ಆನ್‌ಲೈನ್ ಸತ್ಸಂಗ (21)

ಸ್ವಭಾವದೋಷಗಳ ಅಧ್ಯಯನ ಮತ್ತು ವ್ಯಾಪ್ತಿ

ಇದುವರೆಗೆ ನಾವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯಲ್ಲಿನ ಸ್ವಯಂಸೂಚನೆಗಳ ವಿವಿಧ ಪದ್ಧತಿಗಳ ಬಗ್ಗೆ ತಿಳಿದುಕೊಂಡೆವು. ತಪ್ಪು ಬರೆಯುವುದರಿಂದ ನಮ್ಮ ಅಯೋಗ್ಯ ಅಭ್ಯಾಸಗಳು, ಅಯೋಗ್ಯ ವಿಚಾರಗಳು ಕಡಿಮೆಯಾಗುತ್ತಿರುವುದರ ಅನುಭವ ನಿಮಗೂ ಬಂದಿರಬಹುದು. ನಾವು ಸಾಧನೆಯನ್ನು ಏಕೆ ಮಾಡುತ್ತಿದ್ದೇವೆ ? ಶಾಶ್ವತವಾದ ಆನಂದಪ್ರಾಪ್ತಿಗಾಗಿ ಮತ್ತು ದೇವರ ಭಕ್ತಿ ಮಾಡಿ ಮೋಕ್ಷ ಪಡೆಯುವುದಕ್ಕಾಗಿ ಅಲ್ಲವೇ ? ಆದರೆ ‘ಸ್ವಭಾವದೋಷ ನಿರ್ಮೂಲನೆಗೂ ದೇವರ ಭಕ್ತಿಗೂ ಸಂಬಂಧವೇನು ?’ ಎಂದು ಕೆಲವರಿಗೆ ಅನಿಸಬಹುದು. ಇದರ ಬಗ್ಗೆ ಒಂದು ಮಹತ್ವದ ಅಂಶವೆಂದರೆ ದೇವರ ಭಕ್ತಿ ಮಾಡುವುದರ ಜೊತೆಗೆ ಚಿತ್ತಶುದ್ಧಿಯೂ ಆಗುವ ಆವಶ್ಯಕತೆಯಿದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯನ್ನು ಕೈಗೊಳ್ಳದೇ ದೇವರ ಭಕ್ತಿ ಮಾಡುವುದೆಂದರೆ ಒಂದು ವಿಧದಲ್ಲಿ ಕೊಳಕು ಪಾತ್ರೆಯಲ್ಲಿ ಅಮೃತವನ್ನು ತುಂಬಿಸಿದಂತಾಗುತ್ತದೆ. ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ ಈ ಅಮೃತಮಯ ಪ್ರಕ್ರಿಯೆಯನ್ನು ಕಂಡು ಹಿಡಿದಿರುವ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪ ಹಾಗೂ ಆಶೀರ್ವಾದವು ಈ ಪ್ರಕ್ರಿಯೆಯ ಹಿಂದೆ ಕಾರ್ಯಾನ್ವಿತವಾಗಿದೆ. ಇದರಿಂದ ದೇಶವಿದೇಶಗಳಲ್ಲಿನ ಹಲವಾರು ಜಿಜ್ಞಾಸುಗಳು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ ನಂತರ ತಮ್ಮ ಜನ್ಮಜನ್ಮಗಳ ಸಂಸ್ಕಾರಗಳು ನಾಶವಾಗುತ್ತಿರುವುದರ, ಜೀವನವು ಆನಂದಮಯವಾಗುತ್ತಿರುವುದರ ಹಾಗೂ ದೇವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವಾಗುತ್ತಿರುವುದರ ಅನುಭೂತಿಯನ್ನು ಪಡೆಯುತ್ತಿದ್ದಾರೆ. ನಾವು ಕೂಡ ಈ ಪ್ರಕ್ರಿಯೆಯನ್ನು ಮಾಡಿ ಇದರ ಅನುಭವವನ್ನು ಪಡೆಯೋಣ.

ಸ್ವಯಂಸೂಚನಾ ಪದ್ಧತಿಗಳನ್ನು ತಿಳಿದುಕೊಂಡ ನಂತರ ಈಗ ಪ್ರಕ್ರಿಯೆಗಾಗಿ ನಮ್ಮಲ್ಲಿರುವ ಸ್ವಭಾವದೋಷಗಳನ್ನು ಆಯ್ಕೆ ಮಾಡಿ ಅವುಗಳ ವ್ಯಾಪ್ತಿಯನ್ನು ತೆಗೆಯುವ ಮಹತ್ವದ ಹಂತವನ್ನು ತಿಳಿದು ಕೊಳ್ಳೋಣ…

ಅ. ಸ್ವಭಾವದೋಷಗಳ ತೀವ್ರತೆಯ ಸ್ವರೂಪ

ನಮ್ಮೆಲ್ಲರಲ್ಲಿಯೂ ಹಲವಾರು ಸ್ವಭಾವದೋಷಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಯಾವ ದೋಷಗಳು ಎಷ್ಟು ಪ್ರಮಾಣದಲ್ಲಿವೆ ಮತ್ತು ಅವುಗಳನ್ನು ಹೋಗಲಾಡಿಸಿ ನಾವು ಯಾವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂಬುದು ಸುಸ್ಪಷ್ಟವಾಗುವುದು ಅತ್ಯಂತ ಮಹತ್ವದ್ದಾಗಿರುತ್ತದೆ. ಮೊದಲು ನಾವು ನಮ್ಮಲ್ಲಿರುವ ಸ್ವಭಾವದೋಷಗಳನ್ನು ಗುರುತಿಸಿ ಅವುಗಳ ಪಟ್ಟಿಯನ್ನು ತಯಾರಿಸಬೇಕಾಗಿದೆ. ನಂತರ ಆ ದೋಷಗಳ ತೀವ್ರತೆಯನ್ನು ಅಭ್ಯಾಸ ಮಾಡಿ ತೀವ್ರ, ಮಧ್ಯಮ ಮತ್ತು ಮಂದ ಹೀಗೆ ವರ್ಗೀಕರಣ ಮಾಡಬೇಕಾಗಿದೆ. ನಂತರ ಪ್ರಬಲವಾಗಿರುವ 2 ಅಥವಾ 3 ದೋಷಗಳನ್ನು ಪ್ರಕ್ರಿಯೆಗಾಗಿ ಆರಿಸಿಕೊಳ್ಳಬೇಕಾಗಿದೆ.

ಆ. ಸ್ವಭಾವದೋಷಗಳ ಪಟ್ಟಿ

ಇಲ್ಲಿ ನೀಡಿರುವ ಸ್ವಭಾವದೋಷಗಳ ಪಟ್ಟಿ ನೋಡಿ ತಮ್ಮಲ್ಲಿ ಯಾವ ಯಾವ ಸ್ವಭಾವದೋಷಗಳು ತೀವ್ರ, ಮಧ್ಯಮ ಮತ್ತು ಮಂದ ಸ್ವರೂಪದಲ್ಲಿವೆ ಎಂಬುದನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳೋಣ..

ಇ. ಪಟ್ಟಿಯಿಂದ ಪ್ರಕ್ರಿಯೆಗಾಗಿ ತೀವ್ರ ಸ್ವಭಾವದೋಷಗಳನ್ನು ಆಯ್ಕೆ ಮಾಡುವುದು

ಈ ಪಟ್ಟಿಯಿಂದ ನಮ್ಮಲ್ಲಿರುವ 2 ಅಥವಾ 3 ತೀವ್ರ ಸ್ವಭಾವದೋಷಗಳನ್ನು ಪ್ರಕ್ರಿಯೆಗಾಗಿ ಆಯ್ಕೆ ಮಾಡಬೇಕಾಗಿದೆ. ಈ ಸ್ವಭಾವದೋಷಗಳನ್ನು ಆರಿಸಿಕೊಳ್ಳುವಾಗ ತಪ್ಪುಗಳ ಪುನರಾವರ್ತನೆ, ತೀವ್ರತೆ, ಕಾಲಾವಧಿ ಇವುಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಬಹುದು.

ಉದಾ: ಒಂದೇ ವಿಧದ ತಪ್ಪುಗಳು ಮತ್ತೆ ಮತ್ತೆ ಆಗುವುದರ ಪ್ರಮಾಣವು ಹೆಚ್ಚು ಇದ್ದರೆ ಆ ತಪ್ಪಿನಿಂದ ಆಗುವ ಪರಿಣಾಮವು ಗಂಭೀರವಾಗಿರುತ್ತದೆ.

ಮನಸ್ಸಿನ ಮಟ್ಟದ ತಪ್ಪುಗಳಿಂದ ಅಸ್ವಸ್ಥವೆನಿಸುವ ಕಾಲಾವಧಿಯು ಹೆಚ್ಚು ಇದ್ದರೆ ಅದಕ್ಕೆ ಕಾರಣವಾಗಿರುವ ಸ್ವಭಾವದೋಷಗಳನ್ನು ಪ್ರಾಧಾನ್ಯತೆಯಿಂದ ಪ್ರಕ್ರಿಯೆಗಾಗಿ ಆರಿಸಿಕೊಳ್ಳಬೇಕು.

ಉದಾ: ಯಾರಾದರೊಬ್ಬರು ಪ್ರತಿಯೊಂದು ಕೆಲಸ ಮಾಡುವಲ್ಲಿಯೂ ಆಲಸ್ಯ ಮಾಡುತ್ತಿದ್ದರೆ ಆಲಸ್ಯ ಎಂಬ ದೋಷವನ್ನು ಪ್ರಕ್ರಿಯೆಗಾಗಿ ಆಯ್ಕೆ ಮಾಡಿಕೊಳ್ಳಬಹುದು. ಮಾತನಾಡುವಾಗ ಸದಾ ಇತರರನ್ನು ಟೀಕೆ ಮಾಡುತ್ತಿದ್ದರೆ ಟೀಕೆ ಮಾಡುವುದು ಈ ದೋಷವನ್ನು ಆಯ್ಕೆ ಮಾಡಿಕೊಳ್ಳಬಹುದು. ಕೀಳರಿಮೆಯಿಂದ ಇತರರೊಂದಿಗೆ ಮಾತನಾಡಲು ಭಯವೆನಿಸುತ್ತಿದ್ದರೆ ಅದನ್ನು ದೂರಗೊಳಿಸಲು ಪ್ರಯತ್ನಿಸಬಹುದು.

ದೋಷಗಳನ್ನು ಆಯ್ಕೆ ಮಾಡುವ ಮೊದಲು ನಾವೇ ನಮ್ಮನ್ನು ಅಂತರ್ನಿರೀಕ್ಷಣೆ ಮಾಡಿಕೊಂಡು ಚಿಂತನೆ ಮಾಡಬೇಕು. ಇದರಲ್ಲಿ ಕುಟುಂಬದವರು, ಪರಿಚಿತರು ಅಥವಾ ಸಹೋದ್ಯೋಗಿಗಳ ಸಹಾಯವನ್ನು ಪಡೆದುಕೊಳ್ಳಬಹುದು.

ಉ. ಆಯ್ಕೆ ಮಾಡಿರುವ ದೋಷಗಳ ವ್ಯಾಪ್ತಿ ತೆಗೆಯುವುದು

ಸ್ವಭಾವದೋಷಗಳನ್ನು ಆಯ್ಕೆ ಮಾಡಿದ ನಂತರ ಮುಂದಿನ ಹಂತದಲ್ಲಿ ಆಯ್ಕೆ ಮಾಡಿರುವ ದೋಷಗಳ ವ್ಯಾಪ್ತಿ ತೆಗೆಯುವುದಿರುತ್ತದೆ. ಇದರ ಅರ್ಥ ಆ ಸ್ವಭಾವದೋಷಗಳು ಎಲ್ಲೆಲ್ಲಿ ಉಕ್ಕಿ ಬರುತ್ತವೆ ಎಂಬುದನ್ನು ಬರೆದಿಟ್ಟುಕೊಳ್ಳುವುದು. ಕೌಟುಂಬಿಕ, ವೈಯಕ್ತಿಕ, ಸಾಮಾಜಿಕ, ಕಚೇರಿಗೆ ಸಂಬಂಧಪಟ್ಟದ್ದು, ಮತ್ತು ಇತರ ಹೀಗೆ 5 ಸ್ತರಗಳಲ್ಲಿ ವ್ಯಾಪ್ತಿಯನ್ನು ತೆಗೆಯಬಹುದು.

ವ್ಯಾಪ್ತಿಯನ್ನು ಹೇಗೆ ತೆಗೆಯಬೇಕು ಎಂಬುದನ್ನು ನಾವು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿಯಲ್ಲಿ ‘ಅವ್ಯವಸ್ಥಿತ’ವಾಗಿರುವುದರ ದೋಷವಿದೆ ಎಂದು ಭಾವಿಸೋಣ. ಅದು ಎಲ್ಲೆಲ್ಲಿ ಕಂಡು ಬರುತ್ತದೆ ಎಂದು ನಾವು ವ್ಯಾಪ್ತಿಯಲ್ಲಿ ಬರೆಯಬೇಕು. ಉದಾ: ಮನೆಯಲ್ಲಿ ಚಪ್ಪಲಿಯನ್ನು ಸರಿಯಾಗಿ ಇಡದಿರುವುದು, ಹೊದಿಕೆಯನ್ನು ಸರಿಯಾಗಿ ಮಡಚದಿರುವುದು, ಬಟ್ಟೆಗಳನ್ನು ತುರುಕಿ ಇಡುವುದು, ಪಾತ್ರೆಗಳನ್ನು ಸರಿಯಾಗಿ ಜೋಡಿಸದಿರುವುದು; ಕಚೇರಿಯಲ್ಲಿ ಫೈಲ್ ಗಳನ್ನು ಅವ್ಯವಸ್ಥಿತವಾಗಿ ಇಡುವುದು, ಬಟ್ಟೆಗಳನ್ನು ಇಸ್ತ್ರಿ ಮಾಡದೇ ಹಾಕಿಕೊಳ್ಳುವುದು, ಮೇಜಿನ ಮೇಲೆ ಸಾಮಾನು ಸರಿಯಾಗಿ ಇಡದಿರುವುದು, ವೈಯಕ್ತಿಕ ಬಳಕೆಯ ವಸ್ತುಗಳನ್ನು ಅಸ್ತವ್ಯಸ್ತವಾಗಿ ಇಡುವುದು ಈ ರೀತಿಯ ಕೃತಿಗಳನ್ನು ಬರೆದಿಟ್ಟುಕೊಳ್ಳಬೇಕು.

ಒಮ್ಮೆ ಒಂದು ದೋಷದ ವ್ಯಾಪ್ತಿಯನ್ನು ತೆಗೆದರೆ ಆ ಸ್ವಭಾವದೋಷವನ್ನು ಹೋಗಲಾಡಿಸುವುದು ಸುಲಭವಾಗುತ್ತದೆ; ಏಕೆಂದರೆ ನಾವು ಯಾವ ಯಾವ ಸುಧಾರಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂಬುದರ ಚಿತ್ರವು ನಮಗೇ ಸ್ಪಷ್ಟವಾಗುತ್ತದೆ. ಮುಂದೆ ಸ್ವಯಂಸೂಚನೆಯನ್ನು ಕೊಡುವಾಗಲೂ ವ್ಯಾಪ್ತಿಯು ಉಪಯೋಗಕ್ಕೆ ಬರುತ್ತದೆ. ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ ಶತ್ರುವಿನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ಅವನನ್ನು ಯುದ್ಧದಲ್ಲಿ ಸೋಲಿಸುವುದು ಸುಲಭವಾಗಿರುತ್ತದೆ. ದೋಷಗಳ ವ್ಯಾಪ್ತಿಯನ್ನು ತೆಗೆಯುವುದು ದೋಷರೂಪಿ ಶತ್ರುವಿನ ಮಾಹಿತಿ ಶೇಖರಿಸಿದಂತಿದೆ.

ಈಗ ನಾವು ಮತ್ತೊಂದು ಉದಾಹರಣೆಯನ್ನು ನೋಡೋಣ. ನನ್ನಲ್ಲಿ ಮರೆವು ಎಂಬ ದೋಷವಿದೆ ಎಂದು ಭಾವಿಸೋಣ. ವ್ಯಾಪ್ತಿಯನ್ನು ತೆಗೆಯುವಾಗ ಎಲ್ಲೆಲ್ಲಿ ಮರೆಗುಳಿತನ ಉಕ್ಕಿ ಬರುತ್ತದೆ ಎಂಬುದನ್ನು ನಾವು ಬರೆಯಬೇಕು. ಉದಾ: ಸ್ನಾನಗೃಹದಿಂದ ಹೊರಬಂದಾಗ ದೀಪವನ್ನು ಆರಿಸಲಿಲ್ಲ, ಅಂಗಡಿಯಿಂದ ಖರೀದಿ ಮಾಡಿ ತರಬೇಕಾಗಿದ್ದ ಸಾಮಾನುಗಳ ಪೈಕಿ ಕೆಲವನ್ನು ತರಲು ಮರೆತೆ, ರಾತ್ರಿ ಮಲಗುವ ಮುನ್ನ ಗಣಕಯಂತ್ರವನ್ನು ಆಫ್ ಮಾಡದ ಕಾರಣ ರಾತ್ರಿಯಿಡೀ ಅದು ಆನ್ ಆಗಿಯೇ ಇತ್ತು, ಕಚೇರಿಯಲ್ಲಿ ಮೇಲಧಿಕಾರಿಗೆ ಬಂದಿದ್ದ ಒಂದು ಮಹತ್ವದ ಸಂದೇಶವನ್ನು ಕೊಡಲು ಮರೆತೆ, ನೀರಿನ ಮೋಟರ್ ನಿಲ್ಲಿಸಲು ಮರೆತೆ ಇಂತಹ ಅಂಶಗಳನ್ನು ವ್ಯಾಪ್ತಿಯಲ್ಲಿ ಬರೆಯಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇದು ಬೇರೆ ಬೇರೆ ಇರಬಹುದು. ಪ್ರತಿಯೊಬ್ಬನ ಚಿಂತನೆಗನುಸಾರ ಹೆಚ್ಚು ಅಥವಾ ಕಡಿಮೆ ಕೂಡ ಇರಬಹುದು.

ನಮ್ಮಲ್ಲಿ ಪೂರ್ವಾಗ್ರಹ ಎಂಬ ಸ್ವಭಾವದೋಷವಿದ್ದರೆ ಅದರ ವ್ಯಾಪ್ತಿ ಹೇಗಿರಬಹುದು ? ಉದಾ: ಯಜಮಾನರಿಗೆ ನಾನು ಮಾಡುತ್ತಿರುವ ಕೆಲಸದ ಬೆಲೆಯೇ ಇಲ್ಲ. ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ; ಹೌಸಿಂಗ ಸೊಸೈಟಿಯಲ್ಲಿನ ನೆರೆಹೊರೆಯವರು ಯಾವಾಗಲೂ ತಕರಾರು ಮಾಡುತ್ತಿರುತ್ತಾರೆ; ಮಗನಿಗೆ ಓದುವಂತೆ ಎಷ್ಟು ಸಲ ಹೇಳಿದರೂ ಅವನು ಕೇಳುವುದಿಲ್ಲ; ನೆಂಟರಿಗೆ ಸದಾ ನನ್ನ ತಪ್ಪುಗಳೇ ಕಾಣಿಸುತ್ತವೆ ಎಂದೆನಿಸುವುದು. ಈ ರೀತಿ ಯಾವ ವ್ಯಕ್ತಿಗಳ ಹಾಗೂ ಪ್ರಸಂಗಗಳ ಸಂದರ್ಭದಲ್ಲಿ ಪೂರ್ವಾಗ್ರಹದ ವಿಚಾರಗಳಿವೆ ಎಂಬುದನ್ನು ನಾವು ವ್ಯಾಪ್ತಿಯಲ್ಲಿ ಬರೆಯಬೇಕು.

ಪ್ರಕ್ರಿಯೆಗಾಗಿ ಸ್ವಭಾವದೋಷವನ್ನು ಆಯ್ಕೆ ಮಾಡುವುದು, ಅದರ ವ್ಯಾಪ್ತಿಯನ್ನು ತೆಗೆಯುವುದು ಈ ವಿಷಯವು ತಿಳಿಯಿತಲ್ಲವೇ ? ನಾವು ದೇವರಲ್ಲಿ ಪ್ರಾರ್ಥನೆ ಮಾಡಿ ವ್ಯಾಪ್ತಿಯನ್ನು ಬರೆಯಲು ಪ್ರಯತ್ನಿಸೋಣ. ಚಿಂತನೆ ಮಾಡಿ ಹೆಚ್ಚು ಹೆಚ್ಚು ಅಂಶಗಳನ್ನು ಬರೆಯಲು ಪ್ರಯತ್ನಿಸೋಣ. ಆದರೆ ಎಷ್ಟು ಅಂಶಗಳನ್ನು ಬರೆದಿದ್ದೇವೆ ಎಂಬುದಕ್ಕಿಂತ ನಾವು ಮನಸಾರೆ ಎಷ್ಟು ಪ್ರಯತ್ನಿಸುತ್ತಿದ್ದೇವೆ ಎಂಬುದಕ್ಕೆ ಮಹತ್ತ್ವ ಇದೆ.

ನಮ್ಮಲ್ಲಿರುವ 2 ಅಥವಾ 3 ತೀವ್ರ ಸ್ವಭಾವದೋಷಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ವ್ಯಾಪ್ತಿಯನ್ನು ತೆಗೆಯೋಣ. ವ್ಯಾಪ್ತಿಯನ್ನು ತೆಗೆಯಲು ನಾವು ಕುಟುಂಬದವರು, ಸಹೋದ್ಯೋಗಿಗಳು, ಸ್ನೇಹಿತರು ಇವರೆಲ್ಲರಿಂದಲೂ ಸಹಾಯ ಪಡೆಯಬಹುದು. ಮುಂದಿನ ಲೇಖನಗಳಲ್ಲಿ ನಾವು ಸ್ವಭಾವದೋಷಗಳನ್ನು ದೂರಗೊಳಿಸಲು ಸ್ವಯಂಸೂಚನಾ ಸತ್ರವನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳುವವರಿದ್ದೇವೆ.

Leave a Comment