ಆನ್‌ಲೈನ್ ಸತ್ಸಂಗ (24)

ಇದುವರೆಗೆ ನಾವು ಜೀವನದಲ್ಲಿ ಸಾಧನೆ ಮಾಡುವುದರ ಮಹತ್ವ, ಅಷ್ಟಾಂಗ ಸಾಧನೆಯ ಸೂತ್ರಗಳು ಹಾಗೂ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಪ್ರಾರಬ್ಧ, ಅಂದರೆ ಯಾವುದನ್ನು ಸಾಮಾನ್ಯ ಭಾಷೆಯಲ್ಲಿ ಹಣೆಬರಹ ಎನ್ನಲಾಗುತ್ತದೆಯೋ, ಅದು ಏನು ? ಸಂಚಿತಕರ್ಮ, ಕ್ರಿಯಾಮಾಣ ಕರ್ಮ ಎಂದರೇನು ? ಮನುಷ್ಯನ ಜೀವನದ ಮೇಲೆ ಇವುಗಳಿಂದ ಹೇಗೆ ಪರಿಣಾಮವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮನುಷ್ಯನ ಜೀವನ ಎಂದ ಮೇಲೆ ಸುಖ ಮತ್ತು ದುಃಖ ಇದ್ದದ್ದೇ. ಜೀವನದಲ್ಲಿ ದುಃಖ ಬೇಡ ಎಂದು ಹೇಳಿ ಅದರಿಂದ ತಪ್ಪಿಸಿಕೊಳ್ಳಲಾಗದು. ಸುಖವನ್ನು ಎಷ್ಟು ಬಾರಿ ‘ಬಾ ಬಾ’ ಎಂದು ಕರೆದರೂ ಅದು ಬರುವುದಿಲ್ಲ. ಇದಕ್ಕೆ ಕಾರಣವೇ ಪ್ರತಿಯೊಬ್ಬರ ಪ್ರಾರಬ್ಧ. ಅದನ್ನು ನಾವು ಭೋಗಿಸಿಯೇ ಮುಗಿಸಬೇಕಾಗುತ್ತದೆ. ‘ಮಾಡಿದ್ದುಣ್ಣೋ ಮಹರಾಯಾ’ ಎಂಬಂತೆ ನಮ್ಮ ಪಾಲಿಗೆ ಬರುವ ಪ್ರಾರಬ್ಧವು ನಾವೇ ಹಿಂದಿನ ಜನ್ಮಗಳಲ್ಲಿ ಮಾಡಿರುವ ಒಳ್ಳೆಯ-ಕೆಟ್ಟ ಕರ್ಮಗಳ ಫಲವಾಗಿರುತ್ತದೆ. ಪ್ರಾರಬ್ಧವನ್ನು ಭೋಗಿಸಿಯೇ ಮುಗುಸಬೇಕಾಗುತ್ತದೆ. ಸಂತರಿಗೂ ಪ್ರಾರಬ್ಧ ತಪ್ಪಿದ್ದಲ್ಲ. ಹೀಗಿರುವಾಗ ನಮ್ಮಂತಹ ಸಾಮಾನ್ಯರ ಗತಿ ಏನು ? ಇದು ಒಮ್ಮೆ ಮನದಟ್ಟಾಯಿತೆಂದರೆ ಜೀವನದಲ್ಲಿ ನಡೆಯುವ ಒಳ್ಳೆಯ-ಕೆಟ್ಟ ಘಟನೆಗಳನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ.

ಕರ್ಮಫಲಸಿದ್ಧಾಂತ ಮತ್ತು ಪುನರ್ಜನ್ಮಸಿದ್ಧಾಂತ

ಇವು ಹಿಂದೂ ಧರ್ಮದ 2 ಮಹತ್ವಪೂರ್ಣ ಸಿದ್ಧಾಂತಗಳಾಗಿವೆ.

ಕರ್ಮಫಲ ಸಿದ್ಧಾಂತವು ಹೇಳುವುದೇನೆಂದರೆ ಮಾಡಿದ ಪ್ರತಿಯೊಂದು ಕರ್ಮಕ್ಕೂ ಫಲವನ್ನು ಭೋಗಿಸಲೇಬೇಕು. ಸತ್ಕರ್ಮ ಮಾಡಿದರೆ ಪುಣ್ಯ ಲಭಿಸುತ್ತದೆ ಮತ್ತು ಕೆಟ್ಟ ಕರ್ಮ ಮಾಡಿದರೆ ಪಾಪವು ಬರುತ್ತದೆ.

ಪುನರ್ಜನ್ಮ ಸಿದ್ಧಾಂತಕ್ಕನುಸಾರ ವ್ಯಕ್ತಿಯು ಇಡೀ ಜೀವನದಲ್ಲಿ ಮಾಡಿದ ಕರ್ಮಕ್ಕನುಸಾರ ಆತನಿಗೆ ಮರಣೋತ್ತರ ಗತಿ ಸಿಗುತ್ತದೆ. ವ್ಯಕ್ತಿಯಿಂದ ಆಗಿರುವ ಪುಣ್ಯ ಹಾಗೂ ಪಾಪಕರ್ಮಗಳ ಫಲವನ್ನು ವ್ಯಕ್ತಿಯು ಇದೇ ಜನ್ಮದಲ್ಲಿ ಭೋಗಿಸಬೇಕು ಎಂದೇನಿಲ್ಲ; ಏಕೆಂದರೆ ಕೆಲವೊಮ್ಮೆ ಅದನ್ನು ಮುಂದಿನ ಜನ್ಮಗಳಲ್ಲಿಯೂ ಭೋಗಿಸಬೇಕಾಗುತ್ತದೆ. ಅದೇ ಸಂಚಿತ ಮತ್ತು ಪ್ರಾರಬ್ಧ.

ಮನುಷ್ಯ ಜನ್ಮದ ಉದ್ದೇಶ

ನಾವು ಜನ್ಮಕ್ಕೆ ಬರಲು ಎರಡು ಮುಖ್ಯ ಉದ್ದೇಶಗಳಿವೆ. ಮೊದಲನೆಯದು ಮೋಕ್ಷಪ್ರಾಪ್ತಿ ಮಾಡಿಕೊಂಡು ಜನನಮರಣದ ಚಕ್ರದಿಂದ ಪಾರಾಗುವುದು ಮತ್ತು ಎರಡನೆಯದು ಪ್ರಾರಬ್ಧಭೋಗವನ್ನು ಭೋಗಿಸಿ ಮುಗಿಸುವುದು. ಪ್ರತಿಯೊಂದು ಜನ್ಮದಲ್ಲಿಯೂ ನಮ್ಮಿಂದ ತಪ್ಪುಗಳೇ ಆಗುವುದರಿಂದ ದೇವರು ಮತ್ತೆ ಮತ್ತೆ ನಮಗೆ ತನ್ನ ಬಳಿ ಬರಲು ಅವಕಾಶವನ್ನು ಕೊಡುತ್ತಾರೆ. ಇದರಿಂದ ನಾವು ಈ ಜನ್ಮದಲ್ಲಾದರೂ ಸಾಧನೆ ಮಾಡಿ ಮುಂದಿನ ಲೋಕಕ್ಕೆ ಹೋಗುವ ಸಾಧ್ಯತೆಯಿರುತ್ತದೆ. ನಾವು ಈ ಮನುಷ್ಯಜನ್ಮದ ಲಾಭ ಪಡೆದುಕೊಂಡು ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಪುಣ್ಯಕರ್ಮಕ್ಕಿಂತ ಸಾಧನೆಯು ಮಹತ್ವದ್ದಾಗಿದೆ

ಶೈಕ್ಷಣಿಕ ಪ್ರಗತಿ ಹೊಂದುವುದಕ್ಕೆ ಶಿಕ್ಷಣವನ್ನು ಪಡೆಯಬೇಕಾಗುವಂತೆ ಆಧ್ಯಾತ್ಮಿಕ ಉನ್ನತಿ ಹೊಂದುವುದಕ್ಕಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗಿ ಮುಕ್ತಿ ದೊರಕುವ ತನಕ ಆತ್ಮನು ಮತ್ತೆ ಮತ್ತೆ ಜನ್ಮಕ್ಕೆ ಬರುತ್ತಾನೆ. ವ್ಯಕ್ತಿಯೊಬ್ಬನು ಪುಣ್ಯಕರ್ಮಗಳನ್ನು ಮಾಡುತ್ತಿದ್ದಾನೆ ಎಂದು ಭಾವಿಸೋಣ; ಆದರೆ ಈ ವ್ಯಕ್ತಿಯು ಸಾಧನೆ ಮಾಡದಿದ್ದರೆ ಅವನಿಗೆ ಜನನ-ಮರಣದ ಚಕ್ರದಿಂದ ಮುಕ್ತಿ ಸಿಗಲು ಸಾಧ್ಯವೇ ? ಇದಕ್ಕೆ ಉತ್ತರ ‘ಇಲ್ಲ’ ಎಂದಿದೆ. ಇದಕ್ಕೆ ಕಾರಣವೆಂದರೆ ಆ ವ್ಯಕ್ತಿಗೆ ಮರಣದ ನಂತರ ಒಳ್ಳೆಯ ಕರ್ಮಗಳಿಂದಾಗಿ ಸ್ವರ್ಗಪ್ರಾಪ್ತಿ ಆಗುತ್ತದೆ. ಪುಣ್ಯಬಲದ ಸಂಗ್ರಹವು ಇರುವ ತನಕ ವ್ಯಕ್ತಿಯು ಅಲ್ಲಿ ಇರುತ್ತಾನೆ ಮತ್ತು ಪುಣ್ಯವು ಮುಗಿದ ನಂತರ ಪೃಥ್ವಿಯ ಮೇಲೆ ಇನ್ನೂ ಹಿಂದಿನ ಜನ್ಮಗಳಲ್ಲಿನ ಪ್ರಾರಬ್ಧವನ್ನು ಭೋಗಿಸುವುದಕ್ಕೆ ಪುನರ್ಜನ್ಮ ತಾಳಬೇಕಾಗುತ್ತದೆ. ಪಾಪಕರ್ಮಗಳನ್ನು ಮಾಡುವ ವ್ಯಕ್ತಿಯು ಆಧ್ಯಾತ್ಮಿಕವಾಗಿ ಅಧೋಗತಿ ಹೊಂದುತ್ತಾನೆ ಮತ್ತು ಮರಣದ ನಂತರ ಮತ್ತೊಮ್ಮೆ ಮನುಷ್ಯ ಯೋನಿಯಲ್ಲಿ ಜನ್ಮ ಪಡೆಯದೆ ಕೀಟ, ಪಶು, ಪಕ್ಷಿ, ಮರ ಹೇಗೆ 84 ಲಕ್ಷ ಕನಿಷ್ಠ ಯೋನಿಗಳಲ್ಲಿ ಜನ್ಮ ತಾಳಬೇಕಾಗುತ್ತದೆ. ಸಾಧನೆ ಮಾಡದಿದ್ದರೆ ಈ ರೀತಿ ‘ಪುನರಪಿ ಜನನಂ ಪುನರಪಿ ಮರಣಂ’ ಹೀಗೆ ನಡೆಯುತ್ತಲೇ ಇರುತ್ತದೆ; ಆದ್ದರಿಂದ ಮನುಷ್ಯ ಜನ್ಮದಲ್ಲಿ ಸಾಧನೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ.

ಸಂಚಿತ, ಪ್ರಾರಬ್ಧ ಮತ್ತು ಕ್ರಿಯಾಮಾಣ

ಸಾವಿರಾರು, ಲಕ್ಷಗಟ್ಟಲೆ, ಕೋಟಿಗಟ್ಟಲೆ ವರ್ಷಗಳ ಹಿಂದೇ ಯಾವಾಗಲೋ ನಮ್ಮ ಮೊದಲ ಜನ್ಮವಾಗಿರುತ್ತದೆ. ಆಗ ಬೇಕಾದ ಹಾಗೆ ವರ್ತಿಸಲು ದೇವರು ಎಲ್ಲ ಸಂಗತಿಗಳನ್ನೂ ನಮ್ಮ ಕೈಗೇ ಕೊಟ್ಟಿದ್ದನು. ಆಗ ನಾವು ಮಾಡಿದ ಎಲ್ಲ ಕರ್ಮವೂ ಕ್ರಿಯಮಾಣ ಕರ್ಮವಾಗಿತ್ತು. ಯಾವುದು ನಮ್ಮ ಕೈಯಲ್ಲಿರುತ್ತದೆಯೋ ಅದನ್ನು ಕ್ರಿಯಮಾಣ ಎನ್ನುತ್ತಾರೆ. ಆ ಜನ್ಮದಲ್ಲಿ ನಾವು ಕೆಲವು ಒಳ್ಳೆಯ ಕರ್ಮಗಳನ್ನು ಮಾಡಿದೆವು ಮತ್ತು ಇನ್ನೂ ಕೆಲವು ಕೆಟ್ಟ ಕರ್ಮಗಳನ್ನು ಮಾಡಿದೆವು. ಈ ಒಳ್ಳೆಯ-ಕೆಟ್ಟ ಕರ್ಮಗಳ ಪರಿಣಾಮವನ್ನು ಮುಂದಿನ ಜನ್ಮದಲ್ಲಿ ಭೋಗಿಸುವುದಿರುತ್ತದೆ, ಇದನ್ನು ಸಂಚಿತ ಎನ್ನುತ್ತಾರೆ. ಇದರಲ್ಲಿನ ಸ್ವಲ್ಪ ಭಾಗವನ್ನು ನಾವು ಎರಡನೆಯ ಜನ್ಮದಲ್ಲಿ ಭೋಗಿಸಿದೆವು, ಅದು ಪ್ರಾರಬ್ಧವಾಯಿತು. ಸಂಚಿತದಲ್ಲಿನ ಯಾವ ಭಾಗವನ್ನು ನಾವು ಈ ಜನ್ಮದಲ್ಲಿ ಭೋಗಿಸುತ್ತೇವೆಯೋ ಅದು ಪ್ರಾರಬ್ಧ! ಹೀಗೆ ಮಾಡುತ್ತಾ ಮಾಡುತ್ತಾ ಇದುವರೆಗೆ ನಮ್ಮ ಲಕ್ಷಗಟ್ಟಲೆ ಜನ್ಮಗಳಾಗಿ ಹೋಗಿವೆ; ನಮ್ಮ ಸಂಚಿತದಲ್ಲಿ ಬಹಳಷ್ಟು ಸಂಗ್ರಹವಿರುವುದರಿಂದ ಅದರಲ್ಲಿನ ಸ್ವಲ್ಪ ಭಾಗವನ್ನು ಭೋಗಿಸಿ ಮುಗಿಸುವ ಸಲುವಾಗಿ ನಾವು ಪ್ರತಿಯೊಂದು ಜನ್ಮದಲ್ಲಿಯೂ ಸ್ವಲ್ಪ ಸ್ವಲ್ಪ ಭಾಗವನ್ನು ಪ್ರಾರಬ್ಧದ ರೂಪದಲ್ಲಿ ತೆಗೆದುಕೊಂಡು ಜನ್ಮಕ್ಕೆ ಬರುತ್ತಿರುತ್ತೇವೆ.

ಕಲಿಯುಗದಲ್ಲಿ ಕ್ರಿಯಮಾಣವು ಕೇವಲ ಶೇ. 35 ರಷ್ಟು ಇದೆ ಮತ್ತು 65% ಸಂಗತಿಗಳು ಪ್ರಾರಬ್ಧದಿಂದ ನಡೆಯುತ್ತವೆ. ಕಾಲವು ಹೀಗೆಯೇ ಮುಂದುವರೆಯುತ್ತಾ ಹೋದಂತೆ ಕಲಿಯುಗದ ಅಂತ್ಯ ಯಾವಾಗ ಬರುವುದೋ ಆವಾಗ ನಮ್ಮ ಜೀವನದಲ್ಲಿನ 100 % ಸಂಗತಿಗಳು ಪ್ರಾರಬ್ಧಕ್ಕನುಸಾರ ಘಟಿಸುವವು.

ಮಹರ್ಷಿ ವ್ಯಾಸರು ‘ಪೂರ್ವಜನ್ಮಕೃತಂ ಕರ್ಮ ತದೈವಮಿತಿ ಕಥ್ಯತೇ‘ ಅಂದರೆ ಪೂರ್ವಜನ್ಮದ ಕರ್ಮಗಳ ಫಲಗಳನ್ನು ಈ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ. ಅವುಗಳ ಕಾರ್ಯಕಾರಣ ಭಾವವು ತಿಳಿಯದ ಕಾರಣ ಅದನ್ನು ‘ದೈವ, ಹಣೆಬರಹ, ಪ್ರಾರಬ್ಧ‘ ಎನ್ನುತ್ತಾರೆ.

ಜನ್ಮಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಜನ್ಮಜಾತ ವೃತ್ತಿ ಹಾಗೂ ಆ ವ್ಯಕ್ತಿಯು ಎಷ್ಟು ಕಾಲ ಬದುಕಲಿದ್ದಾನೆ ಎಂಬುದು ಪ್ರಾರಬ್ಧಕರ್ಮಕ್ಕನುಸಾರ ನಿರ್ಧರಿಸಲ್ಪಡುತ್ತದೆ. ಕರ್ಮಭೋಗಗಳು ಭೋಗಿಸಿ ಮುಗಿದ ನಂತರ ಮೃತ್ಯು ಬರುತ್ತದೆ. ಕೇವಲ ಜನನ ಮತ್ತು ಮರಣ ಮಾತ್ರವಲ್ಲ ಜೀವನದಲ್ಲಿ ಘಟಿಸುವ ಬಹಳಷ್ಟು ಸಂಗತಿಗಳು ದೈವಕ್ಕೆ ಅಧೀನವಾಗಿರುತ್ತವೆ.

ಈ ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ – ಅನ್ನ, ಧನ, ವಿವಾಹ, ಜನ್ಮ ಮತ್ತು ಮರಣ ಈ ಐದು ಸಂಗತಿಗಳು ಪೂರ್ವಕರ್ಮದ ಸ್ವಾಧೀನದಲ್ಲಿವೆ. ಆದ್ದರಿಂದ ‘ನಾನು ಮಾಡಿದೆ‘ ಎಂಬ ಅಹಂಕಾರವು ಸುಳ್ಳು. ವ್ಯಕ್ತಿಯ ಜನ್ಮಸಮಯ, ಗುಣ, ಶರೀರದ ಸ್ವರೂಪ, ಕಾಯಿಲೆ, ವಿವಿಧ ಸುಖ-ದುಃಖಗಳು, ಇರುವ ಜಾಗ (ದೇಶ ಮತ್ತು ಸ್ಥಳ), ಕುಟುಂಬ ಇವೆಲ್ಲವೂ ಪ್ರಾರಬ್ಧದಿಂದ ನಿರ್ಧರಿಸಲ್ಪಡುತ್ತವೆ.

ಪ್ರಾರಬ್ಧದ ಮೂರು ವಿಧಗಳು
ಮಂದ ಪ್ರಾರಬ್ಧ, ಮಧ್ಯಮ ಪ್ರಾರಬ್ಧ ಮತ್ತು ತೀವ್ರ ಪ್ರಾರಬ್ಧ

1. ಮಂದ ಪ್ರಾರಬ್ಧವನ್ನು ಸಾಧನೆಯಿಂದ ತಪ್ಪಿಸಬಹುದು. ಅದಕ್ಕಾಗಿ ಯಾವ ಸಾಧನೆಯನ್ನು ಮಾಡಬೇಕೆಂದರೆ ಕುಲದೇವತೆಯ ಉಪಾಸನೆ. ಕುಲದೇವತೆಯ ಉಪಾಸನೆ ಮತ್ತು ನಾಮಸ್ಮರಣೆಯ ಮಹತ್ವ ಮತ್ತು ಅದನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ಪ್ರಾರಂಭದ ಲೇಖನಗಳಲ್ಲಿ ನೋಡಿದ್ದೇವೆ. ಪ್ರಾರಬ್ಧಭೋಗಗಳನ್ನು ಸಹಿಸುವ ಕ್ಷಮತೆಯನ್ನು ಹೆಚ್ಚಿಸುವುದು ಅಥವಾ ಮಂದ ಪ್ರಾರಬ್ಧವಿದ್ದರೆ ಅದನ್ನು ನಾಶಗೊಳಿಸುವುದು ಎಲ್ಲವೂ ಕುಲದೇವತೆಯ ಉಪಾಸನೆಯಿಂದ ಸಾಧ್ಯವಾಗುತ್ತದೆ. ಜೀವನದಲ್ಲಿನ 65% ಸಮಸ್ಯೆಗಳು ಪ್ರಾರಬ್ಧದಿಂದ ಉಂಟಾಗುವುದರಿಂದ ಪ್ರತಿಯಬ್ಬರೂ ಕುಲದೇವತಗೆ ಸಂಬಂಧಪಟ್ಟಂತೆ ಏನನ್ನಾದರೂ ಮಾಡುವುದು ಆವಶ್ಯಕವಿರುತ್ತದೆ. ಆದ್ದರಿಂದ ದೇವರು ಯಾವ ದೇವತೆಯ ಹೆಸರು ನಮ್ಮ ಪ್ರಾರಬ್ಧವನ್ನು ಹೋಗಲಾಡಿಸಲು ಉಪಯುಕ್ತವಾಗಿರುವುದೋ ಅಂತಹ ಕುಲದಲ್ಲಿಯೇ ನಮ್ಮನ್ನು ಜನ್ಮಕ್ಕೆ ಹಾಕುತ್ತಾರೆ.

2: ಮಧ್ಯಮ ಪ್ರಾರಬ್ಧವನ್ನು ಹೋಗಲಾಡಿಸಲು ಸಂತರ ಅಥವಾ ಗುರುಗಳ ಕೃಪೆಯಿರಬೇಕಾಗುತ್ತದೆ. ಅವರ ಸಂಕಲ್ಪದಿಂದಲೇ ಅದು ಹೋಗಲು ಸಾಧ್ಯ. ಸಂತರನ್ನು ಪ್ರಸನ್ನಗೊಳಿಸುವುದಕ್ಕಾಗಿ ಏನು ಮಾಡಬೇಕೆಂದರೆ ಅವರ ಕಾರ್ಯದಲ್ಲಿ ಸಹಭಾಗಿಗಳಾಗಬೇಕು. ಸಂತರ, ಪರಮೇಶ್ವರನ, ಅವತಾರಗಳದ್ದು ಕಾರ್ಯ ಒಂದೇ, ಅದೇನೆಂದರೆ ಜನರನ್ನು ಸಾಧನೆಯೆಡೆ ಹೊರಳಿಸುವುದು ಮತ್ತು ಅವರ ಪ್ರಗತಿಯಾಗುವಂತೆ ಮಾಡುವುದು. ಈ ಕಾರ್ಯದಲ್ಲಿ ನಾವು ಸಹಭಾಗಿಗಳಾದರೆ ನಮ್ಮ ಮೇಲೆಯೂ ಸಂತರ, ಗುರುಗಳ ಕೃಪೆಯಾಗುತ್ತದೆ. ಒಂದು ಸಮಾರಂಭದ ಜವಾಬ್ದಾರಿಯು ನಮ್ಮ ಕೈಯಲ್ಲಿದೆ ಎಂದು ಭಾವಿಸೋಣ. ಆ ಕೆಲಸದಲ್ಲಿ ನಮಗೆ ಯಾರಾದರೂ ಸಹಾಯ ಮಾಡಲು ಬಂದರೆ ನಮಗೆ ‘ಇವರು ನಮ್ಮವರು’ ಎಂದೆನಿಸುತ್ತದೆ ಅಲ್ಲವೇ. ಅದೇ ರೀತಿ ಸಮಾಜದಲ್ಲಿ ಸತ್ ನ ಪ್ರಚಾರ ಮಾಡುವುದು, ಜನರಲ್ಲಿ ಅಧ್ಯಾತ್ಮದ ಬಗ್ಗೆ ಆಸಕ್ತಿ ಮೂಡಿಸುವುದು ಈ ಕಾರ್ಯಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡರೆ ಸಂತರು ‘ಇವನು ನನ್ನವನು’ ಎಂದು ಹೇಳಿಯೇ ಹೇಳುವರು. ಆಗ ಮಧ್ಯಮ ಪ್ರಾರಬ್ಧ ಮುಗಿದೇ ತೀರುವುದು.

3: ತೀವ್ರ ಪ್ರಾರಬ್ಧವಿದ್ದರೆ ಸಂತರು ಮತ್ತು ಗುರುಗಳು ಅದಕ್ಕೆ ಅಡ್ಡ ಬರುವುದಿಲ್ಲ. ತೀವ್ರ ಪ್ರಾರಬ್ಧಭೋಗಗಳನ್ನು ಪರಮೇಶ್ವರನು ಭೋಗಿಸುವುದಕ್ಕೆಂದೇ ಕೊಟ್ಟಿರುತ್ತಾನೆ. ಪರಮೇಶ್ವರ ಮತ್ತು ಸಂತರು ಅಥವಾ ಗುರುಗಳು ಬೇರೆಯಾಗಿಲ್ಲದಿರುವ ಕಾರಣ ಅವರು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅದನ್ನು ಭೋಗಿಸುವ ಕ್ಷಮತೆಯನ್ನು ಮಾತ್ರ ಗುರುಗಳು ಕೊನೆಯ ತನಕ ಕೊಡುತ್ತಲೇ ಇರುತ್ತಾರೆ.

ಪ್ರಾರಬ್ಧ ಎಂದರೆ ಒಂದು ವಿಧದಲ್ಲಿ ಈಶ್ವರನ ಬ್ಯಾಂಕಿನಲ್ಲಿರುವ ನಮ್ಮ ಖಾತೆಯಲ್ಲಿನ ಹಲವಾರು ಜನ್ಮಗಳ ಆಯ-ವ್ಯಯಗಳ (ಪಾಪ-ಪುಣ್ಯಗಳ) ಲೆಕ್ಕ. ಖಾತೆಯಲ್ಲಿ ಯಾವುದು ಜಮೆಯಾಗಿರುವುದೋ ಅದೇ ನಮಗೆ ಸಿಗುವುದು. ಯಾವುದು ನಮ್ಮದಲ್ಲವೋ ಅದನ್ನು ಈಶ್ವರನು ಎಂದಿಗೂ ನಮಗೆ ಕೊಡುವುದಿಲ್ಲ. ನಾವು ಈ ವಿಚಾರವನ್ನು ಸತತವಾಗಿ ಜಾಗೃತವಾಗಿಟ್ಟುಕೊಂಡರೆ ನಮಗೆ ಪ್ರಾರಬ್ಧಭೋಗಗಳನ್ನು ಭೋಗಿಸುವಾಗ ದುಃಖವಾಗಲಾರದು. ಮನುಷ್ಯನಿಗೆ ದುಃಖವನ್ನು ಸಹಿಸಲು ತಾಳ್ಮೆ ಮತ್ತು ಧೈರ್ಯ ಕೊಡುವುದಕ್ಕೂ ತತ್ವದಿಂದ ಉಪಯೋಗವಾಗುತ್ತದೆ.

 ಪ್ರಾರಬ್ಧಭೋಗಕ್ಕಿಂತ ಕ್ರಿಯಾಮಾಣ ಕರ್ಮ ಅಂದರೆ  ಸಾಧನೆಯು ಶ್ರೇಷ್ಠವಾಗಿದೆ

ಹೆಚ್ಚಿನ ಘಟನೆಗಳು ಪ್ರಾರಬ್ಧದಿಂದ ಘಟಿಸಲಿವೆ ಎಂದಾದರೆ ಸಾಧನೆಯಿಂದ ಏನು ಲಾಭ ಎಂಬ ಪ್ರಶ್ನೆಯು ಉದ್ಭವಿಸಬಹುದು. ಇದಕ್ಕೆ ಉತ್ತರ ಹೀಗಿದೆ – ಸಾಧನೆಯಿಂದ ಪ್ರಾರಬ್ಧವು ಸಹಿಸಲು ಸುಲಭವಾಗುತ್ತದೆ. ದುಃಖವು ದುಃಖದಂತೆ ಕಾಣುವುದಿಲ್ಲ. ಜೀವನದಲ್ಲಿ ಪ್ರಾರಬ್ಧದ ಪ್ರಭಾವ ಇದ್ದರೂ ಕ್ರಿಯಮಾಣ ಕರ್ಮವೇ ಪ್ರಾರಬ್ಧಕ್ಕಿಂತ ಶ್ರೇಷ್ಠವಾಗಿರುತ್ತದೆ. 1 % ಕ್ರಿಯಮಾಣ ಇದ್ದರೂ ಸಾಧನೆಯಿಂದ 99 % ಪ್ರಾರಬ್ಧದ ಮೇಲೆ ಜಯ ಸಾಧಿಸಬಹುದು. ಕ್ರಿಯಮಾಣ ಎಂದರೇನು ? ಕ್ರಿಯಮಾಣ ಎಂದರೆ ಸಾಧನೆ ಮಾಡುವುದು. ಪ್ರಾರಬ್ಧದಲ್ಲಿ ಏನಿದೆ ಎಂಬುದು ತಿಳಿದಿಲ್ಲದಿದ್ದರೂ ಸಾಧನೆ ಮಾಡುತ್ತಾ ಹೋದರೆ ಪ್ರಾರಬ್ಧ ಮತ್ತು ಸಂಚಿತಗಳು ನಿಧಾನವಾಗಿ ಕಡಿಮೆಯಾಗತೊಡಗುತ್ತವೆ. ಇದೇ ಸಾಧನೆಯ ಮಹತ್ವ. ಆದ್ದರಿಂದ ನಾವು ಕೂಡ ಮನಃಪೂರ್ವಕವಾಗಿ ಮತ್ತು ನಮ್ಮನ್ನು ನಾವು ಸಮರ್ಪಿಸಿಕೊಂಡು ಸಾಧನೆಯನ್ನು ಮಾಡಿ ಇದೇ ಜನ್ಮದಲ್ಲಿ ಮನುಷ್ಯಜನ್ಮದ ಉದ್ಧಾರ ಮಾಡಿಕೊಳ್ಳೋಣ.

Leave a Comment