ಆನ್‌ಲೈನ್ ಸತ್ಸಂಗ (18)

ಆ-೧ ಸ್ವಯಂಸೂಚನಾ ಪದ್ಧತಿ

ಇದುವರೆಗೆ ನಾವು ಅ-೧, ಅ-೨, ಮತ್ತು ಅ-೩ ಈ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಅದರ ಮುಂದಿನ ಸೂಚನಾಪದ್ಧತಿಯ ಬಗ್ಗೆ ಎಂದರೆ ಆ-೧ ಸ್ವಯಂಸೂಚನಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ.

ಕೆಲವೊಮ್ಮೆ ಇತರರ ಅಯೋಗ್ಯ ವರ್ತನೆಯಿಂದ ನಮಗೆ ಒತ್ತಡವುಂಟಾಗುತ್ತದೆ ಅಥವಾ ಕೆಲಸದಲ್ಲಿ ತಪ್ಪುಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಎದುರಿನ ವ್ಯಕ್ತಿಯ ವರ್ತನೆಯನ್ನು ಬದಲಾಯಿಸುವುದು ಮತ್ತು ಅವರಲ್ಲಿ ಯೋಗ್ಯ ವರ್ತನೆಯ ಅಭ್ಯಾಸ ಮಾಡಿಸುವುದು ಸಾಧ್ಯವಿದ್ದರೆ ಆ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಟ್ಟು ನಮ್ಮ ಮನಸ್ಸಿಗಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ಇತರರ ದೋಷಗಳನ್ನು ದೂರಗೊಳಿಸುವುದು ನಮ್ಮಿಂದ ಸಾಧ್ಯವಿದ್ದರೆ ಅಥವಾ ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮಿಂದ ಸಾಧ್ಯವಿದ್ದರೆ ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸುತ್ತಾರೆ.

ಪೋಷಕರು ತಮ್ಮ ಮಕ್ಕಳ ಸಂದರ್ಭದಲ್ಲಿ, ಶಿಕ್ಷಕರು ವಿದ್ಯಾರ್ಥಿಗಳ ಸಂದರ್ಭದಲ್ಲಿ, ಮಾಲೀಕರು ಅಥವಾ ಅಧಿಕಾರಿಗಳು ಸಿಬ್ಬಂದಿಗಳ ಸಂದರ್ಭದಲ್ಲಿ ಈ ಪದ್ಧತಿಯನ್ನು ಉಪಯೋಗಿಸಬಹುದು. ನಮ್ಮ ಕೈಕೆಳಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಸ್ವಭಾವದೋಷಗಳನ್ನು ಬದಲಾಯಿಸಲು ಸಾಧ್ಯವಿದ್ದರೆ ಇಂತಹ ವ್ಯಕ್ತಿಗಳಿಗೆ ಅವರ ಸ್ವಭಾವದೋಷಗಳ ಬಗ್ಗೆ ಮತ್ತೆ ಮತ್ತೆ ಹೇಳುವುದು, ಮತ್ತೆ ಮತ್ತೆ ಶಿಕ್ಷೆ ಕೊಡುವುದು ಈ ವಿಧಗಳಿಂದ ಅವರಲ್ಲಿನ ಸ್ವಭಾವದೋಷಗಳನ್ನು ದೂರಗೊಳಿಸಬಹುದು. ಆದರೆ ಇದನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿ ಇತರರ ಅಯೋಗ್ಯ ವರ್ತನೆ ಅಥವಾ ಸ್ವಭಾವದೋಷವು ಬದಲಾಗಬೇಕು ಎಂಬ ಸದ್ಭಾವನೆಯಿರಬೇಕು, ಅವರ ಬಗ್ಗೆ ಅಪೇಕ್ಷೆ ಅಥವಾ ಕೋಪ ಬೇಡ.

ಆ-೧ ಸ್ವಯಂಸೂಚನಾ ಪದ್ಧತಿಯ ಕೆಲವು ಉದಾಹರಣೆಗಳು : ನಾವು ಕೆಲವು ಉದಾಹರಣೆಗಳ ಮೂಲಕ ಈ ಸ್ವಯಂಸೂಚನಾ ಪದ್ಧತಿಯನ್ನು ತಿಳಿದುಕೊಳ್ಳೋಣ.

ಪ್ರಸಂಗ ೧ :

ಈ ಪ್ರಸಂಗದಲ್ಲಿ ‘ಆ-೧’ ಪದ್ಧತಿಯಿಂದ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬಹುದು. ಈ ಸ್ವಯಂಸೂಚನೆ ಹೇಗಿರಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ನಿಖಿಲನು ಆಟಾಡುವಾಗ ಅಜಿತನನ್ನು ಹೊಡೆದುದರಿಂದ ಅವನ ತಾಯಿ ನನ್ನಲ್ಲಿ ನಿಖಿಲನ ಬಗ್ಗೆ ದೂರು ಹೇಳಿದಾಗ ನಿಖಿಲನ ವರ್ತನೆ ಅಯೋಗ್ಯವಾಗಿದ್ದು ಅವನಲ್ಲಿ ಸುಧಾರಣೆಯಾಗಬೇಕೆಂದು ಅವರು ಈ ರೀತಿ ಹೇಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬರುವುದು ಮತ್ತು ನಾನು ನಿಖಿಲನಿಗೆ ಅವನ ಅಯೋಗ್ಯ ವರ್ತನೆಯ ಅರಿವು ಮಾಡಿಕೊಡಲು ಬುದ್ಧಿ ಹೇಳುವುದು ಅಥವಾ ಶಿಕ್ಷೆ ಕೊಡುವುದು ಮುಂತಾದ ಪರ್ಯಾಯಗಳ ಬಗ್ಗೆ ವಿಚಾರ ಮಾಡುವೆನು.

ಅಭ್ಯಾಸ : ಒಬ್ಬ ತಾಯಿಯಾಗಿ ನಿಖಿಲನ ತಾಯಿಯು ತನ್ನ ಮಗನ ವರ್ತನೆಯು ಯೋಗ್ಯವಾಗಿರಬೇಕು ಎಂಬುದಕ್ಕಾಗಿ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ. ‘ಅಜಿತ ತಾಯಿಯು ಯಾವಾಗಲೂ ಅವನನ್ನು ದೂರುತ್ತಾಳೆ, ಅವರಿಗೆ ಯಾವಾಗಲೂ ನನ್ನ ಮಗನ ತಪ್ಪುಗಳೇ ಕಾಣಿಸುತ್ತವೆ’ ಎಂಬಂತೆ ವಿಚಾರಪ್ರಕ್ರಿಯೆ ಆದರೆ ಅದು ಬಹಿರ್ಮುಖತೆ ಆಯಿತು ಅಥವಾ ‘ನನ್ನ ಮಗನಿಗೆ ಮಕ್ಕಳ ಜೊತೆ ಹೊಂದಿಕೊಂಡು ಆಟಾಡಲು ಬರುವುದೇ ಇಲ್ಲ, ಅವನ ಆಟವನ್ನೇ ನಿಲ್ಲಿಸಿಬಿಡಬೇಕು’ ಈ ರೀತಿ ವಿಚಾರ ಮಾಡುವುದೂ ಸರಿಯಲ್ಲ. ತನ್ನ ಬಗ್ಗೆ ಅಥವಾ ತನ್ನವರ ಬಗ್ಗೆ ಯಾರಾದರೂ ದೂರು ಹೇಳುತ್ತಿದ್ದರೆ ಮೊದಲು ಅದನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು ಮತ್ತು ಸಕಾರಾತ್ಮಕವಾಗಿದ್ದು ಪ್ರಯತ್ನಿಸಬೇಕು.

ಈ ಸೂಚನೆ ಹೇಗೆ ಕಾರ್ಯ ಮಾಡುತ್ತದೆ ಎಂದರೆ – ತನ್ನ ಮಗನ ಬಗ್ಗೆ ಯಾರಾದರೂ ದೂರು ಹೇಳಿದರೆ ವ್ಯಕ್ತಿಯು ತನ್ನ ಮಗನನ್ನು ಅಥವಾ ದೂರು ಹೇಳುವ ವ್ಯಕ್ತಿಯನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸುವ ಬದಲು ಸಕಾರಾತ್ಮಕ ದೃಷ್ಟೀಕೋನವನ್ನು ಇಟ್ಟುಕೊಂಡು ಆ ಪ್ರಸಂಗದಲ್ಲಿ ಏನು ಮಾಡಬೇಕು ಹಾಗೂ ಇಂತಹ ತಪ್ಪು ಮತ್ತೆ ಆಗಬಾರದೆಂಬುದಕ್ಕಾಗಿ ಪರಿಹಾರೋಪಾಯವನ್ನು ಕಂಡುಕೊಳ್ಳುವಂತೆ ಇದು ಮನಸ್ಸಿಗೆ ದಿಶೆ ತೋರಿಸುತ್ತದೆ.

ಪ್ರಸಂಗ ೨ :

ಈಗ ನಾವು ಮತ್ತೊಂದು ಪ್ರಸಂಗವನ್ನು ನೋಡೋಣ. ಪರೀಕ್ಷೆ ಸಮೀಪಿಸಿರುವಾಗಲೂ ಸೌ. ಲತಾ ಅವರ ಮಗ ಸಾಗರ್ ಓದುವ ಬದಲು ಎಲ್ಲ ಸಮಯವನ್ನೂ ಅಟಾಡುವುದರಲ್ಲಿ ವ್ಯರ್ಥ ಮಾಡಿದ ಎಂದು ಭಾವಿಸೋಣ. ಇದರಿಂದ ಸೌ ಲತಾ ಇವರು ಕಿರಿಕಿರಿ ಮಾಡಿಕೊಂಡು ಆತನಿಗೆ ಬಹಳ ಬೈದರು ಎಂಬುದು ಪ್ರಸಂಗ.

ಸ್ವಯಂಸೂಚನೆ : ಸಾಗರನು ಓದುವ ಬದಲು ದಿನವಿಡೀ ಆಟಾಡುವುದರಲ್ಲಿಯೇ ಸಮಯ ವ್ಯರ್ಥವಾಗಿ ಕಳೆಯುತ್ತಿದ್ದಾಗ, ಅವನು ಓದುವ ಕಡೆ ದುರ್ಲಕ್ಷ ಮಾಡಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಅಥವಾ ವಿಫಲನಾಗುವನು ಎಂಬುದರ ಅರಿವು ಮಾಡಿಕೊಟ್ಟು ಓದುವುದರ ಮಹತ್ವವನ್ನು ಅವನ ಮನಸ್ಸಿನ ಮೇಲೆ ಬಿಂಬಿಸಲು ಪ್ರಯತ್ನಿಸುವೆನು.

ಅಭ್ಯಾಸ : ಈ ಪ್ರಸಂಗದಲ್ಲಿ ಸೌ. ಲತಾ ಇವರು ಸ್ಥಿರವಾಗಿದ್ದು ಪ್ರಯತ್ನ ಮಾಡುವುದು ಅಪೇಕ್ಷಿತವಿದೆ. ಮಗನು ತಪ್ಪು ಮಾಡುತ್ತಾನೆ ಎಂದು ತಾಯಿಯು ಕಿರಿಕಿರಿ ಮಾಡಿಕೊಂಡರೆ ಪರಿಸ್ಥಿತಿಯು ಬದಲಾಗಿಯೇ ತೀರುವುದು ಎಂದೇನಿಲ್ಲ. ಆದರೆ ಸೌ. ಲತಾ ಅವರ ಸಾಧನೆ ಮಾತ್ರ ಖಂಡಿತ ಆಗಲಾರದು.

ಪ್ರಸಂಗ ೩ :

ಈಗ ನಾವು ಮತ್ತೊಂದು ಪ್ರಸಂಗವನ್ನು ಅಭ್ಯಾಸ ಮಾಡೋಣ. ಶ್ರೀ ಕರುಣಾಕರ ಇವರು ಮಾಧ್ಯಮಿಕ ಶಾಲಾ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳು ಅವರ ತರಗತಿಗೆ ತಡವಾಗಿ ಬರುತ್ತಿದ್ದರೆಂದು ಅವರು ವಿದ್ಯಾರ್ಥಿಗಳನ್ನು ಬೈದರು ಮತ್ತು ಅವರಿಗೆ ಈ ಬಗ್ಗೆ ದಿನವಿಡೀ ಕೋಪವಿತ್ತು.

ಇದಕ್ಕೆ ಸ್ವಯಂಸೂಚನೆಯು ಹೇಗಿರಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ಯಾವಾಗ ವಿದ್ಯಾರ್ಥಿಗಳು ತರಗತಿಗೆ ತಡವಾಗಿ ಬರುವರೋ, ಆಗ ನಾನು ಅವರಿಗೆ ಸಂಯಮದಿಂದ ಶಿಸ್ತು ಕಲಿಸಬೇಕು ಎಂಬುದರ ಅರಿವಾಗುವುದು ಮತ್ತು ನಾನು ವಿದ್ಯಾರ್ಥಿಗಳಿಗೆ ತಡವಾಗಿ ಬರುವುದರಿಂದ ಆಗುವ ಹಾನಿಯ ಬಗ್ಗೆ ಅರಿವು ಮಾಡಿಕೊಡುವೆನು.

ಅಭ್ಯಾಸ : ಈ ಪ್ರಸಂಗದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವ ಆವಶ್ಯಕತೆಯಿದೆ. ಹಾಗೂ ಇತರರ ಅಯೋಗ್ಯ ವರ್ತನೆಯಿಂದ ನಮಗೆ ತೊಂದರೆಯಾಗುತ್ತಿದ್ದರೆ ಹಾಗಾಗಬಾರದು ಎಂಬುದಕ್ಕಾಗಿ ತಾನೂ ಯೋಗ್ಯ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಅಪೇಕ್ಷಿತವಿದೆ. ಇತರರಲ್ಲಿ ಉತ್ತಮ ಪರಿವರ್ತನೆಯಾಗಬೇಕು ಎಂಬುದಕ್ಕಾಗಿ ನಾವು ಸೂಚನೆಯನ್ನು ಕೊಡುತ್ತಿದ್ದರೂ ಈ ಪ್ರಕ್ರಿಯೆಯನ್ನು ಮಾಡುತ್ತಿರುವಾಗ ನಮ್ಮಲ್ಲಿ ಕಿರಿಕಿರಿ ಹೆಚ್ಚಾಗುತ್ತಿಲ್ಲವಲ್ಲ, ಕೋಪ ಹೆಚ್ಚಾಗುತ್ತಿಲ್ಲವಲ್ಲ ಎಂಬುದರ ಕಡೆಯೂ ಗಮನವಿರಬೇಕು. ಪರಿಸ್ಥಿತಿಯನ್ನು ಸ್ವೀಕರಿಸದಿರುವ ಕಾರಣದಿಂದಲೇ ನಮ್ಮಲ್ಲಿ ಬಹಳಷ್ಟು ಬಾರಿ ಸಂಘರ್ಷವು ಆಗುತ್ತಿರುತ್ತದೆ. ಪರಿಸ್ಥಿತಿಗೆ ದೋಷ ಕೊಡುವುದರಲ್ಲಿ ನಮ್ಮ ಶಕ್ತಿಯನ್ನು ಕಳೆದುಕೊಳ್ಳುವುದರ ಬದಲು ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಸ್ವೀಕರಿಸಿ ಅದರಲ್ಲಿ ಯಾವ ಒಳಿತನ್ನು ಮಾಡಬಹುದು ಎಂಬುದರ ವಿಚಾರ ಮಾಡುವ ಪ್ರಕ್ರಿಯೆ ಇದಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಗದಿತ ಸಮಯಕ್ಕೂ ೫ ನಿಮಿಷ ಮೊದಲೇ ವರ್ಗದಲ್ಲಿ ಉಪಸ್ಥಿತನಾಗಿರಬೇಕು ಎಂಬ ಅಪೇಕ್ಷೆಯು ತಾತ್ತ್ವಿಕವಾಗಿ ಸರಿಯೇ ಇದ್ದರೂ ಕೆಲವರಿಂದ ಅದು ಸಾಧ್ಯವಾಗದಿದ್ದರೆ ಶ್ರೀ ಕರುಣಾಕರ ಅವರಿಗೆ ಕಿರಿಕಿರಿ ಆಗುತ್ತಿದ್ದರೆ ಅವರಿಗೆ ಬೇರೆಯವರಿಂದ ಇರುವ ಈ ಅಪೇಕ್ಷೆಗಳು ಅತಿಯಾದ ಅಪೇಕ್ಷೆಗಳಾಗಿವೆ ಮತ್ತು ಇತರರು ಅವನ್ನು ಪೂರೈಸಬೇಕೆಂಬುದು ಅವರ ಅಟ್ಟಹಾಸವಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ವರ್ಗದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಆದರ್ಶ ರೀತಿಯಲ್ಲಿ ವರ್ತಿಸುತ್ತಾನೆ ಅಥವಾ ವರ್ತಿಸಲು ಸಾಧ್ಯವಿದೆ ಎಂದೇನಿಲ್ಲ. ಆದ್ದರಿಂದ ಒಂದು ನಿರ್ದಿಷ್ಟ ಹಂತದ ನಂತರ ಪರಿಸ್ಥಿತಿಯನ್ನು ಇದ್ದ ಹಾಗೆಯೇ ಮನಃಪೂರ್ವಕವಾಗಿ ಸ್ವೀಕರಿಸಿ ಮುಂದೆ ಹೋಗುವ ಆವಶ್ಯಕತೆಯಿರುತ್ತದೆ. ನಾವು ಯಾವ ಹಂತದಲ್ಲಿದ್ದೇವೆ ಎಂಬುದರ ಅಭ್ಯಾಸ ಮಾಡಿ ನಾವು ಮುಂದು ಮುಂದಿನ ಹಂತದ ಸೂಚನೆಯನ್ನು ಮನಸ್ಸಿಗೆ ಕೊಡಬೇಕಾಗಿರುತ್ತದೆ.

ಪ್ರಸಂಗ ೪ :

ಸೌ. ಆಶಾ ಇವರ ಮಗಳು ಆರತಿಯು ಹೊದಿಕೆಯನ್ನು ಸರಿಯಾಗಿ ಮಡಚಿಡಲಿಲ್ಲ. ಇದರಿಂದ ಅವರಿಗೆ ಕಿರಿಕಿರಿಯಾಯಿತು.

ಈ ಪ್ರಸಂಗಕ್ಕೆ ಆ-೧ ಪ್ರಕಾರ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ. ನಂತರ ಮುಂದೆ ಓದಿ.

ಈ ಪ್ರಸಂಗದಲ್ಲಿ ಯೋಗ್ಯ ಸೂಚನೆ ಹೇಗಿರಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ಆರತಿಯು ಹೊದಿಕೆಯನ್ನು ಸರಿಯಾಗಿ ಮಡಚದಿದ್ದಾಗ ಹಾಗೆ ಮಾಡಿದರೆ ಅದು ಚೆನ್ನಾಗಿ ಕಾಣುವುದಿಲ್ಲ ಎಂಬುದರ ಅರಿವನ್ನು ಅವಳಿಗೆ ಮಾಡಿಕೊಟ್ಟು ಯೋಗ್ಯ ರೀತಿಯಲ್ಲಿ ಹೊದಿಕೆಯನ್ನು ಮಡಚಿ ಇಡುವಂತೆ ಅವಳ ಮನವೊಲಿಸುವೆನು.

ಅಭ್ಯಾಸ : ಪ್ರಾರಂಭದ ಹಂತದಲ್ಲಿ ಏನು ಮಾಡಬೇಕೆಂದರೆ ತಾಯಿಯು ಮಗಳಿಗೆ ಕಲಿಸುವ ದೃಷ್ಟಿಯಿಂದ ಹೊದಿಕೆಯನ್ನು ಮಡಚುವ ಯೋಗ್ಯ ವಿಧಾನವನ್ನು ಕಲಿಸಬೇಕು. ನಂತರದ ಹಂತದಲ್ಲಿ ಮಗಳು ಅದನ್ನು ಸರಿಯಾಗಿ ಮಾಡಲು ಅವಳಿಗೆ ಸಮಯವನ್ನೂ ಕೊಡಬೇಕು. ‘ಇವತ್ತು ಕಲಿಸಿದೆ ಮತ್ತು ನಾಳೆಯಿಂದ ಅವಳು ಸರಿಯಾಗಿ ಮಡಚಿಡುವಳು’, ಎಂದು ಸಾಧ್ಯವಿಲ್ಲ. ಆದ್ದರಿಂದ ಮಧ್ಯದ ಸಮಯದಲ್ಲಿ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಮೂಡಿ ಬರುತ್ತಿದ್ದಲ್ಲಿ ಸಂಯಮವನ್ನು ಹೆಚ್ಚಿಸುವ ದೃಷ್ಟಿಯಿಂದ ಮೇಲಿನ ಸೂಚನೆಯನ್ನು ಕೊಡಬೇಕು. ಅಪೇಕ್ಷಿತ ಸಮಯವನ್ನು ನೀಡಿದ ನಂತರವೂ ಮಗಳು ಯೋಗ್ಯ ರೀತಿಯಲ್ಲಿ ಮಾಡದಿದ್ದರೆ ಅವಳಿಗೆ ಶಿಸ್ತು ಕಲಿಸುವ ದೃಷ್ಟಿಯಿಂದ ಬುದ್ಧಿ ಹೇಳುವುದು, ಚಿಕ್ಕ-ಚಿಕ್ಕ ಶಿಕ್ಷೆ ಕೊಡುವುದು ಇಂತಹ ಪ್ರಯತ್ನಗಳನ್ನು ಮಾಡುವ ಬಗ್ಗೆ ಸೂಚನೆಯನ್ನು ಕೊಡಬಹುದು. ಇದಾದ ನಂತರವೂ ಮಗಳಲ್ಲಿ ಬದಲಾವಣೆಯಾಗದಿದ್ದರೆ ಕೊನೆಯ ಹಂತದಲ್ಲಿ ‘ಪ್ರತಿಯೊಬ್ಬನೂ ಎಲ್ಲ ಕೆಲಸಗಳನ್ನೂ ಆದರ್ಶ ರೀತಿಯಲ್ಲಿ ಮಾಡಬಲ್ಲನು ಎಂದೇನಿಲ್ಲ’ ಎಂಬುದನ್ನು ಸ್ವೀಕರಿಸಿ ಮುಂದಿನ ಪರಿಹಾರವನ್ನು ಕಂಡುಕೊಳ್ಳಬೇಕು. ಅಂದರೆ ಪರಿಪೂರ್ಣತೆಯೆ ಬಗ್ಗೆ ಅಪೇಕ್ಷೆ ಮಾಡದಿರುವುದು ಅಥವಾ ಹೊದಿಕೆಯನ್ನು ಮಡಚಿದ್ದು ಸ್ವಲ್ಪ ಸರಿಯಿಲ್ಲದಿದ್ದರೆ ನಂತರ ತಾನೇ ಅದನ್ನು ಸರಿ ಮಾಡುವುದು ಈ ವಿಧದ ಪರಿಹಾರಗಳನ್ನು ಕಂಡುಕೊಳ್ಳಬಹುದು.

Leave a Comment