ಮನಸ್ಸು, ಸಂಸ್ಕಾರಗಳು, ಸ್ವಭಾವ, ಸ್ವಭಾವದೋಷಗಳ ಉತ್ಪತ್ತಿ ಮತ್ತು ಪ್ರಕಟೀಕರಣ

ಮಾನವನ ಮನಸ್ಸಿನ ಕಾರ್ಯ, ಸಂಸ್ಕಾರಗಳ ನಿರ್ಮಿತಿ, ಸ್ವಭಾವ, ಸ್ವಭಾವದೋಷಗಳ ಉತ್ಪತ್ತಿ ಮತ್ತು ಪ್ರಕಟೀಕರಣ ಇವುಗಳ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮನುಷ್ಯನ ಸ್ವಭಾವವು ಮನಸ್ಸಿಗೆ ಸಂಬಂಧಪಟ್ಟಿರುವುದರಿಂದ ಸ್ವಭಾವದೋಷಗಳ ನಿರ್ಮೂಲನೆಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವ ಮೊದಲು ಮನಸ್ಸು ಹೇಗೆ ಕಾರ್ಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ…

ಮನಸ್ಸು

ಮಾನವನ ಸ್ವಭಾವವು ಅವನ ಮನಸ್ಸಿಗೆ ಸಂಬಂಧಿಸಿರುತ್ತದೆ; ಆದುದರಿಂದ ಸ್ವಭಾವ ದೋಷಗಳ ವಿಚಾರ ಮಾಡುವುದಕ್ಕಿಂತ ಮೊದಲು ಮನಸ್ಸಿನ ಕಾರ್ಯವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಮೊದಲು ಅದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅ. ಅಧ್ಯಾತ್ಮಶಾಸ್ತ್ರಕ್ಕನುಸಾರ :

೧. ಮನಸ್ಸು : ‘ಸಂಕಲ್ಪ ವಿಕಲ್ಪಕಾತ್ಮಕಂ ಮನಃ |’, ಅಂದರೆ ವಿಚಾರ ಮಾಡುವುದು ಮನಸ್ಸಿನ ಸ್ವರೂಪವಾಗಿದೆ. ಅದರಲ್ಲಿ ಒಳ್ಳೆಯ ವಿಚಾರ, ಕೆಟ್ಟ ವಿಚಾರ, ಇಚ್ಛೆ, ವಾಸನೆ ಮತ್ತು ಭಾವನೆಗಳಿರುತ್ತವೆ. ಮನಸ್ಸು ಚಂಚಲವಾಗಿರುತ್ತದೆ. ‘ಇದನ್ನು ಮಾಡಬೇಕೋ / ಅದನ್ನು ಮಾಡಬೇಕೋ’ ಎಂಬ ವಿಚಾರಗಳು ಸತತವಾಗಿ ಬರುತ್ತಿರುತ್ತವೆ; ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ.

೨. ಚಿತ್ತ : ಶರೀರ, ಇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ಎಲ್ಲ ವೃತ್ತಿಗಳನ್ನು ಮತ್ತು ಕೃತಿಗಳನ್ನು ಸಂಗ್ರಹಿಸಿಡುವುದು ಇದರ ಕಾರ್ಯವಾಗಿದೆ. ಇದಕ್ಕೆ ‘ಸ್ಮೃತಿ’ ಎಂದು ಹೇಳುತ್ತಾರೆ. ಈ ಸ್ಮೃತಿಗಳು ಚಿತ್ತದಲ್ಲಿ ಸಂಗ್ರಹವಾಗಿರುತ್ತವೆ.

೩. ಬುದ್ಧಿ : ‘ನಿಶ್ಚಯಾತ್ಮಿಕ ಬುದ್ಧಿಃ |’, ಇದಕ್ಕನುಸಾರ ನಿಶ್ಚಯಿಸುವುದು, ಅಂದರೆ ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ, ಎಂಬುದರ ಬಗ್ಗೆ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳುವುದು ಬುದ್ಧಿಯ ಕಾರ್ಯವಾಗಿದೆ.

೪. ಅಹಂ : ಸ್ಥೂಲದೇಹ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಪ್ರತಿಯೊಂದು ವೃತ್ತಿ ಮತ್ತು ಕೃತಿಗಳೊಂದಿಗೆ ಸೇರಿಕೊಂಡು ಕರ್ತೃತ್ವ (ನನ್ನತನ)ವನ್ನು ನಿರ್ಮಿಸುವ ಅಂತಃಕರಣದ ವೃತ್ತಿ ಎಂದರೆ ಅಹಂ.

ಆ. ಆಧುನಿಕ ಮನಃಶಾಸ್ತ್ರಕ್ಕನುಸಾರ :

ಮನಸ್ಸಿನ ಎರಡು ಭಾಗಗಳಿರುತ್ತವೆ. ನಾವು ಯಾವಾಗಲೂ ಉಲ್ಲೇಖಿಸುವ ಮನಸ್ಸೆಂದರೆ ‘ಬಾಹ್ಯಮನಸ್ಸು’ ಮತ್ತು ಮನಸ್ಸಿನ ಯಾವ ಭಾಗವು ಅಪ್ರಕಟವಾಗಿರುತ್ತದೆಯೋ, ಅದು ಅಂತರ್ಮನಸ್ಸು ಅಂದರೆ ‘ಚಿತ್ತ’. ಮನಸ್ಸಿನ ರಚನೆಯಲ್ಲಿ ಮತ್ತು ಕಾರ್ಯದಲ್ಲಿ ಬಾಹ್ಯಮನಸ್ಸು ಕೇವಲ ಶೇ. ೧೦ ರಷ್ಟು ಮಾತ್ರ ಇರುತ್ತದೆ ಮತ್ತು ಅಂತರ್ಮನಸ್ಸು (ಚಿತ್ತ) ಶೇ. ೯೦ ರಷ್ಟಿರುತ್ತದೆ.

೧. ಬಾಹ್ಯಮನಸ್ಸು (conscious mind) : ಬಾಹ್ಯಮನಸ್ಸೆಂದರೆ ಜಾಗೃತ ಮನಸ್ಸು ಅರ್ಥಾತ್ ಜಾಗೃತಾವಸ್ಥೆಯಲ್ಲಿನ ಮನಸ್ಸು. ದಿನನಿತ್ಯ ಬರುವ ವಿಚಾರ ಮತ್ತು ಭಾವನೆಗಳು ಬಾಹ್ಯ ಮನಸ್ಸಿಗೆ ಸಂಬಂಧಿಸಿರುತ್ತವೆ.

೨. ಅಂತರ್ಮನಸ್ಸು (subconscious mind) : ಇದಕ್ಕೆ ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಚಿತ್ತ’ ಎನ್ನುತ್ತಾರೆ. ಅಂತರ್ಮನಸ್ಸೆಂದರೆ ಎಲ್ಲ ಭಾವಭಾವನೆಗಳ, ವಿಚಾರವಿಕಾರಗಳ ಒಂದು ಗೋದಾಮಾಗಿರುತ್ತದೆ ! ಈ ಗೋದಾಮಿನಲ್ಲಿ ಎಲ್ಲ ರೀತಿಯ ಅನುಭವ, ಭಾವನೆ, ವಿಚಾರ, ಇಚ್ಛೆ-ಅಕಾಂಕ್ಷೆ ಇತ್ಯಾದಿಗಳೆಲ್ಲವೂ ಸಂಗ್ರಹವಾಗಿರುತ್ತವೆ. ಹೀಗಿದ್ದರೂ ಬಾಹ್ಯಮನಸ್ಸಿಗೆ ಅದರ ಬಗ್ಗೆ ಸ್ವಲ್ಪವೂ ಕಲ್ಪನೆ ಇರುವುದಿಲ್ಲ; ಏಕೆಂದರೆ ಅಂತರ್ಮನಸ್ಸು ಮತ್ತು ಬಾಹ್ಯಮನಸ್ಸು ಇವೆರಡರ ಮಧ್ಯದಲ್ಲಿ ಒಂದು ರೀತಿಯ ಪರದೆ ಇರುತ್ತದೆ. ಕೆಲವೊಮ್ಮೆ ಯಾರಾದರೊಬ್ಬ ವ್ಯಕ್ತಿ ಭೇಟಿಯಾದಾಗ, ಅವನನ್ನು ಕೂಡಲೆ ಗುರುತಿಸುತ್ತೇವೆ; ಆದರೆ ಅವನ ಹೆಸರು ನಮಗೆ ನೆನಪಾಗುವುದಿಲ್ಲ. ಇದರ ಕಾರಣವೇನೆಂದರೆ ನಮ್ಮ ಬಾಹ್ಯಮನಸ್ಸು ಅವನ ಹೆಸರನ್ನು ಮರೆತಿರುತ್ತದೆ; ಆದರೆ ಸ್ವಲ್ಪ ಸಮಯದ ನಂತರ ಅವನ ಹೆಸರು ಒಮ್ಮೆಲೇ ನೆನಪಾಗುತ್ತದೆ. ಇದರ ಕಾರಣವೇನೆಂದರೆ ಅವನ ಹೆಸರನ್ನು ಅಂತರ್ಮನಸ್ಸು ಮರೆತಿರುವುದಿಲ್ಲ. ಅಂತರ್ಮನಸ್ಸು ಬಾಹ್ಯಮನಸ್ಸಿಗೆ ನೆನಪಿಸಿ ಕೊಡುತ್ತದೆ ಮತ್ತು ನಾವು ‘ಅವನ ಹೆಸರು ನಮಗೆ ಸ್ವಲ್ಪ ಸಮಯದ ನಂತರ ನೆನಪಾಯಿತು’ ಎಂದು ಹೇಳುತ್ತೇವೆ. ಅಂತರ್ಮನಸ್ಸಿನಲ್ಲಿಯೂ ಕೂಡಾ ಎರಡು ಭಾಗಗಳಿವೆ.

೨ ಅ. ಅಂತರ್ಮನಸ್ಸಿನ ಮೇಲಿನ ಪದರ (preconscious mind) : ಇದರಲ್ಲಿ ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹಾಗೂ ಅಹಂ ಇವುಗಳ ವೃತ್ತಿ ಮತ್ತು ಕೃತಿಗಳ ಬೇರೆಬೇರೆ ನೆನಪುಗಳು ಬೇರೆಬೇರೆ ಸಂಸ್ಕಾರ ಕೇಂದ್ರಗಳಲ್ಲಿ ಸಂಗ್ರಹವಾಗಿರುತ್ತವೆ ಮತ್ತು ಅವು ವಿಚಾರಗಳ ಸ್ವರೂಪದಲ್ಲಿ ಸತತವಾಗಿ ಪ್ರಕಟವಾಗುತ್ತಿರುತ್ತವೆ. ಹಾಗೆಯೇ ಅವುಗಳನ್ನು ನಮ್ಮ ಇಚ್ಛೆಗನುಸಾರ ಬಾಹ್ಯಮನಸ್ಸಿನಲ್ಲಿ ತರಲು ಆಗುತ್ತದೆ.

೨ ಆ. ಅಂತರ್ಮನಸ್ಸಿನ ಎಲ್ಲಕ್ಕಿಂತ ಕೆಳಗಿನ ಪದರ (unconscious mind) : ಇದರಲ್ಲಿ ಎಲ್ಲ ನೆನಪುಗಳ ಸಂಗ್ರಹವಿರುತ್ತದೆ; ಆದರೆ ಅವು ಎಲ್ಲಕ್ಕಿಂತ ಕೆಳಗಿನ ಭಾಗದಲ್ಲಿರುವುದರಿಂದ ನಮಗೆ ಅವುಗಳ ನೆನಪಿರುವುದಿಲ್ಲ ಮತ್ತು ನಮ್ಮ ಇಚ್ಛೆಗನುಸಾರ ಅವುಗಳನ್ನು ಬಾಹ್ಯ ಮನಸ್ಸಿನಲ್ಲಿ ತರಲಾಗುವುದಿಲ್ಲ; ಆದರೆ ವಿಶಿಷ್ಟ ಪ್ರಸಂಗದಿಂದಾಗಿ ಅಥವಾ ಘಟನೆಯಿಂದಾಗಿ ಅಂತರ್ಮನಸ್ಸಿನ ಆಳದಲ್ಲಿರುವ ನೆನಪುಗಳು ಪುನಃ ಬಾಹ್ಯ ಮನಸ್ಸಿನಲ್ಲಿ ಬರಬಹುದು.

ಈಗ ನಾವು ಅಂತರ್ಮನಸ್ಸಿನಲ್ಲಿರುವ ಸಂಸ್ಕಾರ ಕೇಂದ್ರಗಳ ಮಾಹಿತಿಯನ್ನು ನೋಡೋಣ.

೧. ವಾಸನಾ ಕೇಂದ್ರ : ವಾಸನೆ, ಇಚ್ಛೆ, ಆಕಾಂಕ್ಷೆ, ಅಪೇಕ್ಷೆ, ಏಷಣಾ ಇವುಗಳ ಸಂಸ್ಕಾರಗಳು ಈ ಕೇಂದ್ರದಲ್ಲಿರುತ್ತವೆ.

೨. ಬೇಕು-ಬೇಡಗಳ ಕೇಂದ್ರ : ಬೇಕು-ಬೇಡ ಇವುಗಳ ಸಂದರ್ಭದಲ್ಲಿನ ಸಂಸ್ಕಾರಗಳು ಈ ಕೇಂದ್ರದಲ್ಲಿ ಸಂಗ್ರಹವಾಗಿರುತ್ತವೆ.

೩. ಸ್ವಭಾವ ಕೇಂದ್ರ : ಈ ಕೇಂದ್ರದಲ್ಲಿ ಸ್ವಭಾವದಲ್ಲಿನ ಗುಣ ಮತ್ತು ದೋಷಗಳ ಸಂಸ್ಕಾರಗಳು ಸಂಗ್ರಹವಾಗಿರುತ್ತವೆ.

೪. ವೈಶಿಷ್ಟ್ಯ ಕೇಂದ್ರ : ಕಲೆ, ಆಟ ಇತ್ಯಾದಿಗಳ ಕೌಶಲ್ಯದ ಸಂದರ್ಭದಲ್ಲಿನ ಸಂಸ್ಕಾರಗಳು ಈ ಕೇಂದ್ರದಲ್ಲಿರುತ್ತವೆ.

೫. ಕೊಡು-ಕೊಳ್ಳುವಿಕೆಯ ಲೆಕ್ಕದ ಕೇಂದ್ರ : ಇದರಲ್ಲಿ ಸಂಚಿತ ಮತ್ತು ಪ್ರಾರಬ್ಧ ಕರ್ಮಗಳ ಉಲ್ಲೇಖವಿರುತ್ತದೆ.

 

ಸಂಸ್ಕಾರಗಳು

ವ್ಯಾಖ್ಯೆ : ವ್ಯವಹಾರದಲ್ಲಿ ‘ಸಂಸ್ಕಾರ’ ಎಂಬ ಶಬ್ದದ ಅರ್ಥವು ಸಮ್ಯಕ್ ಕೃತಿ, ಅಂದರೆ ಒಳ್ಳೆಯ ಆಚಾರ, ವಿಚಾರ ಮತ್ತು ಕೃತಿ ಎಂದಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ‘ಸಂಸ್ಕಾರ’ ಎಂಬ ಶಬ್ದದ ಅರ್ಥವು ಶರೀರ, ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ವೃತ್ತಿಗಳ ಮತ್ತು ಕೃತಿಗಳ ಅಂತರ್ಮನಸ್ಸಿನಲ್ಲಿ ಅಥವಾ ಚಿತ್ತದಲ್ಲಿ ಮೂಡಿದ ಗುರುತುಗಳು ಎಂದಾಗುತ್ತದೆ.

ಒಳ್ಳೆಯ ವಿಷಯಗಳ ಸಂಸ್ಕಾರಗಳಾಗುತ್ತವೆ, ಹಾಗೆಯೇ ಕೆಟ್ಟ ವಿಷಯಗಳ ಸಂಸ್ಕಾರಗಳೂ ಆಗುತ್ತವೆ, ಉದಾ. ದೇವರ ನಾಮಸ್ಮರಣೆ ಮಾಡುವ ಸಂಸ್ಕಾರವಾಗುತ್ತದೆ, ಹಾಗೆಯೇ ಬೈಯುವ ಸಂಸ್ಕಾರವೂ ಆಗುತ್ತದೆ.

ಯಾವ ಬಾಹ್ಯ ವಸ್ತು, ವ್ಯಕ್ತಿ, ಪ್ರಸಂಗ ಅಥವಾ ಘಟನೆಗಳ ಗುರುತುಗಳು ಅಂತರ್ಮನದಲ್ಲಿ, ಅಂದರೆ ಚಿತ್ತದಲ್ಲಿ ಮೂಡುತ್ತವೆಯೋ, ಅವು ನಮ್ಮ ನೆನಪಿನಲ್ಲಿ ಬಹಳ ಸಮಯ, ಆಯುಷ್ಯಪೂರ್ತಿ ಅಥವಾ ಅನೇಕ ಜನ್ಮಗಳವರೆಗೆ ಹಾಗೇ ಉಳಿಯುತ್ತವೆ. ಇದರ ಅರ್ಥವೇನೆಂದರೆ ದೇಹ, ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳಿಗೆ ಪೂರಕ ಮತ್ತು ಮಾರಕ ವಸ್ತು, ವ್ಯಕ್ತಿ, ಪ್ರಸಂಗ ಮತ್ತು ಘಟನೆಗಳ ಸಂಸ್ಕಾರಗಳಾಗುತ್ತಾ ಹೋಗುತ್ತವೆ.

 

ಸ್ವಭಾವ

ಯಾವಾಗ ಪ್ರತಿಯೊಂದು ಕೃತಿಯಿಂದ ನಮ್ಮ ಅಂತರ್ಮನಸ್ಸಿನಲ್ಲಿನ ಕೆಲವು ಸಂಸ್ಕಾರಗಳು ಪುನಃ ಪುನಃ ಪ್ರಕಟವಾಗುತ್ತವೆಯೋ, ಆಗ ಅವುಗಳಿಗೆ ‘ಸ್ವಭಾವ’ ಎಂದು ಕರೆಯಲಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಸ್ವಭಾವವೆಂದರೆ ವ್ಯಕ್ತಿಯ ಪ್ರಕೃತಿ.

ಕಲಿಯುಗದ ವ್ಯಕ್ತಿಯ ಸ್ವಭಾವದೋಷಗಳಿರುವ ಮನಸ್ಸು

ಸ್ವಭಾವದಲ್ಲಿನ ಗುಣ-ದೋಷಗಳು : ಸಾಮಾನ್ಯವಾಗಿ ಒಳ್ಳೆಯ ಸಂಸ್ಕಾರಗಳಿಗೆ ಗುಣ ಮತ್ತು ಕೆಟ್ಟ ಸಂಸ್ಕಾರಗಳಿಗೆ ಸ್ವಭಾವದೋಷ ಎಂದು ಹೇಳುತ್ತಾರೆ. ಯಾವುದಾದರೊಂದು ಸ್ವಭಾವವೈಶಿಷ್ಟ್ಯದಿಂದ ವ್ಯಕ್ತಿಯ ಕೃತಿಯಿಂದ ಅವನಿಗೆ ಮತ್ತು / ಅಥವಾ ಸಂಬಂಧಿತ ಇತರ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದ್ದರೆ, ಅದು ಆ ವ್ಯಕ್ತಿಯ ‘ಸ್ವಭಾವದೋಷ’ವಾಗುತ್ತದೆ.

ಸ್ವಭಾವದೋಷಗಳ ಪ್ರಕಟೀಕರಣ : ನಮ್ಮಿಂದಾಗುವ ಕ್ರಿಯೆ ಅಥವಾ ಕೃತಿಗಳು ಮತ್ತು ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ನಮ್ಮ ಸಂಸ್ಕಾರಗಳನ್ನು ಅವಲಂಬಿಸಿರುತ್ತವೆ. ಸಾಮಾನ್ಯವಾಗಿ ನಮ್ಮ ಜೀವನದಲ್ಲಿನ ಒಟ್ಟು ಕ್ರಿಯೆ ಅಥವಾ ಕೃತಿ ಮತ್ತು ಪ್ರತಿಕ್ರಿಯೆಗಳಲ್ಲಿ ಶೇ. ೫೦ ರಷ್ಟು ಯೋಗ್ಯವಾಗಿರುತ್ತವೆ ಮತ್ತು ಶೇ. ೫೦ ರಷ್ಟು ಅಯೋಗ್ಯವಾಗಿರುತ್ತವೆ. ಯೋಗ್ಯ ಕ್ರಿಯೆ ಅಥವಾ ಕೃತಿ ಮತ್ತು ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಗೆ ಸಂಬಂಧಿಸಿರುತ್ತವೆ ಮತ್ತು ಅಯೋಗ್ಯ ಕ್ರಿಯೆ ಅಥವಾ ಕೃತಿ ಮತ್ತು ಪ್ರತಿಕ್ರಿಯೆಗಳು ಸ್ವಭಾವದೋಷಗಳಿಗೆ ಸಂಬಂಧಿಸಿರುತ್ತವೆ. ಅಯೋಗ್ಯ ಕ್ರಿಯೆ (ಆಚರಣೆ) ಅಥವಾ ಕೃತಿ ಮತ್ತು ಪ್ರತಿಕ್ರಿಯೆಗಳಿಂದ ನಮಗೆ ತೊಂದರೆಯಾಗುತ್ತದೆ ಅಥವಾ ಅವುಗಳಿಗೆ ಸಂಬಂಧಿಸಿದ ಇತರರಿಗೆ ತೊಂದರೆಯಾಗುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

Leave a Comment