ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ : ಕುಲದೇವತೆಯ ನಾಮಜಪ

ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆ – ಕುಲದೇವರ ನಾಮಜಪ

ನಮಗೆ ಪೂಜೆ, ಆರತಿ, ಭಜನೆ ಇತ್ಯಾದಿ ಉಪಾಸನೆಗಳಿಂದ ದೇವತೆಯ ತತ್ತ್ವದ ಲಾಭವಾಗುತ್ತದೆ; ಆದರೆ ಈ ಎಲ್ಲ ಉಪಾಸನೆಗಳಿಗೆ ಮಿತಿಯಿರುವುದರಿಂದ (ಸಮಯ ಮತ್ತು ಸ್ಥಳದ ಮಿತಿ) ದೊರಕುವ ಲಾಭವೂ ಒಂದು ಮಿತಿಯೊಳಗಿರುತ್ತದೆ. ದೇವತೆಯ ತತ್ತ್ವದ ಲಾಭವು ಸತತವಾಗಿ ದೊರಕಲು ದೇವತೆಯ ಉಪಾಸನೆಯನ್ನೂ ಸತತವಾಗಿ ಮಾಡಬೇಕಾಗುತ್ತದೆ. ಈ ರೀತಿ ಸತತವಾಗಿ ಆಗುವಂತಹ ಏಕೈಕ ಉಪಾಸನೆಯೆಂದರೆ ‘ನಾಮಜಪ’. ಕಲಿಯುಗಕ್ಕಾಗಿ ನಾಮಜಪವು ಸುಲಭ ಮತ್ತು ಸರ್ವೋತ್ತಮ ಉಪಾಸನೆಯಾಗಿದೆ. ನಾಮಜಪವು ಗುರುಕೃಪಾಯೋಗಾನುಸಾರ ಸಾಧನೆಯ ಅಡಿಪಾಯವಾಗಿದೆ.

‘ಕುಲದೇವತೆ’ ಉಪಾಸನೆಯ ಇತಿಹಾಸ

ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು.

ವ್ಯುತ್ಪತ್ತಿ ಮತ್ತು ಅರ್ಥ

ಕುಲ ಎಂದರೆ ಮೂಲಾಧಾರ ಚಕ್ರ, ಶಕ್ತಿ ಅಥವಾ ಕುಂಡಲಿನಿ. ಕುಲ + ದೇವತೆ ಅಂದರೆ ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ.

೧. ಕುಲದೇವತೆಯ ನಾಮಜಪದ ಮಹತ್ವ: ಗುರುಪ್ರಾಪ್ತಿಯಾಗಿದ್ದರೆ ಮತ್ತು ಗುರುಗಳು ಗುರುಮಂತ್ರವನ್ನು ಕೊಟ್ಟಿದ್ದರೆ ಗುರುಮಂತ್ರವನ್ನೇ ಜಪಿಸಬೇಕು, ಇಲ್ಲದಿದ್ದಲ್ಲಿ ಈಶ್ವರನ ಅನೇಕ ಹೆಸರುಗಳ ಪೈಕಿ ಕುಲದೇವತೆಯ ನಾಮಜಪವನ್ನು ಮುಖ್ಯವಾಗಿ ಮುಂದಿನ ಎರಡು ಕಾರಣಗಳಿಗಾಗಿ ಪ್ರತಿದಿನ ಕನಿಷ್ಠ ೧ ರಿಂದ ೨ ಗಂಟೆಗಳ ಕಾಲ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು.
ಅ. ಯಾವ ಕುಲದ ಕುಲದೇವತೆಯು, ಅಂದರೆ ಕುಲದೇವಿ ಅಥವಾ ಕುಲದೇವ, ಇವರು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ.
ಆ. ಕೊನೆಯ ಶ್ವಾಸದವರೆಗೂ ಪ್ರತಿಯೊಬ್ಬರ ಜೊತೆಗಿರುವ ಪ್ರಾರಬ್ಧದ ತೀವ್ರತೆಯು ಕುಲದೇವತೆಯ ನಾಮಜಪದಿಂದಲೇ ಕಡಿಮೆಯಾಗುತ್ತದೆ.

ಕುಲದೇವತೆಯು ಪೃಥ್ವಿತತ್ತ್ವದ ದೇವತೆಯಾಗಿರುವುದರಿಂದ ಅವಳ ನಾಮಜಪದಿಂದಲೇ ಸಾಧನೆಯನ್ನು ಆರಂಭಿಸುವುದರಿಂದ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. ಕ್ಷಮತೆಯಿಲ್ಲದೇ ಮೊದಲು ತೇಜತತ್ತ್ವದ (ಉದಾ. ಗಾಯತ್ರೀ ಮಂತ್ರದ) ಉಪಾಸನೆಯನ್ನು ಮಾಡಿದರೆ ತೊಂದರೆಗಳಾಗಬಹುದು.

೨. ಕುಲದೇವತೆಯ ನಾಮಜಪ ಮಾಡುವ ಪದ್ಧತಿ: ಕುಲದೇವತೆಯ ಹೆಸರಿಗೆ ಪ್ರಾರಂಭದಲ್ಲಿ ‘ಶ್ರೀ’ ಸೇರಿಸಬೇಕು. ಹೆಸರಿಗೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಸೇರಿಸಿ, ಕೊನೆಗೆ ‘ನಮಃ’ ಎನ್ನಬೇಕು. ಉದಾಹರ‍ಣೆಗಾಗಿ, ಕುಲದೇವತೆಯು ‘ಗಣೇಶ’ ಆಗಿದ್ದರೆ ‘ಶ್ರೀ ಗಣೇಶಾಯ ನಮಃ|’, ಕುಲದೇವಿಯು ‘ಭವಾನಿ’ ಆಗಿದ್ದರೆ ‘ಶ್ರೀ ಭವಾನಿದೇವ್ಯೈ ನಮಃ|’ ಎಂದು ಹೇಳಬೇಕು. ಚತುರ್ಥಿ ಪ್ರತ್ಯಯದ ಅರ್ಥವು ‘ಗೆ’ ಎಂದಾಗಿದೆ. ಯಾವ ದೇವತೆಯ ನಾಮಜಪವನ್ನು ಮಾಡುತ್ತೇವೆಯೋ, ಆ ‘ದೇವತೆಗೆ ನಮಸ್ಕಾರ’ ಎಂದು ಇದರ ಅರ್ಥವಾಗಿದೆ.

೩. ಕುಲದೇವತೆಯು ಗೊತ್ತಿಲ್ಲದಿದ್ದರೆ ಯಾವ ನಾಮಜಪ ಮಾಡಬೇಕು?: ಕುಲದೇವತೆಯ ಗೊತ್ತಿಲ್ಲದಿದ್ದರೆ ಇಷ್ಟದೇವತೆಯ ಅಥವಾ ‘ಶ್ರೀ ಕುಲದೇವತಾಯೈ ನಮಃ |’ ಎಂದು ನಾಮಜಪ ಮಾಡಬೇಕು. ಅದು ಪೂರ್ಣವಾದ ನಂತರ ಕುಲದೇವತೆಯ ಹೆಸರು ಹೇಳುವವರು ಭೇಟಿಯಾಗುತ್ತಾರೆ. ಕುಲದೇವತೆಯ ನಾಮಜಪ ಪೂರ್ಣವಾದ ನಂತರ ಗುರುಗಳು ಸ್ವತಃ ಸಾಧಕನ ಜೀವನದಲ್ಲಿ ಬಂದು ಗುರುಮಂತ್ರವನ್ನು ಕೊಡುತ್ತಾರೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಸನಾತನದ ಸತ್ಸಂಗಗಳಲ್ಲಿ ಸಿಗುತ್ತದೆ.

ಶ್ರೀ ಕುಲದೇವತಾಯೈ ನಮಃ |

ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ಕುಲದೇವಿಯ ನಾಮಜಪವನ್ನು ಮಾಡಬೇಕೋ?

ಅ. ಕೇವಲ ಕುಲದೇವರು ಇದ್ದರೆ ಕುಲದೇವರ ನಾಮಜಪವನ್ನು ಮಾಡಬೇಕು ಮತ್ತು ಕೇವಲ ಕುಲದೇವಿ ಇದ್ದರೆ ಕುಲದೇವಿಯ ನಾಮಜಪವನ್ನು ಮಾಡಬೇಕು.
ಆ. ಯಾರಾದರೊಬ್ಬರಿಗೆ ಕುಲದೇವರು ಮತ್ತು ಕುಲದೇವಿ ಹೀಗೆ ಇಬ್ಬರೂ ಇದ್ದರೆ ಅವರು ಮುಂದಿನ ಕಾರಣಗಳಿಗಾಗಿ ಕುಲದೇವಿಯ ನಾಮಜಪವನ್ನು ಮಾಡಬೇಕು. ಚಿಕ್ಕವರಾಗಿದ್ದಾಗ ತಂದೆ-ತಾಯಿ ಇಬ್ಬರೂ ಇದ್ದರೂ ನಾವು ತಾಯಿಯಲ್ಲಿಯೇ ಹೆಚ್ಚು ಹಠ ಮಾಡುತ್ತೇವೆ. ಏಕೆಂದರೆ ತಾಯಿಯು ಬೇಗನೇ ಹಠವನ್ನು ಪೂರೈಸುತ್ತಾಳೆ. ಹಾಗೆಯೇ ಕುಲದೇವರಿಗಿಂತಲೂ ಕುಲದೇವಿಯು ಬೇಗನೇ ಪ್ರಸನ್ನಳಾಗುತ್ತಾಳೆ.
ಇ. ಯಾರಾದರೊಬ್ಬರ ಕುಲದೇವರು ಗಣೇಶಪಂಚಾಯತನ ಅಥವಾ ವಿಷ್ಣುಪಂಚಾಯತನ ಈ ಪ್ರಕಾರ ಇದ್ದರೆ ಆ ಪಂಚಾಯತನದಲ್ಲಿನ ಪ್ರಮುಖ ದೇವತೆಗಳಾದ ಶ್ರೀ ಗಣೇಶ ಅಥವಾ ಶ್ರೀವಿಷ್ಣು ಇವರನ್ನು ಕುಲದೇವರೆಂದು ತಿಳಿದುಕೊಳ್ಳಬೇಕು.
ಈ. ಕುಲದೇವರು ಗೊತ್ತಿಲ್ಲದಿದ್ದರೆ ಕುಟುಂಬದಲ್ಲಿನ ಹಿರಿಯ ವ್ಯಕ್ತಿಗಳು, ಬಂಧುಗಳು, ಜಾತಿಬಾಂಧವರು, ಹಳ್ಳಿಗಳಲ್ಲಿನ ಹಿರಿಯ ವ್ಯಕ್ತಿಗಳು, ಪುರೋಹಿತರು ಮುಂತಾದವರಿಂದ ಕುಲದೇವರು ಯಾರು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ಉ. ಸ್ತ್ರೀಯು ವಿವಾಹವಾದ ನಂತರ ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ತವರು ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ?: ಸಾಮಾನ್ಯವಾಗಿ ವಿವಾಹದ ನಂತರ ಸ್ತ್ರೀಯರ ಹೆಸರು ಬದಲಾಗುತ್ತದೆ. ತವರು ಮನೆಯ ಎಲ್ಲವನ್ನೂ ತ್ಯಾಗ ಮಾಡಿ ಸ್ತ್ರೀಯು ಅತ್ತೆ ಮನೆಗೆ ಬರುತ್ತಾಳೆ. ಒಂದು ಅರ್ಥದಲ್ಲಿ ಅದು ಅವಳ ಪುನರ್ಜನ್ಮವೇ ಆಗಿರುತ್ತದೆ; ಆದುದರಿಂದ ಮದುವೆಯಾದ ಮೇಲೆ ಸ್ತ್ರೀಯು ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕು. ಆದರೆ ಯಾರಾದರೊಬ್ಬ ಸ್ತ್ರೀಯು ಚಿಕ್ಕಂದಿನಿಂದಲೇ ನಾಮಜಪವನ್ನು ಮಾಡುತ್ತಿದ್ದರೆ ಅಥವಾ ಉನ್ನತ ಸಾಧಕಳಾಗಿದ್ದರೆ ಅವಳು ತನ್ನ ಮೊದಲಿನ ನಾಮಜಪವನ್ನೇ ಮಾಡಬೇಕು. ಮದುವೆಗಿಂತ ಮೊದಲು ಅವಳಿಗೆ ಗುರುಗಳು ನಾಮಜಪವನ್ನು ಕೊಟ್ಟಿದ್ದರೆ ಆ ಜಪವನ್ನೇ ಮಾಡಬೇಕು.

1. ಕುಲದೇವರ ನಾಮಜಪವನ್ನು ಮಾಡಿ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿ ಹೊಂದಿದ ಇತಿಹಾಸದ ದೊಡ್ಡ ಉದಾಹರಣೆಯೆಂದರೆ ಛತ್ರಪತಿ ಶಿವಾಜಿ ಮಹಾರಾಜರು. ಭವಾನಿದೇವಿಯು ಶಿವಾಜಿ ಮಹಾರಾಜರ ಕುಲದೇವಿಯಾಗಿದ್ದಳು. ಗುರುಪ್ರಾಪ್ತಿಯಾದ ನಂತರವೂ ಸಮರ್ಥ ರಾಮದಾಸಸ್ವಾಮಿಗಳು ಶಿವಾಜಿ ಮಹಾರಾಜರಿಗೆ ಅದೇ ನಾಮಜಪವನ್ನು ಗುರುಮಂತ್ರವನ್ನಾಗಿ ಕೊಟ್ಟಿದ್ದರು.

2. ಸಂತ ತುಕಾರಾಮ ಮಹಾರಾಜರು ಯಾವ ಪಾಂಡುರಂಗನ ಅನನ್ಯಭಕ್ತಿ ಮಾಡಿ ಸದೇಹ ಮುಕ್ತಿ ಹೊಂದಿದರೋ, ಆ ಪಾಂಡುರಂಗನು ಅವರ ಕುಲದೇವನಾಗಿದ್ದನು.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!

ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ ಹೆಚ್ಚಾಗುವುದು

ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ನಾಮಸಂಕೀರ್ತನಯೋಗ’)

7 thoughts on “ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ : ಕುಲದೇವತೆಯ ನಾಮಜಪ”

  1. ಸರಳವಾಗಿ ವಿವರಣೆಯನ್ನು ನೀಡಿದ್ದೀರಾ. ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಯುವ ಕುತೂಹಲ ಮೂಡಿಸಿದೆ. ಧನ್ಯವಾದಗಳು.

    Reply

Leave a Comment