ಮಾರ್ಗಶೀರ್ಷ ಅಮಾವಾಸ್ಯೆ (26.12.2019), ಗುರುವಾರದಂದು ಇರುವ ಸೂರ್ಯಗ್ರಹಣದ ನಿಮಿತ್ತ…

೧. ಸೂರ್ಯಗ್ರಹಣ

ಮಾರ್ಗಶೀರ್ಷ ಅಮಾವಾಸ್ಯೆ (26.12.2019), ಗುರುವಾರದಂದು ದಕ್ಷಿಣ ಭಾರತದಲ್ಲಿ ಬೆಳಗ್ಗೆ ೯.೩೦ ಸುಮಾರಿಗೆ ಕಂಕಣ ಸೂರ್ಯಗ್ರಹಣ ಗೋಚರಿಸಲಿದ್ದು, ಭಾರತದ ಉಳಿದ ಭಾಗದಲ್ಲಿ ಈ ಸೂರ್ಯಗ್ರಹಣವು ‘ಖಂಡಗ್ರಾಸ’ವಾಗಿರುವುದು.

ಸೂರ್ಯ ಮತ್ತು ಪೃಥ್ವಿಯ ಮಧ್ಯದಲ್ಲಿ ಚಂದ್ರ ಬಂದು ಚಂದ್ರನ ನೆರಳು ಪೃಥ್ವಿಯ ಮೇಲೆ ಬೀಳುತ್ತದೆ. ಇದು ಕಾಣಿಸುವ ಭಾಗದಲ್ಲಿ ಅಷ್ಟು ಸಮಯ ಸೂರ್ಯನು ಅಗೋಚರವಾಗುತ್ತಾನೆ. ಸೂರ್ಯನು ಪೂರ್ಣವಾಗಿ ಅಗೋಚರವಾಗಿದ್ದರೆ ಅದಕ್ಕೆ ‘ಖಗ್ರಾಸ ಸೂರ್ಯಗ್ರಹಣ’ವೆಂದೂ, ಸೂರ್ಯನು ಅರ್ಧದಷ್ಟು ಅಗೋಚರವಾಗಿದ್ದರೆ ಅದಕ್ಕೆ ‘ಖಂಡಗ್ರಾಸ ಸೂರ್ಯಗ್ರಹಣ’ವೆಂದೂ ಕರೆಯುತ್ತಾರೆ. ಸೂರ್ಯನು ಕಂಕಣಾಕೃತಿಯಲ್ಲಿ (ಸ್ತ್ರೀಯರು ಧರಿಸುವ ಬಳೆಗಳ ಆಕೃತಿ) ಕಾಣಿಸಿದರೆ ಅದನ್ನು ‘ಕಂಕಣ ಗ್ರಹಣ’ವೆಂದೂ ಕರೆಯುತ್ತಾರೆ. ‘ಕಂಕಣ ಗ್ರಹಣ’ದಲ್ಲಿ ಸೂರ್ಯನು ಚಂದ್ರನಿಂದಾಗಿ ಪೂರ್ಣವಾಗಿ ಮರೆಯಾಗದೆ, ಬಳೆಯಂತೆ ಕಾಣಿಸುತ್ತಾನೆ. ಈ ರೀತಿಯ ಅಪರೂಪದ ಸೂರ್ಯಗ್ರಹಣವು ಕೇವಲ ಅಮಾವಾಸ್ಯೆಯಂದು ಗೋಚರಿಸುತ್ತದೆ.

೨. ಭಾರತದಾದ್ಯಂತ ಸೂರ್ಯಗ್ರಹಣ ಗೋಚರಿಸಲಿರುವ ಸಮಯ

ಈ ಗ್ರಹಣವು ಭಾರತ ಸೇರಿ ಸಂಪೂರ್ಣ ಏಷಿಯಾ ಖಂಡ, ಆಫ್ರಿಕಾದ ಇಥಿಯೋಪಿಯಾ, ಕೀನ್ಯಾ ಹಾಗೂ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಗೋಚರಿಸಲಿದೆ.

ಕರ್ನಾಟಕ, ಕೇರಳ, ತಮಿಳುನಾಡು ಇತ್ಯಾದಿ ಪ್ರದೇಶಗಳಲ್ಲಿ ಕಂಕಣ ಗ್ರಹಣ ಗೋಚರಿಸಲಿದ್ದು, ಉಳಿದ ಭಾಗದಲ್ಲಿ ಖಂಡಗ್ರಾಸ ಗ್ರಹಣ ಗೋಚರಿಸಲಿದೆ. ಈ ಗ್ರಹಣವು 26.12.2019 ರಂದು ಬೆಳಗ್ಗೆ 8.04 ರಿಂದ ಬೆಳಗ್ಗೆ 11.11 ರ ವರೆಗೆ ಗೋಚರಿಸುವುದು.

೨ಅ. ಸೂರ್ಯಗ್ರಹಣದ ಸಮಯ (ಬೆಂಗಳೂರಿನಲ್ಲಿ ಗೋಚರಿಸಲಿರುವ ಸಮಯ)

೨ ಅ ೧.  ಸ್ಪರ್ಶ (ಆರಂಭ) : 26.12.2019 ರಂದು ಬೆಳಗ್ಗೆ 8.06

೨ ಅ ೨.  ಮಧ್ಯ : 26.12.2019 ರಂದು ಬೆಳಗ್ಗೆ 9.29

೨ ಅ ೩.  ಮೋಕ್ಷ (ಅಂತ್ಯ) : 26.12.2019 ರಂದು ಬೆಳಗ್ಗೆ 11.11

ಗ್ರಹಣಪರ್ವ (ಗ್ರಹಣ ಆರಂಭದಿಂದ ಮೋಕ್ಷದ ವರೆಗಿನ ಕಾಲಾವಧಿ) : ೩ ಗಂಟೆ ೫ ನಿಮಿಷ

ಪರ್ವ ಎಂದರೆ ಪುಣ್ಯಕಾಲ ಎಂದರ್ಥ. ಗ್ರಹಣದ ಸ್ಪರ್ಶದಿಂದ ಮೋಕ್ಷದವರೆಗಿನ ಸಮಯವು ಪುಣ್ಯಕಾಲವಾಗಿದೆ. ಈ ಸಮಯದಲ್ಲಿ ದೇವರ ಅನುಸಂಧಾನದಲ್ಲಿ ಇರುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಗ್ರಹಣದ ವೇಧಕಾಲ

೨ ಇ ೧. ಅರ್ಥ

ಸೂರ್ಯಗ್ರಹಣದ ಮೊದಲು ಚಂದ್ರನು ಸೂರ್ಯ ಮತ್ತು ಪೃಥ್ವಿಯ ಮಧ್ಯದಲ್ಲಿ ಬರುತ್ತಾನೆ. ಆಗ ಸೂರ್ಯನ ಪ್ರಕಾಶವು ನಿಧಾನವಾಗಿ ಕ್ಷೀಣಿಸುತ್ತದೆ. ಇದನ್ನೇ ಗ್ರಹಣದ ವೇಧಕಾಲ ಎನ್ನುತ್ತಾರೆ.

೨ ಇ ೨. ಕಾಲಾವಧಿ

ಸೂರ್ಯಗ್ರಹಣವು ದಿನದ ಮೊದಲನೇ ಪ್ರಹರದಲ್ಲಿ (೧) ಇರುವುದರಿಂದ 25.12.2019 ರಂದು ಸೂರ್ಯಾಸ್ತದಿಂದ ಗ್ರಹಣ ಮೋಕ್ಷದವರೆಗೆ, ಅಂದರೆ 26.12.2019 ರಂದು ಬೆಳಗ್ಗೆ 11.11 ವರೆಗೆ ವೇಧವನ್ನು ಪಾಲಿಸಬೇಕು.

೧ : ಒಂದು ಪ್ರಹರವೆಂದರೆ ೩ ಗಂಟೆಗಳ ಅವಧಿ. ಹಗಲಲ್ಲಿ ೪ ಮತ್ತು ರಾತ್ರಿಯಲ್ಲಿ ೪ ಹೀಗೆ ಒಂದು ದಿನದಲ್ಲಿ 8 ಪ್ರಹರಗಳಿವೆ.

೩. ಸೂರ್ಯಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು 

ವೇಧಕಾಲದಲ್ಲಿ ಸ್ನಾನ, ದೇವತೆಗಳ ಪೂಜೆ, ನಿತ್ಯಕರ್ಮ, ಜಪ, ಮತ್ತು ಶ್ರಾದ್ಧ ಈ ಕರ್ಮಗಳನ್ನು ಮಾಡಬಹುದು. ವೇಧಕಾಲದಲ್ಲಿ ಭೋಜನ ನಿಷಿದ್ಧವಾಗಿದೆ; ಆದುದರಿಂದ ಏನನ್ನೂ ತಿನ್ನಬಾರದು. ಆದರೆ ಅವಶ್ಯಕವಿದ್ದರೆ ನೀರು ಸೇವಿಸುವುದು, ಮಲ-ಮೂತ್ರ ವಿಸರ್ಜನೆ ಮತ್ತು ವಿಶ್ರಾಂತಿಯನ್ನು ಪಡೆಯಬಹುದು. ಗ್ರಹಣದ ಸಮಯದಲ್ಲಿ (ಅಂದರೆ ಬೆಳಗ್ಗೆ 8 ರಿಂದ 11 ರ ವರೆಗೆ) ಈ ಕರ್ಮಗಳನ್ನು ನಿಷೇಧಿಸಲಾಗಿದೆ.

ಮಕ್ಕಳು, ವೃದ್ಧರು, ನಿಶಕ್ತರು, ಗರ್ಭಿಣಿಯರು 25.12.2019 ರಂದು ರಾತ್ರಿ 12.00 ರಿಂದ ಗ್ರಹಣಮೋಕ್ಷದ ವರೆಗೆ ವೇಧಗಳನ್ನು ಪಾಲಿಸಬೇಕು. (ದಾತೆ ಪಂಚಾಂಗ)

೩ ಅ. ಆರೋಗ್ಯದ ದೃಷ್ಟಿಯಿಂದ ವೇಧ ನಿಯಮಗಳನ್ನು ಪಾಲಿಸುವ ಮಹತ್ವ !

೩ ಅ ೧. ಶಾರೀರಿಕ ಮತ್ತು ಭೌತಿಕ ಸ್ತರ

ವೇಧಕಾಲದಲ್ಲಿ ಸೂಕ್ಷ್ಮಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಖಾದ್ಯಪದಾರ್ಥಗಳು ಬೇಗನೆ ಹಾಳಾಗುತ್ತವೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯೂ ಕ್ಷೀಣವಾಗುತ್ತದೆ. ರಾತ್ರಿಯ ಅನ್ನವು ಮರುದಿನ ತಂಗಳನ್ನ ಆಗುವ ಹಾಗೆ ಗ್ರಹಣದ ಮೊದಲು ತಯಾರಿಸಿದ ಖಾದ್ಯಪದಾರ್ಥಗಳು ಕೂಡ ಅದೇ ರೀತಿಯಾಗುತ್ತವೆ. ಆದುದರಿಂದ ಈ ಅನ್ನವನ್ನು ಸೇವಿಸಬಾರದು. ಈ ನಿಯಮವು ಹಾಲು ಮತ್ತು ನೀರಿಗೆ ಅನ್ವಯಿಸುವುದಿಲ್ಲ. ಗ್ರಹಣದ ಮೊದಲು ಇದ್ದಂತಹ ಹಾಲು ಮತ್ತು ನೀರು ಗ್ರಹಣದ ನಂತರವೂ ಸೇವಿಸಬಹುದು.

೩ ಅ ೨. ಮಾನಸಿಕ ಸ್ತರ

ಮಾನಸಿಕ ಆರೋಗ್ಯದ ಮೇಲೆಯೂ ವೇಧಕಾಲದ ಪರಿಣಾಮವಾಗುತ್ತದೆ. ‘ಕೆಲವರಲ್ಲಿ ನಿರಾಶೆ, ಒತ್ತಡ ಇತ್ಯಾದಿ ಮಾನಸಿಕ ತೊಂದರೆಗಳು ಆಗುತ್ತವೆ’ ಎಂದು ಮಾನಸೋಪಚಾರ ತಜ್ಞರ ಅಭಿಪ್ರಾಯವಿದೆ.

೩ ಅ ೩. ಆಧ್ಯಾತ್ಮಿಕ ಸ್ತರ

ಗ್ರಹಣಕಾಲದಲ್ಲಿ ಮಾಡಿದಂತಹ ಆಧ್ಯಾತ್ಮಿಕ ಸಾಧನೆಗೆ ಸಾವಿರಾರು ಪಟ್ಟಿನಲ್ಲಿ ಫಲ ಲಭಿಸುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯ ನೀಡುವುದು ಮಹತ್ತರವಾಗಿದೆ. ವೇಧಾರಂಭದಿಂದ ಗ್ರಹಣದ ಮೋಕ್ಷದ ವರೆಗೆ ನಾಮಜಪ, ಸ್ತೋತ್ರಪಠಣ, ಧ್ಯಾನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡಿದರೆ ಲಾಭವನ್ನು ಪಡೆದುಕೊಳ್ಳಬಹುದು.

೪. ಗ್ರಹಣಕಾಲದಲ್ಲಿ ವಿಧಿನಿಷೇಧಗಳು

೪ ಅ. ನಿಷಿದ್ಧ ಕರ್ಮ

ಗ್ರಹಣದ ಸಮಯದಲ್ಲಿ (ಪರ್ವಕಾಲದಲ್ಲಿ) ನಿದ್ರೆ, ತಿನ್ನುವುದು ಮತ್ತು ಕುಡಿಯುವುದು, ಮಲ-ಮೂತ್ರ ವಿಸರ್ಜನೆ, ಅಭ್ಯಂಗ (ಬೆಚ್ಚನೆಯ ಎಣ್ಣೆಯಿಂದ ಮೈ ತಿಕ್ಕಿಕೊಳ್ಳುವುದು), ಕಾಮಾದಿ ವಿಷಯ ನಿಷಿದ್ಧವಾಗಿದೆ.

೪ ಆ. ಏನು ಮಾಡಬೇಕು ?

ಅ. ಗ್ರಹಣಸ್ಪರ್ಶವಾಗುತ್ತಿದ್ದಂತೆ ಸ್ನಾನ ಮಾಡಿ.

ಆ. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣೆ ನೀಡುವುದು, ಶ್ರಾದ್ಧ, ಜಪ, ಹೋಮ, ದಾನ ಇತ್ಯಾದಿಗಳನ್ನು ಮಾಡಿ.

ಇ. ಯಾವುದಾದರೂ ಕಾರಣದಿಂದ ಹಿಂದೊಮ್ಮೆ ಪ್ರಾರಂಭಿಸಿ ಮಧ್ಯದಲ್ಲೇ ನಿಂತುಹೋಗಿರುವ ಮಂತ್ರಪಠಣವನ್ನು ಪುನಃ ಪ್ರಾರಂಭಿಸುವುದರಿಂದ ಅದರ ಅನೇಕ ಪಟ್ಟಿನಲ್ಲಿ ಲಾಭವಾಗುತ್ತದೆ.

ಈ. ಗ್ರಹಣ ಮೋಕ್ಷಣದ ನಂತರ ಮತ್ತೊಮ್ಮೆ ಸ್ನಾನ ಮಾಡಿ.

ಕಾರಣಾಂತರದಿಂದ ಅಶೌಚವಿದ್ದರೆ ಗ್ರಹಣಕಾಲದಲ್ಲಿ ಗ್ರಹಣಕ್ಕೆ ಸಂಬಂಧಿಸಿದ ಸ್ನಾನ ಮತ್ತು ದಾನ ನೀಡುವುದರಿಂದ ಶುದ್ಧಿಯಾಗುತ್ತದೆ.

೫. ರಾಶಿಗಳಿಗನುಸಾರ ಗ್ರಹಣದ ಫಲ

ಶುಭಫಲ: ಕರ್ಕ, ಕುಂಭ, ತುಲಾ, ಮೀನ

ಅಶುಭ ಫಲ : ವೃಷಭ, ಕನ್ಯಾ, ಧನು, ಮಕರ

ಮಿಶ್ರಫಲ : ಮೇಷ, ಮಿಥುನ, ಸಿಂಹ, ವೃಶ್ಚಿಕ

ಸೂಚನೆ : ಯಾವ ರಾಶಿಗಳಿಗೆ ಅಶುಭ ಫಲವಿದೆಯೋ ಅವರು ಹಾಗೂ ಗರ್ಭಿಣಿ ಮಹಿಳೆಯರು ಸೂರ್ಯಗ್ರಹಣವನ್ನು ನೋಡಬಾರದು. (ಆಧಾರ : ದಾತೆ ಪಂಚಾಂಗ)

೬. ಸೂರ್ಯಗ್ರಹಣ ನೋಡುವಾಗ ವಹಿಸಬೇಕಾದ ಜಾಗರೂಕತೆ 

ಖಂಡಗ್ರಾಸ ಸೂರ್ಯಗ್ರಹಣ ನೋಡುವಾಗ ‘ಸೂರ್ಯಗ್ರಹಣ’ ವೀಕ್ಷಿಸಲು ತಯಾರಿಸಲಾದ ವಿಶೇಷ ಕನ್ನಡಕ, ಮಸಿ ಹಚ್ಚಿದ ಗಾಜು, ಕಪ್ಪು ಗಾಜು ಅಥವಾ ಸೂರ್ಯನ ಪ್ರಖರ ಕಿರಣಗಳು ನಮ್ಮ ಕಣ್ಣಿಗೆ ಬೀಳದಂತೆ ತಯಾರಿಸಲಾದ ಉಪಕರಣಗಳನ್ನು ಬಳಸಿ. ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಬಾರದು. ಗ್ರಹಣದ ಛಾಯಾಚಿತ್ರವನ್ನು ತೆಗೆಯುವಾಗ ಕೂಡ ವಿಶಿಷ್ಟ ಫಿಲ್ಟರ್ ಉಪಯೋಗಿಸಿ.

ಈ ಗ್ರಹಣದಲ್ಲಿ ಕಂಕಣಾಕೃತಿಯು ೩ ನಿಮಿಷಗಳ ಕಾಲ ಕಾಣಿಸಲಿರುವುದರಿಂದ ಆ ಸಮಯದಲ್ಲಿ ಸೂರ್ಯಗ್ರಹಣವನ್ನು ನೋಡುವವರು ವಿಶೇಷ ಕನ್ನಡಕವನ್ನು ಧರಿಸಿಯೇ ಇರಬೇಕು. ಮುಂದಿನ ಕಂಕಣ ಗ್ರಹಣವು 21.6.2020 ಉತ್ತರ ಭಾರತದಲ್ಲಿ ಕಾಣಿಸಲಿದೆ. ಈ ಮೊದಲು 1890 ಮತ್ತು 15 ಜನವರಿ, 2010 ರಂದು ದಕ್ಷಿಣ ಭಾರತದಲ್ಲಿ ಈ ರೀತಿಯ ಗ್ರಹಣ ಕಾಣಿಸಿತ್ತು. (ಆಧಾರ : ದಾತೆ ಪಂಚಾಂಗ)

೭. ಗ್ರಹಣದ ಸಮಯದಲ್ಲಿ ಮಾಡುವ ಸ್ನಾನದ ಮಹತ್ವ

ಗ್ರಹಣದ ಸಮಯದಲ್ಲಿ ನೀರು ಗಂಗಸಮಾನವಾಗಿರುತ್ತದೆ. ಆದರೂ ಬಿಸಿ ನೀರಿನ ತುಲನೆಯಲ್ಲಿ ತಣ್ಣಗಿರುವ ನೀರು ಪುಣ್ಯಕಾರಕವಾಗಿರುತ್ತದೆ. ಮೇಲೆತ್ತಿದ ನೀರಿನ ತುಲನೆಯಲ್ಲಿ ಹರಿಯುವ ನೀರು, ಸರೋವರ, ನದಿ, ಮಹಾನದಿ, ಗಂಗೆ, ಸಮುದ್ರ ಇವುಗಳಲ್ಲಿ ಸ್ನಾನ ಮಾಡುವುದು ಕ್ರಮವಾಗಿ ಹೆಚ್ಚು ಶ್ರೇಷ್ಠ ಮತ್ತು ಪುಣ್ಯಕಾರಕವಾಗಿದೆ. ಸೂರ್ಯಗ್ರಹಣದ ಸಮಯದಲ್ಲಿ ನರ್ಮದೆಯಲ್ಲಿ ಮಾಡಿದ ಸ್ನಾನಕ್ಕೆ ವಿಶೇಷ ಮಹತ್ವವಿದೆ. ನರ್ಮದೆಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದರೆ ಸ್ನಾನದ ಸಮಯದಲ್ಲಿ ನರ್ಮದೆಯನ್ನು ಅವಶ್ಯ ಸ್ಮರಿಸಿ. (ಆಧಾರ : ದಾತೆ ಪಂಚಾಂಗ)

೮. ಸೂರ್ಯಗ್ರಹಣದ ಸಮಯದಲ್ಲಿ ಸಾಧನೆಯನ್ನು ಮಾಡುವ ಮಹತ್ವ 

ಗ್ರಹಣದ ಸಮಯದಲ್ಲಿ ನಿರ್ಮಾಣವಾಗುವ ವಿಶೇಷ ವಾತಾವರಣದ ಪರಿಣಾಮವು ಪ್ರತಿಯೊಂದು ಜೀವದ ಮೇಲೆಯೂ ಆಗುತ್ತದೆ. ಚಂದ್ರಗ್ರಹಣಕ್ಕಿಂತ ಸೂರ್ಯಗ್ರಹಣದ ಕಾಲಾವಧಿಯು ಸಾಧನೆಗೆ ಹೆಚ್ಚು ಪೂರಕವಾಗಿದೆ. ಜ್ಯೋತಿಷ್ಯ, ಧಾರ್ಮಿಕ ವಿಷಯಗಳಲ್ಲಿ ಮತ್ತು ವಿಜ್ಞಾನದಲ್ಲಿ ಗ್ರಹಣಕ್ಕೆ ವಿಶೇಷ ಮಹತ್ವವಿದೆ. ಗ್ರಹಣಕಾಲವು ಸಂಧಿಕಾಲವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಸಾಧನೆಯ ಪರಿಣಾಮವು ಬೇಗನೆ ಅರಿವಿಗೆ ಬರುತ್ತದೆ. ಗ್ರಹಣಕಾಲದಲ್ಲಿ ಮಾಡಿದ ಜಪ ಮತ್ತು ದಾನಗಳ ಅನಂತ ಪಟ್ಟಿನಲ್ಲಿ ಫಲವು ಲಭಿಸುತ್ತದೆ. ಆದುದರಿಂದ ಗ್ರಹಣಮೋಕ್ಷದ ನಂತರ ಕ್ಷಮತೆಗನುಸಾರ ದಾನ ನೀಡಬೇಕು.

ಹೊಸ ಮಂತ್ರವನ್ನು ಪ್ರಾರಂಭಿಸಲು ಅಥವಾ ಮಂತ್ರಗಳ ಪುರಶ್ಚರಣ (ನಿಲ್ಲಿಸಿದ ಪಾರಾಯಣವನ್ನು ಪುನಃ ಪ್ರಾರಂಭಿಸಲು) ಸೂರ್ಯಗ್ರಹಣದ ಸಮಯವು ಅನುಕೂಲವಾಗಿದೆ. ಈ ಹಿಂದೆ ಪಡೆದಂತಹ ಮಂತ್ರದ ಗ್ರಹಣ ಪರ್ವಕಾಲದಲ್ಲಿ ಪುರಶ್ಚರಣ ಮಾಡುವುದರಿಂದ ಮಂತ್ರ ಸಿದ್ಧವಾಗುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಶ್ರೀ ಗುರುಗಳನ್ನು ಅನನ್ಯಭಾವದಿಂದ ಸ್ಮರಿಸಿ, ಸಂಪೂರ್ಣ ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿದ ಜಪದಿಂದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗು ವ್ಯಾವಹಾರಿಕ ಸಮಸ್ಯೆಗಳು ಬಗೆಹರಿಯುತ್ತವೆ. ಕಾರ್ಯದಲ್ಲಿ ಸಫಲತೆಯು ಪ್ರಾಪ್ತವಾಗುತ್ತದೆ. ಗ್ರಹಣಕಾಲದಲ್ಲಿ ಜಪವನ್ನು ಮಾಡಲು ಜಪಮಾಲೆಯ ಅವಶ್ಯಕತೆಯಿಲ್ಲ.

ಗ್ರಹಣದ ಸ್ಪರ್ಶದಿಂದ ಮೋಕ್ಷದವರೆಗಿನ ಸಮಯವು ಮಹತ್ತ್ವದ್ದಾಗಿದೆ.

– ಸೌ. ಪ್ರಜಕ್ತಾ ಜೋಶಿ (ಜ್ಯೋತಿಷ ಫಲಿತ ವಿಶಾರದೆ), ಜ್ಯೋತಿಷ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಸನಾತನ ಆಶ್ರಮ, ರಾಮನಾಥಿ, ಗೋವಾ 

Leave a Comment