ಆನ್‌ಲೈನ್ ಸತ್ಸಂಗ (20)

ಇ-೧ ಮತ್ತು ಇ-೨ ಸ್ವಯಂಸೂಚನಾ ಪದ್ಧತಿ

ಇದುವರೆಗೆ ನಾವು ‘ಅ-೧’, ‘ಅ-೨’, ಮತ್ತು ‘ಅ-೩’, ‘ಆ-೧’ ಮತ್ತು ‘ಆ-೨’ ಈ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಕೊನೆಯ ಎರಡು ಪದ್ಧತಿಗಳ ಬಗ್ಗೆ ಅಂದರೆ ಇ-೧ ಮತ್ತು ಇ-೨ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ಕಲಿಯೋಣ.

ಪ್ರತಿಯೊಬ್ಬರಲ್ಲಿಯೂ ಈಶ್ವರನ ಅಂಶವಿದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಅಂದರೆ ನಮ್ಮಲ್ಲಿರುವ ಸ್ವಭಾವದೋಷಗಳನ್ನು ಮತ್ತು ಅಹಂಕಾರವನ್ನು ನಷ್ಟಗೊಳಿಸಿ ನಮ್ಮಲ್ಲಿರುವ ಈಶ್ವರಿ ತತ್ತ್ವವನ್ನು ಪ್ರಕಟಗೊಳಿಸುವ ಪ್ರಕ್ರಿಯೆ. ಶಿಲ್ಪಿಯು ಮೂರ್ತಿಯನ್ನು ತಯಾರಿಸುವಾಗ ಶಿಲೆಯನ್ನು ಕೆತ್ತಿ, ಅದರಲ್ಲಿನ ಅನಾವಶ್ಯಕ ಭಾಗಗಳನ್ನು ತೆಗೆದು ಹಾಕುತ್ತಾನೆ ಮತ್ತು ಆ ಶಿಲೆಯಿಂದ ಸುಂದರವಾದ ಮೂರ್ತಿ ಸಾಕಾರಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿಯೂ ಹೀಗೆಯೇ ಇರುತ್ತದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯನ್ನು ಕೈಗೊಳ್ಳುವಾಗ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುವಾಗ ನಮ್ಮಲ್ಲಿ ಸಂಘರ್ಷವಾಗುತ್ತದೆ. ಆದರೂ ಶಿಲ್ಪಿಯಂತೆ ನಾವು ನಮ್ಮ ಸ್ವಭಾವದೋಷಗಳಿಗೂ, ಅಹಂಕಾರಕ್ಕೂ ಭಾವನಾರಹಿತವಾಗಿದ್ದುಕೊಂಡು ಮೂರನೆಯ ವ್ಯಕ್ತಿಯ ಭೂಮಿಕೆಯಲ್ಲಿದ್ದುಕೊಂಡು ಪೆಟ್ಟು ಕೊಡಬೇಕು. ಹೀಗೆ ಮಾಡಿದಾಗ ಶಿಲೆಯಿಂದ ದೇವತೆಯ ಮೂರ್ತಿಯು ಸಾಕಾರಗೊಳ್ಳುವಂತೆಯೇ ನಮ್ಮಲ್ಲಿ ದೇವತ್ವವು ಪ್ರಕಟವಾಗಲು ಅನುಕೂಲಕರವಾಗುತ್ತದೆ. ಪ್ರಕ್ರಿಯೆಯನ್ನು ಪ್ರಾಮಾಣಿಕವಾಗಿ ಮಾಡುವುದರಿಂದ ತಮ್ಮ ವ್ಯಾವಹಾರಿಕ, ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಜೀವನವು ಉತ್ತಮವಾಗುತ್ತಿದೆ ಎಂಬುದನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ.

ಬ್ರಹ್ಮಚೈತನ್ಯ ಗೋಂದವಲೇಕರ್ ಮಹಾರಾಜರು ಹೇಳುತ್ತಾರೆ ‘ತನ್ನನ್ನು ಸುಧಾರಿಸಿರಿ, ಅದರಂತೆ ಜಗತ್ತು ಸುಧಾರಿಸುವುದು’. ನಮ್ಮ ವೃತ್ತಿಯು ಬಹಿರ್ಮುಖವಾಗಿರುವುದರಿಂದ ‘ಇತರರು ಸುಧಾರಿಸಬೇಕು’ ಎಂಬ ಅಪೇಕ್ಷೆಯು ನಮ್ಮಲ್ಲಿರುತ್ತದೆ. ನಮ್ಮ ಮಾತನ್ನು ನೂರು ಶೇಕಡ ಕೇಳಿಸಿಕೊಳ್ಳುವ ವ್ಯಕ್ತಿಯೆಂದರೆ ನಾವೇ. ಆದುದರಿಂದ ನಾವು ಮೊದಲು ನಮ್ಮಲ್ಲಿಯೇ ಸುಧಾರಣೆ ತಂದುಕೊಳ್ಳಬೇಕು ಎಂಬುದನ್ನು ಗಮನದಲ್ಲಿಡಬೇಕು. ಇದರಿಂದ ವೃತ್ತಿಯು ಅಂತರ್ಮುಖವಾಗಲು ಸಹಾಯವಾಗುತ್ತದೆ. ವೃತ್ತಿಯು ಅಂತರ್ಮುಖವಾದರೆ ‘ಪರಿಸ್ಥಿತಿಯು ಅನುಕೂಲವಾಗಿರಲಿ ಅಥವಾ ಪ್ರತಿಕೂಲವಾಗಿರಲಿ ನನ್ನಿಂದ ಸದಾ ಯೋಗ್ಯ ಕರ್ಮವೇ ಆಗಬೇಕು ಮತ್ತು ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ಬರಬಾರದು’ ಎಂಬುದರ ಅರಿವಾಗಲು ಸಹಾಯವಾಗುತ್ತದೆ. ಮೊದಲು ನಾವು ನಮ್ಮನ್ನೇ ಸುಧಾರಿಸಬೇಕು ಎಂಬುದರ ಅರಿವು ಮೂಡುವುದರಿಂದ ನಾವು ನಮ್ಮ ತಪ್ಪುಗಳನ್ನು ಸ್ವೀಕರಿಸುತ್ತೇವೆ, ಇತರರಿಂದ ನಮ್ಮ ಅಪೇಕ್ಷೆಗಳು ಕೂಡ ಕಡಿಮೆಯಾಗುತ್ತವೆ. ಇದರಿಂದ ಅಂತರ್ಮುಖತೆಯು ಹೆಚ್ಚಾಗಿ ನಮ್ಮಲ್ಲಿ ಬೇಗನೆ ಸುಧಾರಣೆಯಾಗುವ ದೃಷ್ಟಿಯಿಂದ ಪ್ರಯತ್ನಗಳಾಗುತ್ತವೆ.

ಈಗ ನಾವು ಇ-೧ ಮತ್ತು ಇ-೨ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳೋಣ.

ಇ-೧ ಪದ್ಧತಿ :

ಇ-೧ ಪದ್ಧತಿಯು ನಮ್ಮ ಮನಸ್ಸಿನ ಮೇಲೆ ನಾಮಜಪದ ಸಂಸ್ಕಾರವನ್ನುಂಟು ಮಾಡುವುದಕ್ಕಾಗಿ ಇದೆ. ದಿನದಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ನಾವು ನಾಮಜಪವನ್ನು ಮಾಡಬಹುದು, ಆದರೆ ನಮಗೆ ನಾಮಜಪದ ನೆನಪೇ ಆಗುವುದಿಲ್ಲ. ಇಂತಹ ಸಮಯದಲ್ಲಿ ನಾವು ಇ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ಅಳವಡಿಸಬೇಕು.

ನಾಮಜಪವು ಮನುಷ್ಯನ ಪಾಪಗಳನ್ನು ನಾಶ ಮಾಡಿ ಆತನನ್ನು ಜನನ-ಮರಣಗಳ ಚಕ್ರದಿಂದ ಬಿಡಿಸುತ್ತದೆ. ನಾಮಜಪವು ನಿಜವಾದ ತಪಸ್ಸಾಗಿದೆ. ಅದರಿಂದ ಪ್ರಾರಬ್ಧವನ್ನು ಜಯಿಸಲೂ ಸಹಾಯವಾಗುತ್ತದೆ ಎಂದು ಹೇಳಲಾಗಿದೆ. ಅಷ್ಟಾಂಗ ಸಾಧನೆಯಲ್ಲಿಯೂ ನಾಮಜಪವು ಬಹಳ ಮಹತ್ವದ್ದಾಗಿದ್ದು, ಅದು ಸಾಧನೆಯ ಅಡಿಪಾಯವಾಗಿದೆ. ನಾಮಜಪವು ಸತತವಾಗಿ ನಡೆಯುತ್ತಿದ್ದರೆ ನಕಾರಾತ್ಮಕ ವಿಚಾರಗಳು ಅಥವಾ ಭಾವನೆಗಳು ಮನಸ್ಸಿಗೆ ಬರುವುದಿಲ್ಲ. ಆದ್ದರಿಂದ ನಾಮಜಪವು ಸತತವಾಗಿ ನಡೆಯುವುದಕ್ಕಾಗಿ ಇಂತಹ ಸೂಚನೆಯನ್ನು ಕೊಡಬಹುದು –

ಯಾವಾಗ ನಾನು ಯಾರೊಂದಿಗೂ ಸಂಭಾಷಣೆ ಮಾಡುತ್ತಿರುವುದಿಲ್ಲವೋ ಅಥವಾ ನನ್ನ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುತ್ತಿರುತ್ತವೆಯೋ ಆಗ ನನ್ನ ನಾಮಜಪವು ಪ್ರಾರಂಭವಾಗುವುದು.

ಈ ಸ್ವಯಂಸೂಚನೆಯನ್ನು ನೀವು ನಿಮ್ಮ ಪುಸ್ತಕದಲ್ಲಿ ಬರೆದುಕೊಳ್ಳಬಹುದು. ನಾಮಜಪವು ನಡೆಯುತ್ತಿರುವಾಗ ಚಿತ್ತದ ಮೇಲೆ ಬೇರೆ ವಿಷಯಗಳ ಹೊಸ ಸಂಸ್ಕಾರಗಳಾಗುವುದಿಲ್ಲ. ನಾಮಜಪದಿಂದ ಮನಸ್ಸು ಶಾಂತವಾಗುವುದರಿಂದ ಮಾನಸಿಕ ಒತ್ತಡದಿಂದ ಉಂಟಾಗುವ ಶಾರೀರಿಕ ವಿಕಾರಗಳು ನಿರ್ಮಾಣವಾಗುವುದಿಲ್ಲ. ನಾಮಜಪವು ಅಖಂಡವಾಗಿ ನಡೆಯುತ್ತಿದ್ದರೆ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದಿಲ್ಲ.

ಯಾವುದೇ ಸಂಗತಿಯ ಮಹತ್ವವು ನಮಗೆ ಮನವರಿಕೆಯಾದರೆ ಆ ಸಂಗತಿಯು ನಮ್ಮಿಂದ ಆಗುತ್ತದೆ. ವಿದ್ಯಾರ್ಥಿಗೆ ಓದುವುದರ ಮಹತ್ವವು ಮನವರಿಕೆಯಾದರೆ ಅವನು ಮನಸಾರೆ ಓದುವಂತೆಯೇ ಇದು ಕೂಡ. ೧೦೦ ರೂಪಾಯಿಯ ನೋಟುಗಳ ಕಂತೆಯನ್ನು ನಾವು ಎಷ್ಟು ಎಚ್ಚರಿಕೆಯಿಂದ ಎಣಿಸುತ್ತೇವೆ ಮತ್ತು ೧೦೮ ಮಣಿಗಳ ಮಾಲೆಯನ್ನುಪಯೋಗಿಸುವಾಗ ಎಷ್ಟು ಏಕಾಗ್ರತೆಯಿಂದ ಮಾಡುತ್ತೇವೆ ? ನಮಗೆ ಇವೆರಡರಲ್ಲಿನ ವ್ಯತ್ಯಾಸ ಗಮನಕ್ಕೆ ಬರುತ್ತಿದೆಯಲ್ಲವೇ? ನಾಮಜಪದ ಮಹತ್ವವು ಮನದಟ್ಟಾದರೆ ಆಗ ನಾವು ನಾಮಜಪವನ್ನು ಚೆನ್ನಾಗಿ ಮಾಡುತ್ತೇವೆ. ಈ ಸೂಚನೆಯು ಹೇಗಿರಬಹುದು ?

ಯಾವಾಗ ನಾನು ಯಾರೊಂದಿಗೂ ಸಂಭಾಷಣೆಯನ್ನು ಮಾಡುತ್ತಿರುವುದಿಲ್ಲವೋ ಅಥವಾ ನನ್ನ ಮನಸ್ಸಿನಲ್ಲಿ ಉಪಯುಕ್ತ ವಿಚಾರಗಳಿರುವುದಿಲ್ಲವೋ ತಕ್ಷಣ ನನಗೆ ಅದರ ಅರಿವಾಗುವುದು ಮತ್ತು ಅಂತರ್ಮನಸ್ಸಿನಲ್ಲಿರುವ ಅಯೋಗ್ಯ ಸಂಸ್ಕಾರಗಳನ್ನು ಅಳಿಸಿ ಹಾಕಲು ಹಾಗೂ ಯೋಗ್ಯ ಸಂಸ್ಕಾರಗಳ ಉಗಮವಾಗಲು ನಾಮಜಪವು ಸೂಕ್ಷ್ಮ ಸ್ತರದಲ್ಲಿ ಅತ್ಯಂತ ಪ್ರಭಾವಿಯಾಗಿದೆ ಎಂದು ಗಮನದಲ್ಲಿಟ್ಟು ನಾನು ಶ್ರೀ ಗುರುದೇವ ದತ್ತ ನಾಮಜಪವನ್ನು ಮಾಡುವೆನು.

ಇಲ್ಲಿ ದತ್ತ ಗುರುಗಳ ನಾಮಜಪದ ಬದಲು ನಾವು ಮಾಡುತ್ತಿರುವ ಜಪದ ಉಲ್ಲೇಖ ಮಾಡಬಹುದು.

ಮೊದಲನೆಯ ಸ್ವಯಂಸೂಚನೆಯು ನಾಮಜಪವು ಸತತವಾಗಿ ಆಗಬೇಕೆಂಬುದಕ್ಕಾಗಿ ಇದೆಯಾದರೆ ಎರಡನೆಯ ಸ್ವಯಂಸೂಚನೆಯು ನಾಮಜಪದ ಮಹತ್ವವನ್ನು ಬಿಂಬಿಸುವುದಕ್ಕಾಗಿ ಇದೆ.

ಇ-೨ ಪದ್ಧತಿ :

ಈಗ ನಾವು ಇ-೨ ಸ್ವಯಂಸೂಚನೆಯ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ. ಇ-೨ ಸ್ವಯಂಸೂಚನಾ ಪದ್ಧತಿ ಎಂದರೆ ‘ಶಿಕ್ಷಿಸುವ ಪದ್ಧತಿ’. ಅ-೧ ರಿಂದ ಇ-೧ ವರೆಗಿನ ಸ್ವಯಂಸೂಚನಾ ಪದ್ಧತಿಗಳಿಗನುಸಾರ ಸ್ವಯಂಸೂಚನೆಗಳನ್ನು ಕೊಟ್ಟ ನಂತರವೂ ನಮ್ಮಿಂದ ಪದೇ ಪದೇ ಅಯೋಗ್ಯ ಕೃತಿಯಾಗುತ್ತಿದ್ದರೆ ಅಥವಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೆ ಚಿವುಟಿಕೊಳ್ಳುವುದು ಮುಂತಾದ ಶಿಕ್ಷಾಪದ್ಧತಿಗಳನ್ನು ಅನುಸರಿಸಬೇಕು. ಶಾಸ್ತ್ರಗಳಲ್ಲಿ ದಂಡನೀತಿಯ ಮಹತ್ವವನ್ನು ಹೇಳಿದ್ದಾರೆ. ಇಂದು ಸಮಾಜದಲ್ಲಿ ಅಲ್ಪ-ಸ್ವಲ್ಪ ಏನು ಸರಿಯಾಗಿ ನಡೆಯುತ್ತಿದೆಯೋ ಅದು ಶಿಕ್ಷೆಯ ಭಯದಿಂದಲೇ ನಡೆಯುತ್ತಿದೆ. ಶಿಕ್ಷೆಯ ಭಯವಿಲ್ಲದಿದ್ದರೆ ಎಲ್ಲೆಡೆಯೂ ಅರಾಜಕತೆ ಉಂಟಾಗುತ್ತದೆ. ಈ ತತ್ತ್ವವು ಸಾಧನೆಗೂ ಅನ್ವಯಿಸುತ್ತದೆ. ನಮ್ಮ ಮನಸ್ಸಿನ ಮೇಲೆ ಜನ್ಮಜನ್ಮಗಳ ಅಯೋಗ್ಯ ಸಂಸ್ಕಾರಗಳು  ಇರುತ್ತವೆ. ಆದ್ದರಿಂದ ಸಾಧನೆಯ ಮಹತ್ವವು ಮನದಟ್ಟಾದರೂ ನಮ್ಮಿಂದ ಅಂತಹ ಪ್ರಯತ್ನಗಳಾಗುವುದಿಲ್ಲ. ಇಂತಹ ಸಮಯದಲ್ಲಿ ಅದನ್ನು ಬದಲಾಯಿಸುವುದಕ್ಕಾಗಿ ಶಿಕ್ಷಾಪದ್ಧತಿಯನ್ನು ಅನುಸರಿಸಬೇಕು.

ಉದಾಹರಣೆಗೆ, ಒಬ್ಬರಲ್ಲಿ ಮನೋರಾಜ್ಯದಲ್ಲಿ ವಿಹರಿಸುವುದು ಅಥವಾ ನಕಾರಾತ್ಮಕ ವಿಚಾರ ಮಾಡುವುದು ಎಂಬ ಸ್ವಭಾವದೊಷವಿದೆ ಎಂದು ಭಾವಿಸೋಣ. ಬಹಳ ಪ್ರಯತ್ನ ಪಟ್ಟರೂ ಆತನಲ್ಲಿ ಸುಧಾರಣೆಯಾಗದಿದ್ದರೆ ತನ್ನನ್ನು ತಾನು ಚಿವುಟಿಕೊಳ್ಳುವ ಶಿಕ್ಷಾಪದ್ಧತಿಯನ್ನು ಅವಲಂಬಿಸಬಹುದು. ಇದನ್ನು ಮಾಡಲು ಸಾಧ್ಯವಾಗಬೇಕೆಂದು ಈ ವಿಧವಾಗಿ ಸ್ವಯಂಸೂಚನೆಯನ್ನು ಕೊಡಬಹುದು.

ಯಾವಾಗ ನಾನು ಮನೋರಾಜ್ಯದಲ್ಲಿ ವಿಹರಿಸುತ್ತಿರುವೆನೋ ಆಗ ನನಗೆ ಅದರ ಅರಿವಾಗುವುದು ಮತ್ತು ನಾನು ನನ್ನನ್ನೇ ಜೋರಾಗಿ ಚಿವುಟಿಕೊಳ್ಳುವೆನು.

ಚಿವುಟಿಕೊಳ್ಳುವುದು ಪ್ರಭಾವಿಯಾಗದಿದ್ದರೆ ಪ್ಯಾಂಟ್ ನ ಬೆಲ್ಟ್ ಅನ್ನು ಬಿಗಿ ಮಾಡಿಕೊಳ್ಳುವುದು ಅಥವಾ ಕೆಲವು ಸಮಯದ ಮಟ್ಟಿಗೆ ಕಾಲಿಗೆ ಗಟ್ಟಿಯಾಗಿ ದಾರವನ್ನು ಕಟ್ಟಿಕೊಳ್ಳುವುದು ಈ ವಿಧಗಳಿಂದ ವೇದನೆಯನ್ನು ನಿರ್ಮಿಸಿ ಹೆಚ್ಚಿನ ಸಮಯ ಶಿಕ್ಷೆ ವಿಧಿಸಬಹುದು. (ಇದರಿಂದ ಕೈ-ಕಾಲುಗಳ ರಕ್ತಪರಿಚಲನೆಯಲ್ಲಿ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು)

ಯಾವ ವಿಚಾರಗಳಿಂದ ಅಥವಾ ಪ್ರತಿಕ್ರಿಯೆಗಳಿಂದ ವ್ಯಕ್ತಿಯು ವಾಸ್ತವದಿಂದ ದೂರ ಹೋಗುತ್ತಾನೆಯೋ ಆ ವಿಚಾರಗಳನ್ನು ಅಥವಾ ಪ್ರತಿಕ್ರಿಯೆಗಳನ್ನು ಸ್ವಯಂಸೂಚನೆಯಲ್ಲಿ ಉಲ್ಲೇಖ ಮಾಡಿದರೆ ಸ್ವಭಾವದೋಷಗಳು ಬೇಗನೇ ದೂರವಾಗಲು ಸಹಾಯವಾಗುತ್ತದೆ. ಉದಾ: ನಾನು ನಕಾರಾತ್ಮಕ ವಿಚಾರ ಮಾಡುತ್ತಿದ್ದರೆ ನಾನು ನನ್ನನ್ನು ಚಿವುಟಿಕೊಳ್ಳುವೆನು ಎಂದು ಸೌಮ್ಯವಾಗಿ ಹೇಳುವ ಬದಲು ನಮ್ಮ ಮನಸ್ಸಿನಲ್ಲಿ ಯಾವ ವಿಚಾರಗಳು ಬರುತ್ತವೆಯೋ ಆ ವಿಚಾರಗಳನ್ನು ನಾವು ಸ್ವಯಂಸೂಚನೆಯಲ್ಲಿ ಉಲ್ಲೇಖ ಮಾಡಬಹುದು. ಉದಾ: ನನ್ನಿಂದ ಏನೂ ಆಗುವುದಿಲ್ಲ, ನನಗೆ ಯಾವಾಗಲೂ ಕೆಟ್ಟದ್ದೇ ಆಗುತ್ತದೆ ಎಂದು ವಿಚಾರ ಮಾಡುತ್ತಿದ್ದರೆ ನನಗೆ ಅದರ ಅರಿವಾಗುವುದು ಮತ್ತು ನಾನು ನನ್ನನ್ನು ಜೋರಾಗಿ ಚಿವುಟಿಕೊಳ್ಳುವೆನು. ಈ ರೀತಿ ವ್ಯಕ್ತಿಯು ಅಂತಹ ವಿಚಾರಗಳಿಂದ ಬೇಗನೇ ವಿಮುಖನಾಗುತ್ತಾನೆ.

Leave a Comment