ ಅದನ್ನು ನಮ್ಮ ಸಾಧನೆಗಾಗಿ ಉಪಯೋಗಿಸಿಕೊಳ್ಳಬೇಕಾಗಿದೆ. ನಮ್ಮೆಲ್ಲರಿಗೂ ಇಂತಹ ಸಂಧಿಕಾಲದಲ್ಲಿ ಸಾಧನೆ ಮಾಡಲು ಅವಕಾಶ ಸಿಕ್ಕಿರುವ ಕಾರಣ ನಾವೆಲ್ಲರೂ ಅತ್ಯಂತ ಭಾಗ್ಯಶಾಲಿಗಳಾಗಿದ್ದೇವೆ. ಇನ್ನು ಮುಂದೆ ನೂರಾರು ವರ್ಷಗಳ ತನಕ ಇಂತಹ ಕಾಲ ಮತ್ತೆ ಬರಲಾರದು. ಆದ್ದರಿಂದ ಇಂದಿನಿಂದಲ್ಲ, ಈ ಕ್ಷಣದಿಂದಲೇ ನಾವು ನಮ್ಮನ್ನು ಸಾಧನೆಗೆ ಸಮರ್ಪಿಸಿಕೊಂಡು ಸಾಧನೆಯನ್ನು ಪ್ರಾರಂಭಿಸೋಣ.

ಈ. ದೇವರ ಭಕ್ತನಿಗೆ ಭಯವಿಲ್ಲ

ದೇವರ ಭಕ್ತಿ ಮಾಡುವುದರಿಂದ ಏನೇನು ಆಗಬಹುದು ಎಂಬುದರ ಉದಾಹರಣೆಗಳನ್ನು ನಾವು ಪುರಾಣಗಳಲ್ಲಿ ಕಾಣಬಹುದು. ಹಿರಣ್ಯಕಶಿಪುವಿನ ಮಗನಾದ ಭಕ್ತ ಪ್ರಹ್ಲಾದನು ಕ್ಷಣಕ್ಷಣಕ್ಕೂ ನಾರಾಯಣನ ನಾಮವನ್ನು ಜಪಿಸುತ್ತಿದ್ದನು. ಪ್ರಹ್ಲಾದನು ದೇವರ ಹೆಸರನ್ನು ಹೇಳಬಾರದು ಎಂಬುದಕ್ಕಾಗಿ ಹಿರಣ್ಯಕಶಿಪುವು ಅವನಿಗೆ ಬಹಳ ಕಷ್ಟಗಳನ್ನು ಕೊಡಲು ಪ್ರಯತ್ನಿಸಿದನು. ಅವನನ್ನು ಕುದಿಯುತ್ತಿರುವ ಎಣ್ಣೆಯೊಳಗೆ ಮುಳುಗಿಸಲಾಯಿತು, ಎತ್ತರದ ಬೆಟ್ಟದಿಂದ ಕೆಳಗೆ ತಳ್ಳಿದರು; ಆದರೂ ಪ್ರಹ್ಲಾದನಿಗೆ ಏನೂ ಆಗಲಿಲ್ಲ. ಬದಲಾಗಿ ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಭಗವಂತನು ಅವತಾರವನ್ನು ತಾಳಬೇಕಾಗಿ ಬಂದಿತು. ಭಕ್ತಿಯ ಸಾಮರ್ಥ್ಯ ಇದೇ. ಭಗವಾನ್ ಶ್ರೀಕೃಷ್ಣನೂ ‘ನ ಮೇ ಭಕ್ತಃ ಪ್ರಣಶ್ಯತಿ|’ ಎಂದು ವಚನವನ್ನು ಕೊಟ್ಟಿದ್ದಾನೆ. ಇದರ ಅರ್ಥ – ನನ್ನ ಭಕ್ತನ ನಾಶವಾಗಲಾರದು. ಮುಂಬರುವ ಆಪತ್ಕಾಲದಲ್ಲಿ ಭಗವಂತನು ನಮ್ಮನ್ನು ರಕ್ಷಿಸಬೇಕು ಎಂದೆನಿಸುತ್ತಿದ್ದರೆ ನಾವು ಭಕ್ತರಾಗಬೇಕು. ಪ್ರಸ್ತುತ ಕಾಲದಲ್ಲಿಯೂ ಬಹಳಷ್ಟು ಭಕ್ತರು, ದೇವರು ಸಂಕಟಕಾಲದಲ್ಲಿ ಆಧಾರವನ್ನು ಕೊಟ್ಟು ರಕ್ಷಣೆ ಮಾಡಿದ್ದಾನೆ ಎಂಬುದರ ಅನುಭೂತಿಗಳನ್ನು ಪಡೆದುಕೊಂಡಿದ್ದಾರೆ. ಹೇಗೆ ಬೀಸೋ ಕಲ್ಲಿನ ಮಧ್ಯಭಾಗದಲ್ಲಿರುವ ಕೋಲಿನ ಬಳಿ ಇರುವ ಧಾನ್ಯದ ಕಣಗಳು ಪುಡಿಯಾಗುವುದಿಲ್ಲವೋ ಹಾಗೆಯೇ ನಾವು ಸಾಧನಾರೂಪದ ಕೋಲನ್ನು ಹಿಡಿದಿಟ್ಟುಕೊಂಡರೆ ನಮ್ಮ ಉದ್ಧಾರ ಆಗಿಯೇ ಆಗುವುದು ಎಂಬ ದೃಢ ನಂಬಿಕೆಯನ್ನು ಇಟ್ಟುಕೊಳ್ಳಿರಿ.

ಸಾಧನೆಯನ್ನು ಮಾಡುವುದರಿಂದ ಆತ್ಮಬಲವು ನಿರ್ಮಾಣವಾಗುತ್ತದೆ. ವ್ಯಾವಹಾರಿಕ ಆವಶ್ಯಕತೆಗಳು ಕಡಿಮೆಯಾಗುತ್ತವೆ. ದುಃಖವನ್ನು ಸಹಿಸುವ ಕ್ಷಮತೆಯು ಹೆಚ್ಚಾಗಿ ಆನಂದದಲ್ಲಿರಲು ಸಾದ್ಯವಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರಲು ಸಾಧ್ಯವಾಗುತ್ತದೆ. ಸಾಧನೆ ಎಂದರೇನು ಎಂಬುದನ್ನು ನಾವು ಈಗಾಗಲೇ ಇದುವರೆಗಿನ ಸತ್ಸಂಗಗಳಲ್ಲಿ ತಿಳಿದುಕೊಂಡಿದ್ದೇವೆ. ಸಾಧನೆ ಮಾಡುವುದಕ್ಕೆ ಸರ್ವಸಂಗಪರಿತ್ಯಾಗ ಮಾಡುವ ಆವಶ್ಯಕತೆಯಿಲ್ಲ. ಸಂಸಾರದಲ್ಲಿದ್ದುಕೊಂಡೂ ಸಾಧನೆಯನ್ನು ಮಾಡಬಹುದು. ನಾಮಜಪವು ಪ್ರಸ್ತುತ ಕಾಲಕ್ಕೆ ಸರ್ವಶ್ರೇಷ್ಠ ಸಾಧನೆಯಾಗಿದೆ. ಆದ್ದರಿಂದ ಪ್ರತಿದಿನ ಏಕಾಗ್ರತೆಯಿಂದಲೂ ಭಾವಪೂರ್ಣವಾಗಿಯೂ ನಾಮಜಪವನ್ನು ಮಾಡುವ ಅವಶ್ಯಕತೆಯಿದೆ. ಅಂತೆಯೇ ನಮ್ಮ ಮನಸ್ಸನ್ನು ನಿರ್ಮಲವಾಗಿಸುವುದಕ್ಕಾಗಿ ಸ್ವಭಾವದೊಷ ನಿರ್ಮೂಲನಾ ಪ್ರಕ್ರಿಯೆಯನ್ನು ಕೈಗೊಳ್ಳುವ ಆವಶ್ಯಕತೆಯಿದೆ.

ಉ. ತಾತ್ತ್ವಿಕವಲ್ಲ ಪ್ರತ್ಯಕ್ಷ ಕೃತಿಗೆ ಮಹತ್ತ್ವವಿದೆ

ಸಾಧನೆಯಲ್ಲಿ ತಾತ್ತ್ವಿಕ ವಿಷಯಕ್ಕೆ ಕೇವಲ ಶೇ. 2 ರಷ್ಟು ಮಹತ್ವವಿದೆ ಮತ್ತು ಪ್ರತ್ಯಕ್ಷ ಕೃತಿಗೆ ಶೇ. 98 ರಷ್ಟು ಮಹತ್ವವಿದೆ. ನಮ್ಮ ಸಾಧನೆಯ ಪ್ರಯತ್ನಗಳಿಗೆ ವೇಗ ಬರಬೇಕೆಂಬುದಕ್ಕಾಗಿ ನಾವು ಪ್ರತಿದಿನ ಧ್ಯೇಯ ಅಥವಾ ಗುರಿಯನ್ನು ನಿರ್ಧರಿಸಿ ಪ್ರಯತ್ನಿಸಬೇಕು. ಯಾವುದೇ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿರುವಾಗ ಗುರಿಯನ್ನು ಇಟ್ಟುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಗುರಿಯನ್ನು ಇಟ್ಟುಕೊಳ್ಳುವುದರಿಂದ ನಾವು ಚಿಂತನಾಶೀಲರಾಗುತ್ತೇವೆ, ನಮ್ಮ ಪ್ರಯತ್ನಗಳಿಗೆ ವೇಗ ಬರುತ್ತದೆ ಮತ್ತು ನಾವು ಕೃತಿಶೀಲರಾಗುತ್ತೇವೆ. ಪ್ರತಿದಿನ ಕನಿಷ್ಠ 1 ಗಂಟೆ ಕುಳಿತುಕೊಂಡು ಜಪ ಮಾಡುವೆನು, ಸ್ವಭಾವದೊಷ ನಿರ್ಮೂಲನಾ ತಖ್ತೆ/ಚಾರ್ಟ್ ನಲ್ಲಿ ಕನಿಷ್ಠ 5 ತಪ್ಪುಗಳನ್ನು ಬರೆಯುವೆನು, ಪ್ರತಿ ದಿನ ಕನಿಷ್ಠ 5 ಸ್ವಯಂಸೂಚನಾ ಸತ್ರಗಳನ್ನು ಮಾಡುವೆನು ಈ ವಿಧದ ಗುರಿಯನ್ನು ಇಟ್ಟುಕೊಳ್ಳಬಹುದು. ಗುರಿಯನ್ನು ಇಡುವುದು, ಅದರ ವರದಿ ಕೊಡುವುದು, ಅಡಚಣೆಗಳ ಬಗ್ಗೆ ಸಮಯಸಮಯಕ್ಕೆ ಕೇಳುವುದು ಹೀಗೆ ಮಾಡಿದರೆ ನಮ್ಮ ಪ್ರಯತ್ನಗಳಿಗೆ ವೇಗ ದೊರೆಯುವುದು.

ಊ. ವರ್ತಮಾನಕಾಲದಲ್ಲಿ ಇರಿ !

ಮುಂಬರುವ ಕೆಲವು ವರ್ಷಗಳು ಪ್ರತಿಕೂಲವಾಗಿದ್ದರೂ ಅದರಿಂದ ಹೆದರುವ ಆವಶ್ಯಕತೆಯಿಲ್ಲ. ಕಾಲಮಹಿಮೆಗನುಸಾರ ಆಪತ್ಕಾಲದ ನಂತರ ಸಂಪತ್ಕಾಲ ಅಂದರೆ ಉತ್ತಮ ಕಾಲವು ಬಂದೇ ಬರುವುದು. ಸಮುದ್ರದಲ್ಲಿ ಉಬ್ಬರದ ನಂತರ ಇಳಿತ, ರಾತ್ರಿಯ ನಂತರ ಹಗಲು ಇದು ಸೃಷ್ಟಿಯ ನಿಯಮವಾಗಿದೆ. ಆದ್ದರಿಂದ ಉತ್ತಮ ಕಾಲ ಮತ್ತೊಮ್ಮೆ ಯಾವಾಗ ಬರುವುದು ಎಂಬುದರ ಬಗ್ಗೆ ಅನಾವಶ್ಯಕ ವಿಚಾರ ಮಾಡುವುದು ಬೇಡ. ನಾವು ರಾತ್ರಿ ಹೊತ್ತಿನಲ್ಲಿ, ರಾತ್ರಿಯು ಯಾವಾಗ ಬೇಗನೇ ಮುಗಿಯುವುದೋ ಎಂಬುದರ ಕುರಿತು ವಿಚಾರ ಮಾಡುವುದರಿಂದ ಸೂರ್ಯೋದಯವು ಬೇಗನೆ ಆಗುವುದಿಲ್ಲವಲ್ಲ ? ಸೂರ್ಯೋದಯವು ಯಾವಾಗ ಆಗುವುದಿದೆಯೋ, ಆಗಲೇ ಆಗುತ್ತದೆ. ಆದ್ದರಿಂದ ನಾವು ಕೂಡ ಭೂತಕಾಲ, ಭವಿಷ್ಯತ್ ಕಾಲ ಇವುಗಳ ಬಗ್ಗೆ ಅನಾವಶ್ಯಕವಾಗಿ ವಿಚಾರ ಮಾಡದೇ ವರ್ತಮಾನದಲ್ಲಿ ಇದ್ದುಕೊಂಡು, ಈಗಿನ ಈ ಕ್ಷಣವನ್ನು ಜೀವಿಸಬೇಕಾಗಿದೆ. ಪರಾತ್ಪರ ಗುರು ಡಾ. ಆಠವಲೆ ಇವರು ಹೀಗೆ ಹೇಳುತ್ತಾರೆ – ’ಸಾಧನೆಯನ್ನು ಮಾಡುವವರು ಸತತವಾಗಿ ವರ್ತಮಾನಕಾಲದಲ್ಲಿ ಇರಬೇಕು’. ಸಾಧನೆಯನ್ನು ಮಾಡುವಾಗ ನಮ್ಮ ಶ್ರದ್ಧೆ ಹೆಚ್ಚಾಗುತ್ತಾ ಹೋದಂತೆ ಭವಿಷ್ಯತ್ಕಾಲದ ಬಗ್ಗೆ ಚಿಂತೆಯೂ ಇಲ್ಲದಂತಾಗುತ್ತದೆ. ಏಕೆಂದರೆ ದೇವರು ಏನನ್ನು ಮಾಡಿದರೂ ಅದನ್ನು ನಮ್ಮ ಒಳಿತಿಗಾಗಿಯೇ ಮಾಡುತ್ತಿದ್ದಾನೆ ಎಂಬ ಶ್ರದ್ಧೆಯು ದೃಢವಾಗುತ್ತದೆ. ಸಾಧನೆಯಿಂದ ಭೂತಕಾಲ ಕೂಡ ಅಳಿಸಲ್ಪಡುತ್ತದೆ. ಆದ್ದರಿಂದ ನಾವು ಈ ಕ್ಷಣದಿಂದಲೇ ನಮ್ಮನ್ನು ನಾವು ಸಮರ್ಪಿಸಿಕೊಂಡು ಪ್ರಾಮಾಣಿಕತನದಿಂದ ಸಾಧನೆಯನ್ನು ಮಾಡಲು ಪ್ರಯತ್ನಿಸೋಣ. ನೀವು ಹೀಗೆ ಪ್ರಯತ್ನ ಮಾಡುವಿರಲ್ಲವೇ ?

Leave a Comment