ಧನುಷ್ಕೋಡಿ – ಒಂದು ದುರ್ಲಕ್ಷಿತ ಹಾಗೂ ಧ್ವಂಸಗೊಂಡ ತೀರ್ಥಕ್ಷೇತ್ರ !

chetan rajhans
ಶ್ರೀ. ಚೇತನ ರಾಜಹಂಸ

ಭಾರತದ ದಕ್ಷಿಣ-ಪೂರ್ವ ದಿಕ್ಕಿನ ತುದಿಯಲ್ಲಿರುವ ಹಿಂದೂಗಳ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ ಧನುಷ್ಕೋಡಿ ! ಈ ಸ್ಥಾನವು ಪವಿತ್ರ ರಾಮಸೇತುವಿನ ಉಗಮಸ್ಥಾನವಾಗಿದೆ. ಕಳೆದ ೫೦ ವರ್ಷಗಳಿಂದ ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರದ ಸ್ಥಿತಿ ಧ್ವಂಸಗೊಂಡ ಒಂದು ನಗರದಂತಾಗಿದೆ. ೨೨ ಡಿಸೆಂಬರ್ ೧೯೬೪ ರಂದು ಈ ನಗರವು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು. ಅನಂತರ ಕಳೆದ ೫೦ ವರ್ಷಗಳಲ್ಲಿ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು. ಈ ಘಟನೆಗೆ ೫೦ ವರ್ಷಗಳು ಪೂರ್ಣಗೊಂಡ ನಿಮಿತ್ತ ಬಂಗಾಲ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಇತ್ಯಾದಿ ರಾಜ್ಯಗಳ ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಒಂದು ಸಮೂಹವು ಧನುಷ್ಕೋಡಿಗೆ ಭೇಟಿ ನೀಡಿತು. ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿ ಸಹ ಭಾಗವಹಿಸಿದ್ದರು. ಈ ಭೇಟಿಯಲ್ಲಿ ಗಮನಕ್ಕೆ ಬಂದಿರುವ ಧನುಷ್ಕೋಡಿಯ ಭೀಕರ ವಾಸ್ತವವನ್ನು ಈ ಲೇಖನದ ಮೂಲಕ ಮಂಡಿಸುತ್ತಿದ್ದೇನೆ.

ಧನುಷ್ಕೋಡಿಯ ಭೂಗೋಲ

ಆಕಾಶದಿಂದ ಕಾಣಿಸುವ ರಾಮಸೇತು (ನಾಸಾ ಉಪಗ್ರಹದ ಮೂಲಕ ತೆಗೆದ ಚಿತ್ರ)

ತಮಿಳುನಾಡು ರಾಜ್ಯದ ಪೂರ್ವದಡದಲ್ಲಿ ರಾಮೇಶ್ವರಮ್ ಈ ತೀರ್ಥಕ್ಷೇತ್ರವಿದೆ. ರಾಮೇಶ್ವರಮ್‌ನ ದಕ್ಷಿಣದಲ್ಲಿ ೧೧ ಕಿ. ಮೀ. ದೂರದಲ್ಲಿ ಧನುಷ್ಕೋಡಿ ನಗರವಿದೆ. ಇಲ್ಲಿಂದ ಶ್ರೀಲಂಕಾ ಕೇವಲ ೧೮ ಮೈಲು (ಸುಮಾರು ೩೦ ಕಿ.ಮೀ.) ದೂರದಲ್ಲಿದೆ ! ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಪವಿತ್ರ ಸಂಗಮದಲ್ಲಿ ನೆಲೆಸಿದ ಕೇವಲ ೫೦ ಗಜ (ಸುಮಾರು ೧೫೦ ಅಡಿ) ಅಗಲವಿರುವ ಧನುಷ್ಕೋಡಿಯು ಮರಳಿನಿಂದ ತುಂಬಿದ ಸ್ಥಾನವಾಗಿದೆ.

ರಾಮೇಶ್ವರಮ್ ಮತ್ತು ಧನುಷ್ಕೋಡಿ ಇವುಗಳ ಧಾರ್ಮಿಕ ಮಹಾತ್ಮೆ!

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ. ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ. ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ಧನುಷ್ಕೋಡಿಯ ಇತಿಹಾಸ ಮತ್ತು ರಾಮಸೇತುವೆಯ ಪ್ರಾಚೀನತೆ !

ರಾಮಸೇತುವಿನ ಈಚೆಗಿನ ಭಾಗಕ್ಕೆ ಧನುಷ್ಕೋಡಿ (‘ಕೋಡಿ’ ಅಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಗೆ (ಶ್ರೀಲಂಕಾಗೆ) ಪ್ರವೇಶ ಮಾಡಲು ಶ್ರೀರಾಮನು ತನ್ನ ‘ಕೋದಂಡ’ ಧನುಷ್ಯದ ತುದಿಯಿಂದ ಸೇತುವೆಯನ್ನು ನಿರ್ಮಿಸಲು ಈ ಸ್ಥಾನವನ್ನು ಆಯ್ದುಕೊಂಡನು. ಅಲ್ಲಿ ರಾಮಸೇತುವಿನ ಭಗ್ನಾವಶೇಷದ ರೂಪದಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ದ್ವೀಪಗಳಂತೆ ಇಂದಿಗೂ ಕಾಣಲು ಸಿಗುತ್ತವೆ. ರಾಮಸೇತುವೆ ನಳ ಮತ್ತು ನೀಲ ಇವರ ವಾಸ್ತುಶಾಸ್ತ್ರದ ಒಂದು ಅದ್ಭುತ ಮಾದರಿಯಾಗಿದೆ. ಈ ರಾಮಸೇತುವಿನ ಅಗಲ ಮತ್ತು ಉದ್ದ ಇವುಗಳ ಪ್ರಮಾಣ ಒಂದಕ್ಕೆ ಹತ್ತರಷ್ಟಿದೆ, ಎಂಬ ಸವಿಸ್ತಾರ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಪ್ರತ್ಯಕ್ಷ ಅಳೆದಾಗಲೂ ಅವುಗಳ ಅಗಲ ೩.೫ ಕಿ. ಮೀ. ಇದ್ದು ಮತ್ತು ಉದ್ದ ೩೫ ಕಿ. ಮೀ.ನಷ್ಟಿದೆ.

ಧನುಷ್ಕೋಡಿ ಮತ್ತು ರಾಮಭಕ್ತ ವಿಭೀಷಣ

ಶ್ರೀರಾಮ-ರಾವಣರ ಮಹಾಯುದ್ಧದ ಮೊದಲು ಧನುಷ್ಕೋಡಿ ನಗರದಲ್ಲಿಯೇ ರಾವಣನ ತಮ್ಮನಾದ ವಿಭೀಷಣನು ಪ್ರಭು ರಾಮಚಂದ್ರನಿಗೆ ಶರಣಾಗಿದ್ದನು. ಶ್ರೀಲಂಕಾದ ಯುದ್ಧ ಸಮಾಪ್ತಿಯಾದ ನಂತರ ಇದೇ ನಗರದಲ್ಲಿ ಪ್ರಭು ರಾಮಚಂದ್ರನು ವಿಭೀಷಣನನ್ನು ಶ್ರೀಲಂಕಾದ ಸಾಮ್ರಾಟನೆಂದು ರಾಜ್ಯಾಭಿಷೇಕ ಮಾಡಿದ್ದನು. ಇದೇ ಸಮಯದಲ್ಲಿ ಲಂಕಾಧಿಪತಿ ವಿಭೀಷಣನು ಪ್ರಭು ರಾಮಚಂದ್ರನಿಗೆ ‘ಭಾರತದ ಶೂರ-ಪರಾಕ್ರಮಿ ರಾಜರು ರಾಮಸೇತುವಿನ ಮೂಲಕ ಪದೇ ಪದೇ ಶ್ರೀಲಂಕಾದ ಮೇಲೆ ಆಕ್ರಮಣ ಮಾಡಿ ಶ್ರೀಲಂಕಾದ ಸ್ವಾತಂತ್ರ್ಯವನ್ನು ನಾಶ ಮಾಡುವರು. ಆದ್ದರಿಂದ ತಾವು ಈ ಸೇತುವೆಯನ್ನು ನಾಶಗೊಳಿಸಿರಿ’, ಎಂದು ಹೇಳಿದನು. ಆಗ ತನ್ನ ಭಕ್ತನ ಪ್ರಾರ್ಥನೆಯನ್ನು ಕೇಳಿ ಕೋದಂಡಧಾರಿ ಪ್ರಭು ರಾಮಚಂದ್ರ ರಾಮಸೇತುವಿನ ಮೇಲೆ ಬಾಣ ಹೊಡೆದು ಅದನ್ನು ನೀರಿನಲ್ಲಿ ಮುಳುಗಿಸಿದನು. ಆದ್ದರಿಂದ ಈ ಸೇತುವೆ ೨ – ೩ ಅಡಿ ನೀರಿನ ಕೆಳಗೆ ಹೋಯಿತು. ಇಂದು ಕೂಡ ಯಾರಾದರೂ ರಾಮಸೇತುವಿನ ಮೇಲೆ ನಿಂತರೆ ಅವರ ಸೊಂಟದ ವರೆಗೆ ನೀರು ಇರುತ್ತದೆ.

ರಾಮಸೇತುವೆಯನ್ನು ಧ್ವಂಸ ಮಾಡುವ ಸೇತುಸಮುದ್ರಮ್ ಯೋಜನೆ !

ಕೇಂದ್ರದಲ್ಲಿದ್ದ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ವ್ಯಾಪಾರಿ ಲಾಭ ಪಡೆಯುವ ದೃಷ್ಟಿಯಿಂದ ‘ಸೇತುಸಮುದ್ರಮ್ ಶಿಪ್ಪಿಂಗ್ ಕೆನಾಲ್’ ಯೋಜನೆ ಮೂಲಕ ಈ ಪುರಾತನ ಸೇತುವೆಯನ್ನು ಧ್ವಂಸ ಮಾಡಲು ಷಡ್ಯಂತ್ರ ರಚಿಸಿತು. ಈ ಯೋಜನೆಯು ಹಿಂದೂಗಳ ಶ್ರದ್ಧೆಯ ಮೇಲಿನ ಆಘಾತವೇ ಆಗಿತ್ತು. ಸೇತುವೆಯ ಸುಮಾರು ಶೇ. ೨೪ ರಷ್ಟು ಭಾಗವನ್ನು ಧ್ವಂಸ ಮಾಡಿದ ನಂತರ ಸರ್ವೋಚ್ಚ ನ್ಯಾಯಾಲಯ ಈ ಯೋಜನೆಯನ್ನು ಸ್ಥಗಿತಗೊಳಿಸಿತು. ಅಷ್ಟರ ವರೆಗೆ ಬಲಿಷ್ಟವಾದ ರಾಮಸೇತುವಿನ ನಾಲ್ಕನೇ ಒಂದಂಶ ಭಾಗವನ್ನು ಕೊರೆದು ಹಾಕಲಾಗಿತ್ತು. ಅದರಿಂದ ಈ ಸೇತುವಿನ ದೊಡ್ಡ ಬಂಡೆಗಳು ಪುಡಿಪುಡಿಯಾಗಿದ್ದವು. ಇಂದು ಕೂಡ ಈ ಕಲ್ಲುಗಳ ಅವಶೇಷವು ಹಿಂದೂ ಮಹಾಸಾಗರದಲ್ಲಿ ಮತ್ತು ಬಂಗಾಲ ಕೊಲ್ಲಿಯ ನೀರಿನಲ್ಲಿ ತೇಲುತ್ತಿವೆ. ಕೆಲವೊಮ್ಮೆ ಮೀನುಗಾರರ ಬಲೆಗೆ ತೇಲಾಡುವ ಈ ಕಲ್ಲುಗಳು ಬರುತ್ತವೆ. ರಾಮೇಶ್ವರಮ್ ಮತ್ತು ಧನುಷ್ಕೋಡಿಯಲ್ಲಿ ಕೆಲವರು ಈ ಕಲ್ಲುಗಳನ್ನು ಮಾರಾಟ ಮಾಡುತ್ತಾರೆ. ಐತಿಹಾಸಿಕ ಹಾಗೂ ಧಾರ್ಮಿಕ ಶ್ರದ್ಧೆಗೆ ಸಂಬಂಧಿಸಿದ ಇಂತಹ ವಾಸ್ತುವನ್ನು ಧ್ವಂಸಗೊಳಿಸುವ ಕಾಂಗ್ರೆಸ್ ಅಖಿಲ ಮನುಕುಲಕ್ಕೆ ಮಾತ್ರವಲ್ಲ, ಇತಿಹಾಸಕ್ಕೂ ದ್ರೋಹಬಗೆದಿದೆ. ಅದರ ಅಪರಾಧವು ಅಕ್ಷಮ್ಯವಾಗಿದೆ.

೧೯೬೪ ರ ಮೊದಲು ಧನುಷ್ಕೋಡಿ ಒಂದು ದೊಡ್ಡ ಪಟ್ಟಣವಾಗಿತ್ತು !

ಬ್ರಿಟೀಷರ ಕಾಲದಲ್ಲಿ ಧನುಷ್ಕೋಡಿ ಒಂದು ದೊಡ್ಡ ಪಟ್ಟಣವಾಗಿತ್ತು ಹಾಗೂ ರಾಮೇಶ್ವರಮ್ ಒಂದು ಸಣ್ಣ ಗ್ರಾಮವಾಗಿತ್ತು. ಅಲ್ಲಿಂದ ಶ್ರೀಲಂಕಾಗೆ ಹೋಗಿ ಬರಲು ದೋಣಿಯ ವ್ಯವಸ್ಥೆ ಇತ್ತು. ಆ ಕಾಲದಲ್ಲಿ ಶ್ರೀಲಂಕಾಗೆ ಹೋಗಲು ಪಾಸ್‌ಪೋರ್ಟ್ ಬೇಕಾಗಿರಲಿಲ್ಲ. ಧನುಷ್ಕೋಡಿಯಿಂದ ಥಲಾಯಿಮನ್ನಾರ (ಶ್ರೀಲಂಕಾ) ಹೀಗೆ ನೌಕೆಯ ಪ್ರವಾಸದ ಟಿಕೇಟ್ ಕೇವಲ ೧೮ ರೂಪಾಯಿಗಳಿದ್ದವು. ಈ ನೌಕೆಗಳ ಮೂಲಕ ವ್ಯಾಪಾರಿ ವಸ್ತುಗಳ ಕೊಡುಕೊಳ್ಳುವಿಕೆಯೂ ನಡೆಯುತ್ತಿತ್ತು. ‘೧೮೯೩ ರಲ್ಲಿ ಅಮೇರಿಕಾದ ಧರ್ಮಸಂಸತ್ತಿಗಾಗಿ ಹೋಗಿದ್ದ ಸ್ವಾಮಿ ವಿವೇಕಾನಂದರು ೧೮೯೭ರಲ್ಲಿ ಶ್ರೀಲಂಕಾದ ಮಾರ್ಗದಿಂದ ಭಾರತಕ್ಕೆ ಹಿಂತಿರುಗಿದರು. ಅವರು ಈ ಧನುಷ್ಕೋಡಿಯ ಭೂಮಿಯಲ್ಲಿಯೇ ಇಳಿದಿದ್ದರು. ೧೯೬೪ ರ ವರೆಗೆ ಧನುಷ್ಕೋಡಿ ಒಂದು ಪ್ರಖ್ಯಾತ ಪ್ರವಾಸೀ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಭಕ್ತರಿಗಾಗಿ ಅಲ್ಲಿ ಹೊಟೇಲ್‌ಗಳು, ಬಟ್ಟೆಯ ಅಂಗಡಿಗಳು ಹಾಗೂ ಧರ್ಮಶಾಲೆಗಳಿದ್ದವು. ಆ ಸಮಯದಲ್ಲಿ ಅಲ್ಲಿ ಹಡಗು ನಿರ್ಮಾಣ ಕೇಂದ್ರ, ರೈಲು ನಿಲ್ದಾಣ, ರೈಲ್ವೆಯ ಸಣ್ಣ ಆಸ್ಪತ್ರೆ, ಅಂಚೆ ಕಚೇರಿ ಮತ್ತು ಮೀನು ಸಾಕಣೆಯಂತಹ ಕೆಲವು ಸರಕಾರೀ ಕಚೇರಿಗಳಿದ್ದವು. ೧೯೬೪ ರ ಚಂಡಮಾರುತದ ಮೊದಲು ಚೆನೈ ಮತ್ತು ಧನುಷ್ಕೋಡಿಯ ನಡುವೆ ಮದ್ರಾಸ್ ಎಗ್ಮೋರದಿಂದ ಬೋಟ್ ಮೇಲ್ ಹೆಸರಿನ ರೈಲು ಸೇವೆ ಇತ್ತು. ಅಲ್ಲಿಂದ ದೋಣಿ ಮೂಲಕ ಶ್ರೀಲಂಕಾಗೆ ಹೋಗುವ ಪ್ರವಾಸಿಗಳಿಗೆ ಅದು ಉಪಯುಕ್ತವಾಗುತ್ತಿತ್ತು.

ಧನುಷ್ಕೋಡಿಯನ್ನು ಧ್ವಂಸ ಮಾಡಿದ ೧೯೬೪ ರ ಚಂಡಮಾರುತ !

೧೯೬೪ ರಲ್ಲಿ ಭೀಕರ ಚಂಡಮಾರುತದಿಂದಾಗಿ ಧನುಷ್ಕೋಡಿ ಧ್ವಂಸವಾಯಿತು. ೧೭ ಡಿಸೆಂಬರ್ ೧೯೬೪ ರಂದು ದಕ್ಷಿಣ ಅಂಡಮಾನ ಸಮುದ್ರದಲ್ಲಿ ೫ ಡಿಗ್ರಿ ಪೂರ್ವದಲ್ಲಿ ಅದರ ಕೇಂದ್ರವಿತ್ತು. ಡಿಸೆಂಬರ್ ೧೯ರಂದು ಅದು ಚಂಡಮಾರುತದ ರೂಪ ಧಾರಣೆ ಮಾಡಿ ಪ್ರಚಂಡ ವೇಗದಲ್ಲಿ ಡಿಸೆಂಬರ್ ೨೨ ರಂದು ರಾತ್ರಿ ಗಂಟೆಗೆ ೨೭೦ ಕಿ. ಮೀ. ವೇಗದಲ್ಲಿ ಶ್ರೀಲಂಕಾವನ್ನು ದಾಟಿಕೊಂಡು ಅದು ಧನುಷ್ಕೋಡಿಯ ತೀರದಲ್ಲಿ ಬಂದು ಅಪ್ಪಳಿಸಿತು. ಈ ಚಂಡಮಾರುತದ ಜೊತೆಗೆ ೨೦ ಅಡಿಗಳಷ್ಟು ಎತ್ತರದ ತೆರೆ ಧನುಷ್ಕೋಡಿ ನಗರದ ಪೂರ್ವದಿಕ್ಕಿನಲ್ಲಿರುವ ಪವಿತ್ರ ಸಂಗಮದ ಮೇಲಿಂದ ನಗರದ ಮೇಲೆ ಆಕ್ರಮಣ ಮಾಡಿ ಸಂಪೂರ್ಣ ಧನುಷ್ಕೋಡಿ ನಗರವನ್ನು ನಾಶಗೊಳಿಸಿತು.

ಚಂಡಮಾರುತದಿಂದ ರೈಲ್ವೆಯ ಸೇತುವೆ ಮತ್ತು ರೈಲುಬಂಡಿ ನಾಶ !

ಚಂಡಮಾರುತದಿಂದ ಧ್ವಂಸಗೊಂಡ ಧನುಷ್ಕೋಡಿಯ ರೈಲ್ವೆ ನಿಲ್ದಾಣದ ಅವಶೇಷಗಳು

ಡಿಸೆಂಬರ್ ೨೨ ರ ರಾತ್ರಿ ಅತ್ಯಂತ ದುರ್ದೈವದ ರಾತ್ರಿಯಾಗಿತ್ತು. ಧನುಷ್ಕೋಡಿ ರೈಲ್ವೇ ನಿಲ್ದಾಣಕ್ಕೆ ರಾತ್ರಿ ೧೧.೫೫ ಕ್ಕೆ ಪ್ರವೇಶ ಮಾಡಿದ ೬೫೩ ಕ್ರಮಾಂಕದ ‘ಪಂಬನ್-ಧನುಷ್ಕೋಡಿ ಪ್ಯಾಸೆಂಜರ್’ (ತನ್ನ ನಿಯಮಿತ ಸೇವೆಗಾಗಿ ಪಂಬನದಿಂದ ೧೧೦ ಪ್ರಯಾಣಿಕರು ಮತ್ತು ೫ ರೈಲ್ವೇ ಕಾರ್ಮಿಕರ ಸಹಿತ ಹೊರಟಿತ್ತು) ಈ ಭಯಂಕರ ತೆರೆಯ ಆಘಾತಕ್ಕೆ ಬಲಿಯಾಯಿತು ! ಆಗ ಅದು ಧನುಷ್ಕೋಡಿ ರೈಲ್ವೇ ನಿಲ್ದಾಣದಿಂದ ಕೆಲವೇ ಮೀಟರ್ ದೂರದಲ್ಲಿತ್ತು. ೧೧೫ ಪ್ರಯಾಣಿಕರ ಸಹಿತ ಈ ರೈಲು ಸಂಪೂರ್ಣ ಕೊಚ್ಚಿಕೊಂಡು ಹೋಯಿತು. ಪಂಬನದಿಂದ ಆರಂಭವಾದ ಧನುಷ್ಕೋಡಿಯ ರೈಲ್ವೇ ಮಾರ್ಗ ೧೯೬೪ ರ ಚಂಡಮಾರುತದಲ್ಲಿ ನಾಶವಾಯಿತು! ಅನಂತರ ಈ ರೈಲ್ವೇ ಮಾರ್ಗದ ದುರ್ದೆಸೆ ಆರಂಭವಾಗಿ ಸ್ವಲ್ಪ ಸಮಯದ ನಂತರ ಕ್ರಮೇಣ ಅದು ಮರಳಿನಲ್ಲಿ ಮುಚ್ಚಿಹೋಯಿತು !

ಪ್ರಚಂಡ ವೇಗದಿಂದ ಬರುತ್ತಿದ್ದ ನೀರು ರಾಮೇಶ್ವರ ದೇವಸ್ಥಾನದ ಸಮೀಪ ನಿಂತಿತು !

ಈ ಚಂಡಮಾರುತ ಮುಂದೆ ಸರಿಯುತ್ತಾ ರಾಮೇಶ್ವರಮ್ ವರೆಗೆ ಬಂದಿತ್ತು, ಅಲ್ಲಿಯೂ ೮ ಅಡಿಗಳಷ್ಟು ಎತ್ತರದ ತೆರೆ ಬರುತ್ತಿತ್ತು. ಈ ಪರಿಸರದಲ್ಲಿ ಸುಮಾರು ೧ ಸಾವಿರದ ೮೦೦ ಕ್ಕಿಂತಲೂ ಹೆಚ್ಚು ಜನರು ಈ ಆಘಾತದಲ್ಲಿ ಅಸುನೀಗಿದರು. ಈ ಸಂಖ್ಯೆ ೫ ಸಾವಿರದಷ್ಟಿರಬಹುದು, ಎಂದು ಸ್ಥಳೀಯರ ಅಭಿಪ್ರಾಯವಿತ್ತು. ಧನುಷ್ಕೋಡಿಯ ಎಲ್ಲ ನಿವಾಸಿಗಳ ಮನೆಗಳು ಇತರ ವಾಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿ ಅವುಗಳ ಭಗ್ನಾವಶೇಷ ಮಾತ್ರ ಉಳಿದಿತ್ತು. ಈ ದ್ವೀಪದಲ್ಲಿ ೧೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಾ ಪೂರ್ಣ ನಗರ ಧ್ವಂಸವಾಯಿತು; ಆದರೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗನುಸಾರ ಪ್ರಚಂಡ ವೇಗದಲ್ಲಿ ಬರುತ್ತಿದ್ದ ಸಮುದ್ರದ ತೆರೆಗಳ ನೀರು ರಾಮೇಶ್ವರಮ್‌ನ ಮುಖ್ಯ ದೇವಸ್ಥಾನದ ಸಮೀಪ ನಿಂತಿತ್ತು! ವಿಶೇಷವೆಂದರೆ, ನೂರಾರು ಜನರು ಸುಂಟರಗಾಳಿಯಿಂದ ರಕ್ಷಿಸಿಕೊಳ್ಳಲು ರಾಮೇಶ್ವರದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು.

ಬದುಕಿದ್ದು ಕೇವಲ ಒಬ್ಬ ವ್ಯಕ್ತಿ !

೧೯೬೪ ರ ಚಂಡಮಾರುತದಲ್ಲಿ ಧನುಷ್ಕೋಡಿ ನಗರದ ಎಲ್ಲ ಜನರು ಮೃತರಾಗಿ ಒಬ್ಬ ವ್ಯಕ್ತಿ ಮಾತ್ರ ಬದುಕಿದ್ದನು, ಅವನ ಹೆಸರು ಕಾಲಿಯಾಮನ ! ಇವನು ಸಮುದ್ರದ ಚಂಡಮಾರುತದಲ್ಲಿ ಈಜುತ್ತಾ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು; ಆದ್ದರಿಂದ ಸರಕಾರ ಧನುಷ್ಕೋಡಿಯ ಪಕ್ಕದ ಊರಿಗೆ ಅವನ ಹೆಸರನ್ನಿಟ್ಟು ಅವನನ್ನು ಗೌರವಿಸಿತು. ಈ ಊರು ‘ನಿಚಲ ಕಾಲಿಯಾಮನ’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ನಿಚಲವೆಂದರೆ ಈಜುವ !

ಸರಕಾರ ಧನುಷ್ಕೋಡಿಯನ್ನು ‘ಭೂತದ ನಗರ’ವೆಂದು ಘೋಷಿಸುವುದು !

ಈ ಆಘಾತದ ನಂತರ ಅಂದಿನ ಮದ್ರಾಸ್ ಸರಕಾರ ಆಕಾಶವಾಣಿಯ ಮೂಲಕ ಧನುಷ್ಕೋಡಿ ನಗರಕ್ಕೆ ಭೂತದ ನಗರ (ghost town) ಎಂದು ಘೋಷಿಸಿ ಅಲ್ಲಿ ನಾಗರಿಕರು ವಾಸಿಸದಂತೆ ನಿರ್ಬಂಧ ಹೇರಿತು. ನಿರ್ಜನ ನಗರಗಳಿಗೆ ಭೂತದ ನಗರವೆಂದು ಸಂಬೋಧಿಸಲಾಗುತ್ತದೆ. ಈಗ ಹಗಲಿನಲ್ಲಿ ಮಾತ್ರ ಕೆಲವು ಮೀನುಗಾರರು ಮತ್ತು ವ್ಯಾಪಾರಿಗಳು ಅಲ್ಲಿಗೆ ಹೋಗಬಹುದು. ಸಾಯಂಕಾಲ ೭ ಗಂಟೆಗೆ ಅವರು ಅಲ್ಲಿಂದ ಹಿಂತಿರುಗಬೇಕು.

ಮರಳು ಮತ್ತು ವಾಸ್ತುಗಳ ಭಗ್ನಾವಶೇಷಗಳ ನಗರ !

ಸಂಪೂರ್ಣ ಧನುಷ್ಕೋಡಿಯಲ್ಲಿ ಮರಳಿನ ರಾಶಿ ಇದ್ದು ಅದರಲ್ಲಿ ಅಲ್ಲಲ್ಲಿ ವಾಸ್ತುಗಳ ಭಗ್ನಾವಶೇಷ ಕಾಣಿಸುತ್ತದೆ

ಈಗ ಧನುಷ್ಕೋಡಿಯಲ್ಲಿ ಪೂರ್ಣ (ನಡು ನಡುವೆ ಸಮುದ್ರದ ನೀರು ಮತ್ತು ವನಸ್ಪತಿಗಳಿರುವ) ಮರಳಿನ ಸಾಮ್ರಾಜ್ಯವಿದೆ. ಆಕಾಶದಿಂದ ಈ ನಗರದತ್ತ ನೋಡಿದರೆ ಕೇವಲ ಮರಳು ಮಾತ್ರ ಕಾಣಿಸುತ್ತದೆ. ಈ ಮರಳಿನಲ್ಲಿ ಅಲ್ಲಲ್ಲಿ ವಾಸ್ತುಗಳ ಭಗ್ನಾವಶೇಷಗಳು ಕಾಣಿಸುತ್ತವೆ. ಹಡಗುಗಳ ನಿರ್ಮಾಣ ಕೇಂದ್ರಗಳು, ರೈಲುನಿಲ್ದಾಣ, ಅಂಚೆ ಕಚೇರಿ, ಆಸ್ಪತ್ರೆ, ಆರಕ್ಷಕ ಮತ್ತು ರೈಲ್ವೇ ವಸತಿಯ ನಿವಾಸಸ್ಥಾನಗಳು, ಶಾಲೆ, ದೇವಸ್ಥಾನಗಳು, ಚರ್ಚ್ ಇತ್ಯಾದಿಗಳ ಅವಶೇಷಗಳು ಸ್ಪಷ್ಟವಾಗಿ ಕಾಣಿಸುತ್ತವೆ.

ಧನುಷ್ಕೋಡಿಯ ವಿಕಾಸದತ್ತ ದುರ್ಲಕ್ಷ !

ಧನುಷ್ಕೋಡಿ ಪಟ್ಟಣಕ್ಕೆ ಹೋಗುವ ಮೊದಲು ‘ಬೆಳಗ್ಗೆ ಹೋಗಿ ಸೂರ್ಯಾಸ್ತದ ಮೊದಲು ಒಟ್ಟಾಗಿ ಹಿಂತಿರುಗಿ ಬನ್ನಿ’ ಎಂದು ಭಕ್ತರಿಗೆ ಹೇಳುತ್ತಾರೆ; ಏಕೆಂದರೆ, ೧೫ ಕಿ.ಮೀ. ದೂರದ ಈ ರಸ್ತೆ ನಿರ್ಜನ ಹಾಗೂ ಭಯಹುಟ್ಟಿಸುವುದಾಗಿದೆ. ಸದ್ಯ ಹೆಚ್ಚುಕಡಿಮೆ ೫೦೦ ಕ್ಕಿಂತ ಹೆಚ್ಚು ಯಾತ್ರಿಕರು ಪ್ರತಿದಿನ ಧನುಷ್ಕೋಡಿಗೆ ಬರುತ್ತಾರೆ. ಹಬ್ಬ-ಹುಣ್ಣಿಮೆಯಂದು ಇಲ್ಲಿಗೆ ಸಾವಿರಾರು ಯಾತ್ರಿಕರು ಬರುತ್ತಾರೆ. ಧನುಷ್ಕೋಡಿಯಲ್ಲಿ ಪೂಜೆ-ಪುನಸ್ಕಾರ ಮಾಡಲು ಇಚ್ಛಿಸುವ ಭಕ್ತರಿಗೆ ಖಾಸಗಿ ವಾಹನದ ಹೊರತು ಪರ್ಯಾಯವಿಲ್ಲ. ಖಾಸಗಿ ವಾಹನಗಳ ಚಾಲಕರು ಯಾತ್ರಿಕರಿಂದ ೫೦ ರಿಂದ ೧೦೦ ರೂಪಾಯಿಗಳ ವರೆಗೆ ಬಾಡಿಗೆ ತೆಗೆದುಕೊಳ್ಳುತ್ತಾರೆ. ಇಡೀ ದೇಶದಿಂದ ರಾಮೇಶ್ವರಮ್‌ಗೆ ಹೋಗುವ ಯಾತ್ರಿಕರ ಬೇಡಿಕೆಗನುಸಾರ ೨೦೦೩ ರಲ್ಲಿ ದಕ್ಷಿಣ ರೈಲು ಸಚಿವಾಲಯ ರಾಮೇಶ್ವರಮ್‌ದಿಂದ ಧನುಷ್ಕೋಡಿಯ ವರೆಗೆ ೧೬ ಕಿ.ಮೀ. ರೈಲ್ವೇ ಮಾರ್ಗ ನಿರ್ಮಾಣ ಮಾಡಲು ಒಂದು ವರದಿಯನ್ನು ಕಳುಹಿಸಿತ್ತು; ಆದರೆ ಇಷ್ಟರ ವರೆಗೆ ಈ ಯೋಜನೆಯನ್ನು ದುರ್ಲಕ್ಷಿಸಲಾಗಿದೆ.

ಅಯೋಗ್ಯ ಸರಕಾರೀ ಧೋರಣೆಯಿಂದಾಗಿ ರಾಮಸೇತುವಿನ ದರ್ಶನ ದುರ್ಲಭ !

ಭಾರತಾದ್ಯಂತದ ಭಕ್ತರು ಧನುಷ್ಕೋಡಿಗೆ ಕೇವಲ ರಾಮಸೇತುವಿನ ದರ್ಶನ ಕ್ಕಾಗಿಯೇ ಬರುತ್ತಾರೆ. ಧನುಷ್ಕೋಡಿಗೆ ಬಂದಾಗ ರಾಮಸೇತುವಿನ ದರ್ಶನಕ್ಕಾಗಿ ಕಸ್ಟಮ್ ವಿಭಾಗದಿಂದ ಅನುಮತಿ ಬೇಕಾಗುತ್ತದೆ, ಎಂದು ತಿಳಿಯುತ್ತದೆ. ಕಸ್ಟಮ್ ಕಾರ್ಯಾಲಯ ರಾಮೇಶ್ವರಮ್‌ದಲ್ಲಿದೆ. ಭಕ್ತರು ರಾಮೇಶ್ವರದಿಂದ ಧನುಷ್ಕೋಡಿಗೆ ಸರಿಯಾದ ಮಾರ್ಗವಿಲ್ಲದಿದ್ದರೂ ಮರಳಿನಲ್ಲಿ ಅಥವಾ ಸಮುದ್ರದಲ್ಲಿ ಕಷ್ಟಪಟ್ಟು ಪ್ರಯಾಣ ಮಾಡುತ್ತಾ ಅಲ್ಲಿಗೆ ತಲಪುತ್ತಾರೆ. ಅಲ್ಲಿಗೆ ಹೋದಾಗ ಅವರಿಗೆ ಅನುಮತಿ ಪಡೆಯಲು ಪುನಃ ಬಂದ ದಾರಿಯಲ್ಲಿಯೇ ರಾಮೇಶ್ವರಮ್‌ಗೆ ಹೋಗಬೇಕೆಂದು ಅರಿವಾಗುತ್ತದೆ. ಇದೆಂತಹ ಕುಚೇಷ್ಟೆ. ಸರಕಾರ ಧನುಷ್ಕೋಡಿಯಲ್ಲಿ ಕಸ್ಟಮ್ ಕಾರ್ಯಾಲಯವನ್ನು ಏಕೆ ತೆರೆಯುವುದಿಲ್ಲ ? ಇದರಿಂದ ಶೇ. ೯೦ ರಷ್ಟು ಭಕ್ತರು ಧನುಷ್ಕೋಡಿಗೆ ಬಂದರೂ ಪವಿತ್ರ ರಾಮಸೇತುವಿನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ.

ಶ್ರೀಲಂಕಾದೊಂದಿಗೆ ಕಡಿತಗೊಂಡ ಸಂಪರ್ಕ !

ಭಾರತ-ಶ್ರೀಲಂಕಾದ ನಡುವೆ ಸಮುದ್ರದ ಗಡಿವಿವಾದ ನಿರ್ಮಾಣ ವಾಗಿರುವುದರಿಂದ ಧನುಷ್ಕೋಡಿಯಿಂದ ಥಲಾಯಿಮನ್ನಾರಕ್ಕೆ ಹೋಗುವ-ಬರುವ ಸಾಗರ ಸಾರಿಗೆ ನಿಂತು ಹೋಯಿತು. ಅದರಿಂದ ಈ ಪ್ರದೇಶದ ಹಿಂದೂ ಗಳಿಗೆ ಶ್ರೀಲಂಕಾದ ಹಿಂದೂಗಳೊಂದಿಗಿನ ಸಂಪರ್ಕ ಕಡಿತವಾಯಿತು. ಈ ಹಿಂದೆ ಪ್ರತಿದಿನ ಸಾಯಂಕಾಲ ೬ ಗಂಟೆಗೆ ಶ್ರೀಲಂಕಾದಿಂದ ಹಾಲು ತೆಗೆದುಕೊಂಡು ಭಾರತಕ್ಕೆ ಬರುತ್ತಿದ್ದರು. ಈ ಹಾಲಿನಿಂದ ಮರುದಿನ ಮುಂಜಾನೆ ರಾಮೇಶ್ವರದ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತಿತ್ತು. ಈ ಪರಂಪರೆ ಅನೇಕ ವರ್ಷಗಳಿಂದ ನಡೆಯುತ್ತಿತ್ತು. ಭಾರತ-ಶ್ರೀಲಂಕಾದ ಸಾಗರ ಗಡಿವಿವಾದದಿಂದಾಗಿ ಅದು ನಿಂತು ಹೋಯಿತು. ಹಿಂದೆ ಥಲಾಯಿಮನ್ನಾರದಿಂದ ಧನುಷ್ಕೋಡಿ ಈ ೩೫ ಕಿ.ಮೀ. ದೂರವನ್ನು ದೋಣಿಯ ಮೂಲಕ ಪ್ರಯಾಣಿಸಲು ೨ ಗಂಟೆ ಬೇಕಾಗುತ್ತಿತ್ತು. ಈಗ ಥಲಾಯಿಮನ್ನಾರದಿಂದ ಕೊಲಂಬೋಗೆ ೫೦೦ ಕಿ.ಮೀ. ೧೦ ಗಂಟೆ ಪ್ರಯಾಣ ಮಾಡಿ ಹೋಗಬೇಕಾಗುತ್ತದೆ.

ಹಿಂದೂ ರಾಷ್ಟ್ರದಲ್ಲಿಯೇ ತೀರ್ಥಕ್ಷೇತ್ರಗಳ ನಿಜವಾದ ವಿಕಾಸ ಆಗುವುದು !

ಧನುಷ್ಕೋಡಿಯ ಭೀಕರ ವಾಸ್ತವಿಕತೆಯನ್ನು ಪ್ರತ್ಯಕ್ಷ ನೋಡಿದ ನಂತರ ಎಲ್ಲ ಪಕ್ಷಗಳ ರಾಜಕಾರಣಿಗಳು ಭಾರತದ ತೀರ್ಥಕ್ಷೇತ್ರಗಳನ್ನು ಹೇಗೆ ದುರ್ಲಕ್ಷಿಸಿದ್ದಾರೆ, ಎಂಬುದು ಅರಿವಾಗುತ್ತದೆ. ಕಾಶಿಯನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಘೋಷಣೆ ಮಾಡಿರುವ ಭಾರತದ ವಿಕಾಸಪುರುಷ ಕಾಶಿ ಯಾತ್ರೆಯನ್ನು ಪೂರ್ಣತ್ವಗೊಳಿಸುವ ಧನುಷ್ಕೋಡಿಗೆ ನ್ಯಾಯ ನೀಡುವರೇ ?, ಎಂಬುದು ಪ್ರಶ್ನೆಯಾಗಿದೆ. ಹಿಂದೂಗಳ ಸಂವೇದನಾಶೂನ್ಯತೆಯೂ ಈ ದುರ್ಗತಿಗೆ ಒಂದು ಕಾರಣವಾಗಿದೆ. ನಾವೆಲ್ಲ ಹಿಂದೂಗಳು ಹೀಗೆಯೇ ಸಂವೇದನಾಶೂನ್ಯರಾದರೆ, ಇಂದು ಸಮೃದ್ಧವಾಗಿರುವ ಅನೇಕ ತೀರ್ಥಕ್ಷೇತ್ರಗಳು ಭವಿಷ್ಯದಲ್ಲಿ ಧನುಷ್ಕೋಡಿಯ ಹಾಗೆ ಅವಸ್ಥೆಯಾಗಬಹುದು, ಎಂಬುದನ್ನು ನಾವು ಗಮನದಲ್ಲಿಡಬೇಕು. ಹಿಂದೂಗಳ ತೀರ್ಥಕ್ಷೇತ್ರಗಳ ವಿಕಾಸ ಮಾಡುವ ಸಲುವಾಗಿ ಹಾಗೂ ಅಲ್ಲಿ ಧರ್ಮಶಾಲೆ, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಹಿಂದೂಗಳು ಸರಕಾರವನ್ನು ಆಗ್ರಹಿಸಬೇಕು. ನಿಜವಾಗಿ ನೋಡಿದರೆ, ಇಂದಿನ ಜಾತ್ಯತೀತ ವ್ಯವಸ್ಥೆಯಲ್ಲಿ ಹಿಂದೂ ಧರ್ಮಹಿತದ ಕಾರ್ಯಗಳು ನೆರವೇರಬಹುದೆಂದು ಅಪೇಕ್ಷಿಸುವುದು ಅಯೋಗ್ಯವೆನಿಸುವುದು. ಅದಕ್ಕಾಗಿ ಹಿಂದೂ ಹಿತಸಾಧಿಸುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ನಿಜವಾಗಿ ತೀರ್ಥಕ್ಷೇತ್ರಗಳನ್ನು ವಿಕಾಸಗೊಳಿಸುವ ಉಪಾಯವಾಗಿದೆ.

ಧನುಷ್ಕೋಡಿಯ ಸಿಹಿ ನೀರು ಇಲ್ಲಿನ ನೈಸರ್ಗಿಕ ಆಶ್ಚರ್ಯ !

ಧನುಷ್ಕೋಡಿಯ ದಕ್ಷಿಣದಿಕ್ಕಿಗಿರುವ ಹಿಂದೂ ಮಹಾಸಾಗರವು ನೀಲಿ ಬಣ್ಣದ್ದಾಗಿದ್ದು ಉತ್ತರದಲ್ಲಿರುವ ಬಂಗಾಲ ಕೊಲ್ಲಿಯ ನೀರು ಕಪ್ಪು ಬಣ್ಣದ್ದಾಗಿದೆ. ಇವೆರಡೂ ಸಾಗರಗಳ ನಡುವಿನ ದೂರ ೧ ಕಿ. ಮೀಟರ್‌ನಷ್ಟೂ ಇಲ್ಲ. ಎರಡೂ ಸಾಗರಗಳ ನೀರು ಉಪ್ಪಾಗಿದೆ. ಆದರೂ ಧನುಷ್ಕೋಡಿಯಲ್ಲಿ ೩ ಅಡಿಗಳಷ್ಟು ಹೊಂಡ ತೋಡಿದರೆ ಅದರಲ್ಲಿ ಸಿಹಿ ನೀರು ಬರುತ್ತದೆ. ಇದು ನಿಸರ್ಗದ ಚಮತ್ಕಾರವಲ್ಲವೇ?

ಧನುಷ್ಕೋಡಿಯಲ್ಲಿ ಚರ್ಚ್‌ನ ಅಸ್ತಿತ್ವವೊಂದು ಅಪಾಯದ ಗಂಟೆ !

ಕ್ರೈಸ್ತ ಮಿಶನರಿಗಳು ಭಾರತದ ಮೂಲೆ ಮೂಲೆಗಳಲ್ಲಿ ವಿಶೇಷವಾಗಿ ಹಿಂದುಳಿದ ಹಾಗೂ ದುರ್ಗಮ ಪ್ರದೇಶಗಳಿಗೆ ಹೋಗಿ ಮತಾಂತರದ ಕಾರ್ಯ ಮಾಡುತ್ತಾರೆ, ಎಂಬುದು ಇಂದಿನ ವರೆಗಿನ ಅನುಭವವಾಗಿದೆ. ಭಾರತದ ದಕ್ಷಿಣಪೂರ್ವದ ಕೊನೆಯ ಅಂಚಿನಲ್ಲಿರುವ ಧನುಷ್ಕೋಡಿ ನಗರ ದಲ್ಲಿ ಒಂದು ಭವ್ಯವಾದ ಚರ್ಚ್‌ನ ಅವಶೇಷವಿದೆ. ಈ ಚರ್ಚ್ ೧೯೬೪ ರ ಸುಂಟರಗಾಳಿಯಲ್ಲಿ ಧ್ವಂಸವಾಯಿತು. ಇದರ ಅರ್ಥ ಆ ಕಾಲದಲ್ಲಿಯೂ ಕ್ರೈಸ್ತ ಧರ್ಮಪ್ರಸಾರಕರು ಬೃಹತ್ಪ್ರಮಾಣದಲ್ಲಿ ಮತಾಂತರ ನಡೆಸುತ್ತಿದ್ದರು. ಈಗ ಧನುಷ್ಕೋಡಿ ನಗರದ ೨ ಕಿ. ಮೀ. ಹಿಂದೆ ಒಂದು ಮಧ್ಯಮ ಗಾತ್ರದ ಚರ್ಚ್ ನಿಂತಿದೆ. ಅದರ ಸುತ್ತಮುತ್ತ ಯಾವುದೇ ಜನವಸತಿ ಇಲ್ಲ. ನಿಜವಾಗಿ ನೋಡಿದರೆ, ಹಿಂದೂಗಳ ಈ ಪವಿತ್ರ ಸ್ಥಳದಲ್ಲಿ ಸರಕಾರ ಚರ್ಚ್ ನಿರ್ಮಿಸಲು ಅನುಮತಿ ನೀಡಬಾರದು. ಹೇಗೆ ಮಕ್ಕಾದಲ್ಲಿ ಚರ್ಚ್ ನಿರ್ಮಿಸಲು ಸಾಧ್ಯವಿಲ್ಲವೋ ಅಥವಾ ವ್ಯಾಟಿಕನ್‌ನಲ್ಲಿ ದೇವಸ್ಥಾನ ನಿರ್ಮಿಸಲು ಸಾಧ್ಯವಿಲ್ಲವೋ, ಅದೇ ರೀತಿ ಹಿಂದೂಗಳ ತೀರ್ಥಕ್ಷೇತ್ರದಲ್ಲಿ ಚರ್ಚ್, ಮಸೀದಿ, ದರ್ಗಾ ಇತ್ಯಾದಿ ನಿರ್ಮಿಸಲು ಅನುಮತಿ ಇರಬಾರದು. ಅಲ್ಲಿ ಚರ್ಚ್ ಇರುವುದನ್ನು ನೋಡಿ ನಾವು ಅಲ್ಲಿನ ಮೀನುಗಾರರನ್ನು ಭೇಟಿಯಾಗಲು ಪ್ರಯತ್ನಿಸಿದೆವು. ನಮಗೆ ಅವರು ಮತಾಂತರವಾಗಿರಬಹುದು, ಎಂದು ಅನಿಸಿತು. ಆದರೆ ಅವರನ್ನು ಭೇಟಿಯಾದ ನಂತರ ಎಲ್ಲ ಮೀನುಗಾರರು ಹಿಂದೂಗಳಾಗಿದ್ದಾರೆ, ಎಂದು ಅರಿವಾಯಿತು. ೧೯೬೪ ರ ಹಿಂದಿನ ಭವ್ಯ ಚರ್ಚ್‌ನ ಅವಶೇಷವನ್ನು ನೋಡಿದ ನಂತರ ಅಲ್ಲಿ ಆ ಕಾಲದಲ್ಲಿ ಬೃಹತ್ಪ್ರಮಾಣದಲ್ಲಿ ಮತಾಂತರವಾಗಿರಬಹುದು, ಎಂಬುದು ಸಹಜವಾಗಿ ಅರಿವಾಗುತ್ತದೆ; ಆದರೆ ಈಗ ಅಲ್ಲಿ ಒಬ್ಬ ಕ್ರೈಸ್ತನೂ ಇಲ್ಲ. ಒಂದೋ ೧೯೬೪ ರ ಆಘಾತದಲ್ಲಿ ಎಲ್ಲ ಕ್ರೈಸ್ತರು ನಾಶವಾಗಿರಬಹುದು ಅಥವಾ ಆಕಾಶದಲ್ಲಿನ ತಂದೆ ಧನುಷ್ಕೋಡಿಯಲ್ಲಿನ ಕ್ರೈಸ್ತರನ್ನು ಕಾಪಾಡುವುದಿಲ್ಲ’, ಎಂಬುದು ಅರಿವಾಗಿ ಅವರು ಅಲ್ಲಿಂದ ಓಡಿ ಹೋಗಿರಬಹುದು. ಆದರೂ ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಚರ್ಚ್‌ನ ಸ್ಥಾಪನೆ ಹಾಗೂ ಕ್ರೈಸ್ತ ಧರ್ಮ ಪ್ರಸಾರಕರ ಸುಳಿದಾಟದಿಂದ ಮುಂದೆ ಅಲ್ಲಿನ ಅeನಿ ಹಾಗೂ ಬಡ ಹಿಂದೂಗಳು ಕ್ರೈಸ್ತರಾದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಮುಂದೆ ಮತಾಂತರದ ಕಾರ್ಯ ಹೆಚ್ಚಾಗಿ ಈ ಪರಿಸರ ನಾಗಲ್ಯಾಂಡ್ ಮತ್ತು ಮಿಝೋರಾಮ್‌ನ ಹಾಗೆ ಆದಾಗ ಭಾರತೀಯ ರಾಜಕಾರಣಿಗಳು ಈ ಪ್ರದೇಶದಲ್ಲಿ ವಿಕಾಸಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ಚೆಲ್ಲುವರು.

೧೯೬೪ ರ ಹಿಂದಿನ ಒಂದು ದೊಡ್ಡ ಚರ್ಚ್‌ನ ಅವಶೇಷ
ಧನುಷ್ಕೋಡಿಯ ಸಮೀಪವೇ ಹೊಸದಾಗಿ ನಿರ್ಮಿಸಿರುವ ಚರ್ಚ್

ಭಕ್ತರನ್ನು ಪರೀಕ್ಷಿಸುವ ರಾಮೇಶ್ವರಮ್‌ನಿಂದ ಧನುಷ್ಕೋಡಿ ಮಾರ್ಗರಹಿತ ಪ್ರವಾಸ !

ರಸ್ತೆ ನಿರ್ಮಾಣವಾಗದಿರುವುದರಿಂದ ೧೮ ಕಿ.ಮೀ. ದೂರದ ಪ್ರಯಾಣ ಮರಳು ಮತ್ತು ಸಾಗರದ ನೀರಿನಲ್ಲಿ ಮಾಡಬೇಕಾಗುವುದು. ಸದ್ಯಸ್ಥಿತಿಯಲ್ಲಿ ರಾಮೇಶ್ವರಮ್‌ನಿಂದ ಧನುಷ್ಕೋಡಿಗೆ ಹೋಗಲಿಕ್ಕಿದ್ದರೆ, ಒಂದೋ ಆ ಮರಳು ಮತ್ತು ಸಮುದ್ರದಿಂದ ದಾರಿ ಮಾಡುತ್ತಾ ನಡೆದುಕೊಂಡು ಹೋಗಬೇಕು ಅಥವಾ ಖಾಸಗಿ ಬಸ್‌ಗಳಿಂದ ಹೋಗಬೇಕು ! ರಾಮೇಶ್ವರಮ್‌ಗೆ ಬಂದನಂತರ ಧನುಷ್ಕೋಡಿಗೆ ಬಂದು ಇಲ್ಲಿ ರಾಮ ಸೇತುವಿನ ದರ್ಶನ ಪಡೆಯುವ ಇಚ್ಛೆ ಈ ಭಕ್ತರಲ್ಲಿ ಇರುತ್ತದೆ. ಈ ೧೮ ಕಿ. ಮೀ. ಅಂತರದ ಪ್ರಯಾಣದಲ್ಲಿ ಹೇಮರಪುರಮ್‌ನ ವರೆಗೆ ಡಾಂಬರ್ ರಸ್ತೆಯಿದೆ. ಅಲ್ಲಿಂದ ಮುಂದಿನ ಪ್ರಯಾಣ ಪೂರ್ಣ ಸಾಗರ ತೀರದಲ್ಲಿನ ಮರಳಿನಲ್ಲಿ ಅಥವಾ ಕೆಲವೊಮ್ಮೆ ಸಾಗರದ ನೀರಿನಲ್ಲಿ ನಡೆದುಕೊಂಡು ಹೋಗಬೇಕು. ಈ ೭ ಕಿ. ಮೀ. ದೂರ ರಸ್ತೆಯೇ ಇಲ್ಲ. ಭಾರತದ ಪ್ರಮುಖ ತೀರ್ಥಕ್ಷೇತ್ರವಾಗಿದ್ದರೂ ಇಲ್ಲಿ ರಸ್ತೆ ನಿರ್ಮಾಣ ಮಾಡದಿರುವುದು, ಆಶ್ಚರ್ಯದ ಸಂಗತಿಯಾಗಿದೆ. ಭಕ್ತರಿಗೆ ಇಲ್ಲಿಗೆ ಬರುವ ಇಚ್ಛೆ ಇರುತ್ತದೆ. ಅವರು ಅತ್ಯಂತ ಕಷ್ಟಪಟ್ಟು ಧನುಷ್ಕೋಡಿಯ ವರೆಗೆ ಬರುತ್ತಾರೆ. ಹೆಚ್ಚಿನ ಭಕ್ತರು ಹೇಮರಪುರಮ್‌ನ ವರೆಗೆ ಮಾತ್ರ ಬರುತ್ತಾರೆ. ಅಲ್ಲಿಂದ ಮುಂದೆ ರಸ್ತೆ ಇಲ್ಲದಿರುವುದರಿಂದ ಅವರು ಮುಂದೆ ಹೋಗುವ ಧೈರ್ಯ ಮಾಡುವುದಿಲ್ಲ. ಯಾರು ಧೈರ್ಯಶಾಲಿಗಳಾಗಿತ್ತಾರೋ, ಅವರು ಮಾತ್ರ ಧನುಷ್ಕೋಡಿಯ ವರೆಗೆ ಹೋಗುವ ಧೈರ್ಯ ತೋರಿಸುತ್ತಾರೆ. ರಾಮೇಶ್ವರಮ್‌ನಿಂದ ಧನುಷ್ಕೋಡಿಗೆ ಇಷ್ಟರ ವರೆಗೆ ರಸ್ತೆ ನಿರ್ಮಾಣ ಏಕೆ ಆಗಿಲ್ಲ, ಎಂಬ ಪ್ರಶ್ನೆ ಅಲ್ಲಿಗೆ ಬರುವ ಎಲ್ಲರ ಮನಸ್ಸಿನಲ್ಲಿ ಬರುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸ್ವಲ್ಪವೂ ಮಹತ್ವ ನೀಡಲಿಕ್ಕಿಲ್ಲವೆಂಬುದು ಭಾರತೀಯ ರಾಜಕಾರಣಿಗಳ ಜಾತ್ಯತೀತವಾದದ ತತ್ತ್ವ ಇಲ್ಲಿಯೂ ಕಾಣಿಸುತ್ತದೆ. ಕೇವಲ ಧಾರ್ಮಿಕಭಾವನೆಯ ದೃಷ್ಟಿಯಿಂದಲ್ಲ, ರಾಷ್ಟ್ರೀಯ ಐಕ್ಯತೆಯ ದೃಷ್ಟಿಯಿಂದಲೂ ಈ ರಸ್ತೆ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಕಾಶಿಗೆ ಹೋಗುವ ಕೋಟಿಗಟ್ಟಲೆ ಹಿಂದೂಗಳು ಜಾತಿ, ಭಾಷೆ, ಪ್ರಾಂತ್ಯ ಇತ್ಯಾದಿ ಭೇದವನ್ನು ಮರೆತು ರಾಮೇಶ್ವರಕ್ಕೆ ಹೋಗುವ ಆಸೆಯನ್ನಿಟ್ಟುಕೊಂಡಿರುತ್ತಾರೆ. ಕೇವಲ ದಕ್ಷಿಣ ಭಾರತದ ಭಕ್ತರು ಮಾತ್ರವಲ್ಲ, ಕಾಶ್ಮೀರ ಸಹಿತ ಉತ್ತರ ಭಾರತ, ಅಸ್ಸಾಂ ಸಹಿತ ಈಶಾನ್ಯ ಭಾರತ, ಬಂಗಾಲ ಸಹಿತ ಪೂರ್ವ ಭಾರತ, ಮುಂಬಯಿ, ಗುಜರಾತ ಇತ್ಯಾದಿ ಪಶ್ಚಿಮ ಭಾರತದ ನಾಗರಿಕರು ಕೂಡ ಇಲ್ಲಿಗೆ ದರ್ಶನಕ್ಕಾಗಿ ಬರಲು ಇಚ್ಛಿಸುತ್ತಾರೆ. ಧನುಷ್ಕೋಡಿ ಇದು ರಾಷ್ಟ್ರೀಯ ಐಕ್ಯವನ್ನು ಸಾಧಿಸುವ ನಗರವಾಗಿದೆ. ತಮಿಳುನಾಡು ಸರಕಾರ ಮತ್ತು ಕೇಂದ್ರ ಸರಕಾರ ಈ ಸಣ್ಣ ರಸ್ತೆಯನ್ನು ನಿರ್ಮಿಸಿ ಈ ರಾಷ್ಟ್ರೀಯ ಐಕ್ಯದ ಆಧಾರವನ್ನು ಏಕೆ ದೃಢಪಡಿಸಬಾರದು?

ಮಹಾನಗರದಲ್ಲಿ ಮೆಟ್ರೋ ಟ್ರೈನ್ ಆರಂಭಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ; ಹಾಗಾದರೆ ಕೇವಲ ೫೦-೬೦ ಕೋಟಿ ರೂಪಾಯಿ ಖರ್ಚು ಬರುವ ಈ ರಸ್ತೆಯನ್ನು ಏಕೆ ನಿರ್ಮಿಸುವುದಿಲ್ಲ? ಕಾಶ್ಮೀರದಲ್ಲಿ ಪೂಂಛದಿಂದ ಶ್ರೀನಗರ ಈ ನಗರಗಳ ನಡುವೆ ಮೊಗಲರ ಕಾಲದ ರಸ್ತೆಯಿತ್ತು. ಈ ರಸ್ತೆಯನ್ನು ಇಸ್ಲಾಮೀ ಸಂಸ್ಕ ತಿಯ ಕೊಡುಗೆಯೆಂದು ಹೇಳಿ ಅದನ್ನು ಪುನರುಜ್ಜೀವನ ಮಾಡಲು ಸರಕಾರ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿತು; ಹಾಗಾದರೆ ೧೯೬೪ ರಲ್ಲಿ ಧ್ವಂಸವಾದ; ಆದರೆ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಸಂಬಂಧಿಸಿದ ಈ ರಸ್ತೆ ಪುನಃ ನಿರ್ಮಿಸಲು ಏನು ಅಡಚಣೆಯಿದೆ?

– ಸಂಕಲನಕಾರರು : ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿ

ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ

Leave a Comment