ಆನ್‌ಲೈನ್ ಸತ್ಸಂಗ (17)

‘ಅ-೧’, ‘ಅ-೨’ ಮತ್ತು ‘ಅ-೩’ ಸ್ವಯಂಸೂಚನಾ ಪದ್ಧತಿಗಳ ಅಭ್ಯಾಸ

ನಾವು ಈಗಾಗಲೇ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯಯಲ್ಲಿನ ಸ್ವಯಂಸೂಚನಾ ಪದ್ಧತಿ ‘ಅ-೧’, ‘ಅ-೨’ ಮತ್ತು ‘ಅ-೩’ ಪದ್ಧತಿಗಳನ್ನು ನೋಡಿದ್ದೇವೆ. ಹಾಗೂ ಸ್ವಯಂಸೂಚನೆಗಳನ್ನು ತಯಾರಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ತಿಳಿದುಕೊಂಡಿದ್ದೇವೆ. ಸ್ವಯಂಸೂಚನೆಗಳನ್ನು ತಯಾರಿಸುವುದಕ್ಕೆ ಇನ್ನೂ ಎರಡು ಪದ್ಧತಿಗಳಿವೆ. ಆದರೆ ಇದುವರೆಗ ಕಲಿತ ವಿಷಯಗಳು ನಮ್ಮ ಮನಸ್ಸಿನಲ್ಲಿ ದೃಢವಾಗುವ ದೃಷ್ಟಿಯಿಂದ ಪುನಃ ಒಮ್ಮೆ ‘ಅ-೧’, ‘ಅ-೨’ ಮತ್ತು ‘ಅ-೩’ ಈ ಸ್ವಯಂಸೂಚನಾ ಪದ್ಧತಿಗಳ ಅಭ್ಯಾಸ ಮಾಡಿಕೊಳ್ಳೋಣ.

ನಮ್ಮಿಂದಾಗುವ ಅಯೋಗ್ಯ ಕೃತಿಗಳು, ನಮ್ಮ ಅಯೋಗ್ಯ ವಿಚಾರಗಳು, ಭಾವನೆಗಳು ಇವನ್ನು ದೂರ ಮಾಡುವುದಕ್ಕಾಗಿ ಅ-೧ ಪದ್ಧತಿಯಿಂದ ಸೂಚನೆಯನ್ನು ತಯಾರಿಸಲಾಗುತ್ತದೆ. ಮನಸ್ಸಿನಲ್ಲಿ ಮೂಡಿ ಬರುವ ಅಥವಾ ವ್ಯಕ್ತವಾಗುವ, ಅಲ್ಪಕಾಲ ಉಳಿಯುವ ಪ್ರತಿಕ್ರಿಯೆಗಳಿಗಾಗಿ ಅ-೨ ಪದ್ಧತಿಯಿಂದ ಸ್ವಯಂಸೂಚನೆಗಳನ್ನು ತಯಾರಿಸಲಾಗುತ್ತದೆ. ಭಯ, ಕೀಳರಿಮೆ, ಆತ್ಮವಿಶ್ವಾಸದ ಅಭಾವ ಇವುಗಳಂತಹ ಸ್ವಭಾವದೋಷಗಳನ್ನು ದೂರಗೊಳಿಸುವುದಕ್ಕಾಗಿ ಅ-೩ ಪದ್ಧತಿಯಿಂದ ಸ್ವಯಂಸೂಚನೆಗಳನ್ನು ತಯಾರಿಸಲಾಗುತ್ತದೆ. ಈಗ ನಾವು ಪ್ರತ್ಯಕ್ಷ ಉದಾಹರಣೆಗಳನ್ನು ನೋಡೋಣ.

ಅ. ಸ್ವಯಂಸೂಚನೆಗಳನ್ನು ತಯಾರಿಸುವ ಅಭ್ಯಾಸ ಮಾಡುವುದಕ್ಕಾಗಿ ಕೆಲವು ಉದಾಹರಣೆಗಳು

ಪ್ರಸಂಗ : ಸೌ. ಸೀಮಾ ಇವರಿಗೆ ರಾತ್ರಿ ಊಟ ಆದ ನಂತರ ಅಡುಗೆಮನೆಯ ಕಟ್ಟೆಯ ಸ್ವಚ್ಛತೆ ಮಾಡಲು ಬೇಸರವೆನಿಸುತ್ತದೆ. ಆದ್ದರಿಂದ ಅವರು ಊಟದ ಪದಾರ್ಥಗಳನ್ನು ಕಟ್ಟೆಯ ಮೇಲೆ ಹಾಗೆಯೇ ಇಡುತ್ತಾರೆ. ಆದ್ದರಿಂದ ಆ ಪದಾರ್ಥಗಳು ಹಾಗೆಯೇ ಇರುತ್ತವೆ ಮತ್ತು ಕೆಲವೊಮ್ಮೆ ಹಾಳಾಗುತ್ತವೆ.

ಈಗ ನೀವು ಪ್ರಸಂಗದ ಅಧ್ಯಯನ ಮಾಡಿ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ ನಂತರ ಮುಂದೆ ಓದಿ.

ಈ ತಪ್ಪು ಕೃತಿಯ ಮಟ್ಟದ ತಪ್ಪಾಗಿರುವುದರಿಂದ ನಾವು ಅ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಯಾರಿಸಬೇಕಾಗಿದೆ. ಈ ತಪ್ಪು ನಮ್ಮಿಂದ ಆಲಸ್ಯ ಅಥವಾ ರಿಯಾಯಿತಿ ತೆಗೆದುಕೊಳ್ಳುವುದು ಎಂಬ ಸ್ವಭಾವದೋಷಗಳಿಂದ ಆಗುತ್ತಿರಬಹುದು. ಇದರಲ್ಲಿ ಯೋಗ್ಯ ಸ್ವಯಂಸೂಚನೆ ಯಾವುದು ಇರಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ‘ಯಾವಾಗ ರಾತ್ರಿ ಊಟವಾದ ನಂತರ ಅಡುಗೆಮನೆ ಕಟ್ಟೆಯನ್ನು ಸ್ವಚ್ಚ ಮಾಡಲು ನಾನು ಬೇಸರ ಪಡುತ್ತಿರುವೆನೋ ಆಗ ನನಗೆ ಕಟ್ಟೆಯನ್ನು ಸ್ವಚ್ಚ ಮಾಡದೇ ಹಾಗೆಯೇ ಇಟ್ಟರೆ ಅದು ಚೆನ್ನಾಗಿ ಕಾಣುವುದಿಲ್ಲ ಮತ್ತು ಪದಾರ್ಥಗಳು ಹಾಳಾಗಬಹುದು ಎಂಬುದರ ಅರಿವಾಗುವುದು ಮತ್ತು ನಾನು ನಾಮಜಪ ಮಾಡುತ್ತಾ ಕಟ್ಟೆಯನ್ನು ಸ್ವಚ್ಚ ಮಾಡುವೆನು.’

ಕಳೆದ ಲೇಖನದಲ್ಲಿ ನಾವು ಸ್ವಯಂಸೂಚನೆಯನ್ನು ತೆಗೆದುಕೊಳ್ಳುವ ವಿವಿಧ ಹಂತಗಳ ನೋಡಿದ್ದೆವು. ಈಗ ನಾವು ಪ್ರಾರಂಭದ, ಮೊದಲನೆಯ ಹಂತದ ಸೂಚನೆಯನ್ನು ಮಾತ್ರ ಕೊಡಬೇಕಾಗಿದೆ. ಮೊದಲಿನ ಹಂತದ ಸೂಚನೆಯು ಮನಸ್ಸಿನಲ್ಲಿ ಬೇರೂರಿತೆಂದರೆ ಮುಂದುಮುಂದಿನ ಹಂತಗಳ ಸೂಚನೆಗಳನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ವಿವರವಾಗಿ ಮುಂದೆ ತಿಳಿದುಕೊಳ್ಳುವವರಿದ್ದೇವೆ. ಈಗ ಗಮನಿಸಬೇಕಾಗಿರುವುದು ಇಷ್ಟೇ – ಸ್ವಯಂಸೂಚನೆಯನ್ನು ತಯಾರಿಸುವಾಗ ಮೊದಲನೆಯ ಹಂತದ ಸ್ವಯಂಸೂಚನೆಯನ್ನು ತಯಾರಿಸುವುದಿದೆ.

ಪ್ರಸಂಗ : ಈಗ ನಾವು ಮುಂದಿನ ಪ್ರಸಂಗವನ್ನು ನೋಡೋಣ. ಈ ಪ್ರಸಂಗವು ಅನಾವಶ್ಯಕ ಮತ್ತು ನಿರರ್ಥಕ ವಿಚಾರ ಮಾಡುವುದರ ಬಗ್ಗೆ ಇದೆ. ಬೆಳಗ್ಗೆ ನಾಮಜಪವನ್ನು ಮಾಡಲು ಕುಳಿತಾಗ ನನ್ನ ಮನಸ್ಸಿನಲ್ಲಿ ‘ನಾಳೆ ನಾನು ಖರೀದಿಗೆ ಹೋಗುವುದಿದೆ, ಆದ್ದರಿಂದ ಕಛೇರಿಯಿಂದ ಮನೆಗೆ ಬರುವಾಗ ಬ್ಯಾಂಕ್ ಗೆ ಹೋದರೆ ಹಣ ತೆಗೆದುಕೊಳ್ಳಲಾಗುವುದಿಲ್ಲ ಆದ್ದರಿಂದ ಕಛೇರಿಗೆ ಹೋಗುವ ಮೊದಲೇ ಬ್ಯಾಂಕ್ ಗೆ ಹೋಗಬೇಕಾಗುವುದು. ಅದಕ್ಕಾಗಿ ನಾನು ನಾಳೆ ಬೆಳಗ್ಗೆ ಮನೆಯಿಂದ ಬೇಗನೇ ಹೊರಡಬೇಕು…’ ಎಂಬಂತಹ ಅನಾವಶ್ಯಕ ವಿಚಾರಗಳು ಬಂದವು.

ಪ್ರಸಂಗ ತಿಳಿಯಿತಲ್ಲವೇ ? ನಾಮಜಪವನ್ನು ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಬರುತ್ತಿವೆ. ನಾವು ಇದಕ್ಕೆ ಸ್ವಯಂಸೂಚನೆಯನ್ನು ತಯಾರಿಸಬಾಕಾಗಿದೆ.

ಈಗ ನೀವು ಪ್ರಸಂಗದ ಅಧ್ಯಯನ ಮಾಡಿ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ ನಂತರ ಮುಂದೆ ಓದಿ.

ಈ ತಪ್ಪು ವಿಚಾರದ ಮಟ್ಟದ ತಪ್ಪಾಗಿರುವುದರಿಂದ ನಾವು ಅ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಯಾರಿಸಬೇಕಾಗಿದೆ. ಅನಾವಶ್ಯಕ ಅಥವಾ ನಿರರ್ಥಕ ವಿಚಾರ ಮಾಡುವ ಸಂದರ್ಭದಲ್ಲಿ ಯೋಗ್ಯ ಸ್ವಯಂಸೂಚನೆ ಯಾವುದು ಇರಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ನಾಮಜಪವನ್ನು ಮಾಡುತ್ತಿರುವಾಗ ನಾನು ಬ್ಯಾಂಕಿನಿಂದ ಹಣ ತೆಗೆಯುವುದರ ಬಗ್ಗೆ ಅನಾವಶ್ಯಕ ವಿಚಾರ ಮಾಡುತ್ತಿದ್ದಾಗ, ಹೀಗೆ ಮಾಡಿದರೆ ನಾನು ನಾಮಜಪದಲ್ಲಿನ ಚೈತನ್ಯವನ್ನು ಗ್ರಹಿಸುವುದರಿಂದ ವಂಚಿತನಾಗುವೆ ಎಂಬುದರ ಅರಿವಾಗುವುದು ಮತ್ತು ನಾನು ಏಕಾಗ್ರತೆಯಿಂದ ನಾಮಜಪ ಮಾಡುವೆನು.

ಅಧ್ಯಯನ : ಸ್ವಯಂಸೂಚನೆಯಲ್ಲಿ ಮನಸ್ಸಿಗೆ ಬರುತ್ತಿರುವ ಎಲ್ಲ ಅನಾವಶ್ಯಕ ವಿಚಾರಗಳನ್ನು ಬರೆಯಬಾರದು ಹಾಗೂ ‘ನಾಮಜಪವನ್ನು ಮಾಡುತ್ತಿರುವಾಗ ಅನಾವಶ್ಯಕ ವಿಚಾರಗಳು ಬರುತ್ತಿದ್ದರೆ ಅದರ ಉಲ್ಲೇಖ ಸಂಕ್ಷಿಪ್ತವಾಗಿ ಮಾಡಬೇಕು. ಆದ್ದರಿಂದ ನಾವು ‘ನಾಮಜಪವನ್ನು ಮಾಡುತ್ತಿರುವಾಗ ನಾನು ಬ್ಯಾಂಕಿನಿಂದ ಹಣ ತೆಗೆಯುವುದರ ಬಗ್ಗೆ ಅನಾವಶ್ಯಕ ವಿಚಾರ ಮಾಡುತ್ತಿದ್ದಾಗ….’ ಎಂದು ಬರೆದಿದ್ದೇವೆ. ಪರಿಣಾಮದ ಅರಿವನ್ನು ಮೂಡಿಸಲು ನಾವು ನಮಗೆ ಇಷ್ಟವಾಗುವ ಅಥವಾ ಒಪ್ಪುವ ಯಾವ ದೃಷ್ಟಿಕೋನವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಇಲ್ಲಿ ನಾವು ನಿರರ್ಥಕ ವಿಚಾರ ಮಾಡುವುದರಿಂದ ‘ನಾನು ನಾಮಜಪದಲ್ಲಿನ ಚೈತನ್ಯವನ್ನು ಗ್ರಹಿಸುವುದರಿಂದ ವಂಚಿತನಾಗುವೆನು’ ಎಂಬ ದೃಷ್ಟಿಕೋನವನ್ನು ತೆಗೆದುಕೊಂಡಿದ್ದೇವೆ. ಅದರ ಬದಲಿಗೆ ‘ನನಗೆ ನಾಮಜಪದಿಂದ ನಿರೀಕ್ಷಿಸಿದಷ್ಟು ಲಾಭ ಸಿಗದು’ ಎಂದು ಅಥವಾ ‘ಈ ನಿರರ್ಥಕ ವಿಚಾರಗಳಿಂದ ನನ್ನ ನಾಮಜಪದ ಸಮಯ ವ್ಯರ್ಥವಾಗುತ್ತಿದೆ ಎಂಬುದರ ಅರಿವಾಗುವುದು’ ಎಂಬ ದೃಷ್ಟಿಕೋನವನ್ನು ಕೂಡ ಬರೆಯಬಹುದು.

ಇಲ್ಲಿ ಗಮನದಲ್ಲಿಡಬೇಕಾದ ಒಂದು ಮಹತ್ವದ ಅಂಶವೆಂದರೆ ನಾಮಜಪವನ್ನು ಮಾಡುವಾಗ ಅನಾವಶ್ಯಕ ವಿಚಾರಗಳು ಬಂದು ನಮಗೆ ಅವುಗಳ ಅರಿವಾದಾಗ ನಾಮಜಪವು ಏಕಾಗ್ರತೆಯಿಂದ ಆಗಬೇಕೆಂಬುದಕ್ಕಾಗಿ ನಾವು ಕೃತಿಯ ಮಟ್ಟದ ಪರಿಹಾರಗಳನ್ನೂ ಕೈಗೊಳ್ಳಬೇಕು. ಉದಾಹರಣೆಗೆ, ನಾವು ಇದಕ್ಕೂ ಮೊದಲಿನ ಲೇಖನದಲ್ಲಿ ತಿಳಿದುಕೊಂಡಂತೆ ನಾಮಜಪವನ್ನು ಸ್ವಲ್ಪ ವೇಗವಾಗಿ ಮಾಡಬಹುದು, ನಾಮಜಪವನ್ನು ಬರೆಯೆಬಹುದು, ಒಂದೊಂದು ಬಾರಿ ಜಪವನ್ನು ಹೇಳುವಾಗ ದೇವರ ಚರಣಗಳಿಗೆ ಹೂವನ್ನು ಅರ್ಪಿಸುತಿದ್ದೇವೆ ಎಂಬ ಭಾವವನ್ನಿಟ್ಟುಕೊಳ್ಳಬಹುದು ಅಥವಾ ನಾಮಜಪವನ್ನು ಮಾಡುವಾಗ ಮನಸ್ಸಿಗೆ ಬರುವ ವಿಚಾರಗಳನ್ನು ಮತ್ತು ಅವುಗಳಿಗೆ ಪರಿಹಾರವನ್ನು ಬರೆಯಬಹುದು.

ಪ್ರಸಂಗ : ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿ ಎರಡು ವರ್ಷ ಕಳೆದು ಹೋಗಿದ್ದರೂ ನೌಕರಿ ಸಿಗದ ಕಾರಣ ಶ್ರೀ. ಓಂಕಾರ್ ಇವರಿಗೆ ನಿರಾಸೆಯೆನಿಸಿತು.

ಈಗ ನೀವು ಪ್ರಸಂಗದ ಅಧ್ಯಯನ ಮಾಡಿ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ ನಂತರ ಮುಂದೆ ಓದಿ.

ಈ ತಪ್ಪು, ಭಾವನೆಯ ಮಟ್ಟದ ತಪ್ಪಾಗಿರುವುದರಿಂದ ನಾವು ಅ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಯಾರಿಸಬೇಕಾಗಿದೆ.

ಸ್ವಯಂಸೂಚನೆ : ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣನಾಗಿದ್ದರೂ ನೌಕರಿ ಸಿಗುವುದರಲ್ಲಿ ಅಡಚಣೆ ಬಂದ ಕಾರಣ ನಿರಾಸೆಯೆನಿಸುತ್ತಿದ್ದಾಗ ನನಗೆ, ನಕಾರಾತ್ಮಕವಾಗಿ ವಿಚಾರ ಮಾಡಿದರೆ ನನ್ನಿಂದ ಕಡಿಮೆ ಪ್ರಯತ್ನಗಳಗಬಹುದು ಎಂಬುದರ ಅರಿವಾಗುವುದು ಮತ್ತು ನಾನು ನೌಕರಿ ಸಿಗುವುದರಲ್ಲಿನ ಅಡಚಣೆಗಳನ್ನು ಅಂತರ್ಮುಖತೆಯಿಂದ ಅಭ್ಯಾಸ ಮಾಡುವೆನು ಹಾಗೂ ಅನುಭವವುಳ್ಳ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯುವೆನು.

ಪ್ರಸಂಗ : ಯಜಮಾನರು ಬೆಳಗ್ಗೆ ಎದ್ದು ತುಂಬ ಸಮಯ ದಿನಪತ್ರಿಕೆಯನ್ನು ಓದುತ್ತಿದ್ದಾಗ ಅವರು ಮನೆಗೆಲಸದಲ್ಲಿ ಸ್ವಲ್ಪ ಸಹಾಯ ಮಾಡಬೇಕು ಎಂಬಂತಹ ತೀವ್ರ ವಿಚಾರಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಯಿತು ಮತ್ತು ನನಗೆ ಯಾರೂ ಸಹಾಯ ಮಾಡುವುದಿಲ್ಲ ಎಂಬ ವಿಚಾರದಿಂದ ಬೇಸರವಾಯಿತು.

ಈಗ ನೀವು ಪ್ರಸಂಗದ ಅಧ್ಯಯನ ಮಾಡಿ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ ನಂತರ ಮುಂದೆ ಓದಿ.

ಈ ಪ್ರಸಂಗದಲ್ಲಿ ಸ್ವಯಂಸೂಚನೆಯು ಹೇಗಿರಬಹುದು ಎಂಬುದನ್ನು ನೋಡೋಣ. ಯಜಮನರ ಬಗ್ಗೆ ಅಯೋಗ್ಯ ಪ್ರತಿಕ್ರಿಯೆ ಮೂಡಿದ್ದರಿಂದ ಈ ಪ್ರಸಂಗದಲ್ಲಿ ನಾವು ಅ-೨ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡಬೇಕು.

ಸ್ವಯಂಸೂಚನೆ : ಯಾವಾಗ, ಯಜಮಾನರು ಬೆಳಗ್ಗೆ ಎದ್ದು ದಿನಪತ್ರಿಕೆಯನ್ನು ಓದುತ್ತಿರುವುದನ್ನು ಕಂಡು, ಅವರು ನನಗೆ ಸಹಾಯ ಮಾಡಬೇಕು ಎಂದೆನಿಸುವುದೋ ಆವಾಗ, ಅವರಿಗೆ ಈಗ ಮಾತ್ರ ಸ್ವಲ್ಪ ಸಮಯ ಸಿಗುತ್ತದೆ, ಅವರಿಗೂ ದಿನವಿಡೀ ಕೆಲಸ ಮಾಡಿ ಆಯಾಸವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಮನೆಗೆಲಸಗಳ ಪ್ರಾಧಾನ್ಯತೆಯನ್ನು ನಿರ್ಧರಿಸಿ ಅದರಂತೆ ಆಯೋಜನೆ ಮಾಡಿಕೊಂದು ಕೆಲಸಗಳನ್ನು ಮಾಡುವೆನು.

ಅಭ್ಯಾಸ : ಇಲ್ಲಿ ನಾವು ಅ-೨ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಟ್ಟಿದ್ದೇವೆ. ಹಾಗೆ ಮಾಡುವಾಗ ನಾವು ಇದಕ್ಕೂ ಮೊದಲು ನೋಡಿದ ಹಾಗೆ ಮನಸ್ಸಿನಲ್ಲಿ ಮೂಡಿ ಬರುವ ಅಯೋಗ್ಯ ಪ್ರತಿಕ್ರಿಯೆಗಳನ್ನು ಎಂದರೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ನನಗೆ ಯಾರೂ ಸಹಾಯ ಮಾಡುವುದಿಲ್ಲ ಎಂಬಂತಹ ಪ್ರತಿಕ್ರಿಯಗಳನ್ನು ಸ್ವಯಂಸೂಚನೆಯಲ್ಲಿ ಉಲ್ಲೇಖ ಮಾಡಿಲ್ಲ. ಇಂತಹ ಸಂದರ್ಭಗಳಲ್ಲಿ ಬಹಳಷ್ಟು ಬಾರಿ, ಬಹಿರ್ಮುಖತೆಯಿಂದಾಗಿ ನಮಗೆ ‘ಎದುರಿನ ವ್ಯಕ್ತಿಯದ್ದೇ ತಪ್ಪಿದೆ, ನಾನು ಹೇಳುವುದೇ ಸರಿ’ ಎಂದೆನಿಸುತ್ತದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯಲ್ಲಿ ನಾವು ಈ ವಿಚಾರಪ್ರಕ್ರಿಯೆಯನ್ನೇ ಬದಲಾಯಿಸಿ ಅಂತರ್ಮುಖರಾಗಬೇಕಾಗಿದೆ. ನಾವು ಇತರರನ್ನು ಅಥವಾ ಪರಿಸ್ಥಿತಿಯನ್ನು ಬದಲಾಯಿಸುವುದಲ್ಲ, ನಮ್ಮನ್ನೇ ನಾವು ಬದಲಾಯಿಸಿಕೊಳ್ಳಬೇಕಾಗುತ್ತದೆ. ಮನೆಗೆಲಸಗಳಿಂದ ಒತ್ತಡವಾಗುತ್ತಿದ್ದರೆ ಯಜಮಾನರೊಂದಿಗೆ ಆ ಬಗ್ಗೆ ಮುಕ್ತವಾಗಿ ಮಾತನಾಡುವುದು, ಕೆಲಸಗಳ ಆಯೋಜನೆ ಮಾಡಿಕೊಳ್ಳುವುದು ಇಂತಹ ಕೃತಿಯ ಸ್ತರದ ಪ್ರಯತ್ನಗಳನ್ನು ಕೂಡ ನಾವು ಮಾಡಬಹುದು.

ಪ್ರಸಂಗ : ಒಂದು ಕೆಲಸದ ಸಂದರ್ಭದಲ್ಲಿ ಮೇಲಧಿಕಾರಿಯು ಸಹೋದ್ಯೋಗಿಗಳಾದ ಶ್ರೀ. ರಾಜೇಶ್ ಇವರನ್ನು ಪ್ರಶಂಸಿಸಿದರು ಆದರೆ ಆ ಕೆಲಸವನ್ನು ಮಾಡಿದ ಶ್ರೀ. ಸುಮಿತ್ ಇವರನ್ನು ಪ್ರಶಂಸಿಸಲಿಲ್ಲ. ಇದರಿಂದ ಶ್ರೀ. ಸುಮಿತ್ ಇವರಿಗೆ ತನ್ನ ಸಹೋದ್ಯೋಗಿ ಶ್ರೀ. ರಾಜೇಶ್ ಇವರ ಬಗ್ಗೆ ಅಸೂಯೆ ಎನಿಸಿತು.

ಈಗ ನೀವು ಪ್ರಸಂಗದ ಅಧ್ಯಯನ ಮಾಡಿ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸಿ ನಂತರ ಮುಂದೆ ಓದಿ.

ಈ ಪ್ರಸಂಗದಲ್ಲಿ ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆ ಮೂಡಿ ಬಂದಿರುವುದರಿಂದ ನಾವು ಅ -೨ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡಬೇಕಾಗಿದೆ. ಈಗ ಯೋಗ್ಯ ಸ್ವಯಂಸೂಚನೆಯು ಹೇಗಿರಬೇಕು ಎಂದು ನೋಡೋಣ.

ಸ್ವಯಂಸೂಚನೆ : ಕಛೇರಿಯಲ್ಲಿನ ಮೇಲಧಿಕಾರಿಗಳು ಕೆಲಸದ ಸಂದರ್ಭದಲ್ಲಿ ನನ್ನ ಹೆಸರನ್ನು ಹೇಳದೇ ಸಹೋದ್ಯೋಗಿ ಶ್ರೀ. ರಾಜೇಶ್ ಇವರನ್ನು ಪ್ರಶಂಸೆ ಮಾಡಿದಾಗ, ನಿಷ್ಕಾಮ ಭಾವದಿಂದ ಕಾರ್ಯ ಮಾಡುವುದರಿಂದ ನನ್ನ ಸಾಧನೆಯಾಗುವುದು ಎಂಬುದು ನನ್ನ ಗಮನಕ್ಕೆ ಬರುವುದು ಮತ್ತೆ ನಾನು ಆ ಪ್ರಸಂಗವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದಿನ ಕೆಲಸಗಳೆಡೆ ಗಮನ ಹರಿಸುವೆನು.

ಅಭ್ಯಾಸ : ನಿಷ್ಕಾಮ ಭಾವದಿಂದ ಕಾರ್ಯ ಮಾಡುವುದೆಂದರೆ ಯಾವ ಅಪೇಕ್ಷೆಗಳನ್ನೂ ಇಟ್ಟುಕೊಳ್ಳದೇ ಕರ್ಮ ಮಾಡುವ ನಮ್ಮ ಕರ್ತವ್ಯವನ್ನು ಪೂರೈಸುವುದು. ಭಗವಾನ್ ಶ್ರೀಕೃಷ್ಣನೂ ಗೀತೆಯಲ್ಲಿ ಹೇಳಿದ್ದಾನೆ, ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಇದರ ಅರ್ಥ ‘ಕರ್ಮ ಮಾಡುವುದು ನಿನ್ನ ಕರ್ತವ್ಯವಾಗಿದೆ. ಅದನ್ನು ನೀನು ಮಾಡು; ಆದರೆ ಫಲದ ಅಪೇಕ್ಷೆಯನ್ನು ಇಟ್ಟುಕೊಳ್ಳಬೇಡ’. ಇದು ನಮ್ಮ ದೈನಂದಿನ ಜೀವನಕ್ಕೆ ಅತ್ಯಂತ ಉಪಯುಕ್ತವಾದಂತಹ ಆಧ್ಯಾತ್ಮಿಕ ದೃಷ್ಟಿಕೋನವಾಗಿದೆ. ನಾವು ವಿವಿಧ ಪ್ರಸಂಗಗಳಲ್ಲಿ ಅದನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸಿದರೆ ಅದರಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಜೀವನ ನಡೆಸಲು ಸಹಾಯವಾಗುವುದು.

ಪ್ರಸಂಗ : ಒಬ್ಬರಿಗೆ ರಸ್ತೆಯನ್ನು ದಾಟಲು ಭಯವೆನಿಸುತ್ತದೆ ಅಥವಾ ಒಬ್ಬನೇ ಬಸ್ಸು ಅಥವಾ ರೈಲಿನಲ್ಲಿ ಪ್ರಯಾಣ ಮಾಡಲು ಭಯವೆನಿಸುತ್ತದೆ ಎಂದಿದ್ದರೆ ನಾವು ಯಾವ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡಬೇಕು ?
ನಮ್ಮ ಮನಸ್ಸಿನಲ್ಲಿ ಯಾವುದಾದರೊಂದು ಪ್ರಸಂಗದ ಬಗ್ಗೆ ಭಯ ಅಥವಾ ಕೀಳರಿಮೆಯ ಭಾವನೆಯಿದ್ದರೆ ಅದನ್ನು ತೆಗೆದು ಹಾಕಲು ‘ಅ-೩’ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡಬಹುದು.
ಈಗ ನಾವು ರಸ್ತೆಯನ್ನು ದಾಟುವ ಬಗ್ಗೆ ಭಯ ಎನಿಸುತ್ತದೆ ಎಂಬ ಪ್ರಸಂಗಕ್ಕೆ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸೋಣ.

ಈ ಸಂದರ್ಭದಲ್ಲಿ ಯೋಗ್ಯ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

ಸ್ವಯಂಸೂಚನೆ : ನಾನು ಕಾಳಜಿಪೂರ್ವಕವಾಗಿ ರಸ್ತೆಯ ಬದಿಯಲ್ಲಿ ನಡೆಯುತ್ತ ನಡೆಯುತ್ತ ಸರ್ಕಲ್ ಹತ್ತಿರ ಬಂದಿದ್ದೇನೆ.
ರಸ್ತೆಯನ್ನು ದಾಟುವುದಕ್ಕೆಂದು ನಾನು ‘ಜೀಬ್ರಾ ಕ್ರಾಸಿಂಗ್’ ನ ಬಳಿ ನಿಂತಿದ್ದೇನೆ.
ಅಕ್ಕಪಕ್ಕದಿಂದ ಗಾಡಿಗಳು ಹೋಗುವುದನ್ನು ನೋಡುತ್ತಿದ್ದೇನೆ.
ಕೆಂಪು ಸಿಗ್ನಲ್ ಬಂದಾಗ ಎಲ್ಲ ಗಾಡಿಗಳೂ ನಿಂತಿವೆ ಎಂಬುದನ್ನು ಖಚಿತಪಡಿಸಿಕೊಂಡು ನಾಮಜಪವನ್ನು ಮಾಡುತ್ತಾ ರಸ್ತೆಯನ್ನು ದಾಟುತ್ತಿದ್ದೇನೆ.
ಅರ್ಧ ದಾಟಿದ ನಂತರ ನಾನು, ಬೇರೆ ಕಡೆಯಿಂದ ಗಾಡಿಗಳು ಬರುತ್ತಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನಾಮಜಪವನ್ನು ಮಾಡುತ್ತಾ ಕಾಳಜಿಪೂರ್ವಕವಾಗಿ ರಸ್ತೆಯನ್ನು ದಾಟುತ್ತಿದ್ದೇನೆ.
ನಾನು ಒಬ್ಬಳೇ ವ್ಯವಸ್ಥಿತವಾಗಿ ರಸ್ತೆಯನ್ನು ದಾಟಲು ಸಾಧ್ಯವಾಯಿತು ಎಂಬುದಕ್ಕಾಗಿ ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

Leave a Comment