ಆನ್‌ಲೈನ್ ಸತ್ಸಂಗ (22)

ಸ್ವಯಂಸೂಚನಾ ಸತ್ರ

ಇದುವರೆಗಿನ ಸತ್ಸಂಗಗಳಲ್ಲಿ ನಾವು ಸ್ವಯಂಸೂಚನಾ ಪದ್ಧತಿಗಳು ಹಾಗೂ ಸ್ವಭಾವದೋಷಗಳ ವರ್ಗೀಕರಣ ಮಾಡಿ ಅವುಗಳ ವ್ಯಾಪ್ತಿಯನ್ನು ತೆಗೆಯುವುದು ಈ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಈಗ ಮುಂದಿನ ಹಂತದಲ್ಲಿ ನಾವು ಸ್ವಯಂಸೂಚನಾಸತ್ರವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವವರಿದ್ದೇವೆ.

ಸ್ವಯಂಸೂಚನಾ ಸತ್ರವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಮಹತ್ವದ ಹಂತವಾಗಿದೆ. ನಮ್ಮ ಮನಸ್ಸನ್ನು ನಿರೀಕ್ಷಿಸಿ ನಮ್ಮಿಂದಾಗುವ ತಪ್ಪುಗಳನ್ನು ಬರೆಯುವುದಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವವು ಸ್ವಯಂಸೂಚನಾ ಸತ್ರಕ್ಕಿದೆ. ಸ್ವಯಂಸೂಚನೆಯನ್ನು ಕೊಡುವುದೆಂದರೆ ನಾವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ನೆನಪಿನಲ್ಲಿಟ್ಟುಕೊಳ್ಳುವುದು. ಮನಸ್ಸಿಗೆ ಸ್ವಯಂಸೂಚನೆಯನ್ನು ಕೊಡುವುದರಿಂದ ಮನಸ್ಸಿಗೆ ‘ಇದನ್ನು ಮಾಡಬೇಕು ಮತ್ತು ಇದನ್ನು ಮಾಡಬಾರದು’ ಎಂಬುದು ತಿಳಿಯುತ್ತದೆ. ಚಿಕ್ಕಂದಿನಲ್ಲಿ ತಾಯಿಯು ಮಗುವಿಗೆ ಒಳ್ಳೆಯ ಅಭ್ಯಾಸವಾಗಬೇಕೆಂದು ಯಾವುದಾದರೂ ಸಂಗತಿಗಳನ್ನು ಮತ್ತೆ ಮತ್ತೆ ಹೇಳುತ್ತಾಳೆ. ಇದರ ಸಂಸ್ಕಾರವು ಮನಸ್ಸಿನ ಮೇಲೆ ಉಂಟಾಗಿ ಮಗುವು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳುತ್ತದೆ. ಮುಂದೆ ಈ ಅಭ್ಯಾಸಗಳು ಶಾಶ್ವತವಾಗಿ ಮೈಗೂಡುತ್ತವೆ. ಸ್ವಯಂಸೂಚನೆಗಳ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತದೆ. ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ಎಂಬುದನ್ನು ಹಾಗೂ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ಸತ್ರದ ಮೂಲಕ ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ. ಇದರಿಂದ ವ್ಯಕ್ತಿಯ ಜಾಗರೂಕತೆಯು ಹೆಚ್ಚಾಗುತ್ತದೆ ಮತ್ತು ಅಯೋಗ್ಯ ಕೃತಿಗಳನ್ನು ಮಾಡದೇ ಯೋಗ್ಯ ಕೃತಿಗಳನ್ನು ಮಾಡುವ, ಯೋಗ್ಯ ಪ್ರತಿಕ್ರಿಯೆಯನ್ನು ಕೊಡುವ ಸಂಸ್ಕಾರವು ಮನಸ್ಸಿನ ಮೇಲೆ ಆಗುತ್ತದೆ. ಹೀಗಾಗಿ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವವಿಕಾಸವಾಗುತ್ತದೆ. ಪ್ರಸ್ತುತ ವ್ಯಕ್ತಿತ್ವ ವಿಕಾಸಕ್ಕೆಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಅದರ ಬಹಳಷ್ಟು ಭಾಗವು ಬಾಹ್ಯ ಮಟ್ಟದ್ದೇ ಆಗಿರುತ್ತದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯಿಂದ ವ್ಯಕ್ತಿಯ ಮೂಲ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ ಮತ್ತು ಮನಸ್ಸಿನ ಶುದ್ಧೀಕರಣವಾಗುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

ಅ. ಸ್ವಯಂಸೂಚನಾ ಸತ್ರ ಎಂದರೇನು ?

ಸ್ವಯಂಸೂಚನಾ ಸತ್ರ ಅಂದರೆ ನಮ್ಮಿಂದ ಆಗುವ ತಪ್ಪುಗಳು, ಅಯೋಗ್ಯ ಕೃತಿಗಳು ಆಗದಂತೆ ನೋಡಿಕೊಂಡು ಯೋಗ್ಯ ಕೃತಿಗಳನ್ನು ಮಾಡುವಂತೆ ಮನಸ್ಸಿಗೆ ದಿಕ್ಕು ತೋರಿಸುವುದು ! ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಅಥವಾ ನಿರಾಸೆಯ ವಿಚಾರಗಳು ಬರುತ್ತಿದ್ದರೆ ಅವುಗಳ ಬದಲು ಸಕಾರಾತ್ಮಕವಾಗಿಯೂ, ಆಧ್ಯಾತ್ಮಿಕ ಮಟ್ಟದಲ್ಲಿಯೂ ವಿಚಾರ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ! ಸ್ವಯಂಸೂಚನಾ ಸತ್ರವು ಒಂದು ದಿಕ್ಸೂಚಕ ಯಂತ್ರದಂತೆ ಕಾರ್ಯ ಮಾಡುತ್ತದೆ. ದಿಕ್ಸೂಚಿಯಿಂದ ದಿಕ್ಕು ತಿಳಿಯುತ್ತದೆ ಆದರೆ ಹಡಗನ್ನು ನಾವಿಕನೇ ಆ ದಿಕ್ಕಿನಲ್ಲಿ ತಗೆದುಕೊಂಡು ಹೋಗಬೇಕಲ್ಲವೆ? ಅದೇ ರೀತಿ ಸ್ವಯಂಸೂಚನಾ ಸತ್ರವು ನಮಗೆ ಯೋಗ್ಯ ರೀತಿಯಲ್ಲಿ ಹೇಗೆ ವಿಚಾರ ಮಾಡಬೇಕು, ಕೃತಿಯನ್ನು ಮಾಡಬೇಕು ಎಂಬುದನ್ನು ಮನಸ್ಸಿಗೆ ಸೂಚಿಸುತ್ತದೆ. ಆದರೆ ಸೂಚನೆಗಳಿಗನುಸಾರ ಕೃತಿಯನ್ನು ಮಾಡಲು ವ್ಯಕ್ತಿಯು ಸ್ವತಃ ಪ್ರಯತ್ನ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯು ವೇಗವಾಗಿ ನಡೆಯುತ್ತದೆ.

ಆ. ಸ್ವಯಂಸೂಚನಾ ಸತ್ರವನ್ನು ಹೇಗ ಮಾಡಬೇಕು ?

ಆ. ಸತ್ರವನ್ನು ಮಾಡುವುದಕ್ಕಾಗಿ ನಾವು ನಮ್ಮಲ್ಲಿರುವ ಯಾವ ತೀವ್ರ ದೋಷಗಳ ವ್ಯಾಪ್ತಿಯನ್ನು ತೆಗೆದಿದ್ದೇವೆಯೋ ಅದರಲ್ಲಿನ ಒಂದು ಅಂಗವನ್ನು ಸೂಚನಾಸತ್ರಕ್ಕೆಂದು ಆಯ್ಕೆ ಮಾಡಿಕೊಳ್ಳಬೇಕು. ಪ್ರಕ್ರಿಯೆಯ ಆರಂಭದಲ್ಲಿ 2 ದೋಷಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವೆರಡು ದೋಷಗಳ ನಿರ್ಮೂಲನೆಗಾಗಿ 2 ಮತ್ತು ನಾಮಜಪವು ಆಗಬೇಕೆಂಬುದಕ್ಕಾಗಿ 1 ಹೀಗೆ, ಒಂದು ಸೂಚನಾಸತ್ರದಲ್ಲಿ ನಾವು 3 ಸ್ವಯಂಸೂಚನೆಗಳನ್ನು ಕೊಟ್ಟುಕೊಳ್ಳಬಹುದು.

ಉದಾ: ನಾವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಗೆಂದು ಅವ್ಯವಸ್ಥಿತತೆ ಎಂಬ ದೋಷವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದರ ವ್ಯಾಪ್ತಿಯಲ್ಲಿ ಹಲವಾರು ಅಂಶಗಳಿರಬಹುದು. ಬಟ್ಟೆಗಳನ್ನು ಮಡಚಿಡುವ ವಿಷಯದಲ್ಲಿರಬಹುದು, ಚಪ್ಪಲಿ ಸರಿಯಾದ ಜಾಗದಲ್ಲಿಡುವುದರ ಬಗ್ಗೆ ಇರಬಹುದು, ವಾಹನವನ್ನು ಪಾರ್ಕ ಮಾಡುವ ಬಗ್ಗೆ ಇರಬಹುದು. ಸೂಚನಾ ಸತ್ರವನ್ನು ಮಾಡುವಾಗ ಇವುಗಳ ಪೈಕಿ ಯಾವುದಾದರೊಂದು ಅಯೋಗ್ಯ ಕೃತಿಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸೂಚನೆಯನ್ನು ಕೊಡಬೇಕು. ಅಯೋಗ್ಯ ಕೃತಿಗಳ ಪುನರಾವರ್ತನೆಯ ಪ್ರಮಾಣ, ತೀವ್ರತೆ ಮತ್ತು ಕಾಲಾವಧಿ ಇವುಗಳ ವಿಚಾರ ಮಾಡಿ ಯಾವುದಾದರೊಂದು ಕೃತಿಯನ್ನು ಸೂಚನೆಗಾಗಿ ಆಯ್ಕೆ ಮಾಡಿಕೊಳ್ಳಬೇಕು. ಉದಾ: ಅಡುಗೆ ಮನೆಯ ಕಟ್ಟೆಯ ಮೇಲಿನ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸದಿರುವುದು ಎಂಬ ಕೃತಿಯು ನಮ್ಮಿಂದ ಮತ್ತೆ ಮತ್ತೆ ಆಗುತ್ತಿದ್ದರೆ ಅದನ್ನು ಸೂಚನಾ ಸತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಸ್ವಯಂಸೂಚನೆ :- ನಾನು ಕಟ್ಟೆಯ ಮೇಲಿನ ವಸ್ತುಗಳನ್ನು ವ್ಯವಸ್ಥಿತವಾಗಿ ಇಡದಿದ್ದರೆ ಅದು ನೋಡಲು ಚೆನ್ನಾಗಿ ಕಾಣುವುದಿಲ್ಲ, ಪ್ರತಿಯೊಂದು ಕೃತಿಯು ಸತ್ಯಂ ಶಿವಂ ಸುಂದರಂ ಸ್ವರೂಪದ್ದಾಗಿರಬೇಕು ಮತ್ತು ಅದರಿಂದ ನನ್ನ ಸಾಧನೆಯಾಗುವುದು ಎಂದು ಗಮನದಲ್ಲಿಟ್ಟು ನಾನು ನಾಮಜಪವನ್ನು ಮಾಡುತ್ತಾ ವಸ್ತುಗಳನ್ನು ಸರಿಯಾಗಿ ಜೋಡಿಸಿಡುವೆನು.

ಇದೇ ವಿಧವಾಗಿ ಎರಡನೆಯ ಸ್ವಭಾವದೊಷದ ವ್ಯಾಪ್ತಿಯಿಂದ ಅದಕ್ಕೆ ಸ್ವಯಂಸೂಚನೆಯನ್ನು ತಯಾರಿಸಬೇಕು. ಕೋಪ ಎಂಬುದು ಆಯ್ಕೆ ಮಾಡಿರುವ ದೋಷವಾಗಿದ್ದಲ್ಲಿ, ಅದರಲ್ಲಿ ‘ಯಜಮಾನರು ಮನೆಗೆಲಸದಲ್ಲಿ ಸಹಾಯ ಮಾಡಲು ನಿರಾಕರಿಸಿದಾಗ ಕೋಪ ಬರುವುದು’ ಎಂಬ ಅಂಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಭಾವಿಸೋಣ. ಇದಕ್ಕೆ ಸ್ವಯಂಸೂಚನೆ ಹೇಗಿರಬೇಕು ? ಯಜಮಾನರು ಜಿನಸಿ ಸಾಮಾನುಗಳನ್ನು ತರಲು ನಿರಾಕರಿಸಿದಾಗ, ಅವರಿಗೆ ಇದನ್ನು ಮಾಡಲು ಏನು ಅಡಚಣೆಯಿದೆ ಎಂದು ಶಾಂತವಾಗಿ ಕೇಳಿತಿಳಿದುಕೊಳ್ಳುವೆನು ಮತ್ತು ಅದಕ್ಕನುಸಾರ ಪರಿಹಾರ ಹುಡುಕುವೆನು.

ನಂತರ ನಾವು ಮೊಡಲೇ ನೋಡಿರುವಂತೆ ಇ-2 ಪದ್ಧತಿಯಿಂದ ನಾಮಜಪವಾಗುವುದಕ್ಕಾಗಿ ಸ್ವಯಂಸೂಚನೆಯನ್ನು ಕೊಟ್ಟುಕೊಳ್ಳಬಹುದು. ’ಯಾವಾಗ ನಾನು ಯಾರೊಂದಿಗೂ ಮಾತನಾಡುತ್ತಿರುವುದಿಲ್ಲವೋ ಅಥವಾ ನನ್ನ ಮನಸ್ಸಿಗೆ ನಿರರ್ಥಕ ವಿಚಾರಗಳು ಬರುವುದೋ ಆಗ ನನ್ನ ನಾಮಜಪವು ಪ್ರಾರಂಭವಾಗುವುದು.’

ಇ. ಸ್ವಯಂಸೂಚನಾ ಸತ್ರದ ಕಾಲಾವಧಿ

ಈಗ ನಾವು ಪ್ರತ್ಯಕ್ಷವಾಗಿ ಸ್ವಯಂಸೂಚನೆಯನ್ನು ಹೇಗೆ ತೆಗೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ. ಸೂಚನಾಸತ್ರವನ್ನು ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಿ ಕುಲದೇವತೆ ಅಥವಾ ಉಪಾಸ್ಯದೇವತೆಯ ನಾಮಜಪವನ್ನು ಮಾಡಬೇಕು. ಮನಸ್ಸು ಏಕಾಗ್ರವಾಗುವುದಕ್ಕೆ 2 ನಿಮಿಷ ನಾಮಜಪ ಮಾಡಬೇಕು. ನಂತರ ಆಯ್ಕೆ ಮಾಡಿಕೊಂಡಿರುವ ಮೊದಲನೆಯ ಸ್ವಭಾವದೋಷದ ಅಂಗಕ್ಕೆ ಸಂಬಂಧಪಟ್ಟಂತೆ 5 ಬಾರಿ ಸ್ವಯಂಸೂಚನೆಯನ್ನು ಕೊಡುವುದು. ನಂತರ ಎರಡನೆಯ ಮತ್ತು ಮೂರನೆಯ ಸ್ವಭಾವದೋಷದ ಅಂಗಕ್ಕೆ ಸಂಬಂಧಪಟ್ಟಂತೆ 5 ಸೂಚನೆಯನ್ನು ಕೊಡುವುದು. ಪ್ರಕ್ರಿಯೆಗೆಂದು ಎರಡು ದೋಷಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ನಾಮಜಪದ ಬಗ್ಗೆ ಮೂರನೆಯ ಸೂಚನೆಯನ್ನು ಕೊಡಬಹುದು. ಅ-3 ಪದ್ಧತಿಯಿಂದ ಯಾವುದಾದರೊಂದು ದೋಷಕ್ಕೆ ಸೂಚನೆಯನ್ನು ಕೊಡುವುದಾದರೆ ಸತ್ರವನ್ನು ಮಾಡುವಾಗ ಅದನ್ನು ಮಾತ್ರ, 5 ಬಾರಿ ಕೊಡದೆ ಒಂದು ಬಾರಿ ಮಾತ್ರ ಕೊಡಬೇಕು. ಸೂಚನೆಯನ್ನು ಕೊಟ್ಟ ನಂತರ ಕೃತಜ್ಜತೆಯನ್ನು ವ್ಯಕ್ತ ಪಡಿಸಬೇಕು. ಒಂದು ಸತ್ರವನ್ನು ಮಾಡಲು ಸಾಮಾನ್ಯವಾಗಿ 8 ನಿಮಿಷ ತಗಲುತ್ತವೆ. ಸತ್ರದ ಕಾಲಾವಧಿ ಸ್ವಲ್ಪ ಹೆಚ್ಚು ಕಡಿಮೆ ಆದರೆ ವಿಶೇಷ ವ್ಯತ್ಯಾಸವಾಗುವುದಿಲ್ಲ. ಕಾಲಾವಧಿಗಿಂತ ಸೂಚನೆಗಳನ್ನು ಪರಿಣಾಮಕಾರಿಯಾಗಿ ಕೊಡುವುದಕ್ಕೆ ಹೆಚ್ಚು ಮಹತ್ವವಿದೆ.

ಸ್ವಭಾವದೋಷ ನಿರ್ಮೂಲನೆಗಾಗಿ ನಾವು ಈಗಾಗಲೇ ನೋಡಿರುವಂತೆ ಅವ್ಯವಸ್ಥಿತತನ ಮತ್ತು ಕೋಪ ಬರುವುದು ಎಂಬ ಸ್ವಭಾವದೋಷಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ಸ್ವಯಂಸೂಚನಾ ಸತ್ರವನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ.

ಸತ್ರವನ್ನು ಪ್ರಾರಂಭ ಮಾಡುವಾಗ ಪ್ರಾರ್ಥನೆ ಮಾಡುವುದು – ಹೇ ಭಗವಂತಾ, ನೀನೇ ಈ ಸತ್ರವನ್ನು ನನ್ನಿಂದ ಏಕಾಗ್ರತೆಯಿಂದ ಮಾಡಿಸಿಕೊ. ನಾನು ಕೊಡುತ್ತಿರುವ ಸ್ವಯಂಸೂಚನೆಗಳು ನನ್ನ ಅಂತರ್ಮನಸ್ಸಿಗೆ ತಲುಪಲಿ. ಸೂಚನಾಸತ್ರವನ್ನು ಮಾಡುವಾಗ ಯಾವ ಅಡೆತಡೆಗಳೂ ಬಾರದಿರಲಿ.

ಅದರ ನಂತರ ಎರಡು ನಿಮಿಷ ಏಕಾಗ್ರತೆಯಿಂದ ನಾಮಜಪ ಮಾಡಬೇಕು. ನಂತರ ಒಂದು ಸತ್ರದಲ್ಲಿ ಮೊದಲು ಒಂದು ಸ್ವಭಾವದೋಷದ ಅಂಗದ ಕುರಿತು 5 ಬಾರಿ ಸ್ವಯಂಸೂಚನೆಯನ್ನು ಕೊಡಬೇಕು. ನಂತರ ಕೂಡಲೇ ಎರಡನೆಯ ಸ್ವಭಾವದೊಷಕ್ಕೆ 5 ಬಾರಿ ಸ್ವಯಂಸೂಚನೆಯನ್ನು ಕೊಡಬೇಕು. ನಂತರ ನಾಮಜಪವು ಆಗಬೇಕೆಂಬುದಕ್ಕಾಗಿ 5 ಬಾರಿ ಸ್ವಯಂಸೂಚನೆಯನ್ನು ಕೊಡಬೇಕು. ನಂತರ ಕೃತಜ್ಜತೆಯನ್ನು ವ್ಯಕ್ತಪಡಿಸಬೇಕು.

ಈ. ಸತ್ರವನ್ನು ಎಷ್ಟು ಕಾಲಾವಧಿಯಲ್ಲಿ ಮಾಡಬೇಕು ?

೧. ಪ್ರಕ್ರಿಯೆಗೆ ಆಯ್ಕೆ ಮಾಡಿಕೊಂಡ ದೋಷಕ್ಕೆ ಕನಿಷ್ಠ ಪಕ್ಷ ಒಂದು ವಾರ ಸ್ವಯಂಸೂಚನೆಗಳನ್ನು ಕೊಡಬೇಕು. ಒಂದು ವಾರ ಸೂಚನೆ ಕೊಟ್ಟರೂ ಬದಲಾವಣೆಯಾಗದಿದ್ದರೆ ಅದೇ ಸೂಚನೆಯನ್ನು 3-4 ವಾರಗಳ ಕಾಲ ಕೊಡಬೇಕು.
೨. ಒಂದು ಅಂಗದ ಸ್ವಯಂಸೂಚನೆಯನ್ನು ಕೊಡುವಾಗ ಅದರಲ್ಲಿ ನಿರೀಕ್ಷಿತ ಬದಲಾವಣೆ ಕಂಡು ಬಂದರೆ ಸ್ವಯಂಸೂಚನೆಯನ್ನು ಕೊಡಲು ಅದೇ ದೋಷದ ಮತ್ತೊಂದು ಅಂಗವನ್ನು ಮುಂದಿನ ವಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ದೋಷವು ಬಹಳಷ್ಟು ಕಡಿಮೆಯಾದರೆ ನಾವು ಪ್ರಕಿಯೆಗೆಂದು ಬೇರೊಂದು ಸ್ವಭಾವದೋಷವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರೀತಿ 5-6 ತಿಂಗಳುಗಳ ಕಾಲ ಈ ಪ್ರಕ್ರಿಯಯನ್ನು ನಿಯಮಿತವಾಗಿ, ಪ್ರಾಮಾಣಿಕವಾಗಿ, ಮನ್ಃಪೂರ್ವಕವಾಗಿ ಮಾಡಿದರೆ ನಮ್ಮ ಆನಂದದ ಪ್ರಮಾಣವು ಖಂಡಿತ ಹೆಚ್ಚಾಗುವುದು.

ಉ. ಸ್ವಯಂಸೂಚನಾಸತ್ರದ ಬಗ್ಗೆ ಇನ್ನಷ್ಟು ಮಹತ್ವದ ಅಂಶಗಳು

೧. ಸ್ವಯಂಸೂಚನಾ ಸತ್ರವನ್ನು ಮಾಡುವಾಗ ಸೂಚನೆಯಲ್ಲಿನ ಶಬ್ದಗಳು ಮರೆತು ಹೋಗುತ್ತಿದ್ದರೆ ಸೂಚನೆಯನ್ನು ಕಾಗದದ ಮೇಲೆ ಬರೆದಿಟ್ಟುಕೊಂಡು ಓದಬಹುದು.

೨. ಸತ್ರವನ್ನು ಮಾಡಲು ನೆನಪಾಗಬೇಕೆಂದು ಅಲಾರ್ಮ್ ಇಟ್ಟುಕೊಳ್ಳಬಹುದು

೩. ಸೂಚನೆಯನ್ನು ಕೊಡುವ ಕಾಲಾವಧಿಯಲ್ಲಿ ಆ ಸೂಚನೆಗನುಸಾರ ಯೋಗ್ಯ ಕೃತಿಯಾಗಬೇಕೆಂದು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ಪ್ರಕ್ರಿಯೆಯು ಉತ್ತಮವಾಗಿ ಆಗುತ್ತದೆ.

ಊ. ಸ್ವಯಂಸೂಚನಾ ಸತ್ರದ ಲಾಭಗಳು

ಸ್ವಯಂಸೂಚನಾ ಸತ್ರಗಳಿಂದಾಗಿ ದೈನಂದಿನ ಜೀವನದಲ್ಲಿ ಎಲ್ಲ ಘಟನೆಗಳೆಡೆ ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವ ಅಭ್ಯಾಸವಾಗುತ್ತದೆ. ದೋಷಗಳು ಗಮನಕ್ಕೆ ಬಂದ ನಂತರ ಉಂಟಾಗುವ ನಿರಾಸೆಯು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಬರುವ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಪ್ರಕ್ರಿಯೆಯಲ್ಲಿನ ವಿವಿಧ ಕೃತಿಗಳನ್ನು ಮಾಡುವಾಗ ನಮ್ಮ ಆತ್ಮವಿಶ್ವಾಸ ಹಾಗೂ ಉತ್ಸಾಹವು ಹೆಚ್ಚುತ್ತದೆ. ಅಯೋಗ್ಯ ಕೃತಿಯನ್ನು ಮಾಡುವ ಮೊದಲು ಅಥವಾ ಅಯೋಗ್ಯ ಪ್ರತಿಕ್ರಿಯೆ ಮನಸ್ಸಿನಲ್ಲಿ ಉಂಟಾಗುವ ಮೊದಲೇ ನಾವು ಜಾಗರೂಕರಾಗುತ್ತೇವೆ. ಯಾವುದೇ ಪ್ರಸಂಗದಲ್ಲಿ ಯೋಗ್ಯ ಕೃತಿಯನ್ನು ಮಾಡುವ ಹಾಗೂ ಯೋಗ್ಯ ಪ್ರತಿಕ್ರಿಯೆ ಕೊಡುವ ಸಂಸ್ಕಾರವು ನಮ್ಮ ಚಿತ್ತದ ಮೇಲೆ ಆಗುತ್ತದೆ. ಇದರಿಂದಾಗಿ ಅಯೋಗ್ಯ ಕೃತಿ ಹಾಗೂ ಅಯೋಗ್ಯ ಪ್ರತಿಕ್ರಿಯೆಗಳ ಪ್ರಮಾಣವು ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. ಯಾವುದೇ ಪ್ರಸಂಗದಲ್ಲಿ ಯೋಗ್ಯ ಕೃತಿ ಹಾಗೂ ಪ್ರತಿಕ್ರಿಯೆಯ ಬಗ್ಗೆ ವಿಚಾರವಾಗುವುದರಿಂದ ವಿವೇಕಬುದ್ಧಿಯು ಜಾಗೃತವಾಗಲು ಸಹಾಯವಾಗುತ್ತದೆ. ಒಟ್ಟಾರೆ ನಮ್ಮಲ್ಲಿರುವ ಸ್ವಭಾವದೋಷಗಳು ದೂರವಾಗತೊಡಗಿದ ಕಾರಣ ನಮ್ಮ ಆನಂದವೂ ಹೆಚ್ಚಾಗುತ್ತದೆ.

Leave a Comment