ಆನ್‌ಲೈನ್ ಸತ್ಸಂಗ (23)

ಕರ್ಮಕಾಂಡ, ಉಪಾಸನಾಕಾಂಡ ಮತ್ತು ಜ್ಞಾನಕಾಂಡದ ಮಹತ್ವ

ಕರ್ಮಕಾಂಡ, ಉಪಾಸನಾಕಾಂಡ ಮತ್ತು ಜ್ಞಾನಕಾಂಡದ ಉಪಾಸನಾ ಪದ್ಧತಿಗಳ ತುಲನಾತ್ಮಕ ಮಹತ್ವ ಮತ್ತು ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯೆಂದು ಯಾವ್ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬ ಮಹತ್ವಪೂರ್ಣ ವಿಷಯವನ್ನು ಅರಿತುಕೊಳ್ಳೋಣ…

ಸತ್ಸಂಗದ ಮಹತ್ವ

ಮೊದಲಿಗೆ ನಾವು ಸಾಧನೆಯನ್ನು ಮಾಡುವುದರ ಮತ್ತು ಸತ್ಸಂಗದ ಮಹತ್ವವನ್ನು ತಿಳಿದುಕೊಳ್ಳೋಣ. ನಾವು ಸತ್ಸಂಗಕ್ಕೆ ಏಕೆ ಬರುತ್ತೇವೆ? ‘ನಮಗೆ ಒಳ್ಳೆಯದೆನಿಸುತ್ತದೆ, ಮನಸ್ಸು ಶಾಂತವಾಗುತ್ತದೆ, ಹೊಸ ವಿಷಯ ಕಲಿಯಲು ಸಿಗುತ್ತದೆ’ ಎಂದು ನಾವು ಸತ್ಸಂಗಕ್ಕೆ ಬರುತ್ತೇವಲ್ಲವೇ? ಸತ್ಸಂಗದಲ್ಲಿ ನಮಗೆ ಆನಂದ ಸಿಗುತ್ತದೆ. ಇದರ ಕಾರಣವೇನೆಂದರೆ ಇಲ್ಲಿ ಈಶ್ವರನ ಬಗ್ಗೆ ಮಾತನಾಡುತ್ತೇವೆ. ಈಶ್ವರನು ಸತ್ ಚಿತ್ ಆನಂದ ಸ್ವರೂಪನಾಗಿದ್ದಾನೆ. ಕೇವಲ ಈಶ್ವರನ ಬಗ್ಗೆ ಮಾಡುವುದರಿಂದ, ಆ ವಿಷಯದ ಶ್ರವಣ ಮಾಡುವುದರಿಂದ (ಕೇಳುವುದರಿಂದ) ಆನಂದ ಸಿಗುತ್ತದೆ, ಹಾಗಾದರೆ ಪ್ರತ್ಯಕ್ಷ ಈಶ್ವರನೊಂದಿಗೆ ಏಕರೂಪವಾಗಲು ಈಶ್ವರಪ್ರಾಪ್ತಿಯ ದಿಶೆಯಲ್ಲಿ ಒಂದು ಹೆಜ್ಜೆಯನ್ನು ಹಾಕಿದರೆ ನಮಗೆ ಎಷ್ಟು ಆನಂದ ಸಿಗಬಹುದು?

ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಬೇರೆಬೇರೆ ಮಾರ್ಗಗಳಿವೆ. ಯಾವ ಯೋಗಮಾರ್ಗಕ್ಕನುಸಾರ ಸಾಧನೆಯನ್ನು ಮಾಡಿದರೂ ಈಶ್ವರಪ್ರಾಪ್ತಿಯಾಗುತ್ತದೆ. ಆದರೆ ನಾವು ಈಶ್ವರಪ್ರಾಪ್ತಿಯನ್ನು ಶೀಘ್ರವಾಗಿ ಮಾಡಿಕೊಡುವ ಮಾರ್ಗವನ್ನು ಆರಿಸಬೇಕಾಗಿದೆ. ವ್ಯವಹಾರದಲ್ಲಿಯೂ ನಾವು ಹೀಗೆಯೇ ಮಾಡುತ್ತೇವಲ್ಲವೇ? ಹೇಗೆಂದರೆ ಇಂತಿಂತಹ ಒಂದು ಸ್ಥಳಕ್ಕೆ ಹೋಗಲು, ಎತ್ತಿನಗಾಡಿ, ದ್ವಿಚಕ್ರ ವಾಹನ, ರೈಲು, ವಿಮಾನ ಹೀಗೆ ಪರ್ಯಾಯಗಳು ಲಭ್ಯವಿರುವಾಗ ಮತ್ತು ಅದನ್ನು ಉಪಯೋಗಿಸಲು ನಮಗೆ ಸಾಧ್ಯವಿದೆ ಎಂದಾದರೆ ನಾವು ಮೊದಲಿಗೆ ಯಾವ ಪರ್ಯಾಯವನ್ನು ಆರಿಸುತ್ತೇವೆ? ಖಂಡಿತವಾಗಿಯೂ ವಿಮಾನವನ್ನೇ ಆರಿಸುತ್ತೇವಲ್ಲವೇ? ಅಧ್ಯಾತ್ಮದಲ್ಲಿಯೂ ಅದೇ ರೀತಿಯಿದೆ. ಸಾಧನೆಯ ವಿಷಯದಲ್ಲಿ ನೋಡುವುದಾದರೆ ಶೀಘ್ರವಾಗಿ ಈಶ್ವರಪ್ರಾಪ್ತಿಯನ್ನು ಮಾಡಿಕೊಡುವ ಮಾರ್ಗವೆಂದರೆ ಗುರುಕೃಪಾಯೋಗ! ಗುರುಕೃಪೆಯಿಲ್ಲದೇ ಅಧ್ಯಾತ್ಮದಲ್ಲಿ ನಿಜವಾದ ಪ್ರಗತಿಯಾಗುವುದಿಲ್ಲ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಹೀಗೆ ಮೋಕ್ಷಪ್ರಾಪ್ತಿಗಾಗಿ ಬೇರೆ ಬೇರೆ ಮಾರ್ಗಗಳಿವೆ. ಆದರೆ ಗುರುಕೃಪಾಯೋಗದಲ್ಲಿ ಈ ಮೂರು ಯೋಗಮಾರ್ಗಗಳ ಸಂಗಮವಿದೆ. ಇದು ಯಾವುದೇ ಸಾಂಪ್ರದಾಯಿಕ ಸಾಧನೆಯಲ್ಲ, ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಗೊಳಿಸುವಂತಹ ದಾರಿಯಾಗಿದೆ. ಹಾಗಾಗಿ ನಾವು ಈ ಲೇಖನಗಳ ಮೂಲಕ ಗುರುಕೃಪಾಯೋಗಾನುಸಾರ ಸಾಧನೆಯನ್ನು ಕಲಿಯುತ್ತಿದ್ದೇವೆ. ಅಧ್ಯಾತ್ಮವು ಕೃತಿಯ ಮತ್ತು ಅನುಭೂತಿಯ ಶಾಸ್ತ್ರವಾಗಿರುವುದರಿಂದ ಪ್ರತ್ಯಕ್ಷ ಕೃತಿಯನ್ನು ಮಾಡುವವರಿಗೆ, ಅಂದರೆ ‘ಅದ್ಯಾತ್ಮವನ್ನು ಜೀವಿಸಲು’ ಮಹತ್ವವನ್ನು ನೀಡಲಾಗಿದೆ. ಸಾರಾಸಗಟಾಗಿ ಉಪಾಸನೆಯನ್ನು ಮಾಡುವ ಬದಲು ನಾವು ಕಾಲಾನುಸಾರ ಸಾಧನೆಯನ್ನು ಮಾಡಿದರೆ ನಮಗೆ ಅದರಿಂದ ಹೆಚ್ಚು ಫಲವು ಸಿಗುತ್ತದೆ.

ಕಾಲಾನುಸಾರ ಸಾಧನೆ

ಕಾಲಾನುಸಾರ ಸಾಧನೆ ಎಂದರೇನು? ಆಯಾ ಕಾಲದಲ್ಲಿ ಮಾಡಲಿಕ್ಕಾಗಿ ಯೋಗ್ಯವಾಗಿರುವಂತಹ ಸಾಧನೆ! ಕಾಲವನ್ನು ನಾಲ್ಕು ಯುಗಗಳಲ್ಲಿ ವಿಂಗಡಿಸಲಾಗಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ.

ಸತ್ಯಯುಗದಲ್ಲಿ ಸೋಹಂ ಭಾವವಿತ್ತು ಮತ್ತು ಜ್ಞಾನಯೋಗವಿತ್ತು. ಆ ಕಾಲದ ಜನರಲ್ಲಿ ವೇದಗಳ ಭಾವಾರ್ಥವನ್ನು ಅರಿತುಕೊಳ್ಳುವ ಕ್ಷಮತೆಯಿತ್ತು.
ತ್ರೇತಾಯುಗದಲ್ಲಿ ಸಮಾಧಿಯಂತಹ ಕಠಿಣ ತಪಶ್ಚರ್ಯೆಯಿತ್ತು. ಇದೆಲ್ಲವನ್ನೂ ಮಾಡುವಂತಹ ಮನಸ್ಸಿನ ಹಾಗೂ ಶರೀರಿಕ ಕ್ಷಮತೆಯು ಕಡಿಮೆಯಾದ ನಂತರ
ದ್ವಾಪರಯುಗದಲ್ಲಿ ಕರ್ಮಕಾಂಡವು ಸಾಧನೆಯಾಯಿತು. ಅದರಲ್ಲಿ ಯಜ್ಞಯಾಗಗಳು ಮುಖ್ಯ ಭಾಗವಾಗಿದ್ದವು. ಮುಂದೆ
ಕಲಿಯುಗದಲ್ಲಿ ಇದನ್ನು ಮಾಡಲೂ ಸಹ ಕಠಿಣವಾಗತೊಡಗಿತು. ಅದಕ್ಕಾಗಿ ನಾಮಸಾಧನೆಯನ್ನು ಹೇಳಲಾಯಿತು.

ಅನೇಕ ಸಂತರು ಸಹ ನಾಮಸ್ಮರಣೆಯ ಸಾಧನೆಯನ್ನು ಹೇಳಿದ್ದಾರೆ. ನಾವು ನಮ್ಮ ನಾಮಸ್ಮರಣೆಯು ನಿರಂತರವಾಗಿ ಆಗಲು ಏನು ಮಾಡಬಹುದು, ಹೇಗೆ ಏಕಾಗ್ರತೆಯನ್ನು ತಂದುಕೊಳ್ಳುವುದು ಇದರ ಕಡೆಗೆ ಹೆಚ್ಚು ಗಮನವನ್ನು ನೀಡಬೇಕಾಗಿದೆ. ಇತರ ಸಾಧನೆಯ ಮಾರ್ಗಗಳ ತುಲನೆಯಲ್ಲಿ ನಾಮಸ್ಮರಣೆಯು ಸುಲಭವಾದುದು. ನಾಮವನ್ನು ಜಪಿಸಲು ಶೌಚ, ಅಶೌಚ, ಮಡಿ-ಮೈಲಿಗೆ, ಮಾಸಿಕ ಧರ್ಮ, ಕಾಲ ಯಾವುದರ ಬಂಧನವೂ ಇಲ್ಲ.

ಕರ್ಮಕಾಂಡಕ್ಕಿರುವ ಕಟ್ಟುಪಾಡುಗಳು

ಇದಕ್ಕೆ ವಿರುದ್ಧವಾಗಿ ಕರ್ಮಕಾಂಡಕ್ಕೆ ಅನೇಕ ಬಂಧನಗಳಿವೆ. ಯಜ್ಞಯಾಗ ಅಥವಾ ಇಂದಿನ ಕಾಲದಲ್ಲಿ ನೋಡುವುದಾದರೆ ಪೂಜೆ-ಅರ್ಚನೆ, ವ್ರತ-ವೈಕಲ್ಯಗಳಂತಹ ಧಾರ್ಮಿಕ ವಿಧಿಗಳು ಕರ್ಮಕಾಂಡದಲ್ಲಿ ಬರುತ್ತವೆ. ಇದನ್ನು ಮಾಡುತ್ತಿರುವಾಗ ಆಯಾ ಬಂಧನಗಳನ್ನು ನಾವು ಪಾಲಿಸಬೇಕಾಗುತ್ತದೆ. ಅಲ್ಲದೇ ಆಯಾ ಕೃತಿಗಳನ್ನು ಮಾಡುವಾಗ ನಮ್ಮಲ್ಲಿ ಭಾವವಿಲ್ಲದಿದ್ದರೆ ನಮಗೆ ಆಧ್ಯಾತ್ಮಿಕ ಸ್ತರದಲ್ಲಿ ಅಪೇಕ್ಷಿತ ಲಾಭವಾಗುವುದಿಲ್ಲ. ಕೆಲವೊಮ್ಮೆ ಕರ್ಮಗಳನ್ನು ಮಾಡುವಾಗ ಏನಾದರೊಂದು ಕೊರತೆಯಾದಲ್ಲಿ ಅದರ ದೋಷ ತಗಲುವ ಸಾಧ್ಯತೆ ಸಹ ಇರುತ್ತದೆ

೧. ಪೂಜೆ : ನಾವು ಪ್ರತಿದಿನ ಮನೆಯಲ್ಲಿ ಪೂಜೆಯನ್ನು ಮಾಡುತ್ತೇವೆ. ಆ ಪೂಜೆಯನ್ನು ಮಾಡುತ್ತಿರುವಾಗ ಒಂದು ವೇಳೆ ನಮ್ಮ ಮನಸ್ಸು ಇತರ ವಿಚಾರಗಳಲ್ಲಿ ಮುಳುಗಿದ್ದರೆ ಅಥವಾ ಪೂಜೆಯ ಪೂರ್ವಸಿದ್ಧತೆಯು ಸರಿಯಾಗಿ ಮಾಡದೇ ಇದ್ದ ಕಾರಣ ಪೂಜೆಯನ್ನು ಮಾಡುವಾಗ ಬೇಕಾದ ಸಾಮಾಗ್ರಿಗಳನ್ನು ತರಲು ಮಧ್ಯಮಧ್ಯದಲ್ಲಿ ಏಳಬೇಕಾಗುತ್ತಿದ್ದಲ್ಲಿ ಆ ಪೂಜೆಯು ಒಂದು ಕಾಟಾಚಾರದಂತೆ ಆಗುತ್ತದೆ. ಪೂಜೆಯನ್ನು ಮಾಡುವಾಗ ಇತರರೊಂದಿಗೆ ಮಾತನಾಡುವುದು, ಸಂಚಾರಿವಾಣಿಯಲ್ಲಿ ಮಾತನಾಡುವುದು ಇತ್ಯಾದಿ ಆಗುತ್ತಿದ್ದಲ್ಲಿ ಆ ಪೂಜೆಯಲ್ಲಿ ಭಾವವಿರುವುದಿಲ್ಲ. ಭಾವವಿಲ್ಲದಿದ್ದರೆ ಅಧ್ಯಾತ್ಮದಲ್ಲಿ ಪ್ರಗತಿಯಾಗಲು ಬಹಳ ಸಮಯ ತಗಲುತ್ತದೆ.

೨. ಮಂತ್ರೋಚ್ಚಾರ : ಇದು ಮಂತ್ರೋಚ್ಚಾರದ ಸಂದರ್ಭದಲ್ಲಿಯೂ ಅನ್ವಯಿಸುತ್ತದೆ. ಮಂತ್ರೋಚ್ಚಾರವು ಯೋಗ್ಯವಾದರೆ ಮಾತ್ರ ಅದು ಬಹಳ ಪ್ರಭಾವಶಾಲಿಯಾಗಿರುತ್ತದೆ. ಆದರೆ ಮಂತ್ರೊಚ್ಚಾರದಲ್ಲಿ ತಪ್ಪುಗಳಾದಲ್ಲಿ ಅದರಿಂದ ಬೇರೆಯೇ ಪರಿಣಾಮವಾಗುವ ಸಾಧ್ಯತೆಯಿದೆ.

ಇದಕ್ಕೆ ವಿರುದ್ಧವಾಗಿ ನಾವು ನಾಮವನ್ನು ಪ್ರೇಮದಿಂದ ಜಪಿಸಿದರೆ, ನೀರಸವಾಗಿ ಜಪಿಸಿದರೆ ಅಥವಾ ಯಾಂತ್ರಿಕವಾಗಿ ಜಪಿಸಿದರೂ ಸಹ ಅದರಿಂದ ಸಕಾರಾತ್ಮಕ ಪರಿಣಾಮವೇ ಕಂಡುಬರುತ್ತದೆ. ಅದು ಫಲಪ್ರದವಾಗುತ್ತದೆ. ನಾವು ಜಪಿಸಿದ ಒಂದೇ ಒಂದು ನಾಮವು ವ್ಯರ್ಥವಾಗುವುದಿಲ್ಲ. ತಮಗೆಲ್ಲ ವಾಲ್ಯಾ ಬೇಡನ ಕಥೆ ಗೊತ್ತಿರಬಹುದು. ಬೇಡನು ರಾಮ-ರಾಮ ದ ಬದಲು ಮರಾ ಮರಾ ಎಂದು ಜಪಿಸಿದನು ಆದರೂ ಅವನ ಎಲ್ಲ ಪಾಪಗಳು ತೊಳೆದುಹೋದವು ಮತ್ತು ವಾಲ್ಯಾನು ವಾಲ್ಮೀಕಿ ಋಷಿಯಾದನು. ಹಾಗಾಗಿ ಕರ್ಮಕಾಂಡಕ್ಕಿಂತ ನಾಮಸ್ಮರಣೆ ಮತ್ತು ದೇವರ ಭಕ್ತಿಯು ಹೆಚ್ಚು ಶ್ರೇಯಸ್ಕರವಾಗಿದೆ.

೩. ಉಪವಾಸ : ಉಪವಾಸದ ಸಂದರ್ಭದಲ್ಲಿಯೂ ಕೇವಲ ಒಂದು ಔಪಚಾರಿಕತೆ ಎಂದು ನಾವು ಮಾಡುತ್ತಿದ್ದಲ್ಲಿ ಅದರ ನಿಜವಾದ ಆಧ್ಯಾತ್ಮಿಕ ಉದ್ದೇಶದತ್ತ ನಮ್ಮ ಗಮನವೇ ಇರುವುದಿಲ್ಲ. ಉಪವಾಸದ ಅರ್ಥ ಏನೆಂದರೆ ಭಗವಂತನ ಸಮೀಪಕ್ಕೆ ಹೋಗುವುದು. ಸದ್ಯದ ಸ್ಥಿತಿಯಲ್ಲಿ ‘ಉಪವಾಸ’ ಎಂದರೆ ಆಹಾರದಲ್ಲಿ ಬದಲಾವಣೆ ಇಷ್ಟೇ ಕಾಣಿಸುತ್ತದೆ. ಉಪವಾಸ ಎಂದರೆ ದೇವರ ಉಪಾಸನೆಯನ್ನು ಹೆಚ್ಚು ಹೇಗೆ ಮಾಡುವುದು ಇದರ ಬದಲು ಯಾವ್ಯಾವ ಪದಾರ್ಥಗಳನ್ನು ಫಲಾಹಾರಕ್ಕಾಗಿ ತಯಾರಿಸುವುದು ಇದರದ್ದೇ ಆಯೋಜನೆ ಜಾಸ್ತಿಯಿರುತ್ತದೆ.

ಪ್ರತ್ಯಕ್ಷದಲ್ಲಿ ಸಂತರೋರ್ವರು ಸಹ ‘ಅನ್ನದ ಪ್ರತಿಯೊಂದು ತುತ್ತಿನ ಜೊತೆಗೆ ನಾಮ ಜಪಿಸಿದರೆ ಅದು ಉಪವಾಸಕ್ಕೆ ಸಮಾನವಾಗಿದೆ’ (ನಾಮ ಘೆತಾ ಗ್ರಾಸೋ ಗ್ರಾಸಿ, ತೊ ನರ ಜೆವೂನಿ ಉಪವಾಸಿ) ಎಂದು ಹೇಳಿದ್ದಾರೆ. ನಾಮಸ್ಮರಣೆಯ ಬಗ್ಗೆಯೂ ಇದೇ ರೀತಿ ಹೇಳಲಾಗಿದೆ. ‘ಹೋಗುತ್ತಾ ಬರುತ್ತಾ ನಾವು ನಾಮಜಪಿಸುತ್ತಿದ್ದಲ್ಲಿ ನಮಗೆ ನಮ್ಮ ಕೈಯಿಂದ ಯಜ್ಞವಾದಷ್ಟು ಪುಣ್ಯವು ಸಿಗುತ್ತದೆ’ (‘ನಾಮ ಘೆತಾ ವಾಟ ಚಾಲಿ, ಯಜ್ಞ ತೊ ಪಾವಲೋ ಪಾವಲಿ’) ಎಂದು. ಇದರಿಂದ ಕರ್ಮಕಾಂಡಕ್ಕಿಂತ ಉಪಾಸನಾಕಾಂಡವೇ ಶ್ರೇಷ್ಠವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕರ್ಮಕಾಂಡಾಂತರ್ಗತ ಸಾಧನೆಯನ್ನು ಮಾಡುವಾಗ ಕಟ್ಟುನಿಟ್ಟಾಗಿ ಎಲ್ಲ ನಿಯಮಗಳನ್ನು ಪಾಲಿಸುವುದು ಮತ್ತು ಸಂಸಾರದಲ್ಲಿದ್ದು ಸಾಧನೆಯನ್ನು ಮಾಡಲು ಬಹಳ ಕಷ್ಟವಿದೆ. ಹಾಗಾಗಿ ಭಕ್ತಿಮಾರ್ಗವು ಬಹಳ ಸುಲಭವಾದುದಾಗಿದೆ. ಕರ್ಮಕಾಂಡದ ವಿಧಿಗಳ ಬಗ್ಗೆ ಶಾಸ್ತ್ರೋಕ್ತ ಜ್ಞಾನವಿರುವುದು ಮಹತ್ವದ್ದಾಗಿರುತ್ತದೆ. ಆದರೆ ಅದು ಗೊತ್ತಿರುವಂತಹ ಜನರು ಬಹಳ ಕಡಿಮೆ ಇದ್ದಾರೆ. ನಿರ್ಣಯಸಿಂಧು ಎಂಬ ಗ್ರಂಥದಲ್ಲಿ ಕರ್ಮಕಾಂಡದ ವಿಧಿಗಳ ಸಂದರ್ಭದ ಮಾರ್ಗದರ್ಶನ ಲಭ್ಯ ಮಾಡಿಕೊಡಲಾಗಿದೆ. ಶಾಸ್ತ್ರೋಕ್ತ ವಿಧಿಯ ಅಭಾವದಿಂದ ಅಪೇಕ್ಷಿತ ಫಲಪ್ರಾಪ್ತಿಯಾಗದಿದ್ದಲ್ಲಿ ವಿಧಿಗಾಗಿ ಅಪಾರ ಖರ್ಚು ಮಾಡಿಯೂ ಅನುಭವಿಸಲು ಏನೂ ಸಿಗಲಿಲ್ಲ ಎಂಬಂತಾಗಿ ವಿಧಿ ಮಾಡುವ ವಿಷಯದಲ್ಲಿ ಶ್ರದ್ಧೆಯು ಕಡಿಮೆಯಾಗುತ್ತದೆ. ವಯಸ್ಸಾದಂತೆ ಶರೀರವು ಆಯಾಸಗೊಳ್ಳುವುದರಿಂದ ಮುಂದೆ ಮುಂದೆ ಕರ್ಮಕಾಂಡದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಲು ಆಗದಿದ್ದಲ್ಲಿ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಇದರ ಅರ್ಥ ಕರ್ಮಕಾಂಡವು ತಪ್ಪು (ಅಯೋಗ್ಯವಾಗಿದೆ) ಎಂದು ಯಾರೂ ತಿಳಿದುಕೊಳ್ಳಬಾರದು. ಅದರ ತುಲನೆಯಲ್ಲಿ ಉಪಾಸನಾಕಾಂಡವು ಸುಲಭದ್ದಾಗಿದೆ ಎಂದು ತೆಗೆದುಕೊಳ್ಳಬೇಕು.

ಉಪಾಸನಾಕಾಂಡಕ್ಕನುಸಾರ ಸಾಧನೆ

ಉಪಾಸನೆ ಎಂದರೆ ಆರಾಧನೆ ಅಥವಾ ಭಕ್ತಿಯನ್ನು ಮಾಡುವುದು. ಕರ್ಮಕಾಂಡ ಮತ್ತು ಜ್ಞಾನಕಾಂಡ ಉಪಾಸನೆಯನ್ನು ಮಾಡಲು ಆ ಯೋಗ್ಯತೆ ಮತ್ತು ಅಧಿಕಾರವಿರಬೇಕಾಗುತ್ತದೆ. ಆದರೆ ಉಪಾಸನಾ ಕಾಂಡಕ್ಕನುಸಾರ ಸಾಧನೆಯನ್ನು ಮಾಡುವವರು ಭಕ್ತಿಮಾರ್ಗಿಯರಾಗಿರುವುದರಿಂದ ಅವರಿಗೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಶಿಕ್ಷಣವಿರಲಿ ಇಲ್ಲದಿರಲಿ, ಶಾರೀರಿಕ ಕ್ಷಮತೆ ಇರಲಿ ಇಲ್ಲದಿರಲಿ, ಬುದ್ಧಿಯಿರಲಿ ಇಲ್ಲದಿರಲಿ, ದೇವರ ಭಕ್ತಿಯನ್ನು ಮಾಡಿ ಅಲ್ಪ ಸಮಯದಲ್ಲಿ ಈಶ್ವರನೊಂದಿಗೆ ಏಕರೂಪವಾಗಬಹುದು. ಭಕ್ತಿಯ ಒಂಬತ್ತು ವಿಧಗಳನ್ನು ಹೇಳಲಾಗಿದೆ. ಅದರ ಮೂಲಕ ನಾವು ಭಗವಂತನೊಂದಿಗೆ ಅಖಂಡ ಅನುಸಂಧಾನದಲ್ಲಿರಬಹುದು. ದೇವರ ಬಗ್ಗೆಯ ಭಾವವು ಸಾಧನೆಯ ಆರ್ದ್ರತೆಯನ್ನು ಮೂಡಿಸುತ್ತದೆ. ದೇವರ ಭಕ್ತಿಯನ್ನು ಮಾಡುವುದರಲ್ಲಿ ಆನಂದವಿದೆ. ಹಾಗಾಗಿ ಪ್ರತ್ಯಕ್ಷ ಶ್ರೀಕೃಷ್ಣನು ಸಹ ತನ್ನ ಅತ್ಯಂತ ಜ್ಞಾನಿ ಭಕ್ತನಾದ ಉದ್ಧವನನ್ನು ಗೋಪಿಯರಿಂದ ಭಕ್ತಿಯನ್ನು ಕಲಿಯಬೇಕು ಎಂದು ಗೋಕುಲಕ್ಕೆ ಕಳಿಸಿದ್ದನು. ಭಕ್ತಿಯೋಗವು ಪ್ರತಿಯೊಬ್ಬರಿಗೂ ಸಹಜವಾಗಿ ಆಚರಿಸಲು ಸಾಧ್ಯವಿದೆ. ಭಕ್ತಿಮಾರ್ಗದಲ್ಲಿ ಭಗವಂತನ ಅಖಂಡ ಅನುಸಂಧಾನದಲ್ಲಿದ್ದುಕೊಂಡು ಅಧ್ಯಾತ್ಮವನ್ನು ಪ್ರತ್ಯಕ್ಷವಾಗಿ ಜೀವಿಸಲು ಸಾಧ್ಯವಾಗುತ್ತದೆ. ಹಾಗಾಗಿ ಹೆಚ್ಚಿನ ಸಂತರು ಸಹ ಭಕ್ತಿಮಾರ್ಗವನ್ನು ಪುರಸ್ಕರಿಸಿದ್ದಾರೆ.

ನಾಮಸ್ಮರಣೆ ಮತ್ತು ಭಕ್ತಿಯನ್ನು ಮಾಡುವುದು ಇವು ವ್ಯಷ್ಟಿ ಸಾಧನೆಯ ಅಂದರೆ ವೈಯಕ್ತಿಕ ಉಪಾಸನೆಯ ಭಾಗವಾಗಿದೆ. ವ್ಯಷ್ಟಿ ಸಾಧನೆಯ ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಸಹ ಮಹತ್ವದ್ದಾಗಿದೆ. ತಪಶ್ಚರ್ಯೆ ಅಥವಾ ಉಪಾಸನೆಯಿಂದ ಪುಣ್ಯವು ಸಿಗುತ್ತದೆ. ಆದರೆ ಸ್ವಭಾವದೋಷಗಳು ಉಮ್ಮಳಿಸಿ ಬಂದಲ್ಲಿ ಪುಣ್ಯದ ಸಂಗ್ರಹವು ಕೂಡಲೇ ಖಾಲಿಯಾಗುತ್ತದೆ. ಹಿಂದಿನ ಕಾಲದ ಕೆಲವು ಕಥೆಗಳನ್ನು ತಾವೆಲ್ಲರೂ ಕೇಳಿರಬಹುದು. ಋಷಿಮುನಿಗಳು ಕಾಡಿನಲ್ಲಿ ತಪಸ್ಸಿಗಾಗಿ ಕುಳಿತುಕೊಳ್ಳುತ್ತಿದ್ದರು. ಆದರೆ ಅವರ ಸಾಧನೆಯಲ್ಲಿ ಏನಾದರೂ ವ್ಯತ್ಯಯವಾಯಿತು ಅಥವಾ ಏನಾದರೊಂದು ಕಾರಣದಿಂದ ಅವರು ಕೋಪಗೊಂಡಲ್ಲಿ ಕೋಪದ ಭರದಲ್ಲಿ ಅವರ ಸಾಧನೆಯು ಖರ್ಚಾಗಿ ಅವರ ಪರಮಾರ್ಥದ ಮಾರ್ಗದಲ್ಲಿ ಅವರ ಪತನವಾಗುತ್ತಿತ್ತು. ಹಾಗಾಗಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಬಹಳ ಮಹತ್ವದ್ದಾಗಿದೆ.

ಸಮಷ್ಟಿ ಸಾಧನೆಯ ಮಹತ್ವ

ಇಂದಿನ ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆಯನ್ನು ಮಾತ್ರ ಮಾಡಿದರೆ ಸಾಕಾಗುವುದಿಲ್ಲ. ವ್ಯಷ್ಟಿ ಸಾಧನೆಯ ಜೊತೆಗೆ ಸಮಷ್ಟಿ ಸಾಧನೆಯು ಸಹ ಆವಶ್ಯಕವಾಗಿದೆ. ವ್ಯಷ್ಟಿ ಸಾಧನೆಗೆ ೩೦ % ಮತ್ತು ಸಮಷ್ಟಿ ಸಾಧನೆಗೆ ೭೦% ಮಹತ್ವವಿದೆ. ಸಮಷ್ಟಿ ಸಾಧನೆ ಎಂದರೇನು? ಸಮಾಜದ ಉನ್ನತಿಗಾಗಿ ಮಾಡುವಂತಹ ಪ್ರಯತ್ನಗಳು! ಅಂದರೇನು? ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳುವುದು. ಧರ್ಮಗ್ರಂಥದಲ್ಲಿರುವ ಜ್ಞಾನವನ್ನು ಅಧ್ಯಯನ ಮಾಡುವುದು ಮತ್ತು ಅಧ್ಯಾಪನ ಮಾಡುವುದು (ಇತರರಿಗೆ ಕಲಿಸುವುದು) ಇದು ಜ್ಞಾನಕಾಂಡದಲ್ಲಿ ಇನ್ನೂ ಮುಂದಿನ ಸಾಧನೆಯಾಗಿದೆ. ನಮಗೆ ಸತ್ಸಂಗದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಪರಿಚಿತರಿಗೆ, ಕುಟುಂಬದವರಿಗೆ, ಹೇಳುವುದು ಸಹ ಸಮಷ್ಟಿ ಸಾಧನೆಯೇ ಆಗಿದೆ. ಸಂತರು ಹೇಳಿದ್ದಾರೆ, ನಮಗೆ ಏನೇನು ಗೊತ್ತಿದೆಯೋ ಅದನ್ನು ಇತರರಿಗೂ ಹೇಳಬೇಕು. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿರುವುದೇನೆಂದರೆ ಅಧ್ಯಾತ್ಮದಲ್ಲಿ ‘ಅ’ ತಿಳಿಯಿತು ಎಂದರೆ ಅದನ್ನು ಇತರರಿಗೆ ಕಲಿಸಬೇಕು. ಅಧ್ಯಾತ್ಮ ಪ್ರಸಾರದ ಸೇವೆಯಲ್ಲಿ ನಮ್ಮ ನಮ್ಮ ಪ್ರಕೃತಿಗನುಸಾರ, ನಮ್ಮ ಕೌಶಲ್ಯಕ್ಕನುಸಾರ ಪಾಲ್ಗೊಳ್ಳುವುದು ಇದು ಸಮಷ್ಟಿ ಮತ್ತು ಜ್ಞಾನಮಾರ್ಗ ಇವುಗಳ ಸಾಧನೆಯಾಗಿದೆ. ಸಮಷ್ಟಿ ಸೇವೆಯನ್ನು ಮಾಡುವವರು ದೇವರಿಗೆ, ಗುರುಗಳಿಗೆ ಮತ್ತು ಸಂತರಿಗೆ ತಮ್ಮವರು ಅನಿಸುತ್ತಾರೆ. ಏಕೆಂದರೆ ವ್ಯಷ್ಟಿ ಸಾಧನೆ ಅಂದರೆ ಕೇವಲ ಸ್ವಂತ ವಿಚಾರವಾಗುತ್ತದೆ, ಆದರೆ ಸಮಷ್ಟಿ ಸಾಧನೆ ಎಂದರೆ ಇತರರ ವಿಚಾರವಾಯಿತು. ಹಾಗಾಗಿ ನಾವು ಸಹ ಸಮಷ್ಟಿ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಬೇಕು. ಯಾವ ರೀತಿ ಸಕ್ಕರೆಯು ಎಷ್ಟು ಸಿಹಿಯಿದೆ ಎಂದು ಚಪ್ಪರಿಸಿ ನೋಡಬೇಕಾಗುತ್ತದೆಯೋ ಅದೇ ರೀತಿ ಸೇವೆಯ ಆನಂದವನ್ನು ಪಡೆಯಬೇಕಾದರೆ ಸೇವೆಯನ್ನು ಮಾಡಿಯೇ ಪಡೆಯಬೇಕಾಗುವುದು.

ತಮಗೆ ತಮ್ಮ ಸಮಯಕ್ಕನುಸಾರ, ಕೌಶಲ್ಯಕ್ಕನುಸಾರ ಸೇವೆಯನ್ನು ಮಾಡುವ ಇಚ್ಛೆ ಇದ್ದಲ್ಲಿ ನಮಗೆ ತಿಳಿಸಬಹುದು, ಅಥವಾ ತಮ್ಮ ಸ್ಥಳೀಯ ಸಾಧಕರನ್ನು ಸಂಪರ್ಕಿಸಬಹುದು.

ಸಾಧನೆಯನ್ನು ಶೀಘ್ರವಾಗಿ ಮಾಡುವುದರ ಮಹತ್ವ

ಸಾಧನೆಯ ಈ ಎಲ್ಲ ಪ್ರಯತ್ನಗಳನ್ನು ನಾವು ಎಷ್ಟು ಬೇಗನೇ ಮಾಡಬಹುದೋ ಅಷ್ಟು ಬೇಗ ಮಾಡಿಕೊಳ್ಳಬೇಕು. ಏಕೆಂದರೆ ನಮ್ಮ ಆಯುಷ್ಯವು ಸೀಮಿತವಾಗಿದೆ. ನಮ್ಮ ಆಯುಷ್ಯದ ರೇಖೆಯು ಎಷ್ಟು ಉದ್ದವಾಗಿದೆ ಎಂದು ನಮಗೆ ಗೊತ್ತಿಲ್ಲ. ಹಾಗಾಗಿ ಈಶ್ವರಪ್ರಾಪ್ತಿಯ ಪ್ರಯತ್ನಗಳನ್ನು ನಮಗೆ ಹೇಗೆ ಆಗುತ್ತದೆಯೋ ಹಾಗೆ ಮಾಡುವೆವು, ವೃದ್ಧಾಪ್ಯದಲ್ಲಿ ಮಾಡುವೆವು ಅಥವಾ ನಮ್ಮ ಎಲ್ಲ ಅಡಚಣೆಗಳು ದೂರವಾದ ನಂತರ ಮಾಡುವೆವು ಎಂದು ಹೇಳಿದರೆ ಆಗುತ್ತದೆಯೇ? ಇಲ್ಲವಲ್ಲ? ಏಕೆಂದರೆ ದುರ್ಲಭವಾದ ಈ ಮನುಷ್ಯಜನ್ಮವು ಮತ್ತೊಮ್ಮೆ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಇದೇ ಜನ್ಮದಲ್ಲಿ ದೊರೆತಿರುವ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಿ ಜನ್ಮಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಬೇಕಾಗಿದೆ. ಅದುವೇ ನಿಜವಾದ ಪುರುಷಾರ್ಥವಾಗಿದೆ. ಭೌತಿಕ ಸುಖವನ್ನು ಎಷ್ಟು ಗಳಿಸಿದರೂ ಮೃತ್ಯುವಿನ ಸಮಯದಲ್ಲಿ ನಾವು ಅದನ್ನೆಲ್ಲ ಇಲ್ಲಿಯೇ ಬಿಟ್ಟು ಹೋಗಬೇಕಾಗಿರುತ್ತದೆ. ಹೀಗಿರುವಾಗ ಮೃತ್ಯುವಿನ ನಂತರ ನಮ್ಮ ಜೊತೆಗೆ ಏನು ಬರುತ್ತದೆ ? ನಮ್ಮ ಸಾಧನೆಯೇ ನಮ್ಮ ಜೊತೆಗೆ ಬರುತ್ತದೆ. ಈ ಸಾಧನೆಯ ಬಲದಿಂದಲೇ ನಮಗೆ ಮುಂದಿನ ಜನ್ಮವು ಸಿಗುತ್ತದೆ.

ನಾವು ವ್ಯವಹಾರದಲ್ಲಿ ಡಾಕ್ಟರ್, ಇಂಜಿನಿಯರ್ ಆದೆವು ಆದರೂ ಮುಂದಿನ ಜನ್ಮದಲ್ಲಿ ಪುನಃ ಅ, ಆ, ಇ, ಈ .. . . . . ಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಅಧ್ಯಾತ್ಮದಲ್ಲಿ ಹಾಗಿರುವುದಿಲ್ಲ. ಮೃತ್ಯುವಿನ ಸಮಯದಲ್ಲಿ ನಾವು ಆಧ್ಯಾತ್ಮಿಕವಾಗಿ ಯಾವ ಸ್ತರದಲ್ಲಿರುತ್ತೇವೆಯೋ ಅದರ ಮುಂದಿನ ಪ್ರವಾಸವು ಮುಂದಿನ ಜನ್ಮದಲ್ಲಿ ಪ್ರಾರಂಭವಾಗುತ್ತದೆ. ಸಾಧನೆಗೆ ಇಷ್ಟು ಮಹತ್ವವಿದೆ! ಹಾಗಾಗಿ ನಾವು ಸಹ ಸಾಧನೆಯ ಪ್ರಯತ್ನಗಳನ್ನು ಗಾಂಭೀರ್ಯದಿಂದ ಮಾಡಲು ಪ್ರಯತ್ನಿಸೋಣ. ನಾಮಜಪ ಮತ್ತು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಹೆಚ್ಚು ಮನಃಪೂರ್ವಕವಾಗಿ ಮತ್ತು ಸಾತತ್ಯದಿಂದ ಮಾಡಲು ಪ್ರಯತ್ನಿಸೋಣ.

Leave a Comment