ಆನ್‌ಲೈನ್ ಸತ್ಸಂಗ (13)

‘ಅ ೨’ ಸ್ವಯಂಸೂಚನಾ ಪದ್ಧತಿ

ಈಗ ನಾವು ‘ಅ ೨’ ಸ್ವಯಂಸೂಚನಾ ಪದ್ಧತಿಯ ಕಡೆಗೆ ಗಮನ ಹರಿಸೋಣ. ನಮ್ಮ ಮನಸ್ಸಿನಲ್ಲಿ ಸತತವಾಗಿ ಒಂದಲ್ಲಾ ಒಂದು ವಿಚಾರವು ನಡೆಯುತ್ತಲೇ ಇರುತ್ತದೆ. ‘ಸಂಕಲ್ಪ-ವಿಕಲ್ಪ’ ಇದು ಮನಸ್ಸಿನ ಕಾರ್ಯವೇ ಆಗಿದೆ. ಯಾವುದಾದರೊಂದು ಪ್ರಸಂಗವು ಘಟಿಸಿದ ನಂತರ ನಮ್ಮಿಂದ ಅದಕ್ಕೆ ಕೊಡಲಾಗುವ ಪ್ರತಿಕ್ರಿಯೆಯು ನಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಅಥವಾ ಸ್ವಭಾವವನ್ನು ಅವಲಂಬಿಸಿರುತ್ತದೆ. ಎಲ್ಲರಿಗೂ ಅರ್ಧ ತುಂಬಿರುವ ಲೋಟದ ಉದಾಹರಣೆಯು ತಿಳಿದಿರಬಹುದು. ಲೋಟವು ಅರ್ಧ ತುಂಬಿದೆ ಎಂದು ಹೇಳುವುದು ಅಥವಾ ಅರ್ಧ ಖಾಲಿಯಾಗಿದೆ ಎಂದು ಹೇಳುವುದು ನಮ್ಮ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನಮ್ಮ ಪ್ರತಿಕ್ರಿಯೆ ಮತ್ತು ದೃಷ್ಟಿಕೋನವನ್ನು ಸಕಾರಾತ್ಮಕ ಮತ್ತು ಯೋಗ್ಯವಾಗಿ ಇಟ್ಟುಕೊಳ್ಳುವುದಕ್ಕೆ ಉತ್ತಮ ಸಾಧನವೆಂದರೆ ‘ಅ ೨’ ಸ್ವಯಂಸೂಚನಾ ಪದ್ಧತಿ!

ಪ್ರತಿಯೊಂದು ಪ್ರಸಂಗದಲ್ಲಿಯೂ ವ್ಯಕ್ತಿಯಿಂದ ಯಾವುದಾದರೊಂದು ಪ್ರತಿಕ್ರಿಯೆಯು ವ್ಯಕ್ತವಾಗುತ್ತದೆ. ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ದೋಷಗಳಿಂದ ಬರುತ್ತವೆಯಾದರೆ ಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಂದ ಬರುತ್ತವೆ. ಯಾವುದಾದರೊಂದು ಪ್ರಸಂಗವು ಘಟಿಸಿದ ನಂತರ ಅಯೋಗ್ಯ ವಿಚಾರಗಳು ಬರುವುದರ ಬದಲು ಯೋಗ್ಯ ವಿಚಾರಗಳು ಬಂದು ಅದಕ್ಕನುಸಾರ ಕೃತಿಯನ್ನು ಮಾಡುವುದನ್ನು ನಾವು ಈ ಸೂಚನಾ ಪದ್ಧತಿಯನ್ನು ಉಪಯೋಗಿಸಿ ಸಾಧಿಸುವುದಿದೆ.

ಕಳೆದ ಲೇಖನದಲ್ಲಿ ನಾವು ನೋಡಿದ್ದೇನೆಂದರೆ, ಸಾಮಾನ್ಯವಾಗಿ ಕೃತಿಯ ಸ್ತರದಲ್ಲಿ ಆಗುವ ತಪ್ಪುಗಳಿಗಾಗಿ ‘ಅ – ೧’ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡುತ್ತಾರೆ, ಆದರೆ ಕಡಿಮೆ ಕಾಲಾವಧಿಗಾಗಿ ಮನಸ್ಸಿನಲ್ಲಿ ಉಂಟಾಗುವ ಪ್ರತಿಕ್ರಿಯೆಗಳಿಗಾಗಿ ‘ಅ – ೨’ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಡುತ್ತಾರೆ. ಸ್ವಯಂಸೂಚನೆಯ ಇನ್ನಿತರ ಪದ್ಧತಿಗಳನ್ನು ನಾವು ಮುಂದೆ ತಿಳಿದುಕೊಳ್ಳುವವರಿದ್ದೇವೆ.

‘ಅ – ೨’ ಸ್ವಯಂಸೂಚನಾ ಪದ್ಧತಿಯು ಯಾವ ಸ್ವಭಾವ ದೋಷಗಳಿಗೆ ಉಪಯುಕ್ತವಾಗಿದೆ ?

‘ಅ – ೨’ ಸ್ವಯಂಸೂಚನೆಯನ್ನು ಉಪಯೋಗಿಸಿಕೊಂಡು – ಇತರರನ್ನು ಟೀಕಿಸುವುದು, ಕಿರಿಕಿರಿ ಎನಿಸುವುದು, ಕೋಪಿಷ್ಠತನ, ಜಗಳಗಂಟತನ, ಪಶ್ಚಾತ್ತಾಪ ಪಡದಿರುವುದು, ಹಟ ಮಾಡುವುದು, ಸಂದೇಹ ಪಡುವುದು ಮುಂತಾದ ಸ್ವಭಾವದೋಷಗಳಿಗೆ ಸ್ವಯಂಸೂಚನೆಗಳನ್ನು ಕೊಟ್ಟು ಅವುಗಳ ಮೇಲೆ ಜಯ ಸಾಧಿಸಬಹುದು.

ಕೆಲವು ತಿಂಗಳುಗಳ ಕಾಲ ಸತತವಾಗಿ ಸ್ವಯಂಸೂಚನೆಗಳನ್ನು ಕೊಡುವುದರಿಂದ ಅಯೋಗ್ಯ ಪ್ರತಿಕ್ರಿಯೆಗಳು ಬರುವುದರ ಬದಲು ಯೋಗ್ಯ ಪ್ರತಿಕ್ರಿಯೆಗಳು ಬರುತ್ತಾ ಹೋದರೆ ಚಿತ್ತದ ಮೇಲೆ ದೋಷದ ಜಾಗದಲ್ಲಿ ಗುಣದ ಸಂಸ್ಕಾರವು ನಿರ್ಮಾಣವಾಗಿ ಸ್ವಭಾವದಲ್ಲಿ ಸಕಾರಾತ್ಮಕವಾದ ಬದಲಾವಣೆ ಉಂಟಾಗುತ್ತದೆ.  ಒಂದು ಅಥವಾ ಎರಡು ನಿಮಿಷಗಳಿಗಿಂತ ಕಡಿಮೆ ಕಾಲ ಉಳಿಯುವ ಪ್ರಸಂಗದಲ್ಲಿ ಅಯೋಗ್ಯ ಪ್ರತಿಕ್ರಿಯೆಯ ಬದಲು ಯೋಗ್ಯ ಪ್ರತಿಕ್ರಿಯೆಯೇ ಬರಬೇಕು ಎಂಬುದಕ್ಕೆ ಈ ಪದ್ಧತಿಯನ್ನು ಉಪಯೋಗಿಸುತ್ತಾರೆ.

‘ಅ ೨’ ಸ್ವಯಂಸೂಚನಾ ಪದ್ಧತಿಯ ಸೂತ್ರ

‘ಅ ೨ ‘ ಸ್ವಯಂಸೂಚನಾ ಪದ್ಧತಿಯೆಂದರೆ ಅಯೋಗ್ಯ ಪ್ರತಿಕ್ರಿಯೆಯ ಬದಲು ಯೋಗ್ಯ ಪ್ರತಿಕ್ರಿಯೆ ಬರಬೇಕೆಂಬುದಕ್ಕಾಗಿ ಉಪಯೋಗಿಸಬೇಕಾದ ಪದ್ಧತಿ. ಪ್ರತಿಕ್ರಿಯೆ ಎಂದರೆ response. ಅಯೋಗ್ಯ ಪ್ರತಿಕ್ರಿಯೆ ಎಂದರೆ ಅಯೋಗ್ಯ response! ‘ಅ ೧’ ಸ್ವಯಂಸೂಚನಾ ಪದ್ಧತಿಯಂತೆಯೇ ‘ಅ ೨’ ಪದ್ಧತಿಯಿಂದ ಸ್ವಯಂಸೂಚನೆ ಕೊಡುವ ಸೂತ್ರವು ಹೀಗಿದೆ –

‘ಪ್ರಸಂಗ + ದೃಷ್ಟಿಕೋನ + ಯೋಗ್ಯ ಪ್ರತಿಕ್ರಿಯೆ (ವಿಚಾರ ಅಥವಾ ಕೃತಿ)’

‘ಅ ೨’ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಯಾರಿಸುವಾಗ ಒಂದು ಮಹತ್ವದ ಸೂತ್ರವನ್ನು ಗಮನದಲ್ಲಿಡಬೇಕು; ಅದೇನೆಂದರೆ ಮನಸ್ಸಿಗೆ ಬರುವ ಅಯೋಗ್ಯ ಪ್ರತಿಕ್ರಿಯೆಗಳನ್ನು ಸ್ವಯಂಸೂಚನೆಯಲ್ಲಿ ಉಲ್ಲೇಖ ಮಾಡಬಾರದು.

ಈ ಸೂತ್ರಕ್ಕನುಸಾರ ‘ಅ ೨’ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಅ. ಪ್ರಸಂಗ : ಕಛೇರಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಯೋಣ. ಕಛೇರಿಯ ಕೆಲಸವನ್ನು ಮಾಡುವಾಗ ನಮಗೆ ಅಡಚಣೆಗಳು ಬರುತ್ತಿವೆ. ಅವುಗಳನ್ನು ದೂರಪಡಿಸುವುದಕ್ಕಾಗಿ ನಾವು ಮೇಲಧಿಕಾರಿಗಳ ಜೊತೆ ಮಾತನಾಡುವುದಕ್ಕೆ ಸಮಯವನ್ನು ಕೇಳಿದೆವು. ಆಗ ಮೇಲಧಿಕಾರಿಗಳು ‘ಈಗ ನನಗೆ ಸಮಯವಿಲ್ಲ, ನಾವು ನಂತರ ಮಾತನಾಡೋಣ’ ಎಂದು ಹೇಳಿದರು. ಅದನ್ನು ಕೇಳಿ ನನಗೆ ಬೇಸರವಾಗುತ್ತದೆ ಮತ್ತು ಮನಸ್ಸಿನಲ್ಲಿ ಈ ರೀತಿಯ ಪ್ರತಿಕ್ರಿಯೆ ಬರುತ್ತದೆ – ‘ಮೇಲಧಿಕಾರಿಗಳು ನನಗೆ ಗಮನ ಕೊಡುವುದಿಲ್ಲ. ನನ್ನ ಸಮಸ್ಯೆಗಳನ್ನು ದೂರಗೊಳಿಸಲು ಅವರಿಗೆ ಸಮಯವೇ ಇರುವುದಿಲ್ಲ’

ಈ ಪ್ರಸಂಗದಲ್ಲಿ ನಮ್ಮ ಮನಸ್ಸಿಗೆ ಬಂದ ವಿಚಾರಗಳು ಸಕಾರಾತ್ಮಕವಾಗಿವೆಯೋ ಅಥವಾ ನಕಾರಾತ್ಮಕವಾಗಿವೆಯೋ? ನಿಶ್ಚಿತವಾಗಿಯೂ ನಕಾರಾತ್ಮಕವಾಗಿವೆ. ‘ನನ್ನ ಅಡಚಣೆಗಳ ಬಗ್ಗೆ ಕೇಳಿಸಿಕೊಳ್ಳಲು ಅವರಿಗೆ ಸಮಯವೇ ಇರುವುದಿಲ್ಲ’ ಎಂಬಂತಹ ಪ್ರತಿಕ್ರಿಯೆಯು ನಕಾರಾತ್ಮಕವಾಗಿದ್ದು ಅದು ಉದ್ವೇಗದಿಂದ ಉಂಟಾಗಿದೆ. ಈ ವಿಚಾರಗಳಿಂದ ಯಾರಿಗೆ ತೊಂದರೆಯಾಗುತ್ತದೆ? ತನಗೇ ತೊಂದರೆಯಾಗುತ್ತದೆ. ನಾವು ಈ ರೀತಿಯಲ್ಲಿ ವಿಚಾರ ಮಾಡುವುದರಿಂದ ಪರಿಸ್ಥಿತಿಯಲ್ಲಿ ಏನಾದರೂ ವ್ಯತ್ಯಾಸವಾಗುತ್ತದೆಯೇ? ಒಂದು ವೇಳೆ ಮೇಲಧಿಕಾರಿಗಳೇ ಏನಾದರೂ ತಪ್ಪು ಮಾಡುತ್ತಿದ್ದರೂ ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಉಂಟಾಗುವ ಪ್ರತಿಕ್ರಿಯೆಗಳಿಂದಾಗಿ ಅವರಲ್ಲಿ ಏನಾದರೂ ಸುಧಾರಣೆಯಾಗುವುದೇ? ಇಲ್ಲವಲ್ಲ! ಆದ್ದರಿಂದ ಪರಿಸ್ಥಿತಿಯು ಹೇಗೆ ಇದ್ದರೂ ಆ ಪರಿಸ್ಥಿತಿಯಲ್ಲಿ ನಾನು ಯಾವ ರೀತಿ ಯೋಗ್ಯ ವಿಚಾರ ಮಾಡಬೇಕು ಅಥವಾ ಹೇಗೆ ಯೋಗ್ಯವಾಗಿ ವರ್ತಿಸಬೇಕು ಎಂಬುದರ ಚಿಂತನೆ ಮಾಡಿ ಅದರಂತೆ ಪ್ರಯತ್ನ ಮಾಡುವುದೇ ಈ ಪ್ರಕ್ರಿಯೆಯಾಗಿದೆ.

ಪ್ರಸಂಗಗಳಿಗೆ ಸಂಬಂಧಪಟ್ಟಂತೆ ಸ್ವಯಂಸೂಚನೆಯನ್ನು ಕೊಡುವುದರಿಂದ ಆ ಪ್ರಸಂಗದಲ್ಲಿ ಯಾವ ರೀತಿ ಯೋಗ್ಯವಾಗಿ ವರ್ತಿಸಬೇಕು ಎಂಬುದು ಕೂಡ ನಮ್ಮ ಗಮನಕ್ಕೆ ಬರುತ್ತದೆ ಮತ್ತು ನಮ್ಮ ಮನಸ್ಸಿನ ಮೇಲೆ ಇರುವ ಒತ್ತಡವೂ ದೂರವಾಗುತ್ತದೆ.

ಆ. ವಿಚಾರ ಪ್ರಕ್ರಿಯೆಯ ಅಧ್ಯಯನ : ಈ ಪ್ರಸಂಗದ ಬಗ್ಗೆ ವಿಚಾರ ಮಾಡಿದಾಗ ನಮ್ಮ ವಿಚಾರ ಪ್ರಕ್ರಿಯೆಯಿಂದ ನಮ್ಮ ಯಾವ ಸ್ವಭಾವದೋಷಗಳು ಗಮನಕ್ಕೆ ಬರುತ್ತವೆ ?

‘ನಾನು ಮೇಲಧಿಕಾರಿಯ ಬಳಿ ಹೋದಾಗ ಅವರು ನನ್ನ ಅಡಚಣೆಗಳನ್ನು ಕೂಡಲೇ ದೂರಗೊಳಿಸಬೇಕು’ ಎಂಬ ವಿಚಾರದಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ ನಮ್ಮಲ್ಲಿ ಅಪೇಕ್ಷೆಗಳಿವೆ.

ಬೇಸರವೆನಿಸುವುದು ಎಂಬುದರಿಂದ ನಮ್ಮಲ್ಲಿ ಭಾವನಾಪ್ರಧಾನತೆ ಇದೆ ಎಂಬುದು ತಿಳಿಯುತ್ತದೆ

ಮೇಲಧಿಕಾರಿಗಳಿಗೆ ಏನಾದರೂ ಕೆಲಸ ಇದ್ದಿರಬಹುದು ಎಂಬ ವಿಚಾರವು ಅದರಲ್ಲಿ ಇಲ್ಲ. ಈ ಪ್ರಸಂಗದಲ್ಲಿ ನಮ್ಮ ದೋಷಗಳು ಯಾವವೆಂದರೆ ಅವಾಸ್ತವವಾದ ಅಪೇಕ್ಷೆಗಳು ಇರುವುದು, ಭಾವನಾಪ್ರಧಾನತೆ ಮತ್ತು ಇತರರ ಬಗ್ಗೆ ವಿಚಾರ ಮಾಡದಿರುವುದು ಅಂದರೆ ಇತರರನ್ನು ಅರ್ಥ ಮಾಡಿಕೊಳ್ಳದಿರುವುದು.

ಒಂದೇ ಪ್ರಸಂಗದಲ್ಲಿ ನಮ್ಮಲ್ಲಿ ಒಂದಕ್ಕಿಂತ ಹೆಚ್ಚು ಸ್ವಭಾವದೋಷಗಳು ಕಾರ್ಯಗತವಾಗುವುದೂ ಸಾಧ್ಯವಿದೆ. ಇಂತಹ ಸಮಯದಲ್ಲಿ ಯಾವ ಸ್ವಭಾವದೋಷದ ತೀವ್ರತೆಯು ಹೆಚ್ಚು ಇದೆಯೋ ಅದಕ್ಕನುಸಾರ ಸ್ವಯಂಸೂಚನೆಯನ್ನು ತಯಾರಿಸಬೇಕು. ಯಾವುದಾದರೊಂದು ಪ್ರಸಂಗದಲ್ಲಿ ಕಾರ್ಯಗತವಾಗಿರುವ ಎಲ್ಲ ಸ್ವಭಾವದೋಷಗಳೂ ತೀವ್ರವಾಗಿದ್ದರೆ ಎಲ್ಲ ದೋಷಗಳಿಗೂ ಸ್ವಯಂಸೂಚನೆಗಳನ್ನು ತಯಾರಿಸಬಹುದು. ಈಗಿನ ಪ್ರಸಂಗದಲ್ಲಿ ನಾವು ಅವಾಸ್ತವವಾದಂತಹ ಅಪೇಕ್ಷೆಗಳು ಇರುವುದು ಎಂಬ ಸ್ವಭಾವದೋಷವನ್ನು ದೂರಗೊಳಿಸುವುದಕ್ಕಾಗಿ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ.

ಇ. ಉದಾಹರಣೆಯ ಅಧ್ಯಯನ : ಸ್ವಯಂಸೂಚನೆಯನ್ನು ತಯಾರಿಸುವುದಕ್ಕಾಗಿ ಪ್ರಸಂಗ + ಯೋಗ್ಯ ದೃಷ್ಟಿಕೋನ +ಯೋಗ್ಯ ಪ್ರತಿಕ್ರಿಯೆ (ವಿಚಾರ ಅಥವಾ ಕೃತಿ) ಸೂತ್ರದಂತೆ ಮುಂದುವರಿಯೋಣ –

ಪ್ರಸಂಗ ಯಾವುದು ? ನನಗೆ ಬರುತ್ತಿರುವ ಅಡಚಣೆಗಳ ಬಗ್ಗೆ ಮೇಲಧಿಕಾರಿಯ ಬಳಿ ಸಮಯ ಕೇಳಿದಾಗ ಅವರು ‘ನಂತರ ಮಾತಾಡೋಣ’ ಎಂದು ಹೇಳಿದಾಗ ಪ್ರತಿಕ್ರಿಯೆಗಳು ಬಂದವು.

ಈ ಪ್ರಸಂಗದಲ್ಲಿ ನಾವು ಯಾವ ದೃಷ್ಟಿಕೋನವನ್ನು ಇಟ್ಟುಕೊಳ್ಳಬಹುದು ? ಮೇಲಧಿಕಾರಿಗಳಿಗೆ ಈಗ ಮಹತ್ವದ ಹಾಗೂ ತುರ್ತಾದ ಬೇರೊಂದು ಕೆಲಸ ಇರಬಹುದು

ಯೋಗ್ಯ ಕೃತಿ ಯಾವುದು ? ಮೇಲಧಿಕಾರಿಯ ಬಳಿ ಚರ್ಚೆ ಮಾಡುವುದಕ್ಕಾಗಿ, ಅವರಿಗೆ ಯಾವ ಸಮಯ ಅನುಕೂಲಕರವಾಗಿದೆ ಎಂಬುದನ್ನು ಶಾಂತವಾಗಿ ಕೇಳಿಕೊಳ್ಳುವುದು.

ಈ. ಸ್ವಯಂಸೂಚನೆ : ಈಗ ಇದಕ್ಕೆ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

ಕಛೇರಿಯಲ್ಲಿ ಕೆಲಸ ಮಾಡುವಾಗ ನನಗೆ ಬರುವ ಅಡಚಣೆಗಳ ಬಗ್ಗೆ ಮೇಲಧಿಕಾರಿಗಳ ಬಳಿ ಸಮಯ ಕೇಳಿದಾಗ ಅವರು ‘ನಂತರ ಮಾತಾಡೋಣ’ ಎಂದು ಹೇಳಿದಾಗ ‘ಈಗ ಅವರಿಗೆ ಮಹತ್ವದ ಹಾಗೂ ತುರ್ತಾದ ಬೇರೊಂದು ಕೆಲಸ ಇರಬಹುದು, ಅದನ್ನು ಪೂರ್ಣಗೊಳಿಸಿದ ನಂತರ ಅವರು ಖಂಡಿತ ನನ್ನ ಸಮಸ್ಯೆಯನ್ನು ದೂರಗೊಳಿಸುವರು’ ಎಂದು ವಿಚಾರ ಮಾಡಿ ‘ಚರ್ಚೆ ಮಾಡಲು ನಿಮಗೆ ಯಾವ ಸಮಯ ಅನುಕೂಲಕರವಾಗಿದೆ’ ಎಂಬುದನ್ನು ಶಾಂತವಾಗಿ ಮತ್ತು ವಿನಮ್ರವಾಗಿ ಕೇಳಿಕೊಳ್ಳುವೆನು.

ಈ ಸ್ವಯಂಸೂಚನೆಯಿಂದ ಏನಾಗುತ್ತದೆಯೆಂದರೆ ಮೇಲಧಿಕಾರಿಗಳ ಬಗ್ಗೆ ನಕಾರಾತ್ಮಕ ತೀರ್ಮಾನಕ್ಕೆ ಬರುವುದು ತಪ್ಪುತ್ತದೆ, ಮುಂದಿನ ಅನುಕೂಲಕರ ಸಮಯವನ್ನು ಕೇಳಿದ್ದರಿಂದ ನಮ್ಮ ಸಮಸ್ಯೆಯು ಒಂದು ಯಾವಾಗ ದೂರವಾಗಬಹುದು ಎಂಬುದರ ಅಂದಾಜು ಸಿಗುತ್ತದೆ ಮತ್ತು ಇತರರನ್ನು ಅರ್ಥ ಮಾಡಿಕೊಂಡದ್ದರಿಂದ ನಮ್ಮ ಮನಸ್ಸಿನ ಮೇಲಿನ ಒತ್ತಡ ದೂರವಾಗುತ್ತದೆ.

ಉದಾಹರಣೆ ೨ : ಈ ಪ್ರಸಂಗದಂತಹದ್ದೇ ಆದ ಮತ್ತೊಂದು ಪ್ರಸಂಗವನ್ನು ನಾವು ಅಭ್ಯಾಸ ಮಾಡಿ ಅದಕ್ಕೆ ಸ್ವಯಂಸೂಚನೆಗಳನ್ನು ತಯಾರಿಸಲು ಪ್ರಯತ್ನಿಸೋಣ.

ಅ. ಪ್ರಸಂಗ : ಸೌ ಜಾನಕಿ ಇವರಿಗೆ ಅವರ ಮಗಳ ವಿವಾಹಕ್ಕೆ ಸಂಬಂಧಪಟ್ಟಂತೆ ಅವರ ಸ್ನೇಹಿತೆಯ ಒಂದು ಉತ್ತಮ ಸಂಬಂಧದ ಬಗ್ಗೆ ತಿಳಿಸಿದ್ದರು.  ಈ ಬಗ್ಗೆ ಜಾನಕಿಯವರು ತಮ್ಮ ಯಜಮಾನರ ಬಳಿ ಚರ್ಚೆ ಮಾಡಲು ಸಮಯ ಕೇಳಿದಾಗ ಯಜಮಾನರು, ‘ಈಗ ನನಗೆ ಸಮಯವಿಲ್ಲ, ನಾವು ಈ ಬಗ್ಗೆ ನಂತರ ವಿವರವಾಗಿ ಮಾತಾಡೋಣ’ ಎಂದು ಹೇಳಿದರು. ಅದನ್ನು ಕೇಳಿದಾಗ ಸೌ ಜಾನಕಿಯವರಿಗೆ ಬೇಸರವಾಯಿತು ಮತ್ತು ಮನಸ್ಸಿನಲ್ಲಿ ಈ ರೀತಿ ಪ್ರತಿಕ್ರಿಯೆ ಬಂದಿದೆ; ‘ನಾನು ಇಷ್ಟು ಮಹತ್ವದ ವಿಷಯದ ಬಗ್ಗೆ ಮಾತನಾಡುವವಳಿದ್ದೇನೆ, ಆದರೆ ಇವರಿಗೆ ನನ್ನ ಕಡೆ ಗಮನವೇ ಇಲ್ಲ; ಇವರಿಗೆ ನನ್ನ ಬಳಿ ಮಾತನಾಡಲು ಸಮಯವೇ ಇರುವುದಿಲ್ಲ’.

ಆ. ಅಧ್ಯಯನ : ಈ ಪ್ರಸಂಗದಲ್ಲಿ ಯೋಗ್ಯದೃಷ್ಟಿಕೋನವು ಹೇಗಿರಬೇಕು? ಈಗ ಯಜಮಾನರಿಗೆ ಮಹತ್ವದ ಬೇರೆ ಕೆಲಸವಿರಬಹುದು, ಅದು ಮುಗಿದ ನಂತರ ಅವರು ಖಂಡಿತ ಕೇಳಿಸಿಕೊಳ್ಳುವರು. ಈ ಪ್ರಸಂಗದಲ್ಲಿ ನಮ್ಮ ಯೋಗ್ಯ ಪ್ರತಿಕ್ರಿಯೆಯು ಹೇಗಿರಬೇಕೆಂದರೆ ‘ವಿವಾಹದ ಸಂಬಂಧದ ಬಗ್ಗೆ ನಾವು ಯಾವಾಗ ಮಾತನಾಡಬಹುದು’ ಎಂಬುದನ್ನು ಶಾಂತವಾಗಿಯೂ ನಮ್ರತೆಯಿಂದಲೂ ಕೇಳಿಕೊಳ್ಳುವೆನು.

ಇ. ಸ್ವಯಂಸೂಚನೆ : ಈಗ ನಾವು ಕಾರ್ಯಾಲಯದಲ್ಲಿ ಮೇಲಧಿಕಾರಿಗಳ ಬಗ್ಗೆ ಯಾವ ಪ್ರಸಂಗವನ್ನು ನೋಡಿದೆವೋ, ಈ ಪ್ರಸಂಗವು ಕೂಡ ಅಂತಹದ್ದೇ ಆಗಿದೆ. ಈ ಬಗ್ಗೆ ಸ್ವಯಂಸೂಚನೆಯು ಹೇಗಿರಬಹುದು ಎಂಬುದನ್ನು ನೋಡೋಣ.

‘ಮಗಳ ವಿವಾಹದ ಬಗ್ಗೆ ಚರ್ಚೆ ಮಾಡಲು ಯಜಮಾನರಲ್ಲಿ ಸಮಯ ಕೇಳಿದಾಗ ಅವರು ‘ನಂತರ ಮಾತನಾಡೋಣ’ ಎಂದು ಹೇಳಿದರೆ ‘ಈಗ ಅವರಿಗೆ ಬೇರೊಂದು ಮಹತ್ವದ ಕೆಲಸವಿರಬಹುದು, ಅದು ಮುಗಿದ ನಂತರ ಅವರು ಖಂಡಿತ ಸಮಯ ಕೊಡುವರು’ ಎಂದು ವಿಚಾರ ಮಾಡಿ ‘ನಾವು ಈ ಬಗ್ಗೆ ಯಾವಾಗ ಮಾತನಾಡಬಹುದು’ ಎಂಬುದನ್ನು ಅವರಲ್ಲಿ ಶಾಂತವಾಗಿ ವಿನಮ್ರತೆಯಿಂದ ಕೇಳಿಕೊಳ್ಳುವೆನು.

ಉದಾಹರಣೆ ೩ :

ಅ. ಪ್ರಸಂಗ : ಸಂಜೆ ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ನಾನು ಹೊರಗೆ ಹೊರಟಿದ್ದಾಗ ನನ್ನ ಅತ್ತೆಯವರು ನನಗೆ ಸಿಂಕ್ ನಲ್ಲಿ ಇಟ್ಟಿರುವ ಪಾತ್ರೆಗಳನ್ನು ತೊಳೆಯಲು ಹೇಳಿದರು. ಕೂಡಲೇ ನನ್ನ ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂತು, ಇವರು ಇಷ್ಟು ತಡವಾಗಿ ಇಂತಹ ಸಮಯದಲ್ಲಿ ಯಾಕೆ ಹೇಳುತ್ತಾರೆ ? ಆ ಪಾತ್ರೆಗಳಿಲ್ಲದಿದ್ದರೆ ಆಗುವುದಿಲ್ಲವೇ?

ಯಾವುದೇ ಪ್ರತಿಕ್ರಿಯೆಯು ಮನಸ್ಸಿಗೆ ಬಂದಾಗ ಆರಂಭದಲ್ಲಿ ನಮ್ಮ ಮನಸ್ಸಿಗೆ ಬಂದ ವಿಚಾರವು ಯೋಗ್ಯವೇ ಎಂದು ನಮಗೆನಿಸುತ್ತದೆ. ‘ಎದುರಿರುವ ವ್ಯಕ್ತಿಯು ತಪ್ಪಾಗಿ ವರ್ತಿಸಿದ್ದರಿಂದ ನನ್ನಲ್ಲಿ ಪ್ರತಿಕ್ರಿಯೆಗಳು ಬರುತ್ತವೆ’ ಎಂಬುದು ನಮ್ಮ ವಿಚಾರ ಪ್ರಕ್ರಿಯೆಯಾಗಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೇರೆಯವರ ತಪ್ಪುಗಳ ಬಗ್ಗೆ ನಾವು ನ್ಯಾಯಾಧೀಶರ ಭೂಮಿಕೆಯಲ್ಲಿರುತ್ತೇವೆ ಆದರೆ ನಮ್ಮ ತಪ್ಪುಗಳ ಬಗ್ಗೆ ಮಾತ್ರ ವಕೀಲರ ಭೂಮಿಕೆಯಲ್ಲಿರುತ್ತೇವೆ. ಆದರೆ ಮೂರನೆಯ ವ್ಯಕ್ತಿಯ ಭೂಮಿಕೆಯಲ್ಲಿದ್ದುಕೊಂಡು ಅಂತರ್ಮುಖರಾಗಿ ವಿಚಾರ ಮಾಡಿ ನೋಡಿದರೆ ನಮಗೆ ನಮ್ಮ ತಪ್ಪುಗಳು, ಕುಂದುಕೊರತೆಗಳು ಗಮನಕ್ಕೆ ಬರುವ ಸಾಧ್ಯತೆ ಇರುತ್ತದೆ. ಯಾರೇ ಹೇಗೇ ವರ್ತಿಸಿದರೂ, ಆ ಪ್ರಸಂಗದಲ್ಲಿ ನನ್ನಿಂದ ಯೋಗ್ಯವಾದ ಪ್ರತಿಕ್ರಿಯೆಯನ್ನು ನೀಡಲಾಗುವುದೇ ಸಾಧನೆಯಾಗಿದೆ.

ಆ. ಅಧ್ಯಯನ : ಈ ಪ್ರಸಂಗದಲ್ಲಿ ನಾವು ಸ್ವಯಂಸೂಚನೆಯನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ. ಅದಕ್ಕೂ ಮೊದಲು ಪ್ರಸಂಗದ ಅಧ್ಯಯನ ಮಾಡೊಣ. ಹೊರಗೆ ಹೊರಟಾಗ ಅತ್ತೆಯವರು ಪಾತ್ರೆ ತೊಳೆಯಲು ಹೇಳಿದಾಗ ಪ್ರತಿಕ್ರೆಯೆಯು ಬಂದಿತೆಂಬುದರ ಅರ್ಥವೇನೆಂದರೆ, ‘ನಾನು ಹೊರಗೆ ಹೊರಟಾಗ ಬೇರೆ ಕೆಲಸಗಳು ಬರಬಾರದೆಂಬ ಅಪೇಕ್ಷೆ’ ನಮ್ಮಲ್ಲಿದೆ. ಅತ್ತೆಯವರು ಏಕೆ ಪಾತ್ರೆಗಳನ್ನು ತೊಳೆಯಲು ಹೇಳುತ್ತಿದ್ದಾರೆ ? ಅವರಿಗೆ ಆ ಪಾತ್ರೆಗಳ ಆವಶ್ಯಕತೆಯಿದೆಯೇನು ? ಅಥವಾ ಬೇರೆ ಯಾವ ಕಾರಣವಿದೆ ಎಂಬುದನ್ನು ತಿಳಿದುಕೊಳ್ಳಲಿಲ್ಲ ಅಂದರೆ ಇತರರನ್ನು ಅರ್ಥಮಾಡಿಕೊಳ್ಳದಿರುವುದು ಅಥವಾ ಹಠಾತ್ತಾಗಿ ತೀರ್ಮಾನಕ್ಕೆ ಬರುವುದು ಎಂಬುದು ಸ್ವಭಾವದೋಷವಾಗಿದೆ. ಅತ್ತೆಯವರು ಹೇಳಿದ್ದನ್ನು ಸ್ವೀಕರಿಸದೇ ಇರುವುದರ ಹಿಂದೆ ಪ್ರತಿಯೊಬ್ಬರ ವಿಚಾರವು ಹೇಗಿರುತ್ತದೆ, ಅದಕ್ಕನುಸಾರ ಆ ಪ್ರಸಂಗದಲ್ಲಿ ಕಾರ್ಯಗತವಾಗಿರುವ ಸ್ವಭಾವದೋಷವು ಬೇರೆಯಾಗಿರಬಹುದು. ಈಗ ನಾವು ‘ಇತರರನ್ನು ಅರ್ಥ ಮಾಡಿಕೊಳ್ಳದಿರುವುದು’ ಎಂಬ ಸ್ವಭಾವದೋಷಕ್ಕನುಸಾರವಾಗಿ ‘ಅ ೨’ ಪದ್ಧತಿಯಂತೆ ಸ್ವಯಂಸೂಚನೆಯನ್ನು ತಯಾರಿಸಲು ಪ್ರಯತ್ನಿಸೋಣ.

ಇ. ಉದಾಹರಣೆಯ ಅಧ್ಯಯನ : ನಾವು ಈಗಾಗಲೇ ನೋಡಿರುವಂತೆ ಮನಸ್ಸಿನ ಮಟ್ಟದಲ್ಲಿ ಉಂಟಾಗುವ ಪ್ರತಿಕ್ರಿಯೆಗಳಿಗೆ ‘ಅ ೨’ ಪದ್ಧತಿಯಂತೆ ತಯಾರಿಸಿದ ಸ್ವಯಂಸೂಚನೆಗಳ ಸೂತ್ರವು ಹೇಗಿದೆ – ‘ಪ್ರಸಂಗ + ಯೋಗ್ಯ ದೃಷ್ಟಿಕೋನ + ಯೋಗ್ಯ ಪ್ರತಿಕ್ರಿಯೆ (ವಿಚಾರ ಅಥವಾ ಕೃತಿ)’. ಇಲ್ಲಿ ಪ್ರಸಂಗವು ಹೇಗಿದೆ ಎಂದರೆ ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಹೊರಗೆ ಹೊರಟಾಗ ಅತ್ತೆಯವರು ಅದೇ ಸಮಯಕ್ಕೆ ಪಾತ್ರೆಯನ್ನು ತೊಳೆಯಲು ಹೇಳಿದಾಗ ಪ್ರತಿಕ್ರಿಯೆಗಳು ಬಂದವು.

ಯೋಗ್ಯ ದೃಷ್ಟಿಕೋನ ಯಾವುದು ? ಅವರು ಈಗಲೇ ಆ ಪಾತ್ರೆಗಳನ್ನು ತೊಳೆಯಲು ಏಕೆ ಹೇಳುತ್ತಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳುವೆನು. ಮತ್ತು ಯೋಗ್ಯ ಕೃತಿಯು ಏನಿರಬಹುದೆಂದರೆ ಪಾತ್ರೆಯನ್ನು ತೊಳೆಯುವುದರಲ್ಲಿನ ಅಡಚಣೆಯ ಬಗ್ಗೆ ನಾನು ಮುಕ್ತವಾಗಿ ಮಾತನಾಡಿ ಪರಿಹಾರವನ್ನು ಕಂಡುಕೊಳ್ಳುವೆನು.

ಈ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಹೊರಗೆ ಹೊರಟಿದ್ದಾಗ ಅತ್ತೆಯವರು ನನಗೆ ಪಾತ್ರೆಯನ್ನು ತೊಳೆಯಲು ಹೇಳಿದರೆ, ಈಗಲೇ ಆ ಪಾತ್ರೆಗಳನ್ನು ತೊಳೆಯಲು ಏಕೆ ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ಗಮನಕ್ಕೆ ಬಂದು ನಾನು ಅದರ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡುವೆನು ಮತ್ತೆ ನನ್ನ ಅಡಚಣೆಯ ಬಗ್ಗೆ ಪರಿಹಾರವನ್ನು ಕಂಡುಕೊಳ್ಳುವೆನು.

ಇಲ್ಲಿ ಎಲ್ಲಕ್ಕಿಂತ ಮಹತ್ವದ ಸೂತ್ರವೆಂದರೆ ನಮ್ಮ ವಿಚಾರಪ್ರಕ್ರಿಯೆ ಅಥವಾ ನಮ್ಮ ನಿಲುವು ಯೋಗ್ಯವೇ ಆಗಿದೆ ಎಂದು ನಮಗೆ ಎನಿಸುತ್ತದೆ ಮತ್ತು ಅದೇ ನಮಗೆ ಎಚ್ಚರಿಸುವ ಸಂಗತಿಯಾಗಿದೆ. ನಮ್ಮ ಮನಸ್ಸಿನಲ್ಲಿ ಉಂಟಾಗುವ ಪ್ರತಿಕ್ರಿಯೆಗಳಿಂದ ನಮಗೆ ಅಥವಾ ಇತರರಿಗೆ ತೊಂದರೆಯಾಗುತ್ತಿದ್ದರೆ ಅಲ್ಲಿ ನಮ್ಮಿಂದ ಏನೋ ತಪ್ಪಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ನಮ್ಮ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಅಂತರ್ಗತವಾಗಿ ಏನು ಮಾಡಬೇಕೆಂದರೆ ಅಯೋಗ್ಯ ಪ್ರತಿಕ್ರಿಯೆಗಳ ಮೇಲೆ ಜಯ ಹೊಂದಿ ಮನಸ್ಸಿನಲ್ಲಿ ಸಕಾರಾತ್ಮಕ ಅಥವಾ ಯೋಗ್ಯ ಪ್ರತಿಕ್ರಿಯೆಗಳು ಬರುವಂತೆ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಾವು ಇತರರನ್ನು ಅಥವಾ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳನ್ನು ಮಾಡದೇ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಈ ಪ್ರಕ್ರಿಯೆಯ ಕೇಂದ್ರಬಿಂದುವಾಗಿದೆ.

ಅಭ್ಯಾಸಕ್ಕಾಗಿ ಉದಾಹರಣೆ

ಈಗ ನಾವು ಅಭ್ಯಾಸಕ್ಕೆಂದು ಕೆಲವು ಪ್ರಸಂಗಗಳನ್ನು ನೋಡೋಣ ಮತ್ತು ಸ್ವಯಂಸೂಚನೆಗಳನ್ನು ತಯಾರಿಸಲು ಪ್ರಯತ್ನಿಸೋಣ.

ಅ. ಪ್ರಸಂಗ : ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕಿಕೊಂಡಿದ್ದ ಶ್ರೀ. ಆಕಾಶ್ ಇವರು ಕಛೇರಿಯಿಂದ ಮನೆಗೆ ಬರಲು ನಿತ್ಯಕ್ಕಿಂತ ತಡವಾದಾಗ ‘ನೀವು ಬರಲು ಏಕೆ ಇಷ್ಟು ತಡವಾಯಿತು’ ಎಂದು ಪತ್ನಿಯು ಕೇಳಿದಾಗ ಕೋಪ ಬಂದಿತು ಮತ್ತು ಅವರು ‘ನಿನಗೆ ಪ್ರಶ್ನೆ ಕೇಳುವುದು ತುಂಬಾ ಸುಲಭ, ನೀನು ಮನೆಯಲ್ಲಿಯೇ ಇರುತ್ತೀಯ’ ಎಂದು ಕೋಪದಿಂದ ಹೇಳಿದರು.

ಆ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಸ್ವಯಂಸೂಚನೆಯು ಹೇಗಿರಬೇಕು ? ‘ಮನೆಗೆ ತಡವಾಗಿ ತಲುಪಿದಾಗ ಪತ್ನಿಯು ‘ಏಕೆ ಇಷ್ಟು ತಡವಾಯಿತು?’ ಎಂದು ಕೇಳಿದಾಗ , ಅವಳಿಗೆ ನನ್ನ ಬಗ್ಗೆ ಚಿಂತೆ ಎನಿಸುವುದರಿಂದ ಅವಳು ಹಾಗೆ ಕೇಳುತ್ತಿದ್ದಾಳೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡು, ತಡವಾಗುವುದರ ಹಿಂದಿನ ಕಾರಣವನ್ನು ಶಾಂತವಾಗಿ ಹೇಳುವೆನು.

Leave a Comment